ಒಂದು ದೇಶ ಓಕೆ, ಒಂದು ಚುನಾವಣೆ ಏಕೆ?

ಒಂದೇ ಭಾರತ, ಒಂದೇ ಚುನಾವಣೆ ಭಾರತದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಲ್ಲ.ಇದರಿಂದ ನಿರುದ್ಯೋಗ ಕಡಿಮೆಯಾಗುವುದಿಲ್ಲ.ಬಡತನ ನಿವಾರಣೆ ಆಗುವುದಿಲ್ಲ. ಬೆಲೆ ಏರಿಕೆ ನಿಯಂತ್ರಿಸಲಾಗುವುದಿಲ್ಲ. ಇದು ಜನರ ಕಣ್ಣಿಗೆ ಮಂಕುಬೂದಿ ಎರಚಿ ಹಳ್ಳಕ್ಕೆ ಕೆಡವುವ ಕುತಂತ್ರವಲ್ಲದೆ ಬೇರೇನೂ ಅಲ್ಲ

Update: 2023-09-04 05:03 GMT

ಒಂದು ದೇಶ-ಒಂದು ಚುನಾವಣೆ, ಒಂದು ದೇಶ-ಒಂದು ಧರ್ಮ, ಒಂದು ದೇಶ-ಒಂದು ಭಾಷೆ, ಒಂದು ದೇಶ- ಒಂದು ಆಹಾರ ಎಂಬ ಆಳುವ ವರ್ಗದ ಘೋಷಣೆ ಈಗ ಆಕರ್ಷಕವಾಗಿ ಕಾಣುತ್ತಿದೆ. ಸದ್ಯ ಒಂದು ಚುನಾವಣೆ ಮಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದರ ಬಗ್ಗೆ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತವಾಗುತ್ತಿವೆ. ಆದರೆ, ಅಧಿಕಾರದಲ್ಲಿ ಇರುವವರಿಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ಮತ್ತೆ ಪ್ರಭುತ್ವದ ಮೇಲೆ ಹಿಡಿತ ಸಾಧಿಸಲು ಈ ಮಂತ್ರ ಅನಿವಾರ್ಯವಾಗಿದೆ.

ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟವರು ಇಂಥ ಪ್ರಸ್ತಾವವನ್ನು ಮುಂದಿಟ್ಟಿದ್ದು ಇದೇ ಮೊದಲ ಬಾರಿಯಲ್ಲ. 5 ವರ್ಷಗಳ ಹಿಂದೆ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ರೈಲು ಬಿಟ್ಟಿತ್ತು.ಆಗ ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷ ಸಭೆ ಕರೆದಿದ್ದರು. ಆದರೆ, ಆ ಸಭೆಗೆ ಬಹುತೇಕ ಪ್ರತಿಪಕ್ಷ ನಾಯಕರು ಹೋಗಿರಲಿಲ್ಲ. ಈಗ ಮುಂದಿನ ವರ್ಷ ಲೋಕಸಭಾ ಚುನಾವಣೆ ಬಂದಿರುವಾಗ ಮತ್ತೆ ಈ ಪ್ರಸ್ತಾಪ ಮುಂದಿಡಲಾಗಿದೆ.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂದರೆ ಸಂವಿಧಾನಕ್ಕೆ ಐದು ತಿದ್ದುಪಡಿ ಗಳನ್ನು ತರಬೇಕಾಗುತ್ತದೆ.ಹೆಚ್ಚುವರಿಯಾಗಿ ಭಾರೀ ಸಂಖ್ಯೆಯಲ್ಲಿ ಇವಿಎಂಗಳು ಮತ್ತು ವಿವಿ ಪ್ಯಾಟ್ ಯಂತ್ರಗಳು ಅಗತ್ಯ ಇದಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಎರಡನೆಯದಾಗಿ ಸಂಸತ್ ಅವಧಿಗೆ ಸಂಬಂಧಿಸಿದಂತೆ 83 ನೇ ವಿಧಿ, ರಾಷ್ಟ್ರಪತಿ ಯಿಂದ ಲೋಕಸಭೆ ವಿಸರ್ಜಿಸಲು ಅನುಕೂಲ ವಾಗುವಂತೆ 85 ನೇ ವಿಧಿ,ರಾಜ್ಯಗಳ ವಿಧಾನಸಭೆಗಳ ಅವಧಿಗೆ ಸಂಬಂಧಿಸಿದಂತೆ 174 ನೇ ವಿಧಿ,ವಿಧಾನಸಭೆಗಳ ವಿಸರ್ಜನೆ ಗೆ ಹಾಗೂ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಸಂಬಂಧಿಸಿದಂತೆ 356 ನೇ ವಿಧಿಗೆ ತಿದ್ದುಪಡಿ ತರಬೇಕಾಗುತ್ತದೆ.ಈ ವಿಷಯ ಈಗ ಕಾನೂನು ಆಯೋಗದ ಮುಂದಿದೆ ಆಯೋಗ ಪರಿಶೀಲಿಸಿದ ನಂತರ ಮುಂದಿನ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.

ಈ ಸಲವೂ ಒಂದು ದೇಶ, ಒಂದು ಚುನಾವಣೆ ಪ್ರಸ್ತಾಪವನ್ನು ಪ್ರತಿಪಕ್ಷ ಗಳು ವಿರೋಧಿಸಿವೆ. ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಮೋದಿ ಸರಕಾರ ಈ ಕುತಂತ್ರ ನಡೆಸಿದೆ. ಇದು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮ ಸಂವಿಧಾನ ನಿರ್ಮಾಪಕ ಡಾ. ಅಂಬೇಡ್ಕರ್ ಮತ್ತು ಸ್ವಾತಂತ್ರ್ಯ ಚಳುವಳಿಯ ನೇತಾರ ಮಹಾತ್ಮಾಗಾಂಧಿ, ಜವಾಹರಲಾಲ್ ನೆಹರೂ ಮತ್ತು ಪಟೇಲ್ ಅವರು ಹಲವಾರು ಧರ್ಮ, ಭಾಷೆ, ಜನಾಂಗ, ಸಂಸ್ಕೃತಿಗಳಿರುವ ಭಾರತಕ್ಕೆ ಒಕ್ಕೂಟ ( ಫೆಡರಲ್) ವ್ಯವಸ್ಥೆಯೇ ಸೂಕ್ತ ಎಂದು ಅಂಗೀಕರಿಸಿದರು.ಈ ಒಕ್ಕೂಟ ವ್ಯವಸ್ಥೆ ಬಿಜೆಪಿಯ ಸೈದ್ಧಾಂತಿಕ ಮೂಲವಾದ ಆರೆಸ್ಸೆಸ್‌ಗೆ ಇಷ್ಟವಾಗಿರಲಿಲ್ಲ.ಸಂಘದ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ ಒಲ್ಲದ ಮನಸ್ಸಿನಿಂದ ಚುನಾವಣೆ ಮೂಲಕ ಅಧಿಕಾರ ಹಿಡಿದು ಹಿಂದೂರಾಷ್ಟ್ರದ ಗುರಿ ಸಾಧಿಸಲು ಹಿಂದಿನ ಜನಸಂಘ ( ಇಂದಿನ ಬಿಜೆಪಿ) ಅನಿವಾರ್ಯವಾಗಿ ಒಕ್ಕೂಟ ವ್ಯವಸ್ಥೆ ಒಪ್ಪಿಕೊಂಡಿತು. ಆದರೆ, ಅದರ ಮೂಲಗುರಿ ಹಿಂದೂರಾಷ್ಟ್ರ ನಿರ್ಮಾಣ. ಅದಕ್ಕಾಗಿ ನಾನಾ ತಂತ್ರಗಳನ್ನು ರೂಪಿಸುತ್ತ ಬಂದು ಅಧಿಕಾರ ಹಿಡಿದು ಕೂತಿದೆ. ಈಗ ಗುರಿ ಸಾಧನೆಯ ಮೊದಲ ಹೆಜ್ಜೆಯಾಗಿ ಹಾಗೂ ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಒಂದೆ ದೇಶ ಒಂದು ಚುನಾವಣೆ ಪ್ರಸ್ತಾಪ ಮುಂದಿಟ್ಟಿದೆ.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸಲತ್ತು ಸದುದ್ದೇಶದಿಂದ ಕೂಡಿಲ್ಲ. ದೇಶದ ಮೇಲೆ ಏಕಪಕ್ಷ ಮತ್ತು ಏಕವ್ಯಕ್ತಿಯ ಸರ್ವಾಧಿಕಾರ ಹೇರುವ ಹುನ್ನಾರ ಇದರಲ್ಲಿ ಅಡಗಿದೆಯೆಂದರೆ ಅತಿಶಯೋಕ್ತಿಯಲ್ಲ.

ಆರೆಸ್ಸೆಸ್‌ಗೆ ಹಿಂದೂ ರಾಷ್ಟ್ರ ನಿರ್ಮಿಸಲು ಪ್ರೇರಣೆಯಾಗಿದ್ದು ಅಡಾಲ್ಫ್ ಹಿಟ್ಲರ್ ನ ಜರ್ಮನಿ ಮತ್ತು ಮುಸ್ಸೋನಿಯ ಇಟಲಿ ಎಂಬ ಭಾರತಕ್ಕಿಂತ ಚಿಕ್ಕ ದೇಶಗಳು. ಸಾಮಾನ್ಯವಾಗಿ ಯುರೋಪಿನ ಬಹುತೇಕ ದೇಶಗಳು ಒಂದೇ ಧಾರ್ಮಿಕ ನಂಬಿಕೆ ಹೊಂದಿದ ಸಮುದಾಯಕ್ಕೆ ಸೇರಿದ ಪುಟ್ಟ ದೇಶಗಳು. ಆದರೆ, ಭಾರತ ಹಾಗಲ್ಲ. ಇಲ್ಲಿ ಸಾವಿರಾರು ನಂಬಿಕೆ, ಸಂಸ್ಕೃತಿಗಳನ್ನು ಹೊಂದಿರುವ ಜನ ಸಮುದಾಯಗಳು, ಬುಡಕಟ್ಟುಗಳು ನೆಲೆಸಿವೆ ಅಂತಲೇ ಅಖಂಡ ರಾಷ್ಟ್ರವೆನ್ನುವ ಬದಲಾಗಿ ಒಕ್ಕೂಟ ರಾಷ್ಟ್ರವೆಂದು ಕರೆಯಲಾಯಿತು.

ಇಂಥ ಒಕ್ಕೂಟ ದೇಶದಲ್ಲಿ ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಉಡುಪು, ಒಂದೇ ಆಹಾರ ಪದ್ಧತಿ, ಒಂದೇ ಚುನಾವಣೆ ಎಂದು ಏನೇನೋ ಮಾಡಲು ಹೊರಟರೆ ಅದು ದೇಶದ ಏಕತೆಗೆ ಮಾರಕವಾಗುತ್ತದೆ.

ಭಾರತ ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಗುವ ಮೊದಲು ಒಂದು ರಾಷ್ಟ್ರ ವಾಗಿರಲಿಲ್ಲ.ಇಲ್ಲಿ 550ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು.ಪ್ರತೀ ಸಂಸ್ಥಾನಕ್ಕೆ ಒಬ್ಬ ರಾಜನಿರುತ್ತಿದ್ದ. ಸ್ವಾತಂತ್ರ್ಯಾ ನಂತರ ಅಂದಿನ ಗೃಹ ಮಂತ್ರಿ ವಲ್ಲಭಭಾಯ್ ಪಟೇಲರು ಎಲ್ಲ ರಾಜ ಮಹಾರಾಜರ ಸಭೆ ಕರೆದು ಸ್ವತಂತ್ರ ಭಾರತದಲ್ಲಿ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸಲು ಮನವೊಲಿಸಿದರು.ವಿಲೀನಕ್ಕೆ ಒಪ್ಪದವರ ಮೇಲೆ ತೀವ್ರ ಒತ್ತಡ ತಂದರು. ಆಗ ಮೊದಲು ವಿಲೀನಕ್ಕೆ ಒಪ್ಪಿ ಸಹಿ ಹಾಕಿದವರಲ್ಲಿ ನಮ್ಮ ರಾಜ್ಯದ ಜಮಖಂಡಿಯ ರಾಜ ಪಟವರ್ಧನ ಅವರು.ಕೆಲವು ಕಡೆ ಸೇನಾ ಕಾರ್ಯಾಚರಣೆ ನಡೆಸಿ ವಿಲೀನಕ್ಕೆ ಒಪ್ಪಿಗೆ ಪಡೆಯಲಾಯಿತು.

ವಾಸ್ತವವಾಗಿ ಭಾರತ ಎಂಬುದು ಯಾವುದೇ ಧರ್ಮಕ್ಕೆ ,ಜನಾಂಗಕ್ಕೆ ಸೇರಿದ ದೇಶವಲ್ಲ.ಇಲ್ಲಿ ಆರು ಪ್ರಮುಖ ಮತ ಪಂಥಗಳಿವೆ. 6,452 ಜಾತಿಗಳಿವೆ. 52ಬುಡಕಟ್ಟು ಗಳಿವೆ. 1,617 ಭಾಷೆಗಳಿವೆ. 5,68,000

ಹಳ್ಳಿಗಳಿವೆ ಮತ್ತು 600 ಜಿಲ್ಲೆಗಳಿವೆ. ಇಂಥ ವೈವಿಧ್ಯತೆಯಿಂದ ಕೂಡಿದ ಬೃಹತ್ ಒಕ್ಕೂಟ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ಎಂಬುದು ಕಾರ್ಯಸಾಧ್ಯವಲ್ಲ.

ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ,ಒಂದೇ ಉಡುಪು, ಒಂದೇ ಆಹಾರ ಪದ್ಧ್ದತಿ ಎಂದೆಲ್ಲ ಒಣ ದೇಶಾಭಿಮಾನದ ಮಾತಾಡುವವರು ಭಾರತೀಯರೆಲ್ಲ ಒಂದೇ ಜಾತಿ ಎಂದು ಯಾಕೆ ಹೇಳುವುದಿಲ್ಲ. ವಾಸ್ತವವಾಗಿ ಇವರಿಗೆ ದೇಶದ ಹಿತಾಸಕ್ತಿ ಮುಖ್ಯವಲ್ಲ. ಪ್ರಭುತ್ವದ ಮೇಲೆ ಬಿಗಿ ಹಿಡಿತ ಸಾಧಿಸಲು ಕಾರ್ಪೊರೇಟ್ _ ಕೋಮುವಾದಿ ಮೈತ್ರಿ ಕೂಟ ಏಕಕಾಲದಲ್ಲಿ ಚುನಾವಣೆ ಎಂಬ ಈ ಹೊಸ ಮಸಲತ್ತು ನಡೆಸಿದೆ.

ಉಳಿದೆಲ್ಲ ಧ್ವನಿಗಳನ್ನು ಹತ್ತಿಕ್ಕಿ ಏಕ ಪಕ್ಷ, ಏಕ ಧರ್ಮ, ಏಕ ವ್ಯಕ್ತಿಯ ನಾಯಕತ್ವವನ್ನು ಭಾರತದ ಮೇಲೆ ಹೇರುವ ಹುನ್ನಾರ ನಡೆದಿದೆ.

ದೇಶದಲ್ಲಿ 1967ಕ್ಕಿಂತ ಮೊದಲು ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿತ್ತು. ಆಗ ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಏಕಸ್ವಾಮ್ಯವಿತ್ತು. ಹೀಗಾಗಿ 5 ವರ್ಷಗಳ ಕಾಲ ಸರಕಾರಗಳು ಸ್ಥಿರವಾಗಿ ಇರುತ್ತಿದ್ದವು. ಆದರೆ 1967 ರ ನಂತರ ಮೊದಲ ಬಾರಿ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸೇತರ ಪಕ್ಷಗಳು ಸಂಯುಕ್ತ ರಂಗ ಮಾಡಿಕೊಂಡು ಕೆಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದವು. 1977 ರಲ್ಲಿ ಕೇಂದ್ರದಲ್ಲೂ ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಕಾಂಗ್ರೆಸೇತರ ಸರಕಾರ ಬಂತು. ಇದರ ಪರಿಣಾಮವಾಗಿ ರಾಜ್ಯಗಳಲ್ಲಿ ಪಕ್ಷಾಂತರದಂಥ ಪಿಡುಗು ಹಬ್ಬಿ ಚುನಾಯಿತ ಸರಕಾರಗಳು ಉರುಳಿ ವಿಧಾನಸಭೆಗಳಿಗೆ ಮಧ್ಯಂತರ ಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಇದು ಜನತಂತ್ರದ ಸಹಜ ಪ್ರಕ್ರಿಯೆ.ಹೀಗೆ ಬೆಳೆದು ಬಂದ ಭಾರತದ ಜನತಂತ್ರ ವ್ಯವಸ್ಥೆ ಈಗ ಪಕ್ವವಾಗಿದೆ. ಇಂಥ ಸನ್ನಿವೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಿದರೂ ರಾಜಕೀಯ ಅಸ್ಥಿರತೆ ಉಂಟಾದರೆ ಮಧ್ಯಂತರ ಚುನಾವಣೆ ಅನಿವಾರ್ಯ ವಾಗುತ್ತದೆ.ಹಾಗಾದಾಗ ಮಧ್ಯಂತರ ಚುನಾವಣೆ ನಡೆಸದೆ ರಾಷ್ಟ್ರಪತಿ ಆಡಳಿತವನ್ನು ಹೇರಿ ರಾಜ್ಯಪಾಲರ ಮೂಲಕ ಮತ್ತೆ ಚುನಾವಣೆ ಬರುವವರೆಗೆ ಕೇಂದ್ರದ ಆಡಳಿತ ಹೇರಲು ಮೋದಿ ನೇತೃತ್ವದ ಬಿಜೆಪಿ ಸರಕಾರ ಹೊರಟಿದೆ.

ಅದಾನಿಯ ಬಾರಾ ಬಾನಗಡಿ ಹೊರಗೆ ಬಿದ್ದಿದೆ.ಎಲ್ಲ ರಂಗಗಳಲ್ಲೂ ಸರಕಾರ ವಿಫಲಗೊಂಡಿದೆ.ಇಂಥ ಸನ್ನಿವೇಶದಲ್ಲಿ ಜನಸಾಮಾನ್ಯರ ಗಮನವನ್ನು ಬೇರೆಡೆಗೆ ಸೆಳೆಯಲು ಒಂದೇ ದೇಶ,ಒಂದೇ ಚುನಾವಣೆ ಎಂಬ ಗಾಳಿಪಟವನ್ನು ಆಕಾಶಕ್ಕೆ ಹಾರಿಸಿ ದಾರಿ ತಪ್ಪಿಸುವ ಕುತಂತ್ರ ಇದಾಗಿದೆ.

ವಾಸ್ತವವಾಗಿ ಇಲ್ಲಿ ಒಂದೇ ಭಾರತವಿಲ್ಲ. ಉಳ್ಳವರ ಭಾರತ ಮತ್ತು ಬಡವರ ಭಾರತಗಳು ಇಲ್ಲಿವೆ.ಅದಾನಿ, ಅಂಬಾನಿ, ಭಾಗವತರ ಭಾರತ ಒಂದು ಕಡೆ; ನಿತ್ಯ ದೌರ್ಜನ್ಯಕ್ಕೆ ಬಲಿಯಾಗುವ ಅಸ್ಪಶ್ಯರ ,ನೊಂದವರ ಭಾರತಗಳು ಇಲ್ಲಿವೆ. ಅತ್ಯಾಚಾರ ಮಾಡುವವರ ಹಾಗೂ ಅತ್ಯಾಚಾರಕ್ಕೆ ಬಲಿಯಾಗುವರರ ಭಾರತ ಒಂದೇ ಭಾರತವಾಗಲು ಸಾಧ್ಯವಿಲ್ಲ. ಭಾಗವತರು ಹೇಳುವ ಹಿಂದೂಗಳೆಲ್ಲ ಒಂದೇ ಅಲ್ಲ. ಅವರಲ್ಲಿ ಜಾತಿ, ತಾರತಮ್ಯದ ಗೋಡೆ ಎದ್ದು ನಿಂತಿದೆ.ಇಂಥ ಸನ್ನಿವೇಶದಲ್ಲಿ ಒಂದೇ ಭಾರತ ಒಂದೇ ಚುನಾವಣೆ ಎಂಬುದು ಜನಸಾಮಾನ್ಯರಿಗೆ ಟೋಪಿ ಹಾಕುವ ಇನ್ನೊಂದು ಮಸಲತ್ತಾಗಿದೆ. ಮಂದಿರ, ರಥಯಾತ್ರೆ, ಇಟ್ಟಿಗೆ ಪೂಜೆ ,ಏಕತ್ಮತಾ ಯಾತ್ರೆ ಮಾಡಿದವರ ಹೊಸ ಹುನ್ನಾರ ಇದಾಗಿದೆ.

ಒಂದೇ ಭಾರತ, ಒಂದೇ ಚುನಾವಣೆ ಭಾರತದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಲ್ಲ.ಇದರಿಂದ ನಿರುದ್ಯೋಗ ಕಡಿಮೆಯಾಗುವುದಿಲ್ಲ.ಬಡತನ ನಿವಾರಣೆ ಆಗುವುದಿಲ್ಲ. ಬೆಲೆ ಏರಿಕೆ ನಿಯಂತ್ರಿಸಲಾಗುವುದಿಲ್ಲ.

ಇದು ಜನರ ಕಣ್ಣಿಗೆ ಮಂಕುಬೂದಿ ಎರಚಿ ಹಳ್ಳಕ್ಕೆ ಕೆಡವುವ ಕುತಂತ್ರವಲ್ಲದೆ ಬೇರೇನೂ ಅಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸನತ್ ಕುಮಾರ ಬೆಳಗಲಿ

contributor

Similar News