ರಾಯಚೂರು | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸಚಿವರು, ಶಾಸಕರ ಮನೆಗಳ ಮುಂದೆ ತಮಟೆ ಚಳುವಳಿ

Update: 2024-12-14 12:58 GMT

ರಾಯಚೂರು: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪ ಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲೆಯ ಸಚಿವ, ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರ ಮನೆಗಳ ಮುಂದೆ ತಮಟೆ ಚಳವಳಿ ನಡೆಸಲಾಯಿತು.

ನಗರದ ಡಾ.ಬಿ.ಆರ್ ಅಂಬೇಡ್ಕ‌ರ್ ವೃತ್ತದಿಂದ ತಮಟೆ ಚಳವಳಿ ಆರಂಭಿಸಿ ಬೈಕ್ ಮೂಲಕ ನಗರದ ನಿಜಲಿಂಗಪ್ಪ ಕಾಲೊನಿಯಲ್ಲಿರುವ ಸಚಿವ ಎನ್.ಎಸ್. ಬೋಸರಾಜು ಮನೆಯ ಮುಂದೆ ತಮಟೆ ಬಾರಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ನಗರ ಶಾಸಕ ಡಾ.ಶಿವರಾಜ ಪಾಟೀಲ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹಾಗೂ ಹರಿಜನವಾಡ ಬಡಾವಣೆಯಲ್ಲಿರುವ ವಿಧಾನ ಪರಿಷತ್‌ ಸದಸ್ಯ ಎ. ವಸಂತಕುಮಾರ ಅವರ ಮನೆಗೆ ತೆರಳಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಸುಪ್ರೀಂಕೋರ್ಟ್ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿ ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರ ಕಾಟಾಚಾರಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿದೆ. ಅದು ಬಿಟ್ಟರೆ ಬೇರೆ ಏನು ಮಾಡಿಲ್ಲ, 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ. ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ಕೂಡ ಕೊಡದೆ ಕಾಲಾಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

2011ರ ಜನಗಣತಿಯ ಅಂಕಿ ಅಂಶಗಳ ವರ್ಗಿಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಒಳಮೀಸಲಾತಿ ಜಾರಿ ಆಗುವವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು. ಆದರೆ ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ನಡೆಯುತ್ತಿವೆ ಎಂದು ದೂರಿದರು. ರಾಜ್ಯದಲ್ಲಿ ಒಳ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ಕಾಂಗ್ರೆಸ್‌ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ, ಮುಖಂಡರಾದ ರವೀಂದ್ರ ಜಲ್ದಾರ್, ಪಿ.ಯಲ್ಲಪ್ಪ, ಸುಭಾಷ್, ಶಂಶಾಲಂ, ಭೀಮಣ್ಣ ಮಂಚಾಲ್, ನಾಗರಾಜ, ರವಿ ಗಿಲ್ಲೆಸೂಗುರು, ರಂಜಿತ್‌ ದಂಡೋರಾ, ಶಾಂತಪ್ಪ ಮಿಡಗಲದಿನ್ನಿ, ಎಂ.ಪಿ.ರೆಡ್ಡಿ ಗೋಲ್ವಾ‌ರ್, ಅಶೋಕ ದುಗನೂರು, ದುಳ್ಳಯ್ಯ ಗುಂಜಹಳ್ಳಿ, ಜಕ್ರಪ್ಪ ಹಂಚಿನಾಳ, ಶರಣಪ್ಪ ಚಂದ್ರಬಂಡಾ, ಭಿಮೇಶ ತುಂಟಾಪೂರ, ದಾವೀದ್ ಮರ್ಚೆಟಾಳ, ನವೀನ್ ಕುಮಾರ ಉಪ್ರಾಳ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News