ರಾಯಚೂರು | ಒತ್ತಡ ನಿವಾರಣೆಗೆ ಕ್ರೀಡಾಕೂಟಗಳು ಅಗತ್ಯ: ರಾಹುಲ್ ತುಕಾರಾಂ ಪಾಂಡ್ವೆ
ರಾಯಚೂರು : ಪ್ರತಿನಿತ್ಯ ಕೆಲಸದ ಒತ್ತಡದಲ್ಲಿ ಇರುವ ಉದ್ಯೋಗಖಾತ್ರಿ ಯೋಜನೆಯ ನೌಕರರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಒತ್ತಡ ನಿವಾರಣೆ ಮಾಡಿಕೊಳ್ಳಬೇಕು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹೇಳಿದರು.
ನಗರದ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಒಂದು ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮೀಣ ಜನರಿಗೆ ನಿರಂತರವಾಗಿ ಕೂಲಿ ಕೆಲಸ ನೀಡುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳ ಅನುಷ್ಠಾನ ಮಾಡಲಾಗುತ್ತಿದೆ. ಅದೇ ರೀತಿ ಶಾಲಾ ಕಂಪೌಂಡ್, ಬಿಸಿಯೂಟದ ಕೊಠಡಿ, ಆಟದ ಮೈದಾನ ಸೇರಿ ಶಾಲೆಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಿಂದ ಮಾನವ ದಿನ ಸೃಜನೆಯಲ್ಲಿ ರಾಯಚೂರು ಜಿಲ್ಲೆ ನಿರಂತರವಾಗಿ ರಾಜ್ಯದಲ್ಲೇ ಪ್ರಥಮ, ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ ಎಂದರು.
ಯೋಜನಾ ನಿರ್ದೇಶಕ ಶರಣಬಸವರಾಜ ಕೆಸರಟ್ಟಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣರ ಜೀವನ ಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಯೋಜನೆ ಅನುಷ್ಠಾನದಲ್ಲಿ ನೌಕರರ ಕೊಡುಗೆ ಅಪಾರವಾಗಿದೆ. ಸರ್ಕಾರದಿಂದ ಆಯೋಜಿಸುವ ಕ್ರೀಡಾಕೂಟದಲ್ಲಿ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ, ರಾಯಚೂರು ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಪ್ಪ, ತಾಲ್ಲೂಕು ಪಂಚಾಯತ್ ಇಒ ಖಲೀದ್ ಅಹ್ಮದ್, ಶಶಿಧರ್ ಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ ಜಿಲ್ಲೆಯ ನರೇಗಾ ನೌಕರರು ಪಾಲ್ಗೊಂಡಿದ್ದರು. ತಾಂತ್ರಿಕ ಸಿಬ್ಬಂದಿ ಕಮಲಾ ನಿರೂಪಿಸಿದರು.