ಮಸ್ಕಿ | ಒಳ ಮೀಸಲಾತಿಗೆ ಒತ್ತಾಯಿಸಿ ಬೃಹತ್ ರ‍್ಯಾಲಿ, ಬಹಿರಂಗ ಸಭೆ

Update: 2024-09-21 11:52 GMT

ಮಸ್ಕಿ : ಒಳ ಮೀಸಲಾತಿ ಅನುಷ್ಠಾನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟಿಸಿ ಒಂದೂವರೆ ತಿಂಗಳ ಹಿಂದೆ ಕಳೆದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಬೃಹತ್ ರ್ಯಾಲಿ ನಡೆಸಲಾಗಿದೆ.

ಮಸ್ಕಿ ಪಟ್ಟಣದಲ್ಲಿ ಅಂಬೇಡ್ಕರ್ ಗಾರ್ಡನ್ ನಿಂದ ಭ್ರಮರಾಂಭ ಕಲ್ಯಾಣ ಮಂಟಪದವರೆಗೆ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯಿಂದ ಬೃಹತ್ ರ್ಯಾಲಿ ಹಾಗೂ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಾಲೂಕು ದಂಡಾಧಿಕಾರಿಗಳಿಗೆ ಸಲ್ಲಿಕೆ ಮಾಡಿ ಮುಖಂಡ ಸಿ.ದಾನಪ್ಪ ನಿಲೋಗಲ್ ಅವರು ಮಾತನಾಡಿದರು.

ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯಲ್ಲಿ ಆಯಾ ಜಾತಿ ಜನಸಂಖ್ಯಾವಾರು ಮೀಸಲಾತಿಯನ್ನು ವರ್ಗೀಕರಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಪರಮಾಧಿಕಾರವನ್ನು ಸರ್ವೋಚ್ಚ ನ್ಯಾಯಾಲಯವು ಸರ್ಕಾರಗಳಿಗೆ ನೀಡಿದೆ. 1974-75 ರಲ್ಲಿ ಪಂಜಾಬ್ ಸೇರಿದಂತೆ ಉತ್ತರಪ್ರದೇಶ, ಹರಿಯಾಣ, ಅವಿಭಜಿತ ಆಂಧ್ರ ಪ್ರದೇಶಗಳಲ್ಲಿ ಒಳ ಮೀಸಲಾತಿ ಜಾರಿಯಲ್ಲಿರುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಮುನ್ನುಡಿಯನ್ನು ಬರೆದಿತ್ತು. ನಂತರದ ದಿನಗಳಲ್ಲಿ ಕೆಲವು ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದ ಪರಿಣಾಮ 2004 ರಲ್ಲಿ ಒಳ ಮೀಸಲಾತಿ ವಿಚಾರವು ಕಾನೂನಿನ ಕಗ್ಗಂಟಿಗೆ ಸಿಲುಕಿತು. ಸುಮಾರು 20 ವರ್ಷಗಳ ಕಾಲ ಸುಧೀರ್ಘವಾದ ವಿಚಾರಣೆಯಲ್ಲಿ ನೊಂದ ಸಮುದಾಯಗಳ ಆಶಾಕಿರಣವಾಗಿ ಆ.01,2024 ರ ತೀರ್ಪು ಹೊರ ಬಂತು. ರಾಜ್ಯಗಳಿಗೆ ಮೀಸಲಾತಿ ಹಂಚಿಕೆಯ ಹೊಣೆಗಾರಿಕೆಯ ಅಧಿಕಾರವನ್ನು ವಹಿಸಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ.

ಘನ ನ್ಯಾಯಾಲಯದ ತೀರ್ಪು ಪ್ರಕಟವಾಗಿ ಒಂದೂವರೆ ತಿಂಗಳು ಗತಿಸಿದರೂ ಸಿದ್ದರಾಮಯ್ಯ ನೇತೃತ್ವದ ಸಕಾರವು ಇನ್ನೂ ಅನುಷ್ಠಾನ ವಿಚಾರದಲ್ಲಿ ಹಿಂದೇಟು ಹಾಕುತ್ತಿರುವುದು ಹತ್ತಾರು ಅನುಮಾನಗಳಿಗೆ ಪುಷ್ಠಿ ನೀಡುತ್ತಿದೆ. ಕಾಂಗ್ರೆಸ್ ಪಕ್ಷವು 2022 ರಲ್ಲಿ ಚಿತ್ರದುರ್ಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ, ಹಿರಿಯ ನಾಯಕರ ಸಮ್ಮುಖದಲ್ಲಿ ಸರ್ಕಾರ ರಚನೆಯಾದ ಮೊದಲ ಅಧಿವೇಶನದಲ್ಲಿ ಒಳ ಮೀಸಲಾತಿ ಬೇಡಿಕೆ ಜಾರಿಯಾಗಿದೆ ಎಂದು ಘೋಷಿಸಲಾಗಿದೆ ಎಂದು ಘೋಷಿಸಿದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ 60 ಸಾವಿರ ಕೋಟಿ ರೂ. ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಮೀಸಲಿಟ್ಟ ಅನುದಾನದಿಂದಲೇ ಬಳಸುವುದರಿಂದ ನಮ್ಮ ಸಮುದಾಯಗಳು ತಮ್ಮ ಬೆಂಬಲಕ್ಕೆ ನೈತಿಕವಾಗಿ ನಿಂತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ. ಇದರ ಒಳ ಮೀಸಲಾತಿಗೆ ಮುಂದಾಗಲು ಸಾವಿರಾರು ಕೋಟಿ ಅನುದಾನದ ಅಗತ್ಯವೂ ಇಲ್ಲ ಎಂದು ಹೇಳಿದರು.

ನೊಂದ ಸಮುದಾಯಗಳಿಗೆ ಜನಸಂಖ್ಯಾವಾರು ಪಾಲು ಮಿಸಲಾತಿ ಜಾರಿ ಮಾಡಲು ಅವಕಾಶ ಅ.2ರವರಿಗೆ ನೀಡಲಾಗುವುದು ಎಂದು ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಮುಖಂಡ ಸಿ.ದಾನಪ್ಪ ನಿಲೋಗಲ್ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಮುಖಂಡ ಅಂಬಣ್ಣ ಅರೋಲಿಕರ್, ಅಬ್ರಾಹಂ ಹೊನ್ನಟಗಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News