ಕೃಷಿ, ತೋಟಗಾರಿಕಾ ಬೆಳೆಗಳ ಮೇಲೆ ಕಾಡುಪ್ರಾಣಿ ದಾಳಿ

Update: 2024-04-08 06:28 GMT

ಉಡುಪಿ: ಕೃಷಿ ಬೆಳೆಗಳ ಮೇಲೆ ಕಾಡುಪ್ರಾಣಿಗಳ ದಾಳಿ ಇಂದು ನಿನ್ನೆಯದ್ದಲ್ಲ. ಹಲವು ವರ್ಷಗಳಿಂದ ಮಾನವ ಮತ್ತು ಪ್ರಾಣಿಗಳ ಮಧ್ಯೆ ಸಂಘರ್ಷಗಳು ನಡೆಯುತ್ತಲೇ ಇದೆ. ಇದಕ್ಕೆ ಪಶ್ಛಿಮಘಟ್ಟಗಳ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆ ಕೂಡ ಹೊರತಾಗಿಲ್ಲ. ಇಲ್ಲಿ ರೈತರು ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ಇನ್ನೂ ಕೂಡ ಯಾವುದೇ ಪರಿಹಾರ ದೊರೆತಿಲ್ಲ.

‘ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಹಾವಳಿಯನ್ನು ರೈತರು ಎದುರಿಸುತ್ತಿದ್ದಾರೆ. ಮಂಗ, ಜಿಂಕೆ, ಕಾಡುಹಂದಿ, ನವಿಲು ಮತ್ತು ಕಾಡೆಮ್ಮೆಗಳು ಸಾಮಾನ್ಯವಾಗಿ ಕೃಷಿ ಭೂಮಿಗಳಿಗೆ ದಾಳಿ ನಡೆಸಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ನಾಶ ಮಾಡುತ್ತಿದೆ. ಇದೇ ಕಾರಣಕ್ಕೆ ನಷ್ಟಕ್ಕೆ ಒಳಗಾದ ರೈತರು ಇದೀಗ ಕೃಷಿ ಮಾಡುವುದನ್ನೇ ಬಿಟ್ಟು ದೂರು ಉಳಿಯುತ್ತಿದ್ದಾರೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

‘ಕೆಲವು ಪ್ರದೇಶದಲ್ಲಿ ಮಂಗಗಳು ಬಾಳೆ ತೋಟಗಳನ್ನು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ರೈತರು ಬದಲಾಗಿ ಕುಬ್ಜ ಬಾಳೆಗಳನ್ನು ಬೆಳೆಯಲು ಆರಂಭಿಸಿದರು. ಇದೀಗ ಈ ಬಾಳೆಗಳನ್ನು ನವಿಲುಗಳು ನಾಶ ಮಾಡುತ್ತಿವೆ. ಪ್ರಾಣಿ ಪಕ್ಷಿಗಳು ಸಾಕಷ್ಟು ಬುದ್ಧಿವಂತರಾಗಿವೆ. ಕೃಷಿಕರು ಮಂಗಗಳನ್ನು ಭಯಭೀತ ಗೊಳಿಸಲು ಪರವಾನಿಗೆ ಪಡೆದ ಬಂದೂಕುಗಳನ್ನು ಬಳಸುತ್ತಿದ್ದಾರೆ. ಅದೇ ರೀತಿ ಪ್ರಾಣಿಗಳನ್ನು ಓಡಿಸಲು ಪಟಾಕಿಗಳನ್ನು ಕೂಡ ಬಳಸುತ್ತೇವೆ. ಆದರೆ ಇವೆಲ್ಲವೂ ತಾತ್ಕಾಲಿಕ ಪರಿಹಾರಗಳಾಗಿವೆ. ಸದ್ಯ ಪ್ರಾಣಿಗಳು ಸೇವಿಸದ ಕಾಳುಮೆಣಸನ್ನು ಮಾತ್ರ ನಮಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಅವರು ತಮ್ಮ ಸಮಸ್ಯೆ ಗಳನ್ನು ತೋಡಿಕೊಂಡರು.

ಪ್ರಾಣಿ ಓಡಿಸಲು ಹಳೆಯ ತಂತ್ರ: ‘ಒಂದೆಡೆ ಬೆಳೆ ಬೆಲೆ ತೀರಾ ಕಡಿಮೆಯಾಗಿದ್ದು, ಇನ್ನೊಂದೆಡೆ ರೈತರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಪರ್ಯಾಯ ಸಿದ್ಧತೆ ಮಾಡಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವುದೇ ತೊಂದರೆ ಇಲ್ಲದೆ ಪ್ರಾಣಿಗಳನ್ನು ಓಡಿಸಲು ಬಳಸುವ ವಿವಿಧ ತಂತ್ರಗಳು ಹಾಗೂ ಮಾರ್ಗಗಳು ಇದೀಗ ಹಳೆಯದಾಗುತ್ತಿವೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.

ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಶೆಟ್ಟಿ ಪ್ರಕಾರ, ಈ ಪ್ರದೇಶದ ಕೆಲವು ರೈತರು ಮಂಗಗಳು ಸಸ್ಯಾಹಾರಿ ಎಂದು ನಂಬಿದ್ದರಿಂದ ಮಂಗಗಳನ್ನು ಓಡಿಸಲು ಮೀನು ಮತ್ತು ಮೀನಿನ ಎಣ್ಣೆಯನ್ನು ಸಿಂಪಡಿಸುತ್ತಿದ್ದರು. ಈ ಪ್ರಯೋಗ ಪರಿಣಾಮಕಾರಿ ಎಂದು ಕಂಡುಬಂತು. ಆದರೆ ಆರು ತಿಂಗಳ ನಂತರ ಮಂಗಗಳು ಈಗ ಮೀನಿನ ವಾಸನೆಗೂ ಒಗ್ಗಿಕೊಂಡು ಮತ್ತೆ ನಾಡಿಗೆ ಬರುತ್ತಿದೆ. ‘ನಮ್ಮ ಪ್ರದೇಶದಲ್ಲಿ ಯಾವುದೇ ಕಾಡು ಆನೆಗಳಿಲ್ಲ. ಮಂಗಗಳು ಮತ್ತು ಇತರ ಜೀವಿಗಳು ಅರಣ್ಯದಿಂದ ಹೊರ ಬರುತ್ತಿರುವುದರಿಂದ ಆಹಾರ ಸರಪಳಿಯ ಕಾರಣಕ್ಕೆ ಚಿರತೆಗಳು ಕೂಡ ಮಾನವ ವಾಸಸ್ಥಾನಗಳಿಗೆ ನುಗ್ಗಲು ಪ್ರಾರಂಭಿಸಿವೆ. ಚಿರತೆಗಳು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೇಟೆ ಯಾಡುತ್ತಿವೆ ಎಂದು ಸತ್ಯನಾರಾಯಣ ಉಡುಪ ಮಾಹಿತಿ ನೀಡಿದರು.

<ಕಾಡುಪ್ರಾಣಿ ದಾಳಿ ಪ್ರಕರಣಗಳು: ಉಡುಪಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಕೃಷಿ ಮತ್ತು ಜನರ ಮೇಲೆ ದಾಳಿ ನಡೆಸಿದ ಪರಿಣಾಮ ಅಪಾರ ನಷ್ಟಗಳು ಸಂಭವಿಸಿವೆ.

2023-24ರಲ್ಲಿ ಕಾಡುಪ್ರಾಣಿಗಳ ದಾಳಿಯಿಂದ ಒಟ್ಟು 383 ಪ್ರಕರಣಗಳಲ್ಲಿ 63.03 ಲಕ್ಷ ರೂ. ನಷ್ಟವಾಗಿದೆ. 300 ಬೆಳೆ ಹಾನಿ ಪ್ರಕರಣಗಳಿಂದ ಒಟ್ಟು 32.2 ಲಕ್ಷ ರೂ. ಮತ್ತು ಬಲಿಯಾದ ಎರಡು ಜೀವಗಳಿಗೆ ಒಟ್ಟು 12.5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕಾಡುಪ್ರಾಣಿಗಳ ದಾಳಿಯಿಂದ ನಾಲ್ವರು ಗಾಯಗೊಂಡಿದ್ದು, 73 ಸಾವಿರ ರೂ. ಪರಿಹಾರ ನೀಡಲಾಗಿದೆ. ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರಿಗೆ 2.5 ಲಕ್ಷ ರೂ. ಪರಿಹಾರ ನೀಡಲಾಗಿದೆ. 21 ಜಾನುವಾರುಗಳು ಸಾವಿಗೀಡಾಗಿದ್ದು, ಒಟ್ಟು 9.63 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

2022-23ರಲ್ಲಿ ಒಟ್ಟು 308 ಕಾಡುಪ್ರಾಣಿ ದಾಳಿ ಪ್ರಕರಣಗಳು ವರದಿ ಯಾಗಿದ್ದು, 37.99 ಲಕ್ಷ ಪರಿಹಾರ ನೀಡಲಾಗಿದೆ. 239 ಬೆಳೆ ನಷ್ಟ ಪ್ರಕರಣಗಳಲ್ಲಿ ಒಟ್ಟು 13.53 ಲಕ್ಷ ರೂ., 66 ಜಾನುವಾರು ಸಾವು ಪ್ರಕರಣಗಳಲ್ಲಿ 8.29 ಲಕ್ಷ ರೂ., ಎರಡು ಮಾನವ ಸಾವುಗಳಲ್ಲಿ 15 ಲಕ್ಷ ರೂ., ಒಂದು ಗಾಯ ಪ್ರಕರಣದಲ್ಲಿ 1.17 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎದು ಇಲಾಖೆ ಮೂಲಗಳು ತಿಳಿಸಿವೆ.

ಇನ್ನೂ ಕೈಗೂಡದ ಮಂಕಿ ಪಾರ್ಕ್ ಯೋಜನೆ

ಕಾಡು ಪ್ರಾಣಿಗಳಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಉಳಿಸಲು ಹಿಮಾಚಲ ಪ್ರದೇಶ ಸರಕಾರದ ಕಾರ್ಯತಂತ್ರಗಳನ್ನು ಅಧ್ಯಯನ ಮಾಡಲು ಕೃಷಿಕರು ಮತ್ತು ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು 2010ರಲ್ಲಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮಂಕಿ ಪಾರ್ಕ್ ಸೇರಿದಂತೆ ಇತರ ಪರಿಹಾರ ಯೋಜನೆಯನ್ನು ಒಳಗೊಂಡ 27 ಕೋಟಿ ರೂ. ಮೊತ್ತದ ಪ್ರಸ್ತಾವನೆ ಯನ್ನು ಸರಕಾರಕ್ಕೆ ಮಾಡಲಾಗಿತ್ತು. ಆದರೆ ಈವರೆಗೆ ಯಾವುದೇ ಸರಕಾರ ಇದಕ್ಕೆ ಸ್ಪಂದಿಸಿಲ್ಲ ಎಂದು ಕೃಷಿಕರು ಆರೋಪಿಸಿದ್ದಾರೆ. ಅರಣ್ಯಾಧಿಕಾರಿಗಳ ಪ್ರಕಾರ ‘ಮಂಕಿ ಪಾರ್ಕ್‌ಗೆ ಅಂತಹ ಯಾವುದೇ ಪ್ರಸ್ತಾಪವಿಲ್ಲ. ಈ ಯೋಜನೆ ಬಹಳ ದೀರ್ಘಕಾಲದ್ದಾಗಿದೆ ಮತ್ತು ಅಷ್ಟು ಸುಲಭ ಅಲ್ಲ. ಇದಕ್ಕೆ ಹಣ್ಣಿನ ಮರಗಳನ್ನು ನೆಡಬಹುದಾದ ದ್ವೀಪದಂತಹ ಪ್ರದೇಶಗಳನ್ನು ಗುರುತಿಸುವ ಅಗತ್ಯ ಇದೆ. ಇದು ಬೆಳೆಯಲು ಸುಮಾರು 20 ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾ ಗುತ್ತದೆ. ಮುಂದೆ ಮಂಗಗಳು ಅದಕ್ಕೆ ಹೊಂದಿಕೊಳ್ಳಬೇಕು. ಅವು ಅಷ್ಟು ಸರಳವಾಗಿ ಇಲ್ಲ. ಇದಕ್ಕೆ ಪರ್ಯಾಯವಾಗಿ ಕೋತಿಗಳಿಗೆ ಪ್ರತಿದಿನವೂ ಆಹಾರ ಸಿಗುವಂತೆ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.


ನವಿಲುಗಳು ತರಕಾರಿ ಗಿಡಗಳ ಹೂವುಗಳನ್ನು ಅರಳಲು ಬಿಡುತ್ತಿಲ್ಲ. ಮಂಗಗಳು ತೆಂಗಿನ ನೀರನ್ನು ಕುಡಿಯುತ್ತವೆ ಮತ್ತು ಹೆಚ್ಚಿನ ಮೊಳಕೆಗಳನ್ನು ಹಾಳು ಮಾಡುತ್ತವೆ. ಇದರಿಂದ ಶೇ.50ರಷ್ಟು ಬೆಳೆ ನಾಶವಾಗಿದೆ. ಇದಕ್ಕೆ ಸರಕಾರ ನೀಡುವ ಬೆಳೆ ನಷ್ಟ ಪರಿಹಾರವು ಸಾಕಾಗುವುದಿಲ್ಲ ಮತ್ತು ಅದನ್ನು ಪಡೆಯಲು ಹರಸಾಹಸವೇ ಪಡಬೇಕು. ಮೀಸಲು ಅರಣ್ಯ ಪ್ರದೇಶದ ಸುತ್ತಲೂ ಅಧಿಕಾರಿಗಳು ಸೂಕ್ತ ಬೇಲಿ ಅಳವಡಿಸಬೇಕು. ಇದರಿಂದ ಕಾಡುಪ್ರಾಣಿಗಳ ಹಾವಳಿ ತಡೆಯಲು ಸಾಧ್ಯವಾಗುತ್ತದೆ.

 ಕುದಿ ಶ್ರೀನಿವಾಸ ಶೆಟ್ಟಿ, ಪ್ರಗತಿಪರ ಕೃಷಿಕರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಝೀರ್ ಪೊಲ್ಯ

contributor

Similar News