ದಲಿತ ಪದ ಯಾಕೆ ಬೇಕು?

ಸಂವಿಧಾನ ಜಾರಿಗೆ ಬಂದ ಮೇಲೆ ಶೋಷಿತ ಸಮುದಾಯಕ್ಕೆ ಅಕ್ಷರ ಜ್ಞಾನದ ಬೆಳಕು ಬಂದರೂ, ಬದಲಾವಣೆ ಹೇಳಿಕೊಳ್ಳುವಂತಿಲ್ಲ. ರಾಜಕೀಯ, ಆರ್ಥಿಕ, ಸಾಮಾಜಿಕ, ಅಧಿಕಾರ, ಆಡಳಿತ ವಲಯಗಳಲ್ಲಿ ಇದ್ದರೂ ಇವತ್ತಿಗೂ ತಮ್ಮ ಜಾತಿಯ ಭಯ ಅವರೊಳಗೆ ಸದಾ ಎಚ್ಚರವಾಗಿರುತ್ತದೆ. ನಾನು ಬ್ರಾಹ್ಮಣ, ನಾನು ಒಕ್ಕಲಿಗ, ಪಂಚಮಸಾಲಿ, ವಿಶ್ವಕರ್ಮ ಎಂದು ತಮ್ಮ ಜಾತಿಯನ್ನು ಎದೆಯುಬ್ಬಿಸಿ ಹೆಮ್ಮೆಯಿಂದ ಹೇಳಿಕೊಳ್ಳುವಂತೆ, ನಾನೊಬ್ಬ ದಲಿತ, ಶೂದ್ರ, ಹೊಲೆಯ ಎಂದು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

Update: 2024-07-24 10:57 GMT

ದಲಿತ ಶಬ್ದಕ್ಕೆ ಸಮಾನಾರ್ಥಕವಾಗಿ ಪರಿಶಿಷ್ಟ ಜಾತಿ, ಪಂಗಡ ಶಬ್ದವನ್ನು ಬಳಸಲಾಗುತ್ತದೆ. ಈ ಶಬ್ದಗಳು ಶೂದ್ರರು ಮತ್ತು ಅಸ್ಪಶ್ಯರಂತಹ ಭಾರತದ ಐತಿಹಾಸಿಕವಾಗಿ ಭೇದಭಾವ ಮಾಡಲ್ಪಟ್ಟ ಕೆಳಜಾತಿಗಳನ್ನು ಒಳಗೊಳ್ಳುತ್ತವೆ. ದಲಿತರನ್ನು ಸಾಮಾನ್ಯವಾಗಿ ಹಿಂದೂಧರ್ಮದೊಂದಿಗೆ ಗುರುತಿಸಲಾಗಿದೆ ಎಂದು ಹೇಳುವ ಪ್ರಾಜ್ಞರು ಭೇದ ಭಾವಗಳನ್ನು ಸೃಷ್ಟಿ ಮಾಡಿದವರು ಯಾರು? ಎಂಬುದನ್ನು ಸಮರ್ಥವಾಗಿ ಇವತ್ತಿಗೂ ಹೇಳುತ್ತಿಲ್ಲ. ಶೂದ್ರ ಎನ್ನುವ ಪದಬಳಕೆ ಮಾಡುವುದಕ್ಕೆ ಯಾವ ಸಾಕ್ಷ್ಯಗಳನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂದು ನೋಡುವುದಾದರೆ ಮತ್ತೆ ಅದು ಅವರು ಮಾಡುವ ವೃತ್ತಿಗಳ ಕಡೆಯೇ ಬೆರಳು ಮಾಡಿ ತೋರುತ್ತದೆ. ಇನ್ನೂ ಹಿಂದೂ ಧರ್ಮದೊಂದಿಗೆ ಗುರುತಿಸಲಾಗುತ್ತದೆ ಎನ್ನುವುದು ಕೇವಲ ಮಾತು ಎಂಬುದು ಜಾತಿ ಆಧಾರದ ಮೇಲೆ ತುಳಿತಕ್ಕೆ ಒಳಗಾದವರಿಗೆಲ್ಲ ಗೊತ್ತಿದೆ.

ಹಂದಿ ಮೇಯಿಸುವವ ಹಂದಿ ಜೋಗಿಯಾದ, ಕುರಿ ಮೇಯಿಸುವವ ಕುರುಬನಾದ, ಕಬ್ಬಿಣದ ಕೆಲಸ ಮಾಡುವವನು ಆಚಾರಿಯಾದ, ದನ ಮೇಯಿಸುತ್ತಿದ್ದವ ಗೊಲ್ಲನಾದ, ದೇವರಿಗೆ ಪೂಜೆ ಮಾಡುವವನು ಅರ್ಚಕನಾದ, ಉಳ್ಳವರು ಹೇಳಿದ್ದನೆಲ್ಲ ಮಾಡುತ್ತಿದ್ದವ ಅವಮಾನ, ನೋವು, ಹಿಂಸೆ ಅನುಭವಿಸಿಯೂ ಪರಿಶಿಷ್ಟನಾದ, ದಲಿತ, ಶೂದ್ರ, ಹೊಲೆಯ ಹೇಗಾದ?

ಭೂಮಿಯ ಮೇಲೆ ಮನುಷ್ಯನಾಗುವುದಕ್ಕೆ ಕೋಟ್ಯಂತರ ವರ್ಷಗಳು ಹಿಡಿದಿವೆ. ಆದರೆ ಆ ಮನುಷ್ಯನೊಳಗೆ ಜಾತಿಗಳು ಸೃಷ್ಟಿಯಾಗುವುದಕ್ಕೆ ಕೆಲವು ಸಾವಿರ ವರ್ಷಗಳು ಸಾಕಾಗಿವೆ. ಭಾರತದಲ್ಲಿ ಜಾತಿ ಉಪಟಳಗಳು ಹೆಚ್ಚಾಗುವುದಕ್ಕೆ ಶ್ರೇಷ್ಠ ಮತ್ತು ಕನಿಷ್ಠ ಎಂಬ ಪ್ರಜ್ಞೆಗಳೇ ಮೂಲಕಾರಣವಾಗಿವೆ. ಮೂಲವಾಗಿ ಈ ಜಾತಿಗಳು ಹುಟ್ಟಿರುವುದಕ್ಕೆ ದೃಢವಾದ ಆಧಾರಗಳಿಲ್ಲ. ಪುರಾಣ ಹಾಗೂ ಇತಿಹಾಸದಲ್ಲಿ ಬರುವ ಜಾತಿ ಶ್ರೇಣೀಕರಣಗಳು ವ್ಯಕ್ತಿಯೊಬ್ಬನ ಸೃಷ್ಟಿಯೇ ಹೊರತು, ಅವುಗಳು ದೈವ ನಿರ್ಮಿತವಲ್ಲ ಅಥವಾ ಜನ್ಮನಿರ್ಮಿತವೂ ಅಲ್ಲ. ಮೂಲ ಮನುಷ್ಯ ರೂಪಿ ಹುಟ್ಟಿನೊಂದಿಗೆ ಜಾತಿಯನ್ನು ಕಟ್ಟಿಕೊಂಡು ಬಂದಿರಲು ಸಾಧ್ಯವಿಲ್ಲ.

ಮನುಷ್ಯ ಬದುಕುವುದಕ್ಕಾಗಿ ಪ್ರಯತ್ನಪೂರ್ವಕವಾಗಿ ಕಲಿತ ವೃತ್ತಿಗಳನ್ನು ರೂಢಿಸಿಕೊಂಡು ಬಂದ. ತನ್ನ ತಲೆಮಾರಿಗೂ ತಲುಪಿಸಿಕೊಂಡು ಬಂದ. ಕೆಳ ದರ್ಜೆಯ ಕೆಲಸಗಳನ್ನು ಮಾಡಿ ಕಡಿಮೆ ಸಂಪಾದಿಸುತ್ತಿದ್ದ ಅಥವಾ ಒಂದು ಹೊತ್ತಿನ ಊಟಕ್ಕೆ ವೃತ್ತಿ ಮಾಡುತ್ತಿದ್ದ ವ್ಯಕ್ತಿಯನ್ನು ಆಯಾ ವೃತ್ತಿಯವನು ಎಂದು ಕರೆಯುವ ಬದಲು ಕೆಳ ವರ್ಗದವನು ಎಂದು ಕರೆದರು. ಯಾರೂ ಮಾಡದ ಕೆಲಸವನ್ನು ತಾನು ಮಾಡುತ್ತೇನೆ ಎಂದು ಮುಂದೆ ಬಂದವನು ಮತ್ತಷ್ಟು ಕೆಳ ವೃತ್ತಿಯವನಾದ, ಕೆಳ ಜಾತಿಯವನಾದ. ಹಣ ಅಂತಸ್ತು ಇದ್ದವರು, ವಿದ್ಯೆ ಇದ್ದವರು ಪೂಜೆ, ಮಂತ್ರ, ವ್ಯಾಪಾರ, ಕೆತ್ತನೆ, ಕೃಷಿ ಅಂತೆಲ್ಲ ವೃತ್ತಿಗಳನ್ನು ಮಾಡಲು ಪ್ರಾರಂಭಿಸಿದರು. ಇವರ ಮೇಲ್‌ವೃತ್ತಿಗಳು ಮೇಲುವರ್ಗವಾಗಿ ಪರಿಗಣಿಸಲ್ಪಟ್ಟವು.

ಕಲಾ ವೃತ್ತಿಯನ್ನು ಪ್ರದರ್ಶನ ಮಾಡುತ್ತಾ ಬಂದವರು ಕೂಡ ಕೆಳ ಜಾತಿಗೆ ಸೇರಲ್ಪಟ್ಟರು. ಬದುಕುವುದಕ್ಕೆ ನೆಲೆಯಿಲ್ಲದೆ ಊರೂರು ಅಲೆಯುತ್ತಿದ್ದ ವ್ಯಕ್ತಿ ಅಲೆಮಾರಿ ಜಾತಿಯವನಾದಂತೆ, ಕಸಗುಡಿಸುವ ಕಾಯಕ ಮಾಡುತ್ತಿದ್ದವನು ಜಾಡಮಾಲಿ ಎಂದು ಕರೆಯಲ್ಪಟ್ಟ. ಇವತ್ತಿಗೂ ಇವರಿಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನಗಳಿಲ್ಲ ಎಂಬುದನ್ನು ಅಧ್ಯಯನ ಮಾಡುತ್ತಲೇ ಬಂದಿದ್ದೇವೆ. ಇವರಿಲ್ಲದಿದ್ದರೆ ಶ್ರೇಷ್ಠರ ಬೀದಿಗಳು ನಾರುತ್ತವೆ. ಹಸಿವನ್ನು ನೀಗಿಸಿಕೊಳ್ಳಲು ದುಡಿ ಬಾರಿಸಿದವನು, ದನ, ಎಮ್ಮೆಗಳನ್ನು ತಿಂದವನು ಹೊಲೆಯನೆಂದು ಕರೆದದ್ದು ಮಾತ್ರವಲ್ಲ, ಅವನನ್ನು ಶೋಷಣೆಯ ವಸ್ತುವಾಗಿಯೂ ಇವತ್ತಿಗೂ ಪರಿಗಣಿಸಲಾಗುತ್ತಿದೆ. ಆಹಾರ ಸೇವಿಸುವುದನ್ನೇ ಮುಂದಿಟ್ಟುಕೊಂಡು ಹೊಲೆಯನೆನ್ನುವುದು ಒಂದು ಜಾತಿ, ಅವರನ್ನು ಊರಿನ ಹೊರಗಿಡಬೇಕು ಎಂದು ತೀರ್ಮಾನ ಮಾಡಿದವರು ವೃತ್ತಿಪ್ರಜ್ಞೆ ಇದ್ದವರಲ್ಲ. ಜಾತಿ ಪ್ರಜ್ಞೆಗೆ ತಮ್ಮನ್ನು ಒಪ್ಪಿಸಿಕೊಂಡವರು. ಇವತ್ತಿಗೂ ಭಾರತದ ಬಹುತೇಕ ಹಳ್ಳಿಗಳಲ್ಲಿ ದಲಿತರು ಊರ ಹೊರಗೆ ವಾಸಮಾಡುತ್ತ ಮೇಲ್ವರ್ಗದವರ ಮತ್ತು ರಾಜಕಾರಣಿಗಳ ಶೋಷಣೆಯ ಜೀವಿಗಳೇ ಆಗಿದ್ದಾರೆ.

ಸಂವಿಧಾನ ಜಾರಿಗೆ ಬಂದ ಮೇಲೆ ಶೋಷಿತ ಸಮುದಾಯಕ್ಕೆ ಅಕ್ಷರ ಜ್ಞಾನದ ಬೆಳಕು ಬಂದರೂ, ಬದಲಾವಣೆ ಹೇಳಿಕೊಳ್ಳುವಂತಿಲ್ಲ. ರಾಜಕೀಯ, ಆರ್ಥಿಕ, ಸಾಮಾಜಿಕ, ಅಧಿಕಾರ, ಆಡಳಿತ ವಲಯಗಳಲ್ಲಿ ಇದ್ದರೂ ಇವತ್ತಿಗೂ ತಮ್ಮ ಜಾತಿಯ ಭಯ ಅವರೊಳಗೆ ಸದಾ ಎಚ್ಚರವಾಗಿರುತ್ತದೆ. ನಾನು ಬ್ರಾಹ್ಮಣ, ನಾನು ಒಕ್ಕಲಿಗ, ಪಂಚಮಸಾಲಿ, ವಿಶ್ವಕರ್ಮ ಎಂದು ತಮ್ಮ ಜಾತಿಯನ್ನು ಎದೆಯುಬ್ಬಿಸಿ ಹೆಮ್ಮೆಯಿಂದ ಹೇಳಿಕೊಳ್ಳುವಂತೆ, ನಾನೊಬ್ಬ ದಲಿತ, ಶೂದ್ರ, ಹೊಲೆಯ ಎಂದು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದೇ ಇವತ್ತಿನ ಪರಿಶಿಷ್ಟ ವರ್ಗಕ್ಕೆ ಸೇರಿರುವ ಬೋವಿಯೊಬ್ಬ ನಾನು ಬೋವಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾನೆ. ದಲಿತನಿಗೆ ಅದು ಸಾಧ್ಯವಿಲ್ಲ. ಕಾರಣ ಆ ಪದದಿಂದಾಗುವ ಮುಜುಗರ, ಅವಮಾನ, ಶೋಷಣೆ. ಆದ್ದರಿಂದಲೇ ಇಂತಹ ಪದಗಳನ್ನು ಶಬ್ದಕೋಶದಿಂದ ಮತ್ತು ಜನಸಾಮಾನ್ಯರ ಭಾಷೆಯಿಂದ ಕೈಬಿಟ್ಟು ಬದಲಿಯಾದ ಪದಗಳನ್ನು ಬಳಸಿಕೊಂಡು ಗೌರವಯುತವಾಗಿ ಕರೆದುಕೊಂಡರೆ ಸೂಕ್ತವಲ್ಲವೇ?.

ಪರಿಶಿಷ್ಟ ಜಾತಿಯವರು ಈಗ ರಾಜಕಾರಣವನ್ನು ಮಾಡುತ್ತಿದ್ದಾರೆ. ಉದ್ಯಮಗಳನ್ನು ಕಟ್ಟಿದ್ದಾರೆ. ಈಗಲೂ ಇವರನ್ನು ದಲಿತ, ಶೂದ್ರ ಎಂದೆಲ್ಲ ಕರೆಯುವುದು ಎಷ್ಟು ಸಮಂಜಸ? ದೇಶವನ್ನು ಆಳುವುದಕ್ಕೆ ಮುಂದಾಗಿರುವ ಕೆಳ ವರ್ಗದವರನ್ನು ಜಾತಿಯ ಹೆಸರಲ್ಲಿ ನಿಂದನೆಗೆ ಗುರಿ ಮಾಡುವುದು ತಪ್ಪು. ಅಧಿಕಾರಕ್ಕೆ ಬಂದ ಶೂದ್ರ ಶೂದ್ರನಾಗಿಯೇ ಉಳಿಯುವುದು ಸರಿಯಲ್ಲ. ಮೀಸಲಾತಿಯ ಹೆಸರಲ್ಲೂ ದಲಿತರ ಮೇಲೆ ಇವತ್ತಿಗೂ ಶೋಷಣೆಗಳಾಗುತ್ತಿವೆ. ಮೀಸಲಾತಿ ಇದ್ದದ್ದಕ್ಕೆ ಅಧಿಕಾರ ಆಡಳಿತಕ್ಕೆ ಕಾಲಿಡಲು ಸಾಧ್ಯವಾಯಿತು ಎನ್ನುವವರು, ದಲಿತರು ಅಲ್ಲಿ ಕಾಲಿಟ್ಟ ಮೇಲೆ ಅವರನ್ನು ಬೇರೆಯವರು ಮನುಷ್ಯರ ರೀತಿ ಎಷ್ಟು ಜನ ಪರಿಗಣಿಸಿದ್ದಾರೆ?. ಎಷ್ಟೇ ಪ್ರತಿಭಾವಂತನಾದರೂ ಮೀಸಲಾತಿಯಲ್ಲಿ ಅಧಿಕಾರ ಹಿಡಿದವನು, ಹುದ್ದೆ ಅಲಂಕರಿಸಿದವನು ಎನ್ನುವ ಪಟ್ಟ ಸಾಮಾನ್ಯ. ತಾರತಮ್ಯಗಳು ಕಂಡೂ ಕಾಣದಂತೆ ನಿರಂತರವಾಗಿ ನಡೆಯುತ್ತಿವೆ. ಅಲ್ಲದೆ ಪರಿಶಿಷ್ಟ ಜಾತಿಯೊಳಗೆ ಬಲಿತ ಜಾತಿಗಳನ್ನು ಸೇರಿಸುವ ಮೂಲಕ ಮೂಲ ದಲಿತರಿಗೆ ಸಿಗುವ ಅವಕಾಶಗಳನ್ನು ಕಸಿದುಕೊಳ್ಳುತ್ತಿರುವುದು ಕಣ್ಣಿಗೆ ರಾಚಿದಂತಿದೆ. ಇಂಥದ್ದರಲ್ಲಿ ಒಂದು ಕಡೆ ಜಾತಿ ಮೂಲಕ ಶೋಷಣೆ ಇನ್ನೊಂದು ಕಡೆ ಮೀಸಲಾತಿಯಲ್ಲಿ ಶೋಷಣೆ. ಹಾಗಾದರೆ ನಿಜವಾದ ಪರಿಶಿಷ್ಟರ ಉದ್ಧಾರ ಯಾವಾಗ? ಎನ್ನುವ ಪ್ರಶ್ನೆಯನ್ನು ಯಾರ ಬಳಿ ಕೇಳಬೇಕು ಸೂಕ್ಷ್ಮವಾಗಿ ಯೋಚಿಸಿ.

ಭಾರತದ ವಿಶ್ವವಿದ್ಯಾನಿಲಯಗಳು ಜಾತಿ ಸೃಷ್ಟಿಯ ಕೇಂದ್ರಗಳಾಗುತ್ತಿವೆ. ಮುನುಷ್ಯರನ್ನು ಸೃಷ್ಟಿಮಾಡುವ ತಾಣಗಳಾಗುತ್ತಿಲ್ಲ. ಹಿಂದೊಮ್ಮೆ ಇದೇ ಮಾತನ್ನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಗೆ ಕೇಳಿದ್ದಕ್ಕೆ ‘‘ಹೌದು ನಮ್ಮ ಜಾತಿಯವರನ್ನು ನಾವು ಬೆಳಸದೆ, ಮತ್ಯಾರು ಬೆಳೆಸುತ್ತಾರೆ?’’ ಎನ್ನುವ ಉತ್ತರ ನೀಡಿದ್ದರು. ಆದರೆ ಇಲ್ಲಿಯವರೆಗೆ ದಲಿತರು ದಲಿತರನ್ನೇ ಬೆಳಸಿರುವ ಉದಾಹರಣೆಗಳು ಕಡಿಮೆ. ಬಲಿತವರನ್ನು ಹೊಗಳಿಕೊಂಡು ತಮ್ಮತನವನ್ನು ಮಾರಿಕೊಂಡಿರುವವರೇ ಹೆಚ್ಚು. ಬಡ ದಲಿತ ಹುಡುಗನೊಬ್ಬ ಐಎಎಸ್ ಪಾಸು ಮಾಡಿಕೊಂಡು ಅಧಿಕಾರ ಹಿಡಿದರೆ ಅವನ ಸಮುದಾಯಕ್ಕೆ ಉಪಯೋಗ ಮಾಡುವುದಿರಲಿ, ತಾನು ಬದುಕಿ ಬಂದ ಊರನ್ನೂ ಬಿಡುವುದರ ಜೊತೆಗೆ ತನ್ನ ಹತ್ತಿರದ ಕುಟುಂಬದಿಂದಲೂ ದೂರವಾಗಿ ಉಳಿದುಬಿಡುತ್ತಾನೆ. ಆದರೂ ಅವನು ರಾಜಕಾರಣಿಗಳಿಂದ ಮತ್ತು ಮೇಲ್ವರ್ಗದಿಂದ ಶೋಷಣೆಯನ್ನು ಮಾನಸಿಕವಾಗಿ ಅನುಭವಿಸಬೇಕಾಗುತ್ತದೆ.

ಈ ಜಾತಿಗಳ ಸೃಷ್ಟಿಯೇ ನಾಚಿಕೆಗೇಡು. ಭಾರತವನ್ನು ಆಳಿದ ಅರಸರ ಪರಂಪರೆ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಲು ಕೆಲವರನ್ನು ನೇಮಿಸಿಕೊಂಡರು. ಅವರಿಗೆ ಒಂದೊಂದು ವೃತ್ತಿಯನ್ನು ಹಚ್ಚಿದರು. ಅದೇ ವೃತ್ತಿಯನ್ನು ಮಾಡುತ್ತಾ ಜೀವನ ಸಾಗಿಸಿದವರು ಜಾತಿಯ ಪಟ್ಟ ಕಟ್ಟಿಸಿಕೊಂಡು ಕೊನೆಗೆ ಬೀದಿಗೆ ಬಿದ್ದರು. ಆನಂತರ ಉಳ್ಳವರು, ಧರ್ಮಾಂಧರು ಮತ್ತು ಜಾತ್ಯಾಂಧರ ಶೋಷಣೆಯಲ್ಲಿ ತಮ್ಮತನವನ್ನು ಕಳೆದುಕೊಂಡು ಬದುಕಲು ಪ್ರಾರಂಭಿಸಿದರು. ಇವತ್ತಿಗೂ ಕೆಲವರು ಜಾತಿಯ ಹಳವಂಡದಲ್ಲೇ ಉಸಿರು ಬಿಡಲಾಗದೆ ಒದ್ದಾಟ ನಡೆಸಿದ್ದಾರೆ. ಜಗತ್ತು ವಿಜ್ಞಾನದ ಉಚ್ಛ್ರಾಯ ಸ್ಥಿತಿಯಲ್ಲಿದ್ದರೂ ಭಾರತದಲ್ಲಿ ಜಾತಿಯ ಭೂತ ತನ್ನ ಅಟ್ಟಹಾಸವನ್ನು ತೋರುತ್ತಲೇ ಇದೆ.

ಜಾತಿ ಎಲ್ಲಿದೆ? ಜಾತಿಯಲ್ಲ ಅದು ವೃತ್ತಿ ಎಂದು ಹೇಳುವುದಕ್ಕೆ ಯಾರ ನಾಲಗೆಯೂ ಸಿದ್ಧವಿಲ್ಲ. ಕಳೆದ ವಾರ ಸಂಸತ್ತಿನಲ್ಲಿ ತಮಿಳುನಾಡಿನ ಸಂಸದ ರಾಜಾ ಅವರು ಜಾತಿಗಳು ಹೇಗೆ ಹುಟ್ಟಿದವು ಎನ್ನುವುದಕ್ಕೆ ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಮಾತನಾಡಿದ್ದಾರೆ. ಈಗ ಚಾಲ್ತಿಯಲ್ಲಿರುವ ಜಾತಿಗಳೆಲ್ಲ ವೃತ್ತಿಯ ಆಧಾರದ ಮೇಲೆ ಹುಟ್ಟಿದವು ಎಂಬುದನ್ನು ಮನದಟ್ಟು ಮಾಡಿದ್ದಾರೆ. ಇತ್ತೀಚೆಗೆ ವಿಧಾನ ಸೌಧದಲ್ಲಿ ‘‘ದಲಿತ ಎನ್ನುವ ಪದ ನನಗೆ ನೂರು ಈಟಿಗಳಿಂದ ಚುಚ್ಚಿದ ನೋವಾಗಿದೆ’’ ಎಂದು ಕಾಂಗ್ರೆಸ್‌ನ ಶಾಸಕ ನರೇಂದ್ರಸ್ವಾಮಿ ಹೇಳುತ್ತಾರೆ. ಇಂತಹ ಅನುಭವ ಗೃಹಮಂತ್ರಿ ಜಿ. ಪರಮೇಶ್ವರರಿಗೂ ಆಗಿರುತ್ತದೆ. ಅಲ್ಲಿ ಕುಳಿತಿದ್ದ ದಲಿತ ಶಾಸಕರು ಮತ್ತು ಮಂತ್ರಿಗಳಿಗೂ ಆಗಿರುತ್ತದೆ. ಆದರೆ ನರೇಂದ್ರಸ್ವಾಮಿ ಮಾತ್ರ ಧ್ವನಿ ಎತ್ತಿದ್ದಾರೆ. ವಿರೋಧ ಪಕ್ಷವಾದ ಕಟ್ಟಾ ಹಿಂದುತ್ವವಾದಿ ಬಿಜೆಪಿಯ ಕೆಲವು ಶಾಸಕರು ದಲಿತರ ಹಣ ಎನ್ನುವುದನ್ನು ಪದೇ ಪದೇ ಉಚ್ಛರಿಸುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅಧಿಕಾರದ ಗದ್ದುಗೆಯಲ್ಲಿ ಇರುವವರನ್ನೇ ಜಾತಿಗಳು ಈ ಮಟ್ಟಿಗೆ ವ್ಯಂಗ್ಯ ಮಾಡುತ್ತಾ, ಅವಮಾನಿಸುತ್ತಿವೆ ಎಂದರೆ, ಸಾಮಾನ್ಯ ಶೋಷಿತನ ಕೇರಿಯಲ್ಲಿ ಅವನ ಬದುಕು ಹೇಗಿರುತ್ತದೆ ಎಂಬುದನ್ನು ಊಹೆ ಮಾಡಬೇಕಾದ್ದು ಇಂದಿನ ತುರ್ತು. ಪರಿಶಿಷ್ಟರು ತಮ್ಮ ಬೀದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಟ್ಟುಕೊಂಡು ಸಂಘಟನೆ ಕಟ್ಟಿಕೊಂಡು ಮೇಲ್ವರ್ಗದವರ ಕಣ್ಣಲ್ಲಿ ನಾವು ಯಾರಿಗೇನು ಕಮ್ಮಿ ಇಲ್ಲ ಎಂದು ಓಡಾಡುವುದು ತಾತ್ಕಾಲಿಕ ಅನಿಸುತ್ತದೆ. ಅಂಬೇಡ್ಕರ್ ಕನಸುಗಳನ್ನು ಮತ್ತು ಅವರ ಸಿದ್ಧಾಂತಗಳನ್ನು ಜಾರಿಗೆ ತರುವುದರ ಮೂಲಕ ಅವರು ಹೇಳಿಕೊಟ್ಟ ಹಾದಿಯಲ್ಲಿ ನಡೆಯುವುದು ಕೂಡ ಮಹತ್ವವಾದ ಸಂಗತಿ. ಇಲ್ಲಿಯವರೆಗೆ ಅಂಬೇಡ್ಕರ್ ಅವರ ಹಾದಿಯಲ್ಲಿ ಹೆಜ್ಜೆ ಹಾಕಿದವರ ಸಂಖ್ಯೆಯೇ ವಿರಳ. ಬಲಿಷ್ಠರನ್ನು ಎದುರಿಸಲು ಜ್ಞಾನ ಮತ್ತು ಕಾನೂನಿನ ಅಸ್ತ್ರಗಳು ಬೇಕು. ಅಂತಹ ಅಸ್ತ್ರಗಳನ್ನು ಪಡೆದುಕೊಳ್ಳಲು ಇತ್ತೀಚೆಗೆ ಪರಿಶಿಷ್ಟ ಯುವಕರಲ್ಲಿ ತಾತ್ಸಾರ ಮೂಡುತ್ತಿವೆ. ಇದಕ್ಕೆ ಕಾರಣ ಪರಿಶಿಷ್ಟರ ಕೇರಿಗಳನ್ನು ಹಾಳು ಮಾಡುತ್ತಿರುವ ಹೊಲಸು ರಾಜಕಾರಣ ಎಂಬುದನ್ನು ಹೇಳಬಹುದು.

ದಲಿತ, ಶೂದ್ರ, ಹೊಲೆಯ, ಪರಿಶಿಷ್ಟ ಎನ್ನುವ ಪದಗಳನ್ನು ಕೈಬಿಟ್ಟು ಭವ್ಯರು, ಮೂಲರು, ಭೂಮ್ಯಜರು ಎಂದರೆ ಸಾಕು ಅನಿಸುತ್ತದೆ. ಜಾತಿ ಕರೆಯಲೇಬೇಕು ಎಂದಾದರೆ ಪರ್ಯಾಯ ಹೊಸ ಪದವೊಂದನ್ನು ಚರ್ಚೆ ಮತ್ತು ಅಭಿಪ್ರಾಯಗಳ ಮೂಲಕ ಸೃಷ್ಟಿಸಿ ಬಳಸಬಹುದು. ಅದು ಯಾರನ್ನೂ ನೋಯಿಸದಂತೆ, ಅವಮಾನಿಸದಂತೆ ಇದ್ದರೆ ಉತ್ತಮ. ಇಷ್ಟಕ್ಕೂ ಶೋಷಿತರು ಮನುಷ್ಯರಲ್ಲವೇ? ವಿಪರ್ಯಾಸವೆಂದರೆ ದಲಿತ ಜಾತಿಯೊಳಗೆ ದಲಿತರು ಮಾತ್ರವೇ ಇಲ್ಲ. ನಿಜವಾದ ದಲಿತರನ್ನು ವಿರೋಧಿಸುವ ಜನಾಂಗವೂ ಸೇರಿಕೊಂಡು ತಮ್ಮ ವಿಕೃತಿಯನ್ನು ಮೆರೆಯುತ್ತಿವೆ. ಕಾಗೆಯ ಗೂಡಲ್ಲಿ ಕೋಗಿಲೆಗಳು ಮೊಟ್ಟೆ ಇಟ್ಟು ತಾಯ್ತನವನ್ನು ಅನುಭವಿಸುತ್ತಿವೆ. ನಿಜವಾದ ತಾಯಿಯ ಕರುಳ ಕೂಗು ಯಾರಿಗೂ ಮುಟ್ಟುತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹಳ್ಳಿವೆಂಕಟೇಶ್, ಹಾಸನ

contributor

Similar News