ಸಂವಿಧಾನ ಪಾಲನೆಯ ಮಾತನಾಡುವ ಮೋದಿಯವರಿಗೆ ಸಂವಿಧಾನಕ್ಕೆ ಯಾಕೆ ವಿಧೇಯರಾಗಲಾಗುತ್ತಿಲ್ಲ?

Update: 2024-06-27 06:26 GMT
Editor : jafar sadik | Byline : ಎನ್. ಕೇಶವ್

PC: PTI

17ನೇ ಲೋಕಸಭೆಯಲ್ಲಿ ಐದು ವರ್ಷಗಳ ಕಾಲ ಉಪಸಭಾಪತಿ ಇರಲಿಲ್ಲ. ಸಂಪ್ರದಾಯದ ಪ್ರಕಾರ ಈ ಹುದ್ದೆಯನ್ನು ಪ್ರತಿಪಕ್ಷಗಳಿಗೆ ನೀಡಬೇಕು. ಈಗ ಪ್ರತಿಪಕ್ಷಗಳಿಗೆ ಈ ಹುದ್ದೆ ನೀಡಲು ಸರಕಾರ ನಿರಾಕರಿಸಿದೆ. ಅಂತಹ ಸಂಪ್ರದಾಯ ಇಲ್ಲ ಎನ್ನುತ್ತಾರೆ ಬಿಜೆಪಿಯವರು. ಆದರೆ ಐದು ವರ್ಷಗಳಿಂದ ಈ ಹುದ್ದೆ ಖಾಲಿಯೇ ಇತ್ತಲ್ಲವೆ? ಅದು ಯಾವ ಸಂಪ್ರದಾಯ?

ಸಂವಿಧಾನದ 93ನೇ ವಿಧಿಯ ಪ್ರಕಾರ, ಲೋಕಸಭೆಯಲ್ಲಿ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಇರುವುದು ಕಡ್ಡಾಯವಾಗಿದೆ. ಹಾಗಿದ್ದೂ, ಐದು ವರ್ಷಗಳ ಕಾಲ ಡೆಪ್ಯೂಟಿ ಸ್ಪೀಕರ್ ಹುದ್ದೆ ಖಾಲಿ ಇತ್ತು.

ಈಗ 18ನೇ ಲೋಕಸಭೆ ಸ್ಪೀಕರ್ ಹುದ್ದೆ ವಿಚಾರ ಬಂದಾಗಲೂ ಬಿಜೆಪಿಗೆ ಮಾತ್ರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮನಸ್ಸಿಲ್ಲ.

ಸಹಯೋಗ ಮತ್ತು ಸಹಮತದ ಮಾತನಾಡಿದ್ದ ಮೋದಿ ನಡವಳಿಕೆಯಲ್ಲಿ ತೋರಿಸುವ ಅಸಲೀ ಮುಖವೇ ಬೇರೆ.

ಆಡಳಿತಾರೂಢ ಪಕ್ಷದ ಸಂಸದರೊಬ್ಬರು ಸ್ಪೀಕರ್ ಆಗುವುದು, ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ವಿಪಕ್ಷಗಳಿಗೆ ನೀಡಬೇಕಿರುವುದು ನಡೆದುಕೊಂಡು ಬಂದಿದೆ. ಅದರೆ ಈಗ ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ವಿಪಕ್ಷಕ್ಕೆ ನೀಡುವುದಕ್ಕೇ ಮೋದಿ ಒಪ್ಪಿಲ್ಲ.

ಸ್ಪೀಕರ್ ಹುದ್ದೆ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿದ್ದ ರಾಜನಾಥ್ ಸಿಂಗ್, ವಿಪಕ್ಷಗಳ ಕಡೆಯಿಂದ ಅಭ್ಯರ್ಥಿಯನ್ನು ಹಾಕದಂತೆ ಮನವಿ ಮಾಡಿದ್ದರು. ಅದಕ್ಕೆ ಖರ್ಗೆ ಕೂಡ ಒಪ್ಪಿದ್ದರಾದರೂ, ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ವಿಪಕ್ಷಗಳಿಗೆ ಬಿಟ್ಟುಕೊಡಬೇಕು ಎಂಬ ಷರತ್ತು ಹಾಕಿದ್ದರು.

ಆದರೆ, ಚರ್ಚಿಸಿ ಮತ್ತೆ ಕರೆ ಮಾಡುವುದಾಗಿ ಹೇಳಿದ್ದ ರಾಜನಾಥ್ ಸಿಂಗ್ ಪುನಃ ಖರ್ಗೆ ಅವರಿಗೆ ಕರೆ ಮಾಡಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ಒಂದೆಡೆ ಪ್ರಧಾನಿ ಮೋದಿ ಪ್ರತಿಪಕ್ಷಗಳ ಸಹಕಾರ ಕೇಳುತ್ತಿದ್ದಾರೆ, ಆದರೆ ಇನ್ನೊಂದೆಡೆ ನಮ್ಮ ನಾಯಕ ಖರ್ಗೆಯವರಿಗೆ ಅವಮಾನ ಮಾಡುತ್ತಿದ್ದಾರೆ’’ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಪಾಲನೆಯ ಮಾತನಾಡುವ ಮೋದಿ, ಹಾಗಾದರೆ ಸಂವಿಧಾನದ 93ನೇ ವಿಧಿಗೆ ಯಾಕೆ ವಿಧೇಯರಾಗಿರಲು ಆಗುತ್ತಿಲ್ಲ? ಹಿಂದಿನ ಲೋಕಸಭೆಯಲ್ಲಿ ಐದು ವರ್ಷ ಕಾಲ ಏಕೆ ಡೆಪ್ಯೂಟಿ ಸ್ಪೀಕರ್ ಇರಲಿಲ್ಲ?

ಈ ಪ್ರಶ್ನೆಗೆ ಮೋದಿ ಉತ್ತರಿಸಿಯಾರೇ.

ಬಿಜೆಪಿಯೇತರ ರಾಜ್ಯ ಸರಕಾರಗಳಿರುವಲ್ಲಿ ಆಡಳಿತಾರೂಢ ಪಕ್ಷಗಳ ಸದಸ್ಯರೇ ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ಆಗಿಲ್ಲವೇ ಎಂದು ಜೆ.ಪಿ. ನಡ್ಡಾ ಪ್ರಶ್ನಿಸುತ್ತಿದ್ದಾರೆ. ಆದರೆ ವಿಧಾನಸಭೆಯ ಉದಾಹರಣೆ ಕೊಟ್ಟು, ಲೋಕಸಭೆ ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ಕುರಿತ ಪ್ರಶ್ನೆಯನ್ನು ಉತ್ತರಿಸಿದಂತೆ ಆಗುವುದಿಲ್ಲ.

ಬಿಜೆಪಿ ಆಡಳಿತವೇ ಇರುವ ಯುಪಿ ಅಸೆಂಬ್ಲಿಯಲ್ಲಿ, ಮಧ್ಯಪ್ರದೇಶ ಅಸಂಬ್ಲಿಯಲ್ಲಿ, ಉತ್ತರಾಖಂಡ ಅಸೆಂಬ್ಲಿಯಲ್ಲಿ ಯಾಕೆ ಡೆಪ್ಯೂಟಿ ಸ್ಪೀಕರ್ ಹುದ್ದೆ ಖಾಲಿಯೇ ಇದೆ ಎಂಬುದಕ್ಕೆ ನಡ್ಡಾ ಉತ್ತರಿಸಬಲ್ಲರೆ?

ಕರ್ನಾಟಕದಲ್ಲಿ ಈ ಹಿಂದೆ ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ಒಮ್ಮೆ ಜೆಡಿಎಸ್‌ಗೂ ಒಮ್ಮೆ ಬಿಜೆಪಿಗೂ ನೀಡಲಾಗಿತ್ತು ಎಂಬುದು ನಡ್ಢಾಗೆ ನೆನಪಿಲ್ಲವೆ?

ಬಿಜೆಪಿ ಆಡಳಿತವಿರುವ ಗುಜರಾತ್ ಅಸೆಂಬ್ಲಿಯಲ್ಲಿ ಡೆಪ್ಯೂಟಿ ಸ್ಪೀಕರ್ ಹುದ್ದೆ ಬಿಜೆಪಿ ಕೈಯಲ್ಲೇ ಏಕೆ ಇದೆ? ಇದರ ಬಗ್ಗೆ ಯಾಕೆ ನಡ್ಡಾ ಮಾತಾಡುವುದಿಲ್ಲ?

ಈ ಹಿಂದೆಯೂ ಸಂಸತ್ತಿಗೆ ಉತ್ತರದಾಯಿಯಾಗಿ ನಡೆದುಕೊಂಡಿದ್ದಾರೆಯೇ ಮೋದಿ? ಸಂಸತ್ತಿನ ನೀತಿ ನಿಯಮಗಳನ್ನು ಪಾಲಿಸಿದ್ದಾರೆಯೇ? ಅಲ್ಲಿ ಆರೋಗ್ಯಕರ ಚರ್ಚೆಗೆ ಬೇಕಾದ ವಾತಾವರಣ ರೂಪಿಸಿದ್ದಾರೆಯೇ? ಯಾಕೆ ಅಷ್ಟೊಂದು ಬಿಲ್‌ಗಳು ಚರ್ಚೆಯೇ ಇಲ್ಲದೆ ಪಾಸಾದವು? ಇಂಥದೇ ನಡವಳಿಕೆಯನ್ನು, ಸಂವಿಧಾನದ ವಿಚಾರದಲ್ಲಿ ತೀವ್ರ ಅಸಡ್ಡೆಯನ್ನು ಅವರು ತೋರಿಸುತ್ತಿರುವುದೇಕೆ?

ಕಳೆದ ಲೋಕಸಭೆ ಡೆಪ್ಯೂಟಿ ಸ್ಪೀಕರ್ ಇಲ್ಲದೆಯೇ ಮುಗಿದು ಹೋಯಿತು ಎನ್ನುವುದಂತೂ ಅದು ಅಪ್ರಜಾಸತ್ತಾತ್ಮಕವಾಗಿತ್ತು ಎಂಬುದಕ್ಕೆ ಉದಾಹರಣೆ. 17ನೇ ಲೋಕಸಭೆಯು ಉಪ ಸ್ಪೀಕರ್ ಇಲ್ಲದೆ ಅವಧಿ ಮುಗಿಸಿದ ಮೊದಲನೇ ಲೋಕಸಭೆಯಾಯಿತು. ಹುದ್ದೆ ಖಾಲಿಯಾದಾಗ ಸದನ ಇನ್ನೊಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ ಕಳೆದ ಲೋಕಸಭೆಯಲ್ಲಿ ಅದು ಆಗಲೇ ಇಲ್ಲ.

ಈ ವಿಚಾರ ಕಳೆದ ವರ್ಷ ಸುಪ್ರೀಂ ಕೋರ್ಟ್‌ವರೆಗೂ ಹೋಯಿತು. ವಿಚಾರಣೆ ನಡೆಸಿದ್ದ ಕೋರ್ಟ್ ಕೇಂದ್ರ ಸರಕಾರಕ್ಕೆ ನೊಟೀಸ್ ಜಾರಿ ಮಾಡಿತ್ತು.

93 ಮತ್ತು 178ನೇ ವಿಧಿಗಳನ್ನು ಉಲ್ಲೇಖಿಸಿದ ಕೋರ್ಟ್, ಡೆಪ್ಯೂಟಿ ಸ್ಪೀಕರ್ ಆಯ್ಕೆ ಕಡ್ಡಾಯ ಎಂಬುದನ್ನು ಕೇಂದ್ರ ಸರಕಾರಕ್ಕೆ ನೆನಪಿಸಿತ್ತು

ಈಗಲೂ ಬಿಜೆಪಿಯೇನಾದರೂ ಕಳೆದ ಸಲದ ಹಾಗೆಯೇ ಪ್ರಚಂಡ ಬಹುಮತದೊಂದಿಗೆ ಸರಕಾರ ರಚಿಸುವುದು ಸಾಧ್ಯವಾಗಿದ್ದಲ್ಲಿ, ಈ ಪ್ರಶ್ನೆಯನ್ನು ಕೇಳಲು ಆಗುತ್ತಿರಲಿಲ್ಲ.

ಮತ್ತೊಮ್ಮೆ ಮೋದಿ ಮೋದಿ ಎಂಬ ಭ್ರಮೆ ಆವರಿಸಿಕೊಳ್ಳುತ್ತಿತ್ತು. ಧರ್ಮದ ಹೆಸರಿನ ರಾಜಕೀಯ ಮಾಡುತ್ತ, ಉಳಿದೆಲ್ಲ ವಿಚಾರವನ್ನೂ ಗೌಣ ಮಾಡಲಾಗುತ್ತಿತ್ತು.

ಹಿಂದೂ-ಮುಸ್ಲಿಮ್ ವಿಚಾರ ಇಟ್ಟುಕೊಂಡು ಚುನಾವಣೆಯಲ್ಲಿ ದ್ವೇಷ ಭಾಷಣ ಮಾಡುವವರಿಗೆ ಸಂವಿಧಾನವನ್ನು ಪಾಲಿಸುವ ಮನಃಸ್ಥಿತಿ ಹೇಗೆ ಬರಲು ಸಾಧ್ಯ? ಅದನ್ನು ಮನವರಿಕೆ ಮಾಡಿಕೊಡಲೆಂದೇ ಅಧಿವೇಶನದ ಮೊದಲ ದಿನ ‘ಇಂಡಿಯಾ’ ಒಕ್ಕೂಟದ ನಾಯಕರು ಸಂವಿಧಾನದ ಪ್ರತಿ ಹಿಡಿದುಕೊಂಡೇ ಸಂಸತ್ ಒಳಗೆ ಪ್ರವೇಶಿಸಿದ್ದರು.

ವಿರೋಧ ಪಕ್ಷ ಸಕಾರಾತ್ಮಕ ರಾಜಕಾರಣ ಮಾಡಬೇಕು ಎನ್ನುವ ಮೋದಿ, ಏಕೆ ಅದೇ ವಿರೋಧ ಪಕ್ಷಗಳ ವಿಚಾರದಲ್ಲಿ ಸರಕಾರದಿಂದಲೂ ಸಕಾರಾತ್ಮಕ ಸಹಕಾರ ನೀಡಬೇಕಿದೆ ಎಂದು ಯೋಚಿಸುವುದಿಲ್ಲ?

ವಿಪಕ್ಷಗಳಿಂದ ಜನತೆ ಒಳ್ಳೆಯ ನಡವಳಿಕೆಯನ್ನು ಅಪೇಕ್ಷಿಸುತ್ತದೆ ಎನ್ನುತ್ತಾರೆ ಮೋದಿ. ಹಾಗಾದರೆ ಸರಕಾರದಿಂದ ಜನರು ಏನನ್ನೂ ಕೇಳುವುದಿಲ್ಲವೆ?

ಮೋದಿ ಮಾತಾಡುವುದೇ ಬೇರೆ, ವಾಸ್ತವದಲ್ಲಿ ಬಯಸುವುದೇ ಬೇರೆ ಎಂಬುದು ಸ್ಪೀಕರ್ ವಿಚಾರವಾಗಿ ಅವರು ನಡೆದುಕೊಂಡ ರೀತಿಯಲ್ಲೂ ಸ್ಪಷ್ಟವಾಗಿದೆ.

ಅವರ ಈ ಧೋರಣೆಯೇ ಅವರಿಗೆ ಈಗಾಗಲೇ ಚುನಾವಣೆಯಲ್ಲಿ ಕೈಕೊಟ್ಟಿದೆ. ಈಗ ಸರಕಾರದಲ್ಲೂ ವಿಪಕ್ಷಗಳಿಗೆ ಅವರ ಸಂವಿಧಾನಬದ್ಧ ಹಕ್ಕುಗಳನ್ನು ನಿರಾಕರಿಸಿದರೆ ಮೋದಿಗೆ ಮುಂದಿನ ದಿನಗಳಲ್ಲಿ ಸಂಸತ್ ನಲ್ಲಿ ಅವರನ್ನು ಎದುರಿಸುವುದು ಇನ್ನಷ್ಟು ಕಷ್ಟವಾಗಲಿದೆ.

ಮೊದಲ ದಿನದಿಂದಲೇ ಈ ಸರಕಾರವನ್ನು ಜನವಿರೋಧಿಯಾಗಿರಲು, ಸಂವಿಧಾನವಿರೋಧಿಯಾಗಿರಲು ಬಿಡುವುದಿಲ್ಲ ಎಂದು ವಿಪಕ್ಷಗಳು ಸ್ಪಷ್ಟವಾಗಿ ಸಾರಿವೆ.

ಈ ಮೋದಿ ಸರಕಾರ ಈ ಹಿಂದಿನ ಮೋದಿ ಸರಕಾರವೂ ಅಲ್ಲ, ಈ ವಿಪಕ್ಷ ಈ ಹಿಂದಿನ ದುರ್ಬಲ ವಿಪಕ್ಷವೂ ಅಲ್ಲ.

ಹಾಗಾಗಿ ಮೋದಿ ಸರಕಾರಕ್ಕೆ ಮುಂದೆ ಸಂಸತ್‌ನಲ್ಲಿ ಕಾದಿವೆ ಸವಾಲಿನ ದಿನಗಳು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಎನ್. ಕೇಶವ್

contributor

Similar News