ಈ ನಿರರ್ಥಕ ವಿವಾದಗಳಿಗೆ ಕೊನೆಯೆಂದು?
ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ ರಾಜಕಾರಣಿಗಳು ಮಾತ್ರವಲ್ಲ ಎಲ್ಲ ಧರ್ಮಗಳ ಧರ್ಮಗುರುಗಳು, ಧಾರ್ಮಿಕ ನಾಯಕರು ಮತ್ತು ಮಠಾಧೀಶರ ಹೊಣೆಗಾರಿಕೆ ಮಹತ್ವದ್ದಾಗಿದೆ. ಬಾಬರಿ ಮಸೀದಿಯಂಥ ಘಟನೆ ಮತ್ತೆ ಸಂಭವಿಸಬಾರದೆಂದರೆ ಕೋಮುವಾದಿ ಸಂಘಟನೆಗಳಿಂದ ಅಂತರ ಕಾಪಾಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ಭಾಗವತರು ಸೇರಿದಂತೆ ಸಂಘ ಪರಿವಾರದ ಜವಾಬ್ದಾರಿಯುತ ನಾಯಕರು ಸಾಮಾಜಿಕ ಶಾಂತಿಗೆ ಕಾರಣವಾಗುವ ಮಥುರಾ, ಕಾಶಿ, ಬಾಬಾಬುಡಾನಗಿರಿ ಸೇರಿದಂತೆ ಯಾವುದೇ ವಿವಾದವನ್ನು ಹುಟ್ಟು ಹಾಕುವುದಿಲ್ಲವೆಂದು ಭಾರತಿಯರಿಗೆ ಆಶ್ವಾಸನೆ ನೀಡಲಿ.
ಅಯ್ಯೋಧ್ಯೆಯ ಮಂದಿರ ನಿರ್ಮಾಣದ ನಂತರ ಇನ್ನು ಮುಂದಾದರೂ ಭಾರತ ನೆಮ್ಮದಿಯಾಗಿರುವುದೇ? ಅಂಥ ಭರವಸೆಗಳು ಕಾಣುತ್ತಿಲ್ಲ. ಮೊದಲೇ ಸಿದ್ಧಪಡಿಸಿದ ಕಾರ್ಯತಂತ್ರದಂತೆ ಮಥುರಾ ಮತ್ತು ಕಾಶಿ ವಿವಾದಗಳು ಮುಂದೆ ಬಂದಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಅವೆರಡನ್ನು ಬಿಟ್ಟು ಕೊಡಲು ಒತ್ತಾಯಿಸಿದ್ದಾರೆ. ನಿರೀಕ್ಷಿಸಿದಂತೆ ಅಯೋಧ್ಯೆಯಲ್ಲಿ 1992 ಡಿಸೆಂಬರ್ 6 ರಂದು ಕರಸೇವಕರು ಬಾಬರಿ ಮಸೀದಿಯನ್ನು ಕೆಡವಿದ ಜಾಗದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ತಿಂಗಳಾಗುತ್ತ ಬಂತು. ಇದಕ್ಕಾಗಿ ಅಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಕಡೆ ಸಂಭ್ರಮಾಚರಣೆ ಈಗಲೂ ನಡೆದಿದೆ. ಇನ್ನು 3-4 ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಯೋಧ್ಯೆಯ ಈ ಕಾರ್ಯಕ್ರಮ ಮೇಲ್ನೋಟಕ್ಕೆ ಧಾರ್ಮಿಕ ವಾಗಿ ಕಂಡರೂ ಧಾರ್ಮಿಕೇತರ ರಾಜಕೀಯ ಅಂಶಗಳು ಅಡಕವಾಗಿರುವುದು ಮರೆ ಮಾಚುವ ವಿಷಯವಾಗಿ ಉಳಿದಿಲ್ಲ. ಈ ಸಮಾರಂಭದಲ್ಲಿ ಪಾಲ್ಗೊಂಡು ಪಾವನರಾಗಲು ಪ್ರಧಾನಿ ನರೇಂದ್ರ ಮೋದಿಯವರು ಮಾಡಿಕೊಂಡ ಮನವಿಯಂತೆ ಕೇಂದ್ರದ ಆಡಳಿತ ಪಕ್ಷದ ಪ್ರಮುಖ ನಾಯಕರು, ಅವರ ಬೆಂಬಲಿಗ ಮಠಾಧೀಶರು,ಉದ್ಯಮಪತಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸುಮಾರು ಎಂಟು ಸಾವಿರ ಮಂದಿ ಮಾತ್ರವಲ್ಲ ರಾಜಕೀಯ ಹಿತಾಸಕ್ತಿ ಇಲ್ಲದ ಸಾವಿರಾರು ಅಮಾಯಕ ಭಕ್ತರೂ ಅಲ್ಲಿ ಸೇರಿದ್ದರು. ಪುರೋಹಿತರು ಮಂತ್ರಗಳ ಮೂಲಕ ಶ್ರೀ ರಾಮನನ್ನು ಆವಾಹನ ಮಾಡಿದರು. 121 ವೈದಿಕ ವಿದ್ವಾಂಸರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಮುಖ್ಯ ಯಜಮಾನರಾಗಿರುವ ಪ್ರಧಾನಿ ಮೋದಿಯವರು ಪೂರ್ವ ದಿಕ್ಕಿನ ಬಾಗಿಲಿನಿಂದ ಪ್ರವೇಶಿಸಿ ದರು.ಪುರೋಹಿತರು ಅವರ ಪರವಾಗಿ ವಿಧಿ ವಿಧಾನಗಳನ್ನು ನೆರವೇರಿಸಿದರು.ಇದಕ್ಕೆಲ್ಲ ಅಭ್ಯಂತರವಿಲ್ಲ.ಇದು ಸಾಮಾನ್ಯವಾದ ಮಂದಿರ ಸ್ಥಾಪನೆಯಲ್ಲ. ಎಂಭತ್ತರ ದಶಕದ ಕೊನೆಯಲ್ಲಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ( ಅಡ್ವಾಣಿಯವರಿಗೆ ಇತ್ತೀಚೆಗೆ ಭಾರತ ರತ್ನ ಪ್ರಶಸ್ತಿ ಬಂತು) ಅವರು ರಥಯಾತ್ರೆ ಮಾಡಿ ಅನೇಕರ ಸಾವು ನೋವುಗಳ ನಂತರ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಇನ್ನೊಂದು ಧರ್ಮದ ಪ್ರಾರ್ಥನಾ ಮಂದಿರ ಕೆಡವಿ ಮತ್ತೆ ಸುಪ್ರೀಂ ಕೋರ್ಟಿನಿಂದ ಒಪ್ಪಿಗೆ ಪಡೆದು ನಿರ್ಮಾಣವಾದ ಮಂದಿರ. ಆಗಿದ್ದು ಆಗಿ ಹೋಯಿತು ಇನ್ನು ಮುಂದಾದರೂ ಮತ್ತೆ ಯಾವುದೇ ವಿವಾದವನ್ನು ಹುಟ್ಟು ಹಾಕದೇ ಈ ದೇಶದ 140 ಕೋಟಿ ಜನ ನಿರಾತಂಕವಾಗಿ ಬದುಕುವ ಭರವಸೆಯನ್ನು ಇಟ್ಟು ಕೊಳ್ಳಬಹುದೇ? ಅಂಥ ಆಶ್ವಾಸನೆಯನ್ನು ನಾಯಕರು ನೀಡುವರೇ? ಈ ಕಾರ್ಯಕ್ರಮದ ಸಂದರ್ಭದಲ್ಲಾದರೂ ಇಂಥ ಸೌಹಾರ್ದ ಸಂದೇಶವನ್ನು ಸಂಬಂಧಿಸಿದವರು ನೀಡಬೇಕಾಗಿತ್ತು.ಆದರೆ ಅಂಥ ಯಾವ ಸೂಚನೆಗಳೂ ಕಾಣಲಿಲ್ಲ.
ಅಯೋಧ್ಯೆಯ ಮಂದಿರ ನಿರ್ಮಾಣದ ನಂತರವಾದರೂ ಭಾರತೀಯರು ನೆಮ್ಮದಿಯಿಂದ ಉಸಿರಾಡಬಹುದೇ? ಬಹುಶಃ ಲೋಕಸಭಾ ಚುನಾವಣೆ ವರೆಗೆ ಇಂಥ ನಿರೀಕ್ಷೆ ಇರಿಸಿಕೊಳ್ಳಬಹುದು.ಆದರೆ ಅಧಿಕಾರದಲ್ಲಿರುವ ರಾಜಕೀಯ ಪಕ್ಷಕ್ಕೆ ತನ್ನೆಲ್ಲಾ ಆಡಳಿತ ವೈಫಲ್ಯಗಳನ್ನು ಮರೆ ಮಾಚಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಇಂಥ ಭಾವನಾತ್ಮಕ ವಿಷಯಗಳು ನೆರವಾಗುತ್ತವೆಂದರೆ ರುಚಿ ಹತ್ತಿದ ಆ ಪಕ್ಷ ಸುಲಭವಾಗಿ ಇಂಥ ವಿಷಯಗಳನ್ನು ಬಿಟ್ಟು ಕೊಡುವುದಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ಅಯೋಧ್ಯೆಯ ನಂತರ ಮಥುರಾ ಮತ್ತು ಕಾಶಿಯ ವಿವಾದಗಳ ಸುತ್ತ ಮತ್ತೆ ಅಮಾಯಕ ಜನರನ್ನು ದಿಕ್ಕು ತಪ್ಪಿಸುವ ಮಸಲತ್ತು ಗಳು ನಡೆಯುತ್ತಲೇ ಇವೆ. ಇದು ಕೇವಲ ಮಂದಿರ ನಿರ್ಮಾಣದ ಪ್ರಶ್ನೆಯಲ್ಲ, ಅದು ನೆಪ ಮಾತ್ರ. ವಿವಾದವನ್ನು ಹುಟ್ಟು ಹಾಕಿದವರ ನಿಜವಾದ ಗುರಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಸಂವಿಧಾನವನ್ನು ಬದಲಿಸಿ ಹಿಂದೂ ರಾಷ್ಟ್ರ ವನ್ನು ನಿರ್ಮಿಸುವುದಾಗಿದೆ. ತ್ರಿವರ್ಣ ಬಾವುಟದ ಜಾಗದಲ್ಲಿ ಒಂದೇ ಬಣ್ಣದ ಬಾವುಟ, ರಾಜ್ಯಾಂಗದ ಬದಲಿಗೆ ಪಂಚಾಂಗ,ಹೀಗೆ ಬಹುತ್ವ ಭಾರತದ ಸ್ವರೂಪವನ್ನೇ ಬದಲಿಸುವ ಹುನ್ನಾರಗಳು ಈ ವಿವಾದಗಳ ಹಿಂದಿವೆ.ಇದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿಯ ಅನೇಕ ನಾಯಕರು ಬಹಿರಂಗವಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಅಯೋಧ್ಯೆ, ಮಥುರಾ, ಕಾಶಿ ಮಾತ್ರವಲ್ಲ ಸುಮಾರು ಮೂರು ಸಾವಿರ ಪ್ರಾರ್ಥನಾ ಸ್ಥಳಗಳ ಪಟ್ಟಿಯನ್ನು ಸಂಬಂಧಿಸಿದ ಸಂಘಟನೆಗಳು ಸಿದ್ಧಪಡಿಸುವೆ ಎಂಬುದು ಜನ ಜನಿತ.
ಭಾರತದ ಮಾತ್ರವಲ್ಲ ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಂಡರೆ ಕೆ.ಎಸ್.ಈಶ್ವರಪ್ಪ ಮತ್ತು ಅನಂತ ಕುಮಾರ್‌ಹೆಗಡೆಯವರಂಥ ಬಿಜೆಪಿಯ ಹಿರಿಯ ನಾಯಕರೇ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದಂತೆ ರಾಜ್ಯದಲ್ಲಿ ಇರುವ ಕೆಲವು ಮಸೀದಿಗಳನ್ನು ನೆಲಸಮಗೊಳಿಸಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈಶ್ವರಪ್ಪನವರಂತೂ ಕರ್ನಾಟಕದ ಪಾಲಿನ ತೆರಿಗೆಗಾಗಿ ಧ್ವನಿಯೆತ್ತಿದ್ದ ಸಂಸದ ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇನ್ನು ಅನಂತಕುಮಾರ್ ಹೆಗಡೆ ಲೋಕಸಭೆಗೆ ಚುನಾಯಿತರಾಗಿ ಬಂದ ನಂತರ ನಾಲ್ಕೂವರೆ ವರ್ಷ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳದೇ ರಾಜಕೀಯದಿಂದ ನಿವೃತ್ತರಾದಂತೆ ಇದ್ದರು. ಅವರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮತ್ತೆ ಬಹಿರಂಗ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುತ್ತ ಕೋಮು ಗಲಭೆಗೆ ಪ್ರಚೋದಿಸುತ್ತಿರುವುದನ್ನು ಬರೀ ಅವರ ವಯಕ್ತಿಕ ಹೇಳಿಕೆ ಎಂದು ಕಡೆಗಣಿಸಬೇಕಾಗಿಲ್ಲ. ಯಾಕೆಂದರೆ ಅವರ ಮೇಲೆ ಅವರ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ.ಎಚ್ಚರಿಕೆ ನೀಡಿಲ್ಲ. ಇದರರ್ಥ ಅವರ ಪಕ್ಷದ ಮೌನ ಬೆಂಬಲ ಇವರಿಗೆ ಇದ್ದಂತಿದೆ.ಹೀಗಾಗಿ ಅಯೋಧ್ಯೆಯ ಮಂದಿರ ನಿರ್ಮಾಣದ ನಂತರವೂ ಈ ದೇಶ ನೆಮ್ಮದಿಯಿಂದ ಇರಲು ಇವರು ಬಿಡುವಂತೆ ಕಾಣುವುದಿಲ್ಲ.
ಸಂಘಪರಿವಾರ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ್ (ಯತ್ನಾಳ್), ಅನಂತ ಕುಮಾರ್ ಹೆಗಡೆ, ಹೀಗೆ ಪ್ರಚೋದನಕಾರಿ ಹೇಳಿಕಗಳನ್ನು ನೀಡುವ ದೊಡ್ಡ ಪಡೆಯೇ ಇವರಲ್ಲಿ ಇದೆ. ತಮ್ಮನ್ನು ಚುನಾಯಿಸಿದ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗದ ಇವರು ಐದು ವರ್ಷಗಳ ಕಾಲ ತಮ್ಮ ಉದ್ಯೋಗ, ದಂಧೆಗಳಲ್ಲಿ ಮುಳುಗಿ ಚುನಾವಣೆ ಬಂದಾಗ ಬವಣೆಗಳನ್ನು ಹೇಳಿಕೊಳ್ಳುವ ಜನರ ಬಾಯಿ ಮುಚ್ಚಿಸಲು ಅವರನ್ನು ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ ಎಂದು ವಿಭಜಿಸಿ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿ ಕಟ್ಟಿ ಮತ್ತೆ ಚುನಾವಣೆ ಗೆಲ್ಲಲು ಮಸಲತ್ತು ನಡೆಸುತ್ತಾರೆ. ಇವರ ಮಹಾಗುರುಗಳು ಕೂಡ ಮಾಡುತ್ತಿರುವುದು ಅದನ್ನೇ. ಇದಕ್ಕೆಲ್ಲ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಆಶೀರ್ವಾದವಿದೆ. ಹೀಗಾಗಿ ಅಯೋಧ್ಯೆಯ ಮಂದಿರ ನಿರ್ಮಾಣವಾದ ನಂತರ ಎಲ್ಲ ಸರಿ ಹೋಗುತ್ತದೆ ಎಂದು ಅಂದುಕೊಳ್ಳುವುದು ಅಷ್ಟು ಸುಲಭವಲ್ಲ.
ಕೋಮುವಾದಿ ಪಕ್ಷ ಮೊದಲು ಕೂಗುಮಾರಿಗಳನ್ನು ಮುಂದೆ ಬಿಟ್ಟು ಅವರಿಂದ ಮಾತಾಡಿಸಿ ಜನರ ಪ್ರತಿಕ್ರಿಯೆಯನ್ನು ಗಮನಿಸುತ್ತದೆ. ನಂತರ ಅದರ ಆಧಾರದಲ್ಲಿ ಚುನಾವಣೆಯ ಕಾರ್ಯತಂತ್ರವನ್ನು ರೂಪಿಸುತ್ತದೆ. ತನಗೆ ಸೈದ್ಧಾಂತಿಕ ವಾಗಿ ಎದುರಾಗಿರುವ ಪಕ್ಷಗಳನ್ನು ದುರ್ಬಲಗೊಳಿಸುತ್ತಾ, ಅವುಗಳ ನಾಯಕರ ಬಾಯಿ ಮುಚ್ಚಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳುವ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಗಾಂಧೀಜಿ, ಅಂಬೇಡ್ಕರ್, ನೆಹರೂ, ಮೌಲಾನಾ ಆಝಾದ,ವಲ್ಲಭಭಾಯಿ ಪಟೇಲ, ಸುಭಾಷ್‌ಚಂದ್ರ ಭೋಸ್, ಭಗತ್ ಸಿಂಗ್ ಪರಿಕಲ್ಪನೆಯ ಭಾರತದ ಸ್ವರೂಪವನ್ನು ಬದಲಿಸುವ ಗುರಿ ಸಾಧಿಸುವ ವರೆಗೆ ಇಂಥ ವಿವಾದಗಳನ್ನು ಹುಟ್ಟುಹಾಕುತ್ತಲೇ ಇರುತ್ತದೆ.
ಈಗ ಭಾರತೀಯರ ಮುಂದಿರುವ ಸವಾಲು ಬರೀ ಒಂದು ಚುನಾವಣೆಯ ಸೋಲು ,ಗೆಲುವಿನ ಸವಾಲಲ್ಲ. ಶತಮಾನಗಳಿಂದ ಸಹಬಾಳ್ವೆ ನಡೆಸಿದ ತಮ್ಮ ನಡುವೆ ದ್ವೇಷದ ಅಡ್ಡ ಗೋಡೆಯನ್ನು ನಿರ್ಮಿಸುತ್ತಿರುವ ವಿಭಜನಕಾರಿ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸುವುದಾಗಿದೆ.
ಜನರ ನಂಬಿಕೆಯ ದೇವರು, ಧರ್ಮ ಮನೆಯ ಇಲ್ಲವೇ ಮಂದಿರ, ಮಸೀದಿ, ಚರ್ಚುಗಳ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಲಿ.ಈ ಪವಿತ್ರ ನಂಬಿಕೆಗಳು ಕಿಡಿಗೇಡಿ ರಾಜಕಾರಣಿಗಳ ಚುನಾವಣಾ ಅಸ್ತ್ರವಾಗಬಾರದು.ಯಾವುದೇ ಚುನಾವಣೆ ಆರ್ಥಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಕ್ರಮ ಗಳ ಆಧಾರದಲ್ಲಿ ನಡೆಯಲಿ.
ಭಾರತದ ಇಂಥ ಬಿಕ್ಕಟ್ಟಿನ ಕಾಲದಲ್ಲಿ ಜಾತ್ಯತೀತ ಮತ್ತು ಜನತಾಂತ್ರಿಕ ಎಂದು ಹೇಳಿಕೊಳ್ಳುವ ಪಕ್ಷಗಳ ಜವಾಬ್ದಾರಿ ತುಂಬಾ ಮಹತ್ವದ್ದಾಗಿದೆ. ಈ ಪ್ರತಿಪಕ್ಷ ಗಳು ತಮ್ಮ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಲೋಕಸಭಾ ಚುನಾವಣೆ ಸಂದರ್ಭದಲ್ಲಾದರೂ ಒಂದಾಗಿ ಬಹುತ್ವ ಭಾರತವನ್ನು ಕಾಪಾಡಿಕೊಳ್ಳಲು ಮುಂದಾಗಲಿ.
ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ ರಾಜಕಾರಣಿಗಳು ಮಾತ್ರವಲ್ಲ ಎಲ್ಲ ಧರ್ಮಗಳ ಧರ್ಮಗುರುಗಳು, ಧಾರ್ಮಿಕ ನಾಯಕರು ಮತ್ತು ಮಠಾಧೀಶರ ಹೊಣೆಗಾರಿಕೆ ಮಹತ್ವದ್ದಾಗಿದೆ. ಬಾಬರಿ ಮಸೀದಿಯಂಥ ಘಟನೆ ಮತ್ತೆ ಸಂಭವಿಸಬಾರದೆಂದರೆ ಕೋಮುವಾದಿ ಸಂಘಟನೆಗಳಿಂದ ಅಂತರ ಕಾಪಾಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ಭಾಗವತರು ಸೇರಿದಂತೆ ಸಂಘ ಪರಿವಾರದ ಜವಾಬ್ದಾರಿಯುತ ನಾಯಕರು ಸಾಮಾಜಿಕ ಶಾಂತಿಗೆ ಕಾರಣವಾಗುವ ಮಥುರಾ, ಕಾಶಿ, ಬಾಬಾಬುಡಾನಗಿರಿ ಸೇರಿದಂತೆ ಯಾವುದೇ ವಿವಾದವನ್ನು ಹುಟ್ಟು ಹಾಕುವುದಿಲ್ಲವೆಂದು ಭಾರತಿಯರಿಗೆ ಆಶ್ವಾಸನೆ ನೀಡಲಿ.