ಈ ವಿನಾಯಿತಿ ಪ್ರಜ್ಞಾ ಸಿಂಗ್‌ಗೆ ಮಾತ್ರ ಯಾಕೆ ಸಿಗುತ್ತಿದೆ?

Update: 2024-04-06 07:02 GMT

ಮಾಲೇಗಾಂವ್ ಸ್ಫೋಟ ಪ್ರಕರಣ ನಡೆದು 15 ವರ್ಷ ಕಳೆದಿದೆ. ಈಗಲೂ ಅದರ ವಿಚಾರಣೆ ಮುಗಿದಿಲ್ಲ. ಅದಕ್ಕೆ ಮುಖ್ಯ ಕಾರಣ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್. ಈ ದೇಶದಲ್ಲಿ ಬೇರಾವ ಆರೋಪಿಗಳಿಗೂ ಸಿಗದ ಅತ್ಯಂತ ವಿಶೇಷ ವಿನಾಯಿತಿ ಹಾಗೂ ರಿಯಾಯಿತಿ ಪ್ರಜ್ಞಾ ಸಿಂಗ್‌ಗೆ ಮಾತ್ರ ಯಾಕೆ ಸಿಗುತ್ತಿದೆ?

ಶಿವಮೊಗ್ಗಕ್ಕೆ ಬಂದು ಮನೆಯಲ್ಲಿ ಖಡ್ಗ, ಬಂದೂಕು ಇಟ್ಟುಕೊಳ್ಳಿ ಎಂದು ಭಾಷಣ ಮಾಡಬಲ್ಲ ಪ್ರಜ್ಞಾ ಸಿಂಗ್‌ಗೆ ಅಲ್ಲೇ ಪಕ್ಕದ ಮಹಾರಾಷ್ಟ್ರದ ಕೋರ್ಟ್‌ಗೆ ಹಾಜರಾಗಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್ ಕೇಳುತ್ತಿಲ್ಲ ಯಾಕೆ?

ಗಾಂಧೀಜಿಯ ಆದರ್ಶಗಳ ದೇಶ ಕಟ್ಟುವ ಮಾತಾಡಿದ ಯುವ ವಿದ್ವಾಂಸ ಉಮರ್ ಖಾಲಿದ್ ನಾಲ್ಕು ವರ್ಷಗಳಿಂದ ಜಾಮೀನು ಸಿಗದೇ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ಸ್ಟ್ಯಾನ್ ಸ್ವಾಮಿ ಎಂಬ 80 ವರ್ಷ ದಾಟಿದ ವೃದ್ಧ ಮಾಡದ ತಪ್ಪಿಗೆ ಜೈಲಿನಲ್ಲೇ ಪ್ರಾಣ ಬಿಡಬೇಕಾಯಿತು.

ಆದರೆ ಸ್ಫೋಟ ಪ್ರಕರಣವೊಂದರ ಪ್ರಧಾನ ಆರೋಪಿ ಪ್ರಜ್ಞಾ ಸಿಂಗ್ ಅದೇ ಅವಧಿಯಲ್ಲಿ ಈ ದೇಶದ ಸಂಸತ್ತಿನಲ್ಲಿದ್ದರು, ದೇಶದ ಬೀದಿ ಬೀದಿ ಸುತ್ತಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದರು. ಇದ್ಯಾವ ನ್ಯಾಯ? ಯಾವಾಗ ಮುಗಿಯುತ್ತದೆ ಮಾಲೇಗಾಂವ್ ಸ್ಫೋಟದ ವಿಚಾರಣೆ?

2008ರಲ್ಲಿ ನಡೆದದ್ದು ಮಾಲೇಗಾಂವ್ ಸ್ಫೋಟ. ಅದರ ನಂಬರ್ 1 ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮಾತ್ರ ಅನಾರೋಗ್ಯದ ನೆಪ ಹೇಳಿ ಮತ್ತೆ ಮತ್ತೆ ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಈಗಲೂ ಅದನ್ನೇ ಮಾಡಿದ್ದು, ಅವರ ಅನಾರೋಗ್ಯದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಎನ್‌ಐಎಗೆ ಕೋರ್ಟ್ ಬುಧವಾರ ಸೂಚಿಸಿದೆ.

ಅವರ ಗೈರು ಹಾಜರಿಯಿಂದ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿರುವ ವಿಶೇಷ ನ್ಯಾಯಾಲಯ, ಆಕೆಯ ಆರೋಗ್ಯ ಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ವಿಶೇಷ ನ್ಯಾಯಾಲಯ ಪ್ರಸಕ್ತ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಏಳು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಿದೆ.

ಆದರೆ ಪ್ರಜ್ಞಾ ಸಿಂಗ್ ಬುಧವಾರವೂ ಅನಾರೋಗ್ಯದ ನೆಪವೊಡ್ಡಿ, ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಿದರು.

ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಭೋಪಾಲ್‌ನಲ್ಲಿರುವ ಆಕೆಯ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ ಎಂದು ಆಕೆಯ ವಕೀಲರು ಕೋರ್ಟ್ ಮುಂದೆ ಹೇಳಿದರು.

ಕಳೆದ ಮಾರ್ಚ್ 11ರಂದು ಕೂಡ ಕೋರ್ಟ್ ಇದೇ ವಿಚಾರಕ್ಕೆ ಅವರಿಗೆ ವಾರಂಟ್ ಹೊರಡಿಸಿತ್ತು. ಕಡೆಗೆ ಮಾರ್ಚ್ 22 ರಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಪ್ರಜ್ಞಾ ಸಿಂಗ್ ಮತ್ತೆ ಮತ್ತೆ ಗೈರಾಗುತ್ತಿರುವ ಬಗ್ಗೆ ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ಬುಧವಾರ ಆಕ್ಷೇಪಿಸಿದ್ದಾರೆ.

ಮಾರ್ಚ್ 22ರಂದು ಕೋರ್ಟ್‌ಗೆ ಹಾಜರಾದಾಗಲೂ ಅವರು ಅನಾರೋಗ್ಯದ ಕಾರಣ ಮುಂದೆ ಮಾಡಿಕೊಂಡೇ ಅನುಮತಿ ಪಡೆದು ಮರಳಿದ್ದರು.

ಅದಾದ ಬಳಿಕ ಅವರು ಭೋಪಾಲ್‌ಗೆ ಹೊರಡುವ ಮೊದಲು ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಬಂದಿರಲಿಲ್ಲ.

ಹೇಳಿಕೆ ದಾಖಲಿಸಲು ಆರೋಪಿ ನಂ.1 ಹಾಜರಿರುವುದು ಅಗತ್ಯವಾಗಿದೆ. ಅವರು ಗೈರಾಗುತ್ತಿರುವುದರಿಂದ ವಿಚಾರಣೆಗೆ ಅಡ್ಡಿಯಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಅವರ ಅನುಪಸ್ಥಿತಿಯಿಂದಾಗಿ ವಿಚಾರಣೆ ವಿಳಂಬವಾಗುತ್ತಿರುವು ದರಿಂದ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನಾ ವರದಿ ಬೇಕು ಎಂದು ಕೋರ್ಟ್ ಸೂಚಿಸಿದೆ.

ವಿಚಾರಣೆಗೆ ಗೈರಾಗುತ್ತಿರುವ ಬಗ್ಗೆ ಕೋರ್ಟ್ ಆಕ್ಷೇಪ ತೆಗೆಯುತ್ತಲೇ ಇದೆ. ಕಳೆದ ಬಾರಿ ಮಾರ್ಚ್ 11ರಂದು ವಾರಂಟ್ ಹೊರಡಿಸಿದಾಗಲೂ ಅದನ್ನೇ ಕೋರ್ಟ್ ಹೇಳಿತ್ತು. ಅದಾದ ಬಳಿಕ ಅವರು ಹಾಜರಾಗಿ, ವಾರಂಟ್ ರದ್ದಾಗಿತ್ತು. ಆಮೇಲೆ ಕೂಡ ಅವರು ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಲೇ ಇರುವುದು ಎಷ್ಟರ ಮಟ್ಟಿಗೆ ಆಟವಾಡುತ್ತಿದ್ದಾರೆ ಎಂಬುದಕ್ಕೆ ನಿದರ್ಶನ.

ಕೋರ್ಟ್‌ಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ನೆಪವೊಡ್ಡುವ ಅವರು ದೇಶವನ್ನೆಲ್ಲ ಸುತ್ತುತ್ತ, ಪ್ರಚೋದನಕಾರಿ ಮಾತಾಡುವಾಗ ಆರೋಗ್ಯ ಸಮಸ್ಯೆ ಇರುವುದೇ ಇಲ್ಲ. ಕೋರ್ಟ್‌ಗೆ ಹಾಜರಾಗುವ ಪ್ರಶ್ನೆ ಬಂದಾಗ ಮಾತ್ರ ಆರೋಗ್ಯ ಸಮಸ್ಯೆಯ ಕಾರಣವೊಂದು ಸಿದ್ಧವಾಗಿರುತ್ತದೆ.

ಆರೋಪಿಗಳ ಹೇಳಿಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ನ್ಯಾಯಾಲಯ ತನ್ನ ಮುಂದೆ ಇರುವ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳಿಗೆ ಪ್ರಶ್ನೆಗಳನ್ನು ಹಾಕುತ್ತದೆ. ಆರೋಪಿಗಳು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಮೂಲಕ ಆರೋಪಗಳಿಗೆ ಪ್ರತಿಕ್ರಿಯಿಸುವುದು ನಡೆಯಬೇಕಿದೆ. ಆದರೆ ಈ ಒಟ್ಟಾರೆ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಲೇ ಇದೆ.

ಕೋರ್ಟ್ ಕೂಡ ಆಕ್ಷೇಪ ಎತ್ತಿದ ಹಾಗೆ ಮಾಡುತ್ತಲೇ, ಅವರಿಗೆ ವಿನಾಯಿತಿ ನೀಡುತ್ತಲೂ ಇರುತ್ತದೆ.

ಅವರು ಮುಂಬೈನಲ್ಲಿಲ್ಲ, ಭೋಪಾಲ್‌ನಲ್ಲಿರುವುದರಿಂದ ಅವರ ಅನಾರೋಗ್ಯ ಸಂಬಂಧಿತ ಎಲ್ಲ ದಾಖಲೆಗಳನ್ನು ಹಾಜರುಪಡಿಸುವುದು ಸಮಸ್ಯೆಯಾಗುತ್ತಿರಬೇಕು ಎಂದು ಕೂಡ ತಾನೇ ಅರ್ಥ ಮಾಡಿಕೊಂಡಿರುವುದಾಗಿ ಬಹಳ ಮೃದುವಾಗಿಯೇ ಅದು ಹೇಳುತ್ತದೆ.

ಪ್ರಜ್ಞಾ ಸಿಂಗ್ ಆರೋಗ್ಯ ಸ್ಥಿತಿ ಏನೆಂಬುದನ್ನು ಪರಿಶೀಲಿಸಲು ಮತ್ತು ಎಪ್ರಿಲ್ 8ರಂದು ಅಥವಾ ಅದಕ್ಕೂ ಮೊದಲು ವರದಿ ಸಲ್ಲಿಸಲು ಎನ್‌ಐಎಗೆ ಮುಂಬೈ ಕೋರ್ಟ್ ಈಗ ನಿರ್ದೇಶಿಸಿದೆ.

ಅನಾರೋಗ್ಯ ಸ್ಥಿತಿ ಅವರ ನಿಯಂತ್ರಣದಲ್ಲಿಲ್ಲ. ಹಾಗಾಗಿ ಅವರಿಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ಕೋರ್ಟ್ ನೀಡಬೇಕು ಎಂಬ ಮನವಿಯನ್ನು ಬೇರೆ ಆಕೆಯ ವಕೀಲರು ಮಾಡಿಕೊಳ್ಳುತ್ತಾರೆ.

ಇಷ್ಟು ಕಾಲದಿಂದ ಅನಾರೋಗ್ಯದ ನೆಪ ಮಾಡಿಕೊಂಡೇ ಬಂದ ಪ್ರಜ್ಞಾ ಸಿಂಗ್ ವಿಚಾರದಲ್ಲಿ ಈಗ ಕೋರ್ಟ್ ಕೇಳಿರುವ ಅನಾರೋಗ್ಯ ಸ್ಥಿತಿ ಕುರಿತ ಪರಿಶೀಲನಾ ವರದಿಯೇನು ಪರಮ ಪ್ರಾಮಾಣಿಕತೆಯಿಂದ ತುಂಬಿ ತುಳುಕಲು ಸಾಧ್ಯವೇ?

ಹೇಗೆಲ್ಲ ಇಲ್ಲಿ ಯಾರಿಗೆ ಅನುಕೂಲ ಮಾಡಿಕೊಡಬೇಕೋ ಅವರ ವಿಚಾರದಲ್ಲಿ ಎಲ್ಲ ವಿನಾಯಿತಿಗಳೂ ಸಾಧ್ಯವಾಗುತ್ತವೆ ಎಂಬುದನ್ನು ಇಡೀ ದೇಶವೇ ನೋಡುತ್ತಿದೆ.

ಒಂದು ಗಂಭೀರ ಪ್ರಕರಣ ಹೀಗೆ 15 ವರ್ಷಗಳಿಂದ ತೆವಳುತ್ತ ಸಾಗಿದೆಯೆಂದರೆ, ಆರೋಪಿಗಳು ನಿರಾಳವಾಗಿ ಹೊರಗೆ ಓಡಾಡಿಕೊಂಡಿದ್ದಾರೆ ಎಂದರೆ ಏನರ್ಥ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News