ಅಯೋಧ್ಯೆ ಭೂಮಿಯ ಲಾಭ ಪಡೆದವರು ಯಾರು?
ಅರುಣಾಚಲ ಉಪಮುಖ್ಯಮಂತ್ರಿಯಿಂದ ಹಿಡಿದು ಯುಪಿ ವಿಶೇಷ ಕಾರ್ಯಪಡೆ ಮುಖ್ಯಸ್ಥರವರೆಗೂ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ. ರಾಮನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಮಂದಿಯಂತೂ ಭೂಮಿ ಖರೀದಿಗೆ ಮುಗಿಬಿದ್ದಿದ್ದಾರೆ. ಅವರ ದೂರದೃಷ್ಟಿ ಎಂಥದು ಎಂಬುದು ಇದರಿಂದ ಸಾಬೀತಾಗುತ್ತದೆ.
ಅಯೋಧ್ಯೆ ಮತ್ತೊಮ್ಮೆ ಚರ್ಚೆಯಲ್ಲಿದೆ.
ಚುನಾವಣೆಗೆ ಮೊದಲು, ಚುನಾವಣೆಯಲ್ಲಿ, ಚುನಾವಣಾ ಫಲಿತಾಂಶ ಬಂದ ಬಳಿಕ ಅಯೋಧ್ಯೆ ನಿರಂತರ ಸುದ್ದಿಯಲ್ಲಿದೆ.
ಅಯೋಧ್ಯೆಯಲ್ಲಿ ಬಿಜೆಪಿ ಮುಳುಗಿದ್ದು ಮೊದಲು ಸುದ್ದಿಯಾಯಿತು.
ಆಮೇಲೆ ನೂತನ ರಾಮ ಮಂದಿರದ ಗರ್ಭ ಗುಡಿಯಲ್ಲೇ ನೀರು ಸೋರಿಕೆಯಾಗಿದ್ದು ದೊಡ್ಡ ವಿವಾದವಾಯಿತು.
ನಂತರ ಅಲ್ಲಿನ ರಸ್ತೆಗಳೇ ಮಾಯವಾಗಿ ಗುಹೆಗಳು ನಿರ್ಮಾಣ ಆಗಿರುವುದು ಸುದ್ದಿಯಾಯಿತು.
ಅದರ ನಡುವೆಯೇ ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಹಿರಿಯ ಪತ್ರಕರ್ತ ಶ್ಯಾಮಲಾಲ್ ಯಾದವ್ ಅವರ ತನಿಖಾ ವರದಿ ಪ್ರಕಟ ವಾಗಿದೆ. ಈ ವರದಿ ಈಗ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ.
ಜನಸಾಮಾನ್ಯರು ರಾಮಭಜನೆಯಲ್ಲಿ ತೊಡಗಿರುವಾಗ ರಾಜಕೀಯದವರಿಗೆ ಹತ್ತಿರವಿರುವವರು ಅಯೋಧ್ಯೆಯ ಭೂಮಿಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಸತ್ಯ ಸಣ್ಣದಲ್ಲ.
ಅಯೋಧ್ಯೆಯಲ್ಲಿ ಜಮೀನು ಖರೀದಿ ವಿಚಾರವಾಗಿ ಈಗಾಗಲೇ ಭ್ರಷ್ಟಾಚಾರ ಆರೋಪಗಳಿವೆ. ಆದರೆ ಮಡಿಲ ಮೀಡಿಯಾಗಳು ಅಂತಹ ಯಾವ ವರದಿಯೂ ಜನರ ಬಳಿ ಹೋಗದಂತೆ ತಡೆಯುತ್ತಿವೆ.
ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಂಬಂಧಿಕರು ಅಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ಈ ವರದಿ ಹೇಳುತ್ತದೆ. ಇವರಲ್ಲಿ ಹಲವರು ಬಿಜೆಪಿ ನಾಯಕರೂ ಇದ್ದಾರೆ. ಕಡಿಮೆ ಸರ್ಕಲ್ ದರದಲ್ಲಿ ಭೂಮಿ ಖರೀದಿಸಲಾಗಿದೆ. ಖರೀದಿಸಿದವರೇ ಕಿಂಗ್ ಎನ್ನುವಂತಾಗಿದೆ. ಹಾಗಾದರೆ ಅಲ್ಲಿನ ಜನರಿಗೆ ಎಷ್ಟು ನಷ್ಟವಾಗಿದೆ?
ವರದಿಯ ಶೀರ್ಷಿಕೆಯೇ ಅಯೋಧ್ಯೆಯೊಳಗೆ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ತೆರೆದಿಡುತ್ತದೆ.
ಅರುಣಾಚಲ ಉಪಮುಖ್ಯಮಂತ್ರಿಯಿಂದ ಹಿಡಿದು ಯುಪಿ ವಿಶೇಷ ಕಾರ್ಯಪಡೆ ಮುಖ್ಯಸ್ಥರವರೆಗೂ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ.
ರಾಮನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಮಂದಿಯಂತೂ ಭೂಮಿ ಖರೀದಿಗೆ ಮುಗಿಬಿದ್ದಿದ್ದಾರೆ. ಅವರ ದೂರದೃಷ್ಟಿ ಎಂಥದು ಎಂಬುದು ಇದರಿಂದ ಸಾಬೀತಾಗುತ್ತದೆ.
ಇನ್ನು ಇಲ್ಲಿ ಸರ್ಕಲ್ ದರವಂತೂ 7 ವರ್ಷಗಳಿಂದಲೂ ಪರಿಷ್ಕರಣೆಯಾಗಿಯೇ ಇಲ್ಲ.ಕಡೇ ಬಾರಿಗೆ ಪರಿಷ್ಕರಣೆಯಾದದ್ದು 2017ರಲ್ಲಿ.
ಅಯೋಧ್ಯೆಯಲ್ಲಿ ಜನಸಾಮಾನ್ಯರು ರಾಮನ ಸ್ವಾಗತದಲ್ಲಿ ತೊಡಗಿದ್ದಾಗ, ರಾಮನ ಹೆಸರು ಹೇಳಿ ರಾಜಕೀಯ ಮಾಡುವವರೆಲ್ಲ ಅಯೋಧ್ಯೆಯಲ್ಲಿ ಭೂಮಿ ಖರೀದಿಯ ತಯಾರಿಯಲ್ಲಿ ಬಿಝಿಯಾಗಿ ಬಿಟ್ಟಿದ್ದರು.
ಅಯೋಧ್ಯಾ ಮತ್ತದರ ಆಸುಪಾಸಿನ 25 ಹಳ್ಳಿಗಳಲ್ಲಿನ ಎರಡೂವರೆ ಸಾವಿರ ನೋಂದಣಿಗಳ ಬಗ್ಗೆ ಶ್ಯಾಮ್ ಲಾಲ್ ಯಾದವ್ ಅಧ್ಯಯನ ಮಾಡಿ ವರದಿ ಪ್ರಕಟಿಸಿದ್ದಾರೆ. ಅಕ್ರಮಗಳು ನಡೆದಿವೆ ಎಂಬುದು ಬಹಿರಂಗವಾದರೆ ಭೂಮಿ ಖರೀದಿಸಿದವರಿಗೆ ಬಹು ದೊಡ್ಡ ಕಷ್ಟ ಎದುರಾಗಲಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡುತ್ತಿದ್ದಂತೆ ಭೂಮಿ ಖರೀದಿಯ ಆಟ ಶುರುವಾಗಿಬಿಟ್ಟಿತ್ತು. ಶಾಸಕರು, ಮೇಯರ್, ಡಿಐಜಿಯಂಥ ಅಧಿಕಾರಿಗಳು, ಅವರ ಸಂಬಂಧಿಗಳು ಜಮೀನು ಖರೀದಿಸಿದ್ದರು.
ಕಡೆಗೆ ಅದರ ಬಗ್ಗೆ ಯುಪಿ ಸರಕಾರ ತನಿಖೆಗೂ ಆದೇಶಿಸಿತ್ತು. ವಾರದೊಳಗೇ ವರದಿ ಬೇಕು ಎಂದಿತ್ತು. ವರದಿ ಬಂದದ್ದೂ ಆಯಿತು. ಆದರೆ ಅದನ್ನು ಬಹಿರಂಗಪಡಿಸುವ ಗೋಜಿಗೇ ಸರಕಾರ ಹೋಗದೆ ಉಳಿದುಬಿಟ್ಟಿತ್ತು.
ಅದೇ ಹೊತ್ತಲ್ಲಿ ಪ್ರಕಟವಾಗಿದ್ದ ಮತ್ತೊಂದು ವರದಿಯ ಪ್ರಕಾರ, ರಾಜಕೀಯ ನಾಯಕರು, ಅಧಿಕಾರಿಗಳು ಅಥವಾ ಅವರ ಕುಟುಂಬಸ್ಥರು ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಜಮೀನು ಖರೀದಿಸಿದ್ದರು.
ಟ್ರಸ್ಟ್ ಒಂದರ ಹೆಸರಿನಲ್ಲಿ ಜಮೀನು ಖರೀದಿಸುವುದು, ಅಧಿಕಾರಿಗಳ ಸಂಬಂಧಿಗಳು ಟ್ರಸ್ಟ್ ಮೂಲಕ ಜಮೀನನ್ನು ಆ ಟ್ರಸ್ಟ್‌ನಿಂದ ಕೊಂಡುಕೊಳ್ಳುವುದು ನಡೆದಿತ್ತು.
ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ ದಲಿತರ ಜಮೀನನ್ನು ಖರೀದಿಸಿತ್ತು.ಕಡೆಗೆ ದಲಿತರ ಜಮೀನನ್ನು ಟ್ರಸ್ಟ್‌ಗೆ ವರ್ಗಾಯಿಸುವುದು ಅಕ್ರಮ ಎಂದು ಕಂದಾಯ ನ್ಯಾಯಾಲಯ ಹೇಳಿತ್ತು. ಅದರ ತನಿಖೆಗಾಗಿ ಸಮಿತಿ ರಚಿಸಲಾಗಿತ್ತು. ತನಿಖೆ ನಡೆದು ವರದಿಯೂ ಬಂತು. ಆದರೆ ವರದಿ ಬಹಿರಂಗವಾಗಲೇ ಇಲ್ಲ.
ಎರಡು ಕೋಟಿ ರೂ.ಗೆ ಖರೀದಿಯಾದ ಜಮೀನನ್ನು ಕೆಲವೇ ಸಮಯದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 18 ಕೋಟಿ ರೂ.ಗೆ ಖರೀದಿಸುತ್ತದೆ.
ಹಾಗಾದರೆ ಇದರ ಮರ್ಮವೇನು? ಲಾಭ ಪಡೆದವರು ಯಾರು?
ಅಯೋಧ್ಯೆ ತೀರ್ಪು ಬಂದಾಗಿನಿಂದ ಈವರೆಗೂ ಅಯೋಧ್ಯೆಯಲ್ಲಿ ಭೂಮಿ ಖರೀದಿ ಶೇ.30ರಷ್ಟು ಹೆಚ್ಚಿದೆ.
ಅರುಣಾಚಲ ಪ್ರದೇಶ ಡಿಸಿಎಂ ಪುತ್ರ ಇಲ್ಲಿ 4 ಕೋಟಿಯ ಜಮೀನು ಖರೀದಿಸಿದ್ದಾರೆ.
ಬಿಜೆಪಿ ನಾಯಕ ಬ್ರಿಜ್‌ಭೂಷಣ್ ಸಿಂಗ್ ಪುತ್ರ ಕೂಡ ಅಲ್ಲಿ 1.15 ಕೋಟಿ ರೂ. ಮೊತ್ತದ ಜಮೀನು ಖರೀದಿಸಿದ್ದಾರೆ.
ಅದಾನಿ ಸಮೂಹ ಕೂಡ ಓಂ ಕ್ವೆಸ್ಟ್ ಇನ್‌ಫ್ರಾ ಎಂಬ ಬೇರೆ ಹೆಸರಿನ ಕಂಪೆನಿ ಮೂಲಕ ಮೂರೂವರೆ ಕೋಟಿ ರೂ.ಯ ಜಮೀನು ಖರೀದಿಸಿದೆ.
ರಿಯಲ್ ಎಸ್ಟೇಟ್ ವಲಯದ ದೊಡ್ಡ ಕಂಪೆನಿ ಊಔಂಃಐ 100 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಜಮೀನು ಖರೀದಿಸಿದೆ.
ಈ ಕಂಪೆನಿ ಮಹಾರಾಷ್ಟ್ರದ ಸಚಿವ ಪ್ರಭಾತ್ ಲೋಧಾ ಅವರ ಪುತ್ರನದು.
ಅಯೋಧ್ಯೆ ಆಸುಪಾಸಿನಲ್ಲಿ ಹೇಗೆ ಭೂಮಿಗೆ ಬೇಡಿಕೆ ಇದೆ ಎಂಬುದರ ಸೂಚನೆ ಇದು.
ಇನ್ನು ಅಯೋಧ್ಯೆಯಲ್ಲಿ ಸರ್ಕಲ್ ದರ ಹೆಚ್ಚಳವಾಗದೇ ಇರುವುದರಿಂದ ನಷ್ಟವಾದದ್ದು ಸಾಮಾನ್ಯ ಜನರಿಗೆ. ಬಿಜೆಪಿಗೆ ಸೇರಿದ ಮಂದಿಯ ಕಾರಣಕ್ಕಾಗಿ ದರ ಏರಿಕೆ ಮಾಡಲಿಲ್ಲವೆ? ಇದೆಲ್ಲವೂ ಬಹಿರಂಗಗೊಳ್ಳಬೇಕಿದೆ.
ಅಯೋಧ್ಯೆ ತೀರ್ಪಿನ ಬಳಿಕ ಜಮೀನು ದರ ಅಲ್ಲಿ ಹೆಚ್ಚಳವಾಗಿದೆ. ಹೀಗಿರುವಾಗ ಸರ್ಕಲ್ ದರವೂ ಹೆಚ್ಚಬೇಕಿತ್ತು. ಅದರಿಂದ ಸರಕಾರಕ್ಕೆ ರಾಜಸ್ವ ಬಂದು, ಲಾಭವಾಗುತ್ತಿತ್ತು.
ದರ ಹೆಚ್ಚಿಸುವ ನಿರ್ಧಾರವನ್ನು ಜಿಲ್ಲಾಧಿಕಾರಿ ಮಾಡಬೇಕು. ಆದರೆ ಆಯುಕ್ತರೇ ಜಮೀನು ಖರಿದಿಸಿರುವಾಗ ಹೇಗೆ ಜಿಲ್ಲಾಧಿಕಾರಿ ಅದನ್ನು ಹೆಚ್ಚಿಸುತ್ತಾರೆ?
ಸರ್ಕಲ್ ದರ ಹೆಚ್ಚಿಸಲು ಕೋರಿ ರೈತ ದುರ್ಗಾ ಪ್ರಸಾದ್ ಯಾದವ್ 2021ರ ಅಕ್ಟೋಬರ್ 5ರಂದು ಹೈಕೋರ್ಟ್‌ನ ಲಕ್ನೊ ಪೀಠದ ಮೊರೆಹೋಗಿದ್ದರು.
ಸರಕಾರ ಭೂಮಿ ಸ್ವಾಧೀನ ಪಡಿಸಿಕೊಂಡಾಗ ರೈತರಿಗೆ ಕಡಿಮೆ ಪರಿಹಾರ ಸಿಗುತ್ತದೆ ಎಂಬುದು ಯಾದವ್ ಅವರ ವಾದವಾಗಿತ್ತು.
ಯುಪಿಯಲ್ಲಿ, ಸರಕಾರ ನಗರ ಪ್ರದೇಶಗಳಲ್ಲಿ ವೃತ್ತದ ದರಕ್ಕಿಂತ ಎರಡು ಪಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೃತ್ತದ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪಾವತಿಸುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶ ಸರಕಾರ 2022ರ ಮೇ 18ರಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು.
2019, 2020 ಮತ್ತು 2021ರಲ್ಲಿ ಪುನರ್ವಿಮರ್ಶೆಗೆ ಯತ್ನ ನಡೆದಿತ್ತು. ಆದರೆ ಆ ಸಮಯದಲ್ಲಿ ಭೂಮಿಯ ಮೌಲ್ಯದ ಮಾರುಕಟ್ಟೆ ದರಗಳು 2017ರ ವರ್ಷಕ್ಕೆ ಸಮನಾಗಿದ್ದವು ಮತ್ತು ಅದರಿಂದಾಗಿ ಸರ್ಕಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿತ್ತು.
ಇದೆಲ್ಲದರ ನಡುವೆ ಅಯೋಧ್ಯೆ ಜಮೀನಿನ ಮೇಲೆ ಕಣ್ಣಿಟ್ಟು ಖರಿಸಿದವರು ಲಾಭ ಮಾಡಿಕೊಂಡಿದ್ದರು. ಹಾಗಾದರೆ ಏನೇನು ಆಟ ನಡೆದಿರಬಹುದು?
2021ರಲ್ಲಿ ವಿಪಕ್ಷಗಳು ಅಯೋಧ್ಯಾ ಜಮೀನು ಖರೀದಿ ವಿಚಾರವನ್ನು ಚರ್ಚೆಗೆ ಎತ್ತಿದ್ದವು. ಈಗ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ‘‘ಹೊರಗಿನವರು ಬಂದು ಅಯೋಧ್ಯೆಯಲ್ಲಿ ಭೂಮಿ ಖರೀದಿಸುತ್ತಿದ್ದಾರೆ. ಕೋಟ್ಯಂತರ ರೂ. ಭೂಹಗರಣ ನಡೆದಿದೆ’’ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂಬುದು ಅವರ ಆಗ್ರಹ.
ಬಿಜೆಪಿ ಆಡಳಿತದಲ್ಲಿ ಹೊರಗಿನವರು ಇಲ್ಲಿನ ಬಹುತೇಕ ಭೂಮಿಯನ್ನು ಖರೀದಿಸಿ, ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ ಎಂಬುದು ಅಖಿಲೇಶ್ ಆರೋಪವಾಗಿದೆ. ಬಿಜೆಪಿ ಆಡಳಿತದಲ್ಲಿ ಕಳೆದ 7 ವರ್ಷಗಳಿಂದ ಸರ್ಕಲ್ ದರ ಕೂಡ ಹೆಚ್ಚಿಸಿಲ್ಲ. ಹೊರಗಿನಿಂದ ಬಂದವರು ಜಮೀನು ಖರೀದಿಸಿರುವುದರಿಂದ ಸ್ಥಳೀಯರಿಗೆ ಯಾವ ಲಾಭವೂ ಆಗಿಲ್ಲ. ಅಯೋಧ್ಯೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಅಕ್ರಮಗಳು ಮತ್ತು ಭೂ ಹಗರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂಬುದು ಅಖಿಲೇಶ್ ಆಗ್ರಹ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉದ್ಧವ್ ಠಾಕ್ರೆ ಬಣದ ರಾಜ್ಯ ಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ‘‘ಭಗವಾನ್ ಶ್ರೀರಾಮನ ಮೇಲೆ ಬಿಜೆಪಿಗರಿಗೆ ಪ್ರೀತಿಯಿಲ್ಲ, ಕೇವಲ ರಾಜಕೀಯ ಮತ್ತು ಆರ್ಥಿಕ ಲಾಭಕ್ಕಾಗಿ ವ್ಯಾಪಾರ ಇದೆ. ಹಾಗಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ! ನಾಚಿಕೆಗೇಡು!’’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ‘‘ಭಗವಾನ್ ರಾಮನ ಪೂಜಾರಿಯಾಗುವುದರಲ್ಲಿ ಮತ್ತು ಉದ್ಯಮಿಗಳಾಗುವುದರ ನಡುವೆ ವ್ಯತ್ಯಾಸವಿದೆ’’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ಭೂಮಿ ಖರೀದಿದಾರರ ಮತ್ತು ಮಾರಾಟಗಾರರ ದೊಡ್ಡದೊಂದು ಪಟ್ಟಿಯನ್ನೂ ಸುಪ್ರಿಯಾ ಟ್ವೀಟ್ ಮಾಡಿದ್ದಾರೆ.
‘ಇಂಡಿಯನ್ ಎಕ್ಸ್‌ಪ್ರೆಸ್’ನ ಹಿರಿಯ ಪತ್ರಕರ್ತ ಶ್ಯಾಮ್ ಲಾಲ್ ಯಾದವ್ ರವರು ವರದಿ ಮಾಡಲು ಅಯೋಧ್ಯೆಗೆ ಹೋಗಿದ್ದ ವೇಳೆ ಅವರ ಪುತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಕುರಿತಾಗಿ ಬರೆದಿರುವ ಶ್ಯಾಮ್ ಲಾಲ್ ಯಾದವ್ ನಾನು ಹಿಂದಿರುಗಿ ಬರುತ್ತಿದ್ದೇನೆ. ಚಿಂತೆ ಮಾಡಬೇಡ ಎಂದು ಪುತ್ರಿಯಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಉತ್ತರವಾಗಿ ಆಗ ಪುತ್ರಿ ಹೇಳಿದ್ದು ಬೇಡಪ್ಪ ನೀವು ನಿಮ್ಮ ಕೆಲಸ ಮುಗಿಸಿ ಬನ್ನಿ ಎಂದು. ಶ್ಯಾಮ್ ಲಾಲ್ ಯಾದವ್ ಹಿಂದಿರುಗಿ ಬಂದರು. ಆದರೆ ಅವರ ಪುತ್ರಿ ಬದುಕುಳಿಯಲಿಲ್ಲ.
ತಮ್ಮ ವರದಿಯನ್ನವರು ಪುತ್ರಿಗೆ ಅರ್ಪಣೆ ಮಾಡಿದ್ದಾರೆ.
ಈ ಇಡೀ ಪ್ರಕರಣದ ಸತ್ಯವೇನೆಂಬುದು ಬೇಗ ಜನರೆದುರು ಬಯಲಾಗಬೇಕಾಗಿದೆ.