ಉತ್ತರ ಭಾರತ: ಕುಸಿಯುತ್ತಿದೆ ಬಿಜೆಪಿ ಕೋಟೆ
ಈವರೆಗೆ ಬಿಜೆಪಿ ಗೆಲುವಿನ ನಗೆ ಬೀರುತ್ತಿದ್ದುದು ಉತ್ತರ ಭಾರತ, ಅದರಲ್ಲೂ ಉತ್ತರ ಪ್ರದೇಶದಿಂದ. ಈಗ ಅಲ್ಲಿ ಪರಿಸ್ಥಿತಿ ಬದಲಾಗಿದೆ. ಹೆಸರಾಂತ ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್‌ರ ಪ್ರಕಾರ ಅಲ್ಲಿ ಕಳೆದ ಬಾರಿ 60 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಐವತ್ತರ ಗಡಿ ತಲುಪುವುದೇ ಕಷ್ಟ. ದೇಶವ್ಯಾಪಿಯಾಗಿ ಎಷ್ಟೇ ಲೆಕ್ಕಾಚಾರಗಳನ್ನು ಮಾಡಿದರೂ ಬಿಜೆಪಿ ಮಿತ್ರ ಕೂಟ 200ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕಷ್ಟ.
ಹಿಂದೂ, ಹಿಂದಿ, ಹಿಂದೂ ರಾಷ್ಟ್ರ ಎಂದೆಲ್ಲ ಕನಸು ಕಾಣುತ್ತಿದ್ದ ನಮ್ಮ ಮಹಾಪ್ರಭುಗಳ ಚಿತ್ತ ಈಗ ದಕ್ಷಿಣ ಭಾರತದತ್ತ ಹೊರಳಲು ಕಾರಣವೇನು? ಲೋಕಸಭಾ ಚುನಾವಣೆ ಪ್ರಚಾರದ ನೆಪ ಮಾಡಿಕೊಂಡು ಕಳೆದ ಒಂದೂವರೆ ತಿಂಗಳಲ್ಲಿ ಹತ್ತು ಸಲ ಈ ರಾಜ್ಯಗಳಲ್ಲಿ ಸವಾರಿ ಮಾಡಿದ್ದಾರೆ. ಅವರೆಷ್ಟೇ ಹೆಲಿಕಾಪ್ಟರ್‌ನಲ್ಲಿ ಹಾರಾಡಿದರೂ ಅವರ ಮತ್ತು ಅವರ ಶಿಷ್ಯನ ಹಿಂದಿ ಭಾಷಣ ದಕ್ಷಿಣದ ಜನ ಸ್ವೀಕರಿಸುತ್ತಿಲ್ಲ. ಅದೇನೇ ಇರಲಿ ‘ವಿಶ್ವಗುರು’ ಪದೇ ಪದೇ ದಕ್ಷಿಣದ ರಾಜ್ಯಗಳಿಗೆ ಬರಲು ಕಾರಣವೇನು?
ಕಾರಣ ಸ್ಪಷ್ಟ. ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಉತ್ತರ ಭಾರತದಿಂದಲೇ 200ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಧಿಮಾಕಿತ್ತು. ಉತ್ತರ ಪ್ರದೇಶದ 80, ಬಿಹಾರದ 55, ರಾಜಸ್ಥಾನದ ಸುಮಾರು 25 ಸ್ಥಾನ ಗೆಲ್ಲುವ ಗ್ಯಾರಂಟಿ ಇತ್ತು. ಆದರೆ, ಈಗ ಎಲ್ಲಾ ಉಲ್ಟಾಪಲ್ಟಾ ಆಗಿದೆ. ಅಲ್ಲಿ ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಿರೀಕ್ಷಿತ ಬೆಂಬಲ ಕಂಡು ಬರುತ್ತಿಲ್ಲ. ಅಲ್ಲಿ ಅರ್ಧ ಸ್ಥಾನಗಳನ್ನು ಗೆಲ್ಲುವುದೂ ಕಷ್ಟ. ಅಲ್ಲಿನ ಜನರಿಗೆ ತುಂಬಾ ತಡವಾಗಿ ಉದ್ಯೋಗ ಮತ್ತು ಜೀವನ ನಿರ್ವಹಣೆ, ಬೆಲೆ ಏರಿಕೆಯ ಕುರಿತು ಅರಿವು ಮೂಡತೊಡಗಿದೆ.
ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಅಯೋಧ್ಯೆಯ ರಾಮ ಮಂದಿರ ವಿಷಯವೂ ಜನರ ಗಮನವನ್ನು ಸೆಳೆಯುತ್ತಿಲ್ಲ. ಅಲ್ಲಿ ಕೆಲಸವಿಲ್ಲ ಎಂದು ದಕ್ಷಿಣದ ರಾಜ್ಯಗಳಿಗೆ ವಲಸೆ ಬಂದು ಹೊಟೇಲ್, ಕಟ್ಟಡ ನಿರ್ಮಾಣ ಮತ್ತಿತರ ಕಡೆ ಕೆಲಸ ಮಾಡುವ ಉತ್ತರ ಭಾರತದ ಜನ ತಮ್ಮ ರಾಜ್ಯಗಳಿಗೆ ಹೋದಾಗ, ದಕ್ಷಿಣದ ರಾಜ್ಯಗಳ ಅಭಿವೃದ್ಧಿ ಬಗ್ಗೆ ಹೇಳುತ್ತಾರೆ. ಗುಡಿ, ಗುಂಡಾರ ಬಿಟ್ಟು ಮತ್ತೇನೂ ಗೊತ್ತಿರದ ಆದಿತ್ಯನಾಥ್‌ರ ದಡ್ಡತನ, ಅಸಮರ್ಥ ಆಡಳಿತ ಬಯಲಾಗತೊಡಗಿದೆ.
ವಿಶೇಷವಾಗಿ ರಾಜಧಾನಿ ದಿಲ್ಲಿಯಲ್ಲಿ ಒಂದು ವರ್ಷ ನಡೆದ ಐತಿಹಾಸಿಕ ರೈತ ಹೋರಾಟದ ಬಿಸಿ ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತವಾಗಿದೆ.
ವಿದ್ಯುನ್ಮಾನ ಸೇರಿ ವಿವಿಧ ಮಾಧ್ಯಮಗಳ ವರದಿಗಾರರು ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಚುನಾವಣೆ ಬಗ್ಗೆ ಜನರನ್ನು ಮಾತಿಗೆಳೆದಾಗ ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಮಾತನಾಡಲು ಅಷ್ಟೇನೂ ಉತ್ಸಾಹ ತೋರುತ್ತಿಲ್ಲ. ಅದರ ಬದಲಿಗೆ ಉದ್ಯೋಗ, ಶಿಕ್ಷಣ ಮತ್ತು ಬೆಲೆ ಏರಿಕೆ ಬಗ್ಗೆ ಮಾತಾಡಲು ಇಷ್ಟಪಡುತ್ತಿದ್ದಾರೆ. ಇದರಿಂದ ಪೇಚಿಗೆ ಸಿಲುಕಿರುವ ಬಿಜೆಪಿ ತನ್ನ ಪ್ರಚಾರ ತಂತ್ರವನ್ನು ಬದಲಿಸಿಕೊಳ್ಳಲು ಯತ್ನಿಸುತ್ತಿದೆ. ಜಾತಿ, ಮತದ ಆಧಾರದಲ್ಲಿ ಜನರನ್ನು ವಿಭಜಿಸಿದರೆ ಮಾತ್ರ ಬಿಜೆಪಿಗೆ ಲಾಭ. ಅದಕ್ಕೆ ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇಲ್ಲದ ವಿಷಯವನ್ನು ಎತ್ತಿಕೊಂಡು ಹತಾಶರಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ.
ಕೋವಿಡ್ ಕಾಲಾವಧಿಯಲ್ಲಿ ಅನುಭವಿಸಿದ ನರಕಯಾತನೆಯನ್ನು ಉತ್ತರ ಭಾರತದ ಜನ ಮರೆತಿಲ್ಲ. ದೂರದ ಮುಂಬೈ, ಅಹ್ಮದಾಬಾದ್, ಚೆನ್ನೈ, ಬೆಂಗಳೂರು ಮುಂತಾದ ದಕ್ಷಿಣ ಭಾರತದ ನಗರಗಳಿಗೆ ದುಡಿಯಲು ಬಂದಿದ್ದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಒಡಿಶಾ, ಅಸ್ಸಾಂ ಮೊದಲಾದ ರಾಜ್ಯಗಳ ದುಡಿಯುವ ಜನ ಒಮ್ಮಿಂದೊಮ್ಮೆಲೇ ಘೋಷಿಸಿದ ಲಾಕ್‌ಡೌನ್‌ನಿಂದ ಕಂಗಾಲಾಗಿ ಹೋದರು. ತಮ್ಮ ಊರುಗಳನ್ನು ತಲುಪಲು ವ್ಯವಸ್ಥೆ ಇರಲಿಲ್ಲ.
ಯಾವ ಪೂರ್ವಸೂಚನೆಯಿಲ್ಲದೇ ಪ್ರಧಾನಿ ಮೋದಿಯವರು ರೈಲು ಮತ್ತು ವಾಹನ ಸಂಚಾರ ಏಕಾಏಕಿ ಸ್ಥಗಿತಗೊಳಿಸಿದ್ದರಿಂದ ಉತ್ತರ ಭಾರತದ ರಾಜ್ಯಗಳ ಜನ ಮುಂಬೈ ಮುಂತಾದ ನಗರಗಳಲ್ಲಿ ಉರಿ ಬಿಸಿಲಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಿ.ಮೀ. ನಡೆದು ಊರು ಸೇರಲು ಪರದಾಡಿದರು. ಅನೇಕರು ದಾರಿಯಲ್ಲೇ ಪ್ರಾಣ ಬಿಟ್ಟರು. ಇವರಲ್ಲಿ ಬಹುತೇಕ ಮಂದಿ ಹಿಂದೂಗಳಾಗಿದ್ದರು. ಆದರೆ ಹಿಂದೂಗಳ ಉದ್ಧಾರಕ್ಕೆ ಅವತರಿಸಿ ಬಂದಿರುವುದಾಗಿ ಹೇಳುವವರು ಕನಿಷ್ಠ ವಾಹನ ಸೌಕರ್ಯ, ದಾರಿಯಲ್ಲಿ ಊಟ ಮತ್ತು ನೀರಿನ ಸೌಕರ್ಯಗಳನ್ನು ಮಾಡದೆ ತನ್ನ ಪಾಡಿಗೆ ತಾನು ಅಣಬೆ ತಿನ್ನುತ್ತ ಖುಷಿಯಿಂದ ಇದ್ದರು. ಈ ಕೋಪ ಉತ್ತರ ಭಾರತದ ಜನರಲ್ಲಿ ಇನ್ನೂ ತಣ್ಣಗಾಗಿಲ್ಲ. ಅಯೋಧ್ಯೆಯ ಮರ್ಯಾದಾ ಪುರುಷೋತ್ತಮನೂ ಈ ನಕಲಿ ಭಕ್ತರ ನೆರವಿಗೆ ಬರುವುದಿಲ್ಲ.
ಕೋವಿಡ್ ಕಾಲದಲ್ಲಿ ಬಡವರ ಬದುಕು ಮೂರಾಬಟ್ಟೆಯಾದರೆ ಅಂಬಾನಿ, ಅದಾನಿಯಂತಹ ಮೋದಿ ಮಿತ್ರರ ಸಂಪತ್ತು ಸಾವಿರಾರು ಕೋಟಿ ರೂ. ಹೆಚ್ಚಾಯಿತು. ಅದರ ಬಗ್ಗೆ ಜಾಣ ಮೌನ ತಾಳುವ ಸುಳ್ಳಿನ ಸರದಾರ ಹಳಿಯಿಲ್ಲದ ಮಾರ್ಗದಲ್ಲಿ ರೈಲು ಬಿಡುತ್ತಲೇ ಇದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ 25 ಸಾವಿರ ಕೋಟಿ ರೂ. ಆಸ್ತಿ ಹೊಂದಿದ ಅದಾನಿ ಐದೇ ವರ್ಷದಲ್ಲಿ 3.65 ಲಕ್ಷ ಕೋಟಿ ರೂ. ಆಸ್ತಿ ಗಳಿಸಿದರು. ಕೋವಿಡ್‌ನಿಂದ ಭಾರತೀಯರ ಬದುಕು ಪಾತಾಳಕ್ಕೆ ಕುಸಿದಾಗ ಮುಖೇಶ್ ಅಂಬಾನಿ ಆಸ್ತಿ ಹತ್ತು ಪಟ್ಟು ಹೆಚ್ಚಾಯಿತು. ಇನ್ನೊಂದೆಡೆ ಪೆಟ್ರೋಲ್ ಬೆಲೆ ನೂರರ ಗಡಿ ತಲುಪುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆ 800 ರೂ. ದಾಟಿತು.
ಸಂವಿಧಾನದಲ್ಲಿರುವ ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಮಾತಾಡಿದರೆ ಉರಿದುರಿದು ಬೀಳುವ ಪ್ರಧಾನಿ ಅನಗತ್ಯವಾಗಿ ಮುಸಲ್ಮಾನರ ಪ್ರಸ್ತಾಪ ಮಾಡುತ್ತಾರೆ. ಆದರೆ ಬಡವರು ಮತ್ತು ಮಧ್ಯಮ ವರ್ಗದವರ ತೆರಿಗೆ ಹಣದಿಂದ ಕಾರ್ಪೊರೇಟ್ ಕಂಪೆನಿಗಳ ಲಕ್ಷಾಂತರ ಕೋಟಿ ರೂ. ಬ್ಯಾಂಕ್ ಸಾಲ ಮನ್ನಾ ಮಾಡುವ ಅವರು ತಾವು ಒಂದು ದೇಶದ ಪ್ರಧಾನಿ ಎಂಬುದನ್ನೇ ಮರೆತು ಮಾತಾಡುತ್ತಾರೆ.
ಇದೆಲ್ಲ ನಿಧಾನವಾಗಿ ಉತ್ತರ ಭಾರತದ ಜನರಿಗೆ ಗೊತ್ತಾಗತೊಡಗಿದೆ. ಇವರ ಸಭೆಗಳಿಗೆ ಜನರು ಬರುತ್ತಿಲ್ಲ. ಆದಿತ್ಯನಾಥರ ಬಂಡವಾಳವೂ ಬಯಲಾಗಿದೆ. ಬಿಹಾರದಲ್ಲಿ ‘ಇಂಡಿಯಾ’ ಒಕ್ಕೂಟದ ಜೊತೆಗೆ ಇದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಚುನಾವಣೆ ಸಮೀಪಿಸುತ್ತಿರುವಂತೆ ಎನ್‌ಡಿಎಗೆ ಜಂಪ್ ಮಾಡಿದರು. ಆದರೆ ಅಲ್ಲಿ ಲಾಲು ಪ್ರಸಾದ್ ಯಾದವ್‌ರ ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಮೈತ್ರಿ ಕೂಟದ ಪ್ರಭಾವ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ಲಾಲುರನ್ನು ಜೈಲಿಗೆ ಹಾಕಿ ಅವರ ಪಕ್ಷವನ್ನು ಮುಗಿಸಲು ಹುನ್ನಾರ ನಡೆಸಿದರು. ಉಳಿದವರಂತೆ ಲಾಲು ರಾಜಿ ಮಾಡಿಕೊಂಡಿದ್ದರೆ ಸುರಕ್ಷಿತವಾಗಿ, ಸುಖವಾಗಿ ಇರಬಹುದಿತ್ತು. ಆದರೆ ಕೋಮು ಸೌಹಾರ್ದದ ವಿಷಯಯದಲ್ಲಿ ಲಾಲು ರಾಜಿ ಮಾಡಿಕೊಳ್ಳಲಿಲ್ಲ. ಹೀಗಾಗಿ ಬಿಹಾರ ಈಗ ಮೋದಿಗೆ ತಿರುಗಿ ಬಿದ್ದಿದೆ.
ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿಲ್ಲ. ಆದರೆ ಗೆದ್ದು ಸರಕಾರ ರಚಿಸಿದ ಪಕ್ಷಗಳ ನಾಯಕರಿಗೆ ಸಿಬಿಐ, ಐಟಿ, ಈ.ಡಿ. ದಾಳಿಯ ಬೆದರಿಕೆ ಹಾಕಿ ಅಲ್ಲಿನ ಪಕ್ಷಗಳನ್ನು, ಸರಕಾರಗಳನ್ನು ಒಡೆದು ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಶರದ್‌ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಗಳನ್ನು ಬೆದರಿಕೆ ಹಾಕಿ ಒಡೆದು ಬಿಜೆಪಿ ಸರಕಾರ ರಚಿಸಿತು. ಇದರಿಂದ ಮರಾಠಿ ಜನ ಒಳಗೊಳಗೆ ಕುದಿಯುತ್ತಿದ್ದಾರೆ.
ಮೊದಲೇ ಗುಜರಾತಿಗಳನ್ನು ಕಂಡರಾಗದ ಮರಾಠಿಗರು ತಮ್ಮ ಅಸ್ಮಿತೆಗೆ ಪೆಟ್ಟು ಬಿದ್ದಿದೆ ಎಂದು ಚಡಪಡಿಸುತ್ತಿದ್ದಾರೆ. ಶರದ್ ಪವಾರ್ ಅವರಂಥ ಜನ ನಾಯಕರ ಪಕ್ಷವನ್ನು ಒಡೆದ ಮೋದಿ, ಅಮಿತ್ ಶಾ ಕಂಡರೆ ಮರಾಠಿ ಜನ ಉರಿದು ಬೀಳುತ್ತಾರೆ. ಗುಜರಾತ್ ಜೊತೆಗೆ ಮಹಾರಾಷ್ಟ್ರದ್ದು ಹಳೆಯ ಜಗಳ. ರಾಜ್ಯಗಳ ಪುನರ್ ನಿರ್ಮಾಣ ಆಗುವಾಗ ಮುಂಬೈ ಮಹಾನಗರವನ್ನು ಗುಜರಾತ್‌ಗೆ ಸೇರಿಸಲು ಮುರಾರ್ಜಿ ದೇಸಾಯಿ ಯತ್ನಿಸಿದ್ದರು. ಆಗ ಮಹಾರಾಷ್ಟ್ರದಲ್ಲಿ ಬಹುದೊಡ್ಡ ಹೋರಾಟವೇ ನಡೆಯಿತು. ಈಗ ಆ ಗಾಯವೆಲ್ಲ ಮತ್ತೆ ಮರಾಠಿಗರಿಗೆ ನೆನಪಾಗಿದೆ. ಬಾಳಾ ಸಾಹೇಬ ಠಾಕ್ರೆಯವರ ಶಿವಸೇನೆಯನ್ನು ಮತ್ತು ಶರದ್ ಪವಾರ್‌ರ ಎನ್‌ಸಿಪಿಯನ್ನು ಒಡೆದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ.
ಇನ್ನು ಮಣಿಪುರ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳು ಇವರು ಹಚ್ಚಿದ ಬೆಂಕಿಯಿಂದ ತತ್ತರಿಸಿವೆ. ಅಲ್ಲಿ ಕಾನೂನು ಆಡಳಿತವೇ ಕುಸಿದು ಬಿದ್ದಿದೆ. ಆದರೂ ಸುಳ್ಳು ಹೇಳುವದರಲ್ಲಿ ನಿಸ್ಸೀಮರಾದ ಮಹಾಪ್ರಭು ಮಣಿಪುರದಲ್ಲಿ ಎಲ್ಲ ಸರಿ ಹೋಗಿದೆ ಎಂದು ಬಲೂನು ಹಾರಿಸುತ್ತಲೇ ಇದ್ದಾರೆ. ಈ ಬಾರಿ ಉತ್ತರ ಭಾರತದ ರಾಜ್ಯಗಳಲ್ಲಿ ನಿರೀಕ್ಷಿಸಿದ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅಂತಲೇ ಅಲ್ಲಿಯ ಕೊರತೆ ತುಂಬಿ ಕೊಳ್ಳಲು ಮೇಲಿಂದ ಮೇಲೆ ದಕ್ಷಿಣ ಭಾರತದ ಯಾತ್ರೆ ಆರಂಭವಾಗಿದೆ.
ಆದರೆ ದಕ್ಷಿಣ ಭಾರತ ಇವರಿಗೆ ದಕ್ಕುವುದು ಅಷ್ಟು ಸುಲಭವಲ್ಲ. ಇವರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಜನರ ಬಳಿ ಹೋದರೆ ಒಂದಿಷ್ಟು ಉಪಯೋಗವಾಗಬಹುದು. ಆದರೆ ಇವರು ಜನಾಂಗ ದ್ವೇಷದ ಸಿದ್ಧಾಂತವನ್ನು ಮುಂದೆ ಮಾಡಿ ಹಿಂದೂ-ಮುಸ್ಲಿಮ್ ವಿಭಜನೆಯ ಅದೇ ಹಳೆಯ ತಂತ್ರ ಪ್ರಯೋಗಿಸಲು ಹೊರಟಿದ್ದಾರೆ. ಇದು ಸೈದ್ಧಾಂತಿಕ ಸಮರ. ದಕ್ಷಿಣ ಭಾರತದಲ್ಲಿ ‘ದೇಹವೇ ದೇಗುಲ, ಶಿರವೇ ಹೊನ್ನ ಕಳಸ’ ಎಂದು ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಿದ ಬಸವಣ್ಣನವರು ಇವರಿಗೆ ಅಡ್ಡಿಯಾಗಿದ್ದಾರೆ. ಬಸವಣ್ಣ ದೇಹವೇ ದೇಗುಲವೆಂದರೆ ಇವರು ದೇಗುಲ ಕಟ್ಟುವುದನ್ನೇ ಸಿದ್ಧಾಂತ ಮಾಡಿಕೊಂಡು ಹೊರಟಿದ್ದಾರೆ.
ಇನ್ನು ಕೇರಳದಲ್ಲಿ ಇವರ ಮನುವಾದಿ ಫ್ಯಾಶಿಸ್ಟ್ ಸಿದ್ಧಾಂತಕ್ಕೆ ಮುಖ್ಯ ಅಡ್ಡಿಯಾಗಿರುವುದು ನಾರಾಯಣ ಗುರುಗಳು ಮತ್ತು ಅವರ ಆಲೋಚನೆಯ ನೈಜ ವಾರಸುದಾರರಾದ ಕಮ್ಯುನಿಸ್ಟರು. ಅಸ್ಪಶ್ಯರಿಗೆ ಪ್ರವೇಶವಿಲ್ಲದ ದೇವಾಲಯಗಳನ್ನು ಧಿಕ್ಕರಿಸಿ ಪ್ರತ್ಯೇಕ ದೇವಾಲಯಗಳನ್ನೇ ನಿರ್ಮಿಸಿದರು. ಅವರ ಅನುಯಾಯಿಗಳು ಕೆಂಬಾವುಟ ಹಿಡಿದು ನಿಂತರು.ಕೇರಳ ವಿದ್ಯಾವಂತರ ನಾಡು. ಅಲ್ಲಿ ವಿದ್ಯೆಯ ಶತ್ರುಗಳಿಗೆ ಅವಕಾಶವಿಲ್ಲ.
ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಕೇರಳದ ಬಿಜೆಪಿ ನಾಯಕ ಒ. ರಾಜ ಗೋಪಾಲ ಅವರನ್ನು ‘‘ಕೇರಳದಲ್ಲಿ ಯಾಕೆ ಆರೆಸ್ಸೆಸ್, ಬಿಜೆಪಿ ಬೆಳೆಯುತ್ತಿಲ್ಲ?’’ ಎಂದು ಕೇಳಿದರಂತೆ. ಅದಕ್ಕೆ ರಾಜಗೋಪಾಲರು, ‘‘ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ. 100ರಷ್ಟಿದೆ ಅದಕ್ಕೆ ಆರೆಸ್ಸೆಸ್ ಇಲ್ಲಿ ಬೆಳೆಯುವುದಿಲ್ಲ’’ ಎಂದರು. ಅಲ್ಲಿ ಸಂಘದ ಶಾಖೆ ಗಳಿದ್ದರೂ ಅವು ವೋಟುಗಳಾಗಿ ಪರಿವರ್ತನೆಯಾಗುವುದಿಲ್ಲ.
ಇಲ್ಲಿ ಮೋದಿ ಮತ್ತು ಅಮಿತ್ ಶಾ ಮಾಡಿದ ಪ್ರವಾಸ ಬರೀ ಕಂಠ ಶೋಷಣೆ ಮಾತ್ರ ಅಂದರೆ ಅತಿಶಯೋಕ್ತಿಯಲ್ಲ.
ಇನ್ನು ತಮಿಳುನಾಡು. ಅಲ್ಲಿ ನೆಲೆಯೂರಲು ಆರೆಸ್ಸೆಸ್ ಐದಾರು ದಶಕಗಳಿಂದ ಸಕಲ ಸಂಪನ್ಮೂಲಗಳನ್ನು ಬಳಸಿ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಅಲ್ಲೂ ಕೂಡ ಎದುರಾಗಿದ್ದು ಸೈದ್ಧಾಂತಿಕ ಪ್ರತಿರೋಧ. ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಕಟ್ಟಿ ಬೆಳೆಸಿದ ದ್ರಾವಿಡ ಚಳವಳಿಯನ್ನು ಹಿಮ್ಮೆಟ್ಟಿಸಲು ಸಾವಿರ ಮಣಿವಣ್ಣನ್‌ಗಳು ಬಂದರೂ ಸಾಧ್ಯವಿಲ್ಲ. ಮುಖ್ಯವಾಗಿ ಇವರ ಹಿಂದಿ ಯಜಮಾನಿಕೆ, ಹಿಂದಿ ಹೇರಿಕೆಯನ್ನು ತಮಿಳರು ಒಪ್ಪುವುದಿಲ್ಲ. ಮೋದಿ, ಅಮಿತ್ ಶಾ ಅವರ ಸಮಸ್ಯೆ ಏನೆಂದರೆ ಹಿಂದಿ ಭಾಷೆ ಮತ್ತು ಶಾಖೆಗಳಲ್ಲಿ ಹೇಳಿಕೊಟ್ಟ ಪಾಠ ಬಿಟ್ಟು ಬೇರೇನೂ ಗೊತ್ತಿಲ್ಲ. ಅಲ್ಲಿಯೂ ಕಮಲಕ್ಕೆ ಶೂನ್ಯ ಸಂಪಾದನೆ.
ಉಳಿದಂತೆ ಅವಿಭಜಿತ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಇವರು ಆಡಿದ ಆಟಗಳು ಜನರಿಗೆ ಗೊತ್ತಿವೆ. ಅಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳು ಪ್ರಭಾವಶಾಲಿಯಾಗಿವೆ. ಹೀಗಾಗಿ ಅಲ್ಲೂ ಬೇಳೆ ಬೇಯುವುದಿಲ್ಲ. ಇವರ ಬಾರಾ ಬಾನಗಡಿಗಳು ಒಂದೊಂದಾಗಿ ಬಯಲಿಗೆ ಬರುತ್ತಿರುವುದರಿಂದ ತೆಲುಗು ಜನ ಇವರನ್ನು ನಂಬುವುದಿಲ್ಲ.
ಇದು ಭಾರತದ ಇಂದಿನ ಚಿತ್ರ. ಮಾರಿಕೊಂಡ ಮಾಧ್ಯಮಗಳನ್ನು ಜನ ನೋಡುವುದನ್ನು ನಿಲ್ಲಿಸಿದ್ದಾರೆ. ಸತ್ಯ ಅವರಿಗೆ ಗೊತ್ತಾಗಿದೆ. ಈ ಹತ್ತು ವರ್ಷಗಳ ಕಾಲಾವಧಿಯಲ್ಲಿ ಒಂದೇ ಒಂದು ಜನೋಪಕಾರಿ ಕಾರ್ಯಕ್ರಮ ರೂಪಿಸಲಿಲ್ಲ. ಬೇರೇನೂ ಬೇಡ ಹಿರಿಯ ನಾಗರಿಕರಿಗೆ ಮುಂಚಿನಿಂದಲೂ ಇದ್ದ ರೈಲ್ವೆ ಪ್ರಯಾಣದ ರಿಯಾಯಿತಿಯನ್ನು ರದ್ದು ಮಾಡಿದರು. ಭವಿಷ್ಯ ನಿಧಿ ಪಿಂಚಣಿದಾರರ ಕನಿಷ್ಠ ಪಿಂಚಣಿಯನ್ನು ಈಗ ಇರುವ 1,000 ರೂ.ಯಿಂದ 3,000 ರೂ.ಗೆ ಹೆಚ್ಚಿಸಲು ಕಾರ್ಮಿಕ ಸಂಘಟನೆಗಳು ಒಕ್ಕೊರಲಿನಿಂದ ಕೇಳಿದರೂ ಸ್ಪಂದಿಸಲಿಲ್ಲ. ಈ ಕುರಿತು ಸಂಪುಟ ಉಪ ಸಮಿತಿ 3,000 ರೂ. ಮಾಡಲು ಶಿಫಾರಸು ಮಾಡಿದ ನಂತರವೂ ಇವರು ಈಗ ಬೇಡ ಎಂದು ಬದಿಗಿಟ್ಟರಂತೆ. ಇದನ್ನು ಅತ್ಯಂತ ವಿಶ್ವಾಸಾರ್ಹ ಮೂಲಗಳು ನನಗೆ ತಿಳಿಸಿದವು.
ಅಂಬಾನಿ, ಅದಾನಿಗಳ ಮತ್ತು ಕಾರ್ಪೊರೇಟ್ ಕಂಪೆನಿಗಳ ಹತ್ತು ಲಕ್ಷ ಕೋಟಿ ರೂ. ಬ್ಯಾಂಕ್ ಸಾಲ ಮನ್ನಾ ಮಾಡುವಾಗ ತೋರಿಸುವ ಧಾರಾಳತನವನ್ನು ಇವರು ಹಿರಿಯ ನಾಗರಿಕರ ಬಗ್ಗೆ ತೋರಿಸಲಿಲ್ಲ. ಈವರೆಗೆ ಬಿಜೆಪಿ ಗೆಲುವಿನ ನಗೆ ಬೀರುತ್ತಿದ್ದುದು ಉತ್ತರ ಭಾರತ, ಅದರಲ್ಲೂ ಉತ್ತರ ಪ್ರದೇಶದಿಂದ. ಈಗ ಅಲ್ಲಿ ಪರಿಸ್ಥಿತಿ ಬದಲಾಗಿದೆ. ಹೆಸರಾಂತ ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್‌ರ ಪ್ರಕಾರ ಅಲ್ಲಿ ಕಳೆದ ಬಾರಿ 60 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಐವತ್ತರ ಗಡಿ ತಲುಪುವುದೇ ಕಷ್ಟ. ದೇಶವ್ಯಾಪಿಯಾಗಿ ಎಷ್ಟೇ ಲೆಕ್ಕಾಚಾರಗಳನ್ನು ಮಾಡಿದರೂ ಬಿಜೆಪಿ ಮಿತ್ರ ಕೂಟ 200ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕಷ್ಟ.
ದೇಶವ್ಯಾಪಿ ನಡೆದ ಎರಡು ಹಂತಗಳ ಮತದಾನದಲ್ಲಿ ಹಿನ್ನಡೆ ಉಂಟಾಗಿರುವ ಮತ್ತು ಉತ್ತರದ ರಾಜ್ಯಗಳಲ್ಲಿ ಲೆಕ್ಕಾಚಾರ ತಪ್ಪಿರುವುದರಿಂದ ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಉನ್ನತ ನಾಯಕರ ಸಭೆ ನಡೆದು ಅಭಿನಯ ಚತುರ ಮಹಾಪ್ರಭುವನ್ನು ಮತ್ತೆ ಗುಜರಾತಿಗೆ ಕಳಿಸುವ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇವರ ಹಿಂದೂ-ಮುಸ್ಲಿಮ್ ಅರಚಾಟವನ್ನು ಈಗ ಹಿಂದೂಗಳೂ ನಂಬುತ್ತಿಲ್ಲ.
ಸುಳ್ಳು ಹೇಳುವುದರಲ್ಲಿ ಇವರನ್ನು ಮೀರಿಸಿದವರಿಲ್ಲ. ‘ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಹಿಂದುಳಿದವರ ಮೀಸಲಾತಿಯನ್ನು ವಿಭಜಿಸಿ ಮುಸಲ್ಮಾನರಿಗೆ ಕೊಡುತ್ತಿದೆ’ ಎಂದು ಬಿಹಾರದ ಚುನಾವಣಾ ಪ್ರಚಾರ ಸಭೆಯಲ್ಲಿ ಬಲೂನು ಹಾರಿಸಿದ್ದಾರೆ. ಇದಕ್ಕೆ ಸಾಕ್ಷ್ಯ, ಪುರಾವೆ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸವಾಲು ಹಾಕಿದ್ದಾರೆ. ಅಷ್ಟಕ್ಕೂ ಮುಸಲ್ಮಾನರಿಗೆ ಮೀಸಲು ಸೌಕರ್ಯ ಕೊಟ್ಟರೆ ತಪ್ಪೇನು?