ಬಿಜೆಪಿ ರಣತಂತ್ರಕ್ಕೆ ‘ಇಂಡಿಯಾ’ ಒಕ್ಕೂಟ ಪ್ರತಿತಂತ್ರ ಹೆಣೆದೀತೇ?

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ತನ್ನ ಪ್ರಾದೇಶಿಕ ಮಿತ್ರಪಕ್ಷಗಳೊಂದಿಗೆ ‘ಇಂಡಿಯಾ’ ಒಕ್ಕೂಟದ ಭಾಗವಾಗಿ ಸ್ಪರ್ಧಿಸುತ್ತಿದೆ. ಮಹಾರಾಷ್ಟ್ರದಲ್ಲಿ, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್) ಜೊತೆಗಿನ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಭಾಗವಾಗಿದ್ದರೆ, ಜಾರ್ಖಂಡ್‌ನಲ್ಲಿ ಜೆಎಂಎಂ ಜೊತೆ ಕಾಂಗ್ರೆಸ್ ಮೈತ್ರಿಯಲ್ಲಿದೆ. ಈಗ ಸೀಟು ಹಂಚಿಕೆ ಮತ್ತು ಅಧಿಕಾರ ಹಂಚಿಕೆ ಸಮಾಲೋಚನೆಗಳು ಸರಾಗವಾಗಿ ನಡೆಯಬೇಕಿದೆ. ಈ ಮೈತ್ರಿಕೂಟ ಎರಡೂ ರಾಜ್ಯಗಳಲ್ಲಿ ಉತ್ತಮ ಸಾಧನೆ ತೋರಿಸಿದರೆ, ‘ಇಂಡಿಯಾ’ ಒಕ್ಕೂಟಕ್ಕೆ ವಿಶೇಷವಾಗಿ ಮುಂದಿನ ವರ್ಷ ನಡೆಯಲಿರುವ ದಿಲ್ಲಿ ಮತ್ತು ಬಿಹಾರದಲ್ಲಿನ ಚುನಾವಣೆಗಳ ಸಮಯದಲ್ಲಿ ಬಲ ಬರಲಿದೆ.

Update: 2024-10-17 07:06 GMT

ಹರ್ಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭೆ ಫಲಿತಾಂಶದ ಬೆನ್ನಲ್ಲೇ ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳು ನಿಗದಿಯಾಗಿವೆ.

ಈ ಚುನಾವಣೆಗಳ ಎರಡು ಸಾಧ್ಯತೆಗಳೆಂದರೆ,

1. ವಿಪಕ್ಷಗಳ ಒಗ್ಗಟ್ಟಿನ ಮೇಲೆ ಪ್ರಭಾವ ಬೀರಬಹುದು

2. ಬಿಜೆಪಿಯ ರಣತಂತ್ರದ ಪರಿಣಾಮ ಕಾಣಿಸಬಹುದು.

ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ, 90 ಸ್ಥಾನಗಳ ಪೈಕಿ ಬಿಜೆಪಿ 48 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 37 ಸ್ಥಾನಗಳನ್ನು ಗಳಿಸಿತು.

ಹಾಗೆಯೇ ಜಮ್ಮು-ಕಾಶ್ಮೀರದ 90 ಸ್ಥಾನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42, ಕಾಂಗ್ರೆಸ್ 6 ಮತ್ತು ಬಿಜೆಪಿ 29 ಸ್ಥಾನಗಳನ್ನು ಗೆದ್ದುಕೊಂಡವು.

ಮೊನ್ನೆ ಜೂನ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹರ್ಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿತ್ತು. ಈ ಕಾರಣದಿಂದಾಗಿಯೇ ಈಗ ಹರ್ಯಾಣ ಫಲಿತಾಂಶ ಮಹತ್ವ ಪಡೆದಿದೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿಯೂ ಇದೇ ರೀತಿಯ ಗೆಲುವು ಸಿಕ್ಕಿಬಿಟ್ಟರೆ ಬಿಜೆಪಿ ಪ್ರಬಲವಾಗಿಬಿಡಲಿದೆ.

ಒಂದು ವೇಳೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲಾದರೆ ಅದರಿಂದ ಬಿಜೆಪಿ ಅನುಭವಿಸುವ ಹಾನಿ ಮಾತ್ರ ಸಣ್ಣದಾಗಿರುವುದಿಲ್ಲ.

ಪಶ್ಚಿಮ ಬಂಗಾಳ, ಬಿಹಾರ ಮತ್ತು ತಮಿಳುನಾಡಿನಂತಹ ಹಲವೆಡೆ ಕಾಂಗ್ರೆಸನ್ನು ಎದುರಿಸಲು ಬಿಜೆಪಿ ಸಮರ್ಥವಾಗಿದ್ದರೂ, ಪ್ರಾದೇಶಿಕ ಪಕ್ಷಗಳನ್ನು ಮಣಿಸುವುದು ಅದಕ್ಕೆ ಸಾಧ್ಯವಾಗಿಲ್ಲ. ಆದರೆ ಹರ್ಯಾಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಕೇವಲ ಎರಡು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಪ್ರಾದೇಶಿಕ ಪಕ್ಷದ ನಾಶಕ್ಕೆ ಮತ್ತೊಂದು ಉದಾಹರಣೆ ಸಿಕ್ಕಂತಾಗಿದೆ.

ಇನ್ನು ಅಲ್ಲಿ ಮಾಜಿ ಡಿಸಿಎಂ ದುಶ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಅಂತೂ ಹೇಳಹೆಸರಿಲ್ಲದಂತಾಗಿದೆ.

ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಮಾಡಿದ್ದು ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಕೆಲಸವನ್ನೇ. ಶಿವಸೇನೆಯೊಂದಿಗಿನ ದೋಸ್ತಿಯಿಂದಲೇ ಮಹಾರಾಷ್ಟ್ರವನ್ನು ಆವರಿಸಿಕೊಳ್ಳುತ್ತ ಬಂದ ಬಿಜೆಪಿ ಕಡೆಗೆ ಆ ಶಿವಸೇನೆಯನ್ನೇ ಒಡೆದುಹಾಕಿತು.

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ಅಘಾಡಿಯಲ್ಲಿ ಬಿಜೆಪಿ ಆಟದ ಪರಿಣಾಮವಾಗಿ ಏಕನಾಥ್ ಶಿಂದೆ ಬಣ ಬಂಡೆದ್ದು ಹೊರಹೋಯಿತು.

ಏಕನಾಥ್ ಶಿಂದೆ ಬಣ ಬಿಜೆಪಿಯೊಂದಿಗೆ ಸರಕಾರ ರಚಿಸಿದಾಗ, ಹೆಚ್ಚು ಶಾಸಕರನ್ನು ಹೊಂದಿದ್ದರೂ ಬಿಜೆಪಿ ಶಿಂದೆಯವರನ್ನೇ ಮುಂದಿಟ್ಟು, ತಾನು ಹಿಂದೆ ನಿಂತುಕೊಂಡಿತು.

ಮಹಾರಾಷ್ಟ್ರದಲ್ಲಿ ಬಿಜೆಪಿ ಎದುರು ಈಗ ನಾಲ್ಕು ಪ್ರಮುಖ ಪ್ರಾದೇಶಿಕ ಪಕ್ಷಗಳಿವೆ.

ತನ್ನದೇ ಮಹಾಯುತಿ ಮೈತ್ರಿಕೂಟದಲ್ಲಿರುವ ಶಿವಸೇನೆ ಶಿಂದೆ ಬಣ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಎದುರಾಳಿ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ.

ಇವಲ್ಲದೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ವಂಚಿತ್ ಬಹುಜನ ಅಘಾಡಿಯಂತಹ ಸಣ್ಣ ಪ್ರಾದೇಶಿಕ ಪಕ್ಷಗಳೂ ಇವೆ.

ಜಾರ್ಖಂಡ್‌ನಲ್ಲಿ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಪ್ರಭಾವಶಾಲಿಯಾಗಿರುವ ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟದಂತಹ ಮಿತ್ರಪಕ್ಷಗಳನ್ನು ಬಿಜೆಪಿ ಅವಲಂಬಿಸಬೇಕಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಜಾರ್ಖಂಡ್‌ನಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಎಲ್ಲಾ ಐದು ಸ್ಥಾನಗಳನ್ನು ಇಂಡಿಯಾ ಒಕ್ಕೂಟದೆದುರು ಬಿಜೆಪಿ ಸೋತಿತ್ತು.

2014ರಲ್ಲಿ 10 ಮತ್ತು 2019ರಲ್ಲಿ ಆರು ರ್ಯಾಲಿಗಳಲ್ಲಿ ಹರ್ಯಾಣದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಆದರೆ ಈ ಸಲ ಕೇವಲ ನಾಲ್ಕು ರ್ಯಾಲಿಗಳಲ್ಲಿ ಮಾತ್ರವೇ ಅವರು ಪಾಲ್ಗೊಂಡಿದ್ದರು. ಆದರೆ ಬಿಜೆಪಿ ಭಾರೀ ಗೆಲುವನ್ನು ಕಂಡಿತು.

ತನ್ನ ಕೇಂದ್ರ ನಾಯಕತ್ವಕ್ಕಿಂತ ಹರ್ಯಾಣ ಬಿಜೆಪಿ ಸ್ಥಳೀಯ ನಾಯಕರ ಜನಪ್ರಿಯತೆಯನ್ನೇ ಹೆಚ್ಚು ನೆಚ್ಚಿತ್ತು. ಆದರೆ, ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಮಾತ್ರ ಇನ್ನೂ ಮೋದಿ ಮಂತ್ರವನ್ನೇ ಬಿಜೆಪಿ ಪಠಿಸುತ್ತಿದೆ.

ಮೋದಿ ಈಗಾಗಲೇ ಒಂದು ತಿಂಗಳೊಳಗೆ ಎರಡು ಬಾರಿ ಜಾರ್ಖಂಡ್‌ಗೆ ಭೇಟಿ ನೀಡಿದ್ದು, ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ವಿಶೇಷವಾಗಿ ಬುಡಕಟ್ಟು ಮತಗಳನ್ನು ಸೆಳೆಯುವುದು ಬಿಜೆಪಿ ತಂತ್ರವಾಗಿದೆ.

ಇನ್ನೊಂದೆಡೆ, ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರದಲ್ಲಿಯೂ ಮೋದಿ ಮಹಾಯುತಿ ಪ್ರಚಾರ ಪ್ರಾರಂಭಿಸಿದರು. ವಿದರ್ಭದ ವಾಶಿಮ್ ಜಿಲ್ಲೆಯ ಮೂಲಕ ಅವರ ಚುನಾವಣಾ ಪ್ರವಾಸ ಶುರುವಾಗಿತ್ತು.

ಹಾಗಾಗಿ, ನಡೆಯಲಿರುವ ವಿಧಾನಸಭೆ ಚುನಾವಣೆಯ ಫಲಿತಾಂಶ ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಲ್ಲಿ ಮೋದಿ ಜನಪ್ರಿಯತೆಯ ಪ್ರಮಾಣವೂ ಆಗಿರಲಿದೆ.

2014ರಲ್ಲಿ ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್‌ನಲ್ಲಿ ಬಿಜೆಪಿ ಪ್ರಬಲವಲ್ಲದ ಜಾತಿಗಳ ನಾಯಕರನ್ನು ನೇಮಿಸಿತು. ಅವರೆಂದರೆ, ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವೀಸ್, ಜಾಟ್ ಅಲ್ಲದ ಮನೋಹರ್ ಲಾಲ್ ಖಟ್ಟರ್ ಮತ್ತು ಬುಡಕಟ್ಟು ಸಮುದಾಯದವರಲ್ಲದ ರಘುಬರ್ ದಾಸ್.

ಈ ನಡುವೆ ಬಿಜೆಪಿ ಮಹಾರಾಷ್ಟ್ರದಲ್ಲಿ ಫಡ್ನವೀಸ್ ಅವರನ್ನು ಹಿನ್ನೆಲೆಗೆ ಸರಿಸಲು ಯತ್ನಿಸುತ್ತಲೇ ಇದ್ದರೂ, ರಾಜ್ಯದಲ್ಲಿ ಫಡ್ನವೀಸ್ ಬಿಜೆಪಿಯ ಮುಖವಾಗಿಯೇ ಉಳಿದಿದ್ದಾರೆ.

ಈ ನಡುವೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೊಂದಿಗಿನ ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಕೊಟ್ಟಿತು ಎಂಬುದನ್ನು ಬಿಜೆಪಿ ನಾಯಕರೇ ಗುಟ್ಟಾಗಿ ಹೇಳಿದ್ದಿದೆ.

ಜಾರ್ಖಂಡ್‌ನಲ್ಲಿ, 2019ರಲ್ಲಿ ಬುಡಕಟ್ಟು ಮತಗಳು ಮತ್ತು ಸರಕಾರದ ಮೇಲೆ ಬಿಜೆಪಿ ತನ್ನ ಹಿಡಿತ ಕಳೆದುಕೊಂಡಿತು. ಇದು ಜಾರ್ಖಂಡ್‌ನ ಮೊದಲ ಸಿಎಂ ಮತ್ತು ಬುಡಕಟ್ಟು ನಾಯಕ ಬಾಬುಲಾಲ್ ಮರಾಂಡಿ ಅವರನ್ನು ಮರಳಿ ಪಕ್ಷಕ್ಕೆ ಕರೆತರುವುದಕ್ಕೆ ಕಾರಣವಾಯಿತು.

ಮರಾಂಡಿ ಅವರು ಬಿಜೆಪಿಯಿಂದ ದೂರ ಸರಿದಿದ್ದರು ಮತ್ತು 2006ರಲ್ಲಿ ತಮ್ಮದೇ ಆದ ಜಾರ್ಖಂಡ್ ವಿಕಾಸ್ ಮೋರ್ಚಾವನ್ನು ಕಟ್ಟಿದ್ದರು. ಕಡೆಗೆ 2019ರಲ್ಲಿ ಬಿಜೆಪಿಗೆ ಮರಳಿದ ಮರಾಂಡಿ, ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ, ಪಕ್ಷದ ರಾಜ್ಯಾಧ್ಯಕ್ಷರೂ ಆದರು.

ತನ್ನ ಬುಡಕಟ್ಟು ಮತಬ್ಯಾಂಕ್ ಅನ್ನು ಬಲಪಡಿಸಲು ಬಿಜೆಪಿ ಈ ವರ್ಷದ ಆಗಸ್ಟ್‌ನಲ್ಲಿ ಮಾಜಿ ಸಿಎಂ ಮತ್ತು ಮಾಜಿ ಜೆಎಂಎಂ ನಾಯಕ ಚಂಪಯಿ ಸೊರೇನ್ ಅವರನ್ನು ಸೇರಿಸಿಕೊಂಡಿದೆ.

ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಾಗ ಅದು ತನ್ನ ಮಿತ್ರಪಕ್ಷಗಳಿಂದಲೇ ಪಾಠ ಕೇಳಿಸಿಕೊಳ್ಳಬೇಕಾಗಿ ಬಂತು.

ಹರ್ಯಾಣ ಚುನಾವಣೆಯನ್ನು ‘ಇಂಡಿಯಾ’ ಒಕ್ಕೂಟದ ಪಕ್ಷಗಳೊಂದಿಗೆ ಸೇರದೆ ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿತ್ತು.

ಕಾಂಗ್ರೆಸ್‌ನ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎಂದು ಮಿತ್ರಪಕ್ಷಗಳಾದ ಶಿವಸೇನೆ (ಯುಬಿಟಿ) ಮತ್ತು ಎಎಪಿ ಟೀಕಿಸಿದವು.

ಹರ್ಯಾಣದಲ್ಲಿ ‘ಇಂಡಿಯಾ’ ಒಕ್ಕೂಟ ಒಗ್ಗಟ್ಟಿನೊಂದಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಈಗಿನ ಗೆಲುವು ಸಿಗುತ್ತಿರಲಿಲ್ಲ ಎಂದಿವೆ ವಿಶ್ಲೇಷಣೆಗಳು.

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ತನ್ನ ಪ್ರಾದೇಶಿಕ ಮಿತ್ರಪಕ್ಷಗಳೊಂದಿಗೆ ‘ಇಂಡಿಯಾ’ ಒಕ್ಕೂಟದ ಭಾಗವಾಗಿ ಸ್ಪರ್ಧಿಸುತ್ತಿದೆ.

ಮಹಾರಾಷ್ಟ್ರದಲ್ಲಿ, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್) ಜೊತೆಗಿನ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಭಾಗವಾಗಿದ್ದರೆ, ಜಾರ್ಖಂಡ್‌ನಲ್ಲಿ ಜೆಎಂಎಂ ಜೊತೆ ಕಾಂಗ್ರೆಸ್ ಮೈತ್ರಿಯಲ್ಲಿದೆ.

ಈಗ ಸೀಟು ಹಂಚಿಕೆ ಮತ್ತು ಅಧಿಕಾರ ಹಂಚಿಕೆ ಸಮಾಲೋಚನೆಗಳು ಸರಾಗವಾಗಿ ನಡೆಯಬೇಕಿದೆ.

ಈ ಮೈತ್ರಿಕೂಟ ಎರಡೂ ರಾಜ್ಯಗಳಲ್ಲಿ ಉತ್ತಮ ಸಾಧನೆ ತೋರಿಸಿದರೆ, ‘ಇಂಡಿಯಾ’ ಒಕ್ಕೂಟಕ್ಕೆ ವಿಶೇಷವಾಗಿ ಮುಂದಿನ ವರ್ಷ ನಡೆಯಲಿರುವ ದಿಲ್ಲಿ ಮತ್ತು ಬಿಹಾರದಲ್ಲಿನ ಚುನಾವಣೆಗಳ ಸಮಯದಲ್ಲಿ ಬಲ ಬರಲಿದೆ.

ಆದರೆ ಬಿಜೆಪಿ ಗೆದ್ದರೆ, ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ ಫಲಿತಾಂಶ ಅದರ ಪರವಾಗಿ ಬಂದರೆ ಬಿಜೆಪಿ ಹೊಸ ಚೈತನ್ಯದೊಂದಿಗೆ ಮುನ್ನುಗ್ಗಲಿದೆ. ಲೋಕಸಭಾ ಚುನಾವಣೆಯ ಹಿನ್ನಡೆಯನ್ನು ಅದು ಸರಿದೂಗಿಸಿಕೊಳ್ಳಲಿದೆ.

ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಂಬರ್ ಒನ್ ಪಕ್ಷವಾಗಿ ಮೂಡಿ ಬಂದಿರುವ ಕಾಂಗ್ರೆಸ್ ನ ಮೈತ್ರಿಕೂಟ ಈಗ ಅದೇ ಸಾಧನೆಯನ್ನು ಮತ್ತೊಮ್ಮೆ ಪುನರಾವರ್ತಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.

ಮಹಾರಾಷ್ಟ್ರ ‘ಇಂಡಿಯಾ’ ಒಕ್ಕೂಟದ ಕೈ ಬಿಟ್ಟರೆ ಅದು ಒಕ್ಕೂಟದ ಪಾಲಿಗೆ ಬಹಳ ದೊಡ್ಡ ಹಿನ್ನಡೆಯಾಗಲಿದೆ. ಆ ರಾಜ್ಯದಲ್ಲಂತೂ ಒಕ್ಕೂಟ ಉಳಿಯುವುದಿಲ್ಲ. ರಾಷ್ಟ್ರ ಮಟ್ಟದಲ್ಲೂ ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಅದು ಛಿದ್ರವಾಗುವ ಅಪಾಯವೂ ಇದೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ಸಿಎಂ ಶಿಂದೆ ಹಾಗೂ ಬಿಜೆಪಿ ಸರಿಯಾಗಿ ತಿಳಿದುಕೊಂಡು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹಲವಾರು ರಾಜಕೀಯ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿದ್ದಾರೆ.

ವಿಶೇಷವಾಗಿ ರೈತರು, ಮಹಿಳೆಯರು ಹಾಗೂ ಮಧ್ಯಮ ವರ್ಗವನ್ನು ಸೆಳೆಯುವ ಹತ್ತಾರು ಕೊಡುಗೆಗಳನ್ನು ಮಹಾಯುತಿ ಸರಕಾರ ಘೋಷಿಸಿದೆ. ಇನ್ನೊಂದು ಕಡೆ ಆರೆಸ್ಸೆಸ್ ತಳ ಮಟ್ಟದಲ್ಲಿ ಈಗಾಗಲೇ ಕೆಲಸ ಶುರು ಮಾಡಿದೆ.

ಹಾಗಾಗಿ ಮಹಾರಾಷ್ಟ್ರದಲ್ಲೂ ‘ಇಂಡಿಯಾ’ ಒಕ್ಕೂಟ ಸೂಕ್ತ ರಣತಂತ್ರ ಅನುಸರಿಸಲೇಬೇಕಾಗಿದೆ.

ಟಿಕೆಟ್ ಹಂಚಿಕೆಯಲ್ಲಿ, ತಳ ಮಟ್ಟದ ಪ್ರಚಾರದಲ್ಲಿ ಹಾಗೂ ಚುನಾವಣೆಯ ಮೈಕ್ರೋ ಮ್ಯಾನೇಜ್‌ಮೆಂಟ್‌ನಲ್ಲಿ ಹಾಗೂ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ನಿಭಾಯಿಸುವುದರಲ್ಲಿ ಎಡವುವ ಯಾವ ಅವಕಾಶವೂ ಅದಕ್ಕಿಲ್ಲ. ಎಡವಿದರೆ ಅಲ್ಲೂ ಆಘಾತಕಾರಿ ಫಲಿತಾಂಶ ಎದುರಿಸಿದರೆ ಅಚ್ಚರಿಯಿಲ್ಲ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News