ಜಿಎಸ್‌ಟಿ ತೆರಿಗೆ ವಂಚನೆ ಯಾಕೆ ಸುದ್ದಿಯಾಗುತ್ತಿಲ್ಲ?

ಜಿಎಸ್‌ಟಿ ಬಂದಾಗಿನಿಂದಲೂ ಪ್ರತೀ ವರ್ಷವೂ ತೆರಿಗೆ ವಂಚನೆ ಆಗುತ್ತಲೇ ಇದೆ ಮತ್ತು ಇದು ಪ್ರತೀ ಸಲವೂ ಹಿಂದಿನ ವರ್ಷಕ್ಕಿಂತ ಹೆಚ್ಚುತ್ತಲೇ ಇದೆ. 2020ರಿಂದ ಈವರೆಗೆ 1.2 ಟ್ರಿಲಿಯನ್ ರೂ.ಗಳಷ್ಟು ತೆರಿಗೆ ವಂಚನೆ ಆಗಿದೆ ಎನ್ನುವುದನ್ನು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಪತ್ತೆ ಮಾಡಿದೆ. ಯಾವುದರಿಂದ ಮಹಾ ಸುಧಾರಣೆಯಾಗುತ್ತದೆ ಎಂದು ಬಡಾಯಿ ಕೊಚ್ಚಲಾಗಿತ್ತೋ ಅದೇ ಜಿಎಸ್‌ಟಿಯ ಕಾರಣದಿಂದಾಗಿ ದೊಡ್ಡ ಮಟ್ಟದ ತೆರಿಗೆ ವಂಚನೆ ನಡೆಯುತ್ತಿದೆ.

Update: 2024-10-22 04:56 GMT
Editor : Thouheed | Byline : ವಿನಯ್ ಕೆ.

ತೆರಿಗೆ ವಂಚನೆ ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ಜಿಎಸ್‌ಟಿಯನ್ನು ಪರಿಚಯಿಸುವಾಗ ಮೋದಿ ಸರಕಾರ ಏನೇನೆಲ್ಲ ಹೇಳಿತ್ತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು.

ಪ್ರಧಾನಿ ಮೋದಿಯವರಷ್ಟೇ ಅಲ್ಲ, ಅವರ ಬಿಜೆಪಿಯ ಮಂದಿ, ಭಕ್ತ ಪರಿವಾರದವರು, ಅವರ ಮಡಿಲ ಮೀಡಿಯಾಗಳು, ಅವುಗಳ ಆ್ಯಂಕರ್‌ಗಳು ತಲೆಯ ಮೇಲೆಯೇ ಹೊತ್ತುಕೊಂಡು ಜಿಎಸ್‌ಟಿಯನ್ನು ಕೊಂಡಾಡಿದ್ದವು. ದೇಶದ ಇತಿಹಾಸದಲ್ಲಿಯೇ ಇದರಿಂದ ಭಾರೀ ಸುಧಾರಣೆಯಾಗಲಿದೆ. ಏನೇನೋ ಅದ್ಭುತವಾಗಲಿದೆ ಎಂದಿದ್ದವು.

ದೇಶದ ಜನರ ಉಳಿತಾಯ ಹೆಚ್ಚಿಸಲು ಜಿಎಸ್‌ಟಿ ನೆರವಾಗುತ್ತದೆ ಎಂದು ಸ್ವತಃ ಮೋದಿ ಹೇಳಿದ್ದರು.

ಅದು ಬಡವರನ್ನು ಮೇಲೆತ್ತಲಿದೆ ಎಂದು ಅಮಿತ್ ಶಾ ಹೇಳಿದ್ದರು.

ಆದರೆ, ಬರೀ ಒಂದು ತೆರಿಗೆಯಿಂದ ಭಾರತದ ಅರ್ಥ ವ್ಯವಸ್ಥೆಯ ಇಡೀ ಸಮಸ್ಯೆಯೇ ದೂರವಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೇ ಆಗ ಯಾರೂ ಕೇಳಲಿಲ್ಲ ಅಥವಾ ಕೇಳುವುದಕ್ಕೆ, ಜಿಎಸ್‌ಟಿ ಪರವಾಗಿ ಪುಂಗಿ ಊದುತ್ತಿದ್ದವರು ಬಿಡಲೂ ಇಲ್ಲ.

ಜಿಎಸ್‌ಟಿ ಬಂದ ಮೇಲೆ ತೆರಿಗೆ ವಂಚನೆಗೆ ಅವಕಾಶವೇ ಇರುವುದಿಲ್ಲ ಎಂದೂ ಹೇಳಲಾಯಿತು. ಆದರೆ ಈಗ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ 2023-24ನೇ ಸಾಲಿನಲ್ಲಿ ಜಿಎಸ್‌ಟಿಯಲ್ಲಿ 2.37 ಲಕ್ಷ ಕೋಟಿ ರೂ.ಗಳ ತೆರಿಗೆ ವಂಚನೆ ಪತ್ತೆಯಾಗಿದೆ ಎಂದು ವರದಿ ಕೊಟ್ಟಿದೆ.

ಹಿಂದಿನ ಸಾಲಿನ ತೆರಿಗೆ ವಂಚನೆಗೆ ಹೋಲಿಸಿದರೆ ಈ ಸಲದ್ದು ದುಪ್ಪಟ್ಟು ಮತ್ತಿದು ಪ್ರತೀ ತಿಂಗಳೂ ಸಂಗ್ರಹವಾಗುವ ಜಿಎಸ್‌ಟಿಗಿಂತಲೂ ಹೆಚ್ಚು ಎಂಬುದನ್ನೂ ಅದು ಗುರುತಿಸಿದೆ.

2023-24ನೇ ಸಾಲಿನಲ್ಲಿ ಪ್ರತೀ ತಿಂಗಳೂ 1.68 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿತ್ತು. ಅಂದರೆ ಒಂದು ತಿಂಗಳಲ್ಲಿ ಬರುವ ತೆರಿಗೆಗಿಂತಲೂ ಹೆಚ್ಚು ಮೊತ್ತದ ತೆರಿಗೆ ಕಳವು ಒಂದು ವರ್ಷದಲ್ಲಿ ಆಗಿಹೋಗಿದೆ.

2023-24ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ 20 ಲಕ್ಷ ಕೋಟಿ ರೂ. ಆಗಿತ್ತು.ಎಷ್ಟು ಸಂಗ್ರಹವಾಗಿದೆಯೋ ಅದರ ಶೇ.10ರಷ್ಟು ತೆರಿಗೆ ವಂಚನೆ ಆಗಿದೆ.

2023-24ರ ಬಜೆಟ್‌ನ ಒಟ್ಟು ಗಾತ್ರ 45 ಲಕ್ಷ ಕೋಟಿ ರೂ.ಯದ್ದಾಗಿತ್ತು.ಎಷ್ಟು ಆದಾಯ ಬರಬೇಕೆಂದು ಸರಕಾರ ಲೆಕ್ಕ ಹಾಕಿತ್ತೋ ಅದರಲ್ಲಿ ಶೇ.5ರಷ್ಟು ತೆರಿಗೆ ವಂಚನೆ ರೂಪದಲ್ಲಿ ಇಲ್ಲವಾಗಿಬಿಟ್ಟಿದೆ.

ಇಲ್ಲಿ ಗಮನಿಸಬೇಕಿರುವ ಸಂಗತಿಯೊಂದಿದೆ.

ಇಷ್ಟು ತೆರಿಗೆ ಕಳವು ನಡೆದಿದೆ ಎನ್ನುವುದು ಈಗ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಕಣ್ಣಿಗೆ ಬಿದ್ದಿದ್ದರಿಂದ ಗೊತ್ತಾಗಿದೆ. ಹಾಗಾದರೆ ಪತ್ತೆಯಾಗದೆ ಇದ್ದಿರಬಹುದಾದ ತೆರಿಗೆ ವಂಚನೆ ಪ್ರಮಾಣವೂ ಸೇರಿದರೆ ಈ ಮೊತ್ತ ಇನ್ನೂ ದೊಡ್ಡದಾಗಲಿದೆ.

ಜಿಎಸ್‌ಟಿ ಬಂದಾಗಿನಿಂದಲೂ ಪ್ರತೀ ವರ್ಷವೂ ತೆರಿಗೆ ವಂಚನೆ ಆಗುತ್ತಲೇ ಇದೆ ಮತ್ತು ಇದು ಪ್ರತೀ ಸಲವೂ ಹಿಂದಿನ ವರ್ಷಕ್ಕಿಂತ ಹೆಚ್ಚುತ್ತಲೇ ಇದೆ.

2020ರಿಂದ ಈವರೆಗೆ 1.2 ಟ್ರಿಲಿಯನ್ ರೂ.ಗಳಷ್ಟು ತೆರಿಗೆ ವಂಚನೆ ಆಗಿದೆ ಎನ್ನುವುದನ್ನು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಪತ್ತೆ ಮಾಡಿದೆ.

ಯಾವುದರಿಂದ ಮಹಾ ಸುಧಾರಣೆಯಾಗುತ್ತದೆ ಎಂದು ಬಡಾಯಿ ಕೊಚ್ಚಲಾಗಿತ್ತೋ ಅದೇ ಜಿಎಸ್‌ಟಿಯ ಕಾರಣದಿಂದಾಗಿ ದೊಡ್ಡ ಮಟ್ಟದ ತೆರಿಗೆ ವಂಚನೆ ನಡೆಯುತ್ತಿದೆ.

ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ಎನ್ನುವುದು ದೇಶಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಏಕರೂಪದ ಪರೋಕ್ಷ ತೆರಿಗೆಯಾಗಿದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತೀ ಹಂತದಲ್ಲಿಯೂ ವಿಧಿಸುವ ತೆರಿಗೆ ಇದಾಗಿರುತ್ತದೆ.

ಜಿಎಸ್‌ಟಿಯಲ್ಲಿ ತೆರಿಗೆ ವಂಚನೆ ಅಥವಾ ತೆರಿಗೆ ಕಳವು ಹೇಗಾಗುತ್ತದೆ?

ಜಿಎಸ್‌ಟಿಯನ್ನು ನಿರ್ಧರಿಸುವಾಗ ಐದು ಹಂತಗಳನ್ನು ಮಾಡಲಾಗಿದೆ

ಅಗತ್ಯ ವಸ್ತುಗಳಿಗೆ ಶೂನ್ಯ ಪ್ರತಿಶತ ತೆರಿಗೆ

ಮೂಲಭೂತ ಅಗತ್ಯದ ವಸ್ತುಗಳಿಗೆ ಶೇ.5ರಷ್ಟು ತೆರಿಗೆ

ಸ್ಟ್ಯಾಂಡರ್ಡ್ ವಸ್ತುಗಳಿಗೆ ಶೇ.12ರಷ್ಟು ತೆರಿಗೆ

ಗ್ರಾಹಕ ಉತ್ಪನ್ನಗಳಿಗೆ ಶೇ.18 ತೆರಿಗೆ

ಲಕ್ಷುರಿ ವಸ್ತುಗಳಿಗೆ ಶೇ.28 ತೆರಿಗೆ

ಹೀಗಿರುವಾಗ, ಹೆಚ್ಚಿನ ತೆರಿಗೆಯ ವಸ್ತುಗಳನ್ನು ಕಡಿಮೆ ತೆರಿಗೆಯ ವಸ್ತುಗಳೆಂದು ತೋರಿಸುವ ಮೂಲಕ ತೆರಿಗೆ ವಂಚಿಸುವ ಕೆಲಸವಾಗುತ್ತದೆ.

ಅಂದರೆ ಸಂಬಂಧಿತ ಅಧಿಕಾರಿಗಳ ನೆರವು ಪಡೆದು ನಕಲಿ ಇನ್ವಾಯ್ಸ್ ಸೃಷ್ಟಿಸುವ ಮೂಲಕ ತೆರಿಗೆ ವಂಚನೆ ಮಾಡಲಾಗುತ್ತದೆ.

ಲಕ್ಷುರಿ ವಸ್ತುಗಳನ್ನು ಗ್ರಾಹಕ ಉತ್ಪನ್ನಗಳೆಂದು ತೋರಿಸುವ ಇನ್ವಾಯ್ಸ್ ಸೃಷ್ಟಿಸಿದರೆ ಶೇ.10ರಷ್ಟು ತೆರಿಗೆ ವಂಚನೆಯಾಗಿಬಿಡುತ್ತದೆ.

ಆನ್‌ಲೈನ್ ಗೇಮಿಂಗ್‌ನಲ್ಲೂ ಇದೇ ಬಗೆಯಲ್ಲಿ ತೆರಿಗೆ ವಂಚನೆ ನಡೆಯುತ್ತದೆ. ಅವುಗಳ ಮೇಲೆ ಎಷ್ಟು ತೆರಿಗೆ ಹೇರಲಾಗಿದೆಯೋ ಅಷ್ಟು ತೆರಿಗೆ ಅವುಗಳಿಂದ ವಸೂಲಾಗುತ್ತಿಲ್ಲ. ಹೀಗೆ ಅವುಗಳಿಂದ 57 ಸಾವಿರ ಕೋಟಿ ರೂ. ತೆರಿಗೆ ವಂಚನೆಯಾಗಿದೆ.

ಎಷ್ಟೇ ವಹಿವಾಟು ನಡೆದರೂ ದಾಖಲೆಗಳಲ್ಲಿ ಕಡಿಮೆ ತೋರಿಸುವ ಮೂಲಕ ತೆರಿಗೆ ಕಳವು ನಡೆಯುತ್ತದೆ. ಇದೆಲ್ಲವೂ ಎಲ್ಲ ಹಂತದಲ್ಲಿರುವವರು ಸೇರಿಕೊಂಡು ವ್ಯವಸ್ಥಿತವಾಗಿ ನಡೆಸುವ ದಂಧೆಯಾಗಿರುತ್ತದೆ. ಈ ದಂಧೆಯ ದೊಡ್ಡ ತಿಮಿಂಗಿಲಗಳೆಲ್ಲ ತಮ್ಮ ನೆಟ್‌ವರ್ಕ್ ಮೂಲಕವೇ ಎಲ್ಲವನ್ನೂ ವ್ಯವಸ್ಥಿತವಾಗಿ ಕಬಳಿಸಿ ಕಮಾಯಿ ಮಾಡಿಕೊಳ್ಳುವುದು ನಡೆಯುತ್ತದೆ. ಇದಲ್ಲದೆ ನಕಲಿ ಕಂಪೆನಿಗಳ ಸೃಷ್ಟಿ ಮಾಡಿಕೊಂಡೂ ತೆರಿಗೆ ಕಳವು ನಡೆಸಲಾಗುತ್ತದೆ.

ಮೋದಿಯವರ ಗುಜರಾತ್‌ನಲ್ಲಿಯೇ ಜಿಎಸ್‌ಟಿ ವಂಚನೆ ಕೇಸ್‌ಗಳು ನಡೆದಿವೆ. ಅಲ್ಲಿ 200 ನಕಲಿ ಕಂಪೆನಿಗಳು ಇಂತಹ ತೆರಿಗೆ ವಂಚನೆಯಲ್ಲಿ ತೊಡಗಿದ್ದುದು ಪತ್ತೆಯಾಗಿದೆ.

ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ವರದಿ ಹೇಳುವ ಪ್ರಕಾರ,

ಆನ್‌ಲೈನ್ ಗೇಮಿಂಗ್, ಬ್ಯಾಂಕಿಂಗ್ ಫೈನಾನ್ಸ್ ಸರ್ವೀಸಸ್ ಇನ್ಶೂರೆನ್ಸ್ (ಬಿಎಫ್‌ಎಸ್‌ಐ)ಯಂತಹ ವಲಯಗಳಲ್ಲಿ ಅತಿ ಹೆಚ್ಚು ಜಿಎಸ್‌ಟಿ ವಂಚನೆಯಾಗಿದೆ. ಪಾನ್ ಮಸಾಲಾ, ತಂಬಾಕು, ಸಿಗರೇಟ್ ಮತ್ತು ಬೀಡಿ ಇಂತಹ ಎಲ್ಲ ಕ್ಷೇತ್ರಗಳಲ್ಲಿ ತೆರಿಗೆ ವಂಚನೆ ನಡೆದಿದೆ.

ಆನ್‌ಲೈನ್ ಗೇಮಿಂಗ್ ಕಂಪೆನಿಗಳು ಜನರಿಗೆ ಒಂದು ರೀತಿಯಲ್ಲಿ ಜೂಜು ಆಡಿಸುವ ಅಡ್ಡೆಗಳಾಗಿವೆ. ಇವುಗಳಲ್ಲಂತೂ ಅತಿ ಹೆಚ್ಚು ಜಿಎಸ್‌ಟಿ ವಂಚನೆಯಾಗಿದೆ. ಇಂಥ ಕಂಪೆನಿಗಳಿಂದ ಆಗಿರುವ ತೆರಿಗೆ ವಂಚನೆ ಒಂದು ಲಕ್ಷ ಕೋಟಿ ರೂ. ಗಿಂತಲೂ ಹೆಚ್ಚು. ಇದರ ನಂತರದ ಸ್ಥಾನದಲ್ಲಿ ಬ್ಯಾಂಕಿಂಗ್ ಫೈನಾನ್ಸ್ ಮತ್ತು ಇನ್ಶೂರೆನ್ಸ್ ಬರುತ್ತದೆ.

ಬಿಎಫ್‌ಎಸ್‌ಐ ಉದ್ಯಮದಲ್ಲಿ ಒಟ್ಟು 171 ಪ್ರಕರಣಗಳಿಂದ ಸುಮಾರು 19,000 ಕೋಟಿ ರೂ. ಮೌಲ್ಯದ ತೆರಿಗೆ ವಂಚನೆ ಆಗಿರುವುದು ಪತ್ತೆಯಾಗಿದೆ.

ವಿದೇಶಿ ಕಂಪೆನಿಗಳು ಸಾವಿರ ಕೋಟಿ ರೂ. ಜಿಎಸ್‌ಟಿ ವಂಚಿಸಿವೆ. ಮನಿ ಲಾಂಡರಿಂಗ್ ಕೂಡ ನಡೆದಿದೆ.

ನಕಲಿ ಬಿಲ್ ಸೃಷ್ಟಿಸುವವರು, ನಕಲಿ ಕಂಪೆನಿಗಳನ್ನು ಮಾಡುವವರು ತೆರಿಗೆ ಕಳವು ಮಾಡುತ್ತಾರೆ ಮತ್ತು ಇವರೆಲ್ಲ ಸಾಕಷ್ಟು ಹಣವುಳ್ಳವರೇ ಆಗಿದ್ದಾರೆ, ಶ್ರೀಮಂತರೇ ಆಗಿದ್ದಾರೆ. ಇವರೆಲ್ಲ ಸರಕಾರದ ಅಧಿಕಾರಿಗಳ ಜೊತೆಗೆ ಒಳ್ಳೆಯ ವ್ಯಾವಹಾರಿಕ ಸಂಬಂಧವಿಟ್ಟುಕೊಂಡೇ, ಅವರ ಷಾಮೀಲಿನ ಮೂಲಕವೇ ಇದನ್ನೆಲ್ಲ ಮಾಡುತ್ತಾರೆ. ತಮ್ಮ ಭ್ರಷ್ಟಾಚಾರಕ್ಕಾಗಿ ಅಧಿಕಾರಿಯ ಭ್ರಷ್ಟತೆಯನ್ನು ಬಳಸಿಕೊಳ್ಳುತ್ತಾರೆ. ಹೀಗೆ ಅದೊಂದು ಭ್ರಷ್ಟಾಚಾರಿಗಳ ನೆಟ್‌ವರ್ಕ್ ಆಗಿರುತ್ತದೆ. ಭ್ರಷ್ಟ ಉದ್ಯಮಿ, ಭ್ರಷ್ಟ ಅಧಿಕಾರಿ, ಭ್ರಷ್ಟ ನಾಯಕ - ಈ ಮೂವರೂ ಸೇರಿ ಈ ವಂಚನೆ ದಂಧೆಯನ್ನು ವ್ಯವಸ್ಥಿತವಾಗಿ ನಡೆಸುತ್ತಾರೆ.ಸರಕಾರಕ್ಕೆ ಹೋಗಬೇಕಿದ್ದ ಹಣ ಹೀಗೆ ತೆರಿಗೆ ವಂಚನೆ ಮೂಲಕ ಗುಳುಂ ಆಗುತ್ತದೆ. ಜನಸಾಮಾನ್ಯರು ಮಾತ್ರ ತಾವು ಖರೀದಿಸುವ ಪ್ರತೀ ಉತ್ಪನ್ನ ಹಾಗೂ ಸೇವೆಗೂ ತೆರಿಗೆ ಕಟ್ಟಿ ಕಟ್ಟಿ ಹೈರಾಣಾಗುತ್ತಿದ್ದಾರೆ.

ರಾತ್ರೋರಾತ್ರಿ ನೋಟ್ ಬ್ಯಾನ್ ಘೋಷಿಸುವಾಗ ಮೋದಿಯವರು, ಅವರ ಸರಕಾರ, ಅವರ ಪಕ್ಷದ ನಾಯಕರು, ಐಟಿ ಸೆಲ್ ಹಾಗೂ ಮಡಿಲ ಮೀಡಿಯಾಗಳು ಇಡೀ ದೇಶದಲ್ಲಿ ಕಪ್ಪು ಹಣ ಸಂಪೂರ್ಣ ಇಲ್ಲವಾಗಿಬಿಡುತ್ತದೆ, ಕಾಶ್ಮೀರದಲ್ಲಿ ಭಯೋತ್ಪಾದನೆ ಇಲ್ಲವಾಗಿಬಿಡುತ್ತದೆ, ಕಪ್ಪು ಹಣದ ಕುಳಗಳು ಬೀದಿಗೆ ಬೀಳ್ತಾರೆ, ಇಡೀ ಅರ್ಥ ವ್ಯವಸ್ಥೆ ಸಂಪೂರ್ಣ ಶುದ್ಧವಾಗಿ ಜನರ ಬದುಕು ಹಸನಾಗುತ್ತದೆ ಎಂದು ಹೇಳಿದ್ದೇ ಹೇಳಿದ್ದು. ಆದರೆ ಆಗಿದ್ದೇನು?

ಬ್ಯಾನ್ ಆದ ಅಷ್ಟೂ ನೋಟು ಬಂದು ಬ್ಯಾಂಕಿಗೆ ತಲುಪಿತು. ಶ್ರೀಮಂತರು ಆರಾಮವಾಗಿ ನೋಟು ಬದಲಾಯಿಸಿಕೊಂಡರು. ಹಾಗಾದರೆ ಕಪ್ಪು ಹಣ ಎಲ್ಲಿಗೆ ಹೋಯಿತು?

ಆದರೆ ನೋಟು ಬ್ಯಾನ್‌ನಿಂದಾಗಿ ಜನಸಾಮಾನ್ಯರು ಭಿಕ್ಷುಕರ ಹಾಗೆ ಬೀದಿಗೆ ಬಿದ್ದರು. ತಮ್ಮದೇ ದುಡ್ಡು ಪಡೆಯಲು ಅಂಗಲಾಚುವ ಸ್ಥಿತಿಗೆ ತಲುಪಿದರು. ನೂರಾರು ಮಂದಿ ಪ್ರಾಣ ಕಳಕೊಂಡರು. ಸಾವಿರಾರು ಸಣ್ಣ, ಮಧ್ಯಮ ವ್ಯಾಪಾರಗಳು ಸರ್ವನಾಶವಾದವು. ಕೋಟ್ಯಂತರ ಮಂದಿ ಉದ್ಯೋಗ ಕಳಕೊಂಡು ದಿವಾಳಿಯಾದರು.

ನೋಟ್‌ಬ್ಯಾನ್ ಆಗಿ ವರ್ಷ ಎಂಟಾದರೂ ಇವತ್ತಿಗೂ ಅದರ ದುಷ್ಪರಿಣಾಮ ನಮ್ಮ ಆರ್ಥಿಕತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.

ಮೋದಿಯವರು ತಂದ ಹೊಸ ಎರಡು ಸಾವಿರದ ನೋಟು ಕಪ್ಪು ಹಣ ದಂಧೆಗೆ ಮೂಲವಾಯಿತು. ಅದರಿಂದಲೇ ಭಯೋತ್ಪಾದನೆ, ಅಕ್ರಮ ಚಟುವಟಿಕೆ ಹೆಚ್ಚುತ್ತಿದೆ, ಅದನ್ನು ನಿಲ್ಲಿಸಿಬಿಡಿ ಎಂದು ಬಿಜೆಪಿ ಸಂಸದರೇ ಸಂಸತ್ತಲ್ಲಿ ಬೇಡಿಕೊಂಡರು. ಕೊನೆಗೆ ಆ ಎರಡು ಸಾವಿರದ ನೋಟನ್ನು ನಿಲ್ಲಿಸಲಾಯಿತು. ಆದರೆ ನೋಟ್‌ಬ್ಯಾನ್‌ನ ಘೋರ ವೈಫಲ್ಯ ಹಾಗೂ ಭಾರೀ ದೊಡ್ಡ ಹಗರಣದ ಬಗ್ಗೆ ಎಲ್ಲೂ ಚರ್ಚೆಯೇ ಇಲ್ಲ.

ಜಿಎಸ್‌ಟಿಯದ್ದೂ ಅದೇ ಕತೆ. ಜಿಎಸ್‌ಟಿಯನ್ನು ಅವತ್ತು ಹಾಡಿ ಹೊಗಳಿದ ಯಾರೂ ಈ ಕರಾಳ ಕಥೆಯನ್ನು ಮಾತ್ರ ಹೇಳುತ್ತಲೇ ಇಲ್ಲ.

ಮಡಿಲ ಮೀಡಿಯಾಗಳಂತೂ ಜನರು ಯಾವ ವಿಷಯದ ಬಗ್ಗೆ ಮಾತಾಡಬೇಕೆಂದು ಬಯಸುತ್ತಾರೋ ಆ ವಿಷಯದ ಬಗ್ಗೆ ಸದಾ ಜಾಣ ಕುರುಡು ಮತ್ತು ಜಾಣ ಕಿವುಡು ಪ್ರದರ್ಶಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News