ಹರ್ಯಾಣದಲ್ಲಿ ಮೋದಿಯವರ ರ್‍ಯಾಲಿಗಳು ಏಕೆ ಕಡಿಮೆಯಾಯಿತು?

Update: 2024-10-06 04:37 GMT

ನರೇಂದ್ರ ಮೋದಿ

2014ರಲ್ಲಿ ದಿಲ್ಲಿಯಿಂದ ಕನ್ಯಾಕುಮಾರಿವರೆಗೆ ಎಲ್ಲಿ ಚುನಾವಣೆ ನಡೆದರೂ ಮೋದಿ ಬಂದರೆ ಅಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬಂತಹ ವಾತಾವರಣವಿತ್ತು.

ಆಗ ಹರ್ಯಾಣದಲ್ಲೂ ಬಿಜೆಪಿಗೆ ಬಹುಮತ ಬಂದಿದ್ದು ಮೋದಿಯಿಂದಲೇ ಎಂಬ ವಾತಾವರಣವಿತ್ತು. ಆದರೆ ಹತ್ತು ವರ್ಷಗಳಲ್ಲಿ ಎಲ್ಲವೂ ಬಹಳಷ್ಟು ಬದಲಾಗಿದೆ. ಈಗ ಮೋದಿ ದಿಲ್ಲಿಯಲ್ಲೇ ಬಹುಮತ ಕಳಕೊಂಡು ಮಿತ್ರಪಕ್ಷಗಳ ಆಸರೆಯಲ್ಲಿದ್ದಾರೆ. ಅವರ ವರ್ಚಸ್ಸೂ ಕಳೆಗುಂದಿದೆ.

ಈಗ ಮೋದಿ ಬಂದು ಗೆಲ್ಲಿಸುವುದು ಹಾಗಿರಲಿ, ಅವರು ಬಂದರೆ ವೋಟು ನಷ್ಟವಾಗುತ್ತದೆ ಎಂಬ ಭಯ ರಾಜ್ಯ ಬಿಜೆಪಿ ನಾಯಕರಲ್ಲಿ ಕಾಣಿಸತೊಡಗಿದೆ.

ಹರ್ಯಾಣ ಚುನಾವಣೆಯಲ್ಲಿ 2014ಕ್ಕೂ 2024ಕ್ಕೂ ಎಷ್ಟೊಂದು ಬದಲಾವಣೆ ಆಗಿಬಿಟ್ಟಿದೆ ನೋಡಿ.

ಅವತ್ತು ಬಿಜೆಪಿ ಗೆಲುವಿಗೆ ಮೋದಿಯೇ ಬೇಕಿತ್ತು. ಇವತ್ತು ಮೋದಿ ಮತ ಕೇಳಲು ಹೋದರೆ, ಬರುವ ಮತವೂ ಬಾರದೇ ಹೋಗಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಆಗ ಹರ್ಯಾಣದಲ್ಲಿ ಮೋದಿ ನಡೆಸಿದ್ದು 10 ರ್ಯಾಲಿಗಳು. ಈಗ ಬರೀ 4. ಮೋದಿ 10 ವರ್ಷಗಳಲ್ಲಿ ಹೇಗೆ ಮುಖ ಕೆಡಿಸಿಕೊಂಡಿದ್ದಾರೆ ಎನ್ನುವುದಕ್ಕೆ ಬೇರೆ ಪುರಾವೆ ಬೇಕೆ?

2014ರ ವಿಧಾನಸಭಾ ಚುನಾವಣೆಗೆ ಹರ್ಯಾಣದಲ್ಲಿ 10 ರ್ಯಾಲಿಗಳನ್ನು ನಡೆಸಿದ್ದ ಮೋದಿ, ಒಂದಂಕಿಯ ಸೀಟುಗಳನ್ನು ಪಡೆಯುತ್ತಿದ್ದ ಬಿಜೆಪಿಯನ್ನು 47 ಸೀಟುಗಳನ್ನು ಗೆಲ್ಲುವ ಮಟ್ಟಕ್ಕೆ ಏರಿಸಿದ್ದರು. 90 ಸ್ಥಾನಬಲದ ಹರ್ಯಾಣದಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಸರಕಾರ ರಚಿಸಲು ಅವರೇ ಕಾರಣರಾಗಿದ್ದರು.

ಹರ್ಯಾಣದಲ್ಲಿ ಬಿಜೆಪಿ 2019ರಲ್ಲಿಯೂ ಮೋದಿಯನ್ನೇ ಅವಲಂಬಿಸಿತ್ತು. ಆದರೆ ಅವರ ರ್ಯಾಲಿಗಳು 6ಕ್ಕೆ ಇಳಿದವು. ಗೆದ್ದ ಸೀಟುಗಳು 47ರಿಂದ 40ಕ್ಕೆ ಕುಸಿದಿದ್ದವು. ಬಹುಮತ ಕಳೆದುಕೊಂಡಿತ್ತು ಬಿಜೆಪಿ 10 ಸ್ಥಾನಗಳನ್ನು ಗೆದ್ದಿದ್ದ ದುಶ್ಯಂತ್ ಚೌಟಾಲಾ ಅವರ ಜೆಜೆಪಿ ಬಲದೊಂದಿಗೆ ಬಿಜೆಪಿ ಅಧಿಕಾರದಲ್ಲಿ ಉಳಿಯುವುದಂತೂ ಸಾಧ್ಯವಾಗಿತ್ತು.

ಈ ಬಾರಿ, ಹರ್ಯಾಣದಲ್ಲಿ ಮೋದಿ ಕೇವಲ 4 ರ್ಯಾಲಿಗಳಿಗೇ ನಿಂತರು. ಬಿಜೆಪಿಯೊಳಗೆ ಮೋದಿ ಮಂಕಾಗಿರುವುದು ಎದ್ದು ಕಂಡಿತು.

ಜನರಲ್ಲಿ ಹೆಚ್ಚುತ್ತಿರುವ ಆಡಳಿತ ವಿರೋಧಿ ಭಾವನೆಗಳು ಮುಖ್ಯವಾಗಿ ಈ ಬೆಳವಣಿಗೆಯ ಹಿನ್ನೆಲೆಯಲ್ಲಿವೆ. ಹಾಗಾಗಿ ಈಗ ಹರ್ಯಾಣದಲ್ಲಿ ಭಾರೀ ಪ್ರಭಾವಿಯಾಗಿ ಕಾಣುತ್ತಿರುವ ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿ ಹರ್ಯಾಣದ ಸ್ಥಳೀಯ ಸಂಘಟನೆಯನ್ನೇ ಹೆಚ್ಚು ನೆಚ್ಚಿಕೊಂಡಿದೆ.

ಇನ್ನೊಂದು ಸಂಗತಿ, ಮೋದಿಯನ್ನೂ ಮೀರಿ ಸ್ಥಳೀಯ ಸಂದರ್ಭವೇ ಚುನಾವಣೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿರುವುದು.

ಲೋಕನೀತಿ-ಸಿಎಸ್‌ಡಿಎಸ್ ಅಂಕಿಅಂಶಗಳ ಪ್ರಕಾರ, 2014ರ ಚುನಾವಣೆಗಳಲ್ಲಿ ಮೋದಿಯೇ ಬಿಜೆಪಿಗೆ ಮತ ತರುವ ಚಹರೆಯಾಗಿದ್ದರು. ಆದರೆ ಈಗ ಹರ್ಯಾಣದ ಮತದಾರರ ಮಧ್ಯೆ ಸ್ಥಳೀಯ ಅಭ್ಯರ್ಥಿಗಳೇ ಮೋದಿಗಿಂತಲೂ ಹೆಚ್ಚು ಮಹತ್ವ ಪಡೆದಿದ್ದಾರೆ.

ಈ ಬದಲಾವಣೆ, ಮತದಾರರು ರಾಷ್ಟ್ರೀಯ ನಾಯಕರಿಗಿಂತಲೂ ಸ್ಥಳೀಯ ವಿಷಯಗಳಿಗೆ ಮತ್ತು ಸ್ಥಳೀಯ ನಾಯಕತ್ವಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ತಳಮಟ್ಟದ ಕಾರ್ಯತಂತ್ರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿದೆ ಎಂಬುದನ್ನು ಬಿಜೆಪಿ ಇದರಿಂದ ಕಲಿತಿದೆ.

ಬಿಜೆಪಿ ಪ್ರಬಲ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂಬುದು ಕೂಡ ಬಿಜೆಪಿಗೂ, ಕೇಂದ್ರ ಸರಕಾರಕ್ಕೂ ತಿಳಿದಿದೆ.

2014ರಲ್ಲಿ ಮೊದಲ ಬಾರಿಗೆ ಹರ್ಯಾಣ ಬಿಜೆಪಿಯ ಭದ್ರಕೋಟೆಯಾಯಿತು. 2019ರಲ್ಲಿ ಬಾಲಾಕೋಟ್ ದಾಳಿಯ ಪ್ರಭಾವವೂ ಕೈಹಿಡಿದು, ಹರ್ಯಾಣದ ಎಲ್ಲಾ 10 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು ಬಿಜೆಪಿ.

ಅದಾಗಿ ಕೇವಲ ಮೂರು ತಿಂಗಳ ನಂತರ ವಿಧಾನಸಭೆ ಚುನಾವಣೆ ಬಂತು. ಅಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಿತು.

2024ರ ಲೋಕಸಭೆ ಚುನಾವಣೆಯಲ್ಲಿ ಹತ್ತರಲ್ಲಿ ಐದನ್ನು ಸೋತ ಬಿಜೆಪಿ, ಈ ಅಸೆಂಬ್ಲಿ ಚುನಾವಣೆಯ ಫಲಿತಾಂಶದ ಬಗ್ಗೆ ಆತಂಕದಲ್ಲಿದೆ.

2014ರಲ್ಲಿ ಮೋದಿ ಮುಖ ಹರ್ಯಾಣದಲ್ಲಿ ಕೆಲಸ ಮಾಡಿದ್ದಕ್ಕೆ ಕಾರಣವಿತ್ತು. ಅಕ್ಟೋಬರ್ 2001ರಲ್ಲಿ ಗುಜರಾತ್ ಸಿಎಂ ಆಗುವ ಮೊದಲು ಮೋದಿ ಹರ್ಯಾಣದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಿದ್ದರು.

ಹರ್ಯಾಣ ಜನತೆಗೆ ಆಗಲೇ ಪರಿಚಿತರಾಗಿದ್ದ ಅವರು, ಪ್ರಧಾನಿಯಾಗಿ ಬಂದು ರಾಜ್ಯದಲ್ಲಿ ಬಿಜೆಪಿಯ ಕಡೆಗೆ ಮತದಾರರನ್ನು ಸೆಳೆಯುವಲ್ಲಿ ಗೆದ್ದುಬಿಟ್ಟಿದ್ದರು. ಕಾಂಗ್ರೆಸ್ ಬಗ್ಗೆ ಜನತೆ ಹೊಂದಿದ್ದ ಅಸಮಾಧಾನದ ಲಾಭವೂ ಬಿಜೆಪಿಗೆ ಸಿಕ್ಕಿತ್ತು. ಹರ್ಯಾಣದ ಮೊದಲ ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮನೋಹರ್ ಲಾಲ್ ಖಟ್ಟರ್ ನೇಮಕ ಕೂಡ ಮೋದಿ ಆಯ್ಕೆಯೇ ಆಗಿತ್ತು.

2019ರಲ್ಲಿ ಮೋದಿ ಕೇಂದ್ರದಲ್ಲಿ 303 ಸ್ಥಾನಬಲದೊಂದಿಗೆ ಅಧಿಕಾರಕ್ಕೆ ಮರಳಿದ ನಂತರ, ಖಟ್ಟರ್ ನೇತೃತ್ವದಲ್ಲಿ ಹರ್ಯಾಣ ಚುನಾವಣೆ ನಡೆದಿತ್ತು. ಆ ವೇಳೆಗಾಗಲೇ ಬಿಜೆಪಿ ರಾಜ್ಯದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿತ್ತು ಮತ್ತು ಮೋದಿಯವರ ರಾಷ್ಟ್ರೀಯ ಸ್ಥಾನಮಾನ ಮತ್ತಷ್ಟು ಬೆಳೆದಿತ್ತು.

ಹಾಗಾಗಿ, ಮೋದಿಯವರ ರ್ಯಾಲಿಗಳು ಬಿಜೆಪಿ ತೀವ್ರ ಪೈಪೋಟಿಯನ್ನು ಎದುರಿಸುತ್ತಿರುವ ಪ್ರದೇಶಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿದ್ದವು. ಆ ಚುನಾವಣೆಯಲ್ಲಿ ಹರ್ಯಾಣದಲ್ಲಿ ಬಿಜೆಪಿ ಗೆದ್ದ ಸೀಟುಗಳ ಸಂಖ್ಯೆ 40ಕ್ಕೆ ಕುಸಿದಿತ್ತು. ಈ ಸಲ ವರ್ಚಸ್ಸು ಕ್ಷೀಣಿಸಿದ ಮೋದಿಯವರ ರ್ಯಾಲಿಗಳ ಸಂಖ್ಯೆಯಲ್ಲಿ ಇನ್ನೂ ಕುಸಿತವಾಗಿದೆ.

ಬಿಜೆಪಿಯ ರಾಜಕೀಯ ತಂತ್ರದಲ್ಲಿನ ಬದಲಾವಣೆ ಮತ್ತು ರಾಜ್ಯಮಟ್ಟದ ವಿಷಯಗಳೊಂದಿಗೆ ವಿಧಾನಸಭೆ ಚುನಾವಣೆಗಳನ್ನು ಎದುರಿಸುವ ನಿಟ್ಟಿನ ನಿಲುವು ರ್ಯಾಲಿಗಳ ಸಂಖ್ಯೆ ತಗ್ಗಲು ಕಾರಣ ಎನ್ನುತ್ತವೆ ವಿಶ್ಲೇಷಣೆಗಳು.

ಆದರೂ ಹರ್ಯಾಣ ಚುನಾವಣೆಯಲ್ಲಿ ಮೋದಿ ಕಾಣೆಯಾಗಿದ್ದರು ಎನ್ನುವುದು ಎದ್ದುಕಾಣಿಸದೇ ಇರುವುದಿಲ್ಲ.

2014ರಲ್ಲಿ ಬಿಜೆಪಿಯಲ್ಲಿ ಕೇಳಿಸುತ್ತಿದ್ದ ಒಂದೇ ಹೆಸರು ಮೋದಿ, ಮೋದಿ, ಮೋದಿ. ದಿಲ್ಲಿಯಿಂದ ಕನ್ಯಾಕುಮಾರಿವರೆಗೆ ಎಲ್ಲಿ ಚುನಾವಣೆ ನಡೆದರೂ ಮೋದಿ ಬಂದರೆ ಅಲ್ಲಿ ಬಿಜೆಪಿ ಗೆಲ್ಲುತ್ತೆ ಎಂಬಂತಹ ವಾತಾವರಣವಿತ್ತು.

ಆಗ ಹರ್ಯಾಣದಲ್ಲೂ ಬಿಜೆಪಿಗೆ ಬಹುಮತ ಬಂದಿದ್ದು ಮೋದಿಯಿಂದಲೇ ಎಂಬ ವಾತಾವರಣವಿತ್ತು. ಹಾಗಾಗಿ ಮೊದಲ ಬಾರಿಯ ಶಾಸಕ ಹಾಗೂ ಆರೆಸ್ಸೆಸ್‌ನಲ್ಲಿ ಮೋದಿಯ ಆಪ್ತರಾಗಿದ್ದ ಮನೋಹರ್ ಲಾಲ್ ಖಟ್ಟರ್‌ರನ್ನು ಅಚ್ಚರಿಯ ಅಭ್ಯರ್ಥಿಯಾಗಿ ಸಿಎಂ ಮಾಡಲಾಯಿತು.

ಈ ಬಗ್ಗೆ ರಾಜ್ಯದ ಬಿಜೆಪಿ ಹಿರಿಯ ನಾಯಕರಿಗೆ ಸಾಕಷ್ಟು ಅಸಮಾಧಾನ ಇದ್ದರೂ ಮೋದಿ ಆಯ್ಕೆ ಬಗ್ಗೆ ಅಪಸ್ವರ ತೆಗೆಯುವುದೇ ಅಸಾಧ್ಯ ಎಂಬ ಸ್ಥಿತಿಯಿತ್ತು.

ಆದರೆ ಹತ್ತು ವರ್ಷಗಳಲ್ಲಿ ಎಲ್ಲವೂ ಬಹಳಷ್ಟು ಬದಲಾಗಿದೆ. ಈಗ ಮೋದಿ ದಿಲ್ಲಿಯಲ್ಲೇ ಬಹುಮತ ಕಳಕೊಂಡು ಮಿತ್ರಪಕ್ಷಗಳ ಆಸರೆಯಲ್ಲಿದ್ದಾರೆ. ಅವರ ವರ್ಚಸ್ಸೂ ಕಳೆಗುಂದಿದೆ. ಗೆಲುವಿನ ಸ್ಟ್ರೈಕ್ ರೇಟ್ ಕೂಡ ಮೊದಲಿನ ಹಾಗೆ ಕಾಣುತ್ತಿಲ್ಲ. ಭಾಷಣಗಳಲ್ಲೂ ಮೊದಲಿನ ಓಘ ಮಾಯವಾಗಿದೆ.

ಈಗ ಮೋದಿ ಬಂದು ಗೆಲ್ಲಿಸುವುದು ಹಾಗಿರಲಿ, ಅವರು ಬಂದರೇ ವೋಟು ನಷ್ಟವಾಗುತ್ತದೆ ಎಂಬ ಭಯ ರಾಜ್ಯ ಬಿಜೆಪಿ ನಾಯಕರಲ್ಲಿ ಕಾಣಿಸತೊಡಗಿದೆ.

ಹರ್ಯಾಣದಲ್ಲಿ ಸೋಲಿನ ಭೀತಿಯೇ ಮೋದಿ ಈ ಚುನಾವಣೆಯಿಂದ ದೂರ ಇರಲು ಕಾರಣವಾಯಿತೇ ಎನ್ನುವುದು ಈಗ ಚರ್ಚೆಯ ವಿಷಯ.

ಸೋಲುವುದು ಬಿಜೆಪಿಗೆ ಖಚಿತವಾಗಿದೆ. ಹೀಗಿರುವಾಗ, ಮುಖ ತೋರಿಸಿ ಸೋಲು ತಂದುಕೊಳ್ಳುವುದಕ್ಕಿಂತ, ಮುಖ ತೋರಿಸದೇ ಸೋಲು ನೋಡುವುದು ಇದ್ದುದರಲ್ಲಿಯೇ ವಾಸಿ ಎನ್ನಿಸಿರಲೂ ಬಹುದು.

ಅದೇನೇ ಇದ್ದರೂ. ಮೋದಿ ಮುಖ ಬಿಜೆಪಿಗೆ ಮತ ತರುವುದಿಲ್ಲ, ಬದಲಾಗಿ ಬರುವ ಮತಗಳೂ ಬಾರದೇ ಹೋಗಲು ಕಾರಣವಾಗಬಹುದು ಎಂಬ ಆತಂಕ ಸ್ವತಃ ಬಿಜೆಪಿಯವರಲ್ಲೇ ಇದೆ.

ಈ ಸತ್ಯವನ್ನು ಮರೆಮಾಚುವುದು ಸಾಧ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಿ.ಎನ್. ಉಮೇಶ್

contributor

Similar News