ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಈ ಬಾರಿ ಜೋ ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿಯುವರೇ?

ಅಟ್ಲಾಂಟಾದಲ್ಲಿ ಬೈಡನ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಮೊದಲ ಚರ್ಚೆಯಲ್ಲಿ ಬೈಡನ್ ವಾದ ತೀರಾ ಸಪ್ಪೆಯಾಗಿತ್ತು ಎಂಬ ಹಿನ್ನೆಲೆಯಲ್ಲಿ ಬೈಡನ್ ಅವರನ್ನು ಬದಲಿಸಬೇಕು ಎಂಬ ಕೂಗು ಎದ್ದಿದೆ. ಪಕ್ಷದೊಳಗೇ ಭಿನ್ನಾಭಿಪ್ರಾಯಕ್ಕೆ ಇದು ಕಾರಣವಾಗಿದೆ. ಚರ್ಚೆಯಲ್ಲಿ ಬೈಡನ್ ಅವರ ಮಾತುಗಳು ಅರ್ಥವಾಗುತ್ತಿರಲಿಲ್ಲ. ಟ್ರಂಪ್ ಪ್ರಶ್ನೆಗೆ ಅವರು ಸರಿಯಾಗಿ ಉತ್ತರಿಸುತ್ತಲೂ ಇರಲಿಲ್ಲ ಎಂಬುದು ಈಗ ಎದ್ದಿರುವ ತಕರಾರು.

Update: 2024-07-14 05:01 GMT

ಈ ವರ್ಷ ನವೆಂಬರ್ 5ರಂದು ಅಮೆರಿಕ ಅಧ್ಯಕ್ಷರ ಚುನಾವಣೆ ನಡೆಯಲಿದೆ.

ಕಳೆದ ಬಾರಿ ಸೋತು ಅಧ್ಯಕ್ಷ ಸ್ಥಾನ ಕಳಕೊಂಡ ವಿವಾದಾತ್ಮಕ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ದೇಶದ ಅಧ್ಯಕ್ಷರಾಗಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.

ಆದರೆ, ಅವರೆದುರು ಸ್ಪರ್ಧಿಸಿ ಸ್ಥಾನ ಉಳಿಸಿಕೊಳ್ಳಬೇಕಾದ 81 ವರ್ಷದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕುರಿತಾಗಿ ಗಂಭೀರ ಪ್ರಶ್ನೆಗಳು ಎದ್ದಿವೆ.

ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕೆಂದು ಸ್ವತಃ ಡೆಮಾಕ್ರಟಿಕ್ ಪಕ್ಷದವರೇ ಒತ್ತಾಯಿಸಿರುವುದು ಮಹತ್ವ ಪಡೆದಿದೆ. ಡೆಮಾಕ್ರಟಿಕ್ ಪಕ್ಷದ ಮೂರನೇ ಒಂದರಷ್ಟು ಸಂಸದರು ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸುತ್ತಿರುವ ಬಗ್ಗೆ ಇತ್ತೀಚಿನ ಸಮೀಕ್ಷೆ ಹೇಳಿದೆ.

ಆದರೆ ಇದೇ ವೇಳೆ, ಟ್ರಂಪ್ ವಿರುದ್ಧ ಬೈಡನ್‌ಗಿಂತಲೂ ಉತ್ತಮ ಪೈಪೋಟಿ ನೀಡಬಲ್ಲ ಸಂಸದರೂ ಬೇರೆಯವರಿಲ್ಲ ಎಂದೂ ಸಮೀಕ್ಷೆ ಕಂಡುಕೊಂಡಿದೆ.

ಅಟ್ಲಾಂಟಾದಲ್ಲಿ ಬೈಡನ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಮೊದಲ ಚರ್ಚೆಯಲ್ಲಿ ಬೈಡನ್ ವಾದ ತೀರಾ ಸಪ್ಪೆಯಾಗಿತ್ತು ಎಂಬ ಹಿನ್ನೆಲೆಯಲ್ಲಿ ಬೈಡನ್ ಅವರನ್ನು ಬದಲಿಸಬೇಕು ಎಂಬ ಕೂಗು ಎದ್ದಿದೆ.

ಪಕ್ಷದೊಳಗೇ ಭಿನ್ನಾಭಿಪ್ರಾಯಕ್ಕೆ ಇದು ಕಾರಣವಾಗಿದೆ.

ಚರ್ಚೆಯಲ್ಲಿ ಬೈಡನ್ ಅವರ ಮಾತುಗಳು ಅರ್ಥವಾಗುತ್ತಿರಲಿಲ್ಲ. ಟ್ರಂಪ್ ಪ್ರಶ್ನೆಗೆ ಅವರು ಸರಿಯಾಗಿ ಉತ್ತರಿಸುತ್ತಲೂ ಇರಲಿಲ್ಲ ಎಂಬುದು ಈಗ ಎದ್ದಿರುವ ತಕರಾರು.

ಇಂತಹ ಸ್ಥಿತಿಯಲ್ಲಿ ಬೈಡನ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಮುಂದುವರಿಸುವುದು ಸರಿಯೇ ಎಂಬುದು ಹಲವರ ಪ್ರಶ್ನೆ ಎಂದು ವರದಿಗಳು ಹೇಳುತ್ತಿವೆ.

ಡೆಮಾಕ್ರಟಿಕ್ ಪಕ್ಷದ ಸಂಸದರು ಮಾತ್ರವಲ್ಲ, ವಿವಿಧ ಪತ್ರಿಕೆಗಳ ಸಂಪಾದಕೀಯಗಳೂ ಇಂಥದೇ ಆಭಿಪ್ರಾಯ ವ್ಯಕ್ತಪಡಿಸಿವೆ.

ರಾಜಕೀಯ ವಿಶ್ಲೇಷಕರು ಕೂಡ ಸ್ಪರ್ಧೆಯಿಂದ ಬೈಡನ್ ಹಿಂದೆ ಸರಿಯುವುದು ಸೂಕ್ತ ಎಂದಿದ್ದಾರೆ. ವರ್ಚಸ್ಸು ಕಳೆದುಕೊಂಡಿರುವ ಬೈಡನ್ ಅವರು ಟ್ರಂಪ್ ವಿರುದ್ಧ ಸೋಲುವುದು ಖಚಿತ ಎಂದು ಪರಿಣಿತರು ಹೇಳಿದ್ದಾರೆ.

ಬೈಡನ್ ಅವರೇ ಏಕೆ ಪಕ್ಷದ ಅಭ್ಯರ್ಥಿಯಾಗಬೇಕು ಎಂಬ ಪ್ರಶ್ನೆಯನ್ನು ‘ನ್ಯೂಯಾರ್ಕ್ ಟೈಮ್ಸ್’ ಸೇರಿದಂತೆ ಪ್ರಮುಖ ಪತ್ರಿಕೆಗಳು ಎತ್ತಿವೆ.

ಬೈಡನ್ ಪರವಾಗಿ ಪಕ್ಷದ 3,894 ಪ್ರತಿನಿಧಿಗಳಿದ್ದಾರೆ.

ಪಕ್ಷದ ಅಭ್ಯರ್ಥಿಯಾಗಲು 1,975 ಪ್ರತಿನಿಧಿಗಳ ಬೆಂಬಲ ಸಾಕಾಗುತ್ತದೆ.

ಪಕ್ಷದ ಚುನಾವಣಾ ನೇತೃತ್ವ ವಹಿಸಿರುವ ಅನೇಕರು, ಬೈಡನ್ ಅವರೇ ನಮ್ಮ ಪಕ್ಷದ ಅಭ್ಯರ್ಥಿ, ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಚರ್ಚೆಯಲ್ಲಿ ತಮ್ಮ ಪ್ರದರ್ಶನ ಸಪ್ಪೆಯಾಗಿತ್ತು ಎಂಬುದನ್ನು ಸ್ವತಃ ಬೈಡನ್ ಒಪ್ಪಿಕೊಂಡಿದ್ದರೂ, ಸ್ಪರ್ಧೆಯಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದಿದ್ಧಾರೆ.

‘‘ನನ್ನ ಪ್ರದರ್ಶನ ಸಪ್ಪೆಯಾಗಿಯೇ ಇತ್ತು. ಹಾಗೆಂದು ಕೈಚೆಲ್ಲಲಾರೆ. ಚರ್ಚೆಯ ನಂತರದ ರಾತ್ರಿ ನನಗೆ ನಿದ್ದೆ ಬಂದಿಲ್ಲ. ಆದರೆ ಚರ್ಚೆಯಲ್ಲಿ ಸುಳ್ಳುಗಳನ್ನೇ ಹೇಳಿರುವ ಟ್ರಂಪ್‌ಗೂ ನಿದ್ದೆ ಬಂದಿರುವುದಿಲ್ಲ. ಅಧ್ಯಕ್ಷನಾಗಿದ್ದಾಗಿನ ಆತನ ನಡವಳಿಕೆಗಳು ಏನಿದ್ದವು ಎಂಬುದನ್ನು ಜನ ಮರೆತಿಲ್ಲ’’ ಎಂದು ಬೈಡನ್ ಹೇಳಿದ್ದಾರೆ.

ಟ್ರಂಪ್ ವಿರುದ್ಧ ಗೆದ್ದೇ ಗೆಲ್ಲುವ ವಿಶ್ವಾಸವನ್ನೂ ಬೈಡನ್ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ಗೆ ಹೋಲಿಸಿದರೆ ಬಹಳ ಉದಾರವಾದಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವವರು ಎಂದೇ ಬಿಂಬಿತವಾಗಿದ್ದ ಬೈಡನ್ ಅಧ್ಯಕ್ಷರಾದ ಮೇಲೆ ಅಂತಹ ಯಾವುದೇ ನಿಲುವು ತೋರಿಸಲಿಲ್ಲ ಎಂದು ಜಾಗತಿಕವಾಗಿ ಅಸಮಾಧಾನವಿದೆ.

ವಿಶೇಷವಾಗಿ ಫೆಲೆಸ್ತೀನ್ ಮೇಲಿನ ಇಸ್ರೇಲ್‌ನ ಭಯಾನಕ ಆಕ್ರಮಣ ಹಾಗೂ ನರಮೇಧಕ್ಕೆ ಸಂಪೂರ್ಣ ಬೆಂಬಲ ನೀಡಿರುವ ಕುಖ್ಯಾತಿಯೂ ಇದೇ ಬೈಡನ್ ಅವರದ್ದು.

ಆದರೆ ನೇಟೊ ಸಭೆಯಲ್ಲಿ ಭಾಗವಹಿಸಿದ್ದ ವೇಳೆಯೂ ಬೈಡನ್ ಮತ್ತೊಮ್ಮೆ ಯಡವಟ್ಟು ಮಾಡಿಕೊಂಡಿದ್ದಾರೆ.

ಆ ಸಭೆಗೆ ಆಗಮಿಸಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ‘ಪುಟಿನ್’ ಎಂದು ಸಂಬೋಧಿಸಿದ್ದಾರೆ.

ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ‘ಟ್ರಂಪ್’ ಎಂದು ಸಂಬೋಧಿಸಿ ಅಚಾತುರ್ಯ ತೋರಿಸಿದ್ದಾರೆ.

ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಮುಂದೇನು?

ಚುನಾವಣೆ ಹತ್ತಿರವಾಗುತ್ತಿರುವಾಗ ಸ್ಪರ್ಧೆಯಿಂದ ಅಭ್ಯರ್ಥಿ ಹಿಂದೆ ಸರಿಯುವುದು ತೀರಾ ವಿರಳ. ಒಂದು ವೇಳೆ ಹಾಗಾದಲ್ಲಿ ಪಕ್ಷದ ಮತ್ತೊಬ್ಬರನ್ನು ಕಣಕ್ಕಿಳಿಸಬೇಕಾಗುತ್ತದೆ.

ಸ್ಪರ್ಧೆಯಿಂದ ಹಿಂದೆ ಸರಿಯುವುದೇ ಅನಿವಾರ್ಯ ಎನ್ನಿಸಿದಲ್ಲಿ ಬೈಡನ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡಬಹುದು. ಆದರೆ ಟ್ರಂಪ್ ಅವರನ್ನು ಸೋಲಿಸಲು ಕಮಲಾ ಸಮರ್ಥರೇ ಎಂಬ ಅನುಮಾನವೂ ಪಕ್ಷದೊಳಗಿದೆ ಎಂಬ ವರದಿಗಳಿವೆ.

ಚಿಕಾಗೋದಲ್ಲಿ ಆಗಸ್ಟ್‌ನಲ್ಲಿ ನಡೆಯುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶಕ್ಕೂ ಮೊದಲು ಬೈಡನ್ ಹಿಂದೆ ಸರಿದರೆ ಆಗ ಪಕ್ಷ ಇನ್ನೊಬ್ಬ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡುವ ಸಂಭವ ಇದೆ.

1968ರಲ್ಲಿ ರಾಬರ್ಟ್ ಎಫ್ ಕೆನಡಿ ಹತ್ಯೆಯಾದಾಗ ಮತ್ತೊಬ್ಬ ಅಭ್ಯರ್ಥಿಯನ್ನು ಆರಿಸಿದ ಘಟನೆ ನಡೆದಿತ್ತು. ಆನಂತರ ಇಲ್ಲಿಯವರೆಗೂ ಅಂತಹ ಕ್ರಮದ ಅಗತ್ಯ ಬಿದ್ದಿರಲಿಲ್ಲ.

ಬೈಡನ್ ಹಿಂದೆ ಸರಿಯಬೇಕು ಎಂಬ ಒತ್ತಾಯಗಳು ತೀವ್ರವಾಗಿರುವುದರ ನಡುವೆಯೇ, ಅವರು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿಲ್ಲ ಎಂದು ಅವರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಪ್ರಕಟವಾಗಿರುವ ಮತ್ತೊಂದು ಸಮೀಕ್ಷೆಯ ಪ್ರಕಾರ, ಬೈಡನ್‌ಗೆ ಭಾರತ ಮೂಲದವರ ಬೆಂಬಲದಲ್ಲಿ ಕುಸಿತವಾಗಿದೆ.

ಬೈಡನ್ ಪರ ಇದ್ದ ಭಾರತ ಮೂಲದ ಅಮೆರಿಕನ್ನರಲ್ಲಿ ಶೇ.19ರಷ್ಟು ಬೆಂಬಲ ಕುಸಿತವಾಗಿದೆ.

ಏಶ್ಯನ್ ಹಾಗೂ ಪೆಸಿಫಿಕ್ ಐಸ್ಲ್ಯಾಂಡರ್ ಅಮೆರಿಕನ್ ವೋಟ್ (ಎಪಿಐಎವೋಟ್) ಹಾಗೂ ಏಶ್ಯನ್-ಅಮೆರಿಕನ್ ಅಡ್ವಾನ್ಸಿಂಗ್ ಜಸ್ಟೀಸ್ (ಎಎಜೆಸಿ) ಸಮೀಕ್ಷೆಯ ಪ್ರಕಾರ, 2020ರಲ್ಲಿ ಭಾರತ ಮೂಲದ ಅಮೆರಿಕನ್ನರಲ್ಲಿ ಶೇ.65ರಷ್ಟು ಮಂದಿ ಬೈಡನ್ ಅವರನ್ನು ಬೆಂಬಲಿಸಿದ್ದರು.

ಈ ಬಾರಿ ಆ ಪ್ರಮಾಣ ಶೇ.46ಕ್ಕೆ ಕುಸಿದಿದೆ.

ಈ ನಡುವೆ, ಅಮೆರಿಕ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ದೇಶವನ್ನು ಮುನ್ನಡೆಸಲು ಅರ್ಹರಾಗಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂಬ ಒತ್ತಾಯಗಳು ತೀವ್ರವಾಗಿರುವ ಹೊತ್ತಲ್ಲೇ ಹೊರಬಿದ್ದಿರುವ ಬೈಡನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ವಾಷಿಂಗ್ಟನ್, ಡಿಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಡನ್, ‘‘ಕಮಲಾ ಹ್ಯಾರಿಸ್ ಸಾಮರ್ಥ್ಯದ ಬಗ್ಗೆ ನನಗೆ ಆರಂಭದಿಂದಲೂ ಯಾವುದೇ ಗೊಂದಲ ಇಲ್ಲ. ಅವರು ಅಧ್ಯಕ್ಷರಾಗಲು ಅರ್ಹರು’’ ಎಂದಿದ್ದಾರೆ.

ಇನ್ನು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಹೇಗೆಂದರೆ,

ಅಮೆರಿಕ ಸಂವಿಧಾನದ ಪ್ರಕಾರ, ಅಧ್ಯಕ್ಷರಾಗಲು ಅಮೆರಿಕದಲ್ಲೇ ಜನಿಸಿರಬೇಕು ಮತ್ತು ಅಮೆರಿಕದ ಪೌರತ್ವ ಹೊಂದಿರಬೇಕು.

ಕನಿಷ್ಠ 35 ವರ್ಷ ವಯೋಮಿತಿ ಇರಬೇಕು. ಕನಿಷ್ಠ 14 ವರ್ಷಗಳ ಕಾಲ ಅಮೆರಿಕ ನಿವಾಸಿಯಾಗಿರಬೇಕು.

22ನೇ ತಿದ್ದುಪಡಿಯನ್ವಯ, ಯಾವುದೇ ವ್ಯಕ್ತಿ ಎರಡಕ್ಕಿಂತ ಹೆಚ್ಚು ಬಾರಿ ಅಧ್ಯಕ್ಷರಾಗಲು ಅವಕಾಶವಿಲ್ಲ.

ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರು ನೇರವಾಗಿ ಭಾಗವಹಿಸುವುದಿಲ್ಲ. ಪರೋಕ್ಷ ಮತದಾನದ ಮೂಲಕ ಅಧ್ಯಕ್ಷರ ಆಯ್ಕೆ ನಡೆಯುತ್ತದೆ.

ಜನರು ಆಯ್ಕೆ ಮಾಡಿದ ಎಲೆಕ್ಟೊರೋಲ್ ಕಾಲೇಜುಗಳ ಮೂಲಕ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಎಲೆಕ್ಟೊರೋಲ್ ಕಾಲೇಜುಗಳಲ್ಲಿ 538 ಚುನಾಯಿತ ಪ್ರತಿನಿಧಿಗಳಿದ್ದು, ಅವರನ್ನು ಜನರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ.

ಪ್ರತಿ ರಾಜ್ಯಕ್ಕೆ ಇಬ್ಬರು ಸೆನೆಟರ್‌ಗಳಂತೆ 50 ರಾಜ್ಯಗಳಿಗೆ 100 ಜನ ಸೆನೆಟರ್‌ಗಳು ಸಹ ಇರುತ್ತಾರೆ.

ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ಸಿಗುತ್ತದೆ.

ಉಪಾಧ್ಯಕ್ಷರನ್ನು ಸೆನೆಟ್ ಸದಸ್ಯರು ಆಯ್ಕೆ ಮಾಡುತ್ತಾರೆ.

ಈಗ ಚುನಾವಣೆಗೆ ನಾಲ್ಕು ತಿಂಗಳಿಗಿಂತ ಕಡಿಮೆ ಸಮಯವಿರುವ ಹೊತ್ತಲ್ಲಿ ಬೈಡನ್ ಅವರ ವಿಚಾರವಾಗಿ ಎದ್ದಿರುವ ಚರ್ಚೆ ಎಲ್ಲಿಗೆ ಮುಟ್ಟುವುದೋ ಗೊತ್ತಿಲ್ಲ.

ಬದಲಿ ಅಭ್ಯರ್ಥಿಯನ್ನು ಆರಿಸುವುದು ಸುಲಭವಲ್ಲ ಎಂದೇ ಹೇಳಲಾಗುತ್ತದೆ, ಮಾತ್ರವಲ್ಲ, ಸಮೀಕ್ಷೆಗಳು ಬೈಡನ್ ಅವರನ್ನು ಮೀರಿಸುವವರೇನೂ ಇಲ್ಲ ಎಂದೇ ಹೇಳುತ್ತಿವೆ.

ಸೆಪ್ಟಂಬರ್ 10ರಂದು ಎರಡನೇ ಸಂವಾದ ನಡೆಯಲಿದೆ.

ಟ್ರಂಪ್ ಅವರನ್ನು ಸೋಲಿಸದೆ ಬಿಡಲಾರೆ ಎಂದು ಗುಡುಗಿರುವ ಬೈಡನ್, ಈ ಎರಡನೇ ಸಂವಾದದಲ್ಲಿ ತನ್ನನ್ನು ತಾನು ಸಮರ್ಥನೆಂದು ಸಾಬೀತುಪಡಿಸಿಕೊಳ್ಳುವ ಬಗೆಯಲ್ಲಿ ಕಾಣಿಸಿಕೊಳ್ಳುತ್ತಾರೆಯೇ? ಎಂದು ಕಾದು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಚ್. ವೇಣುಪ್ರಸಾದ್

contributor

Similar News