ರಾಯಚೂರು | ಬೀದಿನಾಯಿಗಳ ದಾಳಿಗೆ ಮೃತ ಪಟ್ಟ ಯುವತಿಯ ಕುಟುಂಬಕ್ಕೆ ಪರಿಹಾರ : ಡಿ.ಸಿ ನಿತೀಶ್ ಕೆ.

Update: 2024-12-12 16:07 GMT

ರಾಯಚೂರು : ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಯುವತಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರಸಭೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಪರಿಹಾರ ಕಲ್ಪಿಸಿಕೊಡುವ ಪ್ರಯತ್ನ ಮಾಡಲಾಗುವುದು. ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಈ ಮುಂಚೆ ಕಾರ್ಯಾಚರಣೆ ನಡೆಸಿ ಬೀದಿ ನಾಯಿಗಳನ್ನು ಹಿಡಿದು ದೂರದ ಪ್ರದೇಶಗಳಿಗೆ ಸಾಗಿಸಲಾಗಿತ್ತು. ಮತ್ತೆ ಅವುಗಳು ನಗರಕ್ಕೆ ಬಂದಿವೆ ಎನ್ನುವ ಮಾಹಿತಿಯಿದೆ ಎಂದರು.

ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ನಡೆಸಿದ ಕಾರ್ಯಾಚರಣೆ ಪರಿಣಾಮಕಾರಿಯಾಗಿಲ್ಲ ಎನ್ನುವ ದೂರುಗಳು ಬಂದಿದ್ದು, ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಯುವತಿ ಮೃತಪಟ್ಟ ಬಳಿಕ ಎಚ್ಚೆತ್ತ ನಗರಸಭೆ ನಗರದ ಎಲ್ ಬಿಎಸ್ ಬಡಾವಣೆಯಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ ನಡೆಸಿ 35 ನಾಯಿಗಳನ್ನು ಸೆರೆಹಿಡಿಯಲಾಯಿತು.

ನಗರಸಭೆಯ ಅಧಿಕಾರಿ ಎಂ.ಡಿ ಖಾನ್, ಅಶೋಕ, ಹನುಮಂತ ಜಗ್ಲಿ, ಡಿ.ಅಮರೇಶ ಉಪಸ್ಥಿತಿಯಲ್ಲಿ ನಗರಸಭೆಯ ಪ್ಯಾಕೇಜ್ ನಂಬರ್ 7ರ ಅಡಿಯಲ್ಲಿ ವಾರ್ಡ್ ನಂಬರ್ 27ರ ಜಲಾಲ್ ನಗರ, ಪೊಲೀಸ್ ಕಾಲೊನಿ, 28ರ ಆಶ್ರಯ ಕಾಲೊನಿ, ವಿಶ್ವನಾಥ ಕಾಲೊನಿ ಹಾಗೂ ವಾರ್ಡ್ ನಂಬರ್ 29ರ ಎಲ್ ಬಿಎಸ್ ನಗರದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News