ರಾಮ್‌ದೇವ್ ವಂಚನೆಗೆ ಯಾರನ್ನು ಹೊಣೆಯಾಗಿಸಬೇಕು?

Update: 2024-04-04 07:38 GMT

ಮೊನ್ನೆ ಮತ್ತೆ ಸುಪ್ರೀಂ ಕೋರ್ಟ್ ಬಾಬಾ ರಾಮ್‌ದೇವ್‌ಗೆ ಚಾಟಿ ಬೀಸಿದೆ. ಆದರೆ ಅದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರದ ಧೋರಣೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಅದನ್ನೂ ಪ್ರಶ್ನಿಸಿದೆ.

ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನೆದುರು ಹಾಜರಾಗಿದ್ದ ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಇಬ್ಬರಿಗೂ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಜಾಹೀರಾತುಗಳನ್ನು ನಿಲ್ಲಿಸಲು ವಿಫಲವಾಗಿ ಕೇವಲ ನೆಪಮಾತ್ರದ ಕ್ಷಮೆಯಾಚನೆ ಅಫಿಡವಿಟ್ ಸಲ್ಲಿಸಿದ್ದ ಇಬ್ಬರಿಗೂ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯಕ್ಕೆ ನೀಡಿದ ಭರವಸೆ ಉಲ್ಲಂಘಿಸಿ ತಪ್ಪುದಾರಿಗೆಳೆಯುವ ವೈದ್ಯಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಕುರಿತು ಪತಂಜಲಿಯ ಕ್ಷಮೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಜಾಹೀರಾತುಗಳ ಪ್ರಸಾರ ನಿಲ್ಲಿಸುವಂತೆ ಕಂಪೆನಿಗೆ ಕೋರ್ಟ್ ಆದೇಶಿಸಿರುವ ಬಗ್ಗೆ ತನ್ನ ಮಾಧ್ಯಮ ವಿಭಾಗಕ್ಕೆ ತಿಳಿದಿರಲಿಲ್ಲ ಎಂಬ ಹೇಳಿಕೆಯನ್ನು ಪೀಠ ಗಂಭೀರವಾಗಿ ಪರಿಗಣಿಸಿತು.

ಕ್ಷಮೆಯಾಚನಾ ಅಫಿಡವಿಟ್‌ನಲ್ಲಿ ಈ ಹೇಳಿಕೆ ನೀಡಿದ್ದರು.

ಸಮರ್ಥನೀಯವಲ್ಲ ಎಂದ ಮೇಲೆ ನೀವು ಕ್ಷಮೆಯಾಚಿಸಿಯೂ ಪ್ರಯೋಜನವಿಲ್ಲ. ಇದು ಸುಪ್ರೀಂ ಕೋರ್ಟ್‌ಗೆ ನೀಡಿದ ಭರವಸೆಯ ಸಂಪೂರ್ಣ ಉಲ್ಲಂಘನೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

‘‘ಕೋರ್ಟ್ ಆದೇಶದ ಬಗ್ಗೆ ನಿಮ್ಮ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ ಎಂಬುದನ್ನು ಒಪ್ಪಲು ಆಗದು. ಅದು ಕೇವಲ ಬಾಯಿ ಉಪಚಾರದ ಮಾತು. ನೀವು ಗಂಭೀರವಾದ ಮುಚ್ಚಳಿಕೆಯನ್ನು ಎಗ್ಗಿಲ್ಲದೆ ಉಲ್ಲಂಘಿಸಿದ್ದೀರಿ. ಈ ನಡೆ ತೋರಿಕೆಯದ್ದು. ನಿಮ್ಮ ಕ್ಷಮೆಯಾಚನೆಯನ್ನು ನಾವು ಏಕಾದರೂ ಒಪ್ಪಬೇಕು?’’ ಎಂದು ನ್ಯಾ.ಹಿಮಾ ಕೊಹ್ಲಿ ಕೇಳಿದ್ದಾರೆ.

ಕೋರ್ಟ್‌ಗೆ ನೀಡಿರುವ ಭರವಸೆಗೆ ಬದ್ಧರಾಗಿರಬೇಕು. ಆದರೆ ನೀವು ಎಲ್ಲಾ ಎಲ್ಲೆಗಳನ್ನೂ ಮೀರಿದ್ದೀರಿ ಎಂದು ಕೋರ್ಟ್ ಕಿಡಿಕಾರಿದೆ.

ಇದೆಲ್ಲವೂ ಅಸಂಬದ್ಧವಾಗಿದೆ. ಕೆಲವು ಪ್ರಕರಣಗಳಲ್ಲಿ ಕೆಲವು ಸಂದರ್ಭಗಳನ್ನು ಅವುಗಳ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಅಷ್ಟೊಂದು ಉದಾರತೆ ತೋರಿಸಲು ಆಗದು ಎಂದು ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಹೇಳಿದ್ದಾರೆ.

‘‘ದಾಖಲೆಗಳನ್ನು ಲಗತ್ತಿಸಲಾಗಿದೆ ಎಂದು ನೀವು ಹೇಳಿದ್ದೀರಿ, ಆದರೆ ದಾಖಲೆಗಳನ್ನು ನಂತರ ಸೃಷ್ಟಿಸಲಾಗಿದೆ. ಕೆಲವು ತಿರುಚಲಾದ ದಾಖಲೆಗಳೂ ಸೇರಿವೆ. ಇದು ವಚನ ಭ್ರಷ್ಟತೆಯ ಸ್ಪಷ್ಟ ಉದಾಹರಣೆ, ಇದು ಸಂಪೂರ್ಣ ಅವಿಧೇಯತೆ’’ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಹೇಳಿತು.

ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಪತಂಜಲಿಗೆ ಎಚ್ಚರಿಕೆ ನೀಡಿದ ಕೆಲ ದಿನಗಳ ಬಳಿಕ ಬಾಬಾ ರಾಮ್‌ದೇವ್ ಪತ್ರಿಕಾಗೋಷ್ಠಿ ನಡೆಸಿದ ರೀತಿಯನ್ನು ಕೂಡ ಪೀಠ ಟೀಕಿಸಿತು.

ಅವರಿಗೆ ಖುದ್ದು ಹಾಜರಿಯಿಂದ ವಿನಾಯಿತಿ ಇಲ್ಲ. ಮುಂದಿನ ವಿಚಾರಣೆ ವೇಳೆಯೂ ಹಾಜರಿರಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು. ವಿಚಾರಣೆಯನ್ನು ಕೋರ್ಟ್ ಎಪ್ರಿಲ್ 10ಕ್ಕೆ ಮುಂದೂಡಿದೆ.

ಕೇಂದ್ರದ ವಿರುದ್ಧ ಕೂಡ ಕೋರ್ಟ್ ಈ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೋವಿಡ್ ಕಾರಣದಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದ ಹೊತ್ತಿನಲ್ಲಿ ಪತಂಜಲಿಯ ಸುಳ್ಳು ಜಾಹೀರಾತುಗಳ ವಿರುದ್ಧ ಕೇಂದ್ರ ಸರಕಾರ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಆ ಹೊತ್ತಲ್ಲಿ ಸರಕಾರ ಏನು ಮಾಡುತ್ತಿತ್ತು ಎಂದು ನ್ಯಾಯಾಲಯ ಪ್ರಶ್ನಿಸಿತು.

ಪತಂಜಲಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಕೇಂದ್ರ ಸರಕಾರ ಲಸಿಕೆ ಜೊತೆ ಈ ಕಂಪೆನಿಯ ಔಷಧಗಳನ್ನು ಪೂರಕವಾಗಿ ತೆಗೆದುಕೊಳ್ಳಬಹುದು ಎಂದು ಅನುಮೋದನೆ ನೀಡಿದ್ದರ ಬಗ್ಗೆಯೂ ಕೋರ್ಟ್ ಆಕ್ಷೇಪಿಸಿತು.

ರಾಮ್ ದೇವ್ ಈ ದೇಶಕ್ಕೆ ಕೊರೋನದ ಔಷಧಿ ತಂದಿದ್ದೇನೆ ಎಂದು ಮಂಕುಬೂದಿ ಎರಚುತ್ತಿದ್ದಾಗ ಮೋದಿ ಸರಕಾರ ಏನು ಮಾಡುತ್ತಿತ್ತು? ಅದನ್ನು ಈಗ ನೆನಪಿಸಿಕೊಳ್ಳಬೇಕಾದ್ದು ಅತ್ಯಂತ ಅಗತ್ಯವಾಗಿದೆ.

ಆಗ ಮೋದಿ ಸರಕಾರ ಪತಂಜಲಿಗೆ ಲಾಭ ಮಾಡಿಕೊಡಲು ತನ್ನದೇ ಅವೈಜ್ಞಾನಿಕ ಪ್ರತಿಪಾದನೆಗಳಲ್ಲಿ ತೊಡಗಿತ್ತು.

ದೇಶದಲ್ಲಿ ಜನ ಕನಿಷ್ಠ ಆಕ್ಸಿಜನ್ ಸಿಗದೆ ಸಾಯುತ್ತಿರುವಾಗ ಪತಂಜಲಿಯ ವಿವಾದಿತ ಕೊರೊನಿಲ್ ಔಷಧೀಯ ಪ್ರಮೋಷನ್‌ನಲ್ಲಿ ಸ್ವತಃ ಮೋದಿ ಸಂಪುಟದ ಆರೋಗ್ಯ ಮಂತ್ರಿಯೇ ನಿರತವಾಗಿಬಿಟ್ಟಿದ್ದರು. ಈ ಧಾವಂತದಲ್ಲಿ ಅದು ಕೋರ್ಟ್ ನಿರೀಕ್ಷಿಸಿದ್ದ ಕ್ರಮಗಳನ್ನು ತೆಗೆದುಕೊಳ್ಳುವುದನ್ನೇ ಮರೆತ ಹಾಗಿತ್ತು.

ಅತ್ಯಂತ ಅಗತ್ಯವಾಗಿದ್ದ ಆ ಸಂದರ್ಭದಲ್ಲೂ ಮೋದಿ ಸರಕಾರ ಒಂದಿಷ್ಟೂ ವೈಜ್ಞಾನಿಕ ಮನೋಭಾವವನ್ನು ತೋರಲೇ ಇಲ್ಲ. ಅದರ ಪ್ರತೀ ನಡೆಗಳಲ್ಲಿಯೂ ಅದು ಸ್ಪಷ್ಟ. ಕೋವಿಡ್ ಸಾಂಕ್ರಾಮಿಕದ ಸಂದರ್ಭ ಜನರಿಗೆ ಕನಿಷ್ಠ ಚಿಕಿತ್ಸಾ ಸೌಲಭ್ಯ ಒದಗಿಸಲು ಆಗದ ಮೋದಿ ಸರಕಾರ ಇಂಥದೇ ಹಲವು ಬಾಲಿಶ ಹಾಗೂ ಅವೈಜ್ಞಾನಿಕ, ಜನವಿರೋಧಿ ನಡವಳಿಕೆಗಳನ್ನು ತೋರಿತು.

ರಾಮ್‌ದೇವ್ ಔಷಧದ ಬಗ್ಗೆ ಪ್ರಮೋಷನ್‌ನಲ್ಲಿ ತೊಡಗಿದ್ದು ಕೂಡ ಅಂಥದೇ ಹಾಸ್ಯಾಸ್ಪದ ನಡವಳಿಕೆಯಾಗಿತ್ತು. ಕೊರೊನಿಲ್ ಪ್ರಚಾರದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ನಿತಿನ್ ಗಡ್ಕರಿ ಹಾಜರಿದ್ದರು. ವೈದ್ಯರು ಯಾವುದೇ ರೀತಿಯಲ್ಲಿ ಔಷಧಗಳ ಪ್ರಚಾರದಲ್ಲಿ ತೊಡಗಬಾರದೆಂಬ ನಿಯಮವಿದ್ದರೂ ಸ್ವತಃ ವೈದ್ಯರಾಗಿದ್ದ ಸಚಿವ ಹರ್ಷವರ್ಧನ್ ಪತಂಜಲಿಯ ಕೊರೊನಿಲ್ ಅನ್ನು ಪ್ರಚಾರ ಮಾಡಲು ನಿಂತರು.

ಕೊರೊನಿಲ್ ಮಾತ್ರೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಅನುಮತಿ ಸಿಕ್ಕಿದೆ ಎಂದೂ ರಾಮ್‌ದೇವ್ ಸುಳ್ಳೇ ಗುಲ್ಲು ಹಬ್ಬಿಸಿಬಿಟ್ಟಿ ದ್ದರು. ಸರಕಾರ ಅದಕ್ಕೂ ಸುಮ್ಮನೇ ಇತ್ತು. ಕಡೆಗೆ ವಿಶ್ವ ಆರೋಗ್ಯ ಸಂಸ್ಥೆಯೇ ತಪರಾಕಿ ಕೊಟ್ಟ ಮೇಲೆ ಬೇರೆ ಕಥೆ ಹೇಳಲು ಶುರು ಮಾಡಿದ್ದರು.

ಹೀಗೆ ಮೋದಿ ಬೆಂಬಲಿತ ಪತಂಜಲಿಯ ನಕಲಿ ಔಷಧಿ ಪ್ರಮೋಷನ್‌ಗೆ ನಿಂತಿತ್ತು ಕೇಂದ್ರ ಸರಕಾರ.

ಈಗ ರಾಮ್‌ದೇವ್ ಕೋರ್ಟ್ ಕಟಕಟೆಯಲ್ಲಿದ್ದಾರೆ. ಮೋದಿ ಸರಕಾರ ಕೂಡ ಕೋರ್ಟ್ ಕಟಕಟೆಯಲ್ಲಿದೆ. ಜೊತೆಗೆ ಈ ಸರಕಾರ ಜನತಾ ನ್ಯಾಯಾಲಯದಲ್ಲೂ ಇದೆ. ತನಗೆ ಇನ್ನೊಂದು ಅವಧಿ ಅಧಿಕಾರ ಕೊಡಿ ಎನ್ನುತ್ತಿದೆ. ಯಾವುದಕ್ಕಾಗಿ ನಿಮಗೆ ಇನ್ನೊಂದು ಅವಧಿಯ ಅಧಿಕಾರ ಕೊಡಬೇಕು ಎಂದು ಈಗ ಜನ ಕೇಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News