ಕಾಂಗ್ರೆಸ್ ಪುನಶ್ಚೇತನ ಯಾವಾಗ?

ಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಪುನಶ್ಚೇತನಕ್ಕೆ ಒಂದು ಅವಕಾಶ.ವರ್ಷಗಳ ಕಾಲ ಅಧಿಕಾರದ ಸವಿಯುಂಡವರಿಗೆ ವಿಶ್ರಾಂತಿ ನೀಡಬೇಕು. ಪದೇ ಪದೇ ಪಕ್ಷವನ್ನು ಬದಲಿಸುವ ದಗಾಕೋರರನ್ನು ಒಳಗೆ ಬಿಟ್ಟುಕೊಳ್ಳಬಾರದು.ದ್ವಾರಕಾನಾಥ್, ಮೋಹನ್ ಕೊಂಡಜ್ಜಿ ಅಂಥವರಿಗೆ ಅವಕಾಶ ನೀಡಬೇಕು. ತುಮಕೂರಿನಂಥ ಪ್ರತಿಷ್ಠಿತ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಾಂತರಿಗಳ ಬದಲಿಗೆ ಈ ಬಾರಿ ನಿಕೇತ ರಾಜ್ ಮೌರ್ಯ ಮತ್ತು ಚಿಕ್ಕ ಮಗಳೂರಿನಲ್ಲಿ ಸುದೀರ್ ಕುಮಾರ್ ಮರೊಳ್ಳಿ ಅಂಥವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಿ.ಇವರು ಮಾತ್ರವಲ್ಲ ಇಂಥ ಅನೇಕ ಯುವಕರಿಗೆ ಅವಕಾಶ ನೀಡಲಿ.

Update: 2024-02-05 06:19 GMT

Photo: PTI

ಮುಂಬರುವ ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಜನರಿಗೆ ಇರುವ ಕೊನೆಯ ಅವಕಾಶವಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಒಂದು ವೇಳೆ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮತ್ತೆ ಚುನಾವಣೆ ನಡೆಯುವುದಿಲ್ಲ. ಸರ್ವಾಧಿಕಾರ ತಲೆ ಎತ್ತುತ್ತದೆ ಎಂದು ಖರ್ಗೆಯವರು ವ್ಯಕ್ತಪಡಿಸಿದ ಆತಂಕ ಯಾರೋ ರಾಜಕೀಯ ನಾಯಕನ ಹೇಳಿಕೆಯೆಂದು ಕಡೆಗಣಿಸುವಂಥದ್ದಲ್ಲ. ಖರ್ಗೆ ಅವರು ಉಳಿದವರಂಥಲ್ಲ. ಚಪ್ಪಾಳೆ ಗಿಟ್ಟಿಸಲು ಮಾತಾಡುವವರಲ್ಲ. ಒಂದೊಂದು ಶಬ್ದವನ್ನು ಬಳಸುವಾಗಲೂ ಅತ್ಯಂತ ಎಚ್ಚರಿಕೆ ವಹಿಸಿ ಹೇಳಿಕೆ ನೀಡುವುದು ಅವರ ಜಾಯಮಾನ.

ಆದರೆ, ಖರ್ಗೆ ಅವರಿಗಿರುವ ಆತಂಕದ ಒಂದು ಪೈಸೆಯಷ್ಟು ಆತಂಕವೂ ಕಾಂಗ್ರೆಸಿನ ಉಳಿದ ನಾಯಕರಿಗೆ, ಪ್ರತಿಪಕ್ಷಗಳ ಇತರ ನಾಯಕರಿಗೆ ಇಲ್ಲ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್ ಅವರಂಥ ಕೆಲವೇ ಕೆಲವರಿಗೆ ಈ ವಿಪತ್ತಿನ ಅರಿವಿದೆ. ಫ್ಯಾಶಿಸಮ್ ಅಪಾಯದ ಬಗ್ಗೆ ಕಮ್ಯುನಿಸ್ಟರು ಮೊದಲಿನಿಂದಲೂ ಹೇಳುತ್ತಲೇ ಬಂದರೂ ಅವರ ಮಾತು ಅರಣ್ಯ ರೋದನವಾಗಿದೆ.

ಉಳಿದ ವಿರೋಧ ಪಕ್ಷಗಳು ಒತ್ತಟ್ಟಿಗಿರಲಿ ಬಹುದೊಡ್ಡ ಪಕ್ಷವಾದ ಕಾಂಗ್ರೆಸ್ ಈ ಅಪಾಯವನ್ನು ಎದುರಿಸಲು ಏನು ಸಿದ್ಧತೆ ಮಾಡಿಕೊಂಡಿದೆ? ಉಳಿದ ವಿರೋಧ ಪಕ್ಷಗಳನ್ನು ಒಟ್ಟಿಗೂಡಿಸಿ ಮುನ್ನಡೆಸಿಕೊಂಡು ಹೋಗುವ ಹೊಣೆಗಾರಿಕೆ ಕಾಂಗ್ರೆಸ್ ಮೇಲಿದೆ. ಅದು ಮೊದಲು ತನ್ನ ಮನೆಯನ್ನು ಗುಡಿಸಿ ಸ್ವಚ್ಛ ಮಾಡಿಕೊಳ್ಳಬೇಕಿದೆ. ಪಕ್ಷಕ್ಕೆ ಹೊಸ ರಕ್ತ ತುಂಬ ಬೇಕಾಗಿದೆ. ತುಂಬಾ ಆಸೆ, ಭರವಸೆಗಳನ್ನು ಹೊತ್ತುಕೊಂಡು ಪಕ್ಷಕ್ಕೆ ಬರುವ ತರುಣರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ಹೋರಾಟದ ವೀರೋಚಿತ ಪರಂಪರೆಯಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದವರಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಇದ್ದಾರೆ. ಇವರನ್ನು ಬಿಟ್ಟರೆ ಶಹೀದ್ ಭಗತ್ ಸಿಂಗ್ , ಅಶ್ಪ್ಪಾಕ್ ಉಲ್ಲಾಖಾನ್, ಚಂದ್ರಶೇಖರ ಆಝಾದ್ ಅವರಂಥ ಎಡಪಂಥೀಯ ಯುವಕರು ಬಲಿವೇದಿಕೆ ಏರಿದ್ದಾರೆ. ಉಳಿದಂತೆ ಸಮಾಜವಾದಿ ವಿಚಾರಧಾರೆಯ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರಂಥವರು ಹಿಂದೂ- ಮುಸಲ್ಮಾನರಿಂದ ಕೂಡಿದ ಆಝಾದ ಹಿಂದ್ ಫೌಜ್ ಕಟ್ಟಿ ಶಸ್ತ್ರ ಹಿಡಿದು ಹೋರಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಹರಿದು ಬಂದಿವೆ. ಆದರೆ, ಆವಾಗ ಯಾವುದೇ ಚಳವಳಿಯಲ್ಲಿ ಭಾಗವಹಿಸದೇ, ಬ್ರಿಟಿಷರ ಚೇಲಾಗಿರಿ ಮಾಡಿದವರು ಇವತ್ತು ದೇಶ ಕಟ್ಟಿದವರಿಗೆ ದೇಶ ಭಕ್ತಿಯ ಪಾಠ ಮಾಡುತ್ತಿದ್ದಾರೆ.ದೇವರು, ಧರ್ಮಗಳೇ ಇವರ ಬಂಡವಾಳ. ಇಂಥವರ ಬಾಯಿಯಿಂದ ನಾವು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೇಳಬೇಕಾದ ದುಸ್ಥಿತಿ ಬಂದಿದೆ. ನಮ್ಮ ಸ್ವಾತಂತ್ರ್ಯ ಹೋರಾಟದ ಪರಂಪರೆ, ನಮ್ಮ ಹುತಾತ್ಮರನ್ನು ಹೈಜಾಕ್ ಮಾಡಿದ ಬಾಡಿಗೆ ಭಾಷಣಕಾರರು ಏನೂ ಅರಿಯದ ಹೊಸ ಪೀಳಿಗೆಯ ತರುಣರ ತಲೆಗೆ ವಿಷ ತುಂಬುತ್ತಿದ್ದಾರೆ. ನಮ್ಮ ದೇವರು, ಧರ್ಮ, ಮಠ, ಪೀಠ , ಆಶ್ರಮ, ಯಕ್ಷಗಾನಗಳನ್ನು, ಹಳ್ಳಿ, ಹಳ್ಳಿಗಳ ಗುಡಿ, ಗುಂಡಾರಗಳನ್ನು ಆಕ್ರಮಿಸಿಕೊಂಡು ಕೂತಿದ್ದಾರೆ.

ಇದನ್ನು ಎದುರಿಸಿ ಯುವಜನರಿಗೆ ಸರಿ ದಾರಿಯನ್ನು ತೋರಿಸಬೇಕಾದ ಕಾಂಗ್ರೆಸ್ ನಂಥ ಹಿರಿಯ ಪಕ್ಷಗಳು ನಿಂತ ನೀರಾಗಿವೆ. ಕುರ್ಚಿ ಹಿಡಿದು ಕೂತ ಎಪ್ಪತ್ತು, ಎಂಭತ್ತರ ನಾಯಕರು ಕುರ್ಚಿ ಬಿಟ್ಟು ಕೊಡಲು ತಯಾರಿಲ್ಲ. ಕೋಮುವಾದದ ಅಪಾಯದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್ ಮತ್ತು ಸಿದ್ದರಾಮಯ್ಯನವರನ್ನು ಬಿಟ್ಟರೆ ಕಾಂಗ್ರೆಸ್‌ನಲ್ಲಿ ಯಾರೂ ಮಾತಾಡುವುದಿಲ್ಲ. ಕಾಂಗ್ರೆಸ್‌ನಲ್ಲಿ ಇರುವ ಅನೇಕರಿಗೆ ತಮ್ಮ ಪಕ್ಷದ ಪರಂಪರೆ ಮತ್ತು ಇತಿಹಾಸ ಗೊತ್ತಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ. ಬಹುತೇಕರು ಚುನಾವಣೆಯಲ್ಲಿ ಬಂಡವಾಳ ಹೂಡಿ ಗೆದ್ದ ನಂತರ ಹೂಡಿದ ಬಂಡವಾಳದ ಸಾವಿರ ಪಟ್ಟು ವಾಪಸ್ ಪಡೆಯಲು ಬಂದವರು. ಅಂತಲೇ ಇವರಲ್ಲಿ ಅನೇಕರು ಆಪರೇಷನ್ ಕಮಲಕ್ಕೆ ಬಲಿಯಾಗುತ್ತ್ತಾ ಬಂದಿದ್ದಾರೆ.

ಕಾಂಗ್ರೆಸ್‌ನಲ್ಲಿ ಯುವಕರು, ಚಿಂತಕರು ಇಲ್ಲವೆಂದಲ್ಲ. ಆದರೆ, ಅವರಿಗೆ ಪ್ರೋತ್ಸಾಹವಿಲ್ಲ. ಉದಾಹರಣೆಗೆ, ಹಿಂದೆ ಸಂಘಪರಿವಾರದಲ್ಲಿದ್ದು ಅದರ ಅಸಲಿ ಮುಖ ಗೊತ್ತಾಗಿ ಕಾಂಗ್ರೆಸ್‌ಗೆ ಬಂದ ತುಮಕೂರಿನ ನಿಕೇತರಾಜ ಮೌರ್ಯ ಮತ್ತು ಕೊಪ್ಪದ ಸುಧೀರ್ ಕುಮಾರ್ ಮರೊಳ್ಳಿ ಅಂಥವರು ಅತ್ಯಂತ ಪ್ರಭಾವಿ ಭಾಷಣಕಾರರು. ಭಾರತದ ಬಹುತ್ವದ, ಜೀವಪರ ಪರಂಪರೆ ಬಗ್ಗೆ ಗೊತ್ತಿರುವವರು.

ಅವರ ಭಾಷಣಕ್ಕೆ ಸಾವಿರಾರು ಜನ ಸೇರುತ್ತಾರೆ. ಸಾಕಷ್ಟು ಓದಿಕೊಂಡವರು. ಇಂಥವರು ಶಾಸನ ಸಭೆಗಳಲ್ಲಿ ಇರಬೇಕು. ನಾಡಿನ ಖ್ಯಾತ ನ್ಯಾಯವಾದಿ, ಚಿಂತಕ ಸಿ.ಎಸ್.ದ್ವಾರಕಾನಾಥ ಅವರು ಕೂಡ ಕಾಂಗ್ರೆಸ್‌ನಲ್ಲಿದ್ದಾರೆ. ಅವರನ್ನು ಸದ್ಯ ವಿಧಾನಪರಿಷತ್‌ಗೆ ತಂದರೆ ಸದನದಲ್ಲಿ ಪಕ್ಷಕ್ಕೆ ಒಂದು ಸಾತ್ವಿಕ ಮತ್ತು ತಾತ್ವಿಕ ಧ್ವನಿ ಸಿಕ್ಕಂತಾಗುತ್ತದೆ. ದಾವಣಗೆರೆಯ ಮೊಹನ ಕೊಂಡಜ್ಜಿಅವರು ಸೈದ್ಧಾಂತಿಕ ವಾಗಿ ಗಟ್ಟಿ ವ್ಯಕ್ತಿ. ಶುದ್ಧ ಚಾರಿತ್ರ್ಯದ, ಜನಪರ ಕಾಳಜಿಯ ಮನುಷ್ಯ. ಅವರು ಮೇಲ್ಮನೆ ಸದಸ್ಯತ್ವ ಅವಧಿ ಮುಗಿದ ನಂತರ ಮತ್ತೆ ಬೇಡ ಎಂದು ತಾವಾಗಿ ಹಿಂದೆ ಸರಿದರು. ಈ ಸಲ ಅವರನ್ನು ರಾಜ್ಯಸಭೆಗೆ ತರಬಹುದು. ಆದರೆ ಕಾಂಗ್ರೆಸ್ ಇವರನ್ನು ಭಾಷಣಕ್ಕೆ ಮಾತ್ರ ಬಳಸಿಕೊಳ್ಳುತ್ತಿದೆ.ಒಂದು ರಾಜಕೀಯ ಪಕ್ಷಕ್ಕೆ ದೂರದೃಷ್ಟಿ ಇರಬೇಕು. ಮುಂದಿನ ಅರವತ್ತು, ಎಪ್ಪತ್ತು ವರ್ಷಗಳ ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಪಕ್ಷದಲ್ಲಿ ಮೂವತ್ತು, ನಲವತ್ತರೊಳಗಿನ ಯುವಕರಿಗೆ ಆದ್ಯತೆ ನೀಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಜಗದೀಶ್ ಶೆಟ್ಟರ್ ಅವರನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆಸಿಕೊಂಡು ಪಕ್ಷಕ್ಕೆ ಸೇರಿಸಿಕೊಂಡು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವ ಅವಸರವೇನಿತ್ತು!

ಅವರ ಬದಲಾಗಿ ಪಕ್ಷದೊಳಗೆ ಹಲವಾರು ವರ್ಷಗಳಿಂದ ದುಡಿದ ನೂರಾರು ಯುವ ಕಾರ್ಯಕರ್ತರಿದ್ದರು, ಅವರಿಗೆ ಅವಕಾಶ ಕೊಡಬಹುದಿತ್ತು. ನಮ್ಮ ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹೊಸ ರಕ್ತದ ಯುವಕರಿದ್ದಾರೆ.ಅವರ ಭಾವನೆ, ಆಶಯಗಳಿಗೆ ಸ್ಪಂದಿಸುವ ರಾಜಕೀಯ ನಾಯಕತ್ವ ಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೆಂದರೆ ಭಾರತದ ಪ್ರಜಾಪ್ರಭುತ್ವವನ್ನು ಸಂರಕ್ಷಿಸಿಸುವುದೆಂದು ಅರ್ಥ. ಖರ್ಗೆಯವರು ಹೇಳಿದಂತೆ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಮಾನ ಮನಸ್ಕ ಪಕ್ಷಗಳನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ಒಂದೊಂದು ಮತವೂ ನಿರ್ಣಾಯಕ. ಕೋಮುವಾದದ ವಿರುದ್ಧ ದಿಟ್ಟ ಹೋರಾಟ ಮಾಡುತ್ತ ಬಂದ ಎಡಪಂಥೀಯ ಪಕ್ಷಗಳ ಜೊತೆ ಹೊಂದಾಣಿಕೆಗೆ ಮುಂದಾಗಬೇಕು, ಅವುಗಳಿಗೆ ಅವುಗಳದ್ದೇ ಆದ ಸಾಮರ್ಥ್ಯವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಮತಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಂದೆರಡು ಸಾವಿರ ಮತಗಳ ಅಂತರದಿಂದ ಸೋತರು. ಇದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶಿವಣ್ಣ ಕಾರಣ. ಶಿವಣ್ಣ ಪಡೆದ ಐದಾರು ಸಾವಿರ ಮತಗಳು ದೇವೇಗೌಡರ ಗೆಲುವನ್ನು ತಡೆದವು. ಆಗ ಸಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಪರಿಸ್ಥಿತಿ ಬರುತ್ತಿರಲಿಲ್ಲ.

ಚುನಾವಣಾ ಹೊಂದಾಣಿಕೆಯ ವೈಫಲ್ಯ ಒಂದು ಕಡೆಯಾದರೆ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸರಿಯಾದ ಸೈದ್ಧಾಂತಿಕ, ರಾಜಕೀಯ ಶಿಕ್ಷಣವಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಮಣಿ ಶಂಕರ ಅಯ್ಯರ ಅಂಥವರು ತಾತ್ವಿಕವಾಗಿ ಮಾತನಾಡುತ್ತಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ.ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲ ಸ್ವಾತಂತ್ರ್ಯಾ ನಂತರ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾಲದಿಂದ ಆರಂಭಿಸಿ ಮುಂದಿನ 3 ರಿಂದ 4 ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಸಾರ್ವಜನಿಕ ಉದ್ಯಮ ರಂಗವನ್ನು ಬೆಳೆಸಿದ್ದು, ಶೈಕ್ಷಣಿಕ ಮತ್ತು ಔದ್ಯಮಿಕ ರಂಗದ ಪ್ರಗತಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇಂಥ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಬೇಕಾಗಿದೆ.

ಈ ಸಲದ ಲೋಕಸಭಾ ಚುನಾವಣೆ ಕೇವಲ ಎರಡು ಪಕ್ಷಗಳ ಇಲ್ಲವೇ ಎರಡು ಮೈತ್ರಿ ಕೂಟಗಳ ನಡುವಿನ ಹೋರಾಟ ಮಾತ್ರವಲ್ಲ ಇದು ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ.ಕೆಲವು ರಾಜ್ಯಗಳಲ್ಲಿ ಇರುವ ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ( ಈ.ಡಿ.)ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ದಿನಗಳಲ್ಲಿ ಸಹಜವಾಗಿ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ. 600 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ನೆಪವನ್ನು ಮುಂದೆ ಮಾಡಿ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು. ಇವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಎಲ್ಲ ಪಾಪ ಪರಿಹಾರವಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು. ಮೋದಿ ಸರಕಾರದ ಮುಂದಿನ ಟಾರ್ಗೆಟ್ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್. ಇದರರ್ಥ ದೇಶದಲ್ಲಿ ಪ್ರತಿಪಕ್ಷದ ಅಸ್ತಿತ್ವವೇ ಇರಬಾರದು ಎಂಬುದಾಗಿದೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಈ ರೀತಿ ಪ್ರತಿಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳ ಚುನಾಯಿತ ಸರಕಾರಗಳನ್ನು ಉರುಳಿಸುವುದು ಅನೈತಿಕತೆಯ ಅತಿರೇಕ. ಇಂಡಿಯಾ ಮೈತ್ರಿ ಕೂಟದ ಪಕ್ಷಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಒಂದು ಉದಾಹರಣೆ ಮಾತ್ರ. ಲೋಕಸಭಾ ಚುನಾವಣೆಗೆ ಮುಂಚೆ ಪ್ರತಿಪಕ್ಷಗಳ ಒಗ್ಗಟ್ಟನ್ನು ಮುರಿಯಲು ಕೇಂದ್ರ ಸರಕಾರ ನಾನಾ ಕಸರತ್ತುಗಳನ್ನು ನಡೆಸುತ್ತಲೇ ಇದೆ.ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬುಟ್ಟಿಗೆ ಹಾಕಿಕೊಂಡಿತು.ಸಿದ್ದರಾಮಯ್ಯನವರಂಥ ಗಟ್ಟಿ ಕುಳ ಮಾತ್ರ ಇದನ್ನು ಎದುರಿಸಿ ಬಚಾವ್ ಆಗಬಲ್ಲರು.ಇಂಥ ಪರಿಸ್ಥಿತಿಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷದ ಮೇಲಿನ ಹೊಣೆಗಾರಿಕೆ ಮಹತ್ವದ್ದಾಗಿದೆ.

ನಮ್ಮ ಸಮಾಜ ಎಷ್ಟು ಕೋಮುವಾದೀಕರಣ ಆಗುತ್ತಿದೆಯೆಂದರೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ತಪ್ಪು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರು ಮತ್ತು ಅವರ ಪುತ್ರಿ ಸುರಣ್ಯಾಗೆ ಈ ಕಾಲನಿಯಿಂದ ಹೊರಗೆ ಹೋಗಿ ಎಂದು ದಿಲ್ಲಿಯ ಜಂಗಪುರ ಕಾಲನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ. ಇದು ದೇಶದ ಬಹುತೇಕ ಕಡೆ ಇರುವ ಪರಿಸ್ಥಿತಿ. ಇಂದು ಕಾಲನಿಯಿಂದ ಹೊರಗೆ ಹೋಗಲು ಎಚ್ಚರಿಕೆ ನೀಡಿದವರು. ನಾಳೆ ದೇಶದಿಂದ ಹೊರಗೆ ಹೋಗಲು ಬೆದರಿಕೆ ಹಾಕುತ್ತಾರೆ. ಇವರಿಗೆ ಹೆದರಿ ಹೆಸರಾಂತ ಕಲಾವಿದ ಹುಸೇನ್ ಭಾರತದಿಂದ ದುಬೈಗೆ ಹೋಗಿ ಅಲ್ಲೇ ನೆಲೆಸಿ ಕೊನೆಯುಸಿರೆಳೆಯಲಿಲ್ಲವೇ? ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಕೇಂದ್ರದ ಅಧಿಕಾರದಿಂದ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ದೂರವಿಡಬೇಕಾಗಿದೆ. ಇದಕ್ಕಾಗಿ ಪ್ರತಿಪಕ್ಷ ಗಳು ತಮ್ಮ ಒಣ ಪ್ರತಿಷ್ಠಗಳನ್ನು ಬದಿಗೊತ್ತಿ ಚುನಾವಣೆಯಲ್ಲಿ ಒಂದಾಗಿ ಸೆಣಸಬೇಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ಮೊದಲು ತನ್ನ ಮನೆಯನ್ನು ದುರಸ್ತಿ ಮಾಡಿಕೊಳ್ಳಬೇಕಾಗಿದೆ.

ಇತ್ತೀಚೆಗೆ ಇನ್ನೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಮಂದಿ ಆರೋಪಿಗಳ ಪೈಕಿ ಐವರು ವಿರೋಧ ಪಕ್ಷಗಳ ಜೊತೆಗೆ ತಮಗೆ ನಂಟು ಇದೆ ಎಂಬುದಾಗಿ ಒಪ್ಪಿಕೊಳ್ಳುವಂತೆ ದಿಲ್ಲಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಖಾಲಿ ಹಾಳೆಗಳ ಮೇಲೆ ಸಹಿ ಹಾಕುವಂತೆ ತಮಗೆ ಒತ್ತಾಯಿಸಲಾಗಿದೆ ಎಂದು ಅವರು ದೂರಿದ್ದಾರೆ.ಇದರರ್ಥ ವೇನು? ಪ್ರತಿಪಕ್ಷಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಲ್ಲದೇ ಬೇರೇನು.

ಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಪುನಶ್ಚೇತನಕ್ಕೆ ಒಂದು ಅವಕಾಶ.ವರ್ಷಗಳ ಕಾಲ ಅಧಿಕಾರದ ಸವಿಯುಂಡವರಿಗೆ ವಿಶ್ರಾಂತಿ ನೀಡಬೇಕು. ಪದೇ ಪದೇ ಪಕ್ಷವನ್ನು ಬದಲಿಸುವ ದಗಾಕೋರರನ್ನು ಒಳಗೆ ಬಿಟ್ಟುಕೊಳ್ಳಬಾರದು.ದ್ವಾರಕಾನಾಥ್, ಮೋಹನ್ ಕೊಂಡಜ್ಜಿ ಅಂಥವರಿಗೆ ಅವಕಾಶ ನೀಡಬೇಕು. ತುಮಕೂರಿನಂಥ ಪ್ರತಿಷ್ಠಿತ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಾಂತರಿಗಳ ಬದಲಿಗೆ ಈ ಬಾರಿ ನಿಕೇತ ರಾಜ್ ಮೌರ್ಯ ಮತ್ತು ಚಿಕ್ಕ ಮಗಳೂರಿನಲ್ಲಿ ಸುದೀರ್ ಕುಮಾರ್ ಮರೊಳ್ಳಿ ಅಂಥವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಿ.ಇವರು ಮಾತ್ರವಲ್ಲ ಇಂಥ ಅನೇಕ ಯುವಕರಿಗೆ ಅವಕಾಶ ನೀಡಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News