ನಿರಂಕುಶ ಅಧಿಕಾರಕ್ಕೆ ಭಾರತದಲ್ಲಿ ಜಾಗವಿಲ್ಲ

ಒಂದೆಡೆ ಸೋಲಿನ ಮೇಲೆ ಸೋಲು ಎದುರಾಗುತ್ತಿದ್ದರೆ, ಇನ್ನೊಂದೆಡೆ ಶಿಸ್ತಿನ ಪಕ್ಷದಲ್ಲಿ ಆಂತರಿಕ ಕಚ್ಚಾಟ ಬೀದಿಗೆ ಬರುತ್ತಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಒಡೆದ ಮನೆಯಾಗಿದೆ. ಉತ್ತರ ಪ್ರದೇಶದ ಮಾದರಿ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುತ್ತಿದ್ದ ಯೋಗಿ ಆದಿತ್ಯನಾಥ್ ವಿರುದ್ಧ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರು ಸಿಡಿದೆದ್ದಿದ್ದಾರೆ.

Update: 2024-07-22 04:59 GMT

ಭಾರತದ ಜನಸಾಮಾನ್ಯರು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾದಾಗಲೆಲ್ಲ ಅದನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತ ಬಂದಿದ್ದಾರೆ. ಈ ದೇಶದಲ್ಲಿ ಜನತಂತ್ರ ಎಷ್ಟು ಭದ್ರವಾಗಿ ಬೇರೂರಿದೆ ಎಂದರೆ ಅದನ್ನು ಅಲುಗಾಡಿಸಲು ಹೊರಟವರೇ ತರಗೆಲೆಗಳಂತೆ ಹಾರಿ ಹೋಗಿದ್ದಾರೆ. ಸಂವಿಧಾನ ನಿರ್ಮಾತೃ ಬಾಬಾಸಾಹೇಬ ಅಂಬೇಡ್ಕರ್ ಮತ್ತು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರೂ ಅವರು ಅತ್ಯಂತ ಕಾಳಜಿಯಿಂದ ಪ್ರಜಾಪ್ರಭುತ್ವದ ಸಸಿಯನ್ನು ಪೋಷಿಸಿ ಬೆಳೆಸಿದರು.

ಕಳೆದ ಏಳು ದಶಕಗಳಲ್ಲಿ ಅದರ ರುಚಿಯನ್ನು ಅನುಭವಿಸಿದ ಕೋಟಿ ಕೋಟಿ ಭಾರತೀಯರಿಗೆ ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂಬುದು ಇತ್ತೀಚಿನ ಲೋಕಸಭಾ ಚುನಾವಣೆ ಹಾಗೂ ನಂತರ ನಡೆದ ಹದಿಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಿಂದ ಸ್ಪಷ್ಟವಾಗಿದೆ.

ಚುನಾವಣೆಯ ಫಲಿತಾಂಶಗಳನ್ನೇ ಬುಡಮೇಲು ಮಾಡಿ, ಸಾಮೂಹಿಕ ಪಕ್ಷಾಂತರ ಮಾಡಿಸಿ ಚುನಾಯಿತ ಸರಕಾರಗಳನ್ನು ಬದಲಿಸುವುದನ್ನೇ ಕಾಯಕ ಮಾಡಿಕೊಂಡವರಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಿದರು. ಯಾವುದೋ ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಅವನನ್ನು ನೋಡಿ ತಮ್ಮ ಪಕ್ಷಕ್ಕೆ ಮತ ಹಾಕಿ ಎಂದವರಿಗೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ನೀಡಲು ಜನ ನಿರಾಕರಿಸಿದರು. ಭಾರತದ ಜನ ಏಕ ವ್ಯಕ್ತಿ ಸರ್ವಾಧಿಕಾರವನ್ನು ಎಂದಿಗೂ ಒಪುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಕಾಂಗ್ರೆಸ್ ಮುಕ್ತ ಮಾತ್ರವಲ್ಲ, ಪ್ರತಿಪಕ್ಷ ಮುಕ್ತ ಭಾರತದ ಕನಸು ಕಂಡಿದ್ದ, ಬಹಿರಂಗವಾಗಿ ಇನ್ನೂ 50 ವರ್ಷ ಭಾರತವನ್ನು ಆಳುವುದಾಗಿ ಹೇಳುತ್ತಿದ್ದ ಬಿಜೆಪಿ ಲೋಕಸಭಾ ಚುನಾವಣೆಯ ಫಲಿತಾಂಶ ಬಂದು ಒಂದು ತಿಂಗಳ ನಂತರ ಒಡೆದ ಮನೆಯಾಗಿದೆ. ನರೇಂದ್ರ ಮೋದಿಯವರ ಏಕಚಕ್ರಾಧಿಪತ್ಯಕ್ಕೆ ಸವಾಲಾಗುವಂಥ ವಿದ್ಯಮಾನ ನಡೆಯುತ್ತಿವೆ. ಇದರ ಜೊತೆಗೆ ಇತ್ತೀಚೆಗೆ ನಡೆದ ಕೆಲ ರಾಜ್ಯಗಳ ವಿಧಾನಸಭಾ ಉಪಚುನಾವಣೆಯಲ್ಲಿ ಅದು ಮುಖಭಂಗ ಅನುಭವಿಸಿದೆ.ಈ ಉಪಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿದೆ ಹಾಗೂ ಇಂಡಿಯಾ ಮೈತ್ರಿ ಕೂಟ ಆ ಕ್ಷೇತ್ರಗಳಲ್ಲಿ ಜಯಶಾಲಿಯಾಗಿದೆ.

ವಿವಿಧ ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚಾವಣೆಗಳಲ್ಲಿ ಬಿಜೆಪಿ 10 ಸ್ಥಾನಗಳನ್ನು ಕಳೆದುಕೊಂಡಿದೆ. ಅದು ಕಳೆದುಕೊಂಡ ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಜಯಶಾಲಿಯಾಗಿದೆ.ಉತ್ತರಾ ಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ತಲಾ ಎರಡು ಸ್ಥಾನಗಳನ್ನು ಅಂದರೆ ಒಟ್ಟು ನಾಲ್ಕು ಸ್ಥಾನ ಗೆದ್ದುಕೊಂಡಿದೆ. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಎಲ್ಲ ನಾಲ್ಕೂ ಸ್ಥಾನಗಳನ್ನು ಪಡೆದುಕೊಂಡಿದೆ.ಆಮ್ ಆದ್ಮಿ ಪಕ್ಷ ಪಂಜಾಬಿನ ಜಲಂಧರ( ಪಶ್ಚಿಮ) ಕ್ಷೇತ್ರದಲ್ಲಿ ಗೆದ್ದಿದೆ. ತಮಿಳುನಾಡಿನ ಒಂದು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಎಂಕೆ ವಿಜಯ ಸಾಧಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾ ಖಂಡದಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್ ಈಗ ಅಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು, ಮತ್ತೆ ಚೇತರಿಸಿದೆ. ಧಾರ್ಮಿಕ ರಾಜಕಾರಣ ಮಾಡಿ ಜನರ ಭಾವನೆಗಳ ಮೇಲೆ ಸವಾರಿ ಮಾಡುತ್ತಿದ್ದ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಸೋಲುಂಟಾದಂತೆ ಈ ಬಾರಿ ಉತ್ತರಾ ಖಂಡದ ಇನ್ನೊಂದು ಶ್ರದ್ಧಾ ಕೇಂದ್ರ ಬದರಿನಾಥ್‌ನಲ್ಲಿ ಮುಖಭಂಗವಾಗಿದೆ.

ಈ ಫಲಿತಾಂಶಗಳಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಲೋಕಸಭಾ ಚುನಾವಣೆ ಮತ್ತು ನಂತರ ನಡೆದ ಕೆಲ ರಾಜ್ಯಗಳ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಗಮನಿಸಿದರೆ ರಾಜಕೀಯ ಗಾಳಿ ಬಿಜೆಪಿಯ ವಿರುದ್ಧ ಬೀಸುತ್ತಿದೆ. ಜನರು ಈ ಬಗ್ಗೆ ಮತಪೆಟ್ಟಿಗೆಯ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈವರೆಗೆ ಇದ್ದ ಕೋಮುವಾದಿ ಹಿಂದುತ್ವ ರಾಜಕೀಯದಿಂದ ಜನ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ಇಂಡಿಯಾದತ್ತ ಒಲವು ತೋರಿಸುತ್ತಿದ್ದಾರೆ.

ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಾ ಖಂಡ ಹಾಗೂ ಪಶ್ಚಿಮ ಬಂಗಾಳಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಇಂಡಿಯಾ ಕೂಟದ ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳನ್ನೇ ನೇರವಾಗಿ ಎದುರಿಸಿ ಗೆದ್ದಿದ್ದಾರೆ. ಇಲ್ಲಿ ಎನ್‌ಡಿಎ ಅಪ್ರಸ್ತುತ. ಬಿಜೆಪಿ ನೆಲೆ ಕಳೆದುಕೊಳ್ಳುವುದರ ಸೂಚನೆ ಇದು.

ಒಂದೆಡೆ ಸೋಲಿನ ಮೇಲೆ ಸೋಲು ಎದುರಾಗುತ್ತಿದ್ದರೆ, ಇನ್ನೊಂದೆಡೆ ಶಿಸ್ತಿನ ಪಕ್ಷದಲ್ಲಿ ಆಂತರಿಕ ಕಚ್ಚಾಟ ಬೀದಿಗೆ ಬರುತ್ತಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಒಡೆದ ಮನೆಯಾಗಿದೆ. ಉತ್ತರ ಪ್ರದೇಶದ ಮಾದರಿ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುತ್ತಿದ್ದ ಯೋಗಿ ಆದಿತ್ಯನಾಥ್ ವಿರುದ್ಧ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರು ಸಿಡಿದೆದ್ದಿದ್ದಾರೆ. ಈ ಜಗಳ ಈಗ ದಿಲ್ಲಿಗೆ ಬಂದಿದ್ದು, ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿಯವರು ಇವರಿಬ್ಬರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಶವ ಪ್ರಸಾದ್ ಮೌರ್ಯ ಅವರು, ‘ಸರಕಾರಕ್ಕಿಂತ ಪಕ್ಷ ದೊಡ್ಡದು. ಸಂಘಟನೆಗಿಂತ ಯಾರೂ ದೊಡ್ಡವರಲ್ಲ’ ಎಂದು ಆದಿತ್ಯನಾಥರನ್ನು ಉದ್ದೇಶಿಸಿ ಬಹಿರಂಗವಾಗಿ ಟೀಕಿಸಿದರು. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಆದಿತ್ಯನಾಥ್ ಕಾರ್ಯ ಶೈಲಿ ಕಾರಣ ಎಂದು ಅನೇಕ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.

ವಾಸ್ತವವಾಗಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ನಂತರ ಸರಕಾರ ರಚಿಸುವಾಗ ಕೇಶವ ಪ್ರಸಾದ್ ಮೌರ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲು ನರೇಂದ್ರ ಮೋದಿ ಬಯಸಿದ್ದರು. ಆದರೆ ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತರು ಮಧ್ಯಪ್ರವೇಶ ಮಾಡಿ ಪಟ್ಟು ಹಿಡಿದು ಆದಿತ್ಯನಾಥ್‌ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು.

ನರೇಂದ್ರ ಮೋದಿಯವರಿಗೂ ಆದಿತ್ಯನಾಥ್ ಮುಖ್ಯಮಂತ್ರಿ ಆಗುವುದು ಇಷ್ಟವಿರಲಿಲ್ಲ. ಹೀಗಾಗಿ ಈ ಗುಂಪುಗಾರಿಕೆ ಬಳಸಿಕೊಂಡು ಮೋದಿಯವರು ಆದಿತ್ಯನಾಥರನ್ನು ಎತ್ತಂಗಡಿ ಮಾಡಿದರೂ ಅಚ್ಚರಿಯಿಲ್ಲ.

ಕರ್ನಾಟಕದಲ್ಲೂ ಬಿಜೆಪಿ ಒಡೆದ ಮನೆಯಾಗಿದೆ. ಅಶೋಕ್‌ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಹಾಗೂ ವಿಜಯೇಂದ್ರರನ್ನು ರಾಜ್ಯ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಿರುವ ಬಗ್ಗೆ ಪಕ್ಷದ ಹಿರಿಯ ನಾಯಕರಲ್ಲಿ ಅಸಮಾಧಾನವಿದೆ. ಶಾಸಕ ಬಸನಗೌಡ ಪಾಟೀಲ್ ಯತಾಳ್ ಅವರಂತೂ ವಿಧಾನಸಭಾ ಅಧಿವೇಶನದಲ್ಲೇ ಇದನ್ನು ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಾಯಕತ್ವದ ವಿರುದ್ಧ ಬಿಜೆಪಿಯೊಳಗೆ ಎಲ್ಲೆಡೆ ಅಸಮಾಧಾನ ಹೊಗೆಯಾಡುತ್ತಿದೆ. ಇದು ತಾರಕಕ್ಕೇರಿದರೆ, ಬಿಜೆಪಿ ಭವಿಷ್ಯಕ್ಕೆ ಕತ್ತಲು ಕವಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸನತ್ ಕುಮಾರ ಬೆಳಗಲಿ

contributor

Similar News