ಬಿಜೆಪಿಯ ಗೊಂದಲದ ಲಾಭ ಕಾಂಗ್ರೆಸ್‌ಗೆ ದೊರಕಲಿದೆಯೇ?

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನೊಳಗೊಂಡ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಭಾರೀ ಕುತೂಹಲ ಕೆರಳಿಸಿದ್ದ, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬೆನ್ನಲ್ಲೇ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಮಧ್ಯೆ ಜಟಾಪಟಿಗೆ ಕಾರಣವಾಗಿದ್ದ ಕ್ಷೇತ್ರ ಇದು. ಎರಡೂ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರುವ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳ ಪರ-ವಿರೋಧದ ಅಭಿಪ್ರಾಯಗಳು ಭಾರೀ ಸದ್ದು ಮಾಡುತ್ತಿವೆ.

Update: 2024-04-02 06:59 GMT

ಸರಣಿ- 33

ಎಸ್‌ಟಿ ಮೀಸಲು ಕ್ಷೇತ್ರವಾದ ರಾಯಚೂರು ಲೋಕಸಭಾ ಕ್ಷೇತ್ರದ ಕೆಲವು ಪ್ರಾಥಮಿಕ ಮಾಹಿತಿಯನ್ನು ಗಮನಿಸುವುದಾದರೆ,

ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.48.04. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಶೋರಾಪುರ, ಶಹಾಪುರ, ಯಾದಗಿರಿ, ರಾಯಚೂರು ಗ್ರಾಮಾಂತರ, ರಾಯಚೂರು, ಮಾನ್ವಿ, ದೇವದುರ್ಗ ಹಾಗೂ ಲಿಂಗಸುಗೂರು. 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ಧಾರೆ. 2ರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 20,27,758. ಅವರಲ್ಲಿ ಪುರುಷರು 10,05,586, ಮಹಿಳೆಯರು 10,21,805, ಇತರರು 367

ಹಿಂದಿನ ಚುನಾವಣೆಗಳ ಫಲಿತಾಂಶ:

2014ರಲ್ಲಿ ಕಾಂಗ್ರೆಸ್‌ನ ಬಿ.ವಿ. ನಾಯಕ್ ಗೆಲುವು ಸಾಧಿಸಿದ್ದರೆ 2019ರಲ್ಲಿ ಬಿಜೆಪಿಯ ರಾಜಾ ಅಮರೇಶ್ವರ ನಾಯಕ್ ಗೆಲುವು ಪಡೆದಿದ್ದಾರೆ.

ಹಿಂದಿನ ಚುನಾವಣೆಗಳಲ್ಲಿನ ಮತಹಂಚಿಕೆ ವಿವರ:

2014ರಲ್ಲಿ ಕಾಂಗ್ರೆಸ್‌ಗೆ ಶೇ.45.78, ಬಿಜೆಪಿಗೆ ಶೇ.45.63.

2019ರಲ್ಲಿ ಬಿಜೆಪಿಗೆ ಶೇ.53.21, ಕಾಂಗ್ರೆಸ್‌ಗೆ ಶೇ.42.75.

1957ರಿಂದ ಒಂದು ಉಪಚುನಾವಣೆಯೂ ಸೇರಿ 17 ಚುನಾವಣೆಗಳು ನಡೆದಿವೆ. 13 ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಿದೆ. ಉಳಿದಂತೆ 1967ರಲ್ಲಿ ಒಮ್ಮೆ ಸ್ವತಂತ್ರ ಪಾರ್ಟಿ ಗೆದ್ದಿದ್ದರೆ, 1996ರಲ್ಲಿ ಜನತಾ ದಳ ಗೆಲುವು ಸಾಧಿಸಿತ್ತು.

2009ರಲ್ಲಿ ಮೊದಲ ಬಾರಿಗೆ ಗೆದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿಯೂ ಮತ್ತೊಮ್ಮೆ ಗೆದ್ದಿದೆ.

ಮತ್ತೆ ಕೈವಶವಾಗುವುದೇ ರಾಯಚೂರು?

ತನ್ನ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ತಯಾರಿ ನಡೆಸಿದೆ.

ಕಾಂಗ್ರೆಸ್ ಪಕ್ಷದಿಂದ ಜಿ.ಕುಮಾರ ನಾಯಕ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಈ ಕ್ಷೇತ್ರದಲ್ಲಿ ಕರ್ನಾಟಕ ಕೇಡರ್‌ನ ಐಎಎಸ್ ನಿವೃತ್ತ ಅಧಿಕಾರಿ ಸ್ಪರ್ಧೆ ಮಾಡುತ್ತಿರುವುದು ಇದೇ ಮೊದಲು.

ಕಾಂಗ್ರೆಸ್‌ನಲ್ಲಿ ಈ ಬಾರಿ ಬಹಳಷ್ಟು ಮಂದಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ತೆರೆಮರೆಯಲ್ಲಿ ದೊಡ್ಡ ಲಾಬಿಯೇ ನಡೆಸಿದ್ದಾಗಿ ವರದಿಯಾಗಿತ್ತು.

ಸಚಿವ ಸತೀಶ್ ಜಾರಕಿಹೊಳಿಯವರ ಪತ್ನಿಯ ತಮ್ಮನಾದ ರವಿ ಪಾಟೀಲ್, ದೇವಣ್ಣ ವಕೀಲ, ಮಾಜಿ ಸಂಸದ ದಿ.ವೆಂಕಟೇಶ್ ನಾಯಕ ಅವರ ಕುಟುಂಬದ ಸೊಸೆಯಂದಿರು ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಆರಂಭಿಸಿದ್ದರು.

ಈ ಮಧ್ಯೆ ಕುಮಾರ ನಾಯಕ ಅವರ ಹೆಸರು ಕೂಡ ಕೇಳಿಬಂದಿತ್ತು. ಬೇರೆ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರವೂ ಪಕ್ಷದಲ್ಲಿ ನಡೆದಿತ್ತು. ಮತ್ತೊಂದೆಡೆ ರಾಯಚೂರು ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ಬಸವನಗೌಡ ದದ್ದಲ್ ಅವರ ಹೆಸರು ಕೂಡ ಚಾಲ್ತಿಯಲ್ಲಿತ್ತು.

ಆದರೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಜಿ. ಕುಮಾರ ನಾಯಕ ಅವರಿಗೆ ಮಣೆ ಹಾಕಿದೆ.

ಇದೇ ವೇಳೆ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ದೇವಣ್ಣ ವಕೀಲ ಅವರೂ ಅಸಮಾಧಾನಗೊಂಡಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು ಸಿಟ್ಟು ಹೊರಹಾಕಿದ್ದು, ವರಿಷ್ಠರು ತಮ್ಮ ನಿಲುವು ಬದಲಿಸುವಂತೆ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ನಿಲುವು ಬದಲಿಸಲು ಒತ್ತಾಯಿಸುತ್ತಿದ್ದಾರೆ.

ಅದರ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದಿಂದ ಅನ್ಯ ಜಿಲ್ಲೆಯವರಿಗೆ ಟಿಕೆಟ್ ನೀಡಿದ್ದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ. ಇನ್ನೂ ಬದಲಾವಣೆಗೆ ಅವಕಾಶವಿದ್ದು ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ದೇವಣ್ಣನಾಯಕ ಒತ್ತಾಯಿಸಿದ್ದೂ ನಡೆದಿದೆ.

ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು

ಬಿಜೆಪಿಯ ಎರಡು ಪಟ್ಟಿ ಪ್ರಕಟವಾದರೂ ರಾಯಚೂರು ಕ್ಷೇತ್ರದ ಅಭ್ಯರ್ಥಿಯನ್ನೇ ಪ್ರಕಟಿಸಿರಲಿಲ್ಲ. ರಾಜಾ ಅಮರೇಶ್ವರ ನಾಯಕ ವಾರದ ಹಿಂದೆ ಜಿಲ್ಲಾ ಕೇಂದ್ರದಲ್ಲಿರುವ ತಮ್ಮ ಕಚೇರಿಗೆ ಬೀಗ ಹಾಕಿ ಪೀಠೋಪಕರಣಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿ ಅದರ ಪ್ರತಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹರಿಯ ಬಿಟ್ಟಿದ್ದರು. ಇದೇ ಅವಧಿಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ ಅವರೂ ಟಿಕೆಟ್‌ಗೆ ಕದ ತಟ್ಟಿದ ಕಾರಣ ಬಿ.ವಿ.ನಾಯಕ ಅವರಿಗೇ ಟಿಕೆಟ್ ದೊರೆಯಲಿದೆ ಎಂದು ಕಾರ್ಯಕರ್ತರು ಭಾವಿಸಿದ್ದರು.

ಜಿಲ್ಲೆಯಿಂದ ರಾಜಾ ಅಮರೇಶ್ವರ ನಾಯಕ ಹಾಗೂ ಬಿ.ವಿ.ನಾಯಕ ಎರಡು ಹೆಸರುಗಳು ಮಾತ್ರ ಪಕ್ಷದ ಅಭ್ಯರ್ಥಿ ಆಯ್ಕೆ ಸಮಿತಿಗೆ ಹೋಗಿದ್ದವು. ಸಮಿತಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ ಹಲವು ಬಾರಿ ಉಲ್ಲೇಖ ಮಾಡಿದ್ದರೆ, ಹೊರತು ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಬಿಜೆಪಿಯ ಆಂತರಿಕ ಸಮಿತಿ ಹಾಗೂ ಆರೆಸ್ಸೆಸ್ ಪ್ರಮುಖರು ಕ್ಷೇತ್ರದಲ್ಲಿ ನಡೆಸಿದ ವರದಿಯನ್ನು ಅವಲೋಕಿಸಿ ಬಿಜೆಪಿಯ ವರಿಷ್ಠ ಮಂಡಳಿಯು ಚುನಾವಣಾ ಸಾಧಕ ಬಾಧಕಗಳ ಅಧ್ಯಯನ ಮಾಡಿ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.

ಬಿಜೆಪಿಯಲ್ಲಿ ಕೆಲವರು ಈಗಾಗಲೇ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎನ್ನುವ ಮಾತುಗಳ ಹಿನ್ನೆಲೆಯಲ್ಲಿ ಉಳಿದವರು ಹೆಚ್ಚು ಉತ್ಸುಕರಾಗಿದ್ದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಬಿ.ವಿ ನಾಯಕ ಅವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿಬಂದಿತ್ತು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಅವರು ಮರಳಿ ಕಾಂಗ್ರೆಸ್ ಬಾಗಿಲು ತಟ್ಟುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗುತ್ತಿತ್ತು.

ಮತ್ತೊಂದೆಡೆ ಸುರಪುರ ಮಾಜಿ ಶಾಸಕ ರಾಜುಗೌಡ, ರಾಯಚೂರು ಗ್ರಾಮೀಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಕೂಡ ಟಿಕೆಟ್‌ಗೆ ಪೈಪೋಟಿ ನಡೆಸಿದ್ದರು.

ಅಂತಿಮವಾಗಿ, ಲೋಕಸಭೆ ಹಾಗೂ ಮಾನ್ವಿ ವಿಧಾನಸಭೆ ಚುನಾವಣೆಯಲ್ಲೂ ಸೋತಿರುವ ಬಿ.ವಿ.ನಾಯಕ ಅವರಿಗೆ ಟೆಕೆಟ್ ಕೊಟ್ಟರೆ ಚುನಾವಣೆಯಲ್ಲಿ ಎಡವಟ್ಟು ಆಗಲಿದೆ ಎನ್ನುವುದನ್ನು ಮನಗಂಡು ಹಾಲಿ ಸಂಸದರಿಗೆ ಟಿಕೆಟ್ ಕೊಡಲಾಗಿದೆ ಎನ್ನಲಾಗಿದೆ.

ಇನ್ನು, ಇದರ ನಡುವೆಯೇ ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲು ನಗರದ ರಾಯಚೂರು ಹಬ್‌ನಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಇಬ್ಬರು ಯುವಕರು ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಹಸನ ನಡೆಯಿತು.

ಸಭೆ ನಡೆಯುತ್ತಿರುವಾಗಲೇ ಯುವಕರು ಮೈಮೇಲೆ ಡೀಸೆಲ್ ಸುರಿದುಕೊಂಡದ್ದರಿಂದ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಸ್ಥಳದಲ್ಲಿದ್ದ ಕಾರ್ಯಕರ್ತರು ತಕ್ಷಣ ಅವರನ್ನು ತಡೆದರು. ಇದೇ ಸಂದರ್ಭದಲ್ಲಿ ಬಿ.ವಿ.ನಾಯಕ ಬೆಂಬಲಿಗರು, ‘ರಾಜಾ ಅಮರೇಶ್ವರ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದರು. ‘ಐದು ವರ್ಷ ಕಾಣೆಯಾಗಿದ್ದ ರಾಜಾ ಅಮರೇಶ್ವರ ನಾಯಕರನ್ನು ಪಕ್ಷದ ಹೈಕಮಾಂಡ್ ಹುಡುಕಿ ಕೊಟ್ಟಿದೆ’ ಎಂದು ಫಲಕವನ್ನೂ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಯಚೂರು ಲೋಕಸಭೆ ಟಿಕೆಟ್ ಪುನರ್ ಪರಿಶೀಲನೆ ಮಾಡದಿದ್ದರೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಬಿ.ವಿ.ನಾಯಕ ಎಚ್ಚರಿಸಿದರು.

ರಾಜಾ ಅಮರೇಶ್ವರ ನಾಯಕರಿಗೆ ಟಿಕೆಟ್ ನೀಡಿದ್ದರಿಂದ ಆಕ್ರೋಶಗೊಂಡಿರುವ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವಿ.ನಾಯಕ್, ವರಿಷ್ಠರು ಮತ್ತೊಮ್ಮೆ ಸಮೀಕ್ಷೆ ಮಾಡಬೇಕು. ಟಿಕೆಟ್ ವಿಚಾರದಲ್ಲಿ ಮರುಪರಿಶೀಲನೆ ಮಾಡಬೇಕು ಎಂದು ಕೋರಿದ್ದಾರೆ.

ಬಿಜೆಪಿಯ ಗೊಂದಲಗಳ ಲಾಭ ಪಡೆದು ಮತ್ತೆ ಕ್ಷೇತ್ರ ವಶ ಪಡಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಇದೆ. ರಾಹುಲ್ ಗಾಂಧಿಯ ಭಾರತ ಜೋಡೊ ಯಾತ್ರೆ ಇಲ್ಲಿಂದ ಹಾದು ಹೋದ ಬಳಿಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಲಾಭ ಆಗಿದೆ. ಅದನ್ನು ಲೋಕಸಭಾ ಚುನಾವಣೆಯಲ್ಲೂ ಕಾಯ್ದುಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News