‘ಕಾಡು ಮತ್ತು ಕ್ರೌರ್ಯ’ದಿಂದ ‘ಮಾಯಾಲೋಕ’ದ ವರೆಗೆ

ಕನ್ನಡದ ಹಿರಿಯ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ, ಛಾಯಾಗ್ರಹಣ, ವರ್ಣಚಿತ್ರಗಳು ಮತ್ತು ಅವರ ವಿಚಾರಧಾರೆಯನ್ನು ಒಳಗೊಂಡಿರುವ ಕೃತಿಗಳನ್ನು ಮೆಲುಕು ಹಾಕುವ ಸಲುವಾಗಿ ಇಂದಿನಿಂದ ಎರಡು ದಿನಗಳ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಜೀವನ ಮತ್ತು ಕೃತಿಗಳ ಕುರಿತು ಬೃಹತ್ ಸಾಕ್ಷ್ಯಚಿತ್ರ ಸರಣಿ ‘ತೇಜಸ್ವಿ ಎಂಬ ವಿಸ್ಮಯ’ ಲೋಕಾರ್ಪಣೆಯಾಗಲಿದೆ. ಅದರೊಂದಿಗೆ ಜುಲೈ 29ರಂದು ಪ್ರೊ ಕೆ.ಸ. ಶಿವಾರೆಡ್ಡಿ ಅವರು ಸಂಪಾದಿಸಿರುವ, ಎಂಎಂ ಪಬ್ಲಿಕೇಷನ್ಸ್ ಅವರು ಪ್ರಕಟಿಸಿರುವ 14 ಸಂಪುಟಗಳ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಸಮಗ್ರ ಕೃತಿ ಜಗತ್ತು’ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದ ಭಾಗವಾಗಿ ಅನೇಕ ಚರ್ಚೆ, ಸಂವಾದ, ಗೋಷ್ಠಿಗಳು ನಡೆಯಲಿದ್ದು, ಉನ್ನತ ಸಂಶೋಧನಾ ವಿದ್ವಾಂಸರು, ಪ್ರತಿಷ್ಠಿತ ಶಿಕ್ಷಣ ತಜ್ಞರು, ತೇಜಸ್ವಿ ಅವರ ಕುಟುಂಬ ಸದಸ್ಯರು ಮತ್ತು ಅವರ ಅನುಯಾಯಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತೇಜಸ್ವಿಯವರ ಕುರಿತು ಒಂದು ನುಡಿ ಚಿತ್ರ.

Update: 2024-07-28 10:11 GMT

 ತೇಜಸ್ವಿಯವರು ತೀರಿ ಹೋದ ನಂತರವೂ ಸತತ ಒಂದೆರಡು ವರ್ಷ ನಾನು ಅವರ ನಿರುತ್ತರಕ್ಕೆ ಹೋಗುತ್ತಿದ್ದೆ. ಹೆದ್ದಾರಿ ಪಕ್ಕದ ಗೇಟಿನಿಂದ ಅವರ ಮನೆಗೆ ಹೆಚ್ಚು ಕಡಿಮೆ ಅರ್ಧ ಫರ್ಲಾಂಗು ದೂರ. ಸಹಜವಾಗಿಯೇ ನನ್ನ ರೈತ ಮನಸ್ಸು ಆ ದಾರಿ ಯುದ್ಧಕ್ಕೂ ಇರುವ ಕಾಫಿ ಮೆಣಸು ಕಿತ್ತಳೆ ಏಲಕ್ಕಿಯನ್ನು ಗಮನಿಸುತ್ತಿತ್ತು. ಇವು ಯಾವುವೂ ನನ್ನ ಕೃಷಿಯಲ್ಲ. ತನ್ನದ್ದಲ್ಲದ ಹೊಸತನ್ನು ಅವಲೋಕಿಸುವುದು ಕೃಷಿಕನೊಬ್ಬನ ಸಹಜ ಗುಣ.

ತೇಜಸ್ವಿ ಇಲ್ಲದ ಮೇಲೆ ನಾನು ಗಮನಿಸಿದ್ದ ಒಂದು ಸತ್ಯ ಅವರ ಕೃಷಿ ತೋಟದಲ್ಲಾದ ಅಚ್ಚುಕಟ್ಟುತನ. ರಾಜೇಶ್ವರಿ ಮೇಡಂ ಅದನ್ನು ನಿಗಾ ಇಟ್ಟು ಅಷ್ಟೇ ಪ್ರೀತಿಯಿಂದ ಮಾಡಿಸುತ್ತಿದ್ದರು. ಕಾಫಿ ಕೃಷಿಯಲ್ಲಿ ಗಿಡಮರಗಳ ಅಡಿಗೂಡಿಸಿ ಸ್ವಚ್ಛತೆ; ಮೇಲ್ಪದರದ ನೆರಳು ಮರಗಳನ್ನು ಕಸಿಮಾಡಿ ಕತ್ತರಿಸಿ ಕಾಫಿ ಗಿಡಗಳ ಬುಡಗಳಿಗೆ ಸೇರಿಸುವುದು, ಹುಲ್ಲು ಕಸಮಸಗಳನ್ನು ಹೆರೆದು ಕೊಳೆಯಿಸಿ ಬುಡಗಳಿಗೆ ಕೊಡುವುದು ಇವುಗಳನ್ನು ಕೆಲವರಂತೂ ರಂಗೋಲಿ ಇಟ್ಟಷ್ಟು ಚಂದಮಾಡುತ್ತಾರೆ. ತೇಜಸ್ವಿಯವರು ಕೂಡ ಅದನ್ನು ಮಾಡಿಸುತ್ತಿದ್ದರು. ಆದರೆ ರಾಜೇಶ್ವರಿಯವರ ಕೃಷಿ ಕ್ರಮ ನೋಡಿದ ಮೇಲೆ ತೇಜಸ್ವಿಯವರ ಕೃಷಿ ವಿಧಾನ ಸ್ವಲ್ಪ ಸಪ್ಪೆ ಎಂದು ನನಗೆ ಅನಿಸಿತ್ತು. ಇದಕ್ಕೆ ಕಾರಣ ಆರ್ಥಿಕ ಲಾಭಕ್ಕಿಂತ ತಾವು ಬಯಸಿದಂತೆ ಬದುಕಲು ಅವರಿಗೊಂದು ಪ್ರತ್ಯೇಕ ನಿರ್ಜನ ಹಸಿರು ಆವಾರ ಬೇಕಾಗಿತ್ತು, ಹೊರತು ಕೃಷಿಯೇ ಪ್ರಧಾನ ಎನ್ನುವ ಉದ್ದೇಶ ಅವರದಾಗಿರಲಿಲ್ಲ. ಬದುಕುವ ತುಂಡುಭೂಮಿಯಲ್ಲಿ ಅನ್ನದಷ್ಟೇ ಪ್ರೀತಿಸುವ ಗಿಡ ಮರ ನಿಬಿಡ ಹಸಿರು ಕೀಟ ಪಕ್ಷಿ ಕಾಡಾಡಿ ಬಾನಾಡಿ ಇವುಗಳೆಲ್ಲ ತಾನು ಬಯಸುವಾಗಲೆಲ್ಲ ಸಿಗುವಷ್ಟು ಹತ್ತಿರದಲ್ಲಿರಬೇಕು ಎಂಬ ಉದ್ದೇಶ ತೇಜಸ್ವಿಯವರದಾಗಿತ್ತು.

ಗಿಡ ಬಳ್ಳಿ ಮರಗಳು ಬಿಡುವ ಹೂವು ಕಾಯಿಗಳಲ್ಲಿ ಲಾಭವನ್ನು ಬಯಸುವ ಯಾವ ಕೃಷಿಕನೂ ಅವುಗಳ ಮೇಲೆ ಕೂರುವ ಪಕ್ಷಿಗಳ ಬಣ್ಣಗಳ ಬಗ್ಗೆ ಕೀಟಗಳ ಸೌಂದರ್ಯದ ಬಗ್ಗೆ, ಹರಿಯುವ ನೀರಿನ ನಿನಾದದ ಬಗ್ಗೆ, ಬೇಲಿಯಡಿಯಲ್ಲಿ ಸರಿದು ಹೋಗುವ ಕೌಜುಗಗಳ ಬಗ್ಗೆ ಯೋಚಿಸಲಾರ. ಲಾಭದ ರೈತನಿಗೆ ಗಿಡ ತುಂಬುವ ಕಾಯಿ ಹಣ್ಣುಗಳು ದುಡ್ಡಾಗಿ ಕಾಣಿಸುತ್ತವೆಯೋ ಹೊರತು ಪ್ರಕೃತಿಯ ಸಾಧ್ಯತೆಗಳಾಗಿ ಗೋಚರಿಸಲಾರವು.

ಕೊನೆ ಕ್ಷಣದವರೆಗೆ ನಿಸರ್ಗ ಸಂಗದಲ್ಲಿದ್ದು ಅಲ್ಲಿಯ ಕೌತುಕ, ಸಾವಯವ ಸಂಬಂಧ, ಕ್ರೌರ್ಯ ಎಲ್ಲವನ್ನು ಕಂತು ಕಂತಾಗಿ ಸೃಜನಶೀಲ ಸಾಹಿತ್ಯ ದಾರಿಯಲ್ಲಿ ಧಾರೆಯೆರೆದವರು ತೇಜಸ್ವಿಯವರು. ಅದನ್ನು ನೀವು ‘ಚಿದಂಬರ ರಹಸ್ಯ’ ಎಂದು ಕರೆಯಿರಿ, ‘ಪರಿಸರದ ಕಥೆ’ ಎಂದು ಕರೆಯಿರಿ, ‘ಕರ್ವಾಲೊ’, ‘ಜುಗಾರಿ ಕ್ರಾಸ್’, ‘ನಿಗೂಢ ರಹಸ್ಯ’.... ಏನು ಬೇಕಾದರೂ ಕರೆಯಿರಿ. ಒಟ್ಟಾರೆ ಅದು ತೇಜಸ್ವಿ ಮತ್ತು ನಿಸರ್ಗದ ಕೂಡು ಸೂಕ್ಷ್ಮಗಳೇ ಆಗಿವೆ.

ನಾನಿಲ್ಲಿ ಬರೆಯುತ್ತಿರುವುದು ತೇಜಸ್ವಿ ಅವರ ಮೊತ್ತ ಮೊದಲ ಕಾದಂಬರಿ ‘ಕಾಡು ಮತ್ತು ಕ್ರೌರ್ಯ’ ಮತ್ತು ಅವರ ಕೊನೆಯ ಕಾದಂಬರಿ ‘ಮಾಯಾಲೋಕ’ದ ಬಗ್ಗೆ. ಕಾಡು ಮತ್ತು ಕ್ರೌರ್ಯ ಕಾದಂಬರಿಯನ್ನು ತೇಜಸ್ವಿ ಬರೆದದ್ದು 1962ರಲ್ಲಿ. ಲೇಖಕ ಜೀವಂತ ಇರುವಾಗ ಪ್ರಕಟವಾಗದೆ ಇದ್ದ ಕಾದಂಬರಿಯದು ಮತ್ತು ಅದು ಪೂರ್ಣಚಂದ್ರ ತೇಜಸ್ವಿ ಅವರ ಮೊತ್ತ ಮೊದಲ ಕಾದಂಬರಿಯೂ ಹೌದು. ಇವಿಷ್ಟು ಈ ಕೃತಿಯನ್ನು ಪ್ರವೇಶಿಸುವಾಗ ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯಗಳು.

ಈ ಕಾದಂಬರಿಯನ್ನು ಪ್ರಕಟಿಸಬೇಕು ಮತ್ತು ಇದನ್ನು ಪರಿಷ್ಕರಿಸಬೇಕೆಂಬ ಉದ್ದೇಶದಿಂದ ಕಥೆಗಾರರು ಅನೇಕ ಬಾರಿ ತಿದ್ದಿದ್ದಾರೆ. ತಿದ್ದುವಾಗಲೆಲ್ಲ ಮತ್ತೆ ಮತ್ತೆ ಓದಿದ್ದಾರೆ. ಪ್ರತೀ ಶಬ್ದ ವಿಚಾರಗಳ ಮೇಲೆ ಕುಕ್ಕಿದ್ದಾರೆ. ಇದು ಬಹುಪಾಲು ಕೃತಿಕಾರರು ಲೇಖಕರಾಗಿ ಬರಹಗಾರರಾಗಿ ವಿಕಸಿಸುವ ಅಂಶ. ತಿದ್ದುವಾಗಲೆಲ್ಲ ತೇಜಸ್ವಿಯವರಿಗೆ ಇದನ್ನು ಪ್ರಕಟಿಸುವುದು ಬೇಡ ಎನ್ನುವ ಭಾವವೇ ಅತಿಯಾಗಿ ಈ ಕೃತಿ ಅವರು ಇರುವ ವರೆಗೆ ಪ್ರಕಟವಾಗದೆ ಹಾಗೆಯೇ ಉಳಿದಿತ್ತು.

ಹಾಗಂತ ಪ್ರಕಟವಾಗುವುದು ಬೇಡ ಎಂದಿದ್ದರೂ ಪ್ರಕಟಿಸಬೇಕೆಂಬ ಆಸೆ ಅವರಲ್ಲಿತ್ತು ಎಂಬುದಕ್ಕೆ ಒಂದು ಪುಟ್ಟ ಸಾಕ್ಷಿ ಸಿಗುತ್ತದೆ. ಅದು ಈ ಕೃತಿಯ ನಾಲ್ಕನೆಯ ಮರು ಪ್ರಕಟಣೆಯ ಸಂದರ್ಭದಲ್ಲಿ ಅವರ ಶ್ರೀಮತಿ ರಾಜೇಶ್ವರಿ ಅವರಿಗೆ ಲಭ್ಯವಾಗುವ ‘ಓದುವ ಮುನ್ನ’ ಎನ್ನುವ ಲೇಖಕನ ಅರಿಕೆ. ಈ ಕೃತಿಯನ್ನು ತೇಜಸ್ವಿಯವರು ಬರೆದು ನಾಲ್ಕು ವರ್ಷದ ನಂತರ ಈ ಮುನ್ನುಡಿ-ಪ್ರವೇಶಿಕೆಯನ್ನು ತೇಜಸ್ವಿ ಸಿದ್ಧಗೊಳಿಸುತ್ತಾರೆ. ರಾಜೇಶ್ವರಿ ಅವರಿಗೆ ಲಭ್ಯವಾದ ಈ ಪ್ರವೇಶಿಕೆಯನ್ನು ಆನಂತರದ ಪ್ರಕಟಣೆಗೆ ಬಳಸಲಾಗುತ್ತದೆ.

ಈ ಸಂದರ್ಭದಲ್ಲಿ ನನಗೆ ನೆನಪಾಗುವ ಬಹು ಮುಖ್ಯ ವಿಚಾರ ತೇಜಸ್ವಿಯವರ ತಂದೆ ಕುವೆಂಪು ಅವರು ಬರೆಯುವ ‘ಕಾನೂರು ಹೆಗ್ಗಡತಿ’ ಎಂಬ ಮಹಾ ಕಾದಂಬರಿಗೆ ಲೇಖಕರೇ ಆದ ಕುವೆಂಪು ಬರೆಯುವ ಅರಿಕೆ ಅಥವಾ ಮುನ್ನುಡಿ. ಇದು ಕನ್ನಡಕಷ್ಟೇ ಅಲ್ಲ ಭಾರತದ ಕಾದಂಬರಿ ಸಾಹಿತ್ಯದಲ್ಲೇ ಒಂದು ವಿಶಿಷ್ಟ ಮುನ್ನುಡಿ. ತನ್ನ ಕಾದಂಬರಿಯನ್ನು ಓದುಗನೊಬ್ಬ ಹೀಗೆಯೇ ಪ್ರವೇಶಿಸಬೇಕು ಎಂದು ಕುವೆಂಪು ಎಚ್ಚರಿಸುವ ರೀತಿ ವಿಶಿಷ್ಟವಾದದ್ದು.....‘‘ಓದುಗ ಮಹಾಶಯನೇ ಈ ಕಾದಂಬರಿಯನ್ನು ಪ್ರವೇಶಿಸುವುದೆಂದರೆ ಮೋಟಾರ್ ವಾಹನದಲ್ಲಿ ಕುಳಿತು ನಗರ ಪ್ರದಕ್ಷಿಣೆ ಬಂದಂತೆ ಅಲ್ಲ’’ ಎನ್ನುತ್ತಾರೆ ಕುವೆಂಪು. ‘ಕಾಡು ಮತ್ತು ಕ್ರೌರ್ಯ’ದ ತೇಜಸ್ವಿ ಅವರ ಓದುವ ಮುನ್ನ ಎಂಬ ಸದಾಶಯದಲ್ಲೂ ಇದೇ ಸಾಮ್ಯತೆ ಇದೆ.

ತಾನು ಬರೆದ ಯಾವುದೇ ಕೃತಿಗಳಿಗೆ ತನ್ನದಾಗಲಿ, ಬೇರೆ ಲೇಖಕರಿಂದಾಗಲಿ ಮುನ್ನುಡಿ ಬರೆಸದ ತೇಜಸ್ವಿಯವರ ಮೊದಲ ಕಾದಂಬರಿಯ ಈ ಪ್ರವೇಶಿಕೆ ನನಗೆ ಮುಖ್ಯವಾಗುವುದು ಎರಡು ಕಾರಣಗಳಿಗೆ. ತೇಜಸ್ವಿಯವರಿಗೆ ಕಾದಂಬರಿಯ ಮುನ್ನ ಇದ್ದ ಸೃಜನಶೀಲ ಕಾವ್ಯದ ಆಸಕ್ತಿಗಾಗಿ. ಇನ್ನೊಂದು ಅವರು ಆ ಅರಿಕೆಯಲ್ಲಿ ಬರೆದ ಈ ಕಾದಂಬರಿಯ ಅಂತಃಸತ್ವ ಅದರ ವಸ್ತುವಿನಿಂದ ಹೊರಗೆ ಬಂದಿದೆ; ಅರಿವಿನತ್ತ ಕಲಾಕೃತಿಯ ಪ್ರಯತ್ನ ಬೇರೆ, ಆಲೋಚನೆಯ ಮಾರ್ಗ ಬೇರೆ ಎಂದು ಹೇಳುವ ಮೂಲಕ ತೇಜಸ್ವಿಯವರು ಈ ಕಾದಂಬರಿಯ ವಸ್ತುವಿಗೊಂದು ಸ್ಪಷ್ಟತೆ ಕೊಡುತ್ತಾರೆ.

ಕನ್ನಡದ ಬೇರೆ ಪ್ರಮುಖ ಕಾದಂಬರಿಕಾರರ ಕೃತಿಗಳನ್ನು ಓದುವ ಧಾಟಿಯಲ್ಲಿ ತೇಜಸ್ವಿಯವರನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅಂತಹ ಪೂರ್ವಗ್ರಹದಿಂದ ಪ್ರವೇಶಿಸಿದರೆ ಇಲ್ಲೊಂದು ಅರಾಜಕಥೆ ಗೋಚರಿಸುತ್ತದೆ. ಪಾತ್ರ, ಸನ್ನಿವೇಶ, ಸಂದರ್ಭ, ವಸ್ತು, ಆಶಯ, ಸಂದೇಶ ಎಲ್ಲದರಲ್ಲೂ ಒಂದು ನಿಯಮ ಶಿಷ್ಟಾಚಾರ ಶಿಸ್ತನ್ನು ಬಯಸಿ ಪ್ರವೇಶಿಸುವ ಓದುಗನಿಗೆ ಇಲ್ಲೊಂದು(ಮಾಯಾಲೋಕ) ಅರಾಜಕತೆ ಸುಲಭದಲ್ಲಿ ಗೋಚರಿಸುತ್ತದೆ.

ನಾಗರಿಕತೆಯಲ್ಲಿ ಸಾಗಿದ ಮನುಷ್ಯ ತಾನು ಕಲಿತ ಕಲಿಕೆ ಮತ್ತು ಸಮುದಾಯದತ್ತವಾಗಿ ಬದುಕಿಗೊಂದು ನಿಯಮಗಳನ್ನು ರೂಪಿಸಿಕೊಂಡಿರುತ್ತಾನೆ. ಹೀಗೆಯೇ ಮಾತನಾಡಬೇಕು, ವರ್ತಿಸಬೇಕು ಎಂಬ ನಿಯಮಗಳು ನಮ್ಮ ಸಾದಾಸೀದ ಬದುಕಿನಲ್ಲೂ ಇರುತ್ತದೆ. ಆದರೆ ಕಾಡು ಹಾಗಲ್ಲ, ಅಲ್ಲಿ ಶಿಕ್ಷಿತ ಶಿಷ್ಟಾಚಾರದ ಆಚೆ ಕಾಡು ಒಪ್ಪುವ ಒಂದು ಅವ್ಯವಸ್ಥಿತ ನೆಲೆಯಲ್ಲಿ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಯಾವ ಮರದ ಬುಡದಲ್ಲಿ ಯಾವ ಬಳ್ಳಿ ಇರುತ್ತದೆ, ಯಾವ ಬಳ್ಳಿಗೆ ಯಾವ ಕೀಟ ಬರುತ್ತದೆ ಇದೊಂದು ರೀತಿ ಮನುಷ್ಯನ ಲಕ್ಷ್ಯಕ್ಕೆ ಸುಲಭಗ್ರಹ್ಯವಲ್ಲದ ನಿಗೂಢ ಸಮುರಚನೆ.

ಅಲ್ಲಿಯ ಯಾವ ನಡೆ ಕೂಡ ಮನುಷ್ಯ ಜೀವನ ವಿನ್ಯಾಸದಲ್ಲಿ ಇರುವುದಿಲ್ಲ. ಅವೆಲ್ಲವೂ ಕೂಡ ಪ್ರಕೃತಿ ರೂಪಿಸಿದ ಒಂದು ಸಾವಯವ ರಹಸ್ಯ ಬಂಧ. ತೇಜಸ್ವಿ ತಾನು ಮಾತ್ರವಲ್ಲದೆ ತನ್ನೆಲ್ಲ ಪಾತ್ರಗಳನ್ನು ಇದೇ ಕಾಡಿನ ಅರಾಜಕತೆಯಲ್ಲಿ ತೂರಿಸಿ ಅಲ್ಲಿಂದಲೇ ಕಥೆ ಹೇಳುತ್ತಾರೆ.

ಈ ಕಾರಣಕ್ಕೇ ನಿಯಮ ಬದ್ಧ ಆಧುನಿಕರಿಗೆ ತೇಜಸ್ವಿ ಹೇಳುವ ಮಾಯಾಲೋಕದ ಯಾವುದೇ ಕಥೆ ಸನ್ನಿವೇಶ ಭಾಗಗಳು ವಿಸ್ಮಯವಾಗಿ ಪ್ಯಾಂಟಸಿ ತರ ಕಾಣಿಸಿಕೊಳ್ಳುತ್ತವೆ. ಮಾಯಾಲೋಕದ ಆರಂಭದಲ್ಲಿ ಇಲ್ಲೊಂದು ಕಥೆ ಸಿಗುತ್ತದೆ ಎಂಬುದಕ್ಕೆ ಸಾಕ್ಷಿಯಾಗುವ ಯಾವ ಲಕ್ಷಣಗಳು ಕಾಣಿಸುವುದಿಲ್ಲ. ಪ್ರಕೃತಿಯ ನಡುವೆ ನಿಂತು ಅಲ್ಲಿಂದಲೇ ನೇರ ವರದಿ ಮಾಡುವ ಹಾಗೆ ಥಿಸಿಸ್ ಮಾದರಿಯ ಕಥಾನಕವಾಗಿ ಆರಂಭದಲ್ಲಿ ಕಾಣಿಸುತ್ತದೆ. ಕ್ರಮೇಣ ಜೀವ ಕೇಂದ್ರಿತ ಪರಿಸರದ ಕಥೆಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ಪರಿಸರ ನಾಶದ ಸೂಕ್ಷ್ಮ ಎಳೆಗಳಿವೆ. ಮಲೆನಾಡಿನಲ್ಲಿ ಅಂತರ್ಜಲ ದಿನೇ ದಿನೇ ಕುಸಿಯುತ್ತಿರುವ ಅಪಾಯದ ಸೂಚನೆಗಳಿವೆ. ಒಂದು ಊರಿಗೆ ಕೆಂಪು ಬಸ್ ಬಂದಾಗ, ಟೆಲಿಫೋನ್, ಸರ್ಕಸ್ ಕರಾಟೆ ಕಲಿತವರು ಬಂದಾಗ ಏನೇನು ಬದಲಾವಣೆಗಳಾಗುತ್ತವೆ ಎನ್ನುವ ವಿವರಗಳು ಸಿಗುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ನರೇಂದ್ರ ರೈ ದೇರ್ಲ

contributor

Similar News