ರಾಯಚೂರು: ಅನುದಾನ ದುರ್ಬಳಕೆ; ಶಿಕ್ಷಣ ಇಲಾಖೆಯ ತನಿಖೆಯಿಂದ ಬಿಇಒ ಕರ್ತವ್ಯ ಲೋಪ ಸಾಬೀತು

Update: 2024-11-14 06:00 GMT

ರಾಯಚೂರು: ತಾಲ್ಲೂಕಿನ ಊಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನೀಡಿದ ಸಿಎಸ್‌ಆರ್ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ ಎಚ್. ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಕಾಯ್ದಿರಿಸಿ ಬಿಡುಗಡೆ ಮಾಡಲಾಗಿದೆ.

ರಾಯಚೂರು ಡಯಟ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಪ್ರಭಾರ ವಹಿಸಿಕೊಳ್ಳುವಂತೆ ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಮಂಗಳವಾರ ಆದೇಶ ನೀಡಿದ್ದಾರೆ.

ಪಟ್ಟಣದ ಕಾಂಗ್ರೆಸ್ ಮುಖಂಡ ಟಿ.ಸುರೇಶನಾಯಕ ಅವರು ಸೆ.29 ರಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ₹30 ಲಕ್ಷ ದುರುಪಯೋಗಪಡಿಸಿಕೊಂಡ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಗೆ ದೂರ ನೀಡಿದ್ದರು. ದೂರು ಆದರಿಸಿ ತನಿಖೆ ಕೈಗೊಂಡ ವರದಿ ನೀಡುವಂತೆ ಇಲಾಖೆಯ ಕಲಬುರಗಿ ವಿಭಾಗೀಯ ಆಯುಕ್ತರಿಗೆ ವಹಿಸಲಾಗಿತ್ತು. ರಾಯಚೂರು ಜಿಲ್ಲೆಗೆ ಭೇಟಿ ನೀಡಿ ತನಿಖೆ ನಡೆಸಿ ನೀಡಿದ ಪ್ರಾಥಮಿಕ ವಿಚಾರಣೆ ವರದಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ತಾಲ್ಲೂಕಿನ ಊಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಎಕರೆ ಜಮೀನು ಖರೀದಿಗೆ ಹಟ್ಟಿ ಚಿನ್ನದ ಗಣಿ ಕಂಪನಿ ಪ್ರಧಾನ ನಿರ್ದೇಶಕರು ₹30 ಲಕ್ಷ ದೇಣಿಗೆ ನೀಡಿದ್ದು, ಈ ಹಣವನ್ನು ಮೇಲಧಿಕಾರಿಗಳ ಅನುಮತಿ, ಜಿಲ್ಲಾಧಿಕಾರಿಗಳ ಸಮಿತಿಯ ಗಮನಕ್ಕಿಲ್ಲದೇ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಜಮಾ ಆಗಿದೆ. ನಂತರ ಶಾಲೆಯ ಮುಖ್ಯಶಿಕ್ಷಕರಿಗೆ ವರ್ಗಾವಣೆ ಮಾಡಿ ನಂತರ ಎಸ್‌ಡಿಎಂಸಿ ರಚನೆಯಾಗದೇ ಹಿಂದಿನ ಅಧ್ಯಕ್ಷರ ಸಹಿ ಪಡೆದು ಭೂಮಿ ನೀಡಿದ ಮಾಲೀಕನಿಗೆ ಚೆಕ್ ನೀಡಿದ ಬಿಇಒ ಸುಖದೇವ ಎಚ್ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ಹಾಗೂ ಸರ್ಕಾರದ ಸುತ್ತೋಲೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ, ಜಿಲ್ಲಾಧಿಕಾರಿಗಳ ಸಮಿತಿಯಿಂದ ದರ ನಿಗದಿ ಪಡಿಸಿದೇ ಕರ್ತವ್ಯಲೋಪ ಎಸಗಿರುವದು ಕಂಡು ಬಂದಿದೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2023-24 ನೇ ಸಾಲಿನಲ್ಲಿ ವರ್ಗಾವಣೆಗೊಂಡ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಬಿಡುಗಡೆಗೆ ಪ್ರತಿಯೊಬ್ಬರಿಂದ ರೂ20 ಸಾವಿರದಿಂದ ₹30 ಸಾವಿರ ಪಡೆದು, ಶಿಕ್ಷಕರ ಸೇವಾ ಪುಸ್ತಕ ಹಾಗೂ ಅಂತಿಮ ವೇತನ ಕಳುಹಿಸದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಿ ಅಮಾನತು ಆದೇಶವನ್ನು ಕಾಯ್ದಿರಿಸಿದ ಇಲಾಖೆ ಸಾಕ್ಷಿ ನಾಶ ಹಿನ್ನೆಲೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News