ಇಸ್ರೇಲ್ ಯುದ್ಧದಾಹಕ್ಕೆ ಇರಾನ್ ಪಾಠ ಕಲಿಸೀತೇ?

Update: 2024-10-06 04:09 GMT

ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ಒಗ್ಗೂಡುವ ಅಗತ್ಯವಿದೆ ಎಂದು ಖಾಮಿನೈ ಹೇಳಿದ್ದಾರೆ. ನಮಗೆ ಏಕಮಾತ್ರ ವೈರಿಯಿದ್ದು, ಅದು ಇಸ್ರೇಲ್ ಆಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘‘ಅಫ್ಘಾನಿಸ್ತಾನದಿಂದ ಹಿಡಿದು ಯಮನ್‌ವರೆಗೆ, ಇರಾನ್‌ನಿಂದ ಹಿಡಿದು ಗಾಝಾವರೆಗೆ ಇಸ್ರೇಲ್ ನಮ್ಮ ವೈರಿಯಾಗಿದೆ’’ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಐದು ವರ್ಷಗಳ ಬಳಿಕ ಇದೇ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಖಾಮಿನೈ, ದಾಳಿ ನಡೆಯಬಹುದೆಂಬ ಆತಂಕದಲ್ಲಿ ಸುರಕ್ಷಿತ ಸ್ಥಳ ಸೇರಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸುಳ್ಳು ಮಾಡಿದರು. ಇದು, ತಾನು ಯಾರಿಗೂ ಹೆದರುವುದಿಲ್ಲ, ಪ್ರಾಣಭಯವೂ ಇಲ್ಲ ಎಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳಿದ ಹಾಗೆಯೂ ಇತ್ತು.

ಲಕ್ಷಾಂತರ ಜನರ ಸಮ್ಮುಖದಲ್ಲಿ ನಮಾಝ್ ಮಾಡುವ ಮೂಲಕ ಇರಾನ್‌ನ ಪರಮೋಚ್ಚ ನಾಯಕ ಆಯತುಲ್ಲಾ ಖಾಮಿನೈ ಇಸ್ರೇಲ್‌ಗೆ ನೇರ ಸವಾಲು ಹಾಕಿದ್ದಾರೆ.

ಅವರು ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಇಸ್ರೇಲ್‌ಗೂ, ಅಮೆರಿಕಕ್ಕೂ ಸವಾಲಾಗಿದೆ.

ಖಾಮಿನೈ ಸಾರ್ವಜನಿಕವಾಗಿ ಕಾಣಿಸಿಕೊಂಡ ಕ್ಷಣವನ್ನು ಇಡೀ ಜಗತ್ತೇ ಬೆರಗಿನಿಂದ ನೋಡಿದೆ.

ಇಸ್ರೇಲ್ ಮೇಲಿನ ಕ್ಷಿಪಣಿ ದಾಳಿಯನ್ನು ಸಮರ್ಥಿಸಿ ಕೊಂಡಿರುವ ಖಾಮಿನೈ, ಅಗತ್ಯ ಎನಿಸಿದರೆ ಮತ್ತೆ ದಾಳಿ ನಡೆಯಲಿದೆ ಎಂದಿದ್ದಾರೆ.

ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ಒಗ್ಗೂಡುವ ಅಗತ್ಯವಿದೆ ಎಂದು ಖಾಮಿನೈ ಹೇಳಿದ್ದಾರೆ. ನಮಗೆ ಏಕಮಾತ್ರ ವೈರಿಯಿದ್ದು, ಅದು ಇಸ್ರೇಲ್ ಆಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘‘ಅಫ್ಘಾನಿಸ್ತಾನದಿಂದ ಹಿಡಿದು ಯಮನ್‌ವರೆಗೆ, ಇರಾನ್‌ನಿಂದ ಹಿಡಿದು ಗಾಝಾವರೆಗೆ ಇಸ್ರೇಲ್ ನಮ್ಮ ವೈರಿಯಾಗಿದೆ’’ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಐದು ವರ್ಷಗಳ ಬಳಿಕ ಇದೇ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಖಾಮಿನೈ, ದಾಳಿ ನಡೆಯಬಹುದೆಂಬ ಆತಂಕದಲ್ಲಿ ಸುರಕ್ಷಿತ ಸ್ಥಳ ಸೇರಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸುಳ್ಳು ಮಾಡಿದರು. ಇದು, ತಾನು ಯಾರಿಗೂ ಹೆದರುವುದಿಲ್ಲ, ಪ್ರಾಣಭಯವೂ ಇಲ್ಲ ಎಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳಿದ ಹಾಗೆಯೂ ಇತ್ತು.

2020ರಲ್ಲಿ ಇರಾನ್ ಸೇನಾಧ್ಯಕ್ಷ ಕಾಸಿಂ ಸುಲೈಮಾನಿಯವರನ್ನು ಬಾಗ್ದಾದ್‌ನಲ್ಲಿ ಅಮೆರಿಕ ಡ್ರೋನ್ ದಾಳಿ ಮೂಲಕ ಕೊಂದಾಗ ಖಾಮಿನೈ ಹೀಗೆಯೇ ನಮಾಝ್‌ನ ನೇತೃತ್ವ ವಹಿಸಿದ್ದರು. ಈಗ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯ ಹಿನ್ನೆಲೆಯಲ್ಲಿ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡರು.

ಈ ಎರಡೂ ಸಂದರ್ಭಗಳಲ್ಲಿನ ಸಾರ್ವಜನಿಕ ಸಮಾವೇಶ ಇರಾನ್ ಮತ್ತು ಲೆಬನಾನ್ ಪಾಲಿಗೆ ಬಹಳ ಮಹತ್ವದ್ದು.

ಅಕ್ಟೋಬರ್ 1ರಂದು ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಅದಾದ ನಂತರವೂ ಶಾಂತರೀತಿಯಲ್ಲಿಯೇ ಇದ್ದಂತಿತ್ತು. ಆದರೆ ಈಗ ಅಗತ್ಯ ಬಿದ್ದರೆ ಮತ್ತೆ ದಾಳಿ ಮಾಡುತ್ತೇವೆ ಎಂದು ಖಾಮಿನೈ ಹೇಳಿರುವುದು, ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿರುವುದು ವಿಶೇಷ.

ವಿದೇಶಿ ಶಕ್ತಿಗಳ ಹಸ್ತಕ್ಷೇಪದ ಬಗ್ಗೆಯೂ ಖಾಮಿನೈ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ‘‘ಇಸ್ರೇಲ್ ಜೀವಂತವಾಗಿ ರುವುದೇ ಅಮೆರಿಕದ ಬೆಂಬಲದಿಂದ’’ ಎಂದು ಖಾಮಿನೈ ಹೇಳಿದ್ದಾರೆ. ಆದರೆ ಇದೆಲ್ಲವೂ ಹೆಚ್ಚು ಸಮಯದವರೆಗೆ ನಡೆಯದು. ಹಾಗೆಯೇ ಕಬ್ಜಾ ಮಾಡಿಕೊಳ್ಳುವ ಅಮೆರಿಕದ ಉದ್ದೇಶವೂ ಕೈಗೂಡದು ಎಂದಿದ್ದಾರೆ.

‘‘ಇರಾನ್ ಅವಸರದಲ್ಲೇನೂ ಇಲ್ಲ. ಸಮಯ ಬಂದಾಗ ರಾಜಕೀಯ ನಾಯಕರು ಮತ್ತು ಸೇನೆ ಜೊತೆಯಾಗಿ ಚರ್ಚಿಸಿ ಏನು ಮಾಡಬೇಕೆಂದು ನಿರ್ಧರಿಸಲಾಗುವುದು’’ ಎಂದಿದ್ದಾರೆ ಇರಾನ್‌ನ ಈ ಪರಮೋಚ್ಚ ನಾಯಕ.

ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಇದೆಲ್ಲದರ ಹಿಂದೆ ಅಮೆರಿಕದ ಚಿತಾವಣೆ ಇರುವುದರ ಬಗ್ಗೆ ಮಾತನಾಡಿ, ಅಂತರ್‌ರಾಷ್ಟ್ರೀಯ ಸಮುದಾಯ ಇದನ್ನು ಮರೆಯದು ಎಂದಿದ್ದಾರೆ.

ಒಂದು ವರ್ಷದಿಂದಲೂ ಮಧ್ಯಪ್ರಾಚ್ಯ ದೇಶಗಳು ಯುದ್ಧದ ಕರಿನೆರಳಲ್ಲಿ ಇರುವಂತಾಗಿದೆ. ಗಾಝಾ ಯುದ್ಧದ ವೇಳೆ ಫೆಲೆಸ್ತೀನ್ ಪರವಾಗಿ ಮತ್ತು ಇಸ್ರೇಲ್ ವಿರುದ್ಧ ಪ್ರತಿಭಟನೆಗಳು ನಡೆದವಾದರೂ ಬಹಳ ಬೇಗ ತಣ್ಣಗೂ ಆದವು. ಎಲ್ಲ ಮುಸ್ಲಿಮ್ ದೇಶಗಳೂ ಒಂದಾಗಲು ಮತ್ತು ಯುದ್ಧದ ವೇಳೆ ಜೊತೆಯಾಗಿ ನಿಲ್ಲಲು ಇರಾನ್ ಮತ್ತೆ ಮತ್ತೆ ಯತ್ನಿಸುತ್ತಿದೆ. ಆದರೆ ಅದಾಗುತ್ತಿಲ್ಲ.

ಇರಾನ್-ಇಸ್ರೇಲ್ ಸಂಘರ್ಷದಲ್ಲಿ ನಿರ್ಲಿಪ್ತವಾಗಿರುವ ನಿಲುವನ್ನು ಗಲ್ಫ್ ದೇಶಗಳು ಪುನರುಚ್ಚರಿಸಿರುವುದಾಗಿ ರಾಯ್ಟರ್ಸ್ ವರದಿ ಹೇಳುತ್ತಿದೆ.

ಅರಬ್ ದೇಶಗಳು ತಮ್ಮ ಜಾಗವನ್ನು ಮಿಲಿಟರಿ ಉದ್ದೇಶಕ್ಕೆ ಬಳಸಲು ಅಮೆರಿಕಕ್ಕೆ ನಿಜವಾಗಿಯೂ ಅನುಮತಿ ನೀಡುವು ದಿಲ್ಲವೆ? ಇಂಥ ಪ್ರಶ್ನೆಗಳೊಂದಿಗೆ ಅನಿಶ್ಚಿತತೆ ಮುಂದುವರಿದಿದೆ.

ಅಗತ್ಯ ಬಿದ್ದರೆ ಮತ್ತೆ ದಾಳಿಗೆ ಹಿಂಜರಿಯುವುದಿಲ್ಲ ಎಂಬ ಖಾಮಿನೈ ಹೇಳಿಕೆಯನ್ನು ಇಸ್ರೇಲ್ ಹೇಗೆ ತೆಗೆದುಕೊಳ್ಳಲಿದೆ, ಅದರ ನಡೆಯೇನು ಎಂಬುದನ್ನು ನೋಡಬೇಕಿದೆ.

ಈ ನಡುವೆ, ಗಾಝಾದಲ್ಲಿ ಕೆಲಸ ಮಾಡಲು ಸ್ವಯಂಪ್ರೇರಣೆ ಯಿಂದ ಮುಂದಾಗಿರುವ ಅಮೆರಿಕದ 99 ವೈದ್ಯರು, ಗ್ರಹಿಕೆಗೂ ಮೀರಿದ ಅಪರಾಧಗಳಿಗೆ ಸಾಕ್ಷಿಯಾಗಿರುವುದಾಗಿ ಹೇಳಿದ್ದಾರೆ.

ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಬರೆದಿರುವ ಪತ್ರದಲ್ಲಿ ಈ ವೈದ್ಯರು, ಇಸ್ರೇಲ್‌ಗೆ ನೀಡಲಾಗಿರುವ ಮಿಲಿಟರಿ, ಆರ್ಥಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಇಸ್ರೇಲ್ ದಾಳಿಯ ನಡುವೆ ಗಾಝಾದಲ್ಲಿ ತಲೆದೋರಿರುವ ಭೀಕರ ಮಾನವೀಯ ಪರಿಸ್ಥಿತಿ ಕುರಿತ ತಮ್ಮ ಅನುಭವಗಳನ್ನು ವೈದ್ಯರು ಪತ್ರದಲ್ಲಿ ಹಂಚಿಕೊಂಡಿದ್ದಾರೆ.

ಗಾಝಾದ ಯಾವುದೇ ಆಸ್ಪತ್ರೆಗಳು ಅಥವಾ ಇತರ ಆರೋಗ್ಯ ಕೇಂದ್ರಗಳಲ್ಲಿ ನಮ್ಮಲ್ಲಿ ಯಾರೂ ಫೆಲೆಸ್ತೀನ್ ಉಗ್ರಗಾಮಿ ಚಟುವಟಿಕೆಯನ್ನು ಒಮ್ಮೆಯೂ ನೋಡಿಲ್ಲ.

ಆದರೆ ಗಾಝಾದ ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಇಸ್ರೇಲ್ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಗಾಝಾದಲ್ಲಿ ವ್ಯಾಪಕ ಅಪೌಷ್ಟಿಕತೆ ಮತ್ತು ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕೊರತೆ ಸೇರಿದಂತೆ ಆಸ್ಪತ್ರೆಗಳಲ್ಲಿನ ಮಹಿಳೆಯರು ಮತ್ತು ಮಕ್ಕಳ ನೋವನ್ನು ಪತ್ರದಲ್ಲಿ ವಿವರಿಸಲಾಗಿದೆ.

ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಿದ್ದು, ಗಾಝಾದಲ್ಲಿ ಸಾವಿನ ಸಂಖ್ಯೆ ಈಗಾಗಲೇ 1,18,000 ಮೀರಿದೆ, ಇದು ಗಾಝಾದ ಜನಸಂಖ್ಯೆಯ ಶೇ.5ಕ್ಕಿಂತ ಹೆಚ್ಚು ಎಂದು ವಿವರಿಸಲಾಗಿದೆ.

ಮಕ್ಕಳು ಆರೋಗ್ಯವಾಗಿ ಜನಿಸಿದರೂ, ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಂದಿರು ಹಾಲುಣಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಪ್ರತಿದಿನವೂ ಶಿಶುಗಳು ಸಾಯುವುದನ್ನು ನೋಡಬೇಕಾಗಿದೆ ಎಂದು ನರ್ಸ್ ಒಬ್ಬರು ಹೇಳಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇಡೀ ವರ್ಷ ಗಾಝಾದಾದ್ಯಂತ ಚಿಕ್ಕ ಮಕ್ಕಳ ಮೇಲೆಯೂ ನಡೆದಿರುವ ವ್ಯಾಪಕ ಗುಂಡಿನ ದಾಳಿಯ ಹೃದಯವಿದ್ರಾವಕ ಸ್ಥಿತಿಯನ್ನೂ ವೈದ್ಯರ ಪತ್ರ ವಿವರಿಸಿದೆ.

ನೀರು ಮತ್ತು ವೈದ್ಯಕೀಯ ಸೌಲಭ್ಯ ಪೂರೈಕೆ, ಮಾನವೀಯ ಸಹಾಯವನ್ನು ಗಾಝಾಕ್ಕೆ ತಲುಪಿಸಲು ರಫಾ ಕ್ರಾಸಿಂಗ್ ಅನ್ನು ಪುನಃ ತೆರೆಯುವುದೂ ಸೇರಿದಂತೆ ತಮ್ಮ ಜುಲೈ 25ರ ಪತ್ರದಲ್ಲಿನ ಬೇಡಿಕೆಗಳ ಬಗ್ಗೆಯೂ ವೈದ್ಯರು ಮತ್ತೆ ಗಮನ ಸೆಳೆದಿದ್ದಾರೆ.

ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳ ಪೂರೈಕೆಯನ್ನು ನಿಲ್ಲಿಸುವವರೆಗೂ ಪ್ರತೀ ದಿನವೂ ಬಾಂಬ್‌ಗಳಿಂದ ಇಲ್ಲಿ ಮಹಿಳೆಯರು ಛಿದ್ರ ಛಿದ್ರವಾಗುತ್ತಾರೆ ಮತ್ತು ಮಕ್ಕಳ ದೇಹವನ್ನು ಗುಂಡುಗಳು ಹೊಕ್ಕುತ್ತವೆ ಎಂದು ಗಾಝಾದಲ್ಲಿನ ಕರಾಳತೆಯನ್ನು ವೈದ್ಯರ ಪತ್ರ ವಿವರಿಸಿದೆ.

ನಾವು ನಾಯಕರಲ್ಲ, ನಮ್ಮ ಬಳಿ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಇಲ್ಲ. ನಾವು ವೈದ್ಯರು ಮಾತ್ರ. ನಾವು ಆರೋಗ್ಯ ಕಾರ್ಯಕರ್ತರು ಮಾತ್ರ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಇಸ್ರೇಲ್‌ಗೆ ಬೆಂಬಲ ನೀಡಬೇಡಿ ಮತ್ತು ಯುದ್ಧವಿರಾಮದ ವ್ಯವಸ್ಥೆ ಮಾಡಿ ಎಂದು ವೈದ್ಯರು ಕೇಳಿಕೊಂಡಿರುವುದೇನೋ ಹೌದು. ಆದರೆ ಇಸ್ರೇಲ್ ಅನ್ನು ಬೈಡನ್ ತಡೆಯಲಾರರು ಎಂಬುದು ಕೂಡ ಸತ್ಯ.

ನೈತಿಕ ಬಲವನ್ನೇ ಕಳೆದುಕೊಂಡಿರುವ ಬೈಡನ್, ವೈದ್ಯರ ಈ ಪತ್ರದ ಬಳಿಕ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಬಲ್ಲರೆ? ಇಸ್ರೇಲ್ ಅನ್ನು ತಡೆಯಬಲ್ಲರೆ?

ಅಂಥ ದೊಡ್ಡ ಯುದ್ಧವೇನೂ ಆಗದು. ಹಾಗಾದ ಹೊತ್ತಲ್ಲಿ ಅದನ್ನು ತಡೆಯಲಾಗುವುದು ಎಂದೆಲ್ಲ ಬೈಡನ್ ಕಥೆ ಹೇಳಿಕೊಂಡು ಕುಳಿತಿದ್ದಾರೆಯೇ ಹೊರತು, ಗಾಝಾದ ಬಗ್ಗೆಯಾಗಲೀ ಅಂಥದೇ ಸ್ಥಿತಿಯನ್ನು ಎದುರಿಸಬಹುದಾದ ಇರಾನ್ ಜನರ ಬಗ್ಗೆಯಾಗಲೀ ಬೈಡನ್ ಕಳವಳ ತೋರಿಸುತ್ತಾರೆಯೆ?

ವರ್ಷದಿಂದ ಗಾಝಾದಲ್ಲಿ ನಡೆದ ಕರಾಳತೆಯನ್ನು ಅವರು ತಡೆಯಲಾರದೆ ಹೋದರು. ಈಗ ಯೂನಿಸೆಫ್ ಕೂಡ ತಕ್ಷಣ ಯುದ್ಧ ನಿಲ್ಲಿಸುವಂತೆ ಕೋರಿದೆ.

ಲೆಬನಾನ್-ಇಸ್ರೇಲ್ ಸಂಘರ್ಷದಿಂದಾಗಿ ಸೆಪ್ಟಂಬರ್ ತಿಂಗಳಲ್ಲಿ ಗಡಿಭಾಗದಲ್ಲಿ 1,600ಕ್ಕೂ ಹೆಚ್ಚು ಜನ ಸತ್ತಿದ್ದು, 8,400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸತ್ತವರಲ್ಲಿ 104 ಮಕ್ಕಳು, 194 ಮಹಿಳೆಯರು ಹಾಗೂ ವಿಶ್ವಸಂಸ್ಥೆಯ ಇಬ್ಬರು ಸಿಬ್ಬಂದಿ ಸೇರಿದ್ದಾರೆ ಎಂದು ಯೂನಿಸೆಫ್ ಹೇಳಿದೆ.

ಲೆಬನಾನ್‌ನಲ್ಲಿ ಒಂದೂವರೆ ತಿಂಗಳಲ್ಲಿ 690 ಮಕ್ಕಳು ಗಾಯಗೊಂಡಿರುವುದಾಗಿ ‘ಅಲ್ ಜಝೀರಾ’ ವರದಿ ಹೇಳಿದೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮವಾಗುತ್ತಿರುವುದನ್ನು ವರದಿ ಉಲ್ಲೇಖಿಸಿದೆ.

ಲೆಬನಾನ್‌ನ ಬೈರೂತ್, ಗಾಝಾ, ಆಕ್ರಮಿತ ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ಬಾಂಬ್‌ಗಳ ಮಳೆ ಸುರಿಸುತ್ತಿರುವುದನ್ನು ವರದಿಗಳು ಹೇಳುತ್ತಲೇ ಇವೆ.

ಲೆಬನಾನ್‌ನಲ್ಲಿ ನಿತ್ಯ ಸಾವುನೋವುಗಳ ಪ್ರಮಾಣ ಹೆಚ್ಚುತ್ತಲೇ ಇದೆ. ನೆಲದ ಮೇಲೆ ಯುದ್ಧ ಮಾಡಲಾರದ ಇಸ್ರೇಲ್ ವಾಯುದಾಳಿ ಮೂಲಕ ಎಲ್ಲವನ್ನೂ, ಧ್ವಂಸಗೊಳಿಸುತ್ತಿದೆ. ಗಾಝಾದಲ್ಲಿ ವರ್ಷದಿಂದ ಅದು ಮಾಡಿರುವುದೂ ಇದನ್ನೇ.

ನಾಯಕರು ಫೋಟೊದಲ್ಲಿ ಮಾತ್ರವೇ ಕೈಕೈ ಕುಲುಕುತ್ತಾರೆ. ಅವರ ಮನಸ್ಸಿನೊಳಗೆ ಆಗಲೂ ಬೇರೆಯೇ ಇಂಗಿತ ಇರುತ್ತದೆ. ನೆತನ್ಯಾಹು ಥರದವರ ಯುದ್ಧದಾಹ ಎಲ್ಲವನ್ನೂ ಎಲ್ಲರನ್ನೂ ತಿಂದುಹಾಕುತ್ತಿದೆ.

ಲೆಬನಾನ್ ಮೇಲಿನ ದಾಳಿ ವೇಳೆ ನಿಜವಾಗಿಯೂ ಲೆಬನಾನ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ಹೇಳುವ ವರದಿಗಳು ಕಡಿಮೆ. ಇಸ್ರೇಲ್ ಮಾತ್ರ ತನಗೆ ಬೇಕಾದಂತೆ ಸುದ್ದಿಗಳನ್ನು ಹಬ್ಬಿಸುತ್ತದೆ.

ಅಧ್ಯಯನಗಳ ಪ್ರಕಾರ, ಕಳೆದ 50 ವರ್ಷಗಳಲ್ಲಿ ಲೆಬನಾನ್ ಮೇಲೆ ಇಸ್ರೇಲ್ 6 ಬಾರಿ ದಾಳಿ ಮಾಡಿದೆ. ಆದರೆ ಲೆಬನಾನ್ ಅನ್ನು ಆಕ್ರಮಿಸಿಕೊಳ್ಳುವ ಇಸ್ರೇಲ್ ಉದ್ದೇಶ ಈವರೆಗೂ ಯಶಸ್ಸು ಕಂಡಿಲ್ಲ.

ಅದರ ಬಗ್ಗೆ ಲೇಡೆನ್ ವಿವಿ ಪ್ರಾಧ್ಯಾಪಕಿ ವೆನಿಸ್ಸಾ ನ್ಯೂಬೈ ಬರೆದಿದ್ದಾರೆ.

1978ರ ಮಾರ್ಚ್ 19 ವಿಶ್ವಸಂಸ್ಥೆ ಶಾಂತಿ ಸ್ಥಾಪನೆ ಯತ್ನದ ಹಿನ್ನೆಲೆಯಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಕದನ ವಿರಾಮ ಘೋಷಿಸಿದ ಇಸ್ರೇಲ್ ಸೇನೆಯನ್ನು ಹಿಂದೆಗೆದುಕೊಂಡಿತು.

1982 ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ದಾಳಿ, ಬೈರೂತ್‌ವರೆಗೂ ಪ್ರವೇಶ.

1990ರಿಂದ 2000 ಈ ಅವಧಿಯಲ್ಲಿ ಇಸ್ರೇಲ್ ಲೆಬನಾನ್‌ನ ಮೇಲೆ ಮತ್ತೆರಡು ದಾಳಿ ನಡೆಸಿತ್ತು. ಅದನ್ನು ಹಿಜ್ಬುಲ್ಲಾ ಹಿಮ್ಮಟ್ಟಿಸಿತ್ತು.

2006ರಲ್ಲಿ ಮತ್ತೆ ಇಸ್ರೇಲ್-ಲೆಬನಾನ್ ಕದನ.

ಹೀಗೆ ಲೆಬನಾನ್ ಯಾವತ್ತೂ ನಿರಾಳವಾಗಿ ಇದ್ದುದೇ ಇಲ್ಲ. ಆದರೆ ಅದು ಇಸ್ರೇಲ್‌ಗೆ ಶರಣಾಗಲೂ ಇಲ್ಲ. ಪ್ರತಿಯೊಂದು ಬಾರಿಯೂ ಅದು ದಿಟ್ಟತನದಿಂದ ಪ್ರತಿರೋಧ ಒಡ್ಡಿದೆ, ಇಸ್ರೇಲ್ ಅನ್ನು ಹಿಮ್ಮೆಟ್ಟಿಸಿದೆ. ಆದರೆ ಈ ಬಾರಿ ಏನಾಗಲಿದೆ ಎಂದು ನೋಡಬೇಕಾಗಿದೆ.

ಯುದ್ಧದಾಹಿಗಳ ಹಸಿವು ತೀರುವುದೇ ಇಲ್ಲ ಮತ್ತು ಯುದ್ಧ ಮುಗಿಯುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ, ಯುದ್ಧಪೀಡಿತ ಅಮಾಯಕರ ಬದುಕು ನರಕಸದೃಶವಾಗುವುದಿದೆಯಲ್ಲ, ಅದು ಈ ಜಗತ್ತು ಎಂದಿಗೂ ಕ್ಷಮಿಸಲಾರದ ದುರಂತ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಎಚ್. ವೇಣುಪ್ರಸಾದ್

contributor

Similar News