ಪಂಜಾಬ್-ಹರ್ಯಾಣ: ಮಿತ್ರಪಕ್ಷಗಳೇ ಪರಸ್ಪರ ಕಾದಾಡಲಿವೆಯೇ?

ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆ ‘ಇಂಡಿಯಾ ಮೈತ್ರಿಕೂಟ’ದ ಪ್ರಮುಖ ಪಕ್ಷಗಳೆರಡರ ನಡುವಿನ ಪ್ರಬಲ ಕದನವಾಗುವುದೇ? ಅವೆರಡೂ ಪಕ್ಷಗಳು ಬಹಿರಂಗವಾಗಿಯೇ ಗುದ್ದಾಡುತ್ತಿರುವುದನ್ನು ನೋಡಿದರೆ ಹಾಗೆನ್ನಿಸದೆ ಇರುವುದಿಲ್ಲ. ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗುವುದು ರಾಜ್ಯದಲ್ಲಿ ಅವೆರಡೂ ಪಕ್ಷಗಳಿಗೂ ಇಷ್ಟವಿಲ್ಲ. ಸೀಟು ಹಂಚಿಕೆ ವಿಚಾರ ಇಂಡಿಯಾ ಒಕ್ಕೂಟದಲ್ಲಿ ಚರ್ಚೆಯಾಗಬೇಕಿರುವ ಹೊತ್ತಲ್ಲಿ ಇದು ಎಲ್ಲಿಗೆ ಮುಟ್ಟಲಿದೆ ಎಂಬ ಪ್ರಶ್ನೆಯಿದೆ. ಇನ್ನು ಹರ್ಯಾಣದಲ್ಲಿ ಕೂಡ ಅವೆರಡೂ ಬೇರೆಯಾಗಿಯೇ ಚುನಾವಣೆಗೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಇದೆಲ್ಲದರ ನಡುವೆ ಬಿಜೆಪಿಯ ಆಟದ ಬಗ್ಗೆ ಕೂಡ ಕುತೂಹಲ ಇದ್ದೇ ಇದೆ.

Update: 2024-02-08 04:49 GMT

ಸರಣಿ- 15

ಒಟ್ಟು 2.77 ಕೋಟಿ ಜನಸಂಖ್ಯೆ ಇರುವ ಪಂಜಾಬ್ ರಾಜ್ಯದಲ್ಲಿ ಸಿಖ್ಖರು ಶೇ.57.7ರಷ್ಟಿದ್ದರೆ, ಹಿಂದೂಗಳು ಶೇ.38.5, ಮುಸ್ಲಿಮರು ಶೇ.1.9 ಮತ್ತು ಕ್ರೈಸ್ತರು ಶೇ.1.3

ಜಾತಿವಾರು ಜನಸಂಖ್ಯೆಯನ್ನು ಗಮನಿಸಿದರೆ, ಪರಿಶಿಷ್ಟ ಜಾತಿ ಶೇ.31.9, ಒಬಿಸಿ ಶೇ.31.3, ಮೇಲ್ಜಾತಿಯವರು ಶೇ.30

ಪಂಜಾಬ್‌ನ ಒಟ್ಟು ಲೋಕಸಭಾ ಕ್ಷೇತ್ರಗಳು - 13

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 8, ಶಿರೋಮಣಿ ಅಕಾಲಿ ದಳ 2, ಬಿಜೆಪಿ 2 ಹಾಗೂ ಎಎಪಿ 1 ಸ್ಥಾನಗಳಲ್ಲಿ ಗೆದ್ದಿದ್ದವು. ಹಿಂದೆ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 3, ಶಿರೋಮಣಿ ಅಕಾಲಿ ದಳ 4, ಬಿಜೆಪಿ 2 ಹಾಗೂ ಎಎಪಿ 4 ಸ್ಥಾನಗಳಲ್ಲಿ ಗೆದ್ದಿದ್ದವು.

ಇಂಡಿಯಾ ಮೈತ್ರಿಕೂಟ ಬಿಜೆಪಿಯನ್ನು ಎದುರಿಸಲು ಸಜ್ಜಾಗಿರುವಾಗ ಮತ್ತು ಕಾಂಗ್ರೆಸ್, ಎಎಪಿ ಎರಡೂ ಅದರ ಭಾಗವಾಗಿರು ವಾಗ ಪಂಜಾಬ್‌ನಲ್ಲಿ ಕೂಡ ಸೀಟು ಹಂಚಿಕೆ ವಿಚಾರ ನಿರ್ಧಾರವಾಗಬೇಕಿರುವುದು ಸಹಜ.

ಆದರೆ ಪಂಜಾಬ್ ಕಾಂಗ್ರೆಸ್ ಮತ್ತು ಎಎಪಿ ನಾಯಕರ ಹೇಳಿಕೆಗಳು ಮೈತ್ರಿಕೂಟದೊಳಗೆ ಇರುವ ಹೊಂದಾಣಿಕೆಯ ಕೊರತೆಯನ್ನು ತೋರಿಸುವ ಹಾಗಿವೆ.

ರಾಜ್ಯದ ಎಲ್ಲಾ 13 ಲೋಕಸಭಾ ಸ್ಥಾನಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಇತ್ತೀಚೆಗೆ ಹೇಳಿದ್ದರು.

ಇನ್ನೊಂದೆಡೆ, 2022ರಲ್ಲಿ ಪಂಜಾಬ್ ಅನ್ನು ಕಾಂಗ್ರೆಸ್‌ನಿಂದ ಕಿತ್ತುಕೊಂಡಿದ್ದ ಎಎಪಿ ಕೂಡ ಇಂಥದೇ ಹೇಳಿಕೆ ನೀಡುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ರಾಜ್ಯದ ಎಲ್ಲಾ 13 ಲೋಕಸಭಾ ಸ್ಥಾನಗಳನ್ನು ಎಎಪಿ ಗೆಲ್ಲಲಿದೆ ಎಂದು ಹೇಳಿದ್ದರು.

ಎಲ್ಲಾ 13 ಸ್ಥಾನಗಳಲ್ಲಿ ಆಪ್ ಗೆಲ್ಲಲು ಬೆಂಬಲಿಸುವಂತೆ ಕೇಜ್ರಿವಾಲ್ ಅವರು ವಿಕಾಸ್ ಕ್ರಾಂತಿ ರ್ಯಾಲಿ ವೇಳೆ ಪಂಜಾಬ್ ಜನತೆಯ ಬಳಿ ಮನವಿ ಮಾಡಿಕೊಂಡಿದ್ದರು.ರ್ಯಾಲಿಯಲ್ಲಿ ಅವರು ಕಾಂಗ್ರೆಸ್ ವಿರುದ್ಧವೂ ಮಾತನಾಡಿದ್ದರು.

ಅದೇ ರ್ಯಾಲಿಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದ ವಿರುದ್ಧ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಕುರಿತು ಆರೋಪಿಸಿದ್ದರು.

ತಮ್ಮ ಪಕ್ಷ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಎಪಿ ನಾಯಕಿ ಮತ್ತು ರಾಜ್ಯ ಸಚಿವೆ ಅನ್ಮೋಲ್ ಗಗನ್ ಮಾನ್ ಕೂಡ ಹೇಳಿದ್ದರು.

ನಾವು ಪಂಜಾಬ್‌ನಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯಿಂದ ದೇಶವನ್ನು ಉಳಿಸಲು ಎಲ್ಲಾ ಪಕ್ಷಗಳು ಒಗ್ಗೂಡಿರುವುದರಿಂದ ರಾಷ್ಟ್ರಮಟ್ಟದಲ್ಲಿ ವಿಷಯಗಳು ತುಂಬಾ ಭಿನ್ನವಾಗಿರಬಹುದು. ಆದರೆ, ರಾಜ್ಯ ಮಟ್ಟದಲ್ಲಿ ಎಎಪಿ ಕಾಂಗ್ರೆಸ್ ಜೊತೆ ಹೋಗುವುದಿಲ್ಲ. ಪಂಜಾಬ್‌ನಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಸೀಟು ಹಂಚಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಅನ್ಮೋಲ್ ಹೇಳಿದ್ದರು.

ಹಾಗೆ ನೋಡಿದರೆ ಮೈತ್ರಿಗೆ ಸಮ್ಮತಿಯಿಲ್ಲದಿರುವ ಈ ನಿಲುವು ಎಎಪಿಗೆ ಮಾತ್ರ ಸೀಮಿತವಲ್ಲ. ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗಾಗಿ ಎಎಪಿ ಜೊತೆ ಯಾವುದೇ ಮೈತ್ರಿಗೆ ರಾಜ್ಯ ಕಾಂಗ್ರೆಸ್ ಕೂಡ ತಯಾರಿಲ್ಲ.

ಇದೇ ವೇಳೆ, ಎಲ್ಲಾ 13 ಸ್ಥಾನಗಳಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳಿ ಎಂಬ ಸಂದೇಶವೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್‌ನಿಂದಲೂ ಇದೆ ಎಂಬುದು ಅಮರಿಂದರ್ ಸಿಂಗ್ ಹೇಳಿಕೆಯಿಂದ ಗೊತ್ತಾಗಿದೆ. ಯಾವುದೇ ಮೈತ್ರಿ ವಿಚಾರವನ್ನಾಗಲೀ, ಜೊತೆಯಾಗಿ ಚುನಾವಣೆ ಎದುರಿಸುವ ವಿಚಾರವನ್ನಾಗಲೀ ರಾಜ್ಯ ನಾಯಕರ ಎದುರು ಹೈಕಮಾಂಡ್ ಚರ್ಚಿಸಿಲ್ಲ ಎನ್ನಲಾಗಿದೆ.

ಇಂಡಿಯಾ ಮೈತ್ರಿಕೂಟದ ಮುಂದೆ ಇರುವ ದೊಡ್ಡ ಸವಾಲುಗಳಲ್ಲಿ ಸೀಟು ಹಂಚಿಕೆಯೂ ಒಂದು. ಸೀಟು ಹಂಚಿಕೆ ಕುರಿತು ಚರ್ಚಿಸಲು ಸಭೆ ನಡೆಯಬೇಕಿದೆ.

ಮೈತ್ರಿಯಲ್ಲಿನ ಪಕ್ಷಗಳ ನಡುವೆಯೇ ಪ್ರಬಲ ರಾಜಕೀಯ ಪೈಪೋಟಿ ಏರ್ಪಡುವ ರಾಜ್ಯಗಳಲ್ಲಿ ಒಕ್ಕೂಟ ತೆಗೆದುಕೊಳ್ಳಬೇಕಾದ ಕ್ರಮಗಳು ಚರ್ಚೆಯಾಗಬೇಕಿದೆ.

ಅಂಥ ರಾಜ್ಯಗಳಲ್ಲಿ ಮೈತ್ರಿ ಯಾವ ಸ್ವರೂಪವನ್ನು ಪಡೆಯಲಿದೆ ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಇದೆ.

ಯಾಕೆಂದರೆ ಎಲ್ಲವನ್ನೂ ಸುಲಭವಾಗಿ ಇತರ ಪಕ್ಷಗಳಿಗೆ ಬಿಟ್ಟುಕೊಡಲು ಕಾಂಗ್ರೆಸ್ ಕೂಡ ತಯಾರಿಲ್ಲ. ಇನ್ನೊಂದೆಡೆ, ಪ್ರಬಲ ಮೈತ್ರಿ ಪಕ್ಷಗಳು ಹೆಚ್ಚಿನ ಸೀಟುಗಳಿಗಾಗಿ ಹಠ ಹಿಡಿಯದೇ ಇರಲಾರವು.

ಪಂಜಾಬ್‌ನಲ್ಲಿ ಕೂಡ ಇಂಥದೇ ಸವಾಲು ಮೈತ್ರಿಕೂಟಕ್ಕೆ ಎದುರಾಗಲಿದೆ. ರಾಜ್ಯದಲ್ಲಿ ಆಡಳಿತವಿರುವ, ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಎದುರು ಗೆದ್ದು ಬೀಗಿರುವ ಎಎಪಿ ಸುಲಭಕ್ಕೆ ಮಣಿಯಲಾರದು.

ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಎರಡೂ ರಾಜಕೀಯ ಪ್ರತಿಸ್ಪರ್ಧಿಗಳಾಗಿವೆ ಎಂಬುದು ಗಮನಿಸಬೇಕಿರುವ ಅಂಶವಾಗಿದೆ. ಈಗಲೂ ಅವುಗಳ ನಡುವೆ ಸಾಮರಸ್ಯ ಇಲ್ಲವೆಂಬುದು ತೀರಾ ರಹಸ್ಯದ ಸಂಗತಿಯೇನಲ್ಲ. ಹೀಗಾಗಿ, ಮೈತ್ರಿಯಲ್ಲಿರುವ ಪಕ್ಷಗಳೇ ಪಂಜಾಬ್‌ನಲ್ಲಿ ಪರಸ್ಪರ ಎದುರಾಳಿಗಳಾಗಿ ಈ ಬಾರಿಯೂ ನಿಲ್ಲಲಿವೆಯೇ ಎಂಬ ಪ್ರಶ್ನೆಯಿದೆ.

ಇನ್ನು ಹರ್ಯಾಣ ರಾಜ್ಯದ ವಿಚಾರಕ್ಕೆ ಬರುವುದಾದರೆ, ಅಲ್ಲಿ ಕೂಡ ಸ್ಥಿತಿ ಬೇರೆ ರೀತಿಯಲ್ಲಿದ್ದಂತೆ ಕಾಣಿಸುವುದಿಲ್ಲ.

ಒಟ್ಟು 2.54 ಕೋಟಿ ಜನಸಂಖ್ಯೆ ಇರುವ ಹರ್ಯಾಣದಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.87.46ರಷ್ಟಿದ್ದರೆ ಮುಸ್ಲಿಮರು ಶೇ.7.03, ಸಿಖ್ಖರು ಶೇ.4.91

ಹರ್ಯಾಣದ ಒಟ್ಟು ಲೋಕಸಭಾ ಕ್ಷೇತ್ರಗಳು-10

2019ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ 10 ಸ್ಥಾನಗಳನ್ನು ಬಿಜೆಪಿಯೇ ಗೆದ್ದಿತ್ತು

2014ರ ಚುನಾವಣೆಯಲ್ಲಿ ಬಿಜೆಪಿ 7, ಐಎನ್‌ಎಲ್ ಡಿ 2 ಮತ್ತು ಯುಪಿಎ ಒಕ್ಕೂಟ ಒಂದು ಸ್ಥಾನ ಗೆದ್ದಿದ್ದವು

ಹರ್ಯಾಣದಲ್ಲಿ ಲೋಕಸಭೆ ಚುನಾವಣೆ ಮಾತ್ರವಲ್ಲದೆ ವಿಧಾನಸಭೆ ಚುನಾವಣೆಯೂ 2024ರಲ್ಲಿ ನಡೆಯಲಿದೆ. ಜೊತೆಗೆ ನಡೆಯಲಿವೆಯೇ ಎನ್ನುವುದು ಇನ್ನೂ ಖಚಿತವಿಲ್ಲ.ಆದರೆ ಹರ್ಯಾಣದಲ್ಲಿ ಚುನಾವಣೆಗಾಗಿ ರಾಜಕೀಯ ಪಕ್ಷಗಳ ತಯಾರಿಯಂತೂ ಶುರುವಾಗಿದೆ.

ರಥಯಾತ್ರೆ, ಬದಲಾವಣೆ ಯಾತ್ರೆ, ಜನಾಕ್ರೋಶ್ ಮೊದಲಾದವುಗಳ ಮೂಲಕ ಮತದಾರರನ್ನು ಮುಟ್ಟುವ ಯತ್ನಗಳಾಗುತ್ತಿವೆ.

ಎಎಪಿ ಡಿಸೆಂಬರ್ 15ರಿಂದಲೇ ಶುರು ಮಾಡಿ ತಿಂಗಳಾಂತ್ಯದವರೆಗೂ ರಾಜ್ಯದ ಮೂಲೆ ಮೂಲೆಗಳಲ್ಲಿ ಬದಲಾವಣೆ ಯಾತ್ರೆ ನಡೆಸಿತು. ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಿದ್ದಾಗಿ ಪಕ್ಷ ಹೇಳಿಕೊಂಡಿದೆ.

ಜನವರಿ ಅಂತ್ಯದಲ್ಲಿ ರಾಜ್ಯದಲ್ಲಿ ಮೆಗಾ ರ್ಯಾಲಿ ನಡೆಸಲು ಎಎಪಿ ತಯಾರಿ ನಡೆಸಿದ್ದು, ಪಕ್ಷದ ನಾಯಕರಾದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಮೊದಲಾದವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಗಳಿವೆ.

ಇನ್ನು ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಕೂಡ ರಥಯಾತ್ರೆ ಆರಂಭಿಸಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಸಾಗಲಿದೆ ಎಂದು ಪಕ್ಷ ಹೇಳಿದೆ.

ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾ ಸೇರಿದಂತೆ ಹಿರಿಯ ನಾಯಕರು ಸರಕಾರದ ವೈಫಲ್ಯದ ಬಗ್ಗೆ ಜನರಿಗೆ ತಿಳಿಸಲಿದ್ದಾರೆ ಎಂದು ಪಕ್ಷ ಹೇಳಿದೆ.

ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಜೆಪಿಯನ್ನು ಜನರು ಅಧಿಕಾರದಿಂದ ಕೆಳಗಿಳಿಸಲಿದ್ಧಾರೆ ಎಂದು ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ ಹೇಳಿದ್ದಾರೆ.

ಕಾಂಗ್ರೆಸ್ ಜನಾಕ್ರೋಶ ಎಂಬ ಹೆಸರಿನಲ್ಲಿ ಜನರನ್ನು ತಲುಪುವ ಕಾರ್ಯಕ್ರಮ ಆರಂಭಿಸಿದೆ.

ರಾಜ್ಯದಲ್ಲಿನ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಸರಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಆರೋಪಿಸಿದ್ದಾರೆ.

ಇದೇ ವೇಳೆ ಜೆಜೆಪಿ ಕೂಡ ಲೋಕಸಭಾ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ರ್ಯಾಲಿಗಳನ್ನು ಶುರು ಮಾಡಿದೆ.

ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗಿದೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಜೊತೆಗೇ ವಿಧಾನಸಭೆ ಚುನಾವಣೆ ಎದುರಿಸವುದಕ್ಕೂ ಸಿದ್ಧವಿರುವುದಾಗಿಯೂ ಖಟ್ಟರ್ ಹೇಳಿದ್ದಾರೆ.

ಅಖಾಡ ಸಿದ್ಧವಾದ ಮೇಲಿನ ಚಿತ್ರ ಹೇಗಿರಲಿದೆ ಎಂಬುದನ್ನು ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News