ಮುಂಬೈ ಕನ್ನಡಿಗರ ಪ್ರೀತಿಯ ಒಡನಾಟದಲ್ಲಿ

ಮುಂಬೈ ಮಹಾನಗರಿಯಾದರೂ ಮನುಷ್ಯ ಪ್ರೀತಿ, ಅಂತಃಕರಣದ ಸೆಲೆ ಬತ್ತಿ ಹೋಗಿಲ್ಲ. ಒಮ್ಮೆ ಜಾರ್ಜ್ ಫೆರ್ನಾಂಡಿಸ್ ಅವರ ಜೊತೆಗೆ ಮಾತಾಡುವಾಗ ಮುಂಬೈ ತನ್ನನ್ನು ಬೆಳೆಸಿದ ಬಗೆಯನ್ನು ಭಾವುಕರಾಗಿ ಹೇಳಿದ್ದರು. ಈ ಸಲದ ಮುಂಬೈ ಭೇಟಿ ಜಾರ್ಜ್ ಮಾತನ್ನು ನಿಜವಾಗಿಸಿತು. ಇಲ್ಲಿ ಬರಿಗೈಲಿ ಹೋದವರು ಬಹು ಎತ್ತರಕ್ಕೆ ಬೆಳೆದು ನಿಲ್ಲುತ್ತಾರೆ ಎಂಬುದಂತೂ ನಿರಾಕರಿಸಲಾಗದ ಸಂಗತಿ.

Update: 2023-08-21 05:34 GMT

ಕಳೆದ ಜುಲೈ ತಿಂಗಳ ಒಂದು ದಿನ ಮುಂಬೈಯಿಂದ ‘ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ’ ಪರವಾಗಿ ಪತ್ರಕರ್ತ ಸಾ ದಯಾ (ದಯಾನಂದ) ಅವರು ಫೋನ್ ಮಾಡಿ ನನ್ನ ಬಯೊಡೇಟಾ ಕೇಳಿದರು. ಯಾಕೆ ಎಂದು ಕೇಳಿದೆ. ಏನೋ ಬರೆಯಲು ಬೇಕಾಗಿದೆ ಎಂದರು. ನಂತರ ಒಂದು ವಾರ ಬಿಟ್ಟು ಅವರದೇ ಇನ್ನೊಂದು ದೂರವಾಣಿ ಕರೆ. ನಿಮ್ಮನ್ನು ಕೆ.ಟಿ.ವೇಣುಗೋಪಾಲ ರಾಷ್ಟ್ರೀಯ ಮಾಧ್ಯಮ ಶ್ರೀ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ತಿಳಿಸಿದರು. ಆಗಸ್ಟ್ ೬ರಂದು ಮುಂಬೈಗೆ ಬರಬೇಕೆಂದು ಆತ್ಮೀಯ ಆಹ್ವಾನ ನೀಡಿದರು. ಅವರ ಜೊತೆಗಿದ್ದ ಕುಂದಾಪುರ ಮೂಲದ ಈಗ ಮುಂಬೈಯಲ್ಲಿ ನೆಲೆಸಿರುವ ಲೇಖಕ ಗೋಪಾಲ ತ್ರಾಸಿ ಅವರು ಫೋನ್ ತೆಗೆದುಕೊಂಡು ಮುಂಬೈಗೆ ಬರಲು ಕೋರಿದರು.

ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ‘ವಾರ್ತಾಭಾರತಿ’ಯಲ್ಲಿ ಬರುತ್ತಿದ್ದ ಸಾ.ದಯಾ ಅವರ ಮುಂಬೈ ಕುರಿತ ಅಂಕಣ ಬರಹಗಳನ್ನು ತುಂಬಾ ಇಷ್ಟ ಪಟ್ಟು ಓದುತ್ತಿದ್ದ ನಾನು ಈ ಆತ್ಮೀಯ ಆಹ್ವಾನವನ್ನು ನನಗೊಂದು ಗೌರವ ಎಂದು ತುಂಬು ಮನಸ್ಸಿನಿಂದ ಸ್ವೀಕರಿಸಿದೆ.

ಎಂದಿನಂತೆ ಈ ಸಲವೂ ಮುಂಬೈ ಭೇಟಿ ಅವಿಸ್ಮರಣೀಯ. ಮುಂಬೈ ಕನ್ನಡ ಪತ್ರಕರ್ತ ಬಂಧುಗಳು ತೋರಿಸಿದ ಪ್ರೀತಿ, ಆತಿಥ್ಯ, ಆತ್ಮೀಯತೆಯಿಂದ ಮನಸ್ಸು ತುಂಬಿತು. ಜೊತೆಗೆ ಇದ್ದ ಮೂರು ದಿನದಲ್ಲಿ ಮತ್ತೆ ಮುಂಬೈ ಎಂಬ ಮಾಯಾ ನಗರಿಯ ದರ್ಶನ ಭಾಗ್ಯ.

ನಾನು ಮುಂಬೈಗೆ ಹೋಗಿದ್ದು ಕೇವಲ ಮೂರು ಸಲ. ಅದು ೧೯೬೪-೬೫ ಇಸವಿ. ಜತ್ತ ರಾಜನ ಜಮೀನ್ದಾರಿ ದರ್ಪದ ವಿರುದ್ಧ ದುಡಿಯುವ ದಲಿತ ಜನರ ಪರವಾಗಿ ನಿಂತು ಹೋರಾಡಿದ ಇಂಚಗೇರಿ ಮಠದ ಮಹಾದೇವಪ್ಪ ಮುರಗೋಡರನ್ನು ಪೊಲೀಸರು ಮುಂಬೈಗೆ ಗಡಿಪಾರು ಮಾಡಿದ್ದರು. ‘ದೇವರು’ ಎಂದು ಜನಸಾಮಾನ್ಯರು ಪ್ರೀತಿಯಿಂದ ಕರೆಯುತ್ತಿದ್ದ ಮಹಾದೇವಪ್ಪನವರನ್ನು ಕಾಣಲು ನಮ್ಮ ಮಾವ ಶ್ರೀಕಾಂತ ಹಳಿಂಗಳಿ ಮತ್ತು ಅಣ್ಣ ಬಾಹುಬಲಿ ಬೆಳಗಲಿ ಅವರ ಜೊತೆಗೆ ಮುಂಬೈಗೆ ಹೋದ ನೆನಪು. ನನಗಾಗ ೧೧ ವರ್ಷ. ‘ಗೇಟ್ ವೇ ಆಫ್ ಇಂಡಿಯಾ’ ನೋಡಿದ್ದು ನೆನಪಿನಂಗಳದಲ್ಲಿ ಮಸುಕು ಮಸುಕಾಗಿದೆ. ನಂತರ ನಾನು ಮತ್ತೆ ಮುಂಬೈಗೆ ಹೋಗಿದ್ದು ನನ್ನ ೬೭ನೇ ವಯಸ್ಸಿನಲ್ಲಿ. ಕಲಬುರಗಿಯ ಆತ್ಮೀಯ ಬಂಧುಗಳಾದ ಮಾರುತಿ ಗೋಖಲೆ ಮತ್ತು ಶ್ರೀಮತಿ ಜಯಶ್ರೀ ಗೋಖಲೆ ದಂಪತಿ ಕರೆದುಕೊಂಡು ಹೋಗಿದ್ದರು. ೩ ವರ್ಷಗಳ ಹಿಂದೆ ಡಿಸೆಂಬರ್ ೬ರಂದು ಬಾಬಾಸಾಹೇಬರ ಪರಿನಿರ್ವಾಣ ದಿನದಂದು ಮುಂಬೈಗೆ ಹೋಗಿ ಅಲ್ಲಿ ಗೋಖಲೆಯವರ ಪುತ್ರ ಚೇ ಗವೇರಾ ಗೋಖಲೆ ಮನೆಯಲ್ಲಿ ಐದಾರು ದಿನ ತಂಗಿದ್ದೆವು. ಆಗ ಮತ್ತೆ ಮುಂಬೈ ದರ್ಶನವಾಯಿತು. ಅದನ್ನು ಬಿಟ್ಟರೆ ಇದೇ ಆಗಸ್ಟ್ ೬ ರಂದು ಮಹಾರಾಷ್ಟ್ರ ದ ಕನ್ನಡಿಗ ಪತ್ರಕರ್ತರ ಸಂಘ ನನ್ನನ್ನು ಆಹ್ವಾನಿಸಿ ಪ್ರತಿಷ್ಠಿತ ಕೆ.ಟಿ.ವೇಣುಗೋಪಾಲ ರಾಷ್ಟ್ರೀಯ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಮಾಡಿದಾಗ ಮುಂಬೈಗೆ ಹೋಗಿ ಬಂದೆ.

ಮಾರನೇ ದಿನ ಮಹಾರಾಷ್ಟ್ರದ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ ಫೋನ್ ಮಾಡಿ ನನ್ನ ಮುಂಬೈ ಪ್ರವಾಸದ ವಿವರಗಳನ್ನು ಮತ್ತು ನನ್ನ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆದರು.

ಮೊದಲಿನಿಂದಲೂ ಮುಂಬೈ ಬಗ್ಗೆ ನನಗೊಂದು ಕುತೂಹಲ. ಗಾಂಧೀಜಿ, ‘ಮಾಡು ಇಲ್ಲವೇ ಮಡಿ’ ಕರೆ ನೀಡಿದ್ದು ಇದೇ ನಗರಿಯಲ್ಲಿ. ಕಮ್ಯುನಿಸ್ಟ್ ಕಾರ್ಮಿಕ ಚಳವಳಿಗೆ ಹೆಸರಾಗಿದ್ದು ಹಾಗೂ ಕಾಮ್ರೇಡ್ ಶ್ರೀ ಪಾದ ಅಮೃತ ಡಾಂಗೆ ಕರ್ಮಭೂಮಿ ಇದೇ ಮುಂಬೈಯಲ್ಲಿ ಮತ್ತು ಬಾಬಾಸಾಹೇಬರು ವ್ಯಾಸಂಗ ಮಾಡಿದ, ನಡೆದಾಡಿದ ನೆಲವಿದು. ಕನ್ನಡದ ಜಾರ್ಜ್ ಫೆರ್ನಾಂಡಿಸ್ ಅವರನ್ನು ಲೋಕಸಭೆಗೆ ಚುನಾಯಿಸಿ ಕಳಿಸಿದ ತಾಣವಿದು.ಅರುಣಾ ಅಸಫ್ ಅಲಿ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬ್ರಿಟಿಷ್ ಪೊಲೀಸರ ಕಣ್ಣು ತಪ್ಪಿಸಿ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಎತ್ತರದ ರಾಷ್ಟ್ರ ಧ್ವಜವನ್ನು ಹಾರಿಸಿದ್ದು ಇದೇ ಊರಿನಲ್ಲಿ. ಹೀಗೆ ಇದು ನನಗೆ ತುಂಬಾ ಮನಸೆಳೆದ ಮಹಾನಗರ. ನಂತರ ಸಾಹಿತ್ಯದ ಓದು ಆರಂಭವಾದಾಗ ಶಿವರಾಮ ಕಾರಂತರ ಕೆಲ ಕೃತಿಗಳಲ್ಲಿ ಮುಂಬೈ ಬಗ್ಗೆ ಓದಿದ ನೆನಪು. ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕಾದಂಬರಿ ಹಾಗೂ ಯಶವಂತ ಚಿತ್ತಾಲರ ಕತೆ, ಕಾದಂಬರಿಗಳಲ್ಲಿ ನನಗೆ ಮುಂಬೈ ಎಂಬ ಮಾಯಾ ನಗರಿಯ ಪರಿಚಯ ಸಾಕಷ್ಟು ಆಗಿತ್ತು. ಅದಕ್ಕೆ ಮತ್ತೆ ಮುಂಬೈ ಪ್ರವಾಸ ಈ ಇಳಿ ವಯಸ್ಸಿನಲ್ಲೂ ಸಾಕಷ್ಟು ಖುಷಿ ಕೊಟ್ಟಿತು.

ಹೀಗೆ ಅನಿರೀಕ್ಷಿತವಾಗಿ ಮೂರನೇ ಬಾರಿ ಮುಂಬೈಗೆ ಹೊರಟೆ. ಹುಬ್ಬಳ್ಳಿಯಿಂದ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ರೈಲಿಗೆ ಸೀಟು ಕಾದಿರಿಸಿದೆವು. ಒಂದು ದಿನ ಮೊದಲೇ ಆಗಸ್ಟ್ ೪ರಂದು ಹೊರಟು ೫ರಂದು ಮುಂಬೈ ತಲುಪಿದೆವು. ಠಾಣೆ ರೈಲು ನಿಲ್ದಾಣಕ್ಕೆ ನಮ್ಮನ್ನು ಸ್ವಾಗತಿಸಲು ಸ್ವತಃ ಬಂದಿದ್ದ ಸಾ.ದಯಾ ಮತ್ತು ನಮ್ಮ ಯಾದಗಿರಿ ಮೂಲದ ಭೀಮರಾಯ ಅವರು ನಮ್ಮನ್ನು ಬರಮಾಡಿಕೊಂಡು ಮೊದಲು ಅಲ್ಲಿಂದಲೇ ಬಿಡುವ ಲೋಕಲ್ ರೈಲಿಗೆ ಹತ್ತಿಸಿದರು. ನಂತರ ಇನ್ನೆಲ್ಲೋ ಇಳಿಸಿ ಅಲ್ಲಿಂದ ಮೆಟ್ರೋ ರೈಲು ಏರಿ ಅಂಧೇರಿ (ಪೂರ್ವ) ವನ್ನು ತಲುಪಿ ಅಲ್ಲಿ ಒಂದು ಹೋಟೆಲ್ ನಲ್ಲಿ ಕುಟುಂಬ ಸಮೇತ ಹೋಗಿದ್ದ ನನ್ನನ್ನು ಇಳಿಸಿದರು.

ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಇಷ್ಟೊಂದು ದೊಡ್ಡ ಪ್ರಭಾವಿ ಸಂಘಟನೆ ಎಂಬುದು ನನಗೆ ಅಲ್ಲಿ ಹೋದಾಗಲೇ ಗೊತ್ತಾಗಿದ್ದು. ಮುಂಬೈ ಜನಸಂಖ್ಯೆ ಒಂದೂವರೆ ಕೋಟಿ. ಅದರಲ್ಲಿ ೨೫ ರಿಂದ ೩೦ ಲಕ್ಷ ಮಂದಿ ಕನ್ನಡಿಗರಿದ್ದಾರೆ. ಕರ್ನಾಟಕದ ಒಳನಾಡಿಗಿಂತ ತುಂಬಾ ಪ್ರಭಾವಿಯಾದ ಸುಮಾರು ೧೫೦ಕ್ಕೂ ಹೆಚ್ಚು ಕನ್ನಡ ಸಂಘಗಳು ಇಲ್ಲಿವೆ. ಅತ್ಯಧಿಕ ಪ್ರಸಾರದ ಕನ್ನಡ ದೈನಿಕ ‘ಕರ್ನಾಟಕ ಮಲ್ಲ’ ಇಲ್ಲಿಂದ ಪ್ರಕಟವಾಗುತ್ತದೆ. ಅದು ಮಾತ್ರವಲ್ಲ ೫೦ಕ್ಕೂ ಹೆಚ್ಚು ಕನ್ನಡ ಪತ್ರಿಕೆಗಳು ಇಲ್ಲಿವೆ. ಕನ್ನಡ ಪತ್ರಿಕಾ ರಂಗಕ್ಕೆ ೧೭೭ ವರ್ಷಗಳ ಇತಿಹಾಸವಿದ್ದರೆ, ಮುಂಬೈ ಕನ್ನಡ ಪತ್ರಿಕಾ ರಂಗಕ್ಕೆ ೧೩೮ ವರ್ಷಗಳ ಇತಿಹಾಸವಿದೆ. ಕಳೆದ ೭೫ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದಲೂ ಮುಂಬೈಯಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ‘ಮೊಗವೀರ’ ಸೇರಿ ಅನೇಕ ಪತ್ರಿಕೆಗಳು ಇಲ್ಲಿವೆ. ನಾನು ೩೦ ವರ್ಷಗಳ ಹಿಂದೆ ‘ಮೊಗವೀರ’’ ಪತ್ರಿಕೆಗೆ ಲೇಖನ ಕಳಿಸಿದಾಗ ಅದನ್ನು ಪ್ರಕಟಿಸಿ ಅವರು ನನಗೆ ಪ್ರಕಟಿತ ಸಂಚಿಕೆಯನ್ನು ಕಳಿಸಿದ ನೆನಪು.

ಕೇರಳದ ಕಾಸರಗೋಡು ಮೂಲದ ಕನ್ನಡಿಗ ಕೆ.ಟಿ.ವೇಣುಗೋಪಾಲ ಅವರು ಮುಂಬೈ ಕನ್ನಡ ಪತ್ರಿಕಾರಂಗದಲ್ಲಿ ಮೂರುವರೆ ದಶಕಕ್ಕೂ ಹೆಚ್ಚು ಸೇವೆ ಸಲ್ಲಿಸಿದವರು.ಸಮಾಜಮುಖಿ ಚಿಂತನೆಯ ಜನಪರ ಪತ್ರಕರ್ತರಾಗಿದ್ದ ಕೆ.ಟಿ.ವೇಣುಗೋಪಾಲ ಈಗ ಇಲ್ಲ. ಅವರ ನೆನಪಿಗೆ ಈ ಪ್ರಶಸ್ತಿಯನ್ನು ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಸಂಘ ನೀಡುತ್ತಾ ಬಂದಿದೆ.ವರ್ಷಕ್ಕೆ ಒಬ್ಬರಿಗೆ ನೀಡುವ ೨೦೨೩ ವರ್ಷದ ಈ ಪ್ರಶಸ್ತಿಯನ್ನು ಸ್ವೀಕರಿಸುವ ಭಾಗ್ಯ ನನಗೆ ಒದಗಿಬಂದಿರುವುದು ಖುಷಿ ಕೊಟ್ಟಿದ್ದು ನಿಜ. ನನ್ನ ಜೊತೆಗೆ ೨೦೨೨ ವರ್ಷದ ಪ್ರಶಸ್ತಿಯನ್ನು ಮುಂಬೈಯಲ್ಲಿ ನೆಲೆಸಿರುವ ಕನ್ನಡ ಲಿಪಿಯಲ್ಲಿ ಕೊಂಕಣಿ ಪತ್ರಿಕೆಯನ್ನು ತರುವ ಲಾರೆನ್ಸ್ ಕುವೆಲ್ಲೂ ಸ್ವೀಕರಿಸಿದರು.

ಮುಂಬೈ ಕನ್ನಡಿಗ ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗಳನ್ನು ಅವಲೋಕಿಸಿದಾಗ ಅವರ ಸಾಧನೆ, ಕ್ರಿಯಾಶೀಲತೆ ಬಗ್ಗೆ ಅಚ್ಚರಿ ಉಂಟಾಯಿತು. ಈ ಸಂಘ ಚಿಕ್ಕದಾದರೂ ತನ್ನ ಸದಸ್ಯರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಬಂದಿದೆ.ತನ್ನ ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮತ್ತು ಆರೋಗ್ಯದ ಸಮಸ್ಯೆಗಳ ಸಲುವಾಗಿ ನೆರವು ನೀಡುತ್ತಾ ಬಂದಿದೆ. ಕೋವಿಡ್ ಸಂಕಟದ ಕಾಲದಲ್ಲಿ ಈ ಸಂಘ ಕಷ್ಟದಲ್ಲಿ ಇದ್ದ ತನ್ನ ಸದಸ್ಯರಿಗೆ ಸುಮಾರು ಮೂರು ಲಕ್ಷ ರೂ.ಯಷ್ಟು ನೆರವು ನೀಡಿದೆ. ಕೆಲ ಸದಸ್ಯರು ನಿಧನರಾದಾಗ ಅವರ ಕುಟುಂಬಕ್ಕೆ ತಲಾ ೨೫ ಸಾವಿರ ರೂ. ನೆರವನ್ನು ನೀಡಿದೆ. ಬಂಟ್ವಾಳ ಮೂಲದ ರೋನ್ಸ್ ಬಂಟ್ವಾಳ ಈ ಸಂಘದ ಬೆನ್ನೆಲುಬು. ಅದ್ಭುತ ಸಂಘಟನಾ ಸಾಮರ್ಥ್ಯ ಹೊಂದಿರುವ ರೋನ್ಸ್ ತಮ್ಮ ಪ್ರಭಾವ ಬಳಸಿ ಸಂಘಕ್ಕೆ ದೊಡ್ಡ ಮೊತ್ತದ ಠೇವಣಿ ಇಟ್ಟು ಮುಂಬೈ ಕನ್ನಡ ಪತ್ರಕರ್ತರ ಕಷ್ಟಗಳಿಗೆ ನೆರವಾಗುತ್ತ ಬಂದಿದ್ದಾರೆ. ಶಿವಸೇನೆಯ ಹುಲಿ ಎಂದೇ ಹೆಸರಾದ ಬಾಳ ಠಾಕ್ರೆ ಅಂಥವರೊಂದಿಗೆ ಆಪ್ತ ಸಂಬಂಧ ಹೊಂದಿದ್ದ ರೋನ್ಸ್ ಮುಂಬೈಯಲ್ಲಿ ಕನ್ನಡ ಪತ್ರಕರ್ತರ ಭವನವನ್ನು ನಿರ್ಮಿಸುವ ಮಹದಾಸೆ ಇಟ್ಟುಕೊಂಡಿದ್ದಾರೆ. ಕರ್ನಾಟಕ ಸರಕಾರ ನೆರವು ನೀಡಿದರೆ ಇದು ಕೈಗೂಡಬಹುದು.

ಮುಂಬೈಯ ಅಂಧೇರಿ ಪೂರ್ವದಲ್ಲಿ ಇರುವ ಸಾಲೀಟರಿ ಕಾರ್ಪೊರೇಟ್ ಪಾರ್ಕ್ ನ ಕ್ಲಬ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ನೇಹಿತ ಶಿವಾನಂದ ತಗಡೂರು ಬಂದಿದ್ದರು. ಮುಂಬೈಯ ಹಿರಿಯ ಕನ್ನಡ ಲೇಖಕಿ ೯೨ ವರ್ಷದ ಡಾ.ಸುನೀತಾ ಶೆಟ್ಟಿ ಮೊದಲಾದವರು ಬಂದಿದ್ದರು.

ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಸಂಘದಲ್ಲಿ ರೋನ್ಸ ಬಂಟ್ವಾಳ ಅವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಉಪಾಧ್ಯಕ್ಷ ಡಾ.ಶಿವ ಮೂಡಿಗೆರೆ, ಗೌರವ ಕಾರ್ಯದರ್ಶಿ ಸಾ ದಯಾ, ವಿಶ್ವನಾಥ ನಿಡ್ಡೋಡಿ, ಸವಿತಾ ಶೆಟ್ಟಿ, ದುರ್ಗಪ್ಪ ಕೊಟಿಯವರ, ರಂಗ ಪೂಜಾರಿ, ಅನಿತಾ ಶೆಟ್ಟಿ, ಶ್ಯಾಮ್ ಹಂಡೆ, ನಾಗೇಶ್‌ಪೂಜಾರಿ, ನಾಗರಾಜ ದೇವಾಡಿಗ, ಗೋಪಾಲ ಪೂಜಾರಿ, ತ್ರಾಸಿ, ಕರುಣಾಕರ ಶೆಟ್ಟಿ, ಪೀಟರ್ ಡಿಸೋಜಾ, ಸಲಹೆಗಾರ ಹಿರಿಯ ವಕೀಲ ಮೊಹಿದೀನ್ ಮುಂಡಕೂರು, ಪ್ರಕಾಶ ಶೆಟ್ಟಿ, ಕರ್ನಾಟಕಕ್ಕೆ ಹೆಸರು ತಂದ ಬಾಲಿವುಡ್‌ನ ಕೇಶ ವಿನ್ಯಾಸಕ ಶಿವರಾಮ ಭಂಡಾರಿ, ಡಾ.ಸುರೇಶರಾವ್ ಹೀಗೆ ಅನೇಕ ಗಣ್ಯಾತಿಗಣ್ಯ ಮುಂಬೈ ಕನ್ನಡಿಗರನ್ನು ಕಾಣುವ ಸದವಕಾಶ ನನಗೆ ಒದಗಿ ಬಂತು. ಈ ಕಾರ್ಯಕ್ರಮದಲ್ಲಿ ಹೆಸರಾಂತ ನ್ಯಾಯವಾದಿ ರೋಹಿಣಿ ಸಾಲ್ಯಾನ್ ಅವರ ಕವನ ಸಂಕಲನ ಬಿಡುಗಡೆ ಆಯಿತು. ಆದರೆ, ಅಸ್ವಸ್ಥತೆಯಿಂದ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

ಮುಂಬೈ ಕನ್ನಡಿಗರು ಎನ್ನುವಾಗ ಅದರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡದವರು.ಶತಮಾನದ ಹಿಂದೆಯೇ ಈ ಮಹಾನಗರಿಗೆ ಹೋಗಿ ನೆಲೆಸಿ ಹೊಟೆಲ್ ಉದ್ಯಮದಿಂದ ಆರಂಭಿಸಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿದವರು. ದಕ್ಷಿಣ ಕನ್ನಡದ ವರನ್ನು ಬಿಟ್ಟರೆ ನಮ್ಮ ಉತ್ತರ ಕರ್ನಾಟಕದ ಬಿಜಾಪುರ, ರಾಯಚೂರು, ಯಾದಗಿರಿ, ಕಲಬುರಗಿ, ಬೆಳಗಾವಿ, ಧಾರವಾಡ ಮುಂತಾದ ಜಿಲ್ಲೆಗಳ ಜನ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಇಲ್ಲಿ ತಮ್ಮ ತಾಯ್ನುಡಿ ತುಳು ಜೊತೆಗೆ ನಾಡಿನ ಭಾಷೆ ಕನ್ನಡವನ್ನು ಗಟ್ಟಿಯಾಗಿ ಹಿಡಿದು ಉಳಿಸಿಕೊಂಡವರು ದಕ್ಷಿಣ ಕನ್ನಡಿಗರು. ಉತ್ತರ ಕರ್ನಾಟಕದಿಂದ ಬಹುಸಂಖ್ಯೆಯಲ್ಲಿ ಹೋದವರು ದುಡಿಯುವ ಜನ. ಅವರೂ ಕೂಡ ಆರೇಳು ದಶಕಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಮುಂಬೈಗೆ ಹೋದವರು. ಅವರಲ್ಲಿ ಹೆಚ್ಚಿನವರು ಧಾರಾವಿಯಲ್ಲಿದ್ದಾರೆ. ರೈಲು ನಿಲ್ದಾಣಕ್ಕೆ ನಮ್ಮನ್ನು ಕರೆಯಲು ದಯಾ ಅವರ ಜೊತೆಗೆ ಬಂದಿದ್ದ ಭೀಮರಾಯ ಮುಂಬೈಯಲ್ಲೇ ಹುಟ್ಟಿ ಬೆಳೆದ ೩೦ರ ಯುವಕ. ಕನ್ನಡ ಶಾಲೆಯಲ್ಲೇ ಓದಿದ, ಯಾದಗಿರಿಯ ಅಚ್ಚ ಕನ್ನಡ ಮಾತಾಡುವ ಆತ ಇವತ್ತೇ ಕಲ್ಯಾಣ ಕರ್ನಾಟಕದಿಂದ ಬಂದಿದ್ದಾನೇನೂ ಅನ್ನುವಷ್ಟು ಜವಾರಿಯಾಗಿದ್ದ.

ಕಾರ್ಯಕ್ರಮ ಸಮಾರೋಪಗೊಂಡ ಬಳಿಕ ಮಧ್ಯಾಹ್ನ ಈ ಭೀಮರಾಯ ನಮ್ಮನ್ನು ಟ್ಯಾಕ್ಸಿಯಲ್ಲಿ ಮುಂಬೈ ತೋರಿಸಲು ಕರೆದುಕೊಂಡು ಹೋದರು. ಮೊದಲು ನಮ್ಮನ್ನು ಭಾರತದ ಮೊಟ್ಟಮೊದಲ ಸಮುದ್ರ ಸೇತುವೆ ತೋರಿಸಲು ಕರೆದೊಯ್ದರು. ಬಾಂದ್ರಾ, ವರ್ಲಿ ಪ್ರದೇಶವನ್ನು ಸಮುದ್ರದ ಮೇಲೆ ಸೇತುವೆ ಕಟ್ಟಿ ಜೋಡಿಸಲಾಗಿದೆ. ಇದಕ್ಕೆ ಖರ್ಚು ಮಾಡಿದ ಹಣ ೧,೬೩೪ ಕೋಟಿ ರೂ.. ಇದರಿಂದಾಗಿ ೬ ಕಿ.ಮೀ. ಮಾರ್ಗವನ್ನು ಕೇವಲ ೭ ನಿಮಿಷಗಳಲ್ಲಿ ದಾಟಬಹುದು. ಮುಂಚೆ ಇದನ್ನು ದಾಟಲು ೩೦ ನಿಮಿಷ ಬೇಕಾಗುತ್ತಿತ್ತು. ಒಂದು ಅಂದಾಜಿನಂತೆ ಇದರಿಂದ ೨೬೦ ಕೋಟಿ ರೂ. ಮೊತ್ತದ ಇಂಧನವನ್ನು ಉಳಿಸಬಹುದು. ಇಂತಹ ಸೇತುವೆಯನ್ನು ದಾಟಿ ಮುಕೇಶ್ ಅಂಬಾನಿಯ ಬಹು ಅಂತಸ್ತಿನ ಭವ್ಯ ಬಂಗಲೆಯನ್ನು ಕಂಡು ಅದರ ಮುಂದೆ ರತನ್ ಟಾಟಾರ ಅಂಬಾನಿಗಿಂತ ಪುಟ್ಟ ಮನೆಯನ್ನು ನೋಡಿ ಗೇಟ್ ವೇ ಆಫ್ ಇಂಡಿಯಾಕ್ಕೆ ಬಂದೆವು. ಅಲ್ಲಿ ನಾವೆಯಲ್ಲಿ ಸಮುದ್ರ ಯಾನ.

ಹೀಗೆ ಮಾತಾಡುತ್ತಾ ಸಾಗುವಾಗ ನಮಗೆ ಅಂಬಾನಿ ಮನೆ ತೋರಿಸಿದ ಭೀಮರಾಯ ಧಾರಾವಿಯಲ್ಲಿ ಇರುವ ತಮ್ಮ ಮನೆಯ ಜಾಗ ನಾವು ಕುಳಿತು ಸಂಚರಿಸುತ್ತಿದ್ದ ಟ್ಯಾಕ್ಸಿಗಿಂತ ಸಣ್ಣದು ಎಂದು ಹೇಳಿದ. ಆ ಮಾತು ಕೇಳಿ ಅವರ ಮನೆಯನ್ನು ನೋಡಲೇಬೇಕೆಂದು ಪಟ್ಟು ಹಿಡಿದು ಇಳಿ ಹೊತ್ತಿನಲ್ಲಿ ಧಾರಾವಿಗೆ ಹೋದೆವು. ಅಲ್ಲಿ ಒಬ್ಬ ವ್ಯಕ್ತಿ ಮಲಗುವಷ್ಟು ಮಾತ್ರ ಜಾಗ. ೪೦ ವರ್ಷಗಳ ಹಿಂದೆ ೪೦ ಸಾವಿರ ರೂ. ಗೆ ಖರೀದಿಸಿದ ಈ ಪುಟ್ಟ ಮನೆಯ ಮೇಲೆ ಮತ್ತೆರಡು ಅಂತಸ್ತು ಕಟ್ಟಿಸಿ ಭೀಮರಾಯ ಕುಟುಂಬ ನೆಲೆಸಿದೆ. ಧಾರಾವಿಯದೇ ದೊಡ್ಡ ಇತಿಹಾಸ. ಆ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಈ ನಡುವೆ ಇನ್ನೊಂದು ಸಂಗತಿಯನ್ನು ಮರೆಯಲು ಆಗುವುದಿಲ್ಲ. ನಾವು ಮುಂಬೈ ತಲುಪಿದ ಮಧ್ಯಾಹ್ನ ಗೋಪಾಲ ತ್ರಾಸಿ ಫೋನ್ ಮಾಡಿ ಭೇಟಿಯಾಗಲು ಬರುವುದಾಗಿ ಹೇಳಿದರು. ಹೇಳಿದಂತೆ ಬಂದರು ಕೂಡ. ಒಂದೆಡೆ ನಿಂತು ಮಾತಾಡಲು ಪುರುಸೊತ್ತು ಸಿಗದ ಸದಾ ಓಡುವ ಕಾರಂತರು ಜನಾರಣ್ಯ ಎಂದು ಕರೆದ ಈ ಮುಂಬೈಯಲ್ಲಿ ಮಾತಾಡಲು ಬಂದ ಗೋಪಾಲ ತ್ರಾಸಿ ನಮ್ಮ ಜೊತೆಗೆ ಸಾಹಿತ್ಯ, ರಾಜಕೀಯ, ಕಾರಂತ, ಚಿತ್ತಾಲ, ಬಲ್ಲಾಳ, ಜಯಂತ ಕಾಯ್ಕಿಣಿ, ಸನದಿ, ಮುಂಬೈ ಕನ್ನಡ, ಹೀಗೆ ಹಲವಾರು ವಿಷಯಗಳ ಬಗ್ಗೆ ಪಟ್ಟಾಂಗ ಹೊಡೆಯುತ್ತ ಸುಮಾರು ೩ ತಾಸು ಕಳೆದರು. ನಾನು ಪಟ್ಟಾಂಗ ಎಂದು ಹೇಳಿದರೂ ತ್ರಾಸಿ ಅವರ ಜೊತೆಗಿನ ಮಾತುಗಳು ತುಂಬಾ ಖುಷಿ ಕೊಟ್ಟವು.

ಮುಂಬೈಯಲ್ಲಿ ತಂಗಿದ ಮೂರು ದಿನ ರೋನ್ಸ್ ಬಂಟ್ವಾಳ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಅವರ ಸ್ನೇಹಿತರು ನೀಡಿದ ಆತೀಥ್ಯ, ಪ್ರೀತಿ ಮರೆಯಲು ಸಾಧ್ಯವಿಲ್ಲ. ಇವರನ್ನೆಲ್ಲ ಕಂಡು ನಾನೂ ಬಾಲ್ಯದಲ್ಲೇ ಇಲ್ಲಿ ಬಂದು ನೆಲೆಸಬೇಕಾಗಿತ್ತು ಎಂದು ಅನಿಸಿದ್ದು ನಿಜ. ಮುಂಬೈ ಮಹಾನಗರಿಯಾದರೂ ಮನುಷ್ಯ ಪ್ರೀತಿ, ಅಂತಃಕರಣದ ಸೆಲೆ ಬತ್ತಿ ಹೋಗಿಲ್ಲ. ಒಮ್ಮೆ ಜಾರ್ಜ್ ಫೆರ್ನಾಂಡಿಸ್ ಅವರ ಜೊತೆಗೆ ಮಾತಾಡುವಾಗ ಮುಂಬೈ ತನ್ನನ್ನು ಬೆಳೆಸಿದ ಬಗೆಯನ್ನು ಭಾವುಕರಾಗಿ ಹೇಳಿದ್ದರು. ಈ ಸಲದ ಮುಂಬೈ ಭೇಟಿ ಜಾರ್ಜ್ ಮಾತನ್ನು ನಿಜವಾಗಿಸಿತು. ಇಲ್ಲಿ ಬರಿಗೈಲಿ ಹೋದವರು ಬಹು ಎತ್ತರಕ್ಕೆ ಬೆಳೆದು ನಿಲ್ಲುತ್ತಾರೆ ಎಂಬುದಂತೂ ನಿರಾಕರಿಸಲಾಗದ ಸಂಗತಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - -ಸನತ್ ಕುಮಾರ್ ಬೆಳಗಲಿ

contributor

Similar News