ರಾಯಚೂರು | ಫ್ಯೂಚರ್ ಸೋಲ್ಜರ್ ಅಕಾಡಮಿಯಿಂದ ಸೈನ್ಯದಲ್ಲಿ ಸೇರಬಯಸುವ ಯುವಕರಿಗೆ ತರಬೇತಿ
ರಾಯಚೂರು: ಈ ಭಾಗದ ಯುವಕರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳುವ ಉದ್ದೇಶದಿಂದ ತರಬೇತಿ ನೀಡಲು ಫ್ಯೂಚರ್ ಸೋಲ್ಜರ್ ಅಕಾಡಮಿ ದೇವಸೂಗೂರು ಟ್ರಸ್ಟ್ ಸ್ಥಾಪಿಸಲಾಗಿದೆ. ಆಸಕ್ತರು ಉಚಿತ ತರಬೇತಿ ಪಡೆದುಕೊಳ್ಳಬಹುದು ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಯೋಧ ಎಂ.ಡಿ.ಸಲೀಂ ಹುಸೇನ್ ತಿಳಿಸಿದ್ದಾರೆ.
ಸುಮಾರು 21 ವರ್ಷಗಳು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ನಮ್ಮ ಭಾಗದ ಯುವಕರಿಗೆ ತರಬೇತಿ ನೀಡಿ ಭಾರತೀಯ ಸೈನ್ಯದಲ್ಲಿ ಸೇರಿಸಬೇಕು ಎಂಬ ಬಹುದಿನದ ಕನಸಿನೊಂದಿಗೆ ಅಕಾಡಮಿ ಸ್ಥಾಪಿಸಿದ್ದೇನೆ ಎಂದು ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಅವರು ತಿಳಿಸಿದರು.
ಎಸೆಸೆಲ್ಸಿ ಉತ್ತೀರ್ಣರಾದ 16 ವರ್ಷದಿಂದ 32 ವಯಸ್ಸಿನ ಯುವಕರು ತರಬೇತಿಗೆ ದಾಖಲಾಗಬಹುದು. ಮೂರು ತಿಂಗಳ ತರಬೇತಿ ಅವಧಿಯಾಗಿದ್ದು, ದೈಹಿಕ, ಮಾನಸಿಕ ಒತ್ತಡ ನಿವಾರಣೆ, ನೇವಿಗೇಶನ್ ಸ್ಕಿಲ್, ಎನ್.ಎಸ್.ಜಿ ಕಮಾಂಡೋ, ಡಿಟಿಎಸ್ ಸೇರಿ ಸೈನ್ಯದಲ್ಲಿ ಸೇರಲು ಬೇಕಾಗುವ ಇತರ 12 ಬಗೆಯ ತರಬೇತಿ ಕೌಶಲ್ಯಗಳನ್ನು ನೀಡಲಾಗುತ್ತದೆ. ಮಹಿಳೆಯರಿಗೆ ಶಾರೀರಿಕ ಕ್ಷಮತೆ ಹಾಗೂ ಮಾನಸಿಕ ಸದೃಢತೆಯ ಜೊತೆಗೆ ರಿಟನ್ ಕ್ಲಾಸ್( ಬೋಧನಾ ತರಗತಿ) ಆಯೋಜಿಸಲಾಗಿದೆ ಎಂದರು.
ಅಕಾಡಮಿಯಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಇರಲಿದ್ದು, 600 ರೂ.ವರೆಗೆ ಪಾವತಿಸಬೇಕಿದ್ದು, ತರಬೇತಿ ಮಾತ್ರ ಉಚಿತವಾಗಿರುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಖಜಾಂಚಿ ಮಲ್ಲೇಶ ಎಚ್., ಸದಸ್ಯ ರಮೇಶ, ಸಾಜಿದ್ ಹುಸೇನ್, ಹರೀಶ್ ಮಡಿವಾಳ ಉಪಸ್ಥಿತರಿದ್ದರು.