ಬಿಜೆಪಿ-ಜೆಡಿಎಸ್‍ನ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ದರಾಗಿ: ಸಿಎಂ ಸಿದ್ದರಾಮಯ್ಯ ಕರೆ

Update: 2024-10-06 13:04 GMT

ಮಾನ್ವಿ : ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಲು ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ಧರಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಶನಿವಾರ ರಾಯಚೂರಿನ ಮಾನ್ವಿಯಲ್ಲಿ 458 ಕೋಟಿ ರೂ.ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಟ್ಟ ಕುದುರೆ ಏರಲಾರದ ಕುಮಾರಸ್ವಾಮಿ ವೀರನೂ ಅಲ್ಲ, ಶೂರನೂ ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಜನರಿಗೆ ಸಹಾಯ ಮಾಡುವ ಅವಕಾಶ ಇತ್ತು. ರಾಜ್ಯದ ಅಭಿವೃದ್ಧಿ ಮಾಡುವ ಅವಕಾಶವೂ ಇತ್ತು. ಅಧಿಕಾರ, ಅವಕಾಶ ಇದ್ದಾಗ ಜನಪರ ಕೆಲಸ ಮಾಡದ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಈಗ ನಮ್ಮ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸುಳ್ಳು ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯದ ಬೊಕ್ಕಸ ಖಾಲಿ, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗಲೂ ಜನರ ಕೆಲಸ ಮಾಡಲಿಲ್ಲ. ಬಿಜೆಪಿ ಸ್ವಂತ ಶಕ್ತಿ ಮೇಲೆ ಇವತ್ತಿನವರೆಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಏನಿದ್ದರೂ ಆಪರೇಷನ್ ಕಮಲದ ಮೂಲಕ ಮಾತ್ರ ಬಿಜೆಪಿ ಅಧಿಕಾರ ಹಿಡಿದಿದೆ. ಹೀಗಾಗಿ ಅವರಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ವಾಮ ಮಾರ್ಗದಲ್ಲೆ ಅಧಿಕಾರ ಹಿಡಿಯಲು ಕಾದು ಕುಳಿತಿದ್ದಾರೆ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.

ಕಾರಣವೇ ಇಲ್ಲದೆ ರಾಜೀನಾಮೆ ಕೊಡಿ, ರಾಜಿನಾಮೆ ಕೊಡಿ ಎನ್ನುತ್ತಿದ್ದಾರೆ. ನನಗೂ ಬೇಸರ ಆಗಿದೆ. ಸಾಕಾಗಿದೆ. ಆದರೆ, ನಿಮಗಾಗಿ ನಾನು ಹೋರಾಟ ಮುಂದುವರೆಸಿದ್ದೇನೆ. ನಾನು ಅವರ ಬೆದರಿಕೆಗಳಿಗೆ ಜಗ್ಗುವವನು ಅಲ್ಲ, ಬಗ್ಗುವವನು ಅಲ್ಲ. ಹೋರಾಟ ಮುಂದುವರೆಸುತ್ತೇನೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಾವು ಬದ್ದರಾಗಿದ್ದೇವೆ. ಈ ಬೃಹತ್ ಸ್ವಾಭಿಮಾನಿ ಜನ ಸಮಾವೇಶ ಸಂಘಟಿಸಿದ ಸಚಿವ ಭೋಸರಾಜು ಮತ್ತು ರವಿ ಭೋಸರಾಜು ಅವರಿಗೆ ಅಭಿನಂದನೆ ಎಂದು ಮುಖ್ಯಮಂತ್ರಿ ಹೇಳಿದರು.

 ನನ್ನ ಪತ್ನಿಯನ್ನೂ ರಾಜಕಾರಣಕ್ಕೆ ಎಳೆದು ತಂದಿದ್ದಾರೆ :

ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮುಖ ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ಅವರ ರಾಜಕಾರಣಕ್ಕೆ ಎಳೆದು ತಂದಿದ್ದಾರಲ್ಲ, ಇದನ್ನು ನೀವು ಕ್ಷಮಿಸ್ತೀರಾ ಎಂದು ಸಭಿಕರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾನು ಏನು ತಪ್ಪು ಮಾಡಿದ್ದೀನಿ? ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐದೈದು ಗ್ಯಾರಂಟಿಗಳನ್ನು, ಹತ್ತಾರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ? ಅವರು ಏನು ತಾನೆ ತಪ್ಪು ಮಾಡಿದ್ದರು ಎಂದು ಭಾವನಾತ್ಮಕವಾಗಿ ಮುಖ್ಯಮಂತ್ರಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News