ಬಂಡುಕೋರ ಅಧಿಕಾರಿಯೊಬ್ಬನ ಹೋರಾಟದ ಕತೆ

ಬಾಲಸುಬ್ರಮಣಿಯನ್ ಅವರ ಆತ್ಮಕಥೆ ಎಂದು ಕರೆಯಲಾಗುವ ಈ ಪುಸ್ತಕದಲ್ಲಿ ಅವರ ಹೆಂಡತಿ, ಮಕ್ಕಳು, ಹೀಗೆ ಯಾವುದೇ ವಿವರಗಳಿಲ್ಲ. ಕಳೆದ ಏಳೂವರೆ ದಶಕದಲ್ಲಿ ಕರ್ನಾಟಕದ ಆಡಳಿತ ಮತ್ತು ರಾಜಕೀಯ ತಲುಪಿದ ನೈತಿಕ ಪತನದ ಕತೆ ಇದು. ಸರಕಾರದ ಒಬ್ಬ ಉನ್ನತ ಅಧಿಕಾರಿ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿ ಬಾಲಸುಬ್ರಮಣಿಯನ್ ನಮ್ಮ ಮುಂದೆ ನಿಲ್ಲುತ್ತಾರೆ. ಪ್ರತಿಯೊಬ್ಬರೂ ಓದಲೇಬೇಕಾದ ಅಪರೂಪದ ಪುಸ್ತಕವಿದು.

Update: 2023-10-16 06:20 GMT

ಸ್ವಾತಂತ್ರ್ಯದ ಏಳೂವರೆ ದಶಕಗಳ ನಂತರ ಭಾರತದ ಪ್ರಜಾಪ್ರಭುತ್ವ ಅಪಾಯದ ಅಂಚಿಗೆ ಬಂದು ನಿಂತಿದೆ. ಜನರ ನಂಬಿಕೆ ಕಳೆದುಕೊಂಡ ಮತ್ತು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟವಾದ ರಾಜಕಾರಣಿಗಳು, ಜನಸಾಮಾನ್ಯರಲ್ಲಿ ಮತೀಯ ವಿಷಬೀಜ ಬಿತ್ತಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿರುವ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಶಾಹಿ ಇವೆಲ್ಲ ಜನಶತ್ರುಗಳಿಂದಾಗಿ ವ್ಯವಸ್ಥೆಯು ಕುಸಿಯುವ ಸ್ಥಿತಿಗೆ ಬಂದು ತಲುಪಿದಾಗ ನಮ್ಮ ನಾಡಿನ ಅಪರೂಪದ ವಿ.ಬಾಲಸುಬ್ರಮಣಿಯನ್ ಅವರ ಆತ್ಮಕಥೆ ಕನ್ನಡದಲ್ಲಿ ಬಂದಿದೆ.ಅತ್ಯಂತ ಕುತೂಹಲಕಾರಿಯಾದ ದಟ್ಟ ನಿರಾಸೆಯ ದಿನಗಳಲ್ಲೂ ಭರವಸೆ ತುಂಬುವ ಬಾಲಸುಬ್ರಮಣಿಯನ್ ಅವರ ’ ಕಲ್ಯಾಣ ಕೆಡುವ ಹಾದಿ’ ಎಂಬ 431 ಪುಟಗಳ ಪುಸ್ತಕವನ್ನು ಕನ್ನಡದ ಅತ್ಯಂತ ಸತ್ವಶಾಲಿ ಲೇಖಕಿ ಎನ್.ಸಂಧ್ಯಾರಾಣಿ ಅವರು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸರಳವಾಗಿ ಓದಿಸಿಕೊಂಡು ಹೋಗುವ ಶೈಲಿ,ಆಸಕ್ತಿ ಮೂಡಿಸುವ ಘಟನಾವಳಿಗಳನ್ನು ಒಳಗೊಂಡ ಈ ಪುಸ್ತಕವನ್ನು ಲಡಾಯಿ ಪ್ರಕಾಶನದ ಜನ ಚಳವಳಿಗಳ ಆತ್ಮೀಯ ಸಂಗಾತಿ ಬಸವರಾಜ ಸೂಳಿಬಾವಿ ಬೆಳಕಿಗೆ ತಂದಿದ್ದಾರೆ.

46 ವರ್ಷ ಕರ್ನಾಟಕದ ಶಿವಮೊಗ್ಗ, ಬಿಜಾಪುರ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಮತ್ತು ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿ.ಬಾಲಸುಬ್ರಮಣಿಯನ್ ಅವರು ವೀರೇಂದ್ರ ಪಾಟೀಲ್, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಜೆ.ಎಚ್. ಪಟೇಲ್, ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸೇವೆ ಸಲ್ಲಿಸಿ ಅವರೆಲ್ಲರ ಬಂಡವಾಳ ಬಿಚ್ಚಿಟ್ಟಿದ್ದಾರೆ.

ಭಾರತದ ಆಡಳಿತ ಸೇವೆ ಎಂಬುದು ಬ್ರಿಟಿಷ್ ವಸಾಹತುಶಾಹಿಯ ಬಳುವಳಿ. ಅನೇಕ ಜನ ಕಲ್ಯಾಣ ಯೋಜನೆಗಳು ಸ್ವಾತಂತ್ರ್ಯಕ್ಕಿಂತ ಮೊದಲು ಮತ್ತು ನಂತರ ಜಾರಿಗೆ ಬರಲು ಈ ಅಧಿಕಾರಿ ವರ್ಗದ ಪಾತ್ರ ಕಡೆಗಣಿಸುವಂಥದ್ದಲ್ಲ. ಅಲ್ಲೂ ಹಡಗು ನುಂಗುವ ಖದೀಮರಿದ್ದಾರೆ ಎಂಬುದು ಸುಳ್ಳಲ್ಲ. ಆದರೆ, ಸರಕಾರದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಈ ಆಡಳಿತ ಸೇವೆಯಲ್ಲಿ ಬಾಲ ಸುಬ್ರಮಣಿಯನ್ ಅವರಂತಹ ಪರಿಶುದ್ಧ, ಜನಪರ,ಜೀವಪರ ಅಧಿಕಾರಿಗಳು ವ್ಯವಸ್ಥೆಯ ವಿರುದ್ಧ ಸೆಣಸುತ್ತ ಹೇಗೆ ಬಚಾವ್ ಆದರೆಂಬ ರೋಮಾಂಚಕ ಕತೆ ಈ ‘ಕಲ್ಯಾಣ ಕೆಡುವ ಹಾದಿ’ ಎಂಬ ಆತ್ಮಕಥೆ.

ಇದು ಬಾಲಸುಬ್ರಮಣಿಯನ್ ಅವರ ಆತ್ಮಕಥೆ ಯಾದರೂ ಅದಕ್ಕಿಂತ ಮಿಗಿಲಾಗಿ ಕರ್ನಾಟಕದ 75 ವರ್ಷಗಳ ಸರಕಾರದ, ರಾಜಕಾಣಿಗಳ ಕತೆಯೂ ಆಗಿದೆ.

ತಮಿಳುನಾಡಿನ ವಿ.ಬಾಲಸುಬ್ರಮಣಿಯನ್ ಫ್ಯುಡಲ್ ಹಿನ್ನೆಲೆಯ ಚೆಟ್ಟಿಯಾರ್ ಕುಟುಂಬದಿಂದ ಬಂದವರು. ರಂಗೂನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುವಾಗ ಮಾರ್ಕ್ಸ್‌ವಾದದ ಸೈದ್ಧಾಂತಿಕ ಸೆಳೆತಕ್ಕೆ ಸಿಕ್ಕರು. ಅರವತ್ತು ವರ್ಷ ಉನ್ನತ ಅಧಿಕಾರ ಸ್ಥಾನದಲ್ಲಿ ಇದ್ದಾಗಲೂ ಅವರ ಬದ್ಧತೆ ಮತ್ತು ಪರಿಶುದ್ಧತೆಗೆ ಧಕ್ಕೆ ಬರಲಿಲ್ಲ. ಸಾಮಾನ್ಯವಾಗಿ 20ನೇ ವಯಸ್ಸಿನಲ್ಲಿ ಕಮ್ಯುನಿಸ್ಟನಾದವನು 40 ದಾಟಿದ ನಂತರ ಬೂರ್ಷ್ವಾ ಆಗುತ್ತಾನೆ ಎಂಬ ಮಾತು ಜನ ಜನಿತ. ಆ ಮಾತಿನಂತೆ ಅನೇಕರು ಅಡ್ಡದಾರಿ ತುಳಿದು ಹಳ್ಳಕ್ಕೆ ಬಿದ್ದಿದ್ದಾರೆ. ರಾಯಚೂರು, ಬಿಜಾಪುರದ ಜಿಲ್ಲಾಧಿಕಾರಿ ಹಾಗೂ ಕರ್ನಾಟಕದ ಸಾಕ್ಷರತಾ ಆಂದೋಲನದ ಮುಖ್ಯಸ್ಥ ರಾಗಿದ್ದ ಮದನ ಗೋಪಾಲ್ ಒಂದು ಕಾಲದಲ್ಲಿ ಕಟ್ಟಾ ಮಾರ್ಕ್ಸ್‌ವಾದಿ.

ನಮ್ಮ ತಂದೆ ಕಮ್ಯುನಿಸ್ಟ್ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ, ಈ ಇಳಿ ವಯಸ್ಸಿನಲ್ಲಿ ಅವರೀಗ ಸಂಘಪರಿವಾರದ ಚಿಂತನ ಚಿಲುಮೆಯಾಗಿದ್ದಾರೆ. ಆದರೆ, ಈ ಬಾಲಸುಬ್ರಮಣಿಯನ್ ಹಾಗಲ್ಲ. ಇಪ್ಪತ್ತರ ತರುಣನಾಗಿದ್ದಾಗಿನ ಮಾರ್ಕ್ಸ್‌ವಾದಿ ಬದ್ಧತೆ ಈಗಲೂ ನಿಗಿ ನಿಗಿ ಕೆಂಡದಂತಿದೆ ಎಂಬುದು ಅವರ ಈ ಆತ್ಮಕಥೆ ಓದಿದರೆ ಸ್ಪಷ್ಟವಾಗುತ್ತದೆ.

ಈ ಬಾಲಸುಬ್ರಮಣಿಯನ್ ಎಂಥವರೆಂದರೆ 2001ರಲ್ಲಿ ಸೇವೆಯಿಂದ ನಿವೃತ್ತರಾದ ನಂತರ ಕರ್ನಾಟಕ ಸರಕಾರ ಇವರನ್ನು 2009-10ರಲ್ಲಿ ಭೂಕಬಳಿಕೆ ನಿಗ್ರಹ ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ಮಾಡಿ ವರದಿ ನೀಡುವಂತೆ ಕೇಳಿತ್ತು. ಸರಕಾರದ ಭೂಮಿಯನ್ನು ನುಂಗಿ ನೀರು ಕುಡಿಯುವ ಭೂ ಮಾಫಿಯಾದ ಹಗರಣವನ್ನು ಬಾಲಸುಬ್ರಮಣಿಯನ್ ತಮ್ಮ ವರದಿಯಲ್ಲಿ ಬಯಲಿಗೆಳೆದರು. ಒಟ್ಟು 19.5 ಲಕ್ಷ ಕೋಟಿ ಕಿಮ್ಮತ್ತಿನ 11,00,000 ಏಕರೆಗೂ ಹೆಚ್ಚು ಸರಕಾರಿ ಭೂಮಿ ಒತ್ತುವರಿಯಾಗಿದ್ದು ತಮ್ಮ ವರದಿಯಲ್ಲಿ ಬೆಳಕಿಗೆ ತಂದರು. ಇದು 2 ಜಿ ಮತ್ತು ಬಳ್ಳಾರಿ ಗಣಿ ಹಗರಣಕ್ಕಿಂತ ದೊಡ್ಡ ಮೊತ್ತ

ಬೇರೆ ಯಾರೇ ಆಗಿದ್ದರೂ ತಿಪ್ಪೆ ಸಾರಿಸುವ ವರದಿ ನೀಡುತ್ತಿದ್ದರು.ಆದರೆ ಬಾಲಸುಬ್ರಮಣಿಯನ್ ನೀಡಿದ ವರದಿ ಸರಕಾರಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿತು. ಕೊನೆಗೆ ಭೂ ಮಾಫಿಯಾ ಒತ್ತಡಕ್ಕೆ ಮಣಿದ ಸರಕಾರ ಬಾಲಸುಬ್ರಮಣಿಯನ್ ವರದಿ ಪ್ರಕಟಿಸಲು ನಿರಾಕರಿಸಿತು. ಆದರೆ, ಈ ಬಂಡುಕೋರ ಅಧಿಕಾರಿ ಸುಮ್ಮನಾಗಲಿಲ್ಲ. ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ವರದಿ ಪ್ರಕಟಿಸಿದರು.

1956ರಲ್ಲಿ ರಾಜ್ಯಗಳ ಪುನರ್ವಿಂಗಡನೆಯಾದ ಮೇಲೆ ಅಸ್ತಿತ್ವಕ್ಕೆ ಬಂದ ಕರ್ನಾಟಕದ ರಾಜಕಾರಣವನ್ನು ನಿಯಂತ್ರಿಸುತ್ತ ಬಂದದ್ದು ಎರಡು ಮುಖ್ಯ ಭೂಮಾಲಕರ ಸಮುದಾಯಗಳು. ಉತ್ತರ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ದಕ್ಷಿಣದಲ್ಲಿ ಒಕ್ಕಲಿಗರು.ಉಳಿದಂತೆ ಕುರುಬರೂ ಸೇರಿ ಹಿಂದುಳಿದ ಸಮುದಾಯಗಳು, ದಲಿತರು, ಮುಸಲ್ಮಾನರು ಭೂಮಾಲಕ ವರ್ಗಕ್ಕೆ ಪೂರಕವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಬಾಲಸುಬ್ರಮಣಿಯನ್ ತಮ್ಮ ಪುಸ್ತಕದಲ್ಲಿ ವಿಶ್ಲೇಷಿಸುತ್ತಾರೆ.

ತಮ್ಮ ಸೇವಾವಧಿಯಲ್ಲಿ ಬಾಲ ಸುಬ್ರಮಣಿಯನ್ ಅವರು ಐದಾರು ಮಂದಿ ಮುಖ್ಯಮಂತ್ರಿಗಳನ್ನು ಕಂಡಿದ್ದಾರೆ. ಅವರ ಜೊತೆಗೆ ಒಡನಾಡಿದ್ದಾರೆ. ಈ ಕಾಲಾವಧಿಯಲ್ಲಿ ಸಂಪುಟ ದರ್ಜೆಯ ಮಂತ್ರಿಯೊಬ್ಬರ ಟ್ರ್ಯಾಕ್ಟರ್ ಜಪ್ತಿ ಮಾಡಿದ ಪ್ರಸಂಗ ರೋಮಾಂಚಕಾರಿಯಾಗಿದೆ. ಹಿಂದಿನ ನಿಜಾಮ ಪ್ರಾಂತಕ್ಕೆ ಸೇರಿದ ರಾಯಚೂರು ಜಿಲ್ಲೆ ಊಳಿಗಮಾನ್ಯ ಪ್ರಾಬಲ್ಯದ ಪ್ರದೇಶ.ಇಲ್ಲಿ ಸಾವಿರಾರು ಏಕರೆಗಳ ಒಡೆತನ ಹೊಂದಿದ್ದ ಜಹಗಿರದಾರರು, ಪಾಟೀಲರು, ಧಣಿಗಳು ಮೊೆಯುತ್ತಿದ್ದರು.

ಭಾರತ ಸ್ವತಂತ್ರವಾದ ನಂತರವೂ ಕೆಲವರು ಐದು ಸಾವಿರ ಏಕರೆಗಟ್ಟಲೇ ಜಮೀನಿನ ಮಾಲಕತ್ವ ಹೊಂದಿದ್ದರು. ಅಲ್ಲಿ ಇವರೇ ಸರಕಾರ, ಇವರೇ ಕೋರ್ಟು. ಹೈದರಾಬಾದ್ ಕರ್ನಾಟಕದ ಬಹತೇಕ ಭೂಮಾಲಕರು ಲಿಂಗಾಯತರು. ಬಾಲಸುಬ್ರಮಣಿಯನ್ ಇಂಥ ಸಬ್

ಡಿವಿಜನ್‌ಗೆ ಅಧಿಕಾರಿಯಾಗಿ ಬಂದರು. ಅವರ ಅಧಿಕಾರ ವ್ಯಾಪ್ತಿಗೊಳಪಟ್ಟಿದ್ದ ಗೆಜ್ಜಲ ಘಟ್ಟದ ರಾಜ ಭಾರೀ ಭೂಮಾಲಕ. ಈ ಭೂಮಾಲಿಕನ ಮನೆಯಲ್ಲಿ ನಿಜಕ್ಕೂ ಯಜಮಾನಿಕೆ ಇದ್ದುದು ಆತನ ಪತ್ನಿ ರಾಣಿ ಬಸವರಾಜೇಶ್ವರಿ ಅವರದು.ಈಕೆ ವೀರೇಂದ್ರ ಪಾಟೀಲರ ಸಂಪುಟದ ಹಿರಿಯ ಸಚಿವೆ.ಭಾರೀ ಭೂಮಾಲಕ ಮನೆತನಕ್ಕೆ ಸೇರಿದ ರಾಯಚೂರು ಜಿಲ್ಲೆಯ ಗೆಜ್ಜಲಘಟ್ಟದ ರಾಣಿ ಎಂದು ಹೆಸರಾದವರು.ಈಕೆಯ ಕುಟುಂಬ ಸರಕಾರಕ್ಕೆ 72,000 ರೂಪಾಯಿ ಬಾಕಿ ಉಳಿಸಿಕೊಂಡಿತ್ತು. 1946 ನಂತರ ಒಂದು ಕಂತನ್ನೂ ಕಟ್ಟಿರಲಿಲ್ಲ.ಇದು ಎರಡು ಟ್ರ್ಯಾಕ್ಟರ್ ಹಾಗೂ ನೀರಾವರಿ ಪಂಪ್ ಸೆಟ್ ಮೇಲಿದ್ದ ಸಾಲ.ಈ ಬಾಕಿ ವಸೂಲಿ ಮಾಡಲು ಸರಕಾರದ ಯಾವ ಅಧಿಕಾರಿಗೂ ಧೈರ್ಯವಿರಲಿಲ್ಲ.

ಆದರೆ ಬಾಲಸುಬ್ರಮಣಿಯನ್ ಅವರೇ ಹೇಳುವಂತೆ ಮಾರ್ಕ್ಸ್‌ವಾದಿ ಯಾಗಿದ್ದ ನಾನು ಹೇಗೆ ಸುಮ್ಮನಿರಲಿ ಕೊನೆಗೂ 1967ರ ಒಂದು ಮುಂಜಾನೆ ಜೀಪ್‌ನಲ್ಲಿ ಗೆಜ್ಜಲಘಟ್ಟಕ್ಕೆ ಹೋಗಿ ಸಾಲ ವಸೂಲಿ ಕ್ರಮವಾಗಿ ರಾಣಿ ಬಸವರಾಜೇಶ್ವರಿ ಅವರ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಬಂದರು.ಇದು ಈ ಭಾಗದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತು.ಕಂದಾಯ ಸಚಿವರು ಫೋನ್ ಮಾಡಿದರು, ಆದರೆ ಬಾಲಸುಬ್ರಮಣಿಯನ್ ಒತ್ತಡಕ್ಕೆ ಮಣಿಯಲಿಲ್ಲಿ ಕೊನೆಗೆ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೆ ರಾಣಿಬಸವರಾಜೇಶ್ವರಿ ದೂರು ನೀಡಿದರು. ತಮ್ಮ ಟ್ರ್ಯಾಕ್ಟರ್ ಗಳನ್ನು ಬಿಡುಗಡೆ ಮಾಡಿ ಜಫ್ತಿ ಮಾಡಿದ ಅಸಿಸ್ಟೆಂಟ್ ಕಮಿಷನರ್ ಬಾಲ ಸುಬ್ರಮಣಿಯನ್ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಡ ತಂದರು.ಆದರೆ ಈ ಒತ್ತಡಕ್ಕೆ ಮಣಿಯದ ವೀರೇಂದ್ರ ಪಾಟೀಲರು ಕಾನೂನು ಪ್ರಕಾರ ನಡೆದುಕೊಂಡ ಅಧಿಕಾರಿಯ ವರ್ಗಾವಣೆ ಸರಿಯಲ್ಲ ಎಂದು ರಾಣಿಯ ಬೇಡಿಕೆಯನ್ನು ತಿರಸ್ಕರಿಸಿದರು. ಕೊನೆಗೆ ಬಸವರಾಜೇಶ್ವರಿ ಅವರು ಕೋಪ ಮಾಡಿಕೊಳ್ಳಬಾರದೆಂದು ಬಾಲಸುಬ್ರಮಣಿಯನ್ ಅವರನ್ನು ಹೈದರಾಬಾದ್‌ಗೆ ಓಚಿಣioಟಿಚಿಟ Iಟಿsಣiಣuಣe oಜಿ ಛಿommuಟಿiಣಥಿ ಆeveಟoಠಿmeಟಿಣ ಗೆ ತರಬೇತಿ ಗೆ ಕಳಿಸಿ ,ಸಾಲದ ಮೊತ್ತವನ್ನು ಮೂರು ಕಂತಿನಲ್ಲಿ ಕಟ್ಟಿಸಿಕೊಂಡು ಟ್ರ್ಯಾಕ್ಟರ್ ಗಳನ್ನು ರಾಣಿಗೆ ವಾಪಸು ಕೊಡಲಾಯಿತು. ಇಂಥ ಹಲವಾರು ರೋಚಕ ಪ್ರಸಂಗಗಳು ಈ ಪುಸ್ತಕದಲ್ಲಿವೆ.

ಬಾಲಸುಬ್ರಮಣಿಯನ್ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನ್ಯಾಯಾಧೀಶರಾಗಿ ಮೊದಲು ಅಧಿಕಾರ ವಹಿಸಿಕೊಂಡಿದ್ದು ಮಲೆನಾಡಿನ ಶಿವಮೊಗ್ಗದಲ್ಲಿ.ಅಲ್ಲಿ ಅಂದಿನ ಪ್ರಭಾವಿ ರಾಜಕಾರಣಿ ಹಾಗೂ ಭಾರೀ ಭೂಮಾಲಕ ಬದರಿನಾರಾಯಣ ಅಯ್ಯಂಗಾರರು ದಲಿತರಿಗೆ ಮಂಜೂರಾಗಿದ್ದ ಭೂಮಿಯನ್ನು ಕಬಳಿಸಲು ಹೊಂಚು ಹಾಕಿರುತ್ತಾರೆ. ಆಗ ದಲಿತರ ಪರವಾಗಿ ನಿಂತ ಬಾಲಸುಬ್ರಮಣಿಯನ್ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗುತ್ತದೆ.ಇದನ್ನು ಪ್ರತಿಭಟಿಸಿ ಅಂದಿನ ಸಮಾಜವಾದಿ ಪಕ್ಷದ ನಾಯಕರೂ ಶಾಸಕರೂ ಆಗಿದ್ದ ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಮತ್ತು ಕೋಣಂದೂರು ಲಿಂಗಪ್ಪ ಪ್ರತಿಭಟನಾ ಸಭೆಯನ್ನು ನಡೆಸಿದ್ದನ್ನು ಬಾಲಸುಬ್ರಮಣಿಯನ್ ಸ್ಮರಿಸಿದ್ದಾರೆ. ನಂತರ ಬಂಗಾರಪ್ಪ, ಜೆ.ಎಚ್.ಪಟೇಲರ ಒಡನಾಟದ ವಿವರಗಳು ಕುತೂಹಲಕಾರಿಯಾಗಿವೆ.

ಬಾಲಸುಬ್ರಮಣಿಯನ್ ಅವರೇ ಹೇಳಿಕೊಂಡಿರುವಂತೆ ಕಟ್ಟಾ ಮಾರ್ಕ್ಸ್‌ವಾದಿ. ಅಂಥವರು ವ್ಯವಸ್ಥೆಯ ಭಾಗ ಹೇಗಾದರು ಎಂಬ ಪ್ರಶ್ನೆ ಉದ್ಭವಿಸಬಹುದು.ಆದರೆ, ಅವರು ಅನುಸರಿಸಿದ ಮಾರ್ಗ ಭಿನ್ನವಾದದ್ದು.ವ್ಯವಸ್ಥೆಯ ಒಳಗಿದ್ದುಕೊಂಡೇ ಅಲ್ಲಿ ಸಾಧ್ಯ ವಾದಷ್ಟು ಪ್ರತಿರೋಧ ಒಡ್ಡುವುದು ಅವರ ದಾರಿ.ಇದರಲ್ಲಿ ಅವರು ಯಶಸ್ವಿಯಾಗಿದ್ದಾರೆ.ಒಬ್ಬ ಜನಪರ ಅಧಿಕಾರಿ ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದಾರೆ.ಬಾಲಸುಬ್ರಮಣಿಯನ್ ಅವರ ಬರಹದ ಶೈಲಿ ನೀರಸವಲ್ಲ.ಎಲ್ಲೂ ಲವಲವಿಕೆಯನ್ನು ಕಳೆದುಕೊಳ್ಳದ ನವಿರಾದ ಹಾಸ್ಯ ಅವರಿಗೆ ಸಿದ್ಧಿಸಿದೆ. 'ಈಚಿಟಟ ಈಡಿom ಉಡಿಚಿಛಿe' ಎಂಬ ಇಂಗ್ಲಿಷ್ ನಲ್ಲಿ ಬರೆದ ಈ ಆತ್ಮಕಥೆಯನ್ನು ಎನ್.ಸಂಧ್ಯಾರಾಣಿ ಅವರು ಅನುವಾದ ಎಂದು ಎಲ್ಲೂ ಅನಿಸದಂತೆ ಕನ್ನಡಕ್ಕೆ ತಂದಿದ್ದಾರೆ.

ತಾವು ಕಂಡ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಗ್ಗೆ ಯಾವುದೇ ಮುಲಾಜಿಲ್ಲದೇ ಬರೆದ ಬಾಲಸುಬ್ರಮಣಿಯನ್ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ , ಎಸ್.ಎಂ.ಕೃಷ್ಣ, ಬಂಗಾರಪ್ಪ ಮುಂತಾದ ವರ ಹವ್ಯಾಸಗಳ ಬಗ್ಗೆ ಬರೆಯುತ್ತಾರೆ. ಮಾಧ್ಯಮಗಳು ಭಾರೀ ಹಿರೋ ಎಂದು ಬಿರುದು ನೀಡಿದ್ದ ಕೋಲಾರದ ಜಿಲ್ಲಾಧಿಕಾರಿ ಯಾಗಿದ್ದ ಡಿ.ಕೆ.ರವಿ ಅವರ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ.ಹಳ್ಳಿಗಾಡಿನ ಬಡತನದ ಹಿನ್ನೆಲೆಯಿಂದ ಬಂದ ರವಿ ಎಂಬ ಕೇವಲ 35 ವಯಸ್ಸಿನ ಅಧಿಕಾರಿ ಐಷಾರಾಮಿ ಬದುಕಿಗೆ ಮರುಳಾಗಿ ಐಎಎಸ್‌ಗೆ ಸೇರಿದ ಮೂರೇ ವರ್ಷಗಳಲ್ಲಿ ತಮ್ಮದೊಂದು ರಿಯಲ್ ಎಸ್ಟೇಟ್ ಕಂಪೆನಿಯನ್ನು ಸ್ಥಾಪಿಸಿದರು. ಇಂತಹ ರವಿ ಆತ್ಮಹತ್ಯೆ ಮಾಡಿಕೊಂಡಾಗ ಮಾಧ್ಯಮಗಳು ಆಗ ಮಂತ್ರಿಗಳಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಜಾರ್ಜ್ ಕೈವಾಡದ ಶಂಕೆಯನ್ನು ವ್ಯಕ್ತಪಡಿಸಿದವು.ಆದರೆ ಸಿಬಿಐ ತನಿಖೆ ಯ ನಂತರ ರಿಯಲ್ ಎಸ್ಟೇಟ್ ದಂಧೆ ಮತ್ತು ನಿಷೇಧಿತ ಪ್ರೇಮ ಎರಡರಲ್ಲೂ ರವಿ ಅನುಭವಿಸಿದ ಸೋಲು ಸಾವಿಗೆ ಕಾರಣವೆಂದು ಬಯಲಾಯಿತು.ಇದರ ವಿವರಗಳನ್ನು ಬಾಲಸುಬ್ರಮಣಿಯನ್ ದಾಖಲಿಸಿದ್ದಾರೆ.

ಈ ಪುಸ್ತಕವನ್ನು ಓದಿದಾಗ ಕರ್ನಾಟಕದ ಕೆಲ ಮುಖ್ಯಮಂತ್ರಿಗಳು ಮತ್ತು ಅವರ ಹವ್ಯಾಸಗಳು, ಸರಕಾರದಲ್ಲಿ ಬೇರು ಬಿಟ್ಟ ಭ್ರಷ್ಟಾಚಾರ, ಅಧಿಕಾರಶಾಹಿಯ ಅಟ್ಟಹಾಸ ಇವುಗಳ ನಡುವೆ ಬದ್ಧತೆಗೆ ಹೆಸರಾದ ಪ್ರಾಮಾಣಿಕ, ದಕ್ಷ , ದಿಟ್ಟ ಅಧಿಕಾರಿಯೊಬ್ಬ ಇರುವ ವ್ಯವಸ್ಥೆ ಯೊಳಗೇ ಇದ್ದು ಕೊಂಡೇ ಅದನ್ನು ಸುಧಾರಿಸಲು ನಡೆಸಿದ ಹೋರಾಟ ಎಲ್ಲವೂ ಕಣ್ಣ ಮುಂದೆ ಬಂದು ನಿಲ್ಲುತ್ತವೆ.ಸಾಮಾನ್ಯವಾಗಿ ಸರಕಾರದ ಉನ್ನತ ಅಧಿಕಾರಿಗಳು ನಿವೃತ್ತರಾದ ನಂತರ ತಮ್ಮ ಆತ್ಮಕಥೆ ಬರೆಯುವುದು ಕಡಿಮೆ. ಬರೆದರೂ ಅಲ್ಲಿ ಸತ್ಯ ಮುಚ್ಚಿಟ್ಟು ಸ್ವಯಂ ವೈಭವೀಕರಣ ಮಾಡಿಕೊಳ್ಳುತ್ತಾರೆ. ಆದರೆ ಈ ಪುಸ್ತಕ ತುಂಬಾ ವಿಭಿನ್ನವಾಗಿದೆ. ಐಎಎಸ್, ಐಪಿಎಸ್ ಮುಂತಾದ ನಾಗರಿಕ ಸೇವೆಯ ನೇಮಕಾತಿ ಪರೀಕ್ಷೆ ಮತ್ತು ತರಬೇತಿಗಳಲ್ಲಿ ಇದನ್ನು ಕಡ್ಡಾಯವಾಗಿ ಪಠ್ಯಕ್ರಮದಲ್ಲಿ ಅಳವಡಿಸಿದರೆ ಸೂಕ್ತವಾಗುತ್ತದೆ.

ನನಗಿನ್ನೂ ನೆನಪಿದೆ. ಅದು ಎಪ್ಪತ್ತರ ದಶಕದ ಬರಗಾಲದ ಬವಣೆ.ನಮ್ಮ ಬಿಜಾಪುರ, ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಬರದ ಭೀಕರತೆಯಿಂದ ಜನ ತತ್ತರಿಸಿ ಹೋಗಿದ್ದರು. ಕಲಬುರಗಿಯ ಆಗಿನ ಜಿಲ್ಲಾಧಿಕಾರಿ ಎಂ.ಸಿ.ದಾಸ್ ತನ್ನ ಬಂಗಲೆಯನ್ನು ಬಿಟ್ಟು ಹೊರಗೆ ಬರಲು ಹೆದರುತ್ತಿದ್ದರು. ಇದು ಅಲ್ಲಿ ಭೇಟಿ ನೀಡಿದ್ದ ಆಗಿನ ಮುಖ್ಯಮಂತ್ರಿ ದೇವರಾಜ ಅರಸರ ಗಮನಕ್ಕೆ ಬಂದು ಬರಗಾಲ ಪರಿಸ್ಥಿತಿ ಯನ್ನು ಎದುರಿಸಬಲ್ಲ ಸಮರ್ಥ ಅಧಿಕಾರಿಯೆಂದು ಬಾಲಸುಬ್ರಮಣಿಯನ್ ಅವರನ್ನು ಶಿವಮೊಗ್ಗದಿಂದ ಕಲಬುರಗಿಗೆ ವರ್ಗಾವಣೆ ಮಾಡುತ್ತಾರೆ.

ಈ ವರ್ಗಾವಣೆಯನ್ನು ‘ಹಸಿರು ಸ್ವರ್ಗದಿಂದ ಕುದಿವ ನರಕಕ್ಕೆ’ ಎಂದು ವರ್ಣಿಸುವ ಬಾಲಸುಬ್ರಮಣಿಯನ್ ಇದನ್ನು ಒಂದು ಸವಾಲೆಂದು ಸ್ವೀಕರಿಸಿ ಬರ ಪರಿಹಾರ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಅತ್ಯಂತ ಸಮರ್ಥ, ದಕ್ಷ ಅಧಿಕಾರಿ ಎಂದು ಹೆಸರಾಗುತ್ತಾರೆ.

ಡಾ. ಯು.ಆರ್.ಅನಂತಮೂರ್ತಿ ಅವರು ಕಲಬುರಗಿಗೆ ಭೇಟಿ ನೀಡಿ ಬರದ ಪರಿಸ್ಥಿತಿ ಬಗ್ಗೆ ‘ಬರ’ ಎಂಬ ಕತೆಯನ್ನು ಬರೆಯುತ್ತಾರೆ. ಖ್ಯಾತ ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಅವರು ಈ ಕತೆಯನ್ನಾಧರಿಸಿ ‘ಬರ’ ಸಿನೆಮಾ ಮಾಡುತ್ತಾರೆ. ಅನಂತ ನಾಗ್ ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸುತ್ತಾರೆ. ಇದು ವಾಸ್ತವವಾಗಿ ಬಾಲಸುಬ್ರಮಣಿಯನ್ ಅವರು ಬರಗಾಲ ಎದುರಿಸಿದ ಕತೆ.

ಬಾಲಸುಬ್ರಮಣಿಯನ್ ಅವರ ಆತ್ಮಕಥೆ ಎಂದು ಕರೆಯಲಾಗುವ ಈ ಪುಸ್ತಕದಲ್ಲಿ ಅವರ ಹೆಂಡತಿ, ಮಕ್ಕಳು, ಹೀಗೆ ಯಾವುದೇ ವಿವರಗಳಿಲ್ಲ. ಕಳೆದ ಏಳೂವರೆ ದಶಕದಲ್ಲಿ ಕರ್ನಾಟಕದ ಆಡಳಿತ ಮತ್ತು ರಾಜಕೀಯ ತಲುಪಿದ ನೈತಿಕ ಪತನದ ಕತೆ ಇದು. ಸರಕಾರದ ಒಬ್ಬ ಉನ್ನತ ಅಧಿಕಾರಿ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿ ಬಾಲಸುಬ್ರಮಣಿಯನ್ ನಮ್ಮ ಮುಂದೆ ನಿಲ್ಲುತ್ತಾರೆ. ಪ್ರತಿಯೊಬ್ಬರೂ ಓದಲೇಬೇಕಾದ ಅಪರೂಪದ ಪುಸ್ತಕವಿದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಸನತ್ ಕುಮಾರ ಬೆಳಗಲಿ

contributor

Similar News