ಒಲಿಂಪಿಕ್ಸ್: ಮೊದಲ ದಿನ ಭಾರತಕ್ಕೆ ಹಲವು ಸ್ಪರ್ಧೆ

Update: 2024-07-27 03:08 GMT

ಬಾಲರಾಜ್ ಪನ್ವರ್ PC: x.com/balraj_rowing

ಹೊಸದಿಲ್ಲಿ: ಪ್ಯಾರೀಸ್ ಒಲಿಂಪಿಕ್ಸ್ ನ ಮೊದಲ ದಿನವಾದ ಶನಿವಾರ ರೋವರ್ ಬಾಲರಾಜ್ ಪನ್ವರ್ ಮತ್ತು ಶೂಟರ್ ಗಳು ಭಾರತೀಯ ಸ್ಪರ್ಧೆಯ ಮುಂಚೂಣಿಯಲ್ಲಿರುತ್ತಾರೆ. ಭಾರತದ ಪುರುಷರ ಹಾಕಿ ತಂಡ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ. ಬ್ಯಾಡ್ಮಿಂಟನ್, ಟೆನಿಸ್ ಮತ್ತು ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲೂ ಭಾರತೀಯ ಕ್ರೀಡಾಪಟುಗಳು ಶನಿವಾರ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಬಾಲರಾಜ್ ಪನ್ವರ್, ಪುರುಷರ ಸಿಂಗಲ್ ಸ್ಕಲ್ಸ್ ನಲ್ಲಿ ಭಾಗವಹಿಸುವರು. ಇದೇ ವೇಳೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಅರ್ಹತಾ ಸುತ್ತಿನಲ್ಲಿ ಭಾರತದ ಸಂದೀಪ್ ಸಿಂಗ್/ಇಳವೇನಿಲ್ ವೆಲೇರಿಯನ್, ಅರ್ಜುನ್ ಬಬುತಾ/ರಮಿತಾ ಜಿಂದಾನ್ ಸೆಣೆಸುವರು. ಮಧ್ಯಾಹ್ನ 2 ಗಂಟೆಗೆ ಅರ್ಜುನ್ ಸಿಂಗ್ ಚೀಮಾ ಮತ್ತು ಸರ್ಬಜೋತ್ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ ಪುರುಷರ ಅರ್ಹತಾ ಸುತ್ತಿನಲ್ಲಿ ಭಾಗವಹಿಸುವರು. 10 ಮೀಟರ್ ಏರ್ ರೈಫಲ್ ತಂಡ ಫೈನಲ್ಸ್ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಭಾರತೀಯ ತಂಡ ಅರ್ಹತೆ ಪಡೆದಲ್ಲಿ ಇದರಲ್ಲಿ ಭಾಗವಹಿಸಲಿದೆ.

ಟೆನಿಸ್ ಪಟುಗಳಾದ ರೋಹನ್ ಬೋಪಣ್ಣ/ಎನ್.ಶ್ರೀರಾಮ್ ಬಾಲಾಜಿ ಜೋಡಿ ಪುರುಷರ ಡಬಲ್ಸ್ ನ ಮೊದಲ ಸುತ್ತಿನಲ್ಲಿ ಫ್ರಾನ್ಸ್ ನ ಎಡ್ವರ್ಡ್ ರೋಜರ್-ವೆಸೆಲಿನ್ ಜೋಡಿಯನ್ನು ಮಧ್ಯಾಹ್ನ 3.30ಕ್ಕೆ ಎದುರಿಸಲಿದೆ. ಸಂಜೆ 4ಕ್ಕೆ ಮನು ಭಾಕೆರ್ ಮತ್ತು ರಿದಂ ಸಂಗ್ವಾನ್ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುವರು.

ರಾತ್ರಿ 7.10ಕ್ಕೆ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಲಕ್ಷ್ಯ ಸೇನ್ ಅವರು ಗ್ವಾಟೆಮಾಲಾದ ಕೆವಿನ್ ಕಾರ್ಡನ ಅವರನ್ನು ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಎದುರಿಸಲಿದ್ದಾರೆ. ಟೇಬಲ್ ಟೆನಿಸ್ ನಲ್ಲಿ ಹರ್ಮೀತ್ ದೇಸಾಯಿ ಅವರು ಪುರುಷರ ಸಿಂಗಲ್ಸ್ ಪ್ರಾಥಮಿಕ ಸುತ್ತಿನಲ್ಲಿ ಜೋರ್ಡನ್ ನ ಝಿಯಾದ್ ಅಬೋ ಯೆಮನ್ ಅವರನ್ನು ಎದುರಿಸಲಿದ್ದಾರೆ. ರಾತ್ರಿ 8ಕ್ಕೆ ಸಾತ್ವಿಕ್ ಸಾಯಿರಾಜ್ ರಂಕಾರೆಡ್ಡಿ/ಚಿರಾಗ್ ಶೆಟ್ಟಿ ಜೋಡಿ ಫ್ರಾನ್ಸ್ ನ ಲೂಕಸ್ ಕೋರ್ವೀ/ರೊನಾನ್ ಲಾಬರ್ ಜೋಡಿಯನ್ನು ಪುರುಷರ ಡಬಲ್ಸ್ ತಂಡ ಸ್ಪರ್ಧೆಯಲ್ಲಿ ಎದುರಿಸಲಿದೆ. ರಾತ್ರಿ 9 ಗಂಟೆಗೆ ಭಾರತದ ಪುರುಷರ ತಂಡ ಹಾಕಿ ಸ್ಪರ್ಧೆಯ ಬಿ ಗುಂಪಿನಲ್ಲಿ ನ್ಯೂಜಿಲೆಂಡ್ ಜತೆ ಸೆಣೆಸಲಿದೆ.

ರಾತ್ರಿ 11.50ಕ್ಕೆ ಅಶ್ವಿನಿ ಪೊನ್ನಪ್ಪ/ತನಿಶಾ ಕ್ರಾಸ್ಟೊ ಜೋಡಿ ಕೊರಿಯಾದ ಕಿಮ್ ಸೊ ಯಂಗ್ ಮತ್ತು ಕಾಂಗ್ ಹೀ ಯಂಗ್ ವಿರುದ್ಧ ಮಹಿಳೆಯರ ಡಬಲ್ಸ್ ನಲ್ಲಿ ಸೆಣೆಸಲಿದೆ. ಬಾಕ್ಸಿಂಗ್ ನಲ್ಲಿ ಮಧ್ಯರಾತ್ರಿ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಪ್ರೀತಿ ಪವಾರ್ ಅವರು ವಿಯೇಟ್ನಂನ ಥಿ ಕಿಂಗ್ ಅನ್ವೊ ವಿರುದ್ಧ ಸೆಣೆಸುವರು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News