ತಮಿಳುನಾಡು ರಾಜ್ಯಪಾಲರು ಈ ದೇಶದ ಸಂವಿಧಾನವನ್ನು ಏಕೆ ಓದಲೇಬೇಕಾಗಿದೆ?

ಸಂವಿಧಾನ ಮತ್ತು ಭಾರತೀಯ ನ್ಯಾಯಶಾಸ್ತ್ರದ ಯಾವುದೇ ಭಾಗವೂ ಅದು ಜಾತ್ಯತೀತ ಎಂಬುದನ್ನು ಸ್ಪಷ್ಟವಾಗಿ ಕಾಣಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ವಾದಿಸುವವರು ತಮ್ಮ ಸೈದ್ಧಾಂತಿಕ ಯೋಜನೆಗೆ ಸರಿಹೊಂದುವಂತೆ ತಪ್ಪು ಮತ್ತು ವಿಕೃತ ವ್ಯಾಖ್ಯಾನವನ್ನು ನೀಡುತ್ತಾರೆ. ಈಗ ರಾಜ್ಯಪಾಲ ಆರ್.ಎನ್. ರವಿ ಮಾಡುತ್ತಿರುವುದು ಕೂಡ ಅಂಥದೇ ವಿಕೃತ ವಾದ ಮತ್ತು ಅವರ ವಾದ ಪೂರ್ತಿ ತಪ್ಪು ಎಂದೇ ಪರಿಣಿತರೆಲ್ಲ ಹೇಳುತ್ತಿದ್ದಾರೆ.

Update: 2024-09-29 09:26 GMT

ಸಾಂವಿಧಾನಿಕ ಮೌಲ್ಯಗಳ ಮೇಲೆ ಕೇಸರಿ ಮನಃಸ್ಥಿತಿಯ ದಾಳಿಗಳು ಪದೇ ಪದೇ ನಡೆಯುತ್ತಲೇ ಇವೆ.

ಸಾಂವಿಧಾನಿಕ ಹುದ್ದೆಯಲ್ಲಿದ್ದವರೂ ಅದೇ ಮನಃಸ್ಥಿತಿಯಿಂದ ಸಂವಿಧಾನದೊಳಗೆ ಅಂತರ್ಗತವಾಗಿರುವ ಜಾತ್ಯತೀತತೆಯನ್ನು ನಿರಾಕರಿಸುತ್ತಿರುವುದು ವಿಪರ್ಯಾಸ.

ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಗಾಳಿಗೆ ತೂರುವ ವಿಚಾರದಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇರುವವರು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ.

ಈಗ ಮತ್ತೊಮ್ಮೆ ಅವರು ಇಡೀ ಸಾಂವಿಧಾನಿಕ ಹೆಚ್ಚುಗಾರಿಕೆಯನ್ನೇ ಅಲ್ಲಗಳೆಯುವ ಮಟ್ಟದ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

‘‘ಜಾತ್ಯತೀತತೆ ಯುರೋಪಿನ ಪರಿಕಲ್ಪನೆಯಾಗಿದ್ದು, ಭಾರತೀಯವಲ್ಲ, ಯುರೋಪಿನಲ್ಲಿ ಚರ್ಚ್ ಹಾಗೂ ರಾಜನ ನಡುವೆ ಸಂಘರ್ಷ ಇದ್ದುದರಿಂದ ಈ ಸೆಕ್ಯುಲರಿಸಂ ಬಂತು. ಭಾರತದಲ್ಲಿ ಧರ್ಮದಿಂದ ದೂರ ಇರುವುದು ಹೇಗೆ? ಸೆಕ್ಯುಲರಿಸಂ ಯುರೋಪಿನದ್ದು, ಅದು ಅಲ್ಲೇ ಇರಲಿ. ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ’’ ಎಂಬುದು ಅವರ ಹೇಳಿಕೆ.

‘‘೧೯೭೫ರ ತುರ್ತು ಪರಿಸ್ಥಿತಿ ವೇಳೆ ಕೆಲವೊಂದು ವರ್ಗದವರನ್ನು ಸಂತುಷ್ಟಗೊಳಿಸಲು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದ ಪೀಠಿಕೆಯಲ್ಲಿ ಈ ಪದವನ್ನು ಸೇರ್ಪಡೆಗೊಳಿಸುವವರೆಗೂ ಅದು ಭಾರತೀಯ ಸಂವಿಧಾನದ ಭಾಗವಾಗಿರಲಿಲ್ಲ, ಇದು ದೇಶದ ಜನರಿಗಾದ ಹಲವು ವಂಚನೆಗಳಲ್ಲಿ ಒಂದು’’ ಎಂದಿದ್ದಾರೆ.

ಸೆಪ್ಟಂಬರ್ ೨೨ರಂದು ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲ ರವಿ ಈ ಮಾತು ಹೇಳಿದ್ದಾರೆ.

ಜಾತ್ಯತೀತತೆಯ ವಿರೋಧಿಗಳು ಸಾಮಾನ್ಯವಾಗಿ ಎತ್ತುವ ವಾದವೇ ಇದು. ಸಂವಿಧಾನದ ಮೂಲ ಕರಡು ಪ್ರತಿಯಲ್ಲಿ ಸೆಕ್ಯುಲರ್ ಪದ ಇರಲಿಲ್ಲ ಮತ್ತು ೪೨ನೇ ತಿದ್ದುಪಡಿಯ ಮೂಲಕ ಅದನ್ನು ಸೇರಿಸಲಾಯಿತು ಎಂಬುದನ್ನೇ ಎತ್ತಿ ತೋರಿಸಲಾಗುತ್ತದೆ.

ಅದು ನಿಜವೇ ಆಗಿದ್ದರೂ, ಸಂವಿಧಾನ ಮತ್ತು ಭಾರತೀಯ ನ್ಯಾಯಶಾಸ್ತ್ರದ ಯಾವುದೇ ಭಾಗವೂ ಅದು ಜಾತ್ಯತೀತ ಎಂಬುದನ್ನು ಸ್ಪಷ್ಟವಾಗಿ ಕಾಣಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ವಾದಿಸುವವರು ತಮ್ಮ ಸೈದ್ಧಾಂತಿಕ ಯೋಜನೆಗೆ ಸರಿಹೊಂದುವಂತೆ ತಪ್ಪು ಮತ್ತು ವಿಕೃತ ವ್ಯಾಖ್ಯಾನವನ್ನು ನೀಡುತ್ತಾರೆ. ಈಗ ರಾಜ್ಯಪಾಲ ಆರ್.ಎನ್. ರವಿ ಮಾಡುತ್ತಿರುವುದು ಕೂಡ ಅಂಥದೇ ವಿಕೃತ ವಾದ ಮತ್ತು ಅವರ ವಾದ ಪೂರ್ತಿ ತಪ್ಪು ಎಂದೇ ಪರಿಣಿತರೆಲ್ಲ ಹೇಳುತ್ತಿದ್ದಾರೆ.

ಹಿರಿಯ ರಾಜಕೀಯ ವಿಶ್ಲೇಷಕ ಕೆ. ನಾಗೇಶ್ವರ್, ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪ ಅದರ ನಿಬಂಧನೆಗಳಲ್ಲಿಯೇ ಸ್ಪಷ್ಟವಾಗಿದೆ ಎಂಬುದರ ಕಡೆ ಗಮನ ಸೆಳೆಯುತ್ತಾರೆ.

‘‘ಸಂವಿಧಾನ ರಚನಾಕಾರರಿಗೆ ಸೆಕ್ಯುಲರ್ ಪದವನ್ನು ಪ್ರತ್ಯೇಕವಾಗಿ ಉಲ್ಲೇಖಿಸುವ ಅಗತ್ಯ ಕಂಡಿರಲಿಲ್ಲ. ಅಂಥ ಉಲ್ಲೇಖವಿಲ್ಲದೆಯೇ ಸಂವಿಧಾನ ಜಾತ್ಯತೀತವಾಗಿದೆ ಎಂಬ ಗ್ರಹಿಕೆ ಇತ್ತೆಂಬುದು ಸಂವಿಧಾನ ಸಭೆಯ ಚರ್ಚೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ’’ ಎನ್ನುತ್ತಾರೆ ಅವರು.

೧೯೯೪ರಲ್ಲಿ ಎಸ್.ಆರ್.ಬೊಮ್ಮಾಯಿ ಪ್ರಕರಣ ಕುರಿತ ಐತಿಹಾಸಿಕ ತೀರ್ಪಿನಲ್ಲಿಯೂ ಸುಪ್ರೀಂ ಕೋರ್ಟ್ ಜಾತ್ಯತೀತತೆಯನ್ನು ಸಂವಿಧಾನದ ಮೂಲ ರಚನೆಯ ಭಾಗವೆಂದು ಪರಿಗಣಿಸಿದೆ.

೧೯೭೬ರಲ್ಲಿ ೪೨ನೇ ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಸೇರಿಸಿದರೂ, ಜಾತ್ಯತೀತತೆ ಪರಿಕಲ್ಪನೆ ನಮ್ಮ ಸಾಂವಿಧಾನಿಕ ತತ್ವದಲ್ಲಿಯೇ ಅಂತರ್ಗತವಾಗಿದೆ ಎಂಬುದನ್ನು ತೀರ್ಪಿನಲ್ಲಿ ಹೇಳಲಾಗಿದೆ.

ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವ ಪ್ರಕಾರ, ಸಂವಿಧಾನದ ಮೂಲ ರಚನೆಯನ್ನು ತಿದ್ದುಪಡಿ ಮಾಡುವ ಹಕ್ಕು ಸಂಸತ್ತಿಗೂ ಇಲ್ಲ.

ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಸ್ಪಷ್ಟವಾಗಿ ತೋರಿಸುವ ನಿಬಂಧನೆಗಳ ಒಂದು ಸರಣಿಯನ್ನೇ ನಾಗೇಶ್ವರ್ ಉಲ್ಲೇಖಿಸುತ್ತಾರೆ.

ಪೌರತ್ವ, ಧರ್ಮ, ಜನಾಂಗ, ಜಾತಿ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದಿರುವುದು, ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳು, ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ಮಾಡದಿರುವುದು ಮೊದಲಾದವುಗಳ ಕುರಿತ ನಿಬಂಧನೆಗಳಲ್ಲಿ ನಮ್ಮ ಸಂವಿಧಾನದ ಜಾತ್ಯತೀತತೆ ಕಾಣಿಸುತ್ತದೆ.

೧೯೪೭ರ ಜೂನ್ ೧೦ರಂದು ಬಿ.ಎಂ. ಬಿರ್ಲಾ ಅವರ ಪತ್ರಕ್ಕೆ ಬರೆದ ಉತ್ತರದಲ್ಲಿ ಸರ್ದಾರ್ ಪಟೇಲ್, ಹಿಂದೂ ಧರ್ಮವನ್ನು ರಾಜ್ಯ ಧರ್ಮವಾಗಿ ಮತ್ತು ಹಿಂದೂಸ್ಥಾನವನ್ನು ಹಿಂದೂ ರಾಜ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದರು.

ಇತರ ಅಲ್ಪಸಂಖ್ಯಾತರ ರಕ್ಷಣೆ ನಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ಮರೆಯಬಾರದು. ಸರಕಾರ ಎಲ್ಲರಿಗಾಗಿ ಅಸ್ತಿತ್ವದಲ್ಲಿರಬೇಕು ಎಂದಿದ್ದರು.

ಇಂದು ಅದೇ ಪಟೇಲರನ್ನು ತಮ್ಮ ಕೇಸರಿ ಹಿತಾಸಕ್ತಿ ಸಾಧಿಸಲು ಬಳಸಿಕೊಳ್ಳುತ್ತಿರುವವರು ಅವರ ಈ ಆಶಯಕ್ಕೆ ಪೂರ್ತಿ ತದ್ವಿರುದ್ಧವಾಗಿದ್ದಾರೆ.

ಜವಾಹರಲಾಲ್ ನೆಹರೂ ವಿವರಿಸಿದಂತೆ, ಧಾರ್ಮಿಕತೆಯ ದೇಶದಲ್ಲಿ ಜಾತ್ಯತೀತ ಸರಕಾರ ನಿರ್ಮಾಣ ಭಾರತದೆದುರಿನ ಸವಾಲು. ಇದಕ್ಕಾಗಿಯೇ ಭಾರತ ತನ್ನದೇ ಆದ ಸೆಕ್ಯುಲರಿಸಂ ಅನ್ನು ಸಿದ್ಧಾಂತ ಮತ್ತು ಆಚರಣೆಯಲ್ಲಿ ಅಳವಡಿಸಿಕೊಂಡಿದೆ.

ನಮ್ಮ ಸಾಂವಿಧಾನಿಕ ಮೌಲ್ಯಗಳಲ್ಲಿ ಸೆಕ್ಯುಲರಿಸಂ ಅಡಕವಾಗಿದೆ. ಭಾರತೀಯ ಜಾತ್ಯತೀತತೆ ತನ್ನ ನಾಗರಿಕರಿಗೆ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ಭರವಸೆ ನೀಡುವುದಾಗಿದೆ.

ಆದ್ದರಿಂದ, ಜಾತ್ಯತೀತ ಸಂವಿಧಾನದ ಪ್ರಕಾರ, ಯಾವುದೇ ನಿರ್ದಿಷ್ಟ ಧಾರ್ಮಿಕ ನಂಬಿಕೆಯನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿಯ ವಿರುದ್ಧ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಯಾವುದೇ ನಿರ್ದಿಷ್ಟ ಧರ್ಮವನ್ನು ಬೆಂಬಲಿಸುವುದಾಗಲಿ, ತಾರತಮ್ಯದಿಂದ ನೋಡುವುದಾಗಲಿ ಇರುವುದಿಲ್ಲ.

ಹೀಗಾಗಿ, ಜಾತ್ಯತೀತತೆ ಎಂಬುದು ಧರ್ಮಗಳಿಲ್ಲದ ಸಮಾಜವನ್ನು ಪ್ರತಿಪಾದಿಸುವುದಿಲ್ಲ. ಬದಲಾಗಿ ಧರ್ಮಾತೀತ ನಿಲುವನ್ನು ಮಾತ್ರ ವ್ಯಕ್ತಪಡಿಸುತ್ತದೆ. ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣುತ್ತದೆ.

ಧರ್ಮವನ್ನು ಪ್ರತಿಪಾದಿಸುವ ಮತ್ತು ಅಭ್ಯಾಸ ಮಾಡುವ ಹಕ್ಕನ್ನು ಗುರುತಿಸುವಾಗಲೂ ಸಹ, ಸಂವಿಧಾನವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಅಸಹ್ಯಕರವಾದ ಮತ್ತು ಮಾನವ ಹಕ್ಕುಗಳು ಮತ್ತು ಘನತೆಗೆ ಅಸಹ್ಯಕರವಾದ ಆಚರಣೆಗಳನ್ನು ಹೊರತುಪಡಿಸಿದೆ. ಧರ್ಮದ ಮೂಲಭೂತ ಹಕ್ಕು ಅಗತ್ಯ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಪ್ರಾಮುಖ್ಯತೆ ಕೊಟ್ಟಿದೆ.

ಹೀಗಿರುವಾಗ, ಜಾತ್ಯತೀತತೆ ಭಾರತೀಯ ಪರಿಕಲ್ಪನೆಯಲ್ಲ ಎಂಬ ಆರ್.ಎನ್. ರವಿ ವಾದ ತೀವ್ರ ಟೀಕೆಗೆ ಗುರಿಯಾಗಿದೆ.

ತಮಿಳುನಾಡು ಸ್ಪೀಕರ್, ಗವರ್ನರ್‌ಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಸಂವಿಧಾನದ ಕಲಂ ೧೫ ಮತ್ತು ೧೭ನ್ನು ರಾಜ್ಯಪಾಲರು ಓದಬೇಕಾಗಿದೆ ಎಂದು ಸ್ಪೀಕರ್ ಎಂ. ಅಪ್ಪಾವು ಹೇಳಿದ್ದಾರೆ.

ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಭಾರತೀಯ ಸಂವಿಧಾನದ ೧೫ನೇ ವಿಧಿಯನ್ನು ಅಸ್ಪಶ್ಯತೆಯನ್ನು ತೊಡೆದುಹಾಕುವ ೧೭ನೇ ವಿಧಿಯನ್ನು ಅವರು ಓದಬೇಕಾಗಿದೆ ಎಂದು ಅಪ್ಪಾವು ಹೇಳಿದ್ದಾರೆ.

ಸನಾತನ ಧರ್ಮದ ಅನುಯಾಯಿಗಳು ತಮ್ಮ ಸಮುದಾಯದ ಮಹಿಳೆಯರನ್ನು ಎದೆ ಮುಚ್ಚಿಕೊಳ್ಳದಂತೆ ತಡೆದರು ಮತ್ತು ಕೆಲ ಸಮುದಾಯಗಳು ದೇವಸ್ಥಾನಗಳಿರುವ ಬೀದಿಗಳಲ್ಲಿ ನಡೆಯದಂತೆ ನಿರ್ಬಂಧಿಸಿದ್ದರು ಎಂದು ಅಪ್ಪಾವು ಟೀಕಿಸಿದ್ದಾರೆ.

ರಾಜ್ಯಪಾಲರ ಇಂಥ ಹೇಳಿಕೆಗಳ ನಂತರವೂ ಕೇಂದ್ರ ಸರಕಾರ ಸುಮ್ಮನಿರುವುದು ಸರಿಯಲ್ಲ ಎಂದು ಅಪ್ಪಾವು ಟೀಕಿಸಿದ್ದಾರೆ. ಆರೆಸ್ಸೆಸ್ ಮತ್ತು ಸನಾತನ ಧರ್ಮ ಜನರನ್ನು ವಿಭಜಿಸುತ್ತದೆ, ಕೇವಲ ಶೇ.೩ರಿಂದ ಶೇ.೧೦ರಷ್ಟು ಜನರಷ್ಟೇ ಅಧಿಕಾರ ಪಡೆಯುವುದನ್ನು ಖಾತ್ರಿಪಡಿಸುತ್ತದೆ. ಈ ಜನರು ಮಾತ್ರ ಶಿಕ್ಷಣ ಮತ್ತು ಜಮೀನು ಹೊಂದುವ ಕಾಲವಿತ್ತು. ಲಾರ್ಡ್ ಮೆಕಾಲೆ ಬಂದ ಬಳಿಕ ಸಮಾಜದ ಎಲ್ಲಾ ವರ್ಗಗಳಿಗೆ ಶಿಕ್ಷಣ ಸಿಕ್ಕಿತು ಎಂದು ಅಪ್ಪಾವು ಹೇಳಿದ್ದಾರೆ.

ಗವರ್ನರ್ ರವಿ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ‘‘ಅವರ ಹೇಳಿಕೆ ಅತಿರೇಕದ್ದು ಮತ್ತು ಒಪ್ಪಲು ಸಾಧ್ಯವಿಲ್ಲ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರ ಈ ಹೇಳಿಕೆ ನಾಚಿಕೆಗೇಡಿನದ್ದಾಗಿದೆ. ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗಾಂಧಿ, ಅಂಬೇಡ್ಕರ್, ನೆಹರೂ ಮತ್ತು ಪಟೇಲ್ ಪ್ರತಿಪಾದಿಸಿದ ಭಾರತದ ಕಲ್ಪನೆಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಹೇಳಿದ್ದಾರೆ.

‘‘ನಾವು ಭಾರತದಲ್ಲಿನ ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಯಾವಾಗಲೂ ಇದನ್ನು ವಿರೋಧಿಸುತ್ತವೆ’’ ಎಂದು ಅವರು ಟೀಕಿಸಿದ್ದಾರೆ.

ಎನ್‌ಸಿಪಿ ಶರದ್ ಪವಾರ್ ಬಣದ ನಾಯಕ ಕ್ಲೈಡ್ ಕ್ರಾಸ್ಟೊ, ‘‘ಈ ಗವರ್ನರ್ ಹೇಗೆ ಸಾಂವಿಧಾನಿಕ ಹುದ್ದೆಯಲ್ಲಿರುತ್ತಾರೆ? ಅವರು ಸಂವಿಧಾನಕ್ಕೆ ಬದ್ಧರಾಗಿರಬೇಕು’’ ಎಂದು ಪ್ರತಿಕ್ರಿಯಿಸಿದ್ದಾರೆ.

ಅವರು ಹೀಗೆ ಹೇಳಿಕೆ ನೀಡುವುದು ಗವರ್ನರ್ ಸ್ಥಾನದ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧ. ಆ ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿ ತಟಸ್ಥವಾಗಿರಬೇಕು. ಟೀಕೆಗಳಿಂದ ದೂರವಿರಬೇಕು ಎಂದು ಕ್ರಾಸ್ಟೊ ಎಕ್ಸ್‌ನಲ್ಲಿ ಬರೆದಿದ್ದಾರೆ.

ಆರ್.ಎನ್. ರವಿ ಗವರ್ನರ್ ಹುದ್ದೆಯಲ್ಲಿದ್ದೂ ಬಿಜೆಪಿ ಪರ ನಿಲುವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ತಮಿಳುನಾಡು ಸರಕಾರದ ಜೊತೆಗೆ ಅವರ ಸಂಘರ್ಷ ನಿರಂತರವಾಗಿದೆ.

ಈಗ ಸರಕಾರದ ಜೊತೆಗಿನ ಅವರ ಸಂಘರ್ಷ ದೇಶದ ಸಂವಿಧಾನದ ಮೂಲ ಆಶಯವನ್ನೇ ತಪ್ಪಾಗಿ ವಿಶ್ಲೇಷಿಸುವಲ್ಲಿಗೆ ಹೋಗಿ ತಲುಪಿದೆ. ಆದರೆ ಅವರ ಈ ಚಾಳಿ ತೀವ್ರ ಅಪಾಯಕಾರಿ, ಮತ್ತದಕ್ಕೆ ತಡೆ ಬೀಳಲೇಬೇಕಿದೆ. ಆದರೆ, ಇಂಥವರನ್ನೇ ಸಾಕುತ್ತ, ಬೇಕಾದಷ್ಟು ಬಳಸಿಕೊಳ್ಳುವ ಬಿಜೆಪಿ, ಅದನ್ನು ಮಾಡಲು ತಯಾರಿದೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News