ಕರ್ನಾಟಕದ ESCOMಗಳ ಹಲ್ಲುಗಳು ತೋರಿಸಲು ಬೇರೆ; ತಿನ್ನಲು ಬೇರೆ ಇವೆಯೇ?
ಕಳೆದ ವಾರ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ (ಡಿಸೆಂಬರ್ 14, ಶಾಸಕ ವಿಜಯೇಂದ್ರ ಯಡಿಯೂರಪ್ಪ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ 2,378) ಉತ್ತರಿಸಿದ ವಿದ್ಯುತ್ ಸಚಿವರು ಸ್ಪಷ್ಟ ಶಬ್ದಗಳಲ್ಲಿ, ‘‘ಪ್ರಸಕ್ತ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರತೆ ಇರುವುದಿಲ್ಲ. ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯ ನಗರ, ಕೈಗಾರಿಕೆ, ಕುಡಿಯುವ ನೀರಿನ ಸ್ಥಾವರಗಳಿಗೆ ಮತ್ತು ನಿರಂತರ ಜ್ಯೋತಿ ಯೋಜನೆ (ಗ್ರಾಮೀಣ) ಫೀಡರ್‌ಗಳಿಗೆ ದಿನವಹಿ 24 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸರಕಾರದ ಆದೇಶದಂತೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ದಿನವಹಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರತೆ ಇರುವುದಿಲ್ಲ ಹಾಗೂ ಲೋಡ್ ಶೆಡ್ಡಿಂಗ್ ಇರುವುದಿಲ್ಲ.’’ ಎಂದು ಉತ್ತರಿಸಿದ್ದರು.
ಆದರೆ ವಾಸ್ತವ ಹಾಗಿದೆಯೆ?
ರಾಜ್ಯದ ಎಲ್ಲೆಡೆಗಳಲ್ಲಿ ಆಗಾಗ ವಿದ್ಯುತ್ ಕಡಿತ ಆಗುತ್ತಿರುವ ದೂರುಗಳು ಬರುತ್ತಿವೆ. ಉಚಿತ ವಿದ್ಯುತ್ ಗ್ಯಾರಂಟಿಯ ಗದ್ದಲದಲ್ಲಿ ವಿದ್ಯುತ್ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು, ಹೊಸ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾರ್ವತ್ರಿಕವಾಗಿದೆ. ಮೇ ತಿಂಗಳಿನಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ, ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಮಳೆಯ ಕೊರತೆ ಉಂಟಾಗಿದ್ದು, ರಾಜ್ಯ ಬರಗಾಲ ಘೋಷಿಸಿದೆ ಮತ್ತು ಆಗಸ್ಟ್-ಸೆಪ್ಟಂಬರ್ ತಿಂಗಳುಗಳಲ್ಲಿ ವಿದ್ಯುತ್ ಅಭಾವದ ಸ್ಥಿತಿ ಇದ್ದುದನ್ನು ರಾಜ್ಯ ಸರಕಾರವು ವಿಧಾನಸಭೆಯಲ್ಲಿಯೇ ಒಪ್ಪಿಕೊಂಡಿದೆ. ಈ ಅಭಾವವನ್ನು ಸರಿದೂಗಿಸಲು ಸೆಪ್ಟಂಬರ್ 16ರಿಂದ ಸೆಕ್ಷನ್ 11 ಜಾರಿ ಮಾಡಿರುವ ಬಗ್ಗೆ (ಈ ಸೆಕ್ಷನ್ ಅನ್ವಯ, ವಿದ್ಯುತ್ ಉತ್ಪಾದಕರು ಅಸಹಜ/ಆಪತ್ತಿನ ಸನ್ನಿವೇಶಗಳಲ್ಲಿ ತಮ್ಮ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಚಟುವಟಿಕೆಗಳನ್ನು ಸರಕಾರದ ನಿರ್ದೇಶನಕ್ಕನುಗುಣವಾಗಿಯೇ ನಡೆಸಬೇಕಾಗುತ್ತದೆ.) ಹೇಳಿರುವ ರಾಜ್ಯ ಸರಕಾರವು, ಕೊರತೆಯಾದ ವಿದ್ಯುತ್ತನ್ನು ದಿನವಹಿ ಆಧಾರದಲ್ಲಿ ವಿವಿಧ ವಿದ್ಯುತ್ ಕೇಂದ್ರಗಳಿಂದ ಖರೀದಿಸಲಾಗುತ್ತಿದೆ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಿಂದ ಬ್ಯಾಂಕಿಂಗ್/ಸ್ವಾಪಿಂಗ್ ವ್ಯವಸ್ಥೆಯ ಮೂಲಕ ವಿದ್ಯುತ್ ಪಡೆಯಲು ಏರ್ಪಾಡು ಮಾಡಿಕೊಳ್ಳಲಾಗಿದೆ ಎಂದೂ ಹೇಳಿಕೊಂಡಿದೆ.
ಇದಕ್ಕೆ ಪೂರಕವಾಗಿ, ಸಂಸತ್ತಿನ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಭಾರತ ಸರಕಾರದ ವಿದ್ಯುತ್ ಸಚಿವರಾದ ಆರ್.ಕೆ. ಸಿಂಗ್ ಅವರು (ಡಿಸೆಂಬರ್ 12, ಸಂಸದ ಜಗ್ಗೇಶ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ 1,110), ಕರ್ನಾಟಕದಲ್ಲಿ ವಿದ್ಯುತ್ ಕೊರತೆ ನಿವಾರಿಸಲು, ರಾಜ್ಯ ಸರಕಾರವು 2023 ಅಕ್ಟೋಬರ್‌ನಿಂದ 2024 ಮೇ ನಡುವಿನ ಎಂಟು ತಿಂಗಳ ಅವಧಿಗೆ ಹೆಚ್ಚುವರಿಯಾಗಿ 600 MW ವಿದ್ಯುತ್ ಪೂರೈಸಬೇಕೆಂದು ಕೇಂದ್ರ ಸರಕಾರವನ್ನು ಕೋರಿದ್ದು, ಅದರಂತೆ ಪಶ್ಚಿಮ ಬಂಗಾಲದ ಫರಕ್ಕಾದಲ್ಲಿರುವ ಎನ್‌ಟಿಪಿಸಿಯ ಎರಡು ಸ್ಥಾವರಗಳಿಂದ 302.36 MW ವಿದ್ಯುತ್ ಒದಗಿಸಲು ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ. ಜೊತೆಗೆ ರಾಜ್ಯ ಸರಕಾರದ ಕೋರಿಕೆಯಂತೆ, ವಿಜಯಪುರದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಿಂದ 150 MW ವಿದ್ಯುತ್ ಮರುಹಂಚಿಕೆ ಮಾಡಿರುವುದಾಗಿ ಹೇಳಿದ್ದಾರೆ.
ಕಾಗದದ ಮೇಲೆ, ರಾಜ್ಯದಲ್ಲಿ ಒಟ್ಟು ನವೀಕರಿಸಬಲ್ಲ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ 2021ರ ಅಂತ್ಯಕ್ಕೆ 15,392 MW ಆಗಿದ್ದು, (ಆಧಾರ: Karnataka Renewable Energy Policy 2022- 2027) ರಾಜ್ಯದ ಉಷ್ಣ ಮತ್ತು ಜಲವಿದ್ಯುತ್ ಸ್ಥಾವರಗಳಲ್ಲಿ ಒಟ್ಟು 11,336.6 MW ವಿದ್ಯುತ್ ಉತ್ಪಾದನಾ ಸಾಮರ್ಥ್ಯ (ಆಧಾರ: ಕೆಪಿಟಿಸಿಎಲ್ ವೆಬ್‌ಸೈಟ್) ಇದೆ. ಇಷ್ಟಿದ್ದೂ, ಸರಕಾರದ ದಾಖಲೆಗಳು ಸೂಚಿಸುತ್ತಿರುವಂತೆ, ವಾಸ್ತವದಲ್ಲಿ ವಿದ್ಯುತ್ 24x7 ಲಭ್ಯವಾಗುತ್ತಿಲ್ಲ. ಯಾಕೆ ಹೀಗೆ?
ರಾಜ್ಯ ಸರಕಾರ ಹೇಳುತ್ತಿರುವಂತೆ, 23-24ನೇ ಸಾಲಿನಲ್ಲಿ ಅಂದಾಜಿಸಲಾಗಿರುವ ವಿದ್ಯುತ್ ಬೇಡಿಕೆ 89,112 MU (ಮಿಲಿಯನ್ ಯೂನಿಟ್) ಆಗಿದೆ. ಭಾರತ ಸರಕಾರದ ದಾಖಲೆಗಳ ಅನ್ವಯ, 2023ರ ಎಪ್ರಿಲ್‌ನಿಂದ ಸೆಪ್ಟಂಬರ್ ನಡುವೆ ಕರ್ನಾಟಕದಲ್ಲಿ 44,563 MU ವಿದ್ಯುತ್ ಬೇಡಿಕೆ ಇದ್ದಿತ್ತು; ಅದರಲ್ಲಿ 44,483 MU ವಿದ್ಯುತನ್ನು ರಾಜ್ಯಸರಕಾರ ಪೂರೈಸಿದೆ. ರಾಜ್ಯ ಸರಕಾರವು ವಿಧಾನಸಭೆಗೆ ತಿಳಿಸಿರುವಂತೆ, ಆ ಅವಧಿಯಲ್ಲಿ ರಾಜ್ಯಸರಕಾರದ ವಿವಿಧ ಸ್ಥಾವರಗಳಿಂದ 46,868 MU ವಿದ್ಯುತ್ ಲಭ್ಯವಾಗಿತ್ತು ಅಲ್ಲದೇ 1,757 MU ವಿದ್ಯುತ್ತನ್ನು ವಿವಿಧ ವಿನಿಮಯ ಕೇಂದ್ರಗಳಿಂದ ಖರೀದಿಸಲಾಗಿತ್ತು. ಹಾಗಾದರೆ, ಸರಕಾರಿ ದಾಖಲೆಗಳ ಪ್ರಕಾರವೇ ರಾಜ್ಯದಲ್ಲಿ ಸದ್ರಿ ಅವಧಿಯಲ್ಲಿ 48,625 MU ವಿದ್ಯುತ್ ಲಭ್ಯವಿತ್ತು! (ನಿಮ್ಮ ಲೆಕ್ಕಾಚಾರಕ್ಕಾಗಿ: 500 MU ಸಾಮರ್ಥ್ಯದ ಒಂದು ವಿದ್ಯುತ್ ಉತ್ಪಾದನಾ ಸ್ಥಾವರವು ಸತತ 24 ತಾಸು ಕಾರ್ಯ ನಿರ್ವಹಿಸಿದರೆ 12 MU ವಿದ್ಯುತ್ ಉತ್ಪಾದನೆ ಆಗುತ್ತದೆ.)
ಅಂದರೆ, ಈ ಎಲ್ಲ ದಾಖಲೆಗಳೂ ಒಟ್ಟಾಗಿ ಹೇಳುತ್ತಿರುವುದು: ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೆ ವಿದ್ಯುತ್ ಕೊರತೆ ಇಲ್ಲ ಎಂದು. ರಾಜ್ಯ ಸರಕಾರ ಸದನದಲ್ಲಿ ಹೇಳಿರುವುದೂ ಇದನ್ನೇ. ಹಾಗಾದರೆ ತಳ ಮಟ್ಟದಲ್ಲಿ ಜನಸಾಮಾನ್ಯರ ಗಮನಕ್ಕೆ ಬರುವಷ್ಟು ಗಾತ್ರದಲ್ಲಿ, ಪ್ರತಿದಿನವೆಂಬಂತೆ ವಿದ್ಯುತ್ ಕಡಿತ ಯಾಕಾಗುತ್ತಿದೆ? ಕರ್ನಾಟಕದಲ್ಲಿರುವ ಪ್ರಮುಖ ವಿರೋಧ ಪಕ್ಷವು, ಕೇಂದ್ರದಲ್ಲಿರುವ ತಮ್ಮದೇ ಆಡಳಿತ ಪಕ್ಷವು ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂಬ ಅಧಿಕೃತ ದಾಖಲೆ ಒದಗಿಸಿದ್ದರೂ, ರಾಜ್ಯದಲ್ಲಿ ವಿದ್ಯುತ್ ಕೊರತೆಯ ಬಗ್ಗೆ ಯಾಕೆ ಮತ್ತೆ ಮತ್ತೆ ಧ್ವನಿ ಎತ್ತುತ್ತಿದೆ?
ಹಾಗಾದರೆ, ಚುನಾವಣೆಗಳು ಸಮೀಪಿಸುತ್ತಿರುವಾಗ, ರಾಜಕೀಯ ಕಾರಣಗಳಿಗಾಗಿ, ವಿದ್ಯುತ್ ಕೊರತೆಯ ಹೆಸರಿನಲ್ಲಿ ಕೆಸರೆರಚಾಟಕ್ಕೆ ಅನುವು ಮಾಡಿಕೊಡುವಲ್ಲಿ, ಇಲಾಖೆಯ ಅಧಿಕಾರಶಾಹಿಯ ಪಾತ್ರಗಳೇನಾದರೂ ಇವೆಯೇ? ಎಂಬುದನ್ನು ಸದ್ಯ ರಿಸೀವಿಂಗ್ ಎಂಡ್ ನಲ್ಲಿರುವ ಕರ್ನಾಟಕ ಸರಕಾರ ಗಮನಿಸಿಕೊಳ್ಳಬೇಕಾದ ಅಗತ್ಯವಿದೆ. ಒಳ್ಳೆಯ ಆಡಳಿತದಲ್ಲಿ ಈ ರೀತಿಯ ಹಿಡಿತ ಇರುವುದು ಬಹಳ ಮುಖ್ಯ. ಇದಲ್ಲ ಎಂದಾದರೆ, ವಿದ್ಯುತ್ ಕಡಿತಗಳು ಕಳೆದ ಆರು ತಿಂಗಳುಗಳಿಂದ ಹಿಂದಿನ ಅವಧಿಗೆ ಹೋಲಿಸಿದರೆ ಯಾಕೆ ತೀರಾ ಸಾಮಾನ್ಯ ಆಗಿಬಿಟ್ಟಿವೆ, ಅದಕ್ಕೆ ಬೇರೆ ಕಾರಣಗಳೇನಿವೆ? ಎಂಬುದನ್ನು ವಿವರಿಸುವ ಜವಾಬ್ದಾರಿ ಕೂಡ ರಾಜ್ಯ ಸರಕಾರದ್ದೇ.