ಮೋದಿ ನಂತರ ಯಾರು?
ಭಕ್ತರು ಮೋದಿ, ಮೋದಿ ಎಂದು ಪಠಿಸಿದರೂ ಮೋದಿ ಮತ್ತೆ ಪ್ರಧಾನಿಯಾಗುವ ಅವಕಾಶಗಳು ತುಂಬಾ ಕಡಿಮೆ. ಮೊದಲನೆಯದಾಗಿ ಸಂಘಪರಿವಾರ ನಡೆಸಿದ ಆಂತರಿಕ ಸಮೀಕ್ಷೆ ಪ್ರಕಾರ, ಬಿಜೆಪಿ 200ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಿಲ್ಲ. ಅಕಸ್ಮಾತ್ ಸರಳ ಬಹುಮತ ಗಳಿಸಿದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತರು ಮೋದಿಗೆ ಮತ್ತೊಮ್ಮೆ ಅವಕಾಶ ಕೊಡುವ ಸಾಧ್ಯತೆ ತುಂಬಾ ಕಡಿಮೆ. ಈ ಬಾರಿ ನಿತಿನ್ ಗಡ್ಕರಿ ಪರವಾಗಿ ಸಂಘದ ಒಲವು ಇರುವುದು ಗುಟ್ಟಿನ ಸಂಗತಿಯಲ್ಲ. ಸಂಘ ಪರಿವಾರಕ್ಕೆ ತನ್ನ ಗುರಿ ಸಾಧನೆ ಮುಖ್ಯ. ಬರುವ 2025ನೇ ಇಸವಿ ಆರೆಸ್ಸೆಸ್‌ನ ಶತಮಾನೋತ್ಸವ ವರ್ಷ. 1925ರಲ್ಲಿ ನಾಗಪುರದಲ್ಲಿ ಆರೆಸ್ಸೆಸ್ ಮತ್ತು ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷಗಳು ಅಸ್ತಿತ್ವಕ್ಕೆ ಬಂದವು. 2025ರ ಹೊತ್ತಿಗೆ ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿ ಘೋಷಿಸಬೇಕು ಎಂಬುದು ಸಂಘದ ಬಯಕೆ. ಆದರೆ, ಮೋದಿ ಪ್ರಭಾವ ಕುಂದುತ್ತಿರುವುದರಿಂದ ಸಂಘಕ್ಕೆ ಬೇಸರವಾಗಿದೆ.
ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಮೇ 7ನೇ ತಾರೀಖಿಗೆ 14 ಜಿಲ್ಲೆಗಳಲ್ಲಿ ನಡೆಯಲಿದೆ. ದೇಶದ ಇತರ ಕಡೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಹೇಳುವಂತೆ ಕರ್ನಾಟಕದ ಆ ಪಕ್ಷದ ಸ್ಪರ್ಧಿಗಳು ತಮ್ಮ 5 ವರ್ಷಗಳ ಸಾಧನೆಗಳ ಬಗ್ಗೆ ಎಲ್ಲೂ ಹೇಳದೇ ‘ಮೋದಿ ಮುಖ ನೋಡಿ ಮತ ಹಾಕಿ’ ಹಾಗೂ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಮತ ಹಾಕಿ ಎಂದು ತಮ್ಮ ಮುಖ ಮರೆ ಮಾಚಿ ಮೋದಿ ಮುಖವಾಡ ಹಾಕಿಕೊಂಡು ಪ್ರಚಾರ ನಡೆಸಿದ್ದಾರೆ. ಮೋದಿಯವರೂ ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಜಂಬದ ಮಾತಾಡುವ ಮೂಲಕ ಸೋಲುವ ಭೀತಿಯನ್ನು ಬಚ್ಚಿಟ್ಟುಕೊಂಡು ಗೆಲುವಿನ ನಗೆ ಬೀರುತ್ತಿದ್ದಾರೆ.
ನರೇಂದ್ರ ಮೋದಿಯವರಿಗೆ ಈಗ 73 ವರ್ಷ. ಆರೆಸ್ಸೆಸ್‌ನ ಅಲಿಖಿತ ನಿಯಮದ ಪ್ರಕಾರ ಅವರು ಸಕ್ರಿಯ ರಾಜಕೀಯದಿಂದ ದೂರ ಸರಿದು ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರಂತೆ ಮಾರ್ಗದರ್ಶನ ಮಂಡಲಿಯಲ್ಲಿ ಇರಬೇಕು. ಆದರೆ ಕುರ್ಚಿ ಬಿಡುವ ಮನಸ್ಸು ಮೋದಿಯವರಿಗಿಲ್ಲ. ಅಂತಲೇ ಮೂರನೇ ಸಲವೂ ಹೇಗಾದರೂ ಮಾಡಿ ಬಹುಮತ ಗಳಿಸಿ ಪ್ರಧಾನಿ ಆಗಬೇಕೆಂಬುದು ಅವರ ಹೆಬ್ಬಯಕೆ. ಅಂತಲೇ ದೇಶದ ಉದ್ದಕ್ಕೂ ಹೌಹಾರಿ ಚುನಾವಣಾ ಪ್ರಚಾರ ಮಾಡುತ್ತ ಓಡಾಡುತ್ತಿದ್ದಾರೆ. ಅವರ ಭಾಷಣ ಮತ್ತು ಮುಖದಲ್ಲಿ ಸೋಲಿನ ಆತಂಕ ಗೋಚರಿಸುತ್ತಿದೆ.
ಕುರ್ಚಿ ಬಿಡದಿರಲು ಇನ್ನೊಂದು ಕಾರಣ, ಭಯ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳ ಇಂಡಿಯಾ ಮೈತ್ರಿಕೂಟ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ತನ್ನ ಮತ್ತು ಅಮಿತ್ ಶಾರ ಹಳೆಯ ಪ್ರಕರಣಗಳನ್ನು ಹೊರಗೆಳೆದು ಎಲ್ಲಿ ದಂಡನೆಗೆ ಗುರಿಪಡಿಸುತ್ತಾರೋ ಎಂಬ ಆತಂಕ. ಇದನ್ನು ಅಮಿತ್ ಶಾ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹತಾಶರಾದ ನರೇಂದ್ರ ಮೋದಿ ತಮ್ಮ ಸರಕಾರದ ಹತ್ತು ವರ್ಷಗಳ ಸಾಧನೆಗಳ ಬಗ್ಗೆ ಮಾತಾಡುವದನ್ನು ಬದಿಗೊತ್ತಿ ಮುಸಲ್ಮಾನರ ವಿರುದ್ಧ ಕೆಂಡ ಕಾರುತ್ತ ಅವರ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟಲು ಪ್ರಚೋದನಕಾರಿ ಮಾತ್ರವಲ್ಲ ಹಸಿ ಸುಳ್ಳನ್ನು ಪದೇ ಪದೇ ಹೇಳುತ್ತಿದ್ದಾರೆ. ಅವರ ಮಾತಿಗೂ ತಾಲೂಕು ಮಟ್ಟದ ಬಜರಂಗದಳದ ಸಾಮಾನ್ಯ ಕಾರ್ಯಕರ್ತನ ಮಾತಿಗೂ ಅಂಥ ವ್ಯತ್ಯಾಸ ಕಂಡು ಬರುತ್ತಿಲ್ಲ. ಪ್ರಧಾನಿ ಸ್ಥಾನದ ಘನತೆಯನ್ನು ಈ ಮನುಷ್ಯನಷ್ಟು ಕೆಳಗೆ ಯಾರೂ ಇಳಿಸಿರಲಿಲ್ಲ. ಈ ಮಹಾಪ್ರಭು ಯಾವ ಮಟ್ಟಕ್ಕೆ ಹೋಗಿದ್ದಾನೆಂದರೆ ಹೇಳಲು ಏನೂ ವಿಷಯಗಳಿಲ್ಲದೆ ಬೆಂಗಳೂರಿನ ಬಳೆ ಪೇಟೆಯಲ್ಲಿ ಹನುಮಾನ ಚಾಲೀಸಾಗೆ ಸಂಬಂಧಿಸಿದ ಆದರೆ ಪೊಲೀಸ್ ತನಿಖೆಯಿಂದ ವಯಕ್ತಿಕ ಜಗಳ ಎಂದು ದಾಖಲಾದ ಅಂಗಡಿಯೊಂದರ ಮಾಲಕನ ವೈಯಕ್ತಿಕ ಪ್ರಕರಣದ ಬಗ್ಗೆ ಉತ್ತರ ಭಾರತದ ಪ್ರಚಾರ ಸಭೆಗಳಲ್ಲಿ ಮಾತಾಡುತ್ತ ‘ಕಾಂಗ್ರೆಸ್ ರಾಜ್ಯದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶವಿಲ್ಲ’ ಎಂದು ರೈಲು ಬಿಡುತ್ತಾರೆ.
ಭಕ್ತರು ಮೋದಿ, ಮೋದಿ ಎಂದು ಪಠಿಸಿದರೂ ಮೋದಿ ಮತ್ತೆ ಪ್ರಧಾನಿಯಾಗುವ ಅವಕಾಶಗಳು ತುಂಬಾ ಕಡಿಮೆ. ಮೊದಲನೆಯದಾಗಿ ಸಂಘಪರಿವಾರ ನಡೆಸಿದ ಆಂತರಿಕ ಸಮೀಕ್ಷೆ ಪ್ರಕಾರ, ಬಿಜೆಪಿ 200ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಿಲ್ಲ. ಅಕಸ್ಮಾತ್ ಸರಳ ಬಹುಮತ ಗಳಿಸಿದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತರು ಮೋದಿಗೆ ಮತ್ತೊಮ್ಮೆ ಅವಕಾಶ ಕೊಡುವ ಸಾಧ್ಯತೆ ತುಂಬಾ ಕಡಿಮೆ. ಈ ಬಾರಿ ನಿತಿನ್ ಗಡ್ಕರಿ ಪರವಾಗಿ ಸಂಘದ ಒಲವು ಇರುವುದು ಗುಟ್ಟಿನ ಸಂಗತಿಯಲ್ಲ. ಸಂಘ ಪರಿವಾರಕ್ಕೆ ತನ್ನ ಗುರಿ ಸಾಧನೆ ಮುಖ್ಯ. ಬರುವ 2025ನೇ ಇಸವಿ ಆರೆಸ್ಸೆಸ್‌ನ ಶತಮಾನೋತ್ಸವ ವರ್ಷ. 1925ರಲ್ಲಿ ನಾಗಪುರದಲ್ಲಿ ಆರೆಸ್ಸೆಸ್ ಮತ್ತು ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷಗಳು ಅಸ್ತಿತ್ವಕ್ಕೆ ಬಂದವು. 2025ರ ಹೊತ್ತಿಗೆ ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿ ಘೋಷಿಸಬೇಕು ಎಂಬುದು ಸಂಘದ ಬಯಕೆ. ಆದರೆ, ಮೋದಿ ಪ್ರಭಾವ ಕುಂದುತ್ತಿರುವುದರಿಂದ ಸಂಘಕ್ಕೆ ಬೇಸರವಾಗಿದೆ.
ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ಇದು ಮೋದಿ ಮತ್ತು ಅಮಿತ್ ಶಾ ಇಬ್ಬರಿಗೂ ಗೊತ್ತು. ಅಂತಲೇ ಅವರು ‘ಕಾಂಗ್ರೆಸ್ ಪಕ್ಷ ಸರಕಾರ ರಚನೆ ಮಾಡುವಷ್ಟು ಸ್ಥಾನಗಳಿಗೆ ಸ್ಪರ್ಧಿಸಿಲ್ಲ’ ಎಂದು ಹೇಳುತ್ತಿದ್ದಾರೆ. ಆದರೆ, ಅತ್ಯಂತ ಜಾಣತನದಿಂದ ಇಂಡಿಯಾ ಮೈತ್ರಿಕೂಟದ ಪ್ರತಿರೋಧದ ಬಗ್ಗೆ ಮಾತಾಡುವುದಿಲ್ಲ. ಈ ಬಾರಿ ಪ್ರತಿಪಕ್ಷ ಗಳು ಒಂದಾಗಿ ಇಂಡಿಯಾ ಮೈತ್ರಿ ಕೂಟದ ಹೆಸರಿನಲ್ಲಿ ಬಹುತೇಕ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ. ಗೆಲ್ಲುವ ಎಲ್ಲ ಅವಕಾಶ ಗಳೂ ಇವೆ. ಇದೇ ಮೋದಿಯವರ ನಿದ್ದೆಗೆಡಿಸಿದೆ.
ಚುನಾವಣೆಯನ್ನು ಹಿಂದಿನಂತೆ ಕೋಮು ಧ್ರುವೀಕರಣದ ಆಧಾರದಲ್ಲಿ ನಡೆಸಲು ಅವಸರವಸರವಾಗಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಪೂರ್ಣಗೊಳಿಸಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಅದರ ಶ್ರೇಯಸ್ಸನ್ನು ತಮ್ಮದಾಗಿಸಿಕೊಂಡು ಚುನಾವಣೆಯಲ್ಲಿ ಬಳಸಿಕೊಳ್ಳಲು ಯತ್ನಿಸಿದರು. ಒಂದು ಸ್ಥಳೀಯ ಮಂದಿರದ ನಿರ್ಮಾಣಕ್ಕೆ ರಾಷ್ಟ್ರವ್ಯಾಪಿ ಪ್ರಚಾರ ಮಾಡಿದರು. ಎಲ್ಲೆಡೆ ಭಗವಾ ಧ್ವಜಗಳು ಹಾರಾಡಿದವು. ಆದರೆ, ಈ ಭಾವನಾತ್ಮಕ ಅಲೆಯನ್ನು ಚುನಾವಣೆವರೆಗೆ ಹಿಡಿದಿಡಲು ಯತ್ನಿಸಿದರು. ಸಾಧ್ಯವಾಗಲಿಲ್ಲ. ಕೊನೆಗೆ ಅಸಹಾಯಕರಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಪದವನ್ನು ಕದ್ದು ‘ಮೋದಿ ಗ್ಯಾರಂಟಿ’ ಎಂಬ ಹೊಸ ತಂತ್ರ ರೂಪಿಸಿದರು. ಅದೂ ಕ್ಲಿಕ್ ಆಗಲಿಲ್ಲ. ಕೊನೆಗೆ ಹತಾಶರಾಗಿ ಹಿಂದೂ ಮುಸ್ಲಿಮ್ ರಾಜಕೀಯಕ್ಕೆ ಮರಳಿ ಹೋದರು. ತಾನು 140 ಕೋಟಿ ಜನರ ಪ್ರಧಾನಿ ಎಂದು ಹೇಳಿಕೊಳ್ಳುವ ಈ ಮನುಷ್ಯ ಮುಸಲ್ಮಾನರ ಮೇಲೆ ದ್ವೇಷದ ವಿಷಕಾರತೊಡಗಿದರು. ಹುಬ್ಬಳ್ಳಿಯ ನೇಹಾ ಹತ್ಯೆ ಲವ್ ಜಿಹಾದ್ ಎಂದು ಕರೆಯುವ ಅವರು ಹಾಸನದಲ್ಲಿ ಅನೇಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ ಪ್ರಜ್ವಲ್ ರೇವಣ್ಣ ಪರವಾಗಿ ಆತನ ಕೈ ಹಿಡಿದೆತ್ತಿ ಪ್ರಚಾರ ಮಾಡಿ ಬಂದರು. ಆದರೆ ಭಾರತೀಯರು ದಡ್ಡರಲ್ಲ. ಪದೇ ಪದೇ ಮೋಸ ಹೋಗುವುದಿಲ್ಲ. ಇದು ನಾಗಪುರದ ಆರೆಸ್ಸೆಸ್ ನಾಯಕರಿಗೂ ಗೊತ್ತಾಗಿದೆ. ಅಂತಲೇ ಈ ಚುನಾವಣೆಯಲ್ಲಿ ಸಂಘದ ಸ್ವಯಂ ಸೇವಕರ ಒಳಗೊಳ್ಳುವಿಕೆ ಗಮನಾರ್ಹ ವಾಗಿ ಕಾಣುತ್ತಿಲ್ಲ.
ಮೇ 7ರಂದು ಮತದಾನ ನಡೆಯಲಿರುವ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ 14 ಮತಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಮುಂಚೆ ಗೆದ್ದಿದ್ದ ಸ್ಥಾನಗಳನ್ನು ಕಳೆದುಕೊಳ್ಳುವ ಸೂಚನೆಗಳು ಕಾಣುತ್ತಿವೆ. ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ಮತ ಹಾಕಿ ಎಂದು ಪದೇ ಪದೇ ಹೇಳುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಂದು ಜಿಲ್ಲೆಯ ಚಿಕ್ಕಪುಟ್ಟ ಊರುಗಳಿಗೂ ಬಂದು ಹೋದರು. ಆದರೂ ಬಿಜೆಪಿಯನ್ನು ಜನ ತಿರಸ್ಕರಿಸಿದರು.
‘ಮೋದಿಯವರು ಪ್ರಧಾನಿಯಾಗದಿದ್ದರೆ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತದೆ’ ಎಂಬ ಪ್ರಚಾರವೂ ಈ ಬಾರಿ ಕ್ಲಿಕ್ ಆಗುತ್ತಿಲ್ಲ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮುಸ್ಲಿಮ್ ಮತ್ತು ಕ್ರೈಸ್ತರ ಜನಸಂಖ್ಯೆಯಲ್ಲಿ ಯಾವ ಹೆಚ್ಚಳವಾಗಿಲ್ಲ. ಮೊಗಲರು ಭಾರತವನ್ನು 600 ವರ್ಷ ಆಳಿದರೂ ಹಿಂದೂಗಳ ಸಂಖ್ಯೆ ಕಡಿಮೆಯಾಗಲಿಲ್ಲ. ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಲಿಲ್ಲ. ಕ್ರೈಸ್ತರು 200 ವರ್ಷ ಆಡಳಿತ ನಡೆಸಿದರೂ ಭಾರತದಲ್ಲಿ ಕ್ರೈಸ್ತರ ಜನಸಂಖ್ಯೆ ಶೇ.2ಕ್ಕಿಂತ ಜಾಸ್ತಿಯಾಗಲಿಲ್ಲ. ವಾಸ್ತವ ಹೀಗಿರುವಾಗ ಕೋಮುವಾದಿಗಳು ಹೇಳುತ್ತಿರುವುದು ಹಸಿ ಸುಳ್ಳು ಎಂದು ಜನರಿಗೆ ಗೊತ್ತಾಗಿದೆ.
ಬಿಜೆಪಿ ಪದೇ ಪದೇ ಹೇಳಿಕೊಳ್ಳುವಂತೆ ಅದು ರಾಷ್ಟ್ರವ್ಯಾಪಿ ಪ್ರಭಾವ ಹೊಂದಿರುವ ಪಕ್ಷವಲ್ಲ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲೂ ದಕ್ಷಿಣ ಭಾರತದ 130 ಸ್ಥಾನಗಳಲಿ ಬಿಜೆಪಿ ಗೆದ್ದಿರುವುದು ಕೇವಲ 29 ಸ್ಥಾನಗಳನ್ನು ಮಾತ್ರ. ಅದು ಪಡೆದ ಶೇಕಡಾವಾರು ಮತ ಪ್ರಮಾಣ ಶೇ.37 ಮಾತ್ರ. ದೇಶದ ಒಟ್ಟು ಶೇ.63ರಷ್ಟು ಮತದಾರರು ಬಿಜೆಪಿಯನ್ನು ಇಷ್ಟಪಡುವುದಿಲ್ಲ. ದೇಶದಲ್ಲಿ ಈಗಲೂ ಸಿಬಿಐ, ಈಡಿ, ಐಟಿ ಬೆದರಿಕೆ ನಡುವೆ 11 ಮಂದಿ ಬಿಜೆಪಿಯೇತರ ಮುಖ್ಯಮಂತ್ರಿಗಳಿದ್ದಾರೆ. ಬಿಜೆಪಿಗೆ ಮೋದಿ ನಾಮ ಬಲ ಬಿಟ್ಟರೆ ಬೇರೆ ಗೆಲುವಿನ ಮೂಲವೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಭಾರತೀಯರು ಮತ್ತೊಮ್ಮೆ ಸಮಾನ ಮನಸ್ಕ ಪಕ್ಷಗಳ ಸಂಯುಕ್ತ ಸರಕಾರವನ್ನು ಆರಿಸಿಕೊಳ್ಳುವ ಸೂಚನೆಗಳು ಕಾಣುತ್ತಿವೆ.
ಈ ಸೂಚನೆಗಳು ಗೊತ್ತಾಗಿಯೇ ಮೋದಿಯವರು ಭಾರತಕ್ಕೆ ಸಮ್ಮಿಶ್ರ ಸರಕಾರ ಸೂಕ್ತವಲ್ಲ ಎಂದು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಸಮಾನ ಮನಸ್ಕ ಪಕ್ಷಗಳ ಕನಿಷ್ಠ ಕಾರ್ಯಕ್ರಮ ಆಧರಿತ ಸಂಯುಕ್ತ ಸರಕಾರ ಹೊಸದಲ್ಲ. ಹಿಂದೆ ವಿ.ಪಿ.ಸಿಂಗ್, ವಾಜಪೇಯಿ ಮತ್ತು ಡಾ.ಮನಮೋಹನ್ ಸಿಂಗ್ ಸರಕಾರಗಳು ಸಂಯುಕ್ತ ಸರಕಾರಗಳೇ ಆಗಿದ್ದವು. ಆದರೆ ದಕ್ಷ ಆಡಳಿತವನ್ನು ನೀಡಿದವು. ಮನಮೋಹನ ಸಿಂಗ್ ಅವರ ಯುಪಿಎ ಸರಕಾರ ನರೇಗಾ ಮಾಹಿತಿ ಹಕ್ಕು ಕಾಯ್ದೆ, ಯಂಥ ಜನಪರ ಕಾರ್ಯಕ್ರಮ ಗಳನ್ನು ಜಾರಿಗೆ ತಂದವು. ಅದೇ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅಣ್ಣಾ ಹಜಾರೆಯನ್ನು ಮುಂದೆ ಮಾಡಿ ಯುಪಿಎ ಸರಕಾರದ ವಿರುದ್ಧ ಪಿತೂರಿ ಮಾಡಲಾಯಿತು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸುರಕ್ಷಿತವಾಗಿ ಇರಬೇಕಾದರೆ ಯಾವ ವ್ಯಕ್ತಿಯೂ ನಿರಂಕುಶ ಪ್ರಭುವಾಗಿ ಬೆಳೆಯಲು ಅವಕಾಶವಿಲ್ಲದ, ಎಲ್ಲರನ್ನೂ ಒಳಗೊಳ್ಳುವ, ಎಲ್ಲರ ಅಭಿಪ್ರಾಯ ಪಡೆದು ಒಮ್ಮತದಿಂದ ಸರಕಾರ ನಡೆಸುವ ಸಂಯುಕ್ತ ರಂಗದ ಸರಕಾರ ಭಾರತಕ್ಕೆ ಬೇಕಾಗಿದೆ. ಇಂಡಿಯಾ ಮೈತ್ರಿಕೂಟ ಈ ನಿಟ್ಟಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಸಂಯುಕ್ತ ರಂಗ ಸರಕಾರ ರಚನೆಯಾದರೆ ಯಾರು ಪ್ರಧಾನಿ ಎಂದು ಅದರ ಗೆಲುವನ್ನು ಒಪ್ಪಿಕೊಂಡಿರುವ ಮೋದಿಯವರೂ ಈಗ ಪ್ರಶ್ನಿಸುತ್ತಿದ್ದಾರೆ.
ಆದರೆ ಭಾರತದಲ್ಲಿ ಇರುವುದು ಅಧ್ಯಕ್ಷೀಯ ಮಾದರಿಯ ಆಡಳಿತ ಪದ್ಧತಿಯಲ್ಲ.ಇಲ್ಲಿರುವುದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ. ಪ್ರಧಾನಿ ಅಭ್ಯರ್ಥಿಯನ್ನು ಮೊದಲೇ ಘೋಷಿಸಬೇಕಾಗಿಲ್ಲ. ಗೆದ್ದು ಬರುವ ಲೋಕಸಭಾ ಸದಸ್ಯರು ತಮ್ಮ ಪ್ರಧಾನಿಯನ್ನು ಚುನಾಯಿಸುತ್ತಾರೆ. ಇಂಡಿಯಾ ಮೈತ್ರಿಕೂಟದಲ್ಲಿ ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ರಾಹುಲ್ ಗಾಂಧಿ ಅವರಂಥ ಅನೇಕರಿದ್ದಾರೆ.
ಬಿಜೆಪಿಯಲ್ಲಿ ಸುಳ್ಳು ಬುರುಕ ವಿಶ್ವಗುರುವನ್ನು ಬಿಟ್ಟರೆ ಇನ್ನೊಂದು ಹೆಸರಿಲ್ಲ. ಹೀಗಾಗಿ ಈ ಬಾರಿ ಭಾರತೀಯ ಮತದಾರರ ಒಲವು ಕಾರ್ಪೊರೇಟ್ ಕಂಪೆನಿಗಳ ಮಾಲಕರ ಬಾಗಿಲು ಕಾಯುವ ಭಾರತೀಯರನ್ನು ಜಾತಿ, ಮತದ ಆಧಾರದಲ್ಲಿ ವಿಭಜಿಸುವ ಏಕ ವ್ಯಕ್ತಿಯ, ಏಕ ಪಕ್ಷದ ಸರಕಾರದ ಬದಲಿಗೆ ಯುಪಿಎ ಮಾದರಿಯ ಸಂಯುಕ್ತ ರಂಗದ ಸರಕಾರ ಪರವಾಗಿರುವದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 4ರ ಫಲಿತಾಂಶ ಅನಿರೀಕ್ಷಿತ ಮತ್ತು ಅಚ್ಚರಿದಾಯಕವಾಗಿದೆ.