ದೇಶದ ರಾಜಧಾನಿಯಲ್ಲೇ ನಡೆದ ಈ ಅನಾಹುತಕ್ಕೆ ಯಾರು ಹೊಣೆ?
ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೆ ಹಣ ಪೀಕುವ ಕೋಚಿಂಗ್ ಸೆಂಟರ್‌ಗಳು, ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ವ್ಯವಸ್ಥೆ ಹೊಂದಿರುವುದಿಲ್ಲ. ‘‘ಕೋಚಿಂಗ್ ಸೆಂಟರ್‌ಗಳು ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಚೇಂಬರ್‌ಗಳಾಗಿ ಕಾಣಿಸುತ್ತಿವೆ’’ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕಳೆದ 10 ವರ್ಷಗಳಿಂದ ದಿಲ್ಲಿಯಲ್ಲಿ ಎಂತಹ ಸ್ಥಿತಿಯಿದೆ ಎಂದರೆ, ಯಾರು ಉತ್ತರದಾಯಿಗಳು ಎಂಬುದೇ ತಿಳಿಯದ ಸ್ಥಿತಿಯಿದೆ.
ರಾಜಧಾನಿ ದಿಲ್ಲಿಯಲ್ಲೊಂದು ದೊಡ್ಡ ಅನಾಹುತ ನಡೆದುಹೋಗಿದೆ. ಅಲ್ಲಿನ ರಾವುಸ್ ಕೋಚಿಂಗ್ ಸೆಂಟರ್‌ನಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತಾನ್ಯಾ ಸೋನಿ, ಶ್ರೇಯಾ ಯಾದವ್ ಮತ್ತು ನವೀನ್ ಡೆಲ್ವಿನ್ ಲೈಬ್ರರಿಯಲ್ಲಿ ಓದುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು.
ರಾಜಧಾನಿ ದಿಲ್ಲಿಯ ಸ್ಥಿತಿ ಎಷ್ಟು ಭಯಂಕರವಾಗಿದೆ ಎಂಬುದಕ್ಕೆ ಈ ಕರಾಳ ಘಟನೆ ಸಾಕ್ಷಿಯಾಗಿದೆ.
ಇಲ್ಲಿ ಯಾವ ಸಮಯದಲ್ಲಾದರೂ ಮಳೆ ನೀರು ಅಥವಾ ಚರಂಡಿ ನೀರು ಒಳಗೆ ನುಗ್ಗಬಹುದು. ಒಳಗಿದ್ದವರಿಗೆ ಹೊರದಾರಿಯೇ ಇಲ್ಲದಂತೆ ಮಾಡಿ ಬಲಿ ತೆಗೆದುಕೊಳ್ಳಬಹುದು.
ದೇಶದ ಯಾವುದೋ ಮೂಲೆಯಲ್ಲಿರುವ ಒಂದು ಸಣ್ಣ ನಗರದಲ್ಲಿ ಅಥವಾ ಹಳ್ಳಿಯಲ್ಲಿ ಹೀಗೆ ಅನಾಹುತ ನಡೆದರೆ ಸರಕಾರದ ಗಮನ ಆ ಕಡೆ ಹರಿದಿಲ್ಲವೆನ್ನಬಹುದು. ಆದರೆ ದೇಶದ ರಾಜಧಾನಿಯ ಹೃದಯಭಾಗದಲ್ಲಿ ಹೀಗಾದರೆ ಅದನ್ನು ಜೀರ್ಣಿಸಿಕೊಳ್ಳುವುದು ಹೇಗೆ?
ಬಲಿಯಾದ ಈ ಮೂವರು ವಿದ್ಯಾರ್ಥಿಗಳು ಎಂತೆಂತಹ ಕನಸು ಕಟ್ಟಿಕೊಂಡು ದಿಲ್ಲಿಗೆ ಬಂದಿರಬಹುದು? ಅವರ ಪೋಷಕರು ಅವರ ಕೋಚಿಂಗ್ ಗಾಗಿ, ಊಟ, ವಸತಿಗಾಗಿ ಹಣ ಹೊಂದಿಸಲು ಎಷ್ಟೆಲ್ಲಾ ಪಾಡು ಪಟ್ಟಿರಬಹುದು? ಅವರ ಮನೆಗೆ ಈಗ ಸರಕಾರ ಮಗನ ಅಥವಾ ಮಗಳ ಶವ ಕಳಿಸಿಕೊಟ್ಟರೆ ಅದಕ್ಕಿಂತ ದೊಡ್ಡ ಆಘಾತ ಬೇರೇನಿದೆ?
ಪ್ರತೀ ಮಳೆಯಲ್ಲೂ ಇಂತಹ ದುರಂತಗಳಾಗುವುದನ್ನು ನೋಡುತ್ತೇವೆ. ಆನಂತರ ಜನರೂ ಮರೆಯುತ್ತಾರೆ, ಸರಕಾರವೂ ಮರೆತು ಬಿಡುತ್ತದೆ.
ಈಗಲೂ ಕಟ್ಟಡಕ್ಕೆ ಸೀಲ್ ಹಾಕಿರುವುದು ಬಿಟ್ಟರೆ ಮತ್ತೇನೂ ಆಗಿಲ್ಲ. ವರದಿಗಳ ಪ್ರಕಾರ, ಕೋಚಿಂಗ್ ಸೆಂಟರ್ ಮಾಲಕ ಅಭಿಷೇಕ್ ಗುಪ್ತಾ ಹಾಗೂ ಸಂಯೋಜಕ ದೇಶ್ಪಾಲ್ ಸಿಂಗ್ ಬಂಧನವಾಗಿದೆ. ಘಟನೆ ನಡೆದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಅವರಲ್ಲಿ ಆಕ್ರೋಶ ಮಡುಗಟ್ಟಿದೆ. ನಿಜವಾಗಿಯೂ ಸಾವಿಗೀಡಾಗಿರುವವರು ಎಷ್ಟು ಜನ ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಸಾವು ಸಂಭವಿಸಿರಬಹುದು ಎಂಬುದು ಅವರ ಅನುಮಾನವಾಗಿದೆ.
ಕಟ್ಟಡ ನಿರ್ಮಾಣದಲ್ಲಿ ನಿಯಮ ಪಾಲನೆಯಾಗದೇ ಇರುವುದು ಒಂದೆಡೆಯಾದರೆ, ಈ ಕೋಚಿಂಗ್ ಸಂಸ್ಥೆಗಳನ್ನು ನಡೆಸುವವರ ಹೊಣೆಗೇಡಿತನ ಇನ್ನೊಂದೆಡೆ. ಇಂತಹ ಘಟನೆಗಳಿಗೆ ದಾರಿ ಮಾಡಿಕೊಡುತ್ತದೆ.
ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೆ ಹಣ ಪೀಕುವ ಕೋಚಿಂಗ್ ಸೆಂಟರ್‌ಗಳು, ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ವ್ಯವಸ್ಥೆ ಹೊಂದಿರುವುದಿಲ್ಲ.
‘‘ಕೋಚಿಂಗ್ ಸೆಂಟರ್‌ಗಳು ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಚೇಂಬರ್‌ಗಳಾಗಿ ಕಾಣಿಸುತ್ತಿವೆ’’ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳಿಂದ ದಿಲ್ಲಿಯಲ್ಲಿ ಎಂತಹ ಸ್ಥಿತಿಯಿದೆ ಎಂದರೆ, ಯಾರು ಉತ್ತರದಾಯಿಗಳು ಎಂಬುದೇ ತಿಳಿಯದ ಸ್ಥಿತಿಯಿದೆ.
2015ರಲ್ಲಿ ಗೃಹ ಸಚಿವಾಲಯ ಜಾರಿಗೊಳಿಸಿದ್ದ ಅಧಿಸೂಚನೆ ಪ್ರಕಾರ, ದಿಲ್ಲಿಯಲ್ಲಿ ಅಧಿಕಾರಿಗಳ ಮೇಲೆ ಲೆಫ್ಟಿನೆಂಟ್ ಗವರ್ನರ್ ನಿಯಂತ್ರಣ ಇರಬೇಕು ಎಂದಿತ್ತು.
ಐವರು ನ್ಯಾಯಾಧೀಶರ ಸಂವಿಧಾನ ಪೀಠ 2023ರಲ್ಲಿ ಭಿನ್ನ ತೀರ್ಪು ಪ್ರಕಟಿಸಿತ್ತು.
ದಿಲ್ಲಿಯ ಮಾದರಿ ಬೇರೆ ಸ್ವರೂಪದ್ದಾಗಿದ್ದು, ಅದು ಇತರ ಕೇಂದ್ರಾಳಿತ ಪ್ರದೇಶಗಳಂತಲ್ಲ ಎಂದು ಕೋರ್ಟ್ ಹೇಳಿತ್ತು.
ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿ ಈ ಮೂರನ್ನು ಹೊರತುಪಡಿಸಿ ಉಳಿದವುಗಳ ಮೇಲೆ ದಿಲ್ಲಿ ಸರಕಾರದ ಅಧಿಕಾರವಿರುತ್ತದೆ ಎಂದು ತೀರ್ಪು ಬಂದಿತ್ತು.
ಆದರೆ ಕೇಂದ್ರ ಸರಕಾರ, ಲೆಫ್ಟಿನಂಟ್ ಗವರ್ನರ್ ಕೈಗೇ ಅಧಿಕಾರ ಕೊಡುವ ಸುಗ್ರೀವಾಜ್ಞೆ ಹೊರಡಿಸಿತ್ತು.
ದಿಲ್ಲಿಯ ಮೇಲೆ ಸಂಪೂರ್ಣ ಹಿಡಿತ ಇರುವುದು ಮೋದಿ ಸರಕಾರದ್ದು, ಅದರಲ್ಲೂ ವಿಶೇಷವಾಗಿ ಅಮಿತ್ ಶಾ ಅವರದ್ದು ಅನ್ನುವುದು ಓಪನ್ ಸೀಕ್ರೆಟ್.
ದಿಲ್ಲಿಯ ಕೇಜ್ರಿವಾಲ್ ಸರಕಾರವನ್ನು ಸ್ವತಂತ್ರವಾಗಿ ಕೆಲಸ ಮಾಡಲು ಮೋದಿ ಸರಕಾರ, ಅಮಿತ್ ಶಾ ಬಿಡುತ್ತಿಲ್ಲ. ಆದರೆ ಅದೇ ದಿಲ್ಲಿಯಲ್ಲಿ ಇಂತಹ ಘೋರ ದುರಂತ ಸಂಭವಿಸಿದಾಗ ಅಮಿತ್ ಶಾ ಕಾಣುವುದೇ ಇಲ್ಲ.
‘‘ದಿಲ್ಲಿಯ ಮಾಲಕ ಅಮಿತ್ ಶಾ, ಅವರೇ ಬಂದು ಈ ದುರಂತ ಕುರಿತ ಚರ್ಚೆಗೆ ಉತ್ತರಿಸಬೇಕು’’ ಎಂದು ಮೊನ್ನೆ ರಾಜ್ಯಸಭೆಯಲ್ಲಿ ಸಿಪಿಎಂ ಸಂಸದ ಜಾನ್ ಬ್ರಿಟ್ಟಸ್ ಹೇಳಿದ್ದಾರೆ.
ದೇಶದಲ್ಲಿ ಹೀಗೆ ಅಮಾಯಕರ ಸಾವುಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಉತ್ತರಿಸುವವರೇ ಇಲ್ಲವಾಗಿದ್ದಾರೆ.
ಐದು ವರ್ಷಗಳ ಹಿಂದೆ ತಕ್ಷಶಿಲಾ ಆರ್ಕೆಡ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತು. ತರಬೇತಿಗೆ ಬಂದಿದ್ದ 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಆ ಪ್ರಕರಣದ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು.
ದಿಲ್ಲಿಯಾದ್ಯಂತ ನಿಯಮ ಮೀರಿದ ಕಟ್ಟಡಗಳು ನೂರಾರಿವೆ. ಮಳೆ ನೀರು ನೆಲಮಾಳಿಗೆಗೆ ನುಗ್ಗಿ ಒಳಗಿದ್ದವರೆಲ್ಲ ಮುಳುಗಿ ಸಾಯವಂತಾಗುತ್ತದೆಯೆಂದರೆ ಸ್ಥಿತಿ ಹೇಗಿರಬಹುದು?
ಮಳೆ ಶುರುವಾಗುವ ಮುನ್ನ ಚರಂಡಿಗಳ ಸ್ವಚ್ಛತೆ ಆಗುತ್ತಿಲ್ಲ. ಇನ್ನೊಂದೆಡೆ ಮಳೆ ಬೀಳುವ ರೀತಿಯಲ್ಲೂ ಭಾರೀ ಬದಲಾವಣೆ ಆಗಿದೆ. ತಿಂಗಳುಗಟ್ಟಲೆ ಬೀಳಬೇಕಿರುವ ಮಳೆ ಒಂದೆರಡೇ ದಿನಗಳಲ್ಲಿ ಬೀಳುವ ಸ್ಥಿತಿ ಎಲ್ಲವನ್ನೂ ಅಸ್ತವ್ಯಸ್ತಗೊಳಿಸುತ್ತದೆ.
ದಿಲ್ಲಿಯ ತುಂಬ ಅವ್ಯವಸ್ಥೆಯೇ ಢಾಳಾಗಿ ಕಾಣಿಸುತ್ತದೆ. ದಿಲ್ಲಿಯ 100ಕ್ಕೂ ಅಧಿಕ ಸ್ಥಳಗಳಲ್ಲಿ ಮಳೆ ಬಂದರೆ ನೀರು ತುಂಬಿಕೊಳ್ಳುವ ಸ್ಥಿತಿಯಿದೆ. ಚರಂಡಿಗಳು ಅತ್ಯಂತ ಹಳೆಯವಾಗಿದ್ದು, ನೀರು ಹರಿಯದೇ ಇರುವ ಸ್ಥಿತಿ ಕೂಡ ಹಲವೆಡೆಗಳಲ್ಲಿ ಸಾಮಾನ್ಯವೇ ಆಗಿಬಿಟ್ಟಿದೆ.
ದೇಶದ ರಾಜಧಾನಿಯಲ್ಲಿಯೇ ಇಂತಹ ಅವಸ್ಥೆಯಾದರೆ, ಇದನ್ನು ಸರಿಪಡಿಸುವ ಉದ್ದೇಶವೂ ಇಲ್ಲವೆಂಬಂತೆ ಕಾಣುತ್ತಿದ್ದರೆ ಮತ್ತೆಲ್ಲಿ ಸಾಧ್ಯವಾದೀತು?
ಪ್ರಗತಿ ಮೈದಾನದ ಸುರಂಗ ಹೊಸದಾಗಿ ನಿರ್ಮಿಸಲಾಗಿರುವಂಥದ್ದು. ಮಳೆಯಾದರೆ ಇಲ್ಲಿಯೂ ಎರಡು ಮೂರು ದಿನಗಳ ಕಾಲ ನೀರು ನಿಲ್ಲುವ ಸ್ಥಿತಿಯಿದೆ.
777 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸುರಂಗ ಮಾರ್ಗದ ಕಥೆಯೇ ಹೀಗಾದರೆ ಇನ್ನಾವುದು ಸರಿಯಿರಲು ಸಾಧ್ಯ?
ಕಳೆದ ತಿಂಗಳು ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ಒನ್‌ನಲ್ಲಿ ಛಾವಣಿ ಕುಸಿದು ಬಿದ್ದು ಒಬ್ಬ ಅಮಾಯಕ ಬಲಿಯಾದರೆ, ಹಲವರು ಗಾಯಗೊಂಡರು. ಬಲಿಯಾದ ವ್ಯಕ್ತಿಯ ಕುಟುಂಬದ ರೋದನ, ಅವರ ಆಕ್ರೋಶ ಮುಗಿಲು ಮುಟ್ಟುವಂತಿತ್ತು. ‘‘ನಮ್ಮ ಕುಟುಂಬದ ಆಧಾರ ಸ್ತಂಭವನ್ನೇ ಈ ಸರಕಾರ ಕಿತ್ತುಕೊಂಡಿತು’’ ಎಂದು ಮೃತರ ಪತ್ನಿ ತೀವ್ರ ಆಕ್ರೋಶ ಹಾಗೂ ದುಃಖದಿಂದ ಹೇಳುತ್ತಿದ್ದರು.
ದೇಶಾದ್ಯಂತದ ಯುವಕರು ಓದುವುದಕ್ಕಾಗಿ ದಿಲ್ಲಿ ಸೇರುತ್ತಾರೆ. ಲಕ್ಷ ಲಕ್ಷ ರೂ. ಸುರಿದು ಕೋಚಿಂಗ್ ತೆಗೆದುಕೊಳ್ಳುತ್ತಾರೆ. ಆದರೆ ಅಂತಹ ವಿದ್ಯಾರ್ಥಿಗಳ ಜೀವವೇ ಅಪಾಯದಲ್ಲಿರುವುದು ಆಘಾತಕಾರಿ. ಏಕೆ ರಾಜಧಾನಿ ದಿಲ್ಲಿಯಲ್ಲಿಯೇ ಹೀಗಾಗುತ್ತದೆ?
ಇಂತಹ ಸ್ಥಿತಿಯನ್ನು ದಿಲ್ಲಿ ಮುಟ್ಟಿರುವುದಾದರೂ ಹೇಗೆ?
ಕಳೆದ ವರ್ಷ ಮುಖರ್ಜಿನಗರದಲ್ಲಿ ಹುಡುಗಿಯರ ಪಿಜಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹಲವರು ಗಾಯಗೊಂಡಿದ್ದರು. ಮೂರು ಮಹಡಿಗಳ ಆ ಕಟ್ಟಡ ಎನ್‌ಒಸಿಯನ್ನೇ ಹೊಂದಿರಲಿಲ್ಲ.
ಇಂತಹ ಘಟನೆಗಳಾದಾಗೆಲ್ಲ ಅಕ್ರಮ ಕಟ್ಟಡಗಳ ಹುಡುಕಾಟ ನಡೆಯುವಂತೆ ಈ ಬಾರಿಯೂ ನಡೆದಿದೆ.
2020ರಲ್ಲಿ ಭಜನ್‌ಪುರದಲ್ಲಿ ಕೋಚಿಂಗ್ ಸೆಂಟರ್ ಇದ್ದ ಕಟ್ಟಡ ಕುಸಿದುಬಿದ್ದು, ಶಿಕ್ಷಕ ಹಾಗೂ ನಾಲ್ಕು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. 2023ರಲ್ಲಿ ದಿಲ್ಲಿಯ ಮುಖರ್ಜಿ ನಗರದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು.
ಈಗ ದೇಶದಲ್ಲಿ ಕೋಚಿಂಗ್ ಅನ್ನುವುದು ಒಂದು ಬೃಹತ್ ಉದ್ಯಮ. ಕೋಟಿ ಕೋಟಿ ರೂಪಾಯಿಯ ವ್ಯವಹಾರ. ಎಲ್ಲ ಪಕ್ಷಗಳ ರಾಜಕಾರಣಿಗಳೂ ಅದರಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಇದ್ದೇ ಇರುತ್ತಾರೆ.
ಆದರೆ ಕೋಟಿ ಕೋಟಿ ರೂ. ಲಾಭ ಮಾಡುವ ಕೋಚಿಂಗ್ ಸೆಂಟರ್‌ಗಳಿಗೆ ನಿಯಮ ಪಾಲನೆಯ ಪರಿವೆಯೇ ಇರುವುದಿಲ್ಲ. ಸರಕಾರ ಕೂಡ ಅವರಲ್ಲಿ ಈ ಬಗ್ಗೆ ಕೇಳುವುದಿಲ್ಲ. ಪಕ್ಷ ಭೇದವಿಲ್ಲದೆ ಎಲ್ಲ ಸರಕಾರಗಳೂ ಇಂತಹ ಕೋಚಿಂಗ್ ಸೆಂಟರ್‌ಗಳಿಗೆ ಕಡಿವಾಣ ಹಾಕುವುದಿಲ್ಲ.
‘‘ಬಿಜೆಪಿ ಕೋಚಿಂಗ್ ಕಂಪೆನಿಗಳಿಂದ ಇಲೆಕ್ಟೊರಲ್ ಬಾಂಡ್ ರೂಪದಲ್ಲಿ ದೇಣಿಗೆ ಪಡೆದಿದೆ’’ ಎಂದು ಮೊನ್ನೆ ಸಂಸದ ಜಾನ್ ಬ್ರಿಟ್ಟಾಸ್ ಆರೋಪಿಸಿದ್ದಾರೆ.
ಬಹುತೇಕ ಕಟ್ಟಡಗಳು ಸುರಕ್ಷತೆಯ ಯಾವ ನಿಯಮವನ್ನೂ ಪಾಲನೆ ಮಾಡದೆ ಇರುವುದರ ಬಗ್ಗೆ ವರದಿಗಳು ಹೇಳುತ್ತವೆ.
ಕೇಂದ್ರ ಸರಕಾರವಂತೂ ಭವಿಷ್ಯತ್ ಕಾಲದ ಮಾತಾಡುತ್ತ ವರ್ತಮಾನವನ್ನೇ ಮರೆತಿದೆ.
ಆದರೆ ವರ್ತಮಾನದ ಬಗ್ಗೆಯೂ ಅದು ಮಾತಾಡಬೇಕಿದೆ ಮತ್ತು ಯೋಚಿಸಬೇಕಿದೆ.