ಡೇಟಾ ಮಾರುಕಟ್ಟೆಯ ಕೋಳಿ ಜಗಳ: ಮೂಡೀಸ್ v/s ಆಧಾರ್

ವ್ಯಾಪಾರದ ವಿಪುಲ ಅವಕಾಶಗಳು ಎದುರಾದಾಗಲೆಲ್ಲ ಅಮೆರಿಕದಂತಹ ದೇಶಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸರ್ವತ್ರ ಪ್ರಯತ್ನಿಸುತ್ತವೆ. ಈ ಮೂಡೀಸ್ ವರ್ಸಸ್ ಆಧಾರ್ ವಾದ-ಪ್ರತಿವಾದಗಳನ್ನು ಆ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡರೆ, ಮಾರುಕಟ್ಟೆಯಲ್ಲಿ ಏನು ನಡೆಯುತ್ತಿರಬಹುದು ಎಂಬುದರ ಬಗ್ಗೆ ಹೊಳಹುಗಳು ಸಿಗತೊಡಗುತ್ತವೆ.

Update: 2023-09-30 05:27 GMT

ಅಮೆರಿಕ ಮೂಲದ ಹೂಡಿಕೆದಾರರ ಸೇವಾಸಂಸ್ಥೆ ಮೂಡೀಸ್ (ಅದು ಜಗತ್ತಿನ ಕಂಪೆನಿಗಳ, ಸರಕಾರಗಳ ಮತ್ತು ಅವು ಬಿಡುಗಡೆ ಮಾಡುವ ಸೆಕ್ಯುರಿಟಿಗಳ ರೇಟಿಂಗ್ ಅನ್ನು ಹೂಡಿಕೆದಾರರಿಗೆ ಒದಗಿಸುವ ಸೇವೆ ನೀಡುತ್ತದೆ) ಕಳೆದ ವಾರ, ಭಾರತದಲ್ಲಿ ‘ಆಧಾರ್’ ಅನನ್ಯ ಗುರುತು ಸಂಖ್ಯೆಯ ಮೂಲಕ ವ್ಯಕ್ತಿಯ ಗುರುತನ್ನು ದೃಢೀಕರಿಸುವ ವ್ಯವಸ್ಥೆಯಲ್ಲಿ ಲೋಪಗಳಿವೆ. ಭಾರತದಂತಹ ಉಷ್ಣವಲಯದ, ತೇವಾಂಶ ಅಧಿಕ ಇರುವ ಭೂಭಾಗಗಳಲ್ಲಿ ಬಯೋಮೆಟ್ರಿಕ್ ದೃಢೀಕರಣ ವಿಫಲಗೊಳ್ಳುವ ಸಾಧ್ಯತೆಗಳೇ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸುವ ವರದಿಯೊಂದನ್ನು ಬಿಡುಗಡೆ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು, ಆ ರೀತಿಯ ಆರೋಪ ನಿರಾಧಾರ ಮತ್ತು ಅದು ಯಾವುದೇ ಸಂಶೋಧನಾ ದತ್ತಾಂಶಗಳನ್ನು ಆಧರಿಸಿದಂತಹ ವರದಿ ಅಲ್ಲ; ಬರೀ ಬೀಸು ಹೇಳಿಕೆ. ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ದೇಶದ 135 ಕೋಟಿಗೂ ಮಿಕ್ಕಿ ಜನರು ಆಧಾರ್ ಬಳಸುತ್ತಿದ್ದು ಇಲ್ಲಿಯ ತನಕ 10,000 ಕೋಟಿಗೂ ಹೆಚ್ಚು ಬಾರಿ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಗಳು ಯಶಸ್ವಿಯಾಗಿ ನಡೆದಿವೆ ಎಂದು ಹೇಳಿ, ಮೂಡೀಸ್ ವರದಿಯನ್ನು ತಳ್ಳಿಹಾಕಿದ್ದಾರೆ.

* * *

ಡೇಟಾ ಎಂಬ ಎರಡನೇ ಚಿನ್ನ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿರುವಂತೆಯೇ ಅದರ ವ್ಯವಹಾರ ಸಾಧ್ಯತೆಗಳು ಮತ್ತು ಲಾಭ ಚಿಂತನೆಗಳು ವೇಗ ಪಡೆದುಕೊಳ್ಳತೊಡಗಿವೆ. ಮೇಲೆ ನಾನು ವಿವರಿಸಿರುವ ಮೂಡೀಸ್ ವರ್ಸಸ್ ಆಧಾರ್ ಬೆಳವಣಿಗೆಯನ್ನು ಆ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

ಜಗತ್ತಿನಾದ್ಯಂತ ಸರಕಾರಗಳು ತಮ್ಮ ಪ್ರಜೆಗಳಿಗೆ ಸವಲತ್ತುಗಳನ್ನು ಒದಗಿಸುವ ತಮ್ಮ ಕರ್ತವ್ಯಗಳನ್ನು ಕೃತಕ ಬುದ್ಧಿಮತ್ತೆ, ಡೇಟಾ ತಂತ್ರಜ್ಞಾನ, ಇಲೆಕ್ಟ್ರಾನಿಕ್ ಹಣ ವರ್ಗಾವಣೆ, ಚಹರೆ ಗುರುತಿಸುವಿಕೆ ಮತ್ತಿತರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸುಲಭಗೊಳಿಸಿಕೊಳ್ಳವ ಹಾದಿಯಲ್ಲಿವೆ. ಮೂಲತಃ ಇವೆಲ್ಲ ಸರಕಾರದ ಸೌಲಭ್ಯಗಳು ಅರ್ಹರಾದ, ಉದ್ದೇಶಿತ ಜನರನ್ನು ತಲುಪುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ತಂತ್ರಜ್ಞಾನ ಸಲಕರಣೆಗಳು.

ಭಾರತದಲ್ಲಿ ಆಧಾರ್ ವ್ಯವಸ್ಥೆ ಜಾರಿಗೆ ಬಂದದ್ದು 2009ರಲ್ಲಿ. 12 ಅಂಕಿಗಳ ಈ ಅನನ್ಯ ಗುರುತು ಸಂಖ್ಯೆಯನ್ನು ಪ್ರತಿಯೊಬ್ಬ ಪ್ರಜೆಗೆ ನೀಡಲಾಗಿದ್ದು, ಆ ಸಂಖ್ಯೆಗೆ ಆ ವ್ಯಕ್ತಿಯ ಬೆರಳಚ್ಚು, ಕಣ್ಣುಪಾಪೆಯ ಸ್ಕ್ಯಾನ್, ಭಾವಚಿತ್ರಗಳು ಲಿಂಕ್ ಆಗಿರುತ್ತವೆ. ಅದನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ತನ್ನ ಗುರುತು, ವಿಳಾಸದ ಹಾಗೂ ಜನ್ಮದಿನದ ದಾಖಲೆ ಆಗಿ ಬಳಸಬಹುದಾಗಿದೆ. ಆರಂಭದಲ್ಲಿ ಆಧಾರ್ ಜಾರಿಗೆ ಬಂದಾಗ ಅದನ್ನು ಕಟುವಾಗಿ ವಿರೋಧಿಸಿದ್ದ ಎನ್‌ಡಿಎ ಸರಕಾರ ಈಗ ಜನಧನ್-ಆಧಾರ್-ಮೊಬೈಲ್ ಸಂಪರ್ಕ ಎಂಬ ‘ಎಂಒ ಟ್ರಿನಿಟಿ’ ತನ್ನ ಪ್ರಜೆಗಳನ್ನು ತಲುಪುವ ಪರಿಣಾಮಕಾರಿ ವಿಧಾನ ಎಂದು ಅರಿತಿರುವುದಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಈ ಬೃಹತ್ ವ್ಯವಸ್ಥೆಯ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಸರಕಾರದ ಸವಲತ್ತುಗಳನ್ನು ಅದರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ಈ ವ್ಯವಸ್ಥೆಯನ್ನು ಅದು ಬಳಸುತ್ತಿದೆ. ಆಧಾರ್‌ನ ಸಾಧಕ-ಬಾಧಕಗಳು ಈ ಅಂಕಣದ ವ್ಯಾಪ್ತಿ ಅಲ್ಲ. ಇಲ್ಲಿ ಹೇಳಹೊರಟಿರುವುದು ಹೊಸದೊಂದು ಬೆಳವಣಿಗಯ ಬಗ್ಗೆ.

ಈ ವರ್ಷ ಆಗಸ್ಟ್ ಕೊನೆಯ ವಾರದಲ್ಲಿ, ಭಾರತದಲ್ಲಿ ಜಿ20 ಶೃಂಗ ಸಭೆಯ ಸಿದ್ಧತೆಗಳು ಭರದಿಂದ ಸಾಗಿದ್ದಾಗ, ಆಧಾರ್ ಪಿತಾಮಹ ನಂದನ್ ನಿಲೇಕಣಿ ಅವರು ಜಿ20 ಸಿದ್ಧತೆಯ ಭಾಗವಾಗಿ ನಡೆದ ಬಿ20 (ಬ್ಯುಸಿನೆಸ್ 20) ಶೃಂಗ ಸಭೆಯಲ್ಲಿ ಮಾತನಾಡಿ, ಭಾರತ ಸರಕಾರವು ವಿಶ್ವ ಬ್ಯಾಂಕ್ ಹಾಗೂ ಐಎಂಎಫ್‌ನ ಸಹಕಾರದೊಂದಿಗೆ ಭಾರತದ ‘ಜನಧನ್- ಆಧಾರ್-ಮೊಬೈಲ್ ಸಂಪರ್ಕ’ (ಎಂಒ) ಎಂಬ ಟ್ರಿನಿಟಿ ವ್ಯವಸ್ಥೆಯನ್ನು ಒಳಗೊಂಡ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ (ಡಿಪಿಐ) ಮಾದರಿಯನ್ನು ಮುಂದಿನ 5 ವರ್ಷಗಳಲ್ಲಿ ಜಗತ್ತಿನ 50ಕ್ಕೂ ಮಿಕ್ಕಿ ದೇಶಗಳಿಗೆ ಕೊಂಡೊಯ್ಯಲಿದೆ ಎಂಬ ಮಹತ್ವಾಕಾಂಕ್ಷಿ ‘ಬಿಗ್ ಪಿಕ್ಚರ್’ ಅನ್ನು ಬಿಚ್ಚಿಟ್ಟಿದ್ದರು.

ಡಿಜಿಟಲ್ ಸೇವಾ ಕ್ಷೇತ್ರದಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಭಾರತಕ್ಕೆ ಇದೊಂದು ಒಳ್ಳೆಯ ವ್ಯಾವಹಾರಿಕ ಅವಕಾಶ ಕೂಡ. ಆದರೆ ಈ ಮಾರುಕಟ್ಟೆಯಲ್ಲಿ ಭಾರತ ‘ಏಕಸ್ವಾಮ್ಯದ’ ವ್ಯಾಪಾರಿ ಅಲ್ಲ ಎಂಬುದು ಕೂಡ ಸತ್ಯ.

ವಿಕೇಂದ್ರೀಕೃತ ಅನನ್ಯ ಗುರುತು (Decentralised Identity-DID) ಎಂಬ ಬ್ಲ್ಯ್ಲಾಕ್ ಚೈನ್ ಆಧರಿತ ಹೊಸ ತಂತ್ರಜ್ಞಾನವೊಂದು ಮಾರುಕಟ್ಟೆಗೆ ಇಳಿದಿದೆ. ಇದು ಒಂದು ನಿರ್ದಿಷ್ಟ ಸಂಸ್ಥೆ/ಪ್ರಾಧಿಕಾರ/ಸರಕಾರಕ್ಕೆ ಪ್ರಜೆಗಳ ಗುರುತುಗಳನ್ನು ನಿಭಾಯಿಸಲು ಬಿಡುವ ಬದಲು ಸ್ವತಃ ಪ್ರಜೆಯೇ ಅದನ್ನು ನಿಯಂತ್ರಿಸುವ ಅವಕಾಶ ಮಾಡಿಕೊಡುತ್ತದೆಯಂತೆ. ಅಮೆರಿಕದಲ್ಲಿ ಮೈಕ್ರೋಸಾಫ್ಟ್‌ನಂತಹ ಗಜಗಾತ್ರದ ಖಾಸಗಿ ಕಂಪೆನಿಗಳೂ ಕೂಡ ಆಧಾರ್ ವ್ಯವಸ್ಥೆಯ ಸುಧಾರಿತ ರೂಪವಾಗಿರುವ ಈ DID ತಂತ್ರಜ್ಞಾನದ ಗುರುತು ವ್ಯವಸ್ಥೆ ಉತ್ಪನ್ನಗಳೊಂದಿಗೆ ಮಾರುಕಟ್ಟೆಯಲ್ಲಿ ಸನ್ನದ್ಧವಾಗಿವೆ. ವ್ಯಾಪಾರದ ವಿಪುಲ ಅವಕಾಶಗಳು ಎದುರಾದಾಗಲೆಲ್ಲ ಅಮೆರಿಕದಂತಹ ದೇಶಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸರ್ವತ್ರ ಪ್ರಯತ್ನಿಸುತ್ತವೆ. ಈ ಮೂಡೀಸ್ ವರ್ಸಸ್ ಆಧಾರ್ ವಾದ-ಪ್ರತಿವಾದಗಳನ್ನು ಆ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡರೆ, ಮಾರುಕಟ್ಟೆಯಲ್ಲಿ ಏನು ನಡೆಯುತ್ತಿರಬಹುದು ಎಂಬುದರ ಬಗ್ಗೆ ಹೊಳಹುಗಳು ಸಿಗತೊಡಗುತ್ತವೆ.

ಸರಕಾರವೊಂದು ತನ್ನ ಪ್ರಜೆಗಳ ಬದುಕಿನ ಮೇಲೆ ಎಷ್ಟು ಪ್ರಮಾಣದ ಹಿಡಿತ ಹೊಂದಿರಬೇಕು? ವ್ಯಕ್ತಿಯ ಖಾಸಗಿತನದ ಮೇಲೆ ವ್ಯವಸ್ಥೆಯ ನೆರಳು ಎಷ್ಟಿರಬೇಕು? ಡಿಜಿಟಲ್ ಯುಗದಲ್ಲಿ ವ್ಯಕ್ತಿಯ ಹಕ್ಕುಗಳೇನು? ತನ್ನ ಗುರುತಿನ ತಂತ್ರಜ್ಞಾನವನ್ನು ಪ್ರಜೆ ತಾನೇ ನಿಯಂತ್ರಿಸಿಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಸಾಧ್ಯವೇ? ಎಂಬುದೆಲ್ಲ ಜಾಗತಿಕವಾಗಿ ಒಪ್ಪಿತವಾಗುವ ಮೊದಲೇ, ವ್ಯವಹಾರಸ್ಥರು ಈ ಎರಡನೇ ಚಿನ್ನದ ತರಹೇವಾರಿ ಆಭರಣಗಳ ವ್ಯಾಪಾರಕ್ಕೆ ಧುಮುಕಿ ಬಿಟ್ಟಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಈ ಹೊಸ ಮಾರುಕಟ್ಟೆ ಗಿಜಿಗುಡಲಿರುವ ಎಲ್ಲಾ ಲಕ್ಷಣಗಳು ಢಾಳಾಗಿ ಕಾಣಿಸುತ್ತಿವೆ. ಇಷ್ಟೇ ಅಲ್ಲ. ಜಗತ್ತಿನ ಸಾರ್ವಭೌಮ ದೇಶಗಳಲ್ಲಿನ ಪ್ರಜೆಗಳ ಬಗ್ಗೆ ಮಹತ್ವದ ಡೇಟಾಗಳನ್ನು ಆ ದೇಶದಿಂದ ಹೊರಗಿನ ಖಾಸಗಿ/ಸರಕಾರಿ ವ್ಯವಸ್ಥೆಯೊಂದು ನಿಭಾಯಿಸುವ, ನಿಯಂತ್ರಿಸುವ ಹೊಸ ಸನ್ನಿವೇಶವೊಂದು ಎದುರಾಗುವ ದಿನಗಳೂ ಹತ್ತಿರದಲ್ಲೇ ಇವೆ. ಇದು ನೈತಿಕವಾಗಿ ನಡೆಯಬಲ್ಲ ಅಂತರ್‌ರಾಷ್ಟ್ರೀಯ ಕಾನೂನುಗಳೂ ಬೇಕಾಗುವ ದಿನಗಳು ದೂರವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ರಾಜಾರಾಂ ತಲ್ಲೂರು

contributor

Similar News