ಇದು ದಣಿವರಿಯದ ಹೋರಾಟಗಾರನ ಕತೆ

Update: 2023-11-20 05:59 GMT

ನಾವೀಗ ಬದುಕಿರುವ ಕಾಲ ಹೋರಾಟಗಳದ್ದು ಅಲ್ಲ. ಇದು ಶರಣಾಗತಿಯ ಕಾಲ. ಹೋರಾಟ, ಚಳವಳಿ, ಸತ್ಯಾಗ್ರಹಗಳು ಎಂಭತ್ತರ ದಶಕದ ಅಂತ್ಯದಲ್ಲಿ ಕೊನೆಗೊಂಡವು. ಯಾವಾಗ ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿತ್ತೋ ಆವಾಗಲೇ ಜಗತ್ತಿನ ಸಾಮಾಜಿಕ, ಆರ್ಥಿಕ ವಾತಾವರಣ ಬದಲಾಗತೊಡಗಿತು. ನಂತರ ಪೂರ್ವ ಯುರೋಪಿನ ಸಮಾಜವಾದಿ ಸರಕಾರಗಳು ಒಂದೊಂದಾಗಿ ಉರುಳಿ ಬೀಳುತ್ತಿದ್ದಂತೆ ಜಾಗತಿಕವಾಗಿ ಮಾರುಕಟ್ಟೆಯ ಅಬ್ಬರ ತೀವ್ರವಾಯಿತು. ಸಾಮಾಜಿಕ, ಆರ್ಥಿಕ ನ್ಯಾಯದ, ಸಮಾನತೆಯ ಜಾಗವನ್ನು ಮಾರುಕಟ್ಟೆ ಆರ್ಥಿಕತೆ ಆಕ್ರಮಿಸಿತು. ಹೀಗೆ ಎಲ್ಲವೂ ಪಲ್ಲಟಗೊಳ್ಳತೊಡಗಿದಾಗಲೂ ಹೋರಾಟಗಳು ಇನ್ನೂ ಕೊನೆಗೊಂಡಿಲ್ಲ ಎಂದು ಸಾರಿ ಸಾರಿ ಹೇಳಿದವರು ಎಸ್.ಆರ್.ಹಿರೇಮಠರು.

ನಮ್ಮ ನಡುವೆ ಹಿರೇಮಠರಂಥ ದಣಿವರಿಯದ ಹೋರಾಟಗಾರರಂತೆ ದಣಿವರಿಯದ ಲೇಖಕಿಯರೂ ಇದ್ದಾರೆ. ಹಾಸನದ ರೂಪಾ ಹಾಸನ ಅವರು ಇಂಥ ದಣಿವರಿಯದ ಲೇಖಕಿ ಮಾತ್ರವಲ್ಲ, ಹಲವಾರು ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ರೂಪಾ ಹಾಸನ ಅವರು ತುಂಬಾ ಪರಿಶ್ರಮ ಪಟ್ಟು ಹಿರೇಮಠರ ಬದುಕಿನ ಪಯಣವನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ.

‘ಮಹಾ ಸಂಗ್ರಾಮಿ’ ಇದು ಹಿರೇಮಠರ ಜೀವನ ಕಥನ. ಅವಿಭಜಿತ ಧಾರವಾಡ ಜಿಲ್ಲೆಯ ಈಗಿನ ಗದಗ ಜಿಲ್ಲೆಯ ಬೆಳವಣಿಕೆಯಿಂದ ಆರಂಭವಾಗಿ, ಬಿಜಾಪುರಕ್ಕೆ ಬಂದು ನಂತರ ಹುಬ್ಬಳ್ಳಿ ಮೂಲಕ ಅಮೆರಿಕ ಮತ್ತು ಯುರೋಪಿನ ಹಲವಾರು ದೇಶಗಳಲ್ಲಿ ವಿಸ್ತರಿಸಿಕೊಂಡಿರುವ ಹಿರೇಮಠರ ಬದುಕಿನ ಕತೆಯನ್ನು 440 ಪುಟಗಳ ಪುಸ್ತಕದಲ್ಲಿ ಕಟ್ಟಿಕೊಡುವುದು ಸುಲಭದ ಸಂಗತಿಯಲ್ಲ. ಎಲ್ಲೂ ಪುನರಾವರ್ತಿ ಆಗದಂತೆ, ಬೇಸರವಾಗದಂತೆ ಓದಿಸಿಕೊಂಡು ಹೋಗುವ ಈ ಪುಸ್ತಕ ಕನ್ನಡ ಸಾಹಿತ್ಯದ ಅಪರೂಪದ ಕೃತಿ. ಕನ್ನಡದಲ್ಲಿ ಸ್ವಾತಂತ್ರ್ಯಾ ನಂತರ ಬಂದ ಹೋರಾಟಗಾರರ ಬದುಕಿನ ಕುರಿತು ಪುಸ್ತಕಗಳು ಬಂದಿರುವುದು ವಿರಳ. ಹಿರೇಮಠರ ಕುರಿತ ರೂಪಾ ಅವರ ಈ ಪುಸ್ತಕ ಆ ಕೊರತೆಯನ್ನು ಕೊಂಚ ಮಟ್ಟಿಗೆ ನೀಗಿಸಿದೆ.

ಹಿರೇಮಠರ ಹೆಸರು ಕರ್ನಾಟಕದಲ್ಲಿ ದೊಡ್ಡದಾಗಿ ಕೇಳಿ ಬಂದದ್ದು ಬಳ್ಳಾರಿಯ ಗಣಿ ಲೂಟಿಯ ವಿರುದ್ಧ ಅವರು ಧ್ವನಿಯೆತ್ತಿದಾಗ. ಯಡಿಯೂರಪ್ಪನವರ ನೇತೃತ್ವದ ಮೊದಲ ಬಿಜೆಪಿ ಸರಕಾರ ‘ಆಪರೇಶನ್ ಕಮಲದ’ ಮೂಲಕ ಅಸ್ತಿತ್ವಕ್ಕೆ ಬಂದಾಗ ಜನಾರ್ದನ ರೆಡ್ಡಿ ಅಂದಿನ ಸರಕಾರವನ್ನೇ ನಿಯಂತ್ರಿಸುತ್ತಿದ್ದರು. ಬಳ್ಳಾರಿಯಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದರು.ಅಲ್ಲಿ ಕೈ ಹಾಕುವ ಸಾಮರ್ಥ್ಯ ಮುಖ್ಯಮಂತ್ರಿಗೂ ಇರಲಿಲ್ಲ. ಬಹುತೇಕ ಮಾಧ್ಯಮಗಳು ಧ್ವನಿ ಕಳೆದುಕೊಂಡಿದ್ದವು. ಪ್ರತಿಪಕ್ಷಗಳು ಉಸಿರಾಡುವುದು ಕಷ್ಟವಿತ್ತು.

ನಿತ್ಯ ಬಳ್ಳಾರಿ ಮತ್ತು ಸುತ್ತಮುತ್ತಲಿನ ಗಣಿಗಳಿಂದ ಸಾವಿರಾರು ಟನ್ ಅದಿರು ನೂರಾರು ಲಾರಿಗಳ ಮೂಲಕ ಕಾರವಾರ ಬಂದರ್‌ಗೆ ಹೋಗುತ್ತಿತ್ತು. ರಸ್ತೆಗಳು ತೆಗ್ಗು ಬಿದ್ದು ಗಬ್ಬೆದ್ದು ಹೋಗಿದ್ದವು.ಅಕ್ರಮ ಹಣದ ಶಕ್ತಿಯ ಮುಂದೆ ಎಲ್ಲರೂ ಶರಣಾಗತರಾದಂತಾದಾಗ ಸಂಗಯ್ಯ ರಾಚಯ್ಯ ಹಿರೇಮಠರು ಕಾನೂನು ಹೋರಾಟಕ್ಕಿಳಿದರು. ನಂತರ ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಬಳ್ಳಾರಿಗೆ ಪಾದಯಾತ್ರೆ ಹೊರಟರು. ಇದು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಸಂಗತಿ.

ಹಿರೇಮಠರಿಗೆ ನಿರ್ದಿಷ್ಟವಾಗಿ ಯಾವುದೇ ಸೈದ್ಧಾಂತಿಕ ಹಿನ್ನೆಲೆಯಿಲ್ಲ.ಅನ್ಯಾಯದ ಎದುರು ಹೋರಾಡುವುದೇ ಅವರ ಸಿದ್ಧಾಂತ. ಅವರದ್ದು ಏಕಾಂಗಿ ಹೋರಾಟವಾದರೂ ಅವರ ಬೆನ್ನ ಹಿಂದೆ ಸಮಾನ ಮನಸ್ಕ ಸ್ನೇಹಿತರ ದೊಡ್ಡ ಬಳಗವಿದೆ.

ಸಾಮಾನ್ಯವಾಗಿ ಅಮೆರಿಕ ಅಥವಾ ಯಾವುದೇ ಹೊರದೇಶಕ್ಕೆ ನೌಕರಿ ಮಾಡಲು ಹೋದವರು ವಾಪಸು ಬರುವುದು ವಿರಳ. ಅಲ್ಲಿನ ಐಷಾರಾಮಿ ಜೀವನವನ್ನು ಬಿಟ್ಟು ತಾಯ್ನಾಡಿನ ಋಣವನ್ನು ತೀರಿಸಲು ವಾಪಸು ಬಂದ ಹಿರೇಮಠರು ತಮ್ಮ ಅಮೆರಿಕದ ಪತ್ನಿಯೊಂದಿಗೆ ರಾಣಿಬೆನ್ನೂರ ತಾಲೂಕಿನಲ್ಲಿ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’( ಐಡಿಎಸ್) ಎಂಬ ಸ್ವಯಂ ಸೇವಾ ಸಂಸ್ಥೆಯ ಮೂಲಕ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹರಿಹರ ಪಾಲಿ ಫೈಬರ್ ಕಾರ್ಖಾನೆ ತುಂಗಭದ್ರಾ ನದಿಗೆ ಬಿಡುತ್ತಿದ್ದ ತ್ಯಾಜ್ಯದ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡುತ್ತಾರೆ. ತಮ್ಮ ಚಟುವಟಿಕೆಗಳನ್ನು ಅಲ್ಲಿಗೆ ಸೀಮಿತಗೊಳಿಸದೇ ರಾಜ್ಯ ಮಟ್ಟಕ್ಕೆ ವಿಸ್ತರಿಸುತ್ತಾರೆ.

ಬಾಲ್ಯದಿಂದಲೂ ಹಿರೇಮಠರದು ಹೋರಾಟದ ಬದುಕು. ಬೆಳವಣಿಕೆಯಲ್ಲಿ ಜನಿಸಿ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ತವರು ಮನೆ ಬಿಜಾಪುರಕ್ಕೆ ಬರುತ್ತಾರೆ.ಅಲ್ಲಿ ಶಾಲೆ ಸೇರಿ ಹುಬ್ಬಳ್ಳಿಯ ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿಗೆ ಬಂದು ಪದವಿ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿ ಅಲ್ಲೇ ಕಾರ್ಪೊರೇಟ್ ಕಂಪೆನಿಯಲ್ಲಿ ನೌಕರಿ ಸೇರುತ್ತಾರೆ. ಚಿಕಾಗೋ ನಗರದಲ್ಲಿ ನೆಲೆಸಿ ತಾವು ಪ್ರೀತಿಸಿದ ಮೆನಿಸ್ಸಾ ಎಂಬ ಯುವತಿಯನ್ನು ತನ್ನ ತಾಯಿಯ ಸಮ್ಮತಿಯೊಂದಿಗೆ ಮದುವೆಯಾಗುತ್ತಾರೆ. ಮಗನ ಇಷ್ಟದಂತೆ ಮದುವೆಗೆ ಒಪ್ಪುವ ಹಿರೇಮಠರ ತಾಯಿ ಸೊಸೆಗೆ ಶ್ಯಾಮಲಾ ಎಂದು ಹೆಸರಿಡುತ್ತಾರೆ. ಹೀಗೆ ಬದುಕಿನ ಪಯಣವನ್ನು ಆರಂಭಿಸಿದ ಹಿರೇಮಠರು ಇಂದಿರಾಗಾಂಧಿ ಅವರು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದರ ವಿರುದ್ಧ ಅಮೆರಿಕದ ಭಾರತೀಯ ಮೂಲದ ಮಿತ್ರರನ್ನು ಸೇರಿಸಿ ಹೋರಾಟವನ್ನು ಸಂಘಟಿಸುತ್ತಾರೆ.

ಹಿರೇಮಠರದ್ದು ಬಹುಮುಖಿ ವ್ಯಕ್ತಿತ್ವ. ರಾಣೆಬೆನ್ನೂರಿನ ಮೆಡ್ಲೇರಿಯಲ್ಲಿ ಒಂದು ಸ್ವಯಂ ಸೇವಾ ಸಂಸ್ಥೆ ಕಟ್ಟಿಕೊಂಡು ಅವರು ಸುಖವಾಗಿ ಇರಬಹುದಾಗಿತ್ತು. ಆದರೆ, ಅವರದ್ದು ಸುಮ್ಮನೇ ಒಂದೆಡೆ ಇರುವ ವ್ಯಕ್ತಿತ್ವ ಅಲ್ಲ. ಅನ್ಯಾಯದ ವಿರುದ್ಧ ಹೋರಾಡಲು ಹಲವಾರು ಹೊಸ ಸಂಘಟನೆಗಳನ್ನು ಕಟ್ಟಿಕೊಂಡರು. 1984ರಲ್ಲಿ ಸಮಾಜ ಪರಿವರ್ತನಾ ಸಮುದಾಯ ಮತ್ತು ಜನ ಸಂಗ್ರಾಮ ಪರಿಷತ್ ಕಟ್ಟಿಕೊಂಡರು. ಆಗ ಜೊತೆಯಾದವರು ರಾಯಚೂರಿನ ರಾಘವೇಂದ್ರ ಕುಷ್ಟಗಿ. ಕಮ್ಯುನಿಸ್ಟ್ ಚಳವಳಿಯಿಂದ ಬಂದ ರಾಘವೇಂದ್ರ ಕುಷ್ಟಗಿ ಕೂಡ ಬಳ್ಳಾರಿಯ ಗಣಿಗಾರಿಕೆ ವಿರುದ್ಧ ಕೊತ ಕೊತ ಕುದಿಯುತ್ತಿದ್ದರು. ಆಗ ಹಿರೇಮಠರ ಪರಿಚಯವಾಗಿ ಇಬ್ಬರೂ ಕೂಡಿ ಹೋರಾಟ ಆರಂಭಿಸಿದರು. ಆಗ ಇವರ ನೆರವಿಗೆ ಬಂದವರು ಸುಪ್ರೀಂ ಕೋರ್ಟ್ ವಕೀಲರಾದ ಪ್ರಶಾಂತ್ ಭೂಷಣ. ಹಿರೇಮಠರಿಗೆ ರಾಘವೇಂದ್ರ ಕುಷ್ಟಗಿ ಅವರ ಸಾಂಗತ್ಯ ದೊರೆತ ನಂತರ ಹೋರಾಟ ಬಿರುಸಾಯಿತು.ತಮ್ಮನ್ನು ತಡೆಯುವವರೇ ಇಲ್ಲವೆಂದು ಹೂಂಕರಿಸುತ್ತಿದ್ದ ಗಣಿ ಲೂಟಿಕೋರರನ್ನು ಜೈಲಿಗೆ ಅಟ್ಟುವಲ್ಲಿ ಹಿರೇಮಠ ಯಶಸ್ವಿಯಾದರು. ಬಳ್ಳಾರಿ ಗಣಿ ಸಾಮ್ರಾಜ್ಯ ಕುಸಿಯಿತು.

ಇವರು ಎಲ್ಲಿಯವರೆಗೆ ಬಿಸಿ ಮುಟ್ಟಿಸಿದರೆಂದರೆ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಜೈಲಿಗೆ ಹೋಗಿ ಬರಬೇಕಾಯಿತು. ಇದಕ್ಕಾಗಿ ಹಿರೇಮಠರು ಪಟ್ಟ ಪ್ರಯಾಸ ಸಾಮಾನ್ಯವಾದುದಲ್ಲ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಮತ್ತು 1,250 ಪುಟಗಳ ಅಕ್ರಮ ಗಣಿಗಾರಿಕೆಯ ದಾಖಲೆಯನ್ನು ಲೋಕಾಯುಕ್ತರಿಂದ ಪಡೆದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದರು. ಆಗ ಹಿರೇಮಠರಿಗೆ 70 ವರ್ಷ. ಎಲ್ಲ ದಾಖಲೆಗಳನ್ನು ಹೊತ್ತುಕೊಂಡು ಸ್ವತಃ ದಿಲ್ಲಿಗೆ ಹೋಗುತ್ತಿದ್ದರು. ಅಲ್ಲಿ ಗಾಂಧಿ ಭವನದಲ್ಲಿ ತಂಗಿ ವಕೀಲರನ್ನು ಕಂಡು ತಮ್ಮ ಕೆಲಸ ಮುಗಿಸಿಕೊಂಡು ವಾಪಸ್‌ಬರುತ್ತಿದ್ದರು. ಮೊದಲು ಕಟ್ಟಿಕೊಂಡ ಸ್ವಯಂಸೇವಾ ಸಂಸ್ಥೆಗೆ ಅಮೆರಿಕದ ಸ್ನೇಹಿತರಿಂದ ನೆರವನ್ನು ಪಡೆಯುತ್ತಿದ್ದ ಹಿರೇಮಠರು ಭ್ರಷ್ಟಾಚಾರದ ವಿರುದ್ಧ ಜನ ಸಂಗ್ರಾಮ ಪರಿಷತ್ ಕಟ್ಟಿಕೊಂಡಾಗ ಅವರ ನೆರವನ್ನು ನಿರಾಕರಿಸಿದರು. ಈಗಲೂ ಜನ ಸಂಗ್ರಾಮ ಪರಿಷತ್ ಕ್ರಿಯಾಶೀಲವಾಗಿದೆ.

ಹಿರೇಮಠರು ನಂತರ ಕಟ್ಟಿಕೊಂಡ ಸಮಾಜ ಪರಿವರ್ತನಾ ಸಂಸ್ಥೆ ಹಾಗೂ ಜನ ಸಂಗ್ರಾಮ ಪರಿಷತ್‌ಗಳ ಹೋರಾಟಗಳನ್ನು ರೂಪಾ ಹಾಸನ ವಿವರವಾಗಿ ದಾಖಲಿಸಿದ್ದಾರೆ.

ತಾತ್ವಿಕ ನಿಲುವು, ಸಮರ್ಪಣಾ ಮನೋಭಾವ, ಪಾರದರ್ಶಕತೆ, ಬದ್ಧತೆ ಇವುಗಳಿಗೆ ಇವೆರಡು ಸಂಘಟನೆಗಳು ಹೆಸರಾಗಿದ್ದರೂ ಒಟ್ಟು ಜನ ಸಮುದಾಯಗಳ ಹೋರಾಟಗಳಾಗಿ ಯಾಕೆ ಇಡೀ ರಾಜ್ಯಾದ್ಯಂತ ವ್ಯಾಪಿಸಲಿಲ್ಲ ಎಂಬ ಪ್ರಶ್ನೆ ರೂಪಾ ಹಾಸನ ಅವರನ್ನು ಯೋಚಿಸುವಂತೆ ಮಾಡಿದೆ. ಅದಕ್ಕೆ ಅವರು ಉತ್ತರ ಕಂಡುಕೊಳ್ಳಲು ಯತ್ನಿಸಿದ್ದಾರೆ.

ಬಹುಶಃ ಎನ್‌ಜಿಒ (ಸರಕಾರೇತರ ಸ್ವಯಂಸೇವಾ ಸಂಸ್ಥೆ) ಮಾದರಿಯ ರಚನೆ ಹಾಗೂ ಕಾರ್ಯಸ್ವರೂಪ ಇವು ವ್ಯಾಪಕವಾಗದಿರಲು ಕಾರಣ ಎಂದು ರೂಪಾ ಹೇಳುತ್ತಾರೆ. ಆದರೆ, ನಂತರದ ಬೆಳವಣಿಗೆ ಕುತೂಹಲ ಕಾರಿಯಾಗಿದೆ. ರಾಜ್ಯ ರೈತ ಸಂಘ, ದಲಿತ ಸಂಘಟನೆಗಳು ಸೇರಿ ಜನಾಂದೋಲನಗಳ ಮಹಾ ಒಕ್ಕೂಟ ಸ್ಥಾಪನೆ ಇವುಗಳು ಮಿತಿ ದಾಟುವ ಯತ್ನವಾಗಿರಬಹುದು.

ಸ್ವಯಂ ಸೇವಾ ಸಂಸ್ಥೆಗಳಿಗೆ ಎಷ್ಟೇ ಇತಿಮಿತಿಗಳಿರಲಿ ಅನ್ಯಾಯಕ್ಕೊಳಗಾದ ತಳ ಸಮುದಾಯಗಳ ನಡುವೆ ಇವುಗಳ ಕಾರ್ಯ ಗಮನಾರ್ಹವಾಗಿದೆ. ಗುಜರಾತಿನಲ್ಲಿ 2002ರಲ್ಲಿ ಕೋಮು ಹತ್ಯಾಕಾಂಡ ನಡೆದಾಗ ನಿರಾಶ್ರಿತರ ಪರವಾಗಿ ಸ್ವಯಂ ಸೇವಾ ಸಂಸ್ಥೆಗಳು ಮಾಡಿದ ಕಾರ್ಯ ಗಮನಾರ್ಹ ವಾಗಿವೆ.ಹಿರೇಮಠರೂ ಕರ್ನಾಟಕ ಕಂಡ ಬಹುದೊಡ್ಡ ಹೋರಾಟಗಾರರು. ಅವರು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದರೂ ಅದನ್ನೂ ಮೀರಿ ಬಹು ಎತ್ತರಕ್ಕೆ ಬೆಳೆದು ನಿಂತವರು.ಅಂತಲೇ ದೇವನೂರ ಮಹಾದೇವರಂಥವರು ಹಿರೇಮಠರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ.

ಅನ್ಯಾಯ, ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವಾಗ ಹಿರೇಮಠರು ಪಕ್ಷ, ಜಾತಿ, ಧರ್ಮಗಳನ್ನು ನೋಡುವುದಿಲ್ಲ. ಸ್ವತಃ ಯಾವುದೇ ಜಾತಿಯ ಜೊತೆ ಗುರುತಿಸಿಕೊಳ್ಳದ ಹಿರೇಮಠರದು ಅಪ್ಪಟ ಸೆಕ್ಯುಲರ್ ವ್ಯಕ್ತಿತ್ವ. ಜನಾರ್ದನರೆಡ್ಡಿ, ಯಡಿಯೂರಪ್ಪ ಮಾತ್ರವಲ್ಲ ಕಾಂಗ್ರೆಸಿನ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಕುಮಾರ್ ಅವರ ವಿರುದ್ಧವೂ ಹಿರೇಮಠರು ಹೋರಾಟದ ಕಹಳೆಯನ್ನು ಮೊಳಗಿಸಿದ್ದಾರೆ. ನಾಡಿನ ನೆಲ, ಜಲ, ಕಾಡು, ಜನ ಹೀಗೆ ಎಲ್ಲದರ ಕಾವಲುಗಾರರಂತೆ ಕರುಳಿಗೆ ಹಚ್ಚಿಕೊಂಡು ಹಿರೇಮಠರು ಹೋರಾಡುತ್ತಿದ್ದಾರೆ.

ಹಿರೇಮಠರ ಹೋರಾಟಗಾಥೆಯನ್ನು ಬರೆಯಲು ರೂಪಾ ಹಾಸನ ಹೇಗೆ ಪುರುಸೊತ್ತು ಮಾಡಿಕೊಂಡರು ಎಂಬುದೇ ಅಚ್ಚರಿಯ ಸಂಗತಿ. ಸ್ವತಃ ಕವಯಿತ್ರಿ, ಶಿಕ್ಷಣ ಮತ್ತು ಪರಿಸರ ಕಾರ್ಯಕರ್ತೆಯಾಗಿ, ಮಕ್ಕಳು ಮತ್ತು ಮಹಿಳೆಯರ ನೋವು ಸಂಕಟಗಳಿಗೆ ಸ್ಪಂದಿಸುತ್ತಾ, ಅವಿರತ ಹೋರಾಟಗಾರ್ತಿಯಾಗಿ ಸದಾ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೂಪಾ ಅವರು ಸದಾ ಕ್ರಿಯಾಶೀಲರಾಗಿರುವ ಪಾದರಸದಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೊಂದೆಡೆ ಓಡಾಡುವ ಹಿರೇಮಠರನ್ನು ಒಂದೆಡೆ ಕೂರಿಸಿ ಹಲವಾರು ಸಂದರ್ಶನಗಳನ್ನು ಮಾಡಿ (120 ಗಂಟೆಗಳ ರೆಕಾರ್ಡಿಂಗ್ ), ಅವುಗಳನ್ನು ಸೋಸಿ, ಸೋಸಿ ಚಿನ್ನ ಹುಡುಕಿ ಈ ಅಪರೂಪದ ಪುಸ್ತಕ ರಚಿಸಿದ್ದಾರೆ. ಮೈಸೂರಿನ ಅಭಿರುಚಿ ಪ್ರಕಾಶನದ ಗಣೇಶ್ ಪ್ರಕಟಿಸಿದ್ದಾರೆ. ಕನ್ನಡಿಗರು ಮಾತ್ರವಲ್ಲ ಬೇರೆ ಭಾಷೆಗಳಿಗೂ ಅನುವಾದವಾಗಿ ಎಲ್ಲರೂ ಓದಲೇಬೇಕಾದ ಪುಸ್ತಕವಿದು.

ಹಿರೇಮಠರಿಗೆ ಈಗ ಎಂಭತ್ತು ವರ್ಷ. ಇಂದಿರಾಗಾಂಧಿ ಅವರ ತುರ್ತು ಪರಿಸ್ಥಿತಿ ವಿರುದ್ಧ ಮೂವತ್ತನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ಸಿಡಿದೆದ್ದ ಹಿರೇಮಠರು ಎಂಭತ್ತರ ಇಳಿ ವಯಸ್ಸಿನಲ್ಲಿ ತುರ್ತುಪರಿಸ್ಥಿತಿಗಿಂತ ಅಪಾಯಕಾರಿಯಾದ ಕೋಮುವಾದಿ, ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಸಮಾನ ಮನಸ್ಕ ವ್ಯಕ್ತಿ, ಶಕ್ತಿಗಳ ಜನಾಂದೋಲನಗಳ ಒಕ್ಕೂಟ ಬಲಪಡಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ. ಹೊಸ ರಕ್ತದ ಯುವಕರ ಬಗ್ಗೆ ಬಹಳ ಭರವಸೆಯನ್ನು ಇಟ್ಟುಕೊಂಡಿದ್ದಾರೆ.

ಆದರೆ, ಮೊಬೈಲ್ ಮಾಯೆಯಲ್ಲಿ, ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳಲ್ಲಿ ಕಳೆದು ಹೋಗುತ್ತಿರುವ ಯುವಕರು ಮತ್ತೆ ಹಳಿಗೆ ಬರುವರೇ ಎಂಬುದನ್ನು ಕಾದು ನೋಡಬೇಕಾಗಿದೆ. ತಮ್ಮ ಕನಸುಗಳನ್ನು ಯುವಕರ ಕಣ್ಣುಗಳಲ್ಲಿ ಕಾಣಲು ಹಿರೇಮಠರು ಬಯಸಿದ್ದಾರೆ. ಕಾಲವೇ ಎಲ್ಲವನ್ನೂ ಹೇಳಬೇಕು. ಒಟ್ಟಾರೆ ಕರ್ನಾಟಕದ ಒಬ್ಬ ದಣಿವರಿಯದ ಮಹಾನ್ ಹೋರಾಟಗಾರನ ಈ ಕತೆ ರೋಮಾಂಚಕ ಮಾತ್ರವಲ್ಲ, ವಿಚಾರ ಪ್ರೇರಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News