ಕಾಯಿಲೆ ಅಂಟಿರುವುದು ಯಾರ ಮನಃಸ್ಥಿತಿಗೆ?

ವಿದೇಶಕ್ಕೆ ಓದಲು ಹೋಗುವುದು ಕಾಯಿಲೆ ಎಂದು ಹೇಳುವ ಧನ್ಕರ್, ಇಲ್ಲಿನ ಯೂನಿವರ್ಸಿಟಿಗಳನ್ನು ರಾಜಕೀಯ ಪ್ರಯೋಗಶಾಲೆಯಾಗಿ ಮಾಡಿರುವುದರಿಂದ ಏನಾದರೂ ಪ್ರಯೋಜನವಾಯಿತೇ ಎಂಬುದನ್ನೂ ಯೋಚಿಸಬೇಕಲ್ಲವೇ?

Update: 2024-10-23 05:56 GMT

‘‘ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ವಿದೇಶಕ್ಕೆ ಹೋಗುವ ಕಾಯಿಲೆಯಿದೆ’’ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದಾರೆ.

ಬೇರೆಯವರ ಮಕ್ಕಳು ವಿದೇಶಕ್ಕೆ ಓದಲು ಹೋದರೆ ಅದು ಕಾಯಿಲೆ ಎನ್ನುವಂತೆ ಇವರಿಗೆ ಕಾಣಿಸುತ್ತದೆ. ಆದರೆ ಅದೇ ಬಿಜೆಪಿ ನಾಯಕರ ಮಕ್ಕಳು ವಿದೇಶಕ್ಕೆ ಓದಲು ಹೋದಾಗ ಅದು ಹೆಮ್ಮೆಯಿಂದ ಟ್ವೀಟ್ ಮಾಡುವ ವಿಷಯವಾಗುತ್ತದೆ.

ಮಂತ್ರಿಗಳು, ಸಂಸದರು ತಮ್ಮ ಮಕ್ಕಳು ಎಲ್ಲಿ ಓದುತ್ತಿದ್ದಾರೆ ಅಥವಾ ಎಲ್ಲಿ ಓದಿ ಬಂದಿದ್ದಾರೆ ಎಂಬುದನ್ನು ಟ್ವೀಟ್ ಮೂಲಕ ಹೇಳಿ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ವಿದೇಶಕ್ಕೆ ಓದಲು ಹೋಗುವುದು ಕಾಯಿಲೆ ಎಂದು ಹೇಳುವ ಧನ್ಕರ್, ಇಲ್ಲಿನ ಯೂನಿವರ್ಸಿಟಿಗಳನ್ನು ರಾಜಕೀಯ ಪ್ರಯೋಗಶಾಲೆಯಾಗಿ ಮಾಡಿರುವುದರಿಂದ ಏನಾದರೂ ಪ್ರಯೋಜನವಾಯಿತೇ ಎಂಬುದನ್ನೂ ಯೋಚಿಸಬೇಕಲ್ಲವೇ?

ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಯೇಲ್ ಯೂನಿವರ್ಸಿಟಿ ಮತ್ತು ಲಂಡನ್ ಸ್ಕೂಲ್ ಆಫ್ ಇಕನಾ ಮಿಕ್ಸ್‌ನಲ್ಲಿ ಓದಿದ್ದಾರೆ. ಮಗಳು ಅನನ್ಯಾ ಅಮೆರಿಕದ ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಓದು ಮುಗಿಸಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಮಗ ಕಾರ್ತಿಕೇಯ್ ಸಿಂಗ್ ಚೌಹಾಣ್ ಅಮೆರಿಕದ ಪೆನ್ ಯೂನಿವರ್ಸಿಟಿಯಲ್ಲಿ ಎಲ್‌ಎಲ್‌ಎಂ ಓದಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಮ್ಮ ಮಗ ಕನಿಷ್ಕ್ ಎಡಿನ್‌ಬರ್ಗ್ ಯೂನಿವರ್ಸಿಟಿಯಲ್ಲಿ ಓದಿದ ಬಳಿಕ ಲಂಡನ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವುದಾಗಿ ಹೇಳಿದ್ದಾರೆ.

ಪ್ರಕಾಶ್ ಜಾವಡೇಕರ್ ಅವರಿಂದ ಹಿಡಿದು ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್ ಮತ್ತು ಎಸ್. ಜೈಶಂಕರ್ ಮಕ್ಕಳು ಕೂಡ ವಿದೇಶದಲ್ಲಿ ಓದುತ್ತಿದ್ದಾರೆ, ಓದು ಮುಗಿಸಿದ್ದಾರೆ.

ಯಾಕೆ ಅವರೆಲ್ಲ ಅಲ್ಲಿಗೆ ಓದಲು ಹೋಗುತ್ತಾರೆ? ಯಾಕೆಂದರೆ, ಅಲ್ಲಿನ ಯೂನಿವರ್ಸಿಟಿಗಳು ಜಾಗತಿಕವಾಗಿ ಪ್ರಸಿದ್ಧ ಮಾತ್ರವಲ್ಲ, ಅತ್ಯುತ್ತಮ ಗುಣಮಟ್ಟವನ್ನೂ ಹೊಂದಿವೆ.

ಭಾರತದ ಯೂನಿವರ್ಸಿಟಿಗಳ ದುಸ್ಥಿತಿ ಯಾವ ಮಟ್ಟದ್ದು ಎಂಬುದು ಈ ದೊಡ್ಡ ದೊಡ್ಡ ನಾಯಕರುಗಳಿಗೆ ಗೊತ್ತೇ ಇದೆ. ಹಾಗಾಗಿಯೇ ಅವರ ಮಕ್ಕಳು ಓದಲು ವಿದೇಶಕ್ಕೆ ಹೋಗುತ್ತಿದ್ದಾರೆ.

ಹೀಗಿರುವಾಗ, ವಿದೇಶಕ್ಕೆ ಹೋಗುವುದು ದೇಶದ ಮಕ್ಕಳನ್ನು ಕಾಡುತ್ತಿರುವ ಹೊಸ ಕಾಯಿಲೆಯಾಗಿದೆ ಎಂದು ಧನ್ಕರ್ ಹೇಳಿದ್ದಾರೆ.

ಮಕ್ಕಳು ವಿದೇಶಕ್ಕೆ ಹೋಗುವುದನ್ನು ‘ಫಾರೆಕ್ಸ್ ಡ್ರೈನ್ ಮತ್ತು ಬ್ರೈನ್ ಡ್ರೈನ್’ ಎಂದು ಅವರು ಕರೆದಿದ್ದಾರೆ. ಶಿಕ್ಷಣದ ವ್ಯಾಪಾರೀಕರಣ ಅದರ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ರಾಷ್ಟ್ರದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ ಧನ್ಕರ್.

ಉತ್ಸಾಹದಿಂದ ವಿದೇಶಕ್ಕೆ ಹೋಗಲು ಬಯಸುತ್ತಾರೆ, ಹೊಸ ಕನಸನ್ನು ಕಾಣುತ್ತಾರೆ, ಆದರೆ ಅವರಿಗೆ ಯಾವ ಸಂಸ್ಥೆಗೆ ಹೋಗುತ್ತೇವೆ, ಯಾವ ದೇಶಕ್ಕೆ ಹೋಗುತ್ತೇವೆ ಎಂಬ ಬಗ್ಗೆ ಗೊತ್ತಿರುವುದಿಲ್ಲ ಎಂದಿದ್ದಾರೆ.

2024ರಲ್ಲಿ ಸರಿಸುಮಾರು 13 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರ ಭವಿಷ್ಯದ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತಿದೆ. ಅವರು ಇಲ್ಲಿ ಓದಿದ್ದರೆ ಅವರ ಭವಿಷ್ಯ ಎಷ್ಟು ಉಜ್ವಲವಾಗುತ್ತಿತ್ತು ಎಂದು ಜನರು ಈಗ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಜಗದೀಪ್ ಧನ್ಕರ್ ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಭಾರತದಲ್ಲಿನ ಯೂನಿವರ್ಸಿಟಿಗಳ ಸ್ಥಿತಿ ಸರಿಯಿಲ್ಲ ಎಂಬ ವಾಸ್ತವವನ್ನೇ ಸೂಚಿಸುತ್ತಿದೆ.

ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಭಾರತ ಸರಕಾರವನ್ನು ಹೊಗಳುವ ಸಂಗತಿಯಂತೂ ಅಲ್ಲ.

ಕೇಂದ್ರ ಸರಕಾರವೇ ಹೇಳಿರುವ ಹಾಗೆ 13,35,878 ವಿದ್ಯಾರ್ಥಿಗಳು ಈಗ ವಿದೇಶಗಳಲ್ಲಿ ಓದುತ್ತಿದ್ದಾರೆ.

2023ರಲ್ಲಿ 13,19,000 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದರು. 2022ರಲ್ಲಿ ಈ ಪ್ರಮಾಣ 9,07,400 ಇತ್ತು.

ಭಾರತದ ಯೂನಿವರ್ಸಿಟಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಮಾಡಿದ್ದೇನು?

2024ರಲ್ಲಿ ಪಟ್ಟಿ ಮಾಡಲಾದ ಜಗತ್ತಿನಾದ್ಯಂತದ ನೂರು ಟಾಪ್ ಯೂನಿವರ್ಸಿಟಿಗಳಲ್ಲಿ ಭಾರತದ ಒಂದೇ ಒಂದು ಯೂನಿವರ್ಸಿಟಿಯೂ ಇಲ್ಲ.

ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್‌ನಲ್ಲಿ ಭಾರತಕ್ಕೆ ಸಿಗುವ ಮೊದಲ ಸ್ಥಾನ 149ನೇ ನಂಬರ್‌ನಲ್ಲಿ ಬರುತ್ತದೆ. ಅದು ಬಾಂಬೇ ಐಐಟಿ. ಐಐಟಿ ದಿಲ್ಲಿ 197ನೇ ಸ್ಥಾನದಲ್ಲಿ ಬರುತ್ತಿದೆ.

ಟೈಮ್ಸ್ ಹೈಯರ್ ಎಜುಕೇಷನ್‌ನ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್‌ನಲ್ಲಿ ಬೆಂಗಳೂರಿನ ಐಐಎಸ್‌ಸಿ 200ರಿಂದ 250ರೊಳಗೆ ಬರುತ್ತಿತ್ತು. ಅದರ ನಂತರ ಭಾರತದ ಇತರ ನಾಲ್ಕು ಯೂನಿವರ್ಸಿಟಿಗಳಿಗೂ ಆ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಆದರೆ ಅದು 500ರಿಂದ 600ರ ಮಧ್ಯೆ.

ಪಟ್ಟಿಯಲ್ಲಿ ಮೊದಲ ನೂರರಲ್ಲಿ ಚೀನಾದ 7 ಯೂನಿವರ್ಸಿಟಿಗಳಿವೆ.

ದಿಲ್ಲಿ ಯೂನಿವರ್ಸಿಟಿ 800ರಿಂದ 1,000ದ ಮಧ್ಯೆ ಇದೆ.

ಅಮೆರಿಕದ ರ್ಯಾಂಕಿಂಗ್‌ನ ಪ್ರಕಾರ, 12 ವರ್ಷಗಳಿಂದ ಒಂದು ವಿಶ್ವವಿದ್ಯಾನಿಲಯ ಜಗತ್ತಿನಾದ್ಯಂತ 1,500 ಯೂನಿವರ್ಸಿಟಿಗಳಲ್ಲಿ ಮೊದಲ ಸ್ಥಾನದಲ್ಲಿಯೇ ಇದೆ.

ಅದು ಆಕ್ಸ್‌ಫರ್ಡ್ ಯೂನಿವರ್ಸಿಟಿ.

ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) 2ನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ಭಾರತದ ಮೊದಲ ಯೂನಿವರ್ಸಿಟಿ 200ಕ್ಕಿಂತ ಕೆಳಗೆ ಬರುವ ಐಐಎಸ್‌ಸಿಯಲ್ಲಿ ಕೂಡ ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಓದುವುದು ಬಹು ದೊಡ್ಡ ಕನಸಾಗಿರುತ್ತದೆ.

ಆದರೆ ಇಲ್ಲಿನ ನಾಯಕರಿಗೆ ಇದು ಕಾಣಿಸುತ್ತಿಲ್ಲ.

ನಮ್ಮ ದೇಶದಲ್ಲಿ 7 ವರ್ಷಗಳ ಹಿಂದೆ ಒಂದು ಯೋಜನೆ ಜಾರಿಗೆ ಬಂತು. ಇಲ್ಲಿನ ಶಿಕ್ಷಣ ಸಂಸ್ಥೆಗಳನ್ನು ವಿಶ್ವಮಟ್ಟಕ್ಕೇರಿಸಲಾಗುತ್ತದೆ ಎಂದು ಹೇಳಲಾಯಿತು.

ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲನ್ಸಿ ಯೋಜನೆ ಉದ್ಘಾಟಿಸಲಾಯಿತು. ದೊಡ್ಡ ದೊಡ್ಡ ಹೆಡ್‌ಲೈನ್‌ಗಳೂ ಟಿವಿ ವಾಹಿನಿಗಳಲ್ಲಿ ಅಬ್ಬರದ ದನಿಯಲ್ಲಿ ಕೇಳಬಂದವು.

ಆದರೆ ಯಾಕೆ ಭಾರತದ ಖಾಸಗಿ ಯೂನಿವರ್ಸಿಟಿಗಳ ಸ್ಥಿತಿ ಇಷ್ಟೊಂದು ಕೆಟ್ಟದ್ದಾಗಿದೆ ಮತ್ತು ವಿದ್ಯಾರ್ಥಿಗಳಲ್ಲಿ ಅದು ವಿಶ್ವಾಸ ಮೂಡಿಸುವ ರೀತಿಯಲ್ಲಿಲ್ಲ? ಯಾಕೆ ಭಾರತದ ಯುವಕರು ಓದಲು ಇಲ್ಲವೆ ಉದ್ಯೋಗ ಹಿಡಿಯಲು ವಿದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ?

ಇದರ ಬಗ್ಗೆ ಜವಾಬ್ದಾರಿಯಿಂದ ಮಾತಾಡಬೇಕಾಗುತ್ತದೆಯೇ ಹೊರತು ಟಿವಿಯಲ್ಲಿ ಹೆಡ್‌ಲೈನ್ ಆಗುವುದಕ್ಕಾಗಿ ಹೇಗೋ ಮಾತಾಡುವುದಲ್ಲ.

ಮಧ್ಯಮ ವರ್ಗದ ಜನರಿಗೂ ಭಾರತದ ಯೂನಿವರ್ಸಿಟಿಗಳ ಸ್ಥಿತಿ ಹದಗೆಟ್ಟಿರುವುದು ತಿಳಿದಿದೆ.

ಅವುಗಳನ್ನು ಸರಿ ಮಾಡಬೇಕಿತ್ತು. ಆದರೆ ಅದರೆ ಆ ಕೆಲಸ ಆಗಲೇ ಇಲ್ಲ.

ಯೂನಿವರ್ಸಿಟಿಗಳೆಲ್ಲ ರಾಜಕೀಯ ಅಖಾಡಗಳಾದರೆ, ಅಲ್ಲಿನ ಉನ್ನತ ಹುದ್ದೆಗಳಲ್ಲಿ ಇರುವವರ ಬಗ್ಗೆ ಅವರು ಯಾವ ವಿಚಾರಧಾರೆ ಹೊಂದಿದ್ದಾರೆ ಎಂಬುದರ ಮೇಲೆ ನಿರ್ಧರಿಸುವುದಾದರೆ ಆಗುವುದೇನು?

ವಿಶ್ವವಿದ್ಯಾನಿಲಯಗಳಿಗೆ ಆರೆಸ್ಸೆಸ್ ಸಿದ್ಧಾಂತಿಗಳನ್ನು ಹುಡುಕಿ ತಂದು ಉಪಕುಲಪತಿಗಳನ್ನಾಗಿಸಲಾಗುತ್ತಿದೆ.

ಹೀಗೆ ಯೂನಿವರ್ಸಿಟಿಗಳು ರಾಜಕೀಯ ಮಾಡುವ ಜಾಗಗಳಾಗಿಬಿಟ್ಟರೆ ಪಕ್ಷಕ್ಕೇನೋ ಲಾಭವಾಗಬಹುದು. ಆದರೆ ಯೂನಿವರ್ಸಿಟಿಗೆ, ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?

ಸ್ಟಾನ್ಫರ್ಡ್ ಯೂನಿವರ್ಸಿಟಿ ಸೆಪ್ಟಂಬರ್ ತಿಂಗಳಿನಲ್ಲಿ ಜಗತ್ತಿನಾದ್ಯಂತದ ಶೇ.2ರಷ್ಟು ಟಾಪ್ ವಿಜ್ಞಾನಿಗಳ ಪಟ್ಟಿ ತಯಾರಿಸಿತ್ತು. ಅದರಲ್ಲಿ ಒಟ್ಟು 2,23,252 ವಿಜ್ಞಾನಿಗಳಿದ್ದರು. ಭಾರತದ 2,939 ಹಾಗೂ ಚೀನಾದ 10,687 ವಿಜ್ಞಾನಿಗಳು ಈ ಪಟ್ಟಿಯಲ್ಲಿದ್ದರು.

ಭಾರತದಲ್ಲಿ ಈ ಸಂಖ್ಯೆ 5 ವರ್ಷಗಳ ಬಳಿಕ ಶೇ.0.25ರಷ್ಟು ಮಾತ್ರ ಹೆಚ್ಚಿದೆ. ಆದರೆ ಚೀನಾದಲ್ಲಿ ವಿಜ್ಞಾನಿಗಳ ಬೆಳವಣಿಗೆ ದರ ಶೇ.1.19 ಇದೆ.

ಭಾರತದ ವಿಜ್ಞಾನಿಗಳ ಸಂಖ್ಯೆ ಜಾಸ್ತಿಯೇ ಇದ್ದರೂ,

ಚೀನಾದ ಜೊತೆ ಹೋಲಿಸಿಕೊಂಡರೆ ಕಡಿಮೆ.

ಶೇ.2ರಷ್ಟು ಟಾಪ್ ವಿಜ್ಞಾನಿಗಳಲ್ಲಿ ಬರುವ ಭಾರತದ ವಿಜ್ಞಾನಿಗಳು ಯಾರು?

ಐಐಎಸ್‌ಸಿ ಬೆಂಗಳೂರಿನ 133 ವಿಜ್ಞಾನಿಗಳಿದ್ದರೆ, ಐಐಟಿ ದಿಲ್ಲಿ, ಖರಗ್ಪುರ, ಮುಂಬೈ, ಮದ್ರಾಸ್, ಕಾನ್ಪುರ, ರೂರ್ಕಿಗಳಿಂದ ಕ್ರಮವಾಗಿ 102, 85, 66, 63, 48 ಮತ್ತು 48 ವಿಜ್ಞಾನಿಗಳು.

ಧನ್ಕರ್ ದೃಷ್ಟಿಯಲ್ಲಿ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವುದು ಹೊಸ ಕಾಯಿಲೆ. ಅಷ್ಟಕ್ಕೂ ಕಾಯಿಲೆ ಅಂಟಿರುವುದು ಯಾರ ಮನಃಸ್ಥಿತಿಗೆ?

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಚಂದ್ರಕಾಂತ್ ಎನ್.

contributor

Similar News