ತಮಿಳುನಾಡು: ಎಐಎಡಿಎಂಕೆ-ಬಿಜೆಪಿ ಬೇರೆ ಬೇರೆಯಾಗಿ ಸ್ಪರ್ಧೆ; ಡಿಎಂಕೆಗೆ ಮತ್ತಷ್ಟು ಲಾಭ ತಂದುಕೊಡಲಿದೆಯೇ?

ತಮಿಳುನಾಡು ರಾಜಕೀಯದಲ್ಲಿ ಈ ಸಲ ಹಲವು ಬಗೆಯ ಸಮೀಕರಣಗಳನ್ನು ಕಾಣುತ್ತಿದ್ದೇವೆ. ಕಳೆದ ಬಾರಿ ಜೊತೆಗಿದ್ದ ಎಐಎಡಿಎಂಕೆ ಮತ್ತು ಬಿಜೆಪಿ ಬೇರೆಬೇರೆಯಾಗಿವೆ. ಆಡಳಿತಾರೂಢ ಡಿಎಂಕೆ ಬಲ ಇನ್ನೂ ಹೆಚ್ಚಿರುವ ಹಾಗೆ ಕಾಣಿಸುತ್ತಿದೆ. ಜೊತೆಗೇ ಚಿತ್ರನಟ ವಿಜಯ್ ನಡೆಯೇನು ಎಂಬ ಕುತೂಹಲವೂ ಇದೆ. ಕೆಲವು ಸಣ್ಣ ಪಕ್ಷಗಳು ಕೂಡ ತಮ್ಮ ನಿಲುವನ್ನು ಇನ್ನೂ ಪ್ರಕಟಿಸಿಲ್ಲ. ಚುನಾವಣೆ ಹೊತ್ತಿಗೆ ತಮಿಳುನಾಡು ರಾಜಕಾರಣದಲ್ಲಿ ಏನೆಲ್ಲಾ ಬೆಳವಣಿಗೆಗಳು ಕಾಣಿಸಬಹುದು ಮತ್ತು ಹೇಗೆ ಲೆಕ್ಕಾಚಾರಗಳು ಬದಲಾಗಬಹುದು ಎಂಬುದು ಸದ್ಯಕ್ಕೆ ನಿಗೂಢ.

Update: 2024-01-31 06:32 GMT

ಸರಣಿ- 13

ಒಟ್ಟು 7.2 ಕೋಟಿ ಜನಸಂಖ್ಯೆ ಇರುವ ತಮಿಳುನಾಡಿನಲ್ಲಿ ಹಿಂದೂಗಳು ಶೇ.87.58 ಇದ್ದರೆ, ಕ್ರೈಸ್ತರು ಶೇ.6.12 ಮತ್ತು ಮುಸ್ಲಿಮರು ಶೇ.5.85 ಇದ್ದಾರೆ.

ತಮಿಳುನಾಡಿನ ಒಟ್ಟು ಲೋಕಸಭಾ ಕ್ಷೇತ್ರಗಳು-39. 2014ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ 37 ಸ್ಥಾನಗಳನ್ನು ಪಡೆದಿದ್ದರೆ, ಎನ್‌ಡಿಎ 2 ಸ್ಥಾನಗಳನ್ನು ಪಡೆದಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 38 ಸ್ಥಾನಗಳನ್ನು ಪಡೆದಿದ್ದು, ಎನ್‌ಡಿಎ 1 ಸ್ಥಾನ ಮಾತ್ರ ಪಡೆಯಲು ಸಾಧ್ಯವಾಗಿತ್ತು.

ಎರಡು ಬಹು ಮುಖ್ಯ ಬೆಳವಣಿಗೆಗಳೆಂದರೆ, ತಮಿಳುನಾಡಿನ ಆಡಳಿತಾರೂಢ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲೂ ಪ್ರಚಂಡ ಗೆಲುವು ಸಾಧಿಸಿದ್ದ ಡಿಎಂಕೆ ಈ ಸಲ ‘ಇಂಡಿಯಾ’ ಮೈತ್ರಿಕೂಟದ ಭಾಗವೂ ಆಗಿದೆ.

ಎರಡನೆಯದಾಗಿ, ಎನ್‌ಡಿಎ ಮೈತ್ರಿಕೂಟದಿಂದ ಎಐಎಡಿಎಂಕೆ ಹೊರಬಿದ್ದಿದ್ದು, ಬಿಜೆಪಿಯೊಂದಿಗಿನ ಅದರ ನಾಲ್ಕು ವರ್ಷಗಳ ಸಂಬಂಧ ಮುರಿದಿದೆ.

ಈ ಎರಡೂ ಬೆಳವಣಿಗೆಗಳು ತಮಿಳುನಾಡು ರಾಜಕೀಯ ಮತ್ತು 2024ರ ಲೋಕಸಭಾ ಚುನಾವಣೆಯ ಮೇಲೆ ಭಾರೀ ಪರಿಣಾಮ ಬೀರಲಿವೆ. ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿರುವುದರಿಂದ ಡಿಎಂಕೆಗೆ ಈಗ ಅನುಕೂಲವಾಗಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈಗ ‘ಇಂಡಿಯಾ’ ಬಣದ ಮುಂಚೂಣಿಯಲ್ಲಿದ್ದಾರೆ, ರಾಷ್ಟ್ರದಲ್ಲಿ ಬಿಜೆಪಿಯೇತರ ನಾಯಕರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಜ್ಯದಲ್ಲಿಯೂ ಡಿಎಂಕೆ ನೇತೃತ್ವದ ಸೆಕ್ಯುಲರ್ ಪ್ರೊಗ್ರೆಸಿವ್ ಅಲಯನ್ಸ್ ಕಳೆದ ಕೆಲವು ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದೆ. ಲೋಕಸಭೆಯಲ್ಲಿಯೂ ಎಲ್ಲಾ ಸ್ಥಾನಗಳನ್ನು ಗೆಲ್ಲುವುದು ಡಿಎಂಕೆ ಗುರಿಯಾಗಿದೆ.

ಎಐಎಡಿಎಂಕೆ-ಬಿಜೆಪಿ ಮೈತ್ರಿ ಮುರಿದು ಬೀಳುವುದರೊಂದಿಗೆ ಲೋಕಸಭೆ ಚುನಾವಣೆ ಡಿಎಂಕೆಗೆ ಹೆಚ್ಚು ಸುಲಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಿಂದಿನ ಚುನಾವಣೆಗಳಲ್ಲಿ ಭಾರೀ ಯಶಸ್ಸನ್ನು ಗಳಿಸಿರುವ ಹಿನ್ನೆಲೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿ ನಿರಾತಂಕವಾಗಿಯೇ ಮುಂದುವರಿಯಲಿದೆ.

ವಾಸ್ತವವಾಗಿ, ಡಿಎಂಕೆ ಆರು ತಿಂಗಳ ಹಿಂದೆಯೇ 2024ರ ಚುನಾವಣೆಗೆ ಪೂರ್ವಸಿದ್ಧತಾ ಕಾರ್ಯವನ್ನು ಬೂತ್ ಉಸ್ತುವಾರಿಗಳಿಗೆ ತರಬೇತಿಯೊಂದಿಗೆ ಶುರು ಮಾಡಿದೆ. ಇದರ ನಡುವೆಯೇ, ಎಐಎಡಿಎಂಕೆ ಮತ್ತು ಬಿಜೆಪಿ ಎರಡನ್ನೂ ಡಿಎಂಕೆ ಹೇಗೆ ಎದುರಿಸಲಿದೆ ಎಂಬ ಪ್ರಶ್ನೆಯೂ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ, ಕೇಂದ್ರದ ಬೆಂಬಲದೊಂದಿಗೆ ಆಕ್ರಮಣಕಾರಿ ಹೋರಾಟ ನಡೆಸಲಿದೆ ಎಂಬುದು ಸ್ಟಾಲಿನ್ ಅವರಿಗೂ ಗೊತ್ತಿಲ್ಲದೆ ಇಲ್ಲ. ಆದರೆ ದೊಡ್ಡ ಪೈಪೋಟಿಯೊಡ್ಡುವ ಮಟ್ಟದಲ್ಲಿ ರಾಜ್ಯದಲ್ಲಿ ಬಿಜೆಪಿಯ ಸಂಘಟನಾ ಶಕ್ತಿಯಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಎಐಎಡಿಎಂಕೆ ಮಾಜಿ ಜಂಟಿ ಸಂಯೋಜಕ ಮತ್ತು ಪಕ್ಷದ ಸದಸ್ಯ ಒ. ಪನ್ನೀರಸೆಲ್ವಂ ಮತ್ತು ಎಎಂಎಂಕೆ ನಾಯಕ ಟಿ.ಟಿ.ವಿ. ದಿನಕರನ್ ಬಿಜೆಪಿ ಜೊತೆ ಪರೋಕ್ಷವಾಗಿ ಕೈ ಜೋಡಿಸಿದ್ದಾರೆ. ಇದು ಕೆಲವೆಡೆ ಡಿಎಂಕೆಗೆ ಪೈಪೋಟಿಯೊಡ್ಡುವ ಸಾಧ್ಯತೆ ಇದೆ ಎಂಬುದು ಒಂದು ಲೆಕ್ಕಾಚಾರ.

ಆಡಳಿತ ವಿರೋಧಿ ಮತ ಎಐಎಡಿಎಂಕೆ ಮತ್ತು ಬಿಜೆಪಿಗೆ ಬರಬಹುದು. ಎಐಎಡಿಎಂಕೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಪ್ರಯತ್ನಿಸುವುದರಿಂದ ಡಿಎಂಕೆಗೆ ಅಲ್ಲಿ ಮತ ನಷ್ಟವಾಗಬಹುದು ಎನ್ನಲಾಗುತ್ತಿದೆ.

ಹಾಗಿದ್ದೂ ಡಿಎಂಕೆಗೆ ದೊಡ್ಡ ಪ್ರಮಾಣದ ತೊಂದರೆ ಎದುರಾಗುವುದಿಲ್ಲ. ಎಐಎಡಿಎಂಕೆ ಮತ್ತು ಬಿಜೆಪಿ ಬೇರೆಯಾಗಿರುವುದರಿಂದ ಡಿಎಂಕೆ ನೇತೃತ್ವದ ಮೈತ್ರಿಕೂಟ ಈ ಬಾರಿಯೂ ದೊಡ್ಡ ಗೆಲುವನ್ನು ಸಾಧಿಸುವುದು ಅನಿರೀಕ್ಷಿತವಲ್ಲ ಎಂಬುದು ಪರಿಣಿತರ ಅಭಿಪ್ರಾಯ.

ಆದರೆ ಬಿಜೆಪಿಯ ಈ ಬಾರಿ ಪ್ರತ್ಯೇಕ ಸ್ಪರ್ಧೆ, ಎರಡು ಪಕ್ಷಗಳ ನಡುವೆ ಮಾತ್ರ ನಡೆಯುತ್ತಿದ್ದ ಈವರೆಗಿನ ಸನ್ನಿವೇಶವನ್ನು ಬದಲಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಕೂಡ ಅಲ್ಲಗಳೆಯುವ ಹಾಗಿಲ್ಲ. ಇದು ಸಹಜವಾಗಿಯೇ ಹೆಚ್ಚು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸದ್ಯ, ಡಿಎಂಕೆ ಮಿತ್ರಪಕ್ಷಗಳಾದ ಕಾಂಗ್ರೆಸ್, ಎಡ ಪಕ್ಷಗಳು, ಎಂಡಿಎಂಕೆ, ವಿಸಿಕೆ ಮತ್ತು ಎಂಎಂಕೆ ಪಕ್ಷಗಳು ಡಿಎಂಕೆಗೆ ತಮ್ಮ ಬೆಂಬಲ ಪುನರುಚ್ಚರಿಸಿವೆ ಮತ್ತು ಒಟ್ಟಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿವೆ.

2019ರ ಲೋಕಸಭಾ ಚುನಾವಣೆ ಅಥವಾ 2021ರ ವಿಧಾನಸಭಾ ಚುನಾವಣೆ ಅಥವಾ ಎರಡನ್ನೂ ಎಐಎಡಿಎಂಕೆ ಜೊತೆಯಲ್ಲಿ ಎದುರಿಸಿದ್ದ ಇತರ ಕೆಲವು ಪಕ್ಷಗಳು ಈ ಚುನಾವಣೆಯಲ್ಲಿ ತಮ್ಮ ನಿರ್ಧಾರ ಏನೆಂಬುದನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಎಐಎಡಿಎಂಕೆ ಜೊತೆಯಲ್ಲಿ ಚುನಾವಣೆಗೆ ಹೋದರೆ ಗೆಲುವಿನ ಅವಕಾಶ ಹೆಚ್ಚು ಎಂಬುದು ಆ ಸಣ್ಣ ಪಕ್ಷಗಳಿಗೆ ತಿಳಿದಿದೆಯಾದರೂ, ಈಗಲೇ ತೀರ್ಮಾನಿಸಲು ಅವು ಹಿಂದೆಮುಂದೆ ನೋಡುತ್ತಿವೆ ಎನ್ನಲಾಗಿದೆ.

ಮಾಜಿ ಸಂಯೋಜಕ ಒ. ಪನ್ನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಬಣ ಮತ್ತು ಅದರ ಮಿತ್ರ ಪಕ್ಷವಾಗಿರುವ ಟಿ.ಟಿ.ವಿ. ದಿನಕರನ್ ಅವರ ಎಎಂಎಂಕೆ ಬಿಜೆಪಿ ಜೊತೆ ಹೋಗುವ ಒಂದು ಸಾಧ್ಯತೆ ನಿಚ್ಚಳವಾಗಿದೆ.

ಅವೆರಡೂ ಈವರೆಗೆ ಬಿಜೆಪಿ ಜೊತೆ ಬಹಿರಂಗವಾಗಿ ಸಂಬಂಧ ಹೊಂದಿಲ್ಲ. ಈ ಮೂರೂ ಪಕ್ಷಗಳು ಒಂದಾಗುವ ಸಾಧ್ಯತೆಗೆ, ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜಕೀಯದಿಂದ ದೂರವಿದ್ದ ಎಐಎಡಿಎಂಕೆಯ ಮಾಜಿ ಹಂಗಾಮಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಬೆಂಬಲ ನೀಡಲೂಬಹುದು ಎನ್ನಲಾಗುತ್ತಿದೆ.

ಪನ್ನೀರ್‌ಸೆಲ್ವಂ, ದಿನಕರನ್ ಮತ್ತು ಶಶಿಕಲಾ ಅವರು ಕೇಂದ್ರದ ಬಿಜೆಪಿ ಸರಕಾರ ಅಥವಾ ಅದರ ನೀತಿಗಳ ಬಗ್ಗೆ ಯಾವುದೇ ಬಹಿರಂಗ ಟೀಕೆ ಮಾಡುವುದಿಲ್ಲ ಎಂಬುದು ಗಮನಿಸಬೇಕಾದ ಒಂದು ಅಂಶವಾಗಿದೆ.

ಹಾಗೆ ನೋಡಿದರೆ, ಈಗಲೂ ಎಐಎಡಿಎಂಕೆ ಮತ್ತು ಅದರ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೂಡ ಬಿಜೆಪಿ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿಲ್ಲ.ಮೋದಿ ಮತ್ತು ಅಮಿತ್ ಶಾ ಜೊತೆ ಪನ್ನೀರ್‌ಸೆಲ್ವಂ ಒಳ್ಳೆಯ ಸಂಬಂಧವನ್ನೇ ಮುಂದುವರಿಸುವ ಇಚ್ಛೆ ಹೊಂದಿದ್ದಾರೆ.

ಎಐಎಡಿಎಂಕೆ ಮೇಲಿನ ಹಿಡಿತ ಕಳಕೊಂಡ ಸಿಟ್ಟಿನಲ್ಲಿರುವ ಪನ್ನೀರ್‌ಸೆಲ್ವಂ ಈಗ ಅನಿವಾರ್ಯವಾಗಿ ತಾನು ಈ ಹಿಂದೆ ಕಟುವಾಗಿ ವಿರೋಧಿಸಿದ್ದ ಶಶಿಕಲಾ ಹಾಗೂ ದಿನಕರನ್ ಜೊತೆ ಕೈ ಜೋಡಿಸಿದ್ದಾರೆ. ಇವರಿಬ್ಬರೂ ಈಗ ಬಿಜೆಪಿಯನ್ನು ಬೆಂಬಲಿಸಲು ಹೊರಟಿದ್ದಾರೆ. ಈ ಇಬ್ಬರೂ ನಾಯಕರು ಪ್ರಮುಖ ಹಿಂದುಳಿದ ಸಮುದಾಯ ಮುಕ್ಕುಲತೊರ್‌ಗೆ ಸೇರಿದವರು. ಈ ಮೈತ್ರಿ ಎಐಎಡಿಎಂಕೆಗೇ ಹೆಚ್ಚು ನಷ್ಟ ತರುವ ಸಾಧ್ಯತೆ ಇದೆ.

ಇದೆಲ್ಲವೂ ತಮಿಳುನಾಡಿನಲ್ಲಿ ತೃತೀಯ ರಂಗದ ಹೋರಾಟಕ್ಕೆ ಕಾರಣವಾಗಬಹುದೇ ಎಂಬ ಕುತೂಹಲವೂ ಇದೆ. ಆದರೆ ಅಂಥ ಪೈಪೋಟಿಯನ್ನು ಅಖಾಡದಲ್ಲಿ ಮುಂಚೂಣಿಯಲ್ಲಿರುವ ಪಕ್ಷಗಳು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಬ್ಬಬ್ಬಾ ಎಂದರೆ ಅದು ಕೆಲವು ಮತಗಳನ್ನು ಒಡೆಯಬಹುದು ಎಂಬ ಭಾವನೆ ಮಾತ್ರ ಇರುತ್ತದೆ.

ಅದೇನೇ ಇದ್ದರೂ, ಅಂತಹ ಸಾಧ್ಯತೆಯನ್ನು ಪ್ರಮುಖ ವಿರೋಧ ಪಕ್ಷ ಮತ್ತು ಬಿಜೆಪಿ ಬೆಂಬಲಿಗರು ನಿರಾಕರಿಸುತ್ತಿದ್ದಾರೆ.

ಇನ್ನೂ ಒಂದು ವಿಚಾರ ಈ ಬಾರಿ ತಮಿಳುನಾಡು ರಾಜಕಾರಣದಲ್ಲಿ ಮುಖ್ಯವಾಗಲಿದೆ.

ಚಲನಚಿತ್ರ ನಿರ್ದೇಶಕ ಮತ್ತು ರಾಜಕಾರಣಿ ಸೀಮಾನ್ ನೇತೃತ್ವದ ತಮಿಳು ರಾಷ್ಟ್ರೀಯವಾದಿ ಪಕ್ಷ ನಾಮ್ ತಮಿಳರ್ ಕಚ್ಚಿ ಈ ಬಾರಿ ವಹಿಸಬಹುದಾದ ಪಾತ್ರ ಕುತೂಹಲ ಮೂಡಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆಲ್ಲದಿದ್ದರೂ ಸುಮಾರು ಶೇ.6.6 ಮತಗಳನ್ನು ಗಳಿಸಿತ್ತು. ಎಐಎಡಿಎಂಕೆ ತನ್ನ ಸಂಪರ್ಕದಲ್ಲಿದೆ ಎಂದು ಈಚೆಗಷ್ಟೇ ಒಪ್ಪಿಕೊಂಡಿರುವ ಸೀಮಾನ್, ಏಕಾಂಗಿಯಾಗಿ ಚುನಾವಣೆ ಎದುರಿಸುವ ಮಾತನ್ನೇ ಹೇಳುತ್ತಿದ್ದಾರೆ.

ಇನ್ನು, ಸೂಪರ್ ಸ್ಟಾರ್ ಚಿತ್ರನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳಿವೆ. ಅದು ನಿಜವೇ ಆದರೆ, ಈಗಿರುವ ಎಲ್ಲ ಲೆಕ್ಕಾಚಾರಗಳೂ ಬದಲಾಗಬಹುದು. ವಿಜಯ್ ಬಹಿರಂಗವಾಗಿ ಏನನ್ನೂ ಹೇಳಿಲ್ಲದಿರುವುದರಿಂದ, ಅವರ ನಡೆಯೇನೆಂಬುದರತ್ತ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ.

ಸದ್ಯಕ್ಕಂತೂ, ತಮಿಳುನಾಡಿನ ರಾಜಕೀಯ ತನ್ನ ನಿಗೂಢತೆ ಉಳಿಸಿಕೊಂಡೇ ಸಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News