ನೈಜ ಪರ್ಯಾಯ ಇಲ್ಲದ ಅನಿವಾರ್ಯ ಸ್ಥಿತಿ
ನಾವು ಅದೇ ಹಳೆಯ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬ ಸವಕಲು ವಾದ ಮುಂದಿಡುವುದರಲ್ಲಿ ಅರ್ಥವಿಲ್ಲ. ಉದಾಹರಣೆಗೆ, ಕರ್ನಾಟಕವನ್ನು ತೆಗೆದುಕೊಂಡರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಲೋಪಗಳನ್ನು ದೊಡ್ಡದು ಮಾಡುತ್ತ ಹೋದರೆ ಪರ್ಯಾಯವಾಗಿ ನಿಲ್ಲುವುದು ಎಡಪಂಥೀಯ ಪಕ್ಷಗಳು, ದಲಿತ ಸಂಘರ್ಷ ಸಮಿತಿಗಳು, ರೈತಸಂಘಗಳು ಅಲ್ಲ. ಬದಲಾಗಿ ಮತ್ತೆ ಬಿಜೆಪಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬರುತ್ತದೆ. ಆವಾಗ ಮತ್ತೆ ನಾವು ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಪರವಾಗಿ ನಿಲ್ಲಲೇಬೇಕಾಗುತ್ತದೆ. ಇವೆರಡಕ್ಕೂ ಭಿನ್ನವಾದ ಪರ್ಯಾಯ ರೂಪಿಸುವಲ್ಲಿ ಎಡಪಂಥೀಯ ಪ್ರಗತಿಪರ ಶಕ್ತಿಗಳು ಯಶಸ್ವಿಯಾಗಿಲ್ಲ. ಹೀಗಿರುವಾಗ ನಾವು ಎಚ್ಚರದ ಹೆಜ್ಜೆಯನ್ನು ಇಡಬೇಕಾಗಿದೆ.
ಇದು ಅಚ್ಚರಿಯ ಸಂಗತಿ ಅಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿರುವಾಗ ತನ್ನ ಸೈದ್ಧಾಂತಿಕ ಮಾರ್ಗದರ್ಶಿ ಸಂಘಟನೆಯ ಬಗ್ಗೆ ಮಮತೆ ತೋರಿಸುವುದು ಸಹಜ. ಬಿಜೆಪಿ ಎಂಬುದು ಮೇಲ್ನೋಟಕ್ಕೆ ಸ್ವತಂತ್ರ ರಾಜಕೀಯ ಪಕ್ಷವಾಗಿದ್ದರೂ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ರಾಜಕೀಯ ವೇದಿಕೆ ಎಂಬುದು ಗುಟ್ಟಿನ ಸಂಗತಿಯಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಅಂದರೆ ಎನ್‌ಡಿಎ ಸರಕಾರವು ಆರೆಸ್ಸೆಸ್ ಸಂಘಟನೆಯ ಚಟುವಟಿಕೆಗಳಲ್ಲಿ ಸರಕಾರಿ ನೌಕರರು ಭಾಗವಹಿಸಲು ಇದ್ದ ನಿರ್ಬಂಧವನ್ನು ರದ್ದುಗೊಳಿಸಿರುವುದು ಅನಿರೀಕ್ಷಿತವಲ್ಲ. ಸರಕಾರದ ನಿರ್ಬಂಧವಿದ್ದರೂ ಅನೇಕ ಸರಕಾರಿ ನೌಕರರು, ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ಆ ಸಂಘಟನೆಯ ಜೊತೆಗೆ ಗುಟ್ಟಿನ ಸಂಬಂಧ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಭಾರತವು ವಿದೇಶಿ ಆಳ್ವಿಕೆಯಿಂದ ಮುಕ್ತವಾದ ನಂತರ ನಡೆದ ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಅದರಲ್ಲಿ ಸರಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಾರದು ಎಂಬ ಅಂಶವೂ ಸೇರಿತ್ತು. ನಂತರ ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಳ್ವಲ್ಕರ್ ಅವರು ಆಗಿನ ಗೃಹ ಸಚಿವರಿಗೆ ಕ್ಷಮಾಪಣೆ ರೂಪದ ಪತ್ರ ಬರೆದು ಇನ್ನು ಮುಂದೆ ಆರೆಸ್ಸೆಸ್ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಷರತ್ತಿಗೆ ಒಪ್ಪಿ ಅಂಕಿತ ಹಾಕಿಕೊಟ್ಟರು. ನಂತರ ರಾಜಕೀಯ ಚಟುವಟಿಕೆಗಳ ಸಲುವಾಗಿ ಒಂದು ವೇದಿಕೆ ಹುಟ್ಟು ಹಾಕಿದರು. ಅದರ ಹೆಸರು ಭಾರತೀಯ ಜನಸಂಘ. ಅದೀಗ ಭಾರತೀಯ ಜನತಾಪಕ್ಷ (ಬಿಜೆಪಿ) ಆಗಿದೆ. ಈಗ ಇರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ.
ಗಾಂಧೀಜಿಯವರ ಹತ್ಯೆಯಾದಾಗಿನ ಪರಿಸ್ಥಿತಿ ಮತ್ತು ಈಗಿನ ಸನ್ನಿವೇಶಕ್ಕೂ ಸಾಕಷ್ಟು ಅಂತರವಿದೆ. ಸ್ವಾತಂತ್ರ್ಯದ ಏಳು ದಶಕಗಳ ನಂತರ ಬಂದ ಹೊಸ ಪೀಳಿಗೆಗೆ ಗಾಂಧೀಜಿಗಿಂತ ಗೋಡ್ಸೆ ಶ್ರೇಷ್ಠ ಎಂದು ಮೆದುಳು ತೊಳೆಯುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಹೀಗಾಗಿ ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕಿದರೆ ಅಷ್ಟು ವಿರೋಧ ಬರುವುದಿಲ್ಲ. ಬೇರೆಯವರೇಕೆ, ಸರಕಾರಕ್ಕೆ ಆಸರೆಯಾಗಿ ನಿಂತ ಚಂದ್ರಬಾಬು ನಾಯ್ಡು ಮತ್ತು ಗಾಂಧಿ ಹೆಸರು ಹೇಳುವ ನಿತೀಶ್ ಕುಮಾರ್ ಬಾಯಿ ಮುಚ್ಚಿಕೊಂಡು ತೆಪ್ಪಗಿದ್ದಾರೆ. ಗಾಂಧಿ ಹತ್ಯೆಯಾದಾಗ ಉದ್ರಿಕ್ತ ಜನ ಜಂಗುಳಿ ಮುಂಬೈ, ಪುಣೆ, ಸಾಂಗಲಿಯಲ್ಲಿ ಕೋಮುವಾದಿ ಸಂಘಟನೆಗಳಿಗೆ ಸೇರಿದವರು ಮತ್ತು ಸಿಹಿ ಹಂಚಿದವರ ಮನೆಗೆ ಬೆಂಕಿ ಹಚ್ಚಿತ್ತು. ಈಗ ಗೋಡ್ಸೆ ಜಯಂತಿಯನ್ನು ಆಚರಿಸಲಾಗುತ್ತದೆ.
ಇದೆಲ್ಲ ಒಮ್ಮಲೇ ಆದ ಬೆಳವಣಿಗೆಯಲ್ಲ. ಗಾಂಧಿ ಹತ್ಯೆ ನಂತರ ಜನಸಂಘ ಸೇರಿ ಸಂಘಪರಿವಾರವನ್ನು ದೂರವಿಟ್ಟಿದ್ದರು. ರಾಜಕೀಯವಾಗಿಯಂತೂ ಅವರು ನಗಣ್ಯವಾಗಿದ್ದರು. ಅಡ್ವಾಣಿ ಅವರೇ ಇಂಥ ರಾಜಕೀಯ ಅಸ್ಪಶ್ಯತೆಯಿಂದ ಮುಕ್ತಗೊಳಿಸಿ ಎಂದು ಗೋಗರೆಯುತ್ತಿದ್ದರು. ಆದರೆ, ಎಪ್ಪತ್ತರ ದಶಕದಲ್ಲಿ ನಡೆದ ಜೆಪಿ ಚಳವಳಿಯ ಕಾಲದಲ್ಲಿ ಸಂಘಪರಿವಾರ ಮುಂಚೂಣಿಗೆ ಬಂದು ಸಾರ್ವಜನಿಕ ಮಾನ್ಯತೆ ಪಡೆಯಲು ಸಾಧ್ಯವಾಯಿತು. ಕ್ರಮೇಣ ವಿ.ಪಿ.ಸಿಂಗ್ ಪ್ರಧಾನಿಯಾದಾಗ ಬಲ ಹೆಚ್ಚಿಸಿಕೊಂಡಿತು. ಹಿಂದುಳಿದ ವರ್ಗಗಳಿಗಾಗಿ ಮೀಸಲಾತಿ ನೀಡುವ ಮಂಡಲ ವರದಿಯನ್ನು ಜಾರಿಗೆ ತರಲು ಹೊರಟಾಗ ಅದಕ್ಕೆ ಎದುರಾಗಿ ಮಂದಿರ ಅಸ್ತ್ರವನ್ನು ಪ್ರಯೋಗಿಸಿದ ಅಡ್ವಾಣಿ ಗುಜರಾತ್‌ನ ಸೋಮನಾಥದಿಂದ ರಥಯಾತ್ರೆ ಹೊರಟರು. ಈ ರಥವನ್ನು ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ತಡೆದು ನಿಲ್ಲಿಸಿದರು. ಆದರೆ, ಕೋಮು ಉನ್ಮಾದ ಕೆರಳಿಸುವಲ್ಲಿ ಆ ರಥಯಾತ್ರೆ ಯಶಸ್ವಿಯಾಯಿತು. ಲೋಕಸಭೆಯಲ್ಲಿ ಕೇವಲ ಇಬ್ಬರಿದ್ದ ಬಿಜೆಪಿ ಸದಸ್ಯರ ಸಂಖ್ಯೆ ಎಂಬತ್ತಕ್ಕೆ ಏರಿತು. ಕ್ರಮೇಣ ಕೇಂದ್ರದ ಅಧಿಕಾರ ಸೂತ್ರವನ್ನೇ ಹಿಡಿದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮೊದಲ ಬಾರಿ ಎನ್‌ಡಿಎ ಸರಕಾರ ರಚನೆಯಾದಾಗಲೇ ಶಿಕ್ಷಣದ ಕೇಸರೀಕರಣದಂಥ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದವು. ನೆಹರೂ ಕಾಲದಲ್ಲಿ ರಾಜಕೀಯಕ್ಕೆ ಬಂದ ವಾಜಪೇಯಿ ಸಂಘದ ನಿಷ್ಠಾವಂತ ಸ್ವಯಂ ಸೇವಕರಾದರೂ ಆಕ್ರಮಣಕಾರಿಯಾಗಿ ವರ್ತಿಸಲಿಲ್ಲ. ಆದರೆ, ಈ ನಿಧಾನ ಗತಿ ನಾಗಪುರದ ಸಂಘದ ಗುರುಗಳಿಗೆ ಇಷ್ಟವಾಗಲಿಲ್ಲ. ವಾಜಪೇಯಿ ನಾಯಕತ್ವ ಬದಲಾವಣೆ ಮಾತು ಆಗಿನ ಸಂಘದ ಸರ ಸಂಘಚಾಲಕ ಸುದರ್ಶನರ ಬಾಯಿಯಿಂದ ಬಂತು. ಅಷ್ಟರೊಳಗೆ ಆರೆಸ್ಸೆಸ್ ತನ್ನ ಜಾಲ ವಿಸ್ತರಿಸಿಕೊಂಡು ಕೋಮು ಉನ್ಮಾದ ಕೆರಳಿಸುವ ಕಾರ್ಯವನ್ನು ಸದ್ದಿಲ್ಲದೇ ಆರಂಭಿಸಿತ್ತು. ಗಾಂಧೀಜಿ ಮತ್ತು ನೆಹರೂ ಅವರ ತೇಜೋವಧೆ, ಗೋಡ್ಸೆ, ಸಾವರ್ಕರ್ ವೈಭವೀಕರಣ, ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳು ಎಲ್ಲವೂ ಶುರುವಾದವು. ಗುಜರಾತಿನಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ಮಾಡಿ ದಕ್ಕಿಸಿಕೊಂಡ ವ್ಯಕ್ತಿ ಪ್ರಧಾನಿಯಾದರು. ಅವರು ಪ್ರಧಾನಿಯಾದ ನಂತರ ಪ್ರತಿರೋಧದ ಧ್ವನಿ ಹತ್ತಿಕ್ಕುವ ಕಾರ್ಯ ವ್ಯಾಪಕವಾಗಿ ಆರಂಭವಾಯಿತು.ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನೇ ಜೈಲಿಗೆ ತಳ್ಳಲು ಜಾರಿ ನಿರ್ದೇಶನಾಲಯವನ್ನು ಬಳಸಿಕೊಳ್ಳಲಾಯಿತು. ಹೆಸರಾಂತ ಚಿಂತಕರನ್ನು, ಕಲಾವಿದರನ್ನು ನಗರ ನಕ್ಸಲರೆಂದು ಸುಳ್ಳು ಆರೋಪಿಸಿ ಸೆರೆಮನೆಗೆ ದೂಡಲಾಯಿತು. ಅಂತಿಮವಾಗಿ ಪ್ರಜಾಪ್ರಭುತ್ವದ ಬುಡಕ್ಕೆ ಗಂಡಾಂತರ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಹೇಳಿದಂತೆ 400 ಸ್ಥಾನಗಳನ್ನು ಗೆದ್ದಿದ್ದರೆ ಪರಿಸ್ಥಿತಿ ಇನ್ನೂ ಭಯಾನಕವಾಗುತ್ತಿತ್ತು. ಆದರೂ ಅಪಾಯ ತಪ್ಪಿಲ್ಲ.
ನಾನು ಕಳೆದ 45 ವರ್ಷಗಳಿಂದ ಬರೆಯುತ್ತಿದ್ದೇನೆ. ನನ್ನ ಬರಹಗಳಲ್ಲಿ ಶೇಕಡಾ ತೊಂಭತ್ತು ಭಾಗ ಕೋಮುವಾದದ ವಿರೋಧಿ ಬರಹಗಳಾಗಿವೆ. ನನ್ನಂತೆ ದೇಶದ ಸಾವಿರಾರು ಜನ ಲೇಖಕರು, ಪತ್ರಕರ್ತರು ಬರೆಯುತ್ತಿದ್ದಾರೆ. ಆದರೆ, ಏನೇ ಬರೆದರೂ ಪರಿಸ್ಥಿತಿ ಕೈ ಮೀರಿದೆ.
ಈಗ ಚುನಾವಣೆಯ ಗೆಲುವು ಮಾತ್ರವಲ್ಲ, ಆಡಳಿತಾಂಗ, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯಲ್ಲಿ ಬಹುದೊಡ್ಡ ಪ್ರಮಾಣದ ಸಂಘದ ಸ್ವಯಂ ಸೇವಕರ ಒಳ ನುಸುಳುವಿಕೆ ಆಗಿದೆ. ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೇಲಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ. ಚುನಾವಣಾ ಆಯೋಗ, ಸಿಬಿಐ, ಈ.ಡಿ., ಐಬಿ, ರಾಷ್ಟ್ರೀಯ ತನಿಖಾ ದಳಗಳಂಥ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ಫ್ಯಾಶಿಸಮ್ ಅಪಾಯ ತಪ್ಪಿಲ್ಲ.
ಆರೆಸ್ಸೆಸ್ ತನ್ನ ತಂತ್ರಗಳನ್ನು ಬದಲಿಸಿಕೊಂಡಿದೆ. ಅದರ ವ್ಯಾಪ್ತಿ ವಿಸ್ತಾರಗೊಂಡಿದೆ. ನಾವು ಅದನ್ನು ಇಂದಿಗೂ 50 ವರ್ಷಗಳ ಹಿಂದಿನ ಹಳೆಯ ಕಥಾನಕಗಳ ಮೂಲಕ ಎದುರಿಸುತ್ತಿದ್ದೇವೆ. ಬ್ರಾಹ್ಮಣರನ್ನು ಬಯ್ದು, ಲೇವಡಿ ಮಾಡುವ ಮೂಲಕ ಶೂದ್ರ, ದಲಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಹಳೆಯ ತಂತ್ರ ಈಗ ಕೆಲಸಕ್ಕೆ ಬರುವುದಿಲ್ಲ. ಸಂಘಪರಿವಾರ ಈಗ ಬ್ರಾಹ್ಮಣರ ಅಗ್ರಹಾರಗಳಲ್ಲಿ ಮಾತ್ರವಿಲ್ಲ. ಅದೀಗ ಕುರುಬರ, ಬೋವಿಗಳ, ಲಂಬಾಣಿಗಳ, ದಲಿತರ, ವಾಲ್ಮೀಕಿ ಸಮುದಾಯದ ಹೀಗೆ ಸಣ್ಣಪುಟ್ಟ ಹಿಂದುಳಿದ ಜಾತಿ, ಸಮುದಾಯಗಳ ಕೇರಿಗಳನ್ನು ಪ್ರವೇಶಿಸಿದೆ. ಲಿಂಗಾಯತರು ಮತ್ತು ಒಕ್ಕಲಿಗರ ಬಹುದೊಡ್ಡ ವಿಭಾಗ ಅವರ ಬೆಂಬಲಕ್ಕಿದೆ.
ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ ನಾವು ಅದೇ ಹಳೆಯ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬ ಸವಕಲು ವಾದ ಮುಂದಿಡುವುದರಲ್ಲಿ ಅರ್ಥವಿಲ್ಲ. ಉದಾಹರಣೆಗೆ, ಕರ್ನಾಟಕವನ್ನು ತೆಗೆದುಕೊಂಡರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಲೋಪಗಳನ್ನು ದೊಡ್ಡದು ಮಾಡುತ್ತ ಹೋದರೆ ಪರ್ಯಾಯವಾಗಿ ನಿಲ್ಲುವುದು ಎಡಪಂಥೀಯ ಪಕ್ಷಗಳು, ದಲಿತ ಸಂಘರ್ಷ ಸಮಿತಿಗಳು, ರೈತಸಂಘಗಳು ಅಲ್ಲ. ಬದಲಾಗಿ ಮತ್ತೆ ಬಿಜೆಪಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬರುತ್ತದೆ. ಆವಾಗ ಮತ್ತೆ ನಾವು ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಪರವಾಗಿ ನಿಲ್ಲಲೇಬೇಕಾಗುತ್ತದೆ. ಇವೆರಡಕ್ಕೂ ಭಿನ್ನವಾದ ಪರ್ಯಾಯ ರೂಪಿಸುವಲ್ಲಿ ಎಡಪಂಥೀಯ ಪ್ರಗತಿಪರ ಶಕ್ತಿಗಳು ಯಶಸ್ವಿಯಾಗಿಲ್ಲ. ಹೀಗಿರುವಾಗ ನಾವು ಎಚ್ಚರದ ಹೆಜ್ಜೆಯನ್ನು ಇಡಬೇಕಾಗಿದೆ.
ಶಾಸಕಾಂಗಗಳ ಮೀಸಲು ಸ್ಥಾನಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಎಲ್ಲರನ್ನೂ ಒಳಗೊಳ್ಳುವ ಆ ಮೂಲಕ ಸಮಗ್ರ ಭಾರತದ ಮೇಲೆ ಹಿಡಿತ ಸಾಧಿಸುವ ಅದರ ಯೋಜನೆಯ ಭಾಗವಾಗಿ ವನವಾಸಿ, ಉಪೇಕ್ಷಿತ ಸಂಘಟನೆಗಳು ಹುಟ್ಟಿಕೊಂಡಿವೆ. ಮುಸ್ಲಿಮ್ ಮಂಚ್ ಮಾಡಿದ್ದಾರೆ. ಇಂಥ ವಿಭಿನ್ನ ಸನ್ನಿವೇಶದಲ್ಲಿ ಹಳೆಯ ಅಸ್ತ್ರಗಳನ್ನು ಹಿಡಿದುಕೊಂಡು ಅದನ್ನು ಎದುರಿಸುವುದು ಸುಲಭವಲ್ಲ. ಅದರ ಈಗಿನ ಕಾರ್ಯಸೂಚಿ ಸಾಮಾಜಿಕ ನ್ಯಾಯದ ಧ್ವನಿ ನಾಜೂಕಾಗಿ ಅಡಗಿಸುತ್ತ ಮುಸ್ಲಿಮ್ ವಿರೋಧಿ ಉನ್ಮಾದವನ್ನು ಜೀವಂತ ಇಡುವುದಾಗಿದೆ. ಅದಕ್ಕಾಗಿ ವರ್ಣಾಶ್ರಮ ಧರ್ಮದ ಜಾತಿ ವ್ಯವಸ್ಥೆಯ ಮಾತನ್ನು ಬಹಿರಂಗವಾಗಿ ಅದು ಆಡುವುದಿಲ್ಲ. ಆಡದೇ ಅವರನ್ನು ಮುಗಿಸುತ್ತದೆ.
ಪ್ರಭುತ್ವದ ಲೋಪಗಳ ವಿರುದ್ಧ ಚಳವಳಿಯನ್ನು ಮಾಡಬಾರದೆಂದಲ್ಲ. ಚಳವಳಿಗಳಿಲ್ಲದ ಸಮಾಜ ಜೀವಂತಿಕೆ ಕಳೆದುಕೊಳ್ಳುತ್ತದೆ. ಈಗ 70ರ ದಶಕದ ದಿನಗಳಂತೆ ಚಳವಳಿಗಳ ಸ್ವರೂಪವಿಲ್ಲ. ಕೆಲವು ಹೋರಾಟಗಳು ನಡೆದರೂ ಸಾಂಕೇತಿಕ ಮಾತ್ರ, ಪ್ರಭುತ್ವದ ಮುಲಾಜಿಲ್ಲದ ಚಳವಳಿಗಾರರು ಈಗ ಬೇಕಾಗಿದ್ದಾರೆ. ಒಂದು ರಾಜಕೀಯ ಪರ್ಯಾಯ ರೂಪಿಸುವುದು ನಮ್ಮಿಂದ ಸಾಧ್ಯವಿಲ್ಲ ಎಂದಾದರೆ, ಸುಮ್ಮನೆ ಸೆಕ್ಯುಲರ್ ಪಕ್ಷಗಳ ಸರಕಾರಗಳ ಮೇಲೆ ಕಲ್ಲೆಸೆದು ಪ್ರಯೋಜನವಿಲ್ಲ.
ಈಗ ಕೇಂದ್ರದಲ್ಲಿ ಅವರ ಸರಕಾರ ಇದೆ. ತಮ್ಮ ಸಿದ್ಧಾಂತದ ತಪ್ಪೋ, ಸರಿಯೋ ಅದಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತಾರೆ. ಅವರ ಕೈಗೆ ಅಧಿಕಾರ ಕೊಟ್ಟು ಪೇಚಾಡುವುದರಲ್ಲಿ ಅರ್ಥವಿಲ್ಲ. ಆರೆಸ್ಸೆಸ್ ಸಿದ್ಧಾಂತ ಏನೆಂಬುದು ಉಳಿದವರಿಗೆ ಅಲ್ಲದಿದ್ದರೂ ಎಡಪಂಥೀಯರಿಗೆ, ಪ್ರಗತಿಪರರಿಗೆ ಗೊತ್ತಿದೆ. ಅದು ಗೊತ್ತಿದ್ದೂ ಕಾಂಗ್ರೆಸ್ ವಿರೋಧಿ ರಾಜಕಾರಣದ ಹೆಸರಿನಲ್ಲಿ ಅವರೊಂದಿಗೆ ಸೇರಿ ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಹೋರಾಟ ಮಾಡಲು ಅಣ್ಣಾ ಹಝಾರೆ ಜೊತೆಗೆ ಸೇರಿ ಚಳವಳಿ ಮಾಡಿ ಅವರ ಕೈಗೆ ಅಧಿಕಾರ ನೀಡಿದ ನಂತರ ಈಗ ಗೊಣಗಾಡುವುದರಲ್ಲಿ ಅರ್ಥವಿಲ್ಲ. ಅವರು ಅಧಿಕಾರಕ್ಕೆ ಬಂದಿರುವುದು ತಮ್ಮ ಸಿದ್ಧಾಂತದ ಅನುಷ್ಠಾನಕ್ಕೆ. ಪ್ರತಿಪಕ್ಷಗಳು ವಿಶೇಷವಾಗಿ ಎಡಪಂಥೀಯ, ಪ್ರಗತಿಪರ ಶಕ್ತಿಗಳು ಫ್ಯಾಶಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಮೊದಲ ಆದ್ಯತೆ ನೀಡಬೇಕು. ನಮ್ಮ ಪ್ರಧಾನ ಶತ್ರು ಯಾರೆಂಬುದನ್ನು ಮೊದಲು ಗುರುತಿಸಿಕೊಳ್ಳಬೇಕು.