ವೈದ್ಯರ ಹಿತಾಸಕ್ತಿಯನ್ನು ಕಾಪಾಡುವವರು ಯಾರು?
ಭಾರತೀಯ ವೈದ್ಯಕೀಯ ಸಂಘದಂತಹ ಶ್ರೇಷ್ಠ ವೈದ್ಯಕೀಯ ಸಂಘಟನೆಯನ್ನು ಹುಟ್ಟು ಹಾಕಿದ ಮಹಾತ್ಮ, ಬಂಗಾಳದ ಮುಖ್ಯಮಂತ್ರಿ ಡಾ. ಬಿ.ಸಿ. ರಾಯ್ ಹುಟ್ಟಿದ ನಾಡಲ್ಲಿ ಸ್ನಾತಕೋತ್ತರ ಮಹಿಳಾ ವೈದ್ಯರೊಬ್ಬರನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಮನುಕುಲಕ್ಕೆ ಕಳಂಕವಾಗಿದೆ. ಈ ಘಟನೆಯು ವೈದ್ಯವೃತ್ತಿ ಕ್ಷೇತ್ರದಲ್ಲಿರುವ ಮಹಿಳೆಯರ ಆತಂಕವನ್ನು ಹೆಚ್ಚಿಸಿದೆ.
138 ವರ್ಷಗಳ ಇತಿಹಾಸ ಇರುವ ಕೋಲ್ಕತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸ್ನಾತಕೋತ್ತರ ಮಹಿಳಾ ವೈದ್ಯ ವಿದ್ಯಾರ್ಥಿಯೊಬ್ಬರನ್ನು ಅವರು ಮಲಗಿದ್ದ ಸೆಮಿನಾರ್ ಹಾಲ್‌ನಲ್ಲೇ ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಲೆಮಾಡಲಾಗಿದೆ.
ಕಳೆದ ಗುರುವಾರ ರಾತ್ರಿಪಾಳಿಯ ಡ್ಯೂಟಿಯಲ್ಲಿದ್ದ ಆಕೆ ಇಬ್ಬರು ಸಹ ವೈದ್ಯರ ಜೊತೆ ಊಟ ಮುಗಿಸಿ, ಸೆಮಿನಾರ್ ರೂಮ್‌ನಲ್ಲಿ ಮಲಗಿದ್ದು, ಶುಕ್ರವಾರ ಬೆಳಗ್ಗೆ ಮಿತ್ರರು ನೋಡುವಾಗ ಘೋರ ರೀತಿಯಲ್ಲಿ, ನೋಡಬಾರದ ಸ್ಥಿತಿಯಲ್ಲಿ ಹೆಣವಾಗಿ ಬಿದ್ದಿದ್ದರು.
ಆಕೆಯ ತುಟಿ, ಮೂಗು ಹರಿದು ಬಾಯಿ ಒಡೆದು ರಕ್ತ ಚೆಲ್ಲಿತ್ತು. ಜನನೇಂದ್ರಿಯದಿಂದಲೂ ರಕ್ತ ಒಸರುತ್ತಿತ್ತು. ಕತ್ತಿನ ಮೂಳೆ ಮುರಿದಿತ್ತು. ಕಷ್ಟ ಪಟ್ಟು ಓದಿ, ಸಾವಿನ ಅಂಚಿನಲ್ಲಿ ಇರುವ ರೋಗಿಗಳನ್ನು ಬದುಕಿಸುವ ಕನಸುಕಂಡಿದ್ದ ಮಹಿಳಾ ವೈದ್ಯರೊಬ್ಬರು ತನ್ನ ಮಾನ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಉಸಿರು ಚೆಲ್ಲಿದ ದಾರುಣ ಸತ್ಯಕಥೆ ನಡೆದು ಹೋಗಿದೆ. ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.
ಈ ಅತ್ಯಂತ ಹೇಯ ಕೃತ್ಯದಿಂದಾಗಿ ತಮ್ಮ ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಾದರೂ ಎಂಬಿಬಿಎಸ್ ಮಾಡಬೇಕು, ಸಮಾಜದಲ್ಲಿ ಘನತೆ ಗೌರವದಿಂದ ಬದುಕಬೇಕು ಎನ್ನುವ ಪಾಲಕರಿಗೆ ದಿಕ್ಕುತೋಚದಂತಾಗಿದೆ. ಮೊದಲೇ ವೈದ್ಯರ ಮಕ್ಕಳು ವೈದ್ಯರಾಗಲು ಹಿಂದೇಟು ಹಾಕುತ್ತಿರುವ ಈ ಕಾಲಘಟ್ಟದಲ್ಲಿ ಸರಕಾರ, ಆಸ್ಪತ್ರೆಗಳು, ವೈದ್ಯರು, ಕಾನೂನು ಮಾಡುವವರು, ಪೋಷಕರು, ರೋಗಿಗಳು, ನಾಗರಿಕರು ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.ಇಲ್ಲದಿದ್ದರೆ ವೈದ್ಯಕೀಯ ವೃತ್ತಿ ಯಾರಿಗೂ ಬೇಡದ ವೃತ್ತಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ವಿಷಾದ, ವಿಪರ್ಯಾಸ ಹಾಗೂ ಅಮಾನವೀಯ ವಿಚಾರ ಏನೆಂದರೆ, ಹಗಲು-ರಾತ್ರಿ ಸೇವೆಮಾಡುವ ವೈದ್ಯರಿಗೆ ಒಂದು ಕೊಠಡಿ, ಪುರುಷ-ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಒದಗಿಸಲಾಗದ ನಮ್ಮ ಮೆಡಿಕಲ್ ಕಾಲೇಜುಗಳಿಗೆ, ಸರಕಾರಗಳಿಗೆ, ಜನಪ್ರತಿನಿಧಿಗಳಿಗೆ, ಈ ಬಗ್ಗೆ ಧ್ವನಿ ಎತ್ತದ ವೈದ್ಯಕೀಯ ಸಂಘಟನೆಗಳಿಗೆ ಧಿಕ್ಕಾರವಿರಲಿ.
ಹಾಗೆ ನೋಡಿದರೆ ರಕ್ಷಣೆ ಅನ್ನುವುದು ಎಲ್ಲಿಯೂ ಇಲ್ಲ. ರೈಲು, ಕಾಲೇಜು ಕ್ಯಾಂಪಸ್ (ಹುಬ್ಬಳ್ಳಿ ಘಟನೆ!), ಆಸ್ಪತ್ರೆ, ಕ್ಯಾಬ್, ಎಟಿಎಂಗಳು ಎಲ್ಲವೂ ಅಸುರಕ್ಷಿತವೇ. ಖಾಸಗಿ ಕಾಲೇಜುಗಳೂ ಹೊರತಾಗಿಲ್ಲ. ಡ್ಯೂಟಿ ಡಾಕ್ಟರ್ಸ್ ಅಂದ್ರೆ ಕೂಲಿಯವರ ತರಹ ನೋಡುವ ನಡೆಸಿಕೊಳ್ಳುವ ಮನಃಸ್ಥಿತಿ ಬದಲಾಗಲೇ ಬೇಕಾಗಿದೆ.
ಇಂತಹ ಘಟನೆ ನಡೆದಾಗ ಸಂಬಂಧಪಟ್ಟವರು ಪ್ರತಿಭಟಿಸುತ್ತಾರೆ. ಸ್ವಲ್ಪ ಸಮಯದ ನಂತರ ಮತ್ತೊಂದು ಊರು, ಮತ್ತೊಂದು ವ್ಯವಸ್ಥೆ, ಮತ್ತದೇ ಕಥೆ-ವ್ಯಥೆ!
ಈ ಘಟನೆಗೆ ಪ್ರಥಮವಾಗಿ ಕಾಲೇಜಿನ ಆಡಳಿತ ಮಂಡಳಿ ಜವಾಬ್ದಾರಿಯಾಗುತ್ತಾರೆ. ವೈದ್ಯೆಗೆ ರಾತ್ರಿಯ ಪಾಳಿಯಲ್ಲಿ ಸಂಪೂರ್ಣ ಸುರಕ್ಷತೆ ಒದಗಿಸಿಕೊಡುವುದು ಅತ್ಯಂತ ಸೂಕ್ತ ಹಾಗೂ ಅವಶ್ಯಕತೆ ಕೂಡ. ಪ್ರತಿಯೊಂದು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ರಕ್ಷಣೆ ಸಿಗಬೇಕಾಗಿರುವುದು ಅತ್ಯಗತ್ಯ. ಅಂತಹ ರಕ್ಷಣೆ ಸೌಲಭ್ಯ ಇಲ್ಲದಿದ್ದರೆ ಮೊದಲು ಆಸ್ಪತ್ರೆಯ ಆಡಳಿತ ಮಂಡಳಿಯ ಮೇಲೆ ಕ್ರಮ ಜರುಗಿಸುವುದು ಸೂಕ್ತ.
ಹಾಗೆಯೇ ಪ್ರತಿಯೊಂದು ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಲ್ಲಿನ ಆಡಳಿತ ಮಂಡಳಿ ರಕ್ಷಣೆ ಒದಗಿಸಬೇಕಾದದ್ದು ನ್ಯಾಯ ಸಮ್ಮತ.
ವೈದ್ಯರ ಸವಲತ್ತು, ಅಧಿಕಾರಗಳನ್ನು ನಿರ್ಲಕ್ಷಿಸುವ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳನ್ನು ಇನ್ಸ್‌ಪೆಕ್ಷನ್‌ನಲ್ಲಿ ಫೇಲ್ ಮಾಡಿ, ಬಹಿಷ್ಕಾರ ಹಾಕಬೇಕು. ಎನ್‌ಎಂಸಿಗೆ ರೆಕಮೆಂಡ್ ಮಾಡುವ ಹಂತಕ್ಕೆ ಐಎಂಎ ಬರಬೇಕು. ಅದು ಬಿಟ್ಟು ಸರಕಾರವೇ ಏನಾದರೂ ಮಾಡಲಿ ಎಂದು ಬಿಟ್ಟರೆ ಏನೂ ಆಗದು.
ಸರಕಾರಗಳಿಗೆ ರೋಗಿಗಳ ಹಿತಾಸಕ್ತಿಯೇ ಮುಖ್ಯವಾದರೆ, ನೂರು ವರ್ಷದ ಇತಿಹಾಸ ಇರುವ, ಜಗತ್ತಿನ ಶ್ರೇಷ್ಠ ಸಂಘಟನೆಯಾದ ಐಎಂಎ ವೈದ್ಯರ ಹಿತಾಸಕ್ತಿಯನ್ನು ಕಾಪಾಡಬೇಕಲ್ಲವೇ?
ಇನ್ನಾದರೂ ಸರಕಾರ, ಕಾಲೇಜು, ಎನ್‌ಎಂಸಿ ಎಂದು ಕೂರದೇ ಐಎಂಎ ನೇರವಾಗಿ ಹೋರಾಟಕ್ಕೆ ದುಮುಕಬೇಕಾಗಿದೆ.
ಬರೀ ಸಮ್ಮೇಳನ, ಆಟ-ಕೂಟ-ಊಟ, ಗೋಷ್ಠಿ ಮಾತ್ರ ಅಲ್ಲ, ಅಗತ್ಯಬಿದ್ದರೆ ರಸ್ತೆಗಿಳಿದು ಪ್ರತಿಭಟಿಸಲು ಐಎಂಎ ತುರ್ತಾಗಿ ಕರೆಕೊಟ್ಟು ನಾಯಕತ್ವ ನೀಡಬೇಕಾಗಿದೆ.
ಈ ವಿಷಯದ ಬಗ್ಗೆ ಮಾತ್ರವಲ್ಲ, ಸರಿಯಾದ ಸೌಕರ್ಯಕ್ಕೆ, ಸಮಾನ ವೇತನಕ್ಕೆ, ಕೆಲಸ ಮಾಡುವ ಆಸ್ಪತ್ರೆಗಳಲ್ಲಿ ವೈದ್ಯರ ಕೆಲಸದ ಸಮಯ ಮಿತಿ ಹಾಕಲು, ರಜೆ, ಮುಂತಾದ ಹಲವು ವಿಷಯಗಳಿಗೆ ಧ್ವನಿ ಎತ್ತಬೇಕಿದೆ.
ಮೊನ್ನೆ ಬಂಗಾಳದ ವೈದ್ಯೆ, ನಾಳೆ ನಮ್ಮೂರಿನ, ನಮ್ಮ ಮನೆಯ ವೈದ್ಯರು ಹೀಗೆ ಸತ್ತು ಬೀಳಬಹುದು. ಇದು ಮನೆ ಮನೆಯ ಕಥೆಯಾಗುವ ಮೊದಲು ಎಚ್ಚೆತ್ತು ಕೊಳ್ಳೋಣ. ಸಾವಿನ ಸೂತಕ ಮುಗಿಯಬಹುದು. ಅದು ಸೃಷ್ಟಿಸಿದ ಮಾನಸಿಕ ಗಾಯ, ಭಯ, ಅಭದ್ರತೆಯ ಸೂತಕ ಎಂದೆಂದಿಗೂ ಮಾಸದು.