ಬಳ್ಳಾರಿಯ ಕದನ ಕಣದಲ್ಲಿ ಗೆಲುವಿನ ಸಿಹಿ ಯಾರಿಗೆ ದೊರಕಲಿದೆ?
ಬಳ್ಳಾರಿಯಲ್ಲಿ ಬಿಸಿಲಿನ ಝಳ ಹೆಚ್ಚಿದಂತೇ ಚುನಾವಣೆಯ ಕಾವೂ ಏರುತ್ತಾ ಇದೆ. ಬಳ್ಳಾರಿ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕಣವೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿಯಂತೂ ಕ್ಷೇತ್ರವನ್ನು ಮತ್ತೆ ತನ್ನ ವಶ ಮಾಡಿಕೊಳ್ಳುವ ಹಠದಲ್ಲಿ ಕಾಂಗ್ರೆಸ್ ಇದೆ. ಬಿಜೆಪಿ ಕೂಡ ತನ್ನಲ್ಲಿಯೇ ಕ್ಷೇತ್ರವನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನವನ್ನೂ ಮಾಡುತ್ತಿದೆ. ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾದರೆ, ಕಾಂಗ್ರೆಸ್ ತುಕಾರಾಮ್ ಅವರನ್ನು ಕಣಕ್ಕಿಳಿಸಿದೆ. ಹೋರಾಟ ಕುತೂಹಲಕಾರಿಯಾಗಿರಲಿದೆ.
ಸರಣಿ- 35
ಬಳ್ಳಾರಿ ಲೋಕಸಭಾ ಕ್ಷೇತ್ರ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಕ್ಷೇತ್ರ ಮರುವಿಂಗಡಣೆಗೂ ಮೊದಲು 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ ಬಳಿಕ ಈ ಕ್ಷೇತ್ರ ರಾಜ್ಯದ, ದೇಶದ ಗಮನ ಸೆಳೆದ ಕ್ಷೇತ್ರವಾಗಿದೆ. ದೇಶದ ಗಮನ ಸೆಳೆದಿದ್ದ ಆ ಚುನಾವಣೆಯಲ್ಲಿ ಸುಷ್ಮಾ ಅವರನ್ನು ಸೋನಿಯಾ ಗಾಂಧಿ ಸೋಲಿಸಿದ್ದರು.
ಆಮೇಲೆ ಗಣಿಧಣಿಗಳ ಕಾರುಬಾರು, ಅವರು ರಾಜ್ಯ ರಾಜಕೀಯದಲ್ಲಿ ಆಡಿದ ಆಟಗಳಿಂದಾಗಿಯೂ ಬಳ್ಳಾರಿ ಚರ್ಚೆಯಲ್ಲಿತ್ತು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಒಟ್ಟು ವಿಧಾನಸಭಾ ಕ್ಷೇತ್ರಗಳು 8. ಅವೆಂದರೆ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ, ಬಳ್ಳಾರಿ ನಗರ, ಸಂಡೂರು ಹಾಗೂ ಕೂಡ್ಲಿಗಿ.
6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಒಂದೊಂದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 18,65,341. ಅವರಲ್ಲಿ ಪುರುಷರು 9,20,022, ಮಹಿಳೆಯರು 9,45,053 ಮತ್ತು ಇತರರು 266.
1952ರಿಂದ ಎರಡು ಉಪಚುನಾವಣೆಗಳೂ ಸೇರಿ 19 ಚುನಾವಣೆಗಳು ನಡೆದಿವೆ. 15 ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. 4 ಬಾರಿ ಬಿಜೆಪಿ ಗೆದ್ದಿದೆ. ಪ್ರಸಕ್ತ ಬಿಜೆಪಿ ವಶದಲ್ಲಿ ಕ್ಷೇತ್ರವಿದೆ.
ಈವರೆಗೆ ಗೆದ್ದವರು ಯಾರು?
1952, 1957, 1962ರಲ್ಲಿ ಟೇಕೂರು ಸುಬ್ರಹ್ಮಣ್ಯಂ (ಕಾಂಗ್ರೆಸ್)
1967, 1971ರಲ್ಲಿ ವಿ.ಕೆ. ಆರ್ವಿ ರಾವ್ (ಕಾಂಗ್ರೆಸ್)
1977 ಕೆ.ಎಸ್. ವೀರಭದ್ರಪ್ಪ (ಕಾಂಗ್ರೆಸ್)
1980 ಆರ್.ವೈ. ಘೋರ್ಪಡೆ (ಕಾಂಗ್ರೆಸ್)
1984, 1989, 1991ರಲ್ಲಿ - ಬಸವರಾಜೇಶ್ವರಿ (ಕಾಂಗ್ರೆಸ್)
1996, 1998ರಲ್ಲಿ ಕೆ.ಸಿ. ಕೊಂಡಯ್ಯ(ಕಾಂಗ್ರೆಸ್)
1999 ಸೋನಿಯಾ ಗಾಂಧಿ(ಕಾಂಗ್ರೆಸ್)
2000 ಕೋಲೂರು ಬಸವನಗೌಡ(ಕಾಂಗ್ರೆಸ್)
2004 ಕರುಣಾಕರ ರೆಡ್ಡಿ(ಬಿಜೆಪಿ)
2009 ಜೆ. ಶಾಂತಾ (ಬಿಜೆಪಿ)
2014 ಬಿ.ಶ್ರೀರಾಮುಲು(ಬಿಜೆಪಿ)
2018 ಉಪಚುನಾವಣೆ ವಿ.ಎಸ್. ಉಗ್ರಪ್ಪ(ಕಾಂಗ್ರೆಸ್)
2019 ವೈ. ದೇವೇಂದ್ರಪ್ಪ(ಬಿಜೆಪಿ)
ಜಾತಿ ಮೀರಿದ ಗೆಲುವುಗಳು
ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರರು ಜಾತಿ ಮತ್ತು ಸಮುದಾಯವನ್ನು ಯಾವತ್ತೂ ಲೆಕ್ಕಕ್ಕೆ ಅಷ್ಟಾಗಿ ತೆಗೆದುಕೊಂಡವರಲ್ಲ ಎಂಬುದು 2004ರವರೆಗಿನ ಚುನಾವಣೆಗಳ ಫಲಿತಾಂಶವನ್ನು ನೋಡಿಕೊಂಡರೇ ಗೊತ್ತಾಗುತ್ತದೆ.
2008ರಲ್ಲಿ ಕ್ಷೇತ್ರ ಮರುವಿಂಗಡಣೆಯ ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಯಿತು. ಅದಕ್ಕೂ ಮೊದಲು 1952ರಿಂದ 2004ರವರೆಗಿನ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆದಿರಲೇ ಇಲ್ಲ. ಆಗ ಮುಖ್ಯವಾದದ್ದು ಪಕ್ಷ. 1999ರವರೆಗೂ ಕಾಂಗ್ರೆಸ್ ಮತ್ತು ಜನತಾ ಪಕ್ಷ /ಜನತಾ ದಳದ ನಡುವೆ ಪೈಪೋಟಿಯಿದ್ದರೆ, 1999ರ ಚುನಾವಣೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕದನಕ್ಕೆ ಬಳ್ಳಾರಿ ಕಣವಾಯಿತು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಜಾತಿ, ಮತ ಎಂದು ನೋಡದೆ ಇಲ್ಲಿನ ಮತದಾರರು ಸತತವಾಗಿ ಗೆಲ್ಲಿಸಿದ್ದರು.
2004 ಮತ್ತು 2009ರಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಜಿ.ಕರುಣಾಕರ್ ರೆಡ್ಡಿ ಒಬಿಸಿ ಆಗಿದ್ದರೆ, ಜೆ.ಶಾಂತಾ ಎಸ್‌ಸಿ ಆಗಿದ್ದರು.
ಬ್ರಾಹ್ಮಣ ಅಭ್ಯರ್ಥಿಗಳು 1952 ಮತ್ತು 1971ರ ನಡುವೆ ಸತತವಾಗಿ ಐದು ಬಾರಿ ಲಿಂಗಾಯತ ಪ್ರಾಬಲ್ಯದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಅವರೆಂದರೆ, ಮೊದಲ ಚುನಾವಣೆಯಿಂದ ಸತತ ಮೂರು ಬಾರಿ ಗೆದ್ದಿದ್ದ ಟೇಕೂರ್ ಸುಬ್ರಹ್ಮಣ್ಯಂ ಮತ್ತು ಅದರ ನಂತರದ ಎರಡು ಚುನಾವಣೆಗಳಲ್ಲಿ ಸತತವಾಗಿ ಗೆದ್ದ ವಿ.ಕೆ.ಆರ್.ವಿ. ರಾವ್. ಇವರಿಬ್ಬರೂ ನಾಲ್ಕು ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಅವರನ್ನು ಸೋಲಿಸಿದ್ದರು.
ಕ್ಷೇತ್ರವನ್ನು ಲಿಂಗಾಯತ ಮುಖಂಡರು ಕಾಂಗ್ರೆಸ್‌ನಿಂದ ಐದು ಬಾರಿ ಪ್ರತಿನಿಧಿಸಿದ್ದಾರೆ. ಅವರೆಂದರೆ, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಎಸ್. ಬಸವರಾಜೇಶ್ವರಿ, ಕೆ.ಎಸ್. ವೀರಭದ್ರಪ್ಪ ಹಾಗೂ ಕೋಳೂರು ಬಸವನಗೌಡ.
ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಒಬಿಸಿ ಅಭ್ಯರ್ಥಿಗಳನ್ನೂ ಮತದಾರರು ಗೆಲ್ಲಿಸಿದ್ದಿದೆ. ಹಾಗೆ ಗೆದ್ದವರು ಕೆ.ಸಿ. ಕೊಂಡಯ್ಯ.
ಇಲ್ಲಿನ ಮತದಾರರು ಸ್ಥಳೀಯರಲ್ಲದವರನ್ನೂ ಭೇದವೆಣಿಸದೆ ಗೆಲ್ಲಿಸಿದ್ದಾರೆ. ರಾವ್, ಬಸವರಾಜೇಶ್ವರಿ (ಇಬ್ಬರೂ ರಾಯಚೂರು ಜಿಲ್ಲೆಯವರಾಗಿದ್ದರು), ಘೋರ್ಪಡೆ, ಸೋನಿಯಾ ಗಾಂಧಿ ಇವರೆಲ್ಲರೂ ಹೊರಗಿನವರೇ ಆಗಿದ್ದರೂ ಬಳ್ಳಾರಿಯಿಂದ ಗೆದ್ದಿದ್ದರು.
ಇಂಥ ತನ್ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ಮೊದಲ ಸೋಲನ್ನು ಕಂಡದ್ದು 2004ರಲ್ಲಿ. ಅಲ್ಲಿಂದ ಸತತ ಮೂರು ಚುನಾವಣೆಗಳಲ್ಲಿ ಬಿಜೆಪಿಯೇ ಗೆದ್ದಿತು. ನಂತರದ ಉಪಚುನಾವಣೆಯಲ್ಲಿ ಕ್ಷೇತ್ರ ಕಾಂಗ್ರೆಸ್ ವಶವಾಯಿತಾದರೂ, 2019ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದಿದೆ.
ಎಸ್‌ಟಿಗಳಿಗೆ ಮೀಸಲಾದ ನಂತರ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಗಳ ಪ್ರಾಬಲ್ಯವೂ ಕೊನೆಗೊಂಡಿದೆ.
ಕಾಂಗ್ರೆಸ್, ಬಿಜೆಪಿ ಸಮಬಲದ ಹೋರಾಟ
ಈ ಬಾರಿ ಬಿಜೆಪಿಯಿಂದ ಶ್ರೀರಾಮುಲು ಕಣದಲ್ಲಿದ್ದಾರೆ. ಕ್ಷೇತ್ರವನ್ನು ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿಯೇ ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ.
ಆದರೆ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ. 2008ರಿಂದಲೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸತತ ಗೆಲ್ಲುತ್ತ ಬಂದಿರುವ, ಒಮ್ಮೆ ಸಚಿವರೂ ಆಗಿದ್ದ ಇ. ತುಕಾರಾಮ್ ಅವರನ್ನು ಕಣಕ್ಕಿಳಿಸಿದೆ.
ಅವರು ತಮ್ಮ ಮಗಳು ಸೌಪರ್ಣಿಕಾ ಅವರಿಗಾಗಿ ಟಿಕೆಟ್ ಕೇಳಿದ್ದರು. ಅದರ ಬಗ್ಗೆ ಕಾಂಗ್ರೆಸ್ ಯೋಚಿಸಿಯೂ ಇತ್ತು. ಆದರೆ ಯಾವಾಗ ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿತೋ ಕಾಂಗ್ರೆಸ್ ಗೇಮ್‌ಪ್ಲ್ಯಾನ್ ಕೂಡ ಬದಲಾಯಿತು. ಅದರಂತೆ, ತುಕಾರಾಮ್ ಅವರನ್ನೇ ಸ್ಪರ್ಧಿಸುವಂತೆ ಮನವೊಲಿಸಿ ಕಣಕ್ಕಿಳಿಸಲಾಗಿದೆ.
ಈಗಾಗಲೇ ತುಕಾರಾಮ್ ಪ್ರಚಾರ ಆರಂಭಿಸಿದ್ದು, ತಮ್ಮ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೆಡ್ಡಿಯವರನ್ನೆಲ್ಲ ಎದುರಿಸಿ ಗೊತ್ತಿರುವ ಅವರು, ಇದೆಲ್ಲ ತಮಗೆ ಹೊಸದಲ್ಲ ಎಂದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಕೂಡ ಚುನಾವಣೆಯಲ್ಲಿ ವರದಾನವಾಗಲಿದೆ ಎಂಬುದು ಅವರ ವಿಶ್ವಾಸ.
ಗೆಲುವಿನ ವಿಶ್ವಾಸ
ಬಳ್ಳಾರಿ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್, ವಿಜಯನಗರ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠ ಕಾಂಗ್ರೆಸ್‌ನದ್ದಾಗಿದೆ. ಹಾಗಾಗಿಯೇ, ವೈಯಕ್ತಿಕ ವರ್ಚಸ್ಸು, ಪಕ್ಷ ಸಂಘಟನೆ, ಪಕ್ಷನಿಷ್ಠೆ ಮುಂತಾದವುಗಳನ್ನು ಪರಿಗಣಿಸಿ ತುಕಾರಾಮ್ ಅವರಿಗೆ ಮಣೆ ಹಾಕಿದೆ.
ವಾಲ್ಮೀಕಿ ನಾಯಕ ಜನಾಂಗ, ಕುರುಬರು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರದಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು ಸಮಸಮವಾಗಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಶ್ರೀರಾಮುಲು ಅವರ ವರ್ಚಸ್ಸು ಬಳ್ಳಾರಿಯಲ್ಲಿ ಮೊದಲಿನ ಹಾಗಿಲ್ಲ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಆದರೆ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಬಂದಿರುವುದು ಆ ಪಕ್ಷದ ಭರವಸೆ ಹೆಚ್ಚಿಸಿದೆ.
ಕದನ ಕಣದಲ್ಲಿ ಗೆಲುವು ಯಾರಿಗೆ ದಕ್ಕಲಿದೆ ಎಂಬುದನ್ನು ಕಾದು ನೋಡಬೇಕಿದೆ.