ಕರ್ನಾಟಕದ ಹೆಸರಲ್ಲಿ ದಕ್ಕಿರುವ ಸಚಿವ ಸ್ಥಾನಗಳಿಂದ ಯಾರಿಗೆ ಸಮಾಧಾನ? ಯಾರಿಗೆ ಅಸಮಾಧಾನ?
ಇಲ್ಲಿ ಗಮನಿಸಬೇಕಾದ ಸಂಗತಿ, ಎಲ್ಲ ಐದೂ ಸಚಿವ ಸ್ಥಾನಗಳು ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪಾಲಾಗಿವೆ ಎಂಬುದು. ಕ್ಯಾಬಿನೆಟ್ ಮಂತ್ರಿ ಸ್ಥಾನ ಪಡೆದಿರುವವರಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಪ್ರಹ್ಲಾದ್ ಜೋಶಿ ಬ್ರಾಹ್ಮಣರಾದರೆ, ಕುಮಾರಸ್ವಾಮಿ ಒಕ್ಕಲಿಗ ಸಮುದಾಯದವರು. ಹಾಗೆಯೇ ರಾಜ್ಯ ಸಚಿವರುಗಳಾಗಿರುವವರಲ್ಲಿ ಶೋಭಾ ಒಕ್ಕಲಿಗ ಸಮುದಾಯದವರಾದರೆ, ಸೋಮಣ್ಣ ಲಿಂಗಾಯತ ಸಮುದಾಯದವರು. ಆದರೆ ಬಿಜೆಪಿಗೆ ಬೆಂಬಲವಾಗಿ ದೊಡ್ಡ ಮಟ್ಟದಲ್ಲಿ ನಿಂತಿದ್ದ ಹಿಂದುಳಿದ ಸಮುದಾಯದವರಿಗೆ ಮತ್ತು ದಲಿತರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೇರಿದ್ದಾಗಿದೆ.
ಈ ಸಲ ನಿಜವಾಗಿಯೂ ಮೈತ್ರಿ ಸರಕಾರವಾಗಿರುವುದರಿಂದ ಮೋದಿ ಆಟಕ್ಕಿಂತಲೂ ಬೇರೆಯವರ ಆಟ ಜೋರಿರುವ ಸಾಧ್ಯತೆಯೇ ಹೆಚ್ಚು.
ಆಂಧ್ರ, ಬಿಹಾರದಂತಹ ರಾಜ್ಯಗಳನ್ನು ನೋಡಿಕೊಂಡರೆ, ಮೋದಿ ಸಂಪುಟದಲ್ಲಿನ ಪ್ರಾತಿನಿಧ್ಯ ಕರ್ನಾಟಕಕ್ಕೆ ಕೊಡಬಹುದಾದದ್ದು ಹೆಚ್ಚೇನೂ ಇರಲಿಕ್ಕಿಲ್ಲ ಎಂದೇ ಅನ್ನಿಸುತ್ತದೆ.
ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದ ಮೇಲಿನ ಮೋದಿ ದ್ವೇಷಕ್ಕೆ ಈಗ ಇನ್ನೂ ಬಲ ಬರಬಹುದೆಂಬ ಅನುಮಾನ ಮೂಡುವುದಕ್ಕೂ ಅವಕಾಶವಾಗಿದೆ.
ರಾಜ್ಯದ ನಾಲ್ವರು ಸಂಸದರು ಹಾಗೂ ಓರ್ವ ರಾಜ್ಯಸಭಾ ಸದಸ್ಯರು ಸೇರಿ ಐವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಹಿಂದಿನ ಸರಕಾರದಲ್ಲಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಸಂಪುಟ ಸೇರಿ ಮತ್ತೆ ಹಣಕಾಸು ಸಚಿವೆಯಾಗಿದ್ದಾರೆ. ಹಾಗೆಯೇ ಪ್ರಹ್ಲಾದ್ ಜೋಶಿ ಕೂಡ ಮತ್ತೊಮ್ಮೆ ಕೇಂದ್ರ ಸಚಿವರಾಗಿದ್ದಾರೆ. ರಾಜ್ಯ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಕೂಡ ಮತ್ತೊಂದು ಅವಕಾಶ ಪಡೆದಿದ್ದಾರೆ.
ಇವರೊಂದಿಗೆ ಕ್ಯಾಬಿನೆಟ್ ಮಂತ್ರಿಯಾಗಿ ಮಾಜಿ ಸಿಎಂ, ಜೆಡಿಎಸ್ ನಾಯಕ, ಮಂಡ್ಯ ಸಂಸದ ಕುಮಾರಸ್ವಾಮಿ ಅವರು ಮೋದಿ ಸಂಪುಟ ಸೇರಿದ್ದಾರೆ.
ಇನ್ನು ರಾಜ್ಯ ಸಚಿವರಾಗಿ ತುಮಕೂರು ಸಂಸದ ವಿ. ಸೋಮಣ್ಣ ಅವಕಾಶ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಕುಮಾರಸ್ವಾಮಿಯವರು ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಮಾಜಿ ಸಿಎಂಗಳ ಸಾಲಿನಲ್ಲಿದ್ದಾರೆ.
ಕರ್ನಾಟಕದ ಮತ್ತಿಬ್ಬರು ಮಾಜಿ ಸಿಎಂಗಳು ಸಂಸದರಾಗಿ ಆಯ್ಕೆಯಾಗಿದ್ದರಾದರೂ, ಮೋದಿ ಸಂಪುಟ ಸೇರುವ ಅವಕಾಶ ಅವರಲ್ಲಿ ಯಾರೊಬ್ಬರಿಗೂ ಸಿಗದೇ ಹೋಯಿತು.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ಭಾರೀ ಲಾಭವನ್ನೇ ತಂದುಕೊಟ್ಟಿದೆ. ಮೈತ್ರಿ ಇಲ್ಲದೇ ಇದ್ದಿದ್ದರೆ ಮೈಸೂರು, ತುಮಕೂರು, ಕೋಲಾರ ಮತ್ತು ಬೆ.ಗ್ರಾಮಾಂತರ ಬಿಜೆಪಿ ಗೆಲ್ಲಲು ಸಾಧ್ಯವೇ ಇರಲಿಲ್ಲ.
ಹೀಗಾಗಿ ಕುಮಾರಸ್ವಾಮಿಯವರಿಗೆ ಸಚಿವ ಸ್ಥಾನ ಕೊಡಲೇಬೇಕಾಗಿದ್ದ ಅನಿವಾರ್ಯತೆಯೂ ಇದಕ್ಕೆ ಕಾರಣವಾಗಿರಬಹುದು. ಅಲ್ಲದೆ ಮತ್ತಿಬ್ಬರು ಮಾಜಿ ಸಿಎಂಗಳಲ್ಲಿ ಯಾರಿಗೆ ಕೊಟ್ಟರೂ ಪ್ರಶ್ನೆಗಳು ಏಳುತ್ತವೆಂಬುದೂ ಕಾರಣವಾಗಿರಬಹುದು.
ಕರ್ನಾಟಕದಲ್ಲಿ ಚುನಾವಣೆ ಹೊತ್ತಿನ ಸನ್ನಿವೇಶವನ್ನು ಸ್ವಲ್ಪ ನೆನಪು ಮಾಡಿಕೊಂಡರೆ, ಕಾಂಗ್ರೆಸ್ ವಿರುದ್ಧ ನಿಲ್ಲಬೇಕೆಂದೇ ಬಿಜೆಪಿ ಮತ್ತು ಜೆಡಿಎಸ್ ಎರಡೂ ಮೈತ್ರಿ ಮಾಡಿಕೊಂಡವು ಮತ್ತು ಕಾಂಗ್ರೆಸ್ ಆನ್ನು ಹೇಗಾದರೂ ಹಣಿಯಬೇಕೆಂಬುದರಲ್ಲಿ ಬಿಜೆಪಿಗಿಂತಲೂ ಹೆಚ್ಚು ಮುಂದಿದ್ದವರು ಕುಮಾರಸ್ವಾಮಿ. ಮಂಡ್ಯದಲ್ಲಿ ಗೆದ್ದ ನಂತರವೂ ಅವರು ಮತ್ತೆ ಕಾಂಗ್ರೆಸ್ ವಿರುದ್ಧ ಹರಿಹಾಯುವುದನ್ನು ಮುಂದುವರಿಸಿದ್ದಾರೆ. ಈಗ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ ಮತ್ತು ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಿಕ್ಕಿದೆ. ಆ ಮೂಲಕ ಅವರು ಕರ್ನಾಟಕದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವುದಕ್ಕೂ ಒಂದು ಹಾದಿ ನಿರ್ಮಾಣವಾಗಬಹುದು.
ಈಗ ಕುಮಾರಸ್ವಾಮಿ ತಮಗೆ ಸಿಗಲಿರುವ ಅಧಿಕಾರದ ಅವಕಾಶವನ್ನು ಜನರ ಮೇಲೆ ತಮ್ಮ ಪ್ರಭಾವ ಉಳಿಸಿಕೊಳ್ಳಲು ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ನಿಲ್ಲಲು ಬಳಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಬರ ಪರಿಹಾರ ಮತ್ತಿತರ ಎಲ್ಲ ವಿಚಾರಗಳಲ್ಲಿಯೂ ಅವರು ಈವರೆಗೆ ಬಿಜೆಪಿಯವರಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದಾರೆ ಮತ್ತು ಹರಿಹಾಯುತ್ತಲೇ ಬಂದಿದ್ದಾರೆ. ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿ ಜೆಡಿಎಸ್ ಮೈತ್ರಿಯನ್ನು ಬಯಸಿದವರು. ಈಗ ಅವರು ಆ ಲೆಕ್ಕದಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದಾರಾದರೂ, ಅದರಿಂದ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ರಾಜ್ಯಕ್ಕಾಗಿ ಏನನ್ನಾದರೂ ಮಾಡೀತೆ ಎಂದು ನಿರೀಕ್ಷಿಸಲಾಗದು.
ಯಾಕೆಂದರೆ ಅವರ ಉದ್ದೇಶ ನೇರವಾಗಿ ಕಾಂಗ್ರೆಸನ್ನು ಹಣಿಯುವುದು, ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳುವುದೇ ಆಗಿರುವುದರಿಂದ, ಮೋದಿ ನೆರವನ್ನು ಅವರು ಇದಕ್ಕಾಗಿ ಬಳಸಿಕೊಳ್ಳಲು ನೋಡಬಹುದು. ಮೋದಿಗೂ ಕರ್ನಾಟಕ ಕಾಂಗ್ರೆಸ್ ಮೇಲೆ ಅಗಾಧ ಸಿಟ್ಟಿದೆ.
ಮೈತ್ರಿ ಪಕ್ಷವಾಗಿ ಜೆಡಿಎಸ್ ಎರಡು ಸ್ಥಾನ ಗೆದ್ದಿದ್ದು ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ ೧೭ ಸ್ಥಾನ ಗೆದ್ದಿರುವ ಬಿಜೆಪಿಯೊಳಗೆ ಅಸಮಾಧಾನ ತಣ್ಣಗೆ ಹೊಗೆಯಾಡದೇ ಇರಲು ಸಾಧ್ಯವಿಲ್ಲ. ಇದಕ್ಕೆ ಕಾರಣ,
ಮೈತ್ರಿಯಿಂದ ಚುನಾವಣೆಯಲ್ಲಿ ಏನು ಲಾಭವಾಯಿತು ಎಂಬುದಕ್ಕಿಂತಲೂ ಹೊಸದಾಗಿ ಸಚಿವ ಸ್ಥಾನ ಸಿಕ್ಕಿರುವುದು ಬಿಜೆಪಿಯಲ್ಲಿ ಒಬ್ಬ ಸಂಸದರಿಗೆ ಮಾತ್ರ ಎಂಬ ವಿಚಾರ ಬೇಗುದಿಗೆ ಕಾರಣವಾಗದೆ ಇರಲಾರದು.
ಜೋಶಿ ಮತ್ತು ಶೋಭಾ ಈಗಾಗಲೇ ಸಂಪುಟದಲ್ಲಿದ್ದವರು. ಮತ್ತೊಮ್ಮೆ ಅವರಿಗೇ ಅವಕಾಶವಾಗಿರುವುದಕ್ಕೆ ಒಂದೆಡೆ ಜಗದೀಶ್ ಶೆಟ್ಟರ್ ಥರದವರು ಇನ್ನೊಂದೆಡೆ ಯಡಿಯೂರಪ್ಪ ವಿರೋಧಿಗಳು ಸಮಾಧಾನದಿಂದಿರಲಾರರು.
ತಕ್ಷಣಕ್ಕೆ ಮತ್ತು ನೇರವಾಗಿ ಅವರು ಈಗ ತಮ್ಮ ವಿರೋಧವನ್ನು ತೋರಿಸಿಕೊಳ್ಳಲಾರರಾದರೂ, ಇದು ನಿಧಾನವಾಗಿಯಾದರೂ ಬಿಜೆಪಿಯ ಒಳಗೆ ಒಂದು ಬಗೆಯ ನಿರಾಸಕ್ತಿಯನ್ನು ಮೂಡಿಸುವ ಹಾಗೆ ಕಾಣಿಸುತ್ತದೆ.
ಪಕ್ಷದ ದಿಲ್ಲಿ ವರಿಷ್ಠರು ಕಳೆದ ಬಾರಿ ಸೋಮಣ್ಣ ವಿಚಾರದಲ್ಲಿ ಮಾಡಿಕೊಂಡ ಪ್ರಮಾದಕ್ಕೆ ಪ್ರಾಯಶ್ಚಿತವಾಗಿ ಅವರನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ.
ಮೇಲ್ನೋಟಕ್ಕೆ ಇದು ಲಿಂಗಾಯತ ಸಮುದಾಯದವರ ಪ್ರತಿನಿಧಿಯನ್ನಾಗಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ ಎಂಬಂತೆ ಕಂಡರೂ, ವಾಸ್ತವದಲ್ಲಿ ಅದು ಆ ಸಮುದಾಯವನ್ನು ಸಂಪ್ರೀತಗೊಳಿಸಲಾರದು.
ಮೂವರು ಸಚಿವರು ಮಂಡ್ಯ, ತುಮಕೂರು ಮತ್ತು ಬೆಂಗಳೂರನ್ನು ಪ್ರತಿನಿಧಿಸುತ್ತಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಒಬ್ಬರೇ ಸಚಿವರಾಗಿದ್ದಾರೆ ಎಂಬುದು ಕೂಡ ಮತ್ತೊಂದು ಪ್ರಶ್ನೆಯಾಗುತ್ತದೆ.
ಒಂದೆಡೆ ಇದು ಬಿಜೆಪಿಯನ್ನು ಕಾಡುತ್ತಿರುವಾಗಲೇ, ರಾಜ್ಯದ ದೃಷ್ಟಿಯಿಂದಲೂ ಹೇಳಿಕೊಳ್ಳುವಂಥ ಉಪಕಾರವೇನೂ ಆಗಲಾರದು ಎಂದೇ ತೋರುತ್ತದೆ.
ಈಗಾಗಲೇ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ರಾಜ್ಯದ ಪರವಾಗಿ ಯಾವ ನಿಲುವನ್ನೂ ತಳೆದವರಾಗಿರಲಿಲ್ಲ. ಬದಲಾಗಿ ಸುಳ್ಳುಗಳನ್ನೇ ಹೇಳುತ್ತ ರಾಜ್ಯಕ್ಕೆ ಅನ್ಯಾಯವನ್ನೇ ಎಸಗಿದರೆಂಬ ಆಕ್ರೋಶ ವ್ಯಕ್ತವಾಗಿತ್ತು.
ಜೋಶಿ ಮತ್ತು ಶೋಭಾ ಹೆಸರಲ್ಲಿಯೂ ಹೇಳಿಕೊಳ್ಳುವಂಥ ಸಂಗತಿಗಳೇನಿಲ್ಲ.
ಈಗ ಮೈತ್ರಿ ಪಕ್ಷ ಜೆಡಿಎಸ್‌ನ ನಾಯಕ ಕುಮಾರಸ್ವಾಮಿ ಸಚಿವರಾಗಿದ್ದು, ಅವರ ಶಕ್ತಿ ಬಿಜೆಪಿಗಿಂತಲೂ ತೀವ್ರವಾಗಿ ಕಾಂಗ್ರೆಸ್ ಅನ್ನು ವಿರೋಧಿಸುವುದರಲ್ಲಿ ಮತ್ತು ಬೈಯುವುದರಲ್ಲಿ ಕಳೆದುಹೋಗಲಿದೆ.
ಸೋಮಣ್ಣ ದಿಲ್ಲಿ ವರಿಷ್ಠರಿಗೆ ಆಗಲೇ ಪೂರ್ತಿಯಾಗಿ ಮಣಿದಿರುವ ನಾಯಕ. ಅವರಿಗೆ ತಮಗೆ ಹುದ್ದೆ ಕೊಟ್ಟಿದ್ದಾರೆ ಎಂಬುದಷ್ಟೇ ಮುಖ್ಯವಾಗಲಿದೆ ಮತ್ತವರು ಆ ಋಣದ ಭಾರ ಹೊರುತ್ತ ಕುಗ್ಗಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ, ಎಲ್ಲ ಐದೂ ಸಚಿವ ಸ್ಥಾನಗಳು ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪಾಲಾಗಿವೆ ಎಂಬುದು.
ಕ್ಯಾಬಿನೆಟ್ ಮಂತ್ರಿ ಸ್ಥಾನ ಪಡೆದಿರುವವರಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಪ್ರಹ್ಲಾದ್ ಜೋಶಿ ಬ್ರಾಹ್ಮಣರಾದರೆ, ಕುಮಾರಸ್ವಾಮಿ ಒಕ್ಕಲಿಗ ಸಮುದಾಯದವರು. ಹಾಗೆಯೇ ರಾಜ್ಯ ಸಚಿವರುಗಳಾಗಿರುವವರಲ್ಲಿ ಶೋಭಾ ಒಕ್ಕಲಿಗ ಸಮುದಾಯದವರಾದರೆ, ಸೋಮಣ್ಣ ಲಿಂಗಾಯತ ಸಮುದಾಯದವರು.
ಆದರೆ ಬಿಜೆಪಿಗೆ ಬೆಂಬಲವಾಗಿ ದೊಡ್ಡ ಮಟ್ಟದಲ್ಲಿ ನಿಂತಿದ್ದ ಹಿಂದುಳಿದ ಸಮುದಾಯದವರಿಗೆ ಮತ್ತು ದಲಿತರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
ಲಿಂಗಾಯತ ಸಮುದಾಯದ ಎದ್ದು ಕಾಣುವ ನಾಯಕರುಗಳಾದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಶೆಟ್ಟರ್ ಮತ್ತು ಬೊಮ್ಮಾಯಿ ಅವರಿಗೆ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಆ ಸಮುದಾಯದವರಿಗೆ ಇತ್ತು. ಪಿ.ಸಿ. ಗದ್ದಿಗೌಡರ್ ಐದನೇ ಬಾರಿ ಸಂಸದರಾದರೂ ಸಿಗದ ಸಚಿವ ಸ್ಥಾನ ಮೊದಲ ಬಾರಿಗೆ ಸಂಸದರಾಗಿರುವ ಸೋಮಣ್ಣ ಅವರಿಗೆ ಒಲಿಯಿತು.
ಹಾಗೆಯೇ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿಯಂತಹ ದಲಿತ ನಾಯಕರ ಪಾಲಿಗೂ ಅವಕಾಶ ಸಿಗಲಿಲ್ಲ.
ಇದರ ಹಿಂದಿನ ಲೆಕ್ಕಾಚಾರಗಳು ಅಥವಾ ಸಮರ್ಥನೆಗಳು ಏನೇ ಇದ್ದರೂ, ದಿಲ್ಲಿ ನಾಯಕರಿಗೆ ಈ ಸಲ ಸಂಪುಟದಲ್ಲಿ ಪಕ್ಷದ ಚೌಕಟ್ಟು ಮೀರದ, ಅದರಲ್ಲೂ ಮೋದಿ, ಶಾ ಅವರ ಆಣತಿಯನ್ನು ಮೀರದ ನಾಯಕರೇ ಬೇಕಿದ್ದರು ಎಂಬುದು ನಿಜ.
ಈ ಬಾರಿ ಮೈತ್ರಿ ಪಕ್ಷಗಳಾಗಿರುವ ಟಿಡಿಪಿ ಮತ್ತು ಜೆಡಿಯು ಮತ್ತಿತರ ಪ್ರಮುಖ ಪಕ್ಷಗಳು ಮೋದಿ ಸರಕಾರದ ಉಳಿವು ಅಳಿವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
ಇಂತಹ ಹೊತ್ತಿನಲ್ಲಿ ಅವರನ್ನು ಸಂಭಾಳಿಸುವುದು ಮೋದಿಗೆ ದೊಡ್ಡ ತಲೆನೋವಾಗಲಿದೆ. ಅದರ ನಡುವೆ ತಮ್ಮದೇ ಪಕ್ಷದೊಳಗೆ ಇನ್ನಾವುದೇ ಅಪಸ್ವರ ಸಂಪುಟದಲ್ಲಿರುವ ತಮ್ಮ ಪಕ್ಷದವರಿಂದ ಬರುವಂತಾಗಬಾರದು ಎಂಬುದು ವರಿಷ್ಠರ ಉದ್ದೇಶವಾಗಿರಬಹುದು.
ಸದ್ಯದ ಮಟ್ಟಿಗೆ ಬಿಜೆಪಿಗೆ ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮೂಲಕ ತನ್ನ ಕಳೆದುಹೋದ ಪ್ರಭಾವವನ್ನು ಮರಳಿ ಪಡೆಯುವ ಉದ್ದೇಶವಂತೂ ಇದೆ.
ಜೆಡಿಎಸ್ ಜೊತೆ ಹೋಗಿರುವುದು ರಾಜ್ಯ ಬಿಜೆಪಿ ನಾಯಕರಿಗೆ ಈಗಲೂ ಇಷ್ಟವಿಲ್ಲದೆ ಇದ್ದರೂ, ದಿಲ್ಲಿ ನಾಯಕರಿಗೆ ಅದು ಅನಿವಾರ್ಯವೆನ್ನಿಸಿರಲೂ ಬಹುದು. ಹಾಗಾಗಿಯೇ, ಕಾಲುಗುರಿಗೂ ಸಮವಲ್ಲ ಎಂದು ಮಾತಾಡಿದವರನ್ನು ಪಕ್ಕಕ್ಕೆ ಕೂರಿಸಿಕೊಂಡು, ಎಲ್ಲವನ್ನೂ ಮರೆತವರಂತೆ ತೋರಿಸಿಕೊಳ್ಳುತ್ತಿದ್ದಾರೆ.
ಹಣಿಯುವುದಕ್ಕೆ ಹೊತ್ತು ನೋಡುತ್ತಿರುವವರು ದೊಡ್ಡ ಹೊಣೆಯನ್ನೂ ಹೊರಿಸಿ ನೋಡಲಿದ್ದಾರಾ..?
ಚುನಾವಣೆ ನಂತರದ ಸನ್ನಿವೇಶವನ್ನು ನೋಡಿದರೆ, ಇಡೀ ಚಿತ್ರದಲ್ಲಿ ರಾಜ್ಯ ಬಿಜೆಪಿ ನಾಯಕರು ಅಷ್ಟಾಗಿ ಪ್ರಾಮುಖ್ಯತೆ ಪಡೆದಂತೆ ಕಾಣಿಸುತ್ತಿಲ್ಲ.
ಈ ನಡುವೆ, ಯಡಿಯೂರಪ್ಪನವರಂಥ ನಾಯಕರ ಮೌನ, ಯತ್ನಾಳ್ ಥರದವರ ಮೌನ ಹೀಗೆ ಪಕ್ಷದೊಳಗೆ ಮೌನವೊಂದು ಮಡುಗಟ್ಟಿದ ಹಾಗೆ ಕಾಣಿಸುತ್ತಿದ್ದು, ಅದಕ್ಕೆ ಕೂಡ ಯಾವ ಮಹತ್ವವೂ ಇಲ್ಲದಂತಾಗುವುದೇ ಅಥವಾ ಯಾವುದೋ ಹಂತದಲ್ಲಿ ಯಾವುದೋ ಸ್ವರೂಪದಲ್ಲಿ ಸ್ಫೋಟಗೊಳ್ಳಬಹುದೆ?
ಮೋದಿ ಬಲ ಕುಗ್ಗಿರುವುದು ಮತ್ತವರ ಸರಕಾರ ಮೈತ್ರಿಯ ಪಾಲುದಾರರ ಆಸರೆಯಲ್ಲಿ ನಿಲ್ಲಬೇಕಿರುವುದು ಯಾವುದೇ ಹಂತದಲ್ಲೂ ಅನಿಶ್ಚಿತತೆ ಎರಗಬಹುದೆಂಬ ಆತಂಕವನ್ನು ಮೂಡಿಸಿದೆ.
ಸದ್ಯದ ಈ ಆತಂಕದ ಎದುರಲ್ಲಿ ಇನ್ನಾವುದೇ ಕಾಳಜಿಗಳಿಗೂ ಬಹುಶಃ ಆಸ್ಪದ ಇಲ್ಲವೆಂಬಂತೆ ಕಾಣಿಸುತ್ತದೆ.