ರಾಜ್ಯದ ಈ ಜಿಲ್ಲೆ ಶೈಕ್ಷಣಿಕವಾಗಿ ಸದಾ ಹಿಂದೆ ಯಾಕೆ?

Update: 2024-05-17 06:12 GMT

ನಾವು ಕಳೆದ ಹತ್ತು ವರ್ಷಗಳ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಉಡುಪಿ, ದಕ್ಷಿಣ ಕನ್ನಡದಂತಹ ಜಿಲ್ಲೆಗಳು ರ್ಯಾಂಕ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಹೆಚ್ಚು ಕಡಿಮೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳು ಕೊನೆಯ ಕೆಲವು ಸ್ಥಾನಗಳಲ್ಲಿ ಖಾಯಂ ಆಗಿರುತ್ತವೆ. ಅದರಲ್ಲೂ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆ ಕಳೆದ ಕೆಲವು ವರ್ಷಗಳಿಂದ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನವನ್ನು ಪಡೆಯುತ್ತಾ ಬರುತ್ತಿದೆ. ಈ ಸಂಬಂಧ ನಾಗರಿಕರು ಮತ್ತು ಮಾಧ್ಯಮಗಳು ಸರಕಾರದ ಗಮನ ಸೆಳೆಯಲು ಸಾಕಷ್ಟು ಕಸರತ್ತು ನಡೆಸಿದರೂ ಯಾವುದೇ ರೀತಿಯ ಉಪಯೋಗವಾದಂತೆ ಕಾಣುತ್ತಿಲ್ಲ. ಇತ್ತೀಚೆಗೆ ಪ್ರಕಟವಾದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಸಹ ಯಾದಗಿರಿ ಜಿಲ್ಲೆ ಎಂದಿನಂತೆ ಕೊನೆಯ ಸ್ಥಾನವನ್ನು ಪಡೆದಿದೆ. ಮತ್ತದೇ ಚರ್ಚೆ, ಮತ್ತದೇ ಜಾಣ ಮರೆವು, ಮತ್ತದೇ ಫಲಿತಾಂಶ. ಆದರೆ ಈ ಬಾರಿ ಈ ವಿಚಾರದಲ್ಲಿ ಯಾದಗಿರಿಯ ಜನರು ಸ್ವಲ್ಪ ಎಚ್ಚೆತ್ತಂತೆ ಕಾಣುತ್ತಿದ್ದಾರೆ. ಅಲ್ಲಿನ ಶೈಕ್ಷಣಿಕ ತಜ್ಞರು ಇದರ ಕುರಿತು ಚರ್ಚೆ ಮಾಡಲು ಆರಂಭಿಸಿದ್ದಾರೆ. ಆದರೆ ಕೇಳಿಸಿಕೊಳ್ಳಲು ಯಾರಿಗೂ ಇಲ್ಲಿ ಸಮಯವಿಲ್ಲ. ಎಲ್ಲರೂ ಚುನಾವಣಾ ರಾಜಕೀಯದಲ್ಲಿ ಮಗ್ನರಾಗಿದ್ದಾರೆ. ರಾಜಧಾನಿಯಿಂದ ಬಹಳ ದೂರ ಇರುವ ಈ ಜಿಲ್ಲೆಯ ಕೂಗು ನಾಯಕರಿಗೆ ಸುಲಭವಾಗಿ ಕೇಳುವುದಿಲ್ಲ.

ಈ ಬಾರಿಯ ಎಸೆಸೆಲ್ಸಿ ಫಲಿತಾಂಶದ ರಾಜ್ಯ ರ್ಯಾಂಕಿಂಗ್ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿದಿದೆ. ಶೇ. 75.49ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಬಿ ಗ್ರೇಡ್‌ನಲ್ಲಿದ್ದ ಜಿಲ್ಲೆ ಶೇ.78.69ರಷ್ಟು ಫಲಿತಾಂಶ ಪಡೆದು 35ನೇ ಸ್ಥಾನದಲ್ಲಿತ್ತು. ಆದರೆ, ಕಳೆದ ವರ್ಷದ ಫಲಿತಾಂಶಗಳಿಗೆ ಹೋಲಿಸಿದರೆ, ಈ ಸಲ ಉತ್ತೀರ್ಣತೆ ಶೇಕಡಾ 3.02ರಷ್ಟು ಕಡಿಮೆಯಾಗಿದೆ. ಯಾದಗಿರಿ ಜಿಲ್ಲೆಯ 16,157 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11,935 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 8,231 ಹುಡುಗರಲ್ಲಿ 5,722 (ಶೇ. 69.52) ಮಂದಿ ಉತ್ತೀರ್ಣರಾಗಿದ್ದಾರೆ ಮತ್ತು 7,926 ಹುಡುಗಿಯರಲ್ಲಿ 6,213 (ಶೇ. 78.32) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಎ ಶ್ರೇಣಿ ಪಡೆದಿರುವ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದ್ದು, ಬಿ ಶ್ರೇಣಿ ಪಡೆದವರ ಸಂಖ್ಯೆ ಹೆಚ್ಚಿದೆ.

ಯಾದಗಿರಿ ಜಿಲ್ಲೆ ಹೇಳಿ-ಕೇಳಿ ಒಂದು ಅತ್ಯಂತ ಹಿಂದುಳಿದ ಜಿಲ್ಲೆ. ಮಾನವ ಅಭಿವೃದ್ಧಿ ವರದಿಯಲ್ಲಿ ಈ ಜಿಲ್ಲೆಯ ಸಾಧನೆ ಬಹಳ ಕಳಪೆ ಇದೆ. ಶಿಕ್ಷಣ, ಆರೋಗ್ಯ ಮತ್ತಿತರ ವಿಚಾರಗಳಲ್ಲೂ ಈ ಜಿಲ್ಲೆ ಬಹಳ ಹಿಂದೆ ಉಳಿದಿದೆ ಎಂದು ಎನ್‌ಎಸ್‌ಎಸ್‌ಒ ವರದಿ ಹೇಳುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಣುತ್ತಿದೆ. ಈ ಜಿಲ್ಲೆಗೆ ಮಂಜೂರಾದ ಒಟ್ಟು ಶಿಕ್ಷಕರ ಸಂಖ್ಯೆ 1,435. ಇದರಲ್ಲಿ 760 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಸುಮಾರು 675 ಶಿಕ್ಷಕರ ಹುದ್ದೆ ಖಾಲಿ ಇದೆ!. ಬೇರೆ ಜಿಲ್ಲೆಯ ಶಿಕ್ಷಕರು ಈ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಆದರೆ ಯಾದಗಿರಿ ಜಿಲ್ಲೆಯ ಶಿಕ್ಷಕರು ಬೇರೆ ಹತ್ತಿರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಸದಾ ಸಿದ್ಧರಿರುತ್ತಾರೆ ಎನ್ನುವ ಮಾತು ಇದೆ. ಜಿಲ್ಲೆಯ ಎರಡು ಸರಕಾರಿ ಮತ್ತು 6 ಅನುದಾನ ರಹಿತ ಶಾಲೆಗಳು ಈ ಬಾರಿ ಶೂನ್ಯ ಫಲಿತಾಂಶ ಪಡೆದಿರುವುದು ಎಲ್ಲರಿಗೂ ತಲೆನೋವು ತಂದಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ಈ ಬಾರಿ ಹೆಚ್ಚಿನ ಮಕ್ಕಳು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುತ್ತೀರ್ಣಗೊಂಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ಜಿಲ್ಲೆಯಲ್ಲಿ ಖಾಸಗಿ ಕೋಚಿಂಗ್ ಕೇಂದ್ರಗಳ ಸಂಖ್ಯೆ ಬಹಳ ಕಡಿಮೆ. ಹೆಚ್ಚಿನ ಪೋಷಕರು ಇಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವುದರಿಂದ ಮಕ್ಕಳನ್ನು ಖಾಸಗಿ ತರಬೇತಿ ಕೇಂದ್ರಕ್ಕೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಯಾವುದೇ ಪ್ರಮುಖ ತರಬೇತಿ ಕೇಂದ್ರಗಳು ಈ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಕನಿಷ್ಠ ಖಾಸಗಿ ತರಬೇತಿ ಇದ್ದರೆ ಶಾಲೆಯ ಕೊರತೆಯನ್ನು ಅನುಕೂಲಸ್ಥ ಕುಟುಂಬದ ಆಸಕ್ತ ಮಕ್ಕಳು ತುಂಬಿಕೊಳ್ಳಲು ಸಾಧ್ಯ. ಇದರೊಂದಿಗೆ ಇನ್ನೊಂದು ವಿಚಾರ ಕೇಳಿ ಬರುತ್ತಿದ್ದು ಇಲ್ಲಿನ ಅಲ್ಪಸ್ವಲ್ಪ ಪ್ರತಿಭಾವಂತ ಮಕ್ಕಳು ಪ್ರೌಢಶಾಲೆಯ ಆರಂಭದ ಹಂತದಲ್ಲೇ ಮಂಗಳೂರು, ಉಡುಪಿ, ಧಾರವಾಡ ಮತ್ತು ಮೈಸೂರು ಇತ್ಯಾದಿ ಜಿಲ್ಲೆಗಳಿಗೆ ಉತ್ತಮ ಶಿಕ್ಷಣಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇದು ಯಾದಗಿರಿ ಜಿಲ್ಲೆಗೆ ಮತ್ತೊಂದು ದೊಡ್ಡ ಹೊಡೆತವಾಗಿದೆ.

ಶಿಕ್ಷಕರ ಕೊರತೆ ಒಂದು ಸಮಸ್ಯೆ. ಆದರೆ ಇರುವ ಶಿಕ್ಷಕರ ಅನಿಮಿಯತ ಗೈರು ಹಾಜರಾತಿ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎನ್ನುತ್ತಾರೆ ಸ್ಥಳೀಯರು. ಹಬ್ಬದದಿನಗಳು ಇತ್ಯಾದಿ ಕಾರಣಗಳಿಂದ ರಜೆ ಹಾಕಿ ತಮ್ಮ ಊರಿಗೆ ಹೋದ ಶಿಕ್ಷಕರು ಹೆಚ್ಚಿನ ಬಾರಿ ಸಕಾಲದಲ್ಲಿ ಬರುವುದಿಲ್ಲ. ಮತ್ತೊಂದೆಡೆ ಶಿಕ್ಷಕರನ್ನು ಪ್ರಶ್ನಿಸಿದರೆ ಮಕ್ಕಳಿಗೆ ತೊಂದರೆ ಎನ್ನುವ ಮನೋಭಾವನೆ ಕೆಲವು ಪೋಷಕರಲ್ಲಿ ಇದೆ. ಶಿಕ್ಷಕರೇ ಮುಖ್ಯ ಶಿಕ್ಷಕರನ್ನು ಎದುರಿಸುವ-ಬೆದರಿಸುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಶಿಕ್ಷಕರೇ ಪಾನಮತ್ತರಾಗಿ ಶಾಲೆಗೆ ಬರುವ ಘಟನೆಗಳಿಗೂ ಈ ಜಿಲ್ಲೆಯಲ್ಲಿ ಕಡಿಮೆ ಏನಿಲ್ಲ. ಯಾದಗಿರಿಯ ಹೆಚ್ಚಿನ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಇಂದಿಗೂ ರಚನೆಯಾಗಿಲ್ಲ. ಇದ್ದರೂ ಸಕಾಲದಲ್ಲಿ ಇವುಗಳ ಮೀಟಿಂಗ್ ನಡೆಯುವುದಿಲ್ಲ. ಎಸ್‌ಡಿಎಂಸಿ ಮತ್ತು ಶಾಲೆಯ ಮಧ್ಯೆ ಸರಿಯಾಗಿ ಹೊಂದಾಣಿಕೆ ಇಲ್ಲದಿರುವುದರಿಂದ ಮಕ್ಕಳಿಗೆ ಬಿಸಿ ಊಟ ವ್ಯವಸ್ಥೆಗೂ ಸಮಸ್ಯೆ ಇದೆ. ಮೇಲಿನ ಅಧಿಕಾರಿಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಇರುವ ಅಲ್ಪಸಲ್ಪ ಶಿಕ್ಷಕರನ್ನು ಸಹ ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದು ಈ ಸಮಸ್ಯೆಯ ಇನ್ನೊಂದು ಮುಖ. ಕೆಲವು ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಕಾರ್ಯದ ಒತ್ತಡ. ಹೆಚ್ಚಿನ ಖಾಸಗಿ ಶಾಲೆಗಳು ಅರ್ಹತೆ ಇಲ್ಲದಿರುವ ಶಿಕ್ಷಕರನ್ನು ಕಡಿಮೆ ವೇತನಕ್ಕೆ ನೇಮಿಸಿಕೊಂಡಿರುವುದು ಕಂಡು ಬರುತ್ತದೆ ಎನ್ನುತ್ತಾರೆ ಸ್ಥಳೀಯರು.

ರಾಜ್ಯದ ಕೆಲವು ಜಿಲ್ಲೆಗಳು ಶೈಕ್ಷಣಿಕ ಹಿಂದುಳಿದಿರುವಿಕೆಯ ಕಾರಣ ಹುಡುಕುತ್ತಾ ಹೋದರೆ ಮಗದೊಂದು ಚಿತ್ರಣ ಕಂಡುಬರುತ್ತದೆ. ಸಾಮಾಜಿಕ-ಆರ್ಥಿಕ, ಮೂಲಸೌಕರ್ಯ ಮತ್ತು ನೀತಿ-ಸಂಬಂಧಿತ ಸಮಸ್ಯೆಗಳು ಎದ್ದು ಕಾಣುತ್ತವೆ. ಬಡತನವು ಮಕ್ಕಳನ್ನು ತಮ್ಮ ಕುಟುಂಬಗಳನ್ನು ಬೆಂಬಲಿಸಲು ಮತ್ತು ಶಾಲಾ ಹಾಜರಾತಿಯನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಮಕ್ಕಳು ಅರ್ಧಕ್ಕೆ ಶಾಲೆ ಬಿಡಲು ಕಾರಣವಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಸಂಪತ್ತಿನ ವಿತರಣೆಯಲ್ಲಿನ ಸಮಾನತೆ ಹೊಂದಿಲ್ಲ. ಯಾದಗಿರಿಯಂತಹ ಬಡ ಜಿಲ್ಲೆಗಳು ಶಿಕ್ಷಣಕ್ಕಾಗಿ ಕಡಿಮೆ ಹಣವನ್ನು ಸರಕಾರಗಳಿಂದ ಪಡೆಯುತ್ತವೆ. ರಾಜ್ಯದ ಹಲವು ಹಿಂದುಳಿದ ಜಿಲ್ಲೆಗಳು ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿಲ್ಲ. ಕೆಲವೆಡೆ ಇಂದಿಗೂ ಮಕ್ಕಳಿಗೆ ಶಿಕ್ಷಣದ ಪ್ರವೇಶವು ಕಷ್ಟಕರವಾಗಿದೆ. ಅಸ್ತಿತ್ವದಲ್ಲಿರುವ ಶಾಲೆಗಳಲ್ಲಿ ವಿದ್ಯುತ್, ಶುದ್ಧ ಕುಡಿಯುವ ನೀರು, ಶೌಚಾಲಯಗಳು ಮತ್ತು ಸರಿಯಾದ ತರಗತಿ ಕೊಠಡಿಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅಸಮರ್ಪಕ ಸಾರಿಗೆ ಸಮಸ್ಯೆಯಿಂದ ದೂರದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತಲುಪಲು ಕಷ್ಟಕರವಾಗಿದೆ. ಹಿಂದುಳಿದ ಜಿಲ್ಲೆಗಳು ಅರ್ಹ ಮತ್ತು ತರಬೇತಿ ಪಡೆದ ಶಿಕ್ಷಕರ ಕೊರತೆಯಿಂದ ಕಳಪೆ ಶೈಕ್ಷಣಿಕ ಫಲಿತಾಂಶ ಪಡೆಯುತ್ತಿವೆ. ಇದು ಶಿಕ್ಷಣದ ನಿರಂತರತೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಹಿಂದುಳಿದ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಅಂಶಗಳು ಮತ್ತು ಲಿಂಗ ಪೂರ್ವಾಗ್ರಹಗಳು ಹೆಚ್ಚಾಗಿ ಬಾಲಕಿಯರಿಗಿಂತ ಹುಡುಗರ ಶಿಕ್ಷಣಕ್ಕೆ ಆದ್ಯತೆ ನೀಡುತ್ತವೆ ಎನ್ನುತ್ತವೆ ಸಂಶೋಧನೆಗಳು. ಇದು ಹುಡುಗಿಯರಲ್ಲಿ ಕಡಿಮೆ ಸಾಕ್ಷರತೆ ಮತ್ತು ಶೈಕ್ಷಣಿಕ ಸಾಧನೆಗೆ ಕಾರಣವಾಗುತ್ತದೆ. ಜಾತಿ ಮತ್ತು ಬುಡಕಟ್ಟು ಸ್ಥಾನಮಾನದ ಆಧಾರದ ಮೇಲೆ ತಾರತಮ್ಯವು ಅಂಚಿನಲ್ಲಿರುವ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣದ ಪ್ರವೇಶಕ್ಕೆ ಅಡ್ಡಿಯಾಗುತ್ತಿದೆ. ಅಧಿಕಾರಶಾಹಿಯ ಅಸಮರ್ಥತೆ ಮತ್ತು ಭ್ರಷ್ಟಾಚಾರದಿಂದಾಗಿ ಶಿಕ್ಷಣವನ್ನು ಸುಧಾರಿಸಲು ಉದ್ದೇಶಿಸಿರುವ ನೀತಿಗಳು ಮತ್ತು ಯೋಜನೆಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಹಿಂದುಳಿದ ಜಿಲ್ಲೆಗಳ ಮಕ್ಕಳಲ್ಲಿ ಹೆಚ್ಚಿನ ಮಟ್ಟದ ಅಪೌಷ್ಟಿಕತೆ ಮತ್ತು ಕಳಪೆ ಆರೋಗ್ಯವು ಅರಿವಿನ ಬೆಳವಣಿಗೆ ಮತ್ತು ಮಕ್ಕಳ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತದೆ. ಅನೈರ್ಮಲ್ಯವು ಹೆಚ್ಚಿನ ಪ್ರಮಾಣದ ಅನಾರೋಗ್ಯಕ್ಕೆ ಕಾರಣವಾಗಬಹುದು. ಇದು ಮಕ್ಕಳ ಗೈರುಹಾಜರಿಗೂ ಕಾರಣವಾಗುತ್ತದೆ. ಶಿಕ್ಷಣದಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ. ಕಡಿಮೆ ಸಾಕ್ಷರತೆಯ ಮಟ್ಟವನ್ನು ಹೊಂದಿರುವ ಪಾಲಕರು ಶಿಕ್ಷಣವನ್ನು ಹೆಚ್ಚಾಗಿ ಗೌರವಿಸುವುದಿಲ್ಲ ಅಥವಾ ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಅವರ ಮಕ್ಕಳು ಶಾಲಾ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹ ಪಡೆಯುವುದು ಕಡಿಮೆ. ಹೆಚ್ಚಿನ ಪೋಷಕರಿಗೆ ತಮ್ಮ ಮಕ್ಕಳಿಗೆ ಲಭ್ಯವಿರುವ ಶೈಕ್ಷಣಿಕ ಅವಕಾಶಗಳು ಮತ್ತು ಸರಕಾರದ ಯೋಜನೆಗಳ ಬಗ್ಗೆ ಅರಿವಿನ ಕೊರತೆಯಿದೆ.

ಅಂತಿಮವಾಗಿ ಮುಖ್ಯವಾಗಿ ಪ್ರೌಢಶಾಲೆಯ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಸರಿಯಾದ ಕಲಿಕೆ ಮತ್ತು ಸೌಲಭ್ಯಗಳನ್ನು ಒದಗಿಸಿಕೊಟ್ಟರೆ 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಲು ಸಾಧ್ಯ. ಕೇವಲ ಮಕ್ಕಳು ಹತ್ತನೇ ತರಗತಿ ಬಂದ ನಂತರ ಯಾದಗಿರಿಯಂತಹ ಜಿಲ್ಲೆಗಳಲ್ಲಿ ವಿಶೇಷ ತರಬೇತಿ ಮತ್ತು ಇತರ ಕಾರ್ಯಕ್ರಮಗಳನ್ನು ದಿಢೀರ್ ಎಂದು ಹಮ್ಮಿಕೊಂಡು ರಾತ್ರೋ ರಾತ್ರಿ ಉತ್ತಮ ಫಲಿತಾಂಶದ ನಿರೀಕ್ಷೆಯನ್ನು ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಬಹಳ ಮುಖ್ಯ ಶಿಕ್ಷಕರು ಕಾಯಾ-ವಾಚಾ-ಮನಸಾ ಬೋಧನೆಯಲ್ಲಿ ತೊಡಗಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಣೆ ಮಾಡಲು ಸಾಧ್ಯ. ಇದರೊಂದಿಗೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈ ವರ್ಷದಿಂದ ಇಲಾಖೆಯು ಹತ್ತು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಪರೀಕ್ಷೆಯಲ್ಲಿ ನಕಲು ಮಾಡುವ ಪ್ರಕ್ರಿಯೆ ನಿಂತು ಹೋಗಿದೆ. ಬಾಡಿ ಕ್ಯಾಮರಾ, ಭದ್ರತೆ, ಸಿಸಿಟಿವಿ, ವೆಬ್ ಕ್ಯಾಸ್ಟಿಂಗ್ ಮುಂತಾದ ಆಧುನಿಕ ತಂತ್ರಗಳನ್ನು ಈಗ ಬಳಸಿರುವುದರಿಂದ ರಾಜ್ಯದಲ್ಲಿ ಫಲಿತಾಂಶ ಕಡಿಮೆ ಬರಲು ಒಂದು ಕಾರಣವೆಂದು ಇದೀಗ ವಿಶ್ಲೇಷಣೆ ಮಾಡಲಾಗುತ್ತಿದೆ. ಇಂತಹ ವಿಚಾರಗಳಿಗೆ ಹಣ ಖರ್ಚು ಮಾಡುವುದರ ಬದಲಾಗಿ ಗುಣಾತ್ಮಕ ಶಿಕ್ಷಣಕ್ಕೆ ಹಣವನ್ನು ಖರ್ಚು ಮಾಡಿದ್ದಾರೆ ಫಲಿತಾಂಶ ಇನ್ನು ಹೆಚ್ಚು ಸುಧಾರಿಸಬಹುದು ಎನ್ನುವ ಇನ್ನೊಂದು ವಾದವೂ ಇದೆ. ಸಮುದಾಯ, ಸಮಾಜ ಮತ್ತು ಕುಟುಂಬ ಈ ವಿಚಾರದಲ್ಲಿ ಒಟ್ಟಾಗಿ ಕೈ ಜೋಡಿಸಬೇಕಾಗಿದೆ. ಕೂಡಲೇ ಯಾದಗಿರಿ ಜಿಲ್ಲಾಡಳಿತ ಇದರ ಬಗ್ಗೆ ಯೋಚಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಡಿ.ಸಿ. ನಂಜುಂಡ

contributor

Similar News