ಒಳ ಮೀಸಲಾತಿಗೆ ಒತ್ತಾಯಿಸಿ ರಾಯಚೂರು ಬಂದ್: ಮಿಶ್ರ ಪ್ರತಿಕ್ರಿಯೆ

Update: 2024-10-03 14:20 GMT

ರಾಯಚೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ಗುರುವಾರ ರಾಯಚೂರು ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದರು.

ಹೈದರಾಬಾದ್ ಕಡೆಯಿಂದ ರಾಯಚೂರು ಮಾರ್ಗವಾಗಿ ಹೋಗುವ ಬಸ್‍ಗಳಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ಬೈಪಾಸ್ ಮೂಲಕ ಹೋಗಲು ಅನುಕೂಲ ಮಾಡಿಕೊಡಲಾಗಿದೆ. ಸರಕು ಸಾಗಣೆ ವಾಹನಗಳು ಬೈಪಾಸ್ ಮೂಲಕ ಸಾಗುತ್ತಿವೆ.

ನವೋದಯ ಕಾಲೇಜು, ಬಸವೇಶ್ವರ ವೃತ್ತ, ಸಾತ್ ಮೈಲ್ ಕ್ರಾಸ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಿಗಿಬಂದೋಬಸ್ತ್ ಮಾಡಿದ್ದಾರೆ.

ಒಳ ಮೀಸಲಾತಿಯ ಹೋರಾಟಗಾರ ಅಂಬಣ್ಣ ಅರೋಲಿಕರ್ ನೇತೃತ್ವದ ತಂಡ ಕೇಂದ್ರ ಬಸ್ ನಿಲ್ದಾಣ, ಉಸ್ಮಾನಿಯಾ ಮಾರುಕಟ್ಟೆ ಪ್ರದೇಶದ ಸುತ್ತಮುತ್ತ ಸಂಚರಿಸಿ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದರು.

ಕಳೆದ 30 ವರ್ಷಗಳಿಂದ ರಾಯಚೂರು ಜಿಲ್ಲೆಯಲ್ಲಿ ಆರಂಭವಾಗಿರುವ ಒಳ ಮೀಸಲಾತಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಆದರೆ ಒಳ ಮೀಸಲಾತಿ ಜಾರಿ ಮಾಡಲು ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದ್ದು ಇದನ್ನು ಜಾರಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತದೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಬಸ್ ನಿಲ್ದಾಣ ಪರಿಸರ, ಸ್ಟೇಷನ್ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಇವೆ. ಮಾರುಕಟ್ಟೆ ಪ್ರದೇಶದಲ್ಲಿ ಬಂದ್ ಪ್ರಭಾವ ಬೀರಿಲ್ಲ. ಪ್ರತಿಭಟನಾಕಾರರು ಎಪಿಎಂಸಿಗೆ ತೆರಳಿದ್ದು, ಮಳಿಗೆಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ವ್ಯಾಪಾರಸ್ಥರಿಗೆ ಮಾಡಿದರು.

ಬಸವೇಶ್ವರ ರಸ್ತೆ, ಸಂಪೂರ್ಣ ಬಂದ್ ಮಾಡಲಾಗಿತ್ತು, ಸ್ಟೇಷನ್ ರಸ್ತೆಯಲ್ಲಿ ಒಂದು ಬದಿಯಲ್ಲಿ ಮಾತ್ರ ದ್ವಿಚಕ್ರವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ವಾಹನ ಸಂಚಾರ ವ್ಯತ್ಯಯವಾಗಿದ್ದನ್ನು ಹೊರತುಪಡಿಸಿ ಎಲ್ಲಾ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದ್ದರೂ ಕಚೇರಿಗಳಿಗೆ ಅಲೆದಾಡಲು ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದರು.

ಮಧ್ಯಾಹ್ನ 2:30ರ ನಂತರ ಜಿಲ್ಲಾಧಿಕಾರಿ ನಿತಿಶ್.ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯನವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ರಾಜ್ಯ ಸರಕಾರಕ್ಕೆ ರವಾನಿಸಿದರು. 3ಗಂಟೆಯ ನಂತರ ಸಾರಿಗೆ ಬಸ್ ಸಂಚಾರ ಆರಂಭವಾಯಿತು.

ಬಂದ್‍ಗೆ ವಿವಿಧ ಸಂಘಟನೆ ಬೆಂಬಲ:

ಮಾದಿಗ ಸಮುದಾಯದ ಜಿಲ್ಲಾ ಬಂದ್ ಹೋರಾಟಕ್ಕೆ ಸಿಪಿಐಎಂ, ಸಿಐಟಿಯು, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಬೆಂಬಲ ನೀಡಿ ಹೋರಾಟದಲ್ಲಿ ಪಾಳ್ಗೊಂಡಿದ್ದರು.


 








 


 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News