ದಿಲ್ಲಿಯಲ್ಲಿ ಬಿಜೆಪಿ ಹ್ಯಾಟ್ರಿಕ್ ಬಾರಿಸುವುದೇ?

ಈಗ ‘ಇಂಡಿಯಾ’ ಮೈತ್ರಿಕೂಟದ ಭಾಗವಾದ ಎಎಪಿ ಮತ್ತು ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿವೆ. 4ರಲ್ಲಿ ಎಎಪಿ, 3ರಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ರಾಜಧಾನಿಯಲ್ಲಿ ನೆಲ ಕಚ್ಚಿರುವ ಕಾಂಗ್ರೆಸ್ ನೆಲೆ ಕಂಡುಕೊಳ್ಳಲು ಹೋರಾಡುತ್ತಿದೆ. ‘ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಕೇಜ್ರಿವಾಲ್’ ಎಂಬ ದಿಲ್ಲಿ ಮತದಾರರ ನಿಲುವಿನಲ್ಲಿ ಕೊಂಚ ಬದಲಾವಣೆ ಆಗಿರುವಂತೆ ಕಾಣುತ್ತಿದೆ. ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿ, ಬಿಡುಗಡೆಯಾದ ಬಳಿಕ ಕೇಜ್ರಿವಾಲ್ ಬಗ್ಗೆ ಅನುಕಂಪ ಇರುವಂತಿದೆ. ಅದು ಮತಗಳಾಗಿ ಪರಿವರ್ತನೆ ಆಗುವುದೇ ಎಂಬುದು ಪ್ರಶ್ನೆ.

Update: 2024-05-23 06:20 GMT

ದಿಲ್ಲಿ ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆದಿತ್ತು. ಅಣ್ಣಾ ಹಝಾರೆ ಆಂದೋಲನದ ನೇತೃತ್ವ ವಹಿಸಿದ್ದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (ಆಗ ಮುಖ್ಯಮಂತ್ರಿ ಆಗಿರಲಿಲ್ಲ), ಕಿರಣ್ ಬೇಡಿ ಮತ್ತಿತರರು ಅವರಿಗೆ ಸಾಥ್ ನೀಡಿದ್ದರು. ಇದು 2011ರಲ್ಲಿ ನಡೆದ ಚಳವಳಿ. ಒತ್ತಡಕ್ಕೆ ಮಣಿದ ಆಗಿನ ಯುಪಿಎ ಸರಕಾರ ಲೋಕಪಾಲ ಮಸೂದೆ ಅಂಗೀಕರಿಸಿತು.

ಈ ಆಂದೋಲನದ ಬಳಿಕ ನೇಪಥ್ಯಕ್ಕೆ ಸರಿದಿದ್ದ ಅಣ್ಣಾ ಹಝಾರೆ ದಶಕದ ಬಳಿಕ ದಿಢೀರನೆ ಸಾರ್ವಜನಿಕವಾಗಿ ಪ್ರತ್ಯಕ್ಷರಾಗಿದ್ದಾರೆ. ಈಚೆಗೆ ತಮ್ಮ ಹಳೇ ಕಾಮ್ರೇಡ್ ಕೇಜ್ರಿವಾಲ್ ಬಂಧನ ಕುರಿತು ಪ್ರತಿಕ್ರಿಯಿಸಿದ್ದಾರೆ. ‘‘ಕೇಜ್ರಿವಾಲ್ ಇಟ್ಟ ತಪ್ಪು ಹೆಜ್ಜೆಗಳಿಗಾಗಿ ತಕ್ಕ ಬೆಲೆ ತೆತ್ತಿದ್ದಾರೆ’’ ಎಂದು ಟೀಕಿಸಿದ್ದಾರೆ. ದೇಶದಲ್ಲಿ 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಅದ್ಯಾವುದಕ್ಕೂ ಅವರು ಪ್ರತಿಕ್ರಿಯಿಸಲಿಲ್ಲ. ‘ಚುನಾವಣಾ ಬಾಂಡ್ ದೊಡ್ಡ ಹಗರಣ’ವೆಂದು ಸುಪ್ರೀಂ ಕೋರ್ಟ್ ಘೋಷಿಸಿದ ಬಳಿಕವೂ ಮೌನ ಮುರಿಯಲಿಲ್ಲ. ಈಗ ಕೇಜ್ರಿವಾಲ್ ಸರಕಾರದ ‘ಮದ್ಯದ ನೀತಿ’ (ಲಿಕ್ಕರ್ ಪಾಲಿಸಿ) ಕುರಿತು ಮಾತನಾಡಿದ್ದಾರೆ.

ಹಝಾರೆ ಅವರ ಆಂದೋಲನದಿಂದ ಭ್ರಷ್ಟಾಚಾರ ತೊಲಗಲಿಲ್ಲ. ಇದರಿಂದ ಕೆಲವರಿಗೆ ರಾಜಕೀಯ ಲಾಭವಾಯಿತಷ್ಟೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಪತನಕ್ಕೆ ಕಾರಣವಾಯಿತು. ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲು ನೆರವಾಯಿತು. ದಿಲ್ಲಿ ಕಾಂಗ್ರೆಸ್ ಸರಕಾರವನ್ನು ಮೂಲೆಗುಂಪು ಮಾಡಿ, ಎಎಪಿಯನ್ನು ಪ್ರತಿಷ್ಠಾಪಿಸಿತು.

ಈಗ ಕೇಜ್ರಿವಾಲ್ ಅವರನ್ನು ಅಣ್ಣಾ ಹಝಾರೆ ಟೀಕಿಸಿರುವುದರ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶ ಇರಬಹುದು. ಬಿಜೆಪಿ ಒತ್ತಾಯದಿಂದ ಅಣ್ಣಾ ಹಝಾರೆ ಹೊರಬಂದು ಹೇಳಿಕೆ ನೀಡಿರಬಹುದು.

ಭ್ರಷ್ಟಾಚಾರ ವಿರೋಧಿ ಆಂದೋಲನದ ಸಮಯದಲ್ಲೇ ಹಝಾರೆ ಹಾಗೂ ಕೇಜ್ರಿವಾಲ್ ಮಧ್ಯೆ ಬಿರುಕು ಕಾಣಿಸಿಕೊಂಡಿತ್ತು. ‘ಭ್ರಷ್ಟಾಚಾರದ ವಿರುದ್ಧ ರಾಜಕೀಯ ಹೋರಾಟ ನಡೆಯಬೇಕು’ ಎಂಬುದು ಕೇಜ್ರಿವಾಲ್ ಪ್ರತಿಪಾದನೆಯಾಗಿತ್ತು. ಇದನ್ನು ಒಪ್ಪದ ಹಝಾರೆ, ‘ಸಾಮಾಜಿಕ ಚಳವಳಿ ಮೂಲಕವೇ ಸಮಸ್ಯೆ ಬಗೆಹರಿಯಬೇಕು’ ಎಂದಿದ್ದರು. ಇದರಿಂದ ಇಬ್ಬರ ದಾರಿಗಳು ಬೇರೆಯಾಯಿತು. ಬಳಿಕ ಕೇಜ್ರಿವಾಲ್ ‘ಆಮ್ ಆದ್ಮಿ ಪಕ್ಷ’ (ಎಎಪಿ) ಕಟ್ಟಿದರು. ಆನಂತರ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ಎಎಪಿ ವಿಧಾನಸಭೆ ಚುನಾವಣೆಯಲ್ಲಿ ತರಗೆಲೆಯಂತೆ ಉದುರಿಸಿದ್ದು ಇತಿಹಾಸ.

2013ರಲ್ಲಿ ದಿಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಾಗಿದ್ದು 8 ಕ್ಷೇತ್ರಗಳನ್ನು ಮಾತ್ರ. ಇದಕ್ಕೂ ಮುಂಚಿನ ಚುನಾವಣೆಯಲ್ಲಿ 43 ಸ್ಥಾನ ಪಡೆದು ಅಧಿಕಾರದಲ್ಲಿತ್ತು. ಹಲವು ವರ್ಷ ಶೀಲಾ ದೀಕ್ಷಿತ್ ದಿಲ್ಲಿಯ ಮುಖ್ಯಮಂತ್ರಿ ಆಗಿದ್ದರು. ಎರಡನೇ ಸ್ಥಾನದಲ್ಲಿದ್ದ ಬಿಜೆಪಿಯ ಬಲ 23ರಿಂದ 32 ಸ್ಥಾನಗಳಿಗೆ ಹೆಚ್ಚಿತ್ತು. ಮೊದಲ ಸಲ ಚುನಾವಣೆ ಎದುರಿಸಿದ್ದ ಎಎಪಿ 28 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು.

ಕೇಜ್ರಿವಾಲ್, ಕಾಂಗ್ರೆಸ್‌ನ ಬೇಷರತ್ ಬೆಂಬಲದಿಂದ ಮುಖ್ಯಮಂತ್ರಿ ಆದರೂ ಸರಕಾರ ಹೆಚ್ಚು ಕಾಲ ಬಾಳಲಿಲ್ಲ. 2014ರ ಫೆಬ್ರವರಿಯಲ್ಲಿ ಕೇಜ್ರಿವಾಲ್ ರಾಜೀನಾಮೆ ಕೊಟ್ಟು, ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದರು. ನವೆಂಬರ್‌ನಲ್ಲಿ ವಿಧಾನಸಭೆ ವಿಸರ್ಜನೆಯಾಯಿತು. 2015ರ ಚುನಾವಣೆಯಲ್ಲಿ ಒಟ್ಟು 70 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ 67 ಸ್ಥಾನಗಳಲ್ಲಿ ಗೆದ್ದು ಬೀಗಿತು. ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸಿಕ್ಕಿದ್ದು ಕೇವಲ ಮೂರು ಸ್ಥಾನ. 2020ರ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷ 62 ಸ್ಥಾನ ಜಯಿಸಿತು. ಎರಡೂ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದ್ದು ಶೂನ್ಯ ಸಂಪಾದನೆ.

2020ರ ಶೇಕಡಾವಾರು ಮತಗಳಲ್ಲಿ ಎಎಪಿಗೆ ಹಿಂದಿನ ಚುನಾವಣೆಗಿಂತ 0.73ರಷ್ಟು ಕಡಿಮೆಯಾಗಿದೆ. ಬಿಜೆಪಿಯ ಮತ ಪ್ರಮಾಣ ಶೇ. 6.21ರಷ್ಟು ಏರಿಕೆ ಆಗಿದ್ದು, ಸೀಟುಗಳೂ 3ರಿಂದ 8ಕ್ಕೆ ಹೆಚ್ಚಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ. 56, ಕಾಂಗ್ರೆಸ್ ಶೇ. 22 ಹಾಗೂ ಎಎಪಿ ಶೇ. 18ರಷ್ಟು ಮತ ಪಡೆದಿವೆ. ಈ ಸಲ ಎಎಪಿ ಖಾತೆ ತೆರೆಯುವುದೇ? ಬಿಜೆಪಿ ಕಳೆದೆರಡು ಚುನಾವಣೆಯಂತೆ ಎಲ್ಲ ಕ್ಷೇತ್ರ ಗೆಲ್ಲುವುದೇ? ಎಂಬುದು ಕುತೂಹಲದ ಸಂಗತಿ.

ಹಿಂದಿನ ಚುನಾವಣೆಗೂ ಈಗಿನ ಚುನಾವಣೆಗೂ ವ್ಯತ್ಯಾಸವಿದೆ. 2014, 2019ರ ಚುನಾವಣೆಯಲ್ಲಿ ಕಾಂಗ್ರೆಸ್, ಎಎಪಿ ಮತ್ತು ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈಗ ‘ಇಂಡಿಯಾ’ ಮೈತ್ರಿಕೂಟದ ಭಾಗವಾದ ಎಎಪಿ ಮತ್ತು ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿವೆ. 4ರಲ್ಲಿ ಎಎಪಿ, 3ರಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ರಾಜಧಾನಿಯಲ್ಲಿ ನೆಲ ಕಚ್ಚಿರುವ ಕಾಂಗ್ರೆಸ್ ನೆಲೆ ಕಂಡುಕೊಳ್ಳಲು ಹೋರಾಡುತ್ತಿದೆ. ‘ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಕೇಜ್ರಿವಾಲ್’ ಎಂಬ ದಿಲ್ಲಿ ಮತದಾರರ ನಿಲುವಿನಲ್ಲಿ ಕೊಂಚ ಬದಲಾವಣೆ ಆಗಿರುವಂತೆ ಕಾಣುತ್ತಿದೆ. ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿ, ಬಿಡುಗಡೆಯಾದ ಬಳಿಕ ಕೇಜ್ರಿವಾಲ್ ಬಗ್ಗೆ ಅನುಕಂಪ ಇರುವಂತಿದೆ. ಅದು ಮತಗಳಾಗಿ ಪರಿವರ್ತನೆ ಆಗುವುದೇ ಎಂಬುದು ಪ್ರಶ್ನೆ. ಇದಕ್ಕೆ ಪೂರಕವಾದ ತಂತ್ರಗಳನ್ನು ಮೈತ್ರಿಕೂಟ ರೂಪಿಸಿದೆ.

ಪೂರ್ವ ದಿಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಎಎಪಿ ಬಾಲ್ಮಿಕಿ ಸಮಾಜದ ಕುಲದೀಪ್ ಕುಮಾರ್ ಅವರಿಗೆ ಟಿಕೆಟ್ ನೀಡಿದೆ. ಕುಲದೀಪ್ ಹಾಲಿ ಶಾಸಕ. ದಲಿತರು ಮತ್ತು ಮುಸ್ಲಿಮರ ಮತಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಬಿಜೆಪಿ ಹರ್ಷ ಮಲ್ಹೋತ್ರ ಅವರನ್ನು ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇಲ್ಲಿಂದ ಆಯ್ಕೆಯಾಗಿದ್ದರು.

ಪೂರ್ವಾಂಚಲ ಮತ್ತು ಮುಸ್ಲಿಮರ ಪ್ರಾಬಲ್ಯವಿರುವ ಈಶಾನ್ಯ ದಿಲ್ಲಿಯಲ್ಲಿ ಬಿಹಾರಿಗಳಿಬ್ಬರು ಮುಖಾಮುಖಿ ಆಗಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮಾಜಿ ನಾಯಕ ಕನ್ಹಯಾ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಮನೋಜ್ ತಿವಾರಿ ಕಣದಲ್ಲಿದ್ದಾರೆ. ಕನ್ಹಯಾ ಅವರ ವಾಕ್ ಸಾಮರ್ಥ್ಯ ಮತ್ತು ಜನಪ್ರಿಯತೆಯನ್ನು ಕಾಂಗ್ರೆಸ್ ನಂಬಿಕೊಂಡಿದೆ. ತಿವಾರಿ ಕೂಡ ಪ್ರಬಲ ಅಭ್ಯರ್ಥಿ.

ಮೈತ್ರಿ ಏರ್ಪಟ್ಟಿರುವುದರಿಂದ ‘ಬಿಜೆಪಿ ಮತ್ತು ಮೋದಿ ವಿರೋಧಿ ಮತಗಳು ಒಗ್ಗೂಡಬಹುದು’ ಎಂಬ ಲೆಕ್ಕಾಚಾರ ಎಎಪಿ- ಕಾಂಗ್ರೆಸ್ ಮುಖಂಡರಿಗಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಅಚ್ಚುಕಟ್ಟಾಗಿ ಜಾತಿ ಸಮೀಕರಣ ಮಾಡಿದೆ. ಪಂಜಾಬಿ, ಬನಿಯಾ, ಗುಜ್ಜರ್, ಜಾಟ್ ಹಾಗೂ ದಲಿತ ಮುಖಂಡರನ್ನು ಚುನಾವಣಾ ಅಖಾಡಕ್ಕೆ ಇಳಿಸಿದೆ. ಮಹಿಳೆಯರ ಸ್ಪರ್ಧೆಗೂ ಅವಕಾಶ ಮಾಡಿಕೊಟ್ಟಿದೆ.

ಕಳೆದ 9 ವರ್ಷದಲ್ಲಿ ತನಗಿರುವ ಸೀಮಿತ ಅಧಿಕಾರದಲ್ಲೇ ಕೇಜ್ರಿವಾಲ್ ನೇತೃತ್ವದ ಎಎಪಿ ಸರಕಾರ ಒಳ್ಳೆಯ ಕೆಲಸ ಮಾಡಿದೆ. ಅದರಲ್ಲೂ ಶಿಕ್ಷಣ, ಆರೋಗ್ಯ, ಸಾರಿಗೆ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಜನರಿಗೆ ಉಚಿತ ವಿದ್ಯುತ್ ಕೊಡುತ್ತಿದೆ. ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭೌತಿಕವಾಗಿ ಅಷ್ಟೇ ಅಲ್ಲ, ಬೌದ್ಧಿಕವಾಗಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯಾಗಿದೆ. ಎಲ್ಲೆಡೆ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ದಿಲ್ಲಿ ಸರಕಾರದ ಅಧೀನದಲ್ಲಿರುವ ಆಸ್ಪತ್ರೆಗಳನ್ನು ಸುಧಾರಿಸಲಾಗಿದೆ. ಡಿಟಿಸಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ.

ಆದರೂ ದಿಲ್ಲಿಯ ಭಾಗಶಃ ಮತದಾರರು ಮೋದಿ ಅವರ ಮೇಲಿನ ವ್ಯಾಮೋಹ ಬಿಟ್ಟಿಲ್ಲ. 10 ವರ್ಷ ಕಳೆದರೂ ‘ಮೋದಿ ಮೋಡಿ’ಯಿಂದ ಹೊರ ಬಂದಿಲ್ಲ. ಮೋದಿಯವರ ಬಗ್ಗೆ, ಅವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತು ಆಡುತ್ತಾರೆ. ‘ದೇಶಕ್ಕೆ ಮೋದಿ, ರಾಜ್ಯಕ್ಕೆ ಕೇಜ್ರಿ’ ಎಂಬ ಅಭಿಪ್ರಾಯವನ್ನು ಅಲ್ಲಲ್ಲಿ ಮತದಾರರು ವ್ಯಕ್ತಪಡಿಸುತ್ತಿದ್ದಾರೆ. ಕೇಜ್ರಿವಾಲ್ ಅವರ ಭ್ರಷ್ಟಾಚಾರವನ್ನೇ ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ.

ದಿಲ್ಲಿಯ ಬಡವರು, ಶ್ರಮಿಕರು ಅರವಿಂದ ಕೇಜ್ರಿವಾಲ್ ಅವರನ್ನು ಬೆಂಬಲಿಸುವುದಾಗಿ ಹೇಳುತ್ತಾರೆ. ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಜನ ಬಿಜೆಪಿ ಹಾಗೂ ಮೋದಿ ಪರ ನಿಲ್ಲುವಂತೆ ಕಾಣುತ್ತಿದೆ.

ಅರವಿಂದ ಕೇಜ್ರಿವಾಲ್ ಅವರ ಆಪ್ತ ವಿಭವ್ ಕುಮಾರ್ ತಮ್ಮದೇ ಪಕ್ಷದ ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ನಡೆಸಿದ್ದಾರೆನ್ನಲಾದ ಹಲ್ಲೆ ಪ್ರಕರಣದ ಲಾಭ ಪಡೆಯಲು ಬಿಜೆಪಿ ಯತ್ನಿಸಿದೆ. ಎಎಪಿಗೂ ಈ ಘಟನೆಯು ನುಂಗಲಾರದ ತುಪ್ಪ. ಅದರಿಂದ ಆಗಬಹುದಾದ ಹಾನಿ ತಡೆಗೆ ಇನ್ನಿಲ್ಲದ ಕಸರತ್ತು ಮಾಡುತ್ತಿದೆ.

ಚುನಾವಣಾ ಪ್ರಚಾರದ ಸಮಯದಲ್ಲಿ ಕನ್ಹಯಾ ಕುಮಾರ್ ಅವರಿಗೆ ಮಸಿ ಬಳಿದ ಘಟನೆಯೂ ನಡೆದಿದೆ. ಇವೆರಡೂ ಘಟನೆಗಳು ಚುನಾವಣೆ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ಈಗಲೇ ಅಂದಾಜಿಸುವುದು ಕಷ್ಟ. ಒಟ್ಟಾರೆ ದಿಲ್ಲಿ ಮತದಾರರ ಮನಸ್ಸಿನಲ್ಲಿ ಏನಿದೆ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News