‘ಅಂಬ್ರೆಲ್ಲಾ ಪೊಲಿಟಿಕ್ಸ್’ ಮತ್ತು ಕಾಂಗ್ರೆಸ್
ತನ್ನ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವ ಕಾಂಗ್ರೆಸ್‌ಗೆ ಇನ್ನೂ ಮತದಾರರಿದ್ದಾರೆ; ವೋಟ್ ಬ್ಯಾಂಕ್ ಇದೆ. ಹಾಗಾಗಿ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ತನ್ನ ಯಶಸ್ಸಿನ ಕುರಿತು ತಲೆ ಕೆಡಿಸಿಕೊಳ್ಳುವ ಬದಲು, ದೇಶದ ವೈವಿಧ್ಯತೆಯನ್ನು ಬಿಂಬಿಸುವ, ಎಲ್ಲರನ್ನು ಒಳಗೊಳ್ಳಬಲ್ಲ ಸಾಮಾಜಿಕ-ರಾಜಕೀಯ ಚಳವಳಿಯ ನೆರೇಟಿವ್ ಒಂದನ್ನು ಮುಂದಿಡುವುದು ಸಾಧ್ಯವಾದರೆ, ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ನಿಲ್ಲಲೂಬಹುದು.
ಒಂದು ವಿಚಿತ್ರವಾದ ಮೌನವನ್ನು ಗಮನಿಸಿದ್ದೀರಾ? ಸಾರ್ವತ್ರಿಕ ಚುನಾವಣೆಯ ನೆಪದಲ್ಲಿ ಊರ ಪಂಚಾಯ್ತಿಕೆಗಳನ್ನೆಲ್ಲ ಎತ್ತಿ ಆಡುವ ಮಾಧ್ಯಮಗಳಲ್ಲಾಗಲೀ, ರಾಜಕೀಯ ವಲಯಗಳಲ್ಲಾಗಲೀ ಒಂದು ವಿಚಾರದ ಬಗ್ಗೆ ಸೊಲ್ಲೇ ಇಲ್ಲ. ಆ ವಿಚಾರ ಯಾವುದು ಎಂದರೆ, ಒಂದು ವೇಳೆ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಅದರ INDI ಅಲಯನ್ಸ್ ಸೋತುಬಿಟ್ಟರೆ, ಆಗ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಸ್ಥಿತಿ ಏನು? ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಸ್ಥಿತಿ ಏನು?
ಕಳೆದ ಹತ್ತು ವರ್ಷಗಳಲ್ಲಿ, ಒಂದೆಡೆ ತಮ್ಮ ಸ್ವಯಂಕೃತ ಅಪರಾಧದ ಕಾರಣದಿಂದಾಗಿ ಮತ್ತು ಇನ್ನೊಂದೆಡೆ, ಆಡಳಿತ ಪಕ್ಷವು ನಿರ್ದಾಕ್ಷಿಣ್ಯದಿಂದ ಚುನಾವಣೆ ಗೆಲ್ಲುವ ಮಷೀನೇ ಆಗಿಬಿಟ್ಟಿರುವ ಕಾರಣದಿಂದಾಗಿ, ದೇಶದ ಪ್ರಜಾಸತ್ತೆಯ ಪ್ರಮುಖ ಅಂಗವಾಗಬೇಕಾಗಿದ್ದ ಪ್ರತಿಪಕ್ಷಗಳು ಸ್ವಾರಸ್ಯ ಕಳೆದುಕೊಳ್ಳುತ್ತಾ ಬಂದಿವೆ. ಇದಕ್ಕೆ ಆರ್ಥಿಕವಾದ, ಸಾಮಾಜಿಕವಾದ, ಸಂಘಟನಾತ್ಮಕವಾದ, ಸಂವಹನಾತ್ಮಕವಾದ ನೂರಾರು ಕಾರಣಗಳಿರಬಹುದು. ಆದರೆ, ಇದು ಆಗಿರುವುದಂತೂ ನಿಜ.
ಹಾಲೀ ಆಡಳಿತ ಪಕ್ಷ ಎನ್‌ಡಿಎ ಕಳೆದ ೧೦ ವರ್ಷಗಳಲ್ಲಿ, ತನ್ನದೇ ವೈಫಲ್ಯಗಳ ಕಾರಣದಿಂದಾಗಿ ಪ್ರತಿಪಕ್ಷಗಳಿಗೆ ಅಯಾಚಿತವಾಗಿ ಒದಗಿಸಿಕೊಟ್ಟ ಆಯುಧಗಳು ಒಂದೆರಡಲ್ಲ. ನೋಟು ರದ್ಧತಿ, ಜಿಎಸ್‌ಟಿ ಅನುಷ್ಠಾನದಲ್ಲಿ ಗೊಂದಲ, ಕೋವಿಡ್ ಕಾಲದಲ್ಲಿ ಲಾಕ್‌ಡೌನ್, ಕೋವಿಡ್ ಅವ್ಯವಹಾರಗಳು, ಬೆಲೆ ಏರಿಕೆ, ಆರ್ಥಿಕ ಅಸಮತೋಲನ, ವಿದೇಶಾಂಗ ನೀತಿಯ ವೈಫಲ್ಯಗಳು, ರಕ್ಷಣಾ ಅವ್ಯವಹಾರಗಳು, ಖಾಸಗಿತನದಲ್ಲಿ ಹಸ್ತಕ್ಷೇಪ, ರೈತರ ಪಡಿಪಾಟಲು, ನಿರುದ್ಯೋಗ ಹೀಗೆ.
ಆದರೆ, ಈ ಯಾವುದೇ ಆಯುಧವನ್ನು ಕಾಂಗ್ರೆಸ್ ಆಗಲೀ, INDI ಅಲಯನ್ಸ್‌ನ ಬೇರೆ ಪಾಲುದಾರರಾಗಲೀ, ಪರಿಣಾಮಕಾರಿಯಾಗಿ ಬಳಸಿಕೊಳ್ಳಲೇ ಇಲ್ಲ. ಪ್ರತೀ ಬಾರಿ ಪ್ರತಿಪಕ್ಷಗಳು ಇನ್ನೇನು ತಲೆ ಎತ್ತಿದವು ಎಂಬಷ್ಟರಲ್ಲಿ ಆಡಳಿತ ಪಕ್ಷ ಮತ್ತೆ ಗಟ್ಟಿಯಾಗಿ ನೆಲೆಗೊಳ್ಳುತ್ತಾ ಬಂದಿದೆ. ಇದಕ್ಕೆ ತೀರಾ ಇತ್ತೀಚೆಗಿನ ಉದಾಹರಣೆ ಎಂದರೆ, ರಾಹುಲ್ ಗಾಂಧಿಯವರ ದೇಶವ್ಯಾಪಿ ‘ಭಾರತ್ ಜೋಡೊ’ ಪಾದಯಾತ್ರೆ ಇನ್ನೇನು ಜನಮಾನಸ ತಲುಪಿತು ಎನ್ನುವಷ್ಟರಲ್ಲಿ, ವಿಧಾನಸಭೆಗಳ ಉಪ ಚುನಾವಣೆ ಫಲಿತಾಂಶಗಳು ಆಡಳಿತ ಪಕ್ಷದ ಪರವಾಗಿ ಬಂದದ್ದು.
ಹಾಗಾಗಿ, 2024ರ ಸಾರ್ವತ್ರಿಕ ಚುನಾವಣೆ ಪ್ರಕಟವಾಗುವ ಆಸುಪಾಸಿನಲ್ಲಿ, ನರೇಂದ್ರ ಮೋದಿ ಅವರ ಎನ್‌ಡಿಎ ಮತ್ತೊಮ್ಮೆ ನಿಚ್ಚಳ ಬಹುಮತ ಪಡೆದು, ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದೆ ಎಂಬ ಸನ್ನಿವೇಶ ಉಂಟಾಗಿತ್ತು. ಆದರೆ ಬರಬರುತ್ತಾ, 2019ರ ಮೋದಿ ಅಲೆ ಈ ಬಾರಿ ಚುನಾವಣೆಯಲ್ಲಿ ಇಲ್ಲ, ಆಡಳಿತ ವಿರೋಧಿ ಅಲೆ ಇದೆ. ಹಾಗಾಗಿ ನರೇಂದ್ರ ಮೋದಿಯವರು ಊಹಿಸಿದಂತೆ 400+ ಸೀಟುಗಳನ್ನು ಎನ್‌ಡಿಎ ಗೆಲ್ಲದು ಎಂಬ ನೆರೇಟಿವ್ ಹುಟ್ಟಿಕೊಂಡಿತು. ಈಗ ಚುನಾವಣಾ ಆಯೋಗವು ಉದಾರತೆ ತೋರಿ, ಸಾರ್ವತ್ರಿಕ ಚುನಾವಣೆಯು ದೇಶದ ಚರಿತ್ರೆಯಲ್ಲೇ ಸುದೀರ್ಘ ಅವಧಿಗೆ ನಡೆಯಲು ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ತನ್ನ ಚುನಾವಣೆ ಗೆಲ್ಲುವ ಯಂತ್ರಕ್ಕೆ ಪ್ರತೀ ಹಂತದಲ್ಲಿ ಇಂಚಿಂಚಾಗಿ ಚುರುಕು ಮುಟ್ಟಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೊನೆಯ ಎರಡು ಸುತ್ತುಗಳು ಬಾಕಿ ಇವೆ. ಜೂನ್ 4ಕ್ಕೆ ಫಲಿತಾಂಶವೇನೋ ಬರಲಿದೆ. ಆದರೆ, ತಾವು ಗೆಲ್ಲುತ್ತೇವೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಸ್ಥಿತಿಯಲ್ಲಿ ಪ್ರತಿಪಕ್ಷಗಳು ಇದ್ದಂತಿಲ್ಲ. ಅಕಸ್ಮಾತ್ ಪ್ರತಿಪಕ್ಷಗಳು ಗೆದ್ದವು ಅಥವಾ ‘ಹಂಗ್ ಪಾರ್ಲಿಮೆಂಟ್’ ಸ್ಥಿತಿ ಬಂದರೂ, ಅದು ಮೋದಿಯವರ ಸೋಲು ಎಂದು ದಾಖಲಾಗಲಿದೆಯೇ ಹೊರತು INDI ಅಲಯನ್ಸ್ ಗೆಲುವು ಎಂದಲ್ಲ!
► ಕಾಂಗ್ರೆಸ್‌ಗೆ ತನ್ನ ಪಾತ್ರದ ಗೊಂದಲ
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ, ಹೋರಾಟದ ಎಲ್ಲ ತೊರೆಗಳಿಗೂ ‘ಅಂಬ್ರೆಲ್ಲಾ’ ಆಗಿದ್ದ ಕಾಂಗ್ರೆಸ್ ಚಳವಳಿ, ಈಗ ಒಂದು ರಾಜಕೀಯ ಪಕ್ಷವೆಂಬ ಚೌಕಟ್ಟಿನೊಳಗೆ ಬಂದಿಯಾಗಿರುವಾಗ ಎದುರಾಗುತ್ತಿರುವ ಬಿಕ್ಕಟ್ಟು ಬಹಳ ಚಾರಿತ್ರಿಕ ಮಹತ್ವದ್ದು ಅನ್ನಿಸುತ್ತದೆ. ಒಂದೆಡೆ ತಳಮಟ್ಟದಲ್ಲಿ ಸಂಘಟನಾತ್ಮಕ ಶಿಸ್ತು ಇಲ್ಲದ, ಇನ್ನೊಂದೆಡೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಬೇಕೇ ಬೇಡವೇ ಎಂಬ ಗೊಂದಲದಲ್ಲಿರುವ ಕಾಂಗ್ರೆಸ್‌ಗೆ (ಗಮನಿಸಿ: ಇಂತಹ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಮೂಲತಃ ಕಾಂಗ್ರೆಸಿಗರಾಗಿದ್ದವರದೇ! ಕಾಂಗ್ರೆಸ್ ಜೊತೆ ಇರುವುದಕ್ಕಿಂತ ಹೊರಗೆ ಪ್ರತ್ಯೇಕವಾಗಿದ್ದರೆ ಹೆಚ್ಚು ಲಾಭ ಎಂಬುದನ್ನು ಅರ್ಥ ಮಾಡಿಕೊಂಡವರು ಅವರೆಲ್ಲ!) ತನ್ನ ಮೂಲದ ಮರೆವು ಕಾಡುತ್ತಿರುವಂತಿದೆ. ಇದರಿಂದಾಗಿ ಕಾಂಗ್ರೆಸ್ ಈಗ ಒಂದು ನಿರ್ದಿಷ್ಟ ವೋಟ್‌ಬ್ಯಾಂಕ್ ಆಧರಿತ ರಾಜಕೀಯ ಪಕ್ಷ ಆಗಿ ಕಾಣಿಸತೊಡಗಿದೆ. ಅದೀಗ ‘ಅಂಬ್ರೆಲ್ಲಾ’ ಆಗಿ ಉಳಿದಿಲ್ಲ.
ಗಮನಿಸಬೇಕಾಗಿರುವ ಸಂಗತಿ ಎಂದರೆ, ಈಗ ಸ್ವತಂತ್ರ ಭಾರತದಲ್ಲಿ ಆರೆಸ್ಸೆಸ್ ಆ ‘ಅಂಬ್ರೆಲ್ಲಾ’ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಲು ಕಲಿತಿದೆ. ದೊಡ್ಡ ಪ್ರಮಾಣದ ಕಾಂಗ್ರೆಸಿಗರು, ಅವಕಾಶವಾದಿಗಳು ಸೇರಿದಂತೆ, ಸಂಘ ಪರಿವಾರದಲ್ಲಿ ಈಗ ಬಗೆಬಗೆಯ ‘ತೊರೆಗಳು’ ಕಾಣಸಿಗುತ್ತಿವೆ. ಸಂಘಟನಾತ್ಮಕ ಶಿಸ್ತು, ಆರ್ಥಿಕ ಬಲಗಳ ಕಾರಣದಿಂದಾಗಿ ಈ ‘ಅಂಬ್ರೆಲ್ಲಾ’ ಈಗ ಯಶಸ್ವಿ ಕೂಡ. ಅವರ ಒಂದೇ ಒಂದು ಕೊರತೆ ಎಂದರೆ, ‘ಎಲ್ಲರನ್ನು ಒಳಗೊಳ್ಳುವ’ ರಾಜಕೀಯ ಸಾಧ್ಯ ಆಗದಿರುವುದು. ಅದು ಸಾಧ್ಯ ಆಗಿದ್ದರೆ, ಈ ಹೊತ್ತಿಗಾಗಲೇ ಕಾಂಗ್ರೆಸ್ ಅಪ್ರಸ್ತುತ ಆಗಿರುತ್ತಿತ್ತೇನೋ!
ಕಾಂಗ್ರೆಸ್ ಈ ಹಂತದಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಈ ಸಂಗತಿಯನ್ನೇ. ತನ್ನ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವ ಕಾಂಗ್ರೆಸ್‌ಗೆ ಇನ್ನೂ ಮತದಾರರಿದ್ದಾರೆ; ವೋಟ್ ಬ್ಯಾಂಕ್ ಇದೆ. ಹಾಗಾಗಿ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ತನ್ನ ಯಶಸ್ಸಿನ ಕುರಿತು ತಲೆ ಕೆಡಿಸಿಕೊಳ್ಳುವ ಬದಲು, ದೇಶದ ವೈವಿಧ್ಯತೆಯನ್ನು ಬಿಂಬಿಸುವ, ಎಲ್ಲರನ್ನು ಒಳಗೊಳ್ಳಬಲ್ಲ ಸಾಮಾಜಿಕ-ರಾಜಕೀಯ ಚಳವಳಿಯ ನೆರೇಟಿವ್ ಒಂದನ್ನು ಮುಂದಿಡುವುದು ಸಾಧ್ಯವಾದರೆ, ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ನಿಲ್ಲಲೂಬಹುದು. ಸ್ವತಃ ನರೇಂದ್ರ ಮೋದಿ ಮತ್ತು ಅಮಿತ್ ಶಾ, ಈ ಸಾಧ್ಯತೆಯನ್ನು ಅವರದೇ ಭಾಷೆಯಲ್ಲಿ ಗುರುತಿಸಿದ್ದಾರೆ. ಆದರೆ ಕಾಂಗ್ರೆಸ್‌ಗೆ ಅದಿನ್ನೂ ಅರ್ಥ ಆದಂತಿಲ್ಲ. ಇತ್ತೀಚೆಗೆ ಭಾಷಣಗಳಲ್ಲಿ ಅವರು ಕಾಂಗ್ರೆಸ್ ಈಗ, ‘‘ಮಾವೋವಾದಿಗಳ, ನಕಲಿ ಹೋರಾಟಗಾರರ, ಭ್ರಷ್ಟರ, ತುಕ್ಡೇ ಗ್ಯಾಂಗ್‌ಗಳ ಪಕ್ಷ ಆಗುತ್ತಿದೆ’’ ಎಂದದ್ದಿದೆ!
► ಹಾಗಾಗದಿದ್ದರೆ ಏನಾದೀತು?
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ವಾರದ ಹಿಂದೆ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘‘ಆರಂಭದಲ್ಲಿ ನಾವು ಆರೆಸ್ಸೆಸ್ ಸಹಾಯ ಪಡೆಯುತ್ತಿದ್ದೆವು, ಆದರೆ ಈಗ ಬೆಳೆದಿದ್ದೇವೆ, ಸಕ್ಷಮಗೊಂಡಿದ್ದೇವೆ. ಬಿಜೆಪಿ ತನ್ನ ಬಲದ ಮೇಲೆ ನಡೆಯುತ್ತಿದೆ’’ ಎಂದು ಹೇಳಿದ್ದನ್ನು ನೀವು ಗಮನಿಸಿರಬಹುದು. ಇದು ಈ ಹಂತದಲ್ಲಿ ಬಹಳ ದೀರ್ಘಗಾಮಿ ಪರಿಣಾಮಗಳುಳ್ಳ ಹೇಳಿಕೆ. ಸಂಘ ಪರಿವಾರ ಎಂಬ ‘ಅಂಬ್ರೆಲ್ಲಾ’ದ ಅವಿಭಾಜ್ಯ ಭಾಗವಾಗಿದ್ದ ಬಿಜೆಪಿಯ ಅಧ್ಯಕ್ಷರು, ತಮ್ಮ ಪಕ್ಷವು ಸಂಘದ ಪರಿಧಿಯನ್ನು ಮೀರಿ ಬೆಳೆದಿದೆ ಎಂದದ್ದನ್ನು ಯಾವ ರೀತಿಯಲ್ಲಿ ಸ್ವೀಕರಿಸಿದರೂ, ಆರೆಸ್ಸೆಸ್ ಈಗ ಹೊಸದೊಂದು ರಾಜಕೀಯದ ಜೊತೆಯಾಗಲು ಸನ್ನದ್ಧವಾಗಿದೆ ಎಂದೇ ಅನ್ನಿಸುತ್ತಿದೆ. ‘ಅಂಬ್ರೆಲ್ಲಾ’ ರಾಜಕೀಯದ ಶಕ್ತಿ ಅದು.
ಹಿಂದೊಮ್ಮೆ ಇಂತಹದೇ ‘ಅಂಬ್ರೆಲ್ಲಾ’ ಆಗಿದ್ದ ಕಾಂಗ್ರೆಸ್, ಮತ್ತೆ ಆ ಪಾತ್ರ ವಹಿಸಲು ಸಕಾಲದಲ್ಲಿ ಮುಂದಾಗದಿದ್ದರೆ, ಆ ‘ಅಂಬ್ರೆಲ್ಲಾ’ ಸ್ಥಾನವನ್ನು ಸಂಘ ಪರಿವಾರ ಇನ್ನಷ್ಟು ಭರ್ತಿಯಾಗಿ ತುಂಬಲಿದೆ. ಆಗ, ಆಡಳಿತ ಪಕ್ಷ-ಪ್ರತಿಪಕ್ಷಗಳೆರಡೂ ಸಂಘ ಪರಿವಾರದ್ದೇ ಅಂಶಗಳಾಗಿರುವ ದಿನಗಳು ಬರಲಾರವು ಎಂದು ಹೇಳುವಂತಿಲ್ಲ. ಪ್ರಸ್ತುತವೆನ್ನಿಸುವ ರಾಜಕೀಯ ಚಳವಳಿ ಆಗಿ ಉಳಿಯುವಲ್ಲಿ ಕಾಂಗ್ರೆಸ್‌ನ ದೌರ್ಬಲ್ಯವೇ ಸಂಘ ಪರಿವಾರದ ಶಕ್ತಿ ಆಗಲಿದೆ. 2014ರಿಂದ ಈಚೆಗೆ, ಸುಮಾರು 8,000ಕ್ಕೂ ಮಿಕ್ಕಿ ಮೂಲ ಕಾಂಗ್ರೆಸ್ ಮಂದಿ, ಈಗ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ ಎಂಬ ವರದಿ ಇತ್ತೀಚೆಗೆ ಎಲ್ಲೋ ಓದಿದ್ದೆ. ಈ ಚುನಾವಣೆಯಲ್ಲಿ, ಬಿಜೆಪಿಯಿಂದ ಸ್ಪರ್ಧಿಸಿರುವ 417 ಅಭ್ಯರ್ಥಿಗಳಲ್ಲಿ 116 ಮಂದಿ (ಶೇ.28) ಬೇರೆ ರಾಜಕೀಯ ಪಕ್ಷಗಳಿಂದ ಬಿಜೆಪಿಗೆ ಬಂದಿರುವವರು! ನೆನಪಿಡಿ: ಬಿಜೆಪಿಯಲ್ಲಿ ಈಗ ಮೂಲ ಪರಿವಾರದ ಬಿಜೆಪಿ ಮತ್ತು ಪಕ್ಷಾಂತರಿ ಬಿಜೆಪಿ ಎರಡೂ ಬಲಾಢ್ಯ!!