ಬಾಬಾ ಸಿದ್ದೀಕ್ ಹತ್ಯೆಗೆ ಹೊಣೆಗಾರರು ಯಾರು?

ಯಾಕೆ ಬಾಬಾ ಸಿದ್ದೀಕ್ ಹತ್ಯೆ ಆಯಿತು ಎಂಬ ಪ್ರಶ್ನೆಗೆ ಉತ್ತರವಿನ್ನೂ ಸಿಗಬೇಕಿದೆ. ಗುಜರಾತಿನ ಜೈಲಿನಲ್ಲಿ ಕೂತಿರುವವನೇ ಸಲ್ಮಾನ್ ಖಾನ್ ಮನೆಯ ಹೊರಗಡೆ ಗುಂಡಿನ ದಾಳಿ, ಈಗ ಬಾಬಾ ಸಿದ್ದೀಕ್ ಹತ್ಯೆಯ ಹೊಣೆಗಾರಿಕೆ ಹೊರಬಲ್ಲಷ್ಟು ಬಲಶಾಲಿ, ಪ್ರಭಾವಶಾಲಿ ಎಂದಾದರೆ, ಈ ದೇಶದ ಕಾನೂನು ವ್ಯವಸ್ಥೆಗೆ ಬೆಲೆ ಇದೆಯೇ? ಉತ್ತರಿಸುವವರು ಯಾರು?

Update: 2024-10-16 06:03 GMT

ಮಹಾರಾಷ್ಟ್ರ ಮಾಜಿ ಮಂತ್ರಿ, ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದೀಕ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯ ಹಿಂದೆ ತಾನಿರುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿರುವ ವರದಿಗಳಿವೆ.

ನಿಜವಾಗಿಯೂ ಅದು ಹೌದೆ? ಅಥವಾ ಕೊಲೆಯ ನಂತರ ಗಮನ ಬೇರೆಡೆಗೆ ಹೋಗುವಂತೆ ಮತ್ತು ಬಿಷ್ಣೋಯ್ ಗ್ಯಾಂಗ್ ಬಗ್ಗೆ ಮಾಧ್ಯಮಗಳಲ್ಲಿ ಕುತೂಹಲ ಹುಟ್ಟುವಂತೆ ಕಥೆಗಳನ್ನು ಕಟ್ಟಲಾಗುತ್ತಿದೆಯೇ?

2022ರಲ್ಲಿ ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಹತ್ಯೆಯಾದಾಗಲೂ ಇದೇ ಗ್ಯಾಂಗ್ ಹೆಸರು ಕೇಳಿಬಂದಿತ್ತು. ಈಗಲೂ ಮತ್ತೆ ಅದೇ ಗ್ಯಾಂಗ್ ಹೆಸರು ಕೇಳಿಬಂದಿದ್ದು, ಅದು ನಿಜವೇ ಆಗಿದ್ದರೆ ಇನ್ನೂ ಅದು ಹೇಗೆ ಸಕ್ರಿಯವಾಗಿದೆ?

ಮುಂಬೈನಲ್ಲಿ ಸಲ್ಮಾನ್ ಖಾನ್ ನಿವಾಸದ ಹೊರಗಡೆ ಇತ್ತೀಚೆಗೆ ಗುಂಡು ಹಾರಿಸಲಾಗಿತ್ತು. ಆಗಲೂ ಇದೇ ಗ್ಯಾಂಗ್ ಹೆಸರು ಕೇಳಿಬಂದಿತ್ತು. ಈಗ ಬಾಬಾ ಸಿದ್ದೀಕ್ ಹತ್ಯೆ ವಿಚಾರದಲ್ಲೂ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಎತ್ತಿಕೊಂಡು ಮೀಡಿಯಾಗಳು ಗಂಟೆಗಟ್ಟಲೆೆ ಮಾತಾಡುತ್ತಿವೆ.

ಆತನ ಬಗ್ಗೆ ವೈಭವೀಕರಿಸಿದ ಕಥೆಗಳನ್ನು ಮೀಡಿಯಾಗಳು ಹೇಳುತ್ತಿದ್ದರೆ, ಮಾತೆತ್ತಿದರೆ ಬುಲ್ಡೋಜರ್, ಎನ್‌ಕೌಂಟರ್ ಎನ್ನುವ ಡಬಲ್ ಇಂಜಿನ್ ಸರಕಾರ ಈಗೆಲ್ಲಿದೆ? ಜೈಲಿನಲ್ಲಿದ್ದರೂ ಯಾರನ್ನೂ ಕೊಲ್ಲಬಲ್ಲಷ್ಟು ಬಲಶಾಲಿಯೆ ಆತ? ಅಥವಾ ಕೊಲೆಗಳ ಹಿಂದೆ ಆತನ ಹೆಸರು ಕೇಳಿಬರುತ್ತಿರುವುದರ ಹಿನ್ನೆಲೆಯೇ ಬೇರೆ ಇದೆಯೆ?

ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಅಶೋಕ್ ಶಿಂದೆಯನ್ನು ಎನ್‌ಕೌಂಟರ್ ಮಾಡಲಾಗಿದೆ. ಅದು ಹಲವಾರು ಪ್ರಶ್ನೆಗಳು ಏಳುವುದಕ್ಕೆ ಕಾರಣವಾಗಿದೆ. ಅದರೆ ಅದಕ್ಕಾಗಿ ಮಹಾರಾಷ್ಟ್ರ ಡಿಸಿಎಂ ಮತ್ತು ಗೃಹಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸಿಂಗಂ ಎನ್ನಲಾಗುತ್ತಿದೆ. ಬದ್ಲಾ ಪೂರಾ ಎಂದು ಪೋಸ್ಟರ್ ಹಾಕಲಾಗುತ್ತದೆ. ಆದರೆ ಅದೇ ಸಿಂಗಂ ಗಿರಿಯನ್ನು ಈಗ ಆಡಳಿತಾರೂಢ ಮೈತ್ರಿಯ ಭಾಗವಾಗಿರುವ ಪಕ್ಷದ ನಾಯಕ ಬಾಬಾ ಸಿದ್ದೀಕ್ ಹತ್ಯೆ ವಿಚಾರದಲ್ಲಿ ಏಕೆ ತೋರಿಸುತ್ತಿಲ್ಲ ಮಹಾರಾಷ್ಟ್ರ ಸರಕಾರ?

ಶನಿವಾರ ರಾತ್ರಿ ಬಾಬಾ ಸಿದ್ದೀಕ್‌ರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರು ಅವತ್ತು ಪುತ್ರ ಮತ್ತು ಕಾಂಗ್ರೆಸ್ ಶಾಸಕ ಜೀಶಾನ್ ಸಿದ್ದೀಕ್ ಕಚೇರಿಯಿಂದ ರಾತ್ರಿ 9ರ ಸುಮಾರಿಗೆ ಹೊರಟು ತಮ್ಮ ಕಾರಿನತ್ತ ಹೋಗುತ್ತಿದ್ದಾಗ ಈ ಹತ್ಯೆ ನಡೆದಿದೆ. ಮೂವರು ಆರೋಪಿಗಳು ಸುತ್ತುವರಿದು 6 ಸುತ್ತು ಗುಂಡು ಹಾರಿಸಿದ್ದಾರೆ. ದಾಳಿಯಾದ ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಉಳಿಸಿಕೊಳ್ಳಲು ಆಗಲಿಲ್ಲ. ಸಂಜಯ ದತ್ ಅವರಿಂದ ಹಿಡಿದು ಸಲ್ಮಾನ್ ಖಾನ್‌ವರೆಗೆ ಎಲ್ಲರೂ ಲೀಲಾವತಿ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದರು.

ಘಟನೆ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅಜಿತ್ ಪವಾರ್, ತಮ್ಮ ಬಹುಕಾಲದ ಗೆಳೆತನವನ್ನು ಸ್ಮರಿಸಿದ್ದಾರೆ. ನ್ಯಾಯ ಸಿಗಬೇಕಿದೆ ಎಂದಿರುವ ಅವರು, ಘಟನೆಯನ್ನು ರಾಜಕೀಯಕ್ಕೆ ಬಳಸುವ ಹೊತ್ತು ಇದಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ, ಈ ಘಟನೆ ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದಕ್ಕೆ ನಿದರ್ಶನ, ಸರಕಾರ ಇದರ ಹೊಣೆ ಹೊತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ.

ಎನ್‌ಸಿಪಿ ನಾಯಕ ಛಗನ್ ಭುಜಬಲ್, ಈ ಹತ್ಯೆಗೆ ದೇವೇಂದ್ರ ಫಡ್ನವೀಸ್ ಮಾತ್ರವೇ ಹೊಣೆಗಾರರಲ್ಲ. ಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ಹೊಣೆ ಹೊರಬೇಕು ಎಂದಿದ್ದಾರೆ.

ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವುತ್ ಈ ಹತ್ಯೆಯ ಹಿಂದೆ ಗುಜರಾತ್ ಗ್ಯಾಂಗ್‌ಸ್ಟರ್‌ಗಳ ಕೈವಾಡ ಇರುವುದಾಗಿ ಆರೋಪಿಸಿದ್ದಾರೆ.

‘‘ಈ ಸರಕಾರದ ನಂತರ ಮುಂಬೈನಲ್ಲಿ ಗ್ಯಾಂಗ್‌ವಾರ್ ಮತ್ತು ಭೂಗತ ಜಗತ್ತಿನ ಶಕ್ತಿ ಹೆಚ್ಚಾಗಬಹುದು ಎಂದು ನಾನು ಮೊದಲೇ ಹೇಳಿದ್ದೆ. ಈ ಸರಕಾರದ ಹಿಂದೆ ಭೂಗತ ಜಗತ್ತಿನ ಬೆಂಬಲವಿದೆ ಮತ್ತು ಆ ಭೂಗತ ಜಗತ್ತನ್ನು ಗುಜರಾತ್‌ನಿಂದಲೇ ನಡೆಸಲಾಗುತ್ತಿದೆ’’ ಎಂದು ರಾವುತ್ ಗಂಭೀರ ಆರೋಪ ಮಾಡಿದ್ದಾರೆ.

‘‘ಗುಜರಾತ್‌ನಲ್ಲಿ 5,000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಯಾವ ಬಂದರು ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. 5,000 ಕೋಟಿ ರೂ.ಯ ಡ್ರಗ್ಸ್ ಸೀಝ್ ಆಗಿದೆ ಎಂಬುದರ ಅರ್ಥ, 50,000 ಕೋಟಿ ಮೌಲ್ಯದ ಡ್ರಗ್ಸ್ ಈಗಾಗಲೇ ದೇಶದಲ್ಲಿ ವಿತರಣೆಯಾಗಿದೆ ಎಂಬುದಾಗಿದೆ’’ ಎಂತಲೂ ಸಂಜಯ್ ರಾವುತ್ ಹೇಳಿದ್ದಾರೆ.

ಈ ಹಣ ಯಾರ ಕಡೆ ಹೋಗುತ್ತದೆ, ಯಾವ ಪಕ್ಷಕ್ಕೆ ಹೋಗುತ್ತದೆ, ಈ ಹಣದಿಂದ ಚುನಾವಣೆಗೆ ಖರ್ಚು ಮಾಡುವವರು ಯಾರು? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ಮತ್ತು ಗುಜರಾತ್ ಎಟಿಎಸ್ ವಶದಲ್ಲಿರುವ ಗ್ಯಾಂಗ್‌ಸ್ಟರ್ ಒಬ್ಬ ಬಾಬಾ ಸಿದ್ದೀಕ್ ಹತ್ಯೆಯನ್ನು ತಾನೇ ಮಾಡಿಸಿರುವುದಾಗಿ ಹೇಳುತ್ತಾನೆ. ಗುಜರಾತ್ ಮೂಲದ ಕೇಂದ್ರ ಗೃಹ ಸಚಿವರಿಗೆ ಇದು ಸವಾಲಾಗಿದೆ. ಅಮಿತ್ ಶಾ ರಾಜೀನಾಮೆಗೆ ಅಜಿತ್ ಪವಾರ್ ಒತ್ತಾಯಿಸಬೇಕು ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಹಾಗಾದರೆ ಆ ಗ್ಯಾಂಗ್‌ಸ್ಟರ್ ಎಷ್ಟು ಪ್ರಭಾವಶಾಲಿ? ಅವನ ಹಿಂದಿರುವವರನ್ನು ಸರಕಾರ ಏನೂ ಮಾಡಲು ಸಾಧ್ಯವಿಲ್ಲವೆಂದರೆ ಅವರು ಅಷ್ಟೊಂದು ದೊಡ್ಡ ವ್ಯಕ್ತಿಗಳೇ? ಬಾಬಾ ಸಿದ್ದೀಕ್ ಅವರನ್ನು ಕೊಂದದ್ದರ ಹಿಂದಿನ ಬಿಷ್ಣೋಯ್ ಉದ್ದೇಶವೇನು? ಮತ್ತು ಆತ ಜೈಲಿನಿಂದಲೇ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಹೇಗೆ?

ಬಾಬಾ ಸಿದ್ದೀಕ್ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿರುವುದನ್ನು ಮುಂಬೈ ಪೊಲೀಸರು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ ಹಲವಾರು ಮೀಡಿಯಾಗಳು ಮಾತ್ರ ಬಿಷ್ಣೋಯ್ ಗ್ಯಾಂಗ್ ನಿಜವಾಗಿಯೂ ಹತ್ಯೆಯಲ್ಲಿ ಭಾಗಿಯಾಗಿದೆ ಎಂದು ವರದಿ ಮಾಡಿವೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಿಷ್ಣೋಯ್ ಸಹಚರ ಎಂದು ಹೇಳಲಾದ ಶುಭಂ ಲೋಂಕರ್ ಈ ಹತ್ಯೆಯನ್ನು ಬಿಷ್ಣೋಯ್ ಪರವಾಗಿ ಮಾಡಿರುವುದಾಗಿ ಹೊಣೆ ಹೊತ್ತುಕೊಂಡಿದ್ದು, ಅದಕ್ಕೆ ಸಮರ್ಥನೆಯನ್ನೂ ನೀಡಿದ್ದಾನೆ. ಅದರಲ್ಲಿ ಈ ಹತ್ಯೆಯನ್ನು ಒಳ್ಳೆಯ ಕೆಲಸ ಎಂದು ಸಮರ್ಥಿಸಿಕೊಳ್ಳಲಾಗಿದೆ.

ಸಲ್ಮಾನ್ ಖಾನ್ ಜೊತೆಗಿನ ಸ್ನೇಹ ಮತ್ತು ದಾವೂದ್ ಇಬ್ರಾಹೀಂ ಜೊತೆಗಿನ ಸಂಪರ್ಕಕ್ಕಾಗಿ ಸಿದ್ದೀಕ್ ಅವರನ್ನು ಕೊಲ್ಲಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

1998ರಲ್ಲಿ ಜೋಧ್‌ಪುರದಲ್ಲಿ ಕೃಷ್ಣಮೃಗವನ್ನು ಕೊಂದ ಆರೋಪದಲ್ಲಿ ಕ್ಷಮೆ ಯಾಚಿಸಲು ಸಲ್ಮಾನ್ ಖಾನ್ ನಿರಾಕರಿಸಿದ್ದರಿಂದ ಬಿಷ್ಣೋಯ್ ತನ್ನ ಹಗೆ ತೀರಿಸಿಕೊಂಡಿರುವುದಾಗಿ ಹೇಳಲಾಗಿದೆ.

ಬಾಬಾ ಸಿದ್ದೀಕ್ ತಮ್ಮ ರಾಜಕೀಯ ಸ್ಥಾನಮಾನ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಪ್ರಮುಖ ತಾರೆಯರ ಜೊತೆಗೆ ಸ್ನೇಹದ ಕಾರಣಕ್ಕೆ ಹೆಸರಾಗಿದ್ದವರು. ಸಿನೆಮಾದವರೇ ಹೆಚ್ಚಾಗಿ ವಾಸಿಸುವ ಮುಂಬೈನ ಐಷಾರಾಮಿ ಬಾಂದ್ರಾ ಪ್ರದೇಶದಲ್ಲಿ ಅವರನ್ನು ಕೊಲ್ಲಲಾಗಿದೆ.

ಈ ಹತ್ಯೆ ಬಿಷ್ಣೋಯ್ ಸುಲಿಗೆ ದಂಧೆಗೆ ಹೊಸ ದಾರಿಯಾಗಲಿದೆ. ದುಡ್ಡು ಇರುವವರನ್ನು ದೋಚುವುದು ಇನ್ನು ಆತನಿಗೆ ಕಷ್ಟವಾಗುವುದಿಲ್ಲ.

ನವೆಂಬರ್ 2023ರಲ್ಲಿ ಗಿಪ್ಪಿ ಗ್ರೆವಾಲ್ ಮತ್ತು ಸೆಪ್ಟಂಬರ್ 2024ರಲ್ಲಿ ಎ.ಪಿ. ಧಿಲ್ಲೋನ್ ಅವರಂತಹ ಪ್ರಮುಖ ಪಂಜಾಬಿ ಸೆಲೆಬ್ರಿಟಿಗಳ ಕೆನಡಾದ ಮನೆಗಳ ಮೇಲೆ ಬಿಷ್ಣೋಯ್ ಕಡೆಯ ಮಂದಿ ದಾಳಿಗಳನ್ನು ನಡೆಸಿದ್ದರು. ಮೊನ್ನೆ ಎಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆದದ್ದು ಕೂಡ ಬಿಷ್ಣೋಯ್ ಸೂಚನೆಯ ಮೇರೆಗೆ ಎಂದು ಹೇಳಲಾಗಿದೆ.

ದಾಳಿಗೊಳಗಾದ ಅಥವಾ ಕೊಲ್ಲಲ್ಪಟ್ಟ ಪ್ರತಿಯೊಬ್ಬ ಸೆಲೆಬ್ರಿಟಿಗೆ ಬಿಷ್ಣೋಯ್ ಮತ್ತವನ ಸಹಚರರಿಂದ

ಬೆದರಿಕೆ ಮತ್ತು ಹಣಕ್ಕಾಗಿ ಒತ್ತಾಯ ಬಂದದ್ದಿರಬಹುದು.

2000ರ ದಶಕದ ಕೊನೆ ಮತ್ತು 2010ರ ದಶಕದ ಆರಂಭದಲ್ಲಿ ಪಂಜಾಬ್‌ನಲ್ಲಿ ಸಂಘಟಿತ ಅಪರಾಧಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ರಾಕಿ ಫಾಜಿಲ್ಕಾನಿಂದಲೇ ಬಿಷ್ಣೋಯ್ ಅಪರಾಧ ಲೋಕಕ್ಕೆ ಅಡಿಪಾಯ ಬಿದ್ದಿದೆ. 2016ರಲ್ಲಿ ಗುಂಡೇಟಿಗೆ ಒಳಗಾಗುವ ಮೊದಲು ಫಾಜಿಲ್ಕಾ ಅಪರಾಧ ಲೋಕದಿಂದ ದೂರ ಸರಿದು ರಾಜಕೀಯ ಪ್ರವೇಶಿಸಿದ್ದ. ರಾಕಿ ಫಾಜಿಲ್ಕಾ ಸಹಚರ ಲಾಖಾ ಸಿಧಾನ ಕೂಡ ಅಪರಾಧ ಪ್ರಪಂಚ ತೊರೆದ ಬಳಿಕ ಲಾರೆನ್ಸ್ ಬಿಷ್ಣೋಯ್‌ದ್ದೇ ಆಟ ನಡೆಯಲು ಶುರುವಾಯಿತು. ಆತ ಆ ಸಮಯದಲ್ಲಿ ಫಾಜಿಲ್ಕಾ ಗ್ಯಾಂಗ್‌ನಲ್ಲಿ ದೊಡ್ಡ ಬಲವಾಗಿದ್ದ.

ಕಳೆದ ಎರಡು ವರ್ಷಗಳಲ್ಲಿ ಬಿಷ್ಣೋಯ್ ಗುಂಪಿನವರು ಮೂರು ಇತರ ಹತ್ಯೆಗಳನ್ನು ನಡೆಸಿದ್ದಾರೆ.

ಡಿಸೆಂಬರ್ 2022ರಲ್ಲಿ ರಾಜಸ್ಥಾನದ ಶೇಖಾವತಿ ಪ್ರದೇಶದ ಪ್ರಮುಖ ದರೋಡೆಕೋರ ರಾಜು ಥೇತ್ ಸಿಕಾರ್‌ನಲ್ಲಿ ಕೊಲೆಯಾದಾಗ, ಲಾರೆನ್ಸ್ ಬಿಷ್ಣೋಯ್ ಕಡೆಯವನೇ ಹೊಣೆ ಹೊತ್ತಿದ್ದ.

ಮೇ 2023ರಲ್ಲಿ ಬಿಷ್ಣೋಯ್ ಸಹಚರರು ದಿಲ್ಲಿಯ ಜೈಲಿನೊಳಗೆ ಟಿಲ್ಲು ತಾಜ್‌ಪುರಿ ಹತ್ಯೆ ನಡೆಸಿದ್ದಾರೆ ಎಂಬ ಆರೋಪವಿದೆ. ನಂತರ, ಡಿಸೆಂಬರ್ 2023ರಲ್ಲಿ ಜೈಪುರದ ಐಷಾರಾಮಿ ಪ್ರದೇಶದಲ್ಲಿ ಕರ್ಣಿ ಸೇನಾ ನಾಯಕ ಸುಖದೇವ್ ಸಿಂಗ್ ಗೊಗಮೆಡಿಯನ್ನು ಹಾಡಹಗಲೇ ಕೊಲ್ಲಲಾಯಿತು.

ಬಿಷ್ಣೋಯ್ ಮಾಡುವ ಹತ್ಯೆಗಳಲ್ಲಿ ಜಾತಿಯ ಲಿಂಕ್ ಇರುತ್ತದೆ. ಕನಿಷ್ಠ ಒಬ್ಬ ಶೂಟರ್ ಅಥವಾ ಬೇರಾವುದೇ ಥರದ ಆರೋಪಿಯಾದರೂ ಹತ್ಯೆಯಾದ ವ್ಯಕ್ತಿಯ ಜಾತಿಯವನೇ ಆಗಿರುವುದರ ಬಗ್ಗೆ ಹೇಳಲಾಗುತ್ತದೆ. ಹಾಗಾಗಿ, ಮೂಸೆವಾಲಾ ಹತ್ಯೆಯಲ್ಲಿ ಅವನದೇ ಜಾಟ್ ಸಿಖ್ ಸಮುದಾಯದ ಗೋಲ್ಡಿ ಬ್ರಾರ್ ಪ್ರಮುಖ ಆರೋಪಿ.

ರಾಜು ಥೇತ್ ಹತ್ಯೆಯಲ್ಲಿ ಅವನದೇ ಹಿಂದೂ ಜಾಟ್ ಸಮುದಾಯದ ರೋಹಿತ್ ಗೋದಾರನ ಕೈವಾಡವಿತ್ತು ಎನ್ನಲಾಗುತ್ತದೆ. ರಜಪೂತ ನಾಯಕ ಗೊಗಮೆಡಿ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ರೋಹಿತ್ ರಾಥೋಡ್ ರಜಪೂತನೇ ಆಗಿದ್ದ. ಬಾಬಾ ಸಿದ್ದೀಕ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಪತ್ತೆ ಮಾಡಬೇಕಿದೆ.

ಲಾರೆನ್ಸ್ ಬಿಷ್ಣೋಯ್ ಜೈಲಿನಿಂದಲೇ ಇದನ್ನೆಲ್ಲ ಹೇಗೆ ಮಾಡುತ್ತಾನೆ?

ಸ್ಪಷ್ಟವಾಗಿ ಹೇಳುವುದಾದರೆ, ಯಾರದೂ ಶಾಮೀಲಿಲ್ಲದೆ ಲಾರೆನ್ಸ್ ಬಿಷ್ಣೋಯ್ ಇದನ್ನೆಲ್ಲ ಜೈಲಿನಿಂದಲೇ ಮಾಡಿಸುವುದು ಸಾಧ್ಯವೇ ಇಲ್ಲ.

ಈ ಹತ್ಯೆಗಳ ಯೋಜನೆ ಮತ್ತು ನಿಭಾಯಿಸುವಿಕೆ ಹೊಣೆ ಹೊರುವವರು ಗೋಲ್ಡಿ ಬ್ರಾರ್, ರೋಹಿತ್ ಗೋಡಾರಾ ಮತ್ತು ಅನ್ಮೋಲ್ ಬಿಷ್ಣೋಯ್ ಥರದ ಇನ್ನೂ ಸ್ವತಂತ್ರರಾಗಿ ಹೊರಗಿರುವವರೇ ಆಗಿರುತ್ತಾರೆ. ಲಾರೆನ್ಸ್ ಬಿಷ್ಣೋಯ್ ಸ್ವತಃ ಈ ಹತ್ಯೆಗಳನ್ನು ನಡೆಸುತ್ತಿರುವವರ ಜೊತೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ.

ಉದಾಹರಣೆಗೆ, ಲಾರೆನ್ಸ್ ಬಿಷ್ಣೋಯ್ 2022 ಮತ್ತು 2023ರಲ್ಲಿ ವೀಡಿಯೊ ಕರೆಗಳ ಮೂಲಕ ಸಿದ್ದೀಕ್ ಕೊಲೆ ಆರೋಪಿ ಶುಭಂ ಲೋಂಕರ್ ಜೊತೆ ಮಾತನಾಡಿದ್ದಾನೆ ಎಂಬ ವರದಿಗಳಿವೆ.

ಈ ವರ್ಷದ ಆರಂಭದಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಲೋಂಕರ್‌ನನ್ನು ಬಂಧಿಸಲಾಯಿತು. ಆದರೆ ನಂತರ ಬಿಡುಗಡೆ ಮಾಡಲಾಯಿತು.

ಹಲವಾರು ಉದ್ಯಮಿಗಳಿಗೆ ಈ ವರ್ಷ ಜೈಲಿನಿಂದ ನೇರವಾಗಿ ಬಿಷ್ಣೋಯ್ ಬೆದರಿಕೆ ಕರೆಗಳನ್ನು ಮಾಡಿದ್ದ ಎಂಬ ವರದಿಗಳೂ ಇವೆ. ಆತ ಜೈಲಿನಿಂದಲೇ ವೀಡಿಯೊ ಸಂದರ್ಶನಗಳನ್ನೂ ನೀಡಿದ್ದಾನೆ.

ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ, ಆತನನ್ನು ಸಬರಮತಿ ಜೈಲಿನಿಂದ ಬೇರೆಡೆಗೆ ಸ್ಥಳಾಂತರ ಮಾಡುವುದನ್ನು ಕೇಂದ್ರ ಗೃಹ ಸಚಿವಾಲಯವೇ ನಿಷೇಧಿಸಿದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 268 (1) ಅಡಿಯಲ್ಲಿ ಹೊರಡಿಸಲಾದ ಆದೇಶ, ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಹೈ ಪ್ರೊಫೈಲ್ ಕೈದಿಗಳ ಸ್ಥಳಾಂತರ ನಿರ್ಬಂಧಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ. ಇದು ಆರಂಭದಲ್ಲಿ ಆಗಸ್ಟ್ 2024ರವರೆಗೆ ಜಾರಿಯಲ್ಲಿತ್ತು. ಆದರೆ ಈಗ ಅದನ್ನು ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.

ಬಿಷ್ಣೋಯ್ ಪಂಜಾಬ್ ಮತ್ತು ಈಗ ಮಹಾರಾಷ್ಟ್ರದಲ್ಲಿ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಎಪ್ರಿಲ್ 2024ರಲ್ಲಿ ಸಲ್ಮಾನ್ ಖಾನ್ ಮನೆಯ ಮೇಲೆ ನಡೆದ ದಾಳಿಯ ನಂತರ ಮುಂಬೈ ಪೊಲೀಸರು ಬಿಷ್ಣೋಯ್‌ನನ್ನು ಕಸ್ಟಡಿಗೆ ಪಡೆಯಲು ಪ್ರಯತ್ನಿಸಿದ್ದರು. ಆದರೆ ಅವರಿಗದು ಇನ್ನೂ ಸಾಧ್ಯವಾಗಿಲ್ಲ ಎಂಬ ವರದಿಯಿದೆ.

ಈ ಹತ್ಯೆಯ ಹಿಂದೆ ಇರುವುದು ಚುನಾವಣೆ ಹೊತ್ತಿನ ರಾಜಕೀಯವೆ? ಹರ್ಯಾಣ ಚುನಾವಣೆ ಹೊತ್ತಿನಲ್ಲಿ ತಿರುಪತಿ ಲಡ್ಡು ವಿವಾದವನ್ನು ಎಬ್ಬಿಸಿದ ಹಾಗೆಯೇ ಈಗಲೂ ಎಲ್ಲರನ್ನೂ ದಂಗುಗೊಳಿಸಿ ಚುನಾವಣೆ ಮುಗಿಸಿಬಿಡುವ ತಂತ್ರವೆ?

ಆದರೆ ಒಂದು ವಿಚಾರದ ಬಗ್ಗೆ ಕೇಳಲೇಬೇಕು.

ಇದೇ ಘಟನೆ ಬಂಗಾಳದಲ್ಲಿ ನಡೆದಿದ್ದರೆ ಅಥವಾ ಹತ್ಯೆ ಹೊಣೆ ಹೊತ್ತಿರುವ ಲಾರೆನ್ಸ್ ಬಿಷ್ಣೋಯ್ ಬಂಗಾಳದ ಜೈಲಿನಲ್ಲಿ ಇದ್ದಿದ್ದರೆ ಆಗ ಏನು ಹೇಳಲಾಗುತ್ತಿತ್ತು? ಆಗ ಮಡಿಲ ಮೀಡಿಯಾಗಳು, ಐಟಿ ಸೆಲ್ ಎಲ್ಲವೂ ಸೇರಿ ಎಂಥ ಕಥೆ ಹೇಳುತ್ತಿದ್ದವು?

ಇದೇ ಘಟನೆ ಬೇರೆ ರಾಜ್ಯದಲ್ಲಿ ನಡೆದಿದ್ದರೂ ರಾಜಕೀಯ ಮಾಡುವುದು ಬೇಡ ಎಂದು ಅಜಿತ್ ಪವಾರ್ ಹೇಳುತ್ತಿದ್ದರಾ?

ಬಾಬಾ ಸಿದ್ದೀಕ್ ಅವರು ಸಲ್ಮಾನ್ ಖಾನ್ ಮಿತ್ರನಾಗಿರುವುದರಿಂದ ಈ ಹತ್ಯೆ ನಡೆದಿದೆ ಎಂದು ಒಂದು ಕಥೆ ಹೇಳಲಾಗುತ್ತಿದೆ. ಮುಂಬೈನಲ್ಲಿ ನಡೆದಿರುವ ಸ್ಲಂ ಪುನರಾಭಿವೃದ್ಧಿ ಯೋಜನೆ ಹಿನ್ನೆಲೆಯಲ್ಲಿನ ಜಗಳ ಇದರ ಹಿಂದಿದೆ ಎಂಬುದು ಮತ್ತೊಂದು ಕಥೆ.

ಮುಂಬೈನಲ್ಲಿ ರಿಯಲ್ ಎಸ್ಟೇಟ್ ವಿಚಾರಕ್ಕೆ ಗ್ಯಾಂಗ್‌ವಾರ್ ನಡೆಯವುದು ಹೊಸದೇನಲ್ಲ. ಅದಕ್ಕೆ ತುಂಬಾ ಹಳೆಯ ಇತಿಹಾಸವಿದೆ. ಹತ್ತಿಪ್ಪತ್ತು ಸಾವಿರಕ್ಕಾಗಿ, 30-40 ಸಾವಿರಕ್ಕಾಗಿ ಕೊಲ್ಲುವ ಬಡವರ ಕಥೆಯೂ ಒಂದೆಡೆಗಿದೆ. ಈಗ ಈ ಹತ್ಯೆ ಕೂಡ ಅಂಥ ಹಲವು ಕಥೆಗಳ ನಡುವೆ ಸಿಲುಕಿಕೊಂಡು, ಏನೆಂಬುದೂ ಸ್ಪಷ್ಟವಾಗದೆ ಮರೆತುಹೋಗಲೂ ಬಹುದು.

ಈ ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಹರ್ಯಾಣ ನಿವಾಸಿ ಗುರ್ಮೆಲ್ ಬಲ್ಜಿತ್ ಸಿಂಗ್, ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಬಂಧಿತರು. ಮೂರನೇ ಶೂಟರ್ ಉತ್ತರ ಪ್ರದೇಶದ ಶಿವಕುಮಾರ್ ಗೌತಮ್ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.

ಯಾಕೆ ಬಾಬಾ ಸಿದ್ದೀಕ್ ಹತ್ಯೆ ಆಯಿತು ಎಂಬ ಪ್ರಶ್ನೆಗೆ ಉತ್ತರವಿನ್ನೂ ಸಿಗಬೇಕಿದೆ. ಗುಜರಾತಿನ ಜೈಲಿನಲ್ಲಿ ಕೂತಿರುವವನೇ ಸಲ್ಮಾನ್ ಖಾನ್ ಮನೆಯ ಹೊರಗಡೆ ಗುಂಡಿನ ದಾಳಿ, ಈಗ ಬಾಬಾ ಸಿದ್ದೀಕ್ ಹತ್ಯೆಯ ಹೊಣೆಗಾರಿಕೆ ಹೊರಬಲ್ಲಷ್ಟು ಬಲಶಾಲಿ, ಪ್ರಭಾವಶಾಲಿ ಎಂದಾದರೆ, ಈ ದೇಶದ ಕಾನೂನು ವ್ಯವಸ್ಥೆಗೆ ಬೆಲೆ ಇದೆಯೇ? ಉತ್ತರಿಸುವವರು ಯಾರು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News