ಇಂಚಗೇರಿ ಮಠದ ಮೇಲೆ ಭಾಗವತರ ಕಣ್ಣು
ಕೆಲ ವರ್ಷಗಳ ಹಿಂದೆ ಲಿಂಗಾಯತ ಮಠಗಳನ್ನು ಕೋಮುವಾದಿ ಕಾರ್ಯಸೂಚಿಗೆ ಬಳಸಿಕೊಳ್ಳುವ ಹುನ್ನಾರ ನಡೆದಿತ್ತು. ಆದರೆ,ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಅದನ್ನು ಬಲವಾಗಿ ವಿರೋಧಿಸಿ ತಡೆಗಟ್ಟಿದರು. ಆಗ ತೋಂಟದಾರ್ಯ ಶ್ರೀಗಳನ್ನೇ ಪೀಠದಿಂದ ಎತ್ತಂಗಡಿ ಮಾಡುವ ಮಸಲತ್ತು ನಡೆಯಿತು. ಆದರೆ, ಭಕ್ತರು ಸ್ವಾಮಿಗಳ ಪರವಾಗಿ ಗಟ್ಟಿಯಾಗಿ ನಿಂತರು. ಹೀಗಾಗಿ ಅದು ಸಾಧ್ಯವಾಗಲಿಲ್ಲ. ಈಗಲೂ ಇಂಚಗೇರಿ ಮಠವನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಭಾಗವತರಿಗೆ ಗೊತ್ತಿದೆ.
ದತ್ತಾತ್ರೇಯ ರಾಮಚಂದ್ರ ರಾನಡೆ ನಮ್ಮ ಜಮಖಂಡಿಯವರು. ಇವರದು ಭಾರತದ ಅವೈದಿಕ ತತ್ವಶಾಸ್ತ್ರದ ಪರಂಪರೆಯಲ್ಲಿ ಬಹುದೊಡ್ಡ ಹೆಸರು. ಇವರು 1886ರ ಜುಲೈ 3ರಂದು ಜಮಖಂಡಿಯಲ್ಲಿ ಜನಿಸಿದರು. ತಮ್ಮ 15ನೇ ವಯಸ್ಸಿನಲ್ಲಿ ಇಂಚಗೇರಿ ಸಂಪ್ರದಾಯದ ಉಮದಿಯ ಭಾವು ಸಾಹೇಬ ಮಹಾರಾಜರಿಂದ ದೀಕ್ಷೆ ಪಡೆದು ನಾಮಧಾರಿಯಾದರು. ಮುಂದೆ ಉನ್ನತ ಶಿಕ್ಷಣ ಪಡೆದು ಅಲಹಾಬಾದ್ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಮುಂದೆ ಅದೇ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಕ್ರಮೇಣ ಅಧ್ಯಾತ್ಮದತ್ತ ಒಲವು ತೋರಿದ ಇವರು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಎಂಬ ಹಳ್ಳಿಯಲ್ಲಿ ನೆಲೆಸಿದರು.
ರಾನಡೆ ಅವರಿಗೆ ಅಧ್ಯಾತ್ಮ ಮತ್ತು ತತ್ವಶಾಸ್ತ್ರದಲ್ಲಿ ಒಲವು ಇತ್ತು. ಆದರೆ, ಯಾವುದೇ ಧರ್ಮದ ಕಂದಾಚಾರ ಅವರು ಒಪ್ಪಿದವರಲ್ಲ.ರಾನಡೆಯವರು ಮನುಷ್ಯರನ್ನು ಹಿಂದೂ, ಮುಸ್ಲಿಮ್, ಕ್ರೈಸ್ತ, ಆ ಜಾತಿ, ಈ ಜಾತಿ ಎಂದೂ ಪ್ರತ್ಯೇಕಿಸಿ ನೋಡಲಿಲ್ಲ. ‘ಒಬ್ಬ ದಾರ್ಶನಿಕ ತನ್ನ ಆಧ್ಯಾತ್ಮಿಕ ಅನುಭವಗಳ ಬಗ್ಗೆ ಮಾತಾಡುವಾಗ ಆತ ಹಿಂದೂ, ಮುಸ್ಲಿಮ್, ಕ್ರೈಸ್ತ ನಲ್ಲ. ಕೇವಲ ಆಧ್ಯಾತ್ಮಿಕ ಜಗತ್ತಿನ ಪ್ರಜೆ’ ಎಂದು ರಾನಡೆ ಹೇಳುತ್ತಿದ್ದರು.
ಇಂಥ ರಾನಡೆಯವರ ನಿಂಬಾಳ ಆಶ್ರಮಕ್ಕೆ ಇತ್ತೀಚೆಗೆ ಆರೆಸ್ಸೆಸ್ ಸರ ಸಂಘಚಾಲಕ ಮೋಹನ್ ಭಾಗವತ ಅವರು ದಿಢೀರನೇ ಬಂದು ಅಲ್ಲಿ ತಂಗಿ ಇಂಚಗೇರಿ ಮಠಕ್ಕೂ ಬಂದು ಹೋದರು. ಮಹಾರಾಷ್ಟ್ರದ ಸಂತ ತುಕಾರಾಮ ಮತ್ತು ವಾರಕರಿ ಪ್ರಭಾವದಿಂದ ರೂಪುಗೊಂಡ ಇಂಚಗೇರಿ ಭಕ್ತಿ ಸಂಪ್ರದಾಯ ಜಾತ್ಯತೀತೆಗೆ ಹೆಸರಾಗಿದೆ. ಇಂಥ ಉದಾರವಾದಿ ಪರಂಪರೆಯ ಮಠಗಳನ್ನು ತಮ್ಮ ಕೋಮುವಾದಿ ಹಿಂದುತ್ವದ ಗೂಟಕ್ಕೆ ಕಟ್ಟಿ ಹಾಕಿ ಬಳಸಿ ಕೊಳ್ಳುವುದು ಕೋಮುವಾದಿಗಳ ಮಸಲತ್ತು. ಒಂದು ಕಾಲದಲ್ಲಿ ಕುವೆಂಪು ಅವರಂಥವರಿಗೆ ವೈಚಾರಿಕ ಪ್ರೇರಣೆ ನೀಡಿದ ರಾಮಕೃಷ್ಣ ಆಶ್ರಮಗಳಲ್ಲಿ ನುಸುಳಿ ದಾರಿ ತಪ್ಪಿಸಿದವರು, ಇಂಚಗೇರಿ ಸಂಪ್ರದಾಯದ ವಾರಸುದಾರರಾಗಲು ಹೊರಟಿದ್ದಾರೆ.
ರಾನಡೆಯವರಂಥ ಶ್ರೇಷ್ಠ ತತ್ವಜ್ಞಾನಿಗಳನ್ನು ಹೊಂದಿದ ಇಂಚಗೇರಿ ಮಠ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದೆ. ಈ ಜಾತ್ಯತೀತ ಆಧ್ಯಾತ್ಮಿಕ ಸಂಪ್ರದಾಯಕ್ಕೆ ಹೊಸ ರೂಪು ನೀಡಿದ ಮಹಾದೇವರು ಮುರಗೋಡ ಅವರು ಸಾವಿರಾರು ಅಂತರ್ಜಾತಿಯ , ಅಂತರ್‌ಧರ್ಮೀಯ ಮದುವೆಗಳನ್ನು ಮಾಡಿದವರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಜೈಲಿಗೂ ಹೋಗಿ ಬಂದ ದೇವರಿಗೆ ಕೋಮುವಾದಿ ಸಂಘ ಪರಿವಾರದವರನ್ನು ಕಂಡರೆ ಆಗುತ್ತಿರಲಿಲ್ಲ. ಅವರು ಬದುಕಿರುವವರೆಗೆ ಗಾಂಧಿ ಹಂತಕ ಪರಿವಾರದವರಿಗೆ ಮಠದಲ್ಲಿ ಪ್ರವೇಶ ವಿರಲಿಲ್ಲ. ಈಗ ಅವರು ಬದುಕಿದ್ದರೆ ಭಾಗವತರು ಇಂಚಗೇರಿಗೆ ಇಷ್ಟು ಸುಲಭವಾಗಿ ಬಂದು ಹೋಗುತ್ತಿರಲಿಲ್ಲ. ಆದರೆ, ಈಗಿನ ರೇವಣಸಿದ್ದ ಮಹಾರಾಜರು ವೈಯಕ್ತಿಕವಾಗಿ ಸಂಭಾವಿತರು. ಸೌಮ್ಯಜೀವಿ ಎಂದೇ ಮಠಕ್ಕೆ ತಾನಾಗಿ ಬಂದ ಭಾಗವತರನ್ನು ಬರಮಾಡಿಕೊಂಡರು.ಇದು ಮಠದ ಜಾತ್ಯತೀತ ಪರಂಪರೆಯ ಭಕ್ತರಲ್ಲಿ ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.
ಇಂಚಗೇರಿ ಮಠ ಯಾವುದೇ ಜಾತಿ, ಮತಕ್ಕೆ ಸೇರಿದ ಮಠವಲ್ಲ. ಯಾವುದೇ ಧಾರ್ಮಿಕ ಸಂಕೇತಗಳನ್ನು ಮಠದ ಅನು ಯಾಯಿಗಳು ಧರಿಸುವುದಿಲ್ಲ. ಇದು ನಾಥ ಮತ್ತು ಸಂತ ಪರಂಪರೆಗೆ ಸೇರಿದ ಮಠ. ಮುಸಲ್ಮಾನರು ಸೇರಿ ಎಲ್ಲ ಸಮುದಾಯಗಳ ಜನ ಈ ಮಠಕ್ಕೆ ನಡೆದುಕೊಳ್ಳುತ್ತಾರೆ.ಜೈನ ಸಮುದಾಯಕ್ಕೆ ಸೇರಿದ ನಮ್ಮ ಮನೆಯ ಹಿರಿಯರು ಕೂಡ ಈ ಮಠದ ಅನುಯಾಯಿಗಳು. ಹೀಗಾಗಿ ಬಾಲ್ಯದಲ್ಲಿ ಈ ಮಠದ ಹಿಂದಿನ ಗುರುಗಳಾದ ಮಹಾದೇವರ ಪ್ರಭಾವದಲ್ಲಿ ನಾನು ಬೆಳೆದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆಯವರ ಜೊತೆಗೆ ನಾಸಿಕ್ ಜೈಲಿನಲ್ಲಿದ್ದ ಮಹಾದೇವಪ್ಪ ಅವರನ್ನು ನೋಡಲು ಕರ್ನಾಟಕದ ವಿವಿಧ ಭಾಗಗಳಿಂದ ಬರುತ್ತಿದ್ದ ಜನ ಇವರನ್ನು ‘ದೇವರು’ ಎಂದು ಕರೆಯುತ್ತಿದ್ದರು. ಅದನ್ನು ಕೇಳಿ ಡಾಂಗೆಯವರು ‘ದೇವರು’ ಎಂದು ಕರೆಯತೊಡಗಿದರಂತೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೊತೆಗೂ ದೇವರಿಗೆ ಸಂಪರ್ಕ ಇತ್ತೆಂದು ಹೇಳುವುದನ್ನು ಕೇಳಿದ್ದೇನೆ. ಆದರೆ ಖಚಿತವಾಗಿ ಗೊತ್ತಿಲ್ಲ.
ಇಂಚಗೇರಿ ಮಠದಲ್ಲಿ ವರ್ಷದಲ್ಲಿ 3 ರಿಂದ 4 ಸಪ್ತಾಹಗಳು ನಡೆಯುತ್ತವೆ. ಇದಕ್ಕೆ ಸಾವಿರಾರು ಜನ ಬರುತ್ತಾರೆ. 3 ರಿಂದ 4 ದಿನ ಇಂಚಗೇರಿ ಮಠದಲ್ಲಿ ಉಳಿದು ಆಧ್ಯಾತ್ಮಿಕ ಪ್ರವಚನ, ಧ್ಯಾನ, ಶ್ರಮದಾನದಲ್ಲಿ ತೊಡಗುತ್ತಾರೆ.ಇಂಥ ಆಧ್ಯಾತ್ಮಿಕ ಸಪ್ತಾಹಗಳಿಗೆ ಮಹಾದೇವರು ಕಮ್ಯುನಿಸ್ಟ್ ನಾಯಕರಾದ ಎನ್.ಕೆ.ಉಪಾಧ್ಯಾಯ, ಎನ್.ಎಲ್.ಉಪಾಧ್ಯಾಯ, ಎ.ಜೆ.ಮುಧೋಳ, ಸೂರ್ಯನಾರಾಯಣ ರಾವ್, ಆಗಿನ ಸಚಿವ ಬಸವಲಿಂಗಪ್ಪ, ಕೆ.ಎಚ್.ರಂಗನಾಥ ಅವರನ್ನು ಉಪನ್ಯಾಸಕ್ಕೆ ಆಹ್ವಾನಿಸುತ್ತಿದ್ದರು. ಆದರೆ, ಕೋಮುವಾದಿ ಸಂಘಟನೆ ಹಾಗೂ ಪಕ್ಷಗಳಿಗೆ ಪ್ರವೇಶ ಇರಲಿಲ್ಲ. ನಾನು ಬಾಲ್ಯದಲ್ಲಿ ಇಂಚಗೇರಿ ಮಠಕ್ಕೆ ಬರುತ್ತಿದ್ದ ಕಮ್ಯುನಿಸ್ಟ್ ನಾಯಕರ ಭಾಷಣಗಳನ್ನು ಕೇಳಿ ಮಾರ್ಕ್ಸ್ಸ್‌ವಾದಿ ಆಲೋಚನಾ ಕ್ರಮವನ್ನು ರೂಪಿಸಿಕೊಂಡೆ.
ಬಾಲ್ಯದಲ್ಲಿ ನಾನು ತಿಳುವಳಿಕೆ ಇಲ್ಲದ ವಯಸ್ಸಿನಲ್ಲಿ ಮಿತ್ರರ ಒಡನಾಟದಿಂದ ಆರೆಸ್ಸೆಸ್ ಶಾಖೆಗೆ ಹೋದಾಗ ನಮ್ಮ ಮನೆಯವರು ಬೈದು ಅಲ್ಲಿ ಹೋಗಬಾರದು ಎಂದು ಹೇಳಿದರು. ಇದು ಅಲ್ಲಿಗೆ ಮುಗಿಯದೇ ನಮ್ಮ ಸೋದರ ಮಾವಂದಿರಾದ ಭೂಪಾಲ ನಾಂದ್ರೇಕರ ಮತ್ತು ಧನವಂತ ಹಳಿಂಗಳಿಯವರು ಇಂಚಗೇರಿ ಮಠದ ಮಹಾದೇವರಿಗೆ ಹೋಗಿ ಹೇಳಿದರು. ಅವರು ನನ್ನನ್ನು ಕರೆಯಿಸಿ ಕೋಮುವಾದಿ ಸಂಘದ ಶಾಖೆಗೆ ಯಾಕೆ ಹೋಗಬಾರದು? ಗಾಂಧಿ ಹತ್ಯೆ ಪ್ರಕರಣ ಎಲ್ಲವನ್ನೂ ಪ್ರೀತಿಯಿಂದ ಮನವರಿಕೆ ಮಾಡಿದರು.ಆ ನಂತರ ನಾನು ಆ ಕಡೆ ಹೋಗಲಿಲ್ಲ.
ಮಹಾದೇವರು ತಮ್ಮ ಜೀವಿತಾವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಅಂತರ್ಜಾತೀಯ ಮತ್ತು ಅಂತರ್ ಧರ್ಮೀಯ ಮದುವೆಗಳನ್ನು ಮಾಡಿಸಿದರು. ಲಿಂಗಾಯತ, ಮುಸ್ಲಿಮ್, ಮರಾಠಾ, ಕುರುಬ, ಜೈನ ಹೀಗೆ ಮಹಾದೇವರು ಮಾಡಿದ ಸಾವಿರಾರು ಮದುವೆಗಳು ಯಶಸ್ವಿಯಾಗಿವೆ. ಈಗಲೂ ಮಠದಲ್ಲಿ ಆ ಪರಂಪರೆ ಮುಂದುವರಿದಿದೆ. ಇತ್ತೀಚೆಗೆ ಭಾಗವತರು ಬರುವ ನಾಲ್ಕು ದಿನಗಳ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಚಗೇರಿ ಮಠಕ್ಕೆ ಬಂದು ನೂತನವಾಗಿ ನಿರ್ಮಿಸಿದ ಮಹಾದೇವರ ದೇವಾಲಯವನ್ನು ಉದ್ಘಾಟಿಸಿದ್ದರು. ಮಹಾದೇವರು ಎಂದೂ ಗುಡಿ,ಗುಂಡಾರ ಕಟ್ಟಲಿಲ್ಲ. ಮನಸ್ಸುಗಳನ್ನು ಬೆಸೆದರು. ಆದರೆ, ಅವರ ಭಕ್ತರು ಅವರಿಗಾಗಿ ಗುಡಿ ನಿರ್ಮಿಸಿದ್ದಾರೆ.
ಇಂಥ ಅವೈದಿಕ, ಸಂತ ಪರಂಪರೆಯ ನಿಂಬಾಳಕ್ಕೆ ಬಂದ ಮೋಹನ್ ಭಾಗವತರು 3 ರಿಂದ 4 ದಿನ ಅಲ್ಲಿ ವಾಸ್ತವ್ಯ ಮಾಡಿದರು. ಹತ್ತಿರದಲ್ಲೇ ಇದ್ದ ಇಂಚಗೇರಿ ಮಠಕ್ಕೂ ಭೇಟಿ ನೀಡಿದರು. ಇವರು ಯಾವ ಮಠಕ್ಕೆ ಹೋಗಿ ಏನೇನು ಅನಾಹುತ ಮಾಡಿದ್ದಾರೆ ಎಂಬುದರ ಅರಿವು ಇಂಚಗೇರಿ ಮಠದ ಈಗಿನ ನೇತೃತ್ವ ವಹಿಸಿರುವ ಶ್ರೀ ರೇವಣಸಿದ್ಧ ಮಹಾರಾಜರಿಗೆ ಇಲ್ಲದೇ ಇಲ್ಲ. ಆದರೆ, ತಾನಾಗಿ ಮಠಕ್ಕೆ ಬರುತ್ತೇನೆಂದವರಿಗೆ ಬೇಡ ಅನ್ನಬಾರದು ಎಂದು ಬರಮಾಡಿಕೊಂಡರು. ಉಳಿದ ಮಠಗಳಂತೆ ಇಂಚಗೇರಿ ಮಠವನ್ನು ಜೀರ್ಣಿಸಿಕೊಳ್ಳುವುದು ಭಾಗವತರಿಗೆ ಸುಲಭವಲ್ಲ. ಆ ರೀತಿ ಸಂಬಂಧ ಗಳನ್ನು ಮಹಾದೇವರು ಬೆಸೆದು ಹೋಗಿದ್ದಾರೆ.
ಮಹಾದೇವರ ನಂತರ ಬಂದ ಗುರುಪುತ್ರಪ್ಪ ಮಹಾರಾಜರು (ಮುರಗೋಡ) ಕೂಡ ನೂರಾರು ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳನ್ನು ಮಾಡಿದರು.ಅವರ ಕಾಲದಲ್ಲಿ (90ರ ದಶಕ) ಅಯೋಧ್ಯೆಯ ವಿವಾದ ಭುಗಿಲೆದ್ದಿತ್ತು. ಆಗ ಬಿಜಾಪುರ ಜಿಲ್ಲೆಯ ಕೋಮುವಾದಿ ಸಂಘಟನೆಗಳು ಏಕಾಏಕಿ ಪತ್ರಿಕಾ ಹೇಳಿಕೆ ನೀಡಿ ‘ಇಂಚಗೇರಿ ಮಠದಿಂದ ಅಯೋಧ್ಯೆಯ ಮಂದಿರ ನಿರ್ಮಾಣ ಬೆಂಬಲಾರ್ಥ ಇಟ್ಟಿಗೆ ಮೆರವಣಿಗೆ ನಡೆಯುತ್ತದೆ’ ಎಂದು ಪ್ರಕಟಿಸಿದರು. ಇದರಿಂದ ಕೋಪದಿಂದ ಕೆಂಡವಾದ ಗುರುಪುತ್ರಪ್ಪ ಮಹಾರಾಜರು, ‘ನಮ್ಮ ಮಠದಲ್ಲಿ ಕೋಮುವಾದಿಗಳಿಗೆ ಪ್ರವೇಶವಿಲ್ಲ. ಯಾವುದೇ ಯಾತ್ರೆ ಇಲ್ಲಿಂದ ಹೊರಡುವುದಿಲ್ಲ’ ಎಂದು ಪತ್ರಿಕಾ ಹೇಳಿಕೆ ನೀಡಿ ಕೋಮುವಾದಿಗಳ ಬಾಯಿ ಮುಚ್ಚಿಸಿದರು. ಮಠದಿಂದ ಪ್ರತಿ ವರ್ಷ ಕಲಬುರಗಿ ಮುಂತಾದ ಕಡೆ ಭಾವೈಕ್ಯತಾ ಯಾತ್ರೆ ಆರಂಭಿಸಿದರು. ರೇವಣಸಿದ್ದೇಶ್ವರ ಮಹಾರಾಜರು ಈಗಲೂ ಅದನ್ನು ಮುಂದುವರಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಲಿಂಗಾಯತ ಮಠಗಳನ್ನು ಕೋಮುವಾದಿ ಕಾರ್ಯಸೂಚಿಗೆ ಬಳಸಿಕೊಳ್ಳುವ ಹುನ್ನಾರ ನಡೆದಿತ್ತು. ಆದರೆ,ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಅದನ್ನು ಬಲವಾಗಿ ವಿರೋಧಿಸಿ ತಡೆಗಟ್ಟಿದರು. ಆಗ ತೋಂಟದಾರ್ಯ ಶ್ರೀಗಳನ್ನೇ ಪೀಠದಿಂದ ಎತ್ತಂಗಡಿ ಮಾಡುವ ಮಸಲತ್ತು ನಡೆಯಿತು. ಆದರೆ, ಭಕ್ತರು ಸ್ವಾಮಿಗಳ ಪರವಾಗಿ ಗಟ್ಟಿಯಾಗಿ ನಿಂತರು. ಹೀಗಾಗಿ ಅದು ಸಾಧ್ಯವಾಗಲಿಲ್ಲ. ಈಗಲೂ ಇಂಚಗೇರಿ ಮಠವನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಭಾಗವತರಿಗೆ ಗೊತ್ತಿದೆ.
ಒಂದು ಸಂಘಟನೆಯ ನೇತಾರನಾಗಿ ತನ್ನ ಸಂಘಟನೆಯನ್ನು ಬಲಪಡಿಸಬೇಕೆಂಬ ಹಿತಾಸಕ್ತಿ ಸಹಜ. ಆದರೆ, ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ಸಂಪ್ರದಾಯಗಳು ಪಾರಮಾರ್ಥಿಕ ಚಿಂತನೆಗೆ ನೀಡಿದಷ್ಟು ಮಹತ್ವವನ್ನು ಲೋಕದ ಕೋಮು ಮತ್ತು ಜಾತಿ ಕಲಹಗಳಿಗೆ ನೀಡುವುದಿಲ್ಲ. ಹೀಗಾಗಿ ಇಟಲಿ,ಜರ್ಮನಿಯಿಂದ ಆಮದಾಗಿ ಬಂದ ಸಿದ್ಧಾಂತ ಇಲ್ಲಿ ನಡೆಯುವುದಿಲ್ಲ. ಅದರಲ್ಲೂ ಮಹಾರಾಷ್ಟ್ರದ ಸಂತ ಪರಂಪರೆ ಮತ್ತು ಮಹಾತ್ಮಾ ಗಾಂಧೀಜಿಯವರ ಪ್ರಭಾವವಿರುವ ಮಹಾದೇವರು ( ಮಾಧವಾನಂದ) ಒಂದು ಸೌಹಾರ್ದ ಸ್ಪರ್ಶ ನೀಡಿದ ಇಂಚಗೇರಿ ಮಠ ಎಂದೆಂದಿಗೂ ಸೌಹಾರ್ದ ಮತ್ತು ಬಹುತ್ವದ ತಾಣವಾಗಿ ಉಳಿಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.