ಶಾಮನೂರು-ಭೀಮಸಮುದ್ರ ಕುಟುಂಬಗಳ ಸೊಸೆಯಂದಿರ ಜಿದ್ದಾಜಿದ್ದಿಯಲ್ಲಿ ಗೆಲುವು ಯಾರಿಗೆ?

ದಾವಣಗೆರೆ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ 1999ರಿಂದಲೂ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಆದರೆ ಬಿಜೆಪಿಗೆ ಈ ಸಲ ಕಳೆದ ಬಾರಿಯಷ್ಟು ಸುಲಭವಾಗಿ ಜಯ ಸಿಗಲಾರದು ಎನ್ನಲಾಗುತ್ತಿದೆ. ಇದರ ನಡುವೆಯೇ ಅಲ್ಲಿನ ಪ್ರತಿಷ್ಠಿತ ರಾಜಕೀಯ ಕುಟುಂಬಗಳೆರಡರ ಸೊಸೆಯಂದಿರು ಕಣಕ್ಕಿಳಿದಿರುವುದು ವಿಶೇಷ. ಶಾಮನೂರು-ಭೀಮಸಮುದ್ರ ಕುಟುಂಬಗಳ ಸೊಸೆಯಂದಿರ ಜಿದ್ದಾಜಿದ್ದಿ ನಿಜಕ್ಕೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Update: 2024-04-13 08:56 GMT

ಸರಣಿ- 37

ಪ್ರಾಥಮಿಕ ಮಾಹಿತಿ:

ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಾಕ್ಷರತೆ ಪ್ರಮಾಣ ಶೇ.67.26. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳು 8. ಅವೆಂದರೆ, ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ ಹಾಗೂ ಹೊನ್ನಾಳಿ. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಒಂದರಲ್ಲಿ ಮಾತ್ರವೇ ಬಿಜೆಪಿ, ಇನ್ನೊಂದರಲ್ಲಿ ಪಕ್ಷೇತರ ಶಾಸಕರಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 16,79,355. ಅವರಲ್ಲಿ ಪುರುಷರು 8,38,551, ಮಹಿಳೆಯರು 8,40,212, ಇತರರು 138 ಮತ್ತು ಸೇವಾ ಮತದಾರರು 454.

ಹಿಂದಿನ ಎರಡು ಚುನಾವಣೆಗಳ ಫಲಿತಾಂಶ:

2019, 2014 ಎರಡೂ ಚುನಾವಣೆಗಳಲ್ಲಿಯೂ ಬಿಜೆಪಿಯ ಜಿಎಂ ಸಿದ್ಧೇಶ್ವರ ಗೆಲುವು.

ಹಿಂದಿನ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:

2014 ಬಿಜೆಪಿಗೆ ಶೇ.46.54, ಕಾಂಗ್ರೆಸ್‌ಗೆ ಶೇ.44.96

2019 ಬಿಜೆಪಿಗೆ ಶೇ.54.66, ಕಾಂಗ್ರೆಸ್‌ಗೆ ಶೇ.40.46.

ಹಾಲಿ ಬಿಜೆಪಿ ವಶದಲ್ಲಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈವರೆಗೂ ಒಟ್ಟು 13 ಚುನಾವಣೆಗಳು ನಡೆದಿವೆ. ಕಾಂಗ್ರೆಸ್ ಒಟ್ಟು 7 ಚುನಾವಣೆಗಳನ್ನು ಗೆದ್ದಿದ್ದು, ಮೊದಲ 6 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿತ್ತು.

ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ 1984, 1989 ಹಾಗೂ 1991ರಲ್ಲಿ ಸತತ ಮೂರು ಗೆಲುವುಗಳನ್ನು ಕಂಡಿದ್ದರು.

ಉಳಿದಂತೆ, ಕಾಂಗ್ರೆಸ್‌ನಿಂದ ಕೊಂಡಜ್ಜಿ ಬಸಪ್ಪ, ಟಿ.ವಿ.ಚಂದ್ರಶೇಖರಪ್ಪ ಹಾಗೂ ಡಾ.ಶಾಮನೂರು ಶಿವಶಂಕರಪ್ಪ ಒಂದೊಂದು ಅವಧಿಗೆ ಸಂಸದರಾಗಿದ್ದರು.

1996ರಲ್ಲಿ ಬಿಜೆಪಿ ಮೊದಲ ಸಲ ಗೆಲುವು ಕಂಡಿತು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತು. ಆನಂತರ 1999ರಿಂದಲೂ 5 ಚುನಾವಣೆಗಳಲ್ಲಿ ಬಿಜೆಪಿಯೇ ಸತತ ಗೆಲುವು ಸಾಧಿಸಿಕೊಂಡು ಬಂದಿದೆ.

ಬಿಜೆಪಿಯಿಂದ ಎರಡು ಬಾರಿ ಜಿ. ಮಲ್ಲಿಕಾರ್ಜುನಪ್ಪ ಹಾಗೂ ಅವರ ನಿಧನ ನಂತರ ಅವರ ಪುತ್ರ ಜಿ.ಎಂ.ಸಿದ್ಧೇಶ್ವರ ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ.

ಪ್ರಭಾವಿ ಕುಟುಂಬಗಳ

ಸೊಸೆಯಂದಿರ ಜಿದ್ದಾಜಿದ್ದಿ

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮಹಿಳಾ ಅಭ್ಯರ್ಥಿಗೇ ಮಣೆ ಹಾಕಿವೆ.

ಹಾಲಿ ಸಂಸದ ಜಿ.ಎಂ. ಸಿದ್ಧೇಶ್ವರ ಅವರ ಪತ್ನಿ ಗಾಯತ್ರಿ ಸಿದ್ಧೇಶ್ವರ ಬಿಜೆಪಿ ಅಭ್ಯರ್ಥಿಯಾದರೆ, ಕಾಂಗ್ರೆಸ್‌ನಿಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಣಕ್ಕಿಳಿದಿದ್ದಾರೆ.

ಹೀಗಾಗಿ ಕ್ಷೇತ್ರ ಇದೇ ಮೊದಲ ಬಾರಿಗೆ ಮಹಿಳೆಯರ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದೆ. ಸಹಜವಾಗಿಯೇ ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದು ಈಗ ಕಾಂಗ್ರೆಸ್-ಬಿಜೆಪಿ ನಡುವಿನ ಸೆಣಸಾಟ ಎನ್ನುವುದಕ್ಕಿಂತ ಹೆಚ್ಚಾಗಿ ದಾವಣಗೆರೆಯ ಎರಡು ಪ್ರತಿಷ್ಠಿತ ಕುಟುಂಬಗಳ ನಡುವಿನ ರಾಜಕೀಯ ಕದನವಾಗಿ ಮಾರ್ಪಟ್ಟಂತಾಗಿದೆ.

ಈ ಹಿಂದೆಯೂ ಈ ಎರಡು ಕುಟುಂಬಗಳು 6 ಬಾರಿ ಅಖಾಡದಲ್ಲಿ ಎದುರು ಬದುರಾಗಿದ್ದಿದೆ. ಈ ಬಾರಿ ಆ ಕುಟುಂಬಗಳ ಮಹಿಳೆಯರ ನಡುವಿನ ಹೋರಾಟವಾಗಿರುವುದು ಇನ್ನೂ ವಿಶೇಷ.

ಗಾಯತ್ರಿ ಮತ್ತು ಪ್ರಭಾ ಅವರು ತಮ್ಮದೇ ಕುಟುಂಬಗಳ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡವರು.

ಇಬ್ಬರೂ ಈ ಹಿಂದೆ ಮಾವ ಮತ್ತು ಪತಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡವರು. ಈಗ ಇಬ್ಬರೂ ಸ್ವತಃ ಅಖಾಡದಲ್ಲಿ ಎದುರಾಗುತ್ತಿದ್ದಾರೆ.

ಶಾಮನೂರು ಮತ್ತು ಭೀಮಸಮುದ್ರ ಕುಟುಂಬಗಳ ನಡುವಿನ ಈ ಕದನ ತೀವ್ರ ಪೈಪೋಟಿಯನ್ನೇ ನಿರೀಕ್ಷಿಸುವಂತೆ ಮಾಡಿದೆ.

ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ, 2004ರಿಂದ ಸತತವಾಗಿ ನಾಲ್ಕು ಬಾರಿ ಗೆದ್ದಿರುವ ಬಿಜೆಪಿಯ ಜಿ.ಎಂ.ಸಿದ್ಧೇಶ್ವರ್ ಅವರಿಗೆ ಗೆಲುವು ಸುಲಭವಿಲ್ಲ ಎನ್ನಲಾಗಿತ್ತು. ಪಕ್ಷದೊಳಗೂ ಅವರಿಗೆ ಈ ಬಾರಿ ಟಿಕೆಟ್ ನೀಡಲೇಬಾರದು ಎಂಬ ಪ್ರಬಲ ಆಗ್ರಹ ಕೇಳಿ ಬಂದಿತ್ತು. ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರೂ ಬೇರೆ ಅಭ್ಯರ್ಥಿಗಾಗಿ ಪಟ್ಟು ಹಿಡಿದಿದ್ದರು.

ಆದರೆ ಹೈಕಮಾಂಡ್ ಮನ ಒಲಿಸಿದ ಸಿದ್ಧೇಶ್ವರ್, ಪತ್ನಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅದರ ವಿರುದ್ಧವೂ ಜಿಲ್ಲೆಯ ಬಿಜೆಪಿ ಮುಖಂಡರು ತಿರುಗಿ ಬಿದ್ದರೂ ಅವರನ್ನು ಈಗ ಸಮಾಧಾನ ಮಾಡಲಾಗಿದೆ.

ಕಳೆದ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಜೊತೆಗೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಇದು ಬಿಜೆಪಿ ಗೆಲುವಿಗೆ ಅನುಕೂಲಕರವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ 1.60 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿತ್ತು.

ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಜೊತೆಗೆ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಆರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹರಪನಹಳ್ಳಿಯಲ್ಲಿ ಪಕ್ಷೇತರ ಶಾಸಕಿ ಎಂ.ಪಿ.ಲತಾ ಕೂಡ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ.

ಹೀಗಾಗಿ ಈ ಬಾರಿ ಬಿಜೆಪಿ ಗೆಲ್ಲಲು ಹರಸಾಹಸ ಪಡಬೇಕಾಗಿದೆ ಎಂಬುದಂತೂ ನಿಜ.

ಕ್ಷೇತ್ರದಲ್ಲಿನ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆಯೇ ನೇರ ಹಣಾಹಣಿ ನಡೆದಿದೆ.

ಈ ಬಾರಿ ಪ್ರಭಾವಿ ಕುಟುಂಬಗಳ ಸೊಸೆಯಂದಿರು ಕಣಕ್ಕಿಳಿಯುವ ಮೂಲಕ ಎರಡು ಪಕ್ಷಗಳ ನಡುವಿನ ಪೈಪೋಟಿಗೆ ಇನ್ನಷ್ಟು ತೀವ್ರತೆ ಬಂದಂತಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಪಾಳಯದಲ್ಲಿರುವ ಗೊಂದಲ, ಕಾಂಗ್ರೆಸ್ ಶಾಸಕರು ಹೆಚ್ಚಿರುವುದರ ಜೊತೆಗೆ ಗ್ಯಾರಂಟಿಗಳು ಕೈಹಿಡಿಯಲಿವೆ ಎಂಬ ಭರವಸೆಯನ್ನೂ ಕಾಂಗ್ರೆಸ್ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News