ರಾಯಚೂರು ವಿಮಾನ ನಿಲ್ದಾಣಕ್ಕೆ ಯೋಜನಾ ವರದಿ ಸಿದ್ಧತೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ರಾಯಚೂರು : ಜಿಲ್ಲೆಯ ಜನರ ಬಹುದಿನಗಳ ಕನಸಾದ ರಾಯಚೂರು ವಿಮಾನ ನಿಲ್ದಾಣ ನನಸಾಗುವ ಹಂತಕ್ಕೆ ಬಂದಿದೆ. ಕೇಂದ್ರ ಸರಕಾರ ಸೈಟ್ ಕ್ಲಿಯರೆನ್ಸ್ ನೀಡಿರುವುದರಿಂದ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಬಳಿಕ ಮಾತನಾಡಿದರು.
ನಗರದ ಹೊರವಲಯದ ಯರಮರಸ್ ನಲ್ಲಿ 404 ಎಕರೆ ಭೂಮಿ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ 40 ಕೋಟಿ ರೂ. ಹಾಗೂ ಎಂಎಫ್ ಅಡಿಯಲ್ಲಿ 10 ಕೋಟಿ ರೂ. ಸೇರಿ ಒಟ್ಟು 50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ 2023-24ನೇ ಸಾಲಿನಲ್ಲಿ ಮೈಕ್ರೋ, ಮ್ಯಾಕ್ರೋ, ಸಿಎಂಡಿಕ್ಯೂ, ಜಿಡಿಕ್ಯೂ, ರೀಜಿನಲ್ ಫಂಡ್ ಯೋಜನೆಗಳಡಿಯಲ್ಲಿ ಒಟ್ಟು 564 ಕೋಟಿ ರೂ.ಗಳ 1041 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಂಜೂರು ನೀಡಲಾಗಿದೆ. ಇದರಲ್ಲಿ 143 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 769 ಕಾಮಗಾರಿಗಳು ಪ್ರಗತಿಯಲ್ಲಿವೆ. 129 ಕಾಮಗಾರಿಗಳು ಪ್ರಾರಂಭಿಸಬೇಕಾಗಿದೆ. ಒಟ್ಟು 183 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
2024-25ನೇ ಸಾಲಿನಲ್ಲಿ ಮೈಕ್ರೋ ಯೋಜನೆಯಲ್ಲಿ 373 ಕೋಟಿ ರೂ. ಮತ್ತು ಮ್ಯಾಕ್ರೋ ಯೋಜನೆಯಡಿ 201 ಕೋಟಿ ರೂ. ಸೇರಿ ಒಟ್ಟು 575 ಕೋಟಿ ರೂ. ಅನುದಾನ ರಾಯಚೂರು ಜಿಲ್ಲೆಗೆ ಹಂಚಿಕೆಯಾಗಿದೆ. ಇದರಲ್ಲಿ ಮೈಕ್ರೋ, ಮ್ಯಾಕ್ರೋ, ಸಿಎಂಡಿಕ್ಯೂ, ಜಿಡಿಕ್ಯೂ, ರೀಜಿನಲ್ ಫಂಡ್ ಯೋಜನೆಗಳಡಿಯಲ್ಲಿ ಒಟ್ಟು 387 ಕೋಟಿ ರೂ.ಗಳ 506 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಂಜೂರು ನೀಡಿರುತ್ತಾರೆ. ಇದರಲ್ಲಿ 91 ಕಾಮಗಾರಿಗಳು ಪ್ರಗತಿಯಲ್ಲಿದೆ. 415 ಕಾಮಗಾರಿಗಳು ಪ್ರಾರಂಭಿಸಬೇಕಾಗಿರುತ್ತದೆ ಮತ್ತು 14.19 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ರಾಯಚೂರು ಮತ್ತು ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ‘ಹೂಮನ್ ಮಿಲ್ಕ್ ಬ್ಯಾಂಕ್’ ಘಟಕಗಳನ್ನು ಸ್ಥಾಪಿಸಲು ಆದೇಶ ಹೊರಡಿಸಿದ್ದು ಕ್ರಮ ಕೈಗೊಳ್ಳಲಾಗಿದೆ. ನಿಮ್ಹಾನ್ಸ್ ಸಹಯೋಗದಲ್ಲಿ ಜಿಮ್ಸ್ ಕಲಬುರಗಿ ಮತ್ತು ರಿಮ್ಸ್ ರಾಯಚೂರಿನಲ್ಲಿ ಹಬ್ ಮತ್ತು ಸ್ಪೋಕ್ ಮಾಡೆಲ್ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಯಚೂರು ಜಿಲ್ಲೆ ತನ್ನದೇ ಆದ ಐತಿಹಾಸಿಕ ವಿಶೇಷತೆ ಹೊಂದಿದ್ದು, ಜಿಲ್ಲೆಯ ವಿವಿದೆಡೆ ಶಿಲಾಶಾಸನಗಳು, ಕೋಟೆ ಕೊತ್ತಲಗಳು ಹಾಗೂ ದೇವಸ್ಥಾನಗಳೇ ಇದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಎನ್ನುವುದು ಕೇವಲ ಭೂ ಪ್ರದೇಶವಲ್ಲ, ಭಿನ್ನ ಸಂಸ್ಕೃತಿ, ಇಲ್ಲಿನ ಜನರು ವಿಭಿನ್ನ ಜೀವನ ಪದ್ದತಿ ಹೊಂದಿದ್ದಾರೆ ಎಂದರು.
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ನಗರಸಭೆಯ ಅಧ್ಯಕ್ಷೆ ನರಸಮ್ಮ, ಜಿಲ್ಲಾಧಿಕಾರಿ ನಿತೀಶ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ರಾಯಚೂರು ಉಪ ವಿಭಾಗೀಯ ಅಧಿಕಾರಿ ಗಜಾನನ ಬಾಳೆ, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗನವರು, ತಹಶೀಲ್ದಾರ್ ಸುರೇಶ ವರ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೆಹಬೂಬ್ ಜಿಲಾನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.