ರಾಯಚೂರು | ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಶಿಕ್ಷೆ

ರಾಯಚೂರು : ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸಿಂಧನೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ (ಪೋಸ್ಕೋ ವಿಶೇಷ) ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಹೆಚ್.ಕ್ಯಾಂಪ್ ನಂ.2 ರಲ್ಲಿನ ಅರುಣ್ ರಾಯ್ ( 50) ಶಿಕ್ಷೆಗೊಳಗಾದ ಆರೋಪಿ ಎಂದು ಗುರುತಿಸಲಾಗಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕ ಬಾಲಚಂದ್ರ ಡಿ.ಲಕ್ಕಂ ಅವರು ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದಲ್ಲಿ ಆರೋಪಿಯು ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ್ದು ಸಾಭೀತಾಗಿದ್ದರಿಂದ ಆರೋಪಿಗೆ 20 ವರ್ಷಗಳ ಕಾರಾಗೃಹ ವಾಸ ಮತ್ತು 25,000 ದಂಡವನ್ನು ವಿಧಿಸಿದೆ ಮತ್ತು ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ಬಾಧಿತ ಬಾಲಕಿಯರಿಗೆ ತಲಾ ಒಬ್ಬೊಬ್ಬರಿಗೆ ರೂ.7 ಲಕ್ಷ 50 ಸಾವಿರ ರೂ. ಪರಿಹಾರವನ್ನು ನೀಡಬೇಕೆಂದು ಸಿಂಧನೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ರವರು ತೀರ್ಪು ನೀಡಿದ್ದಾರೆ.
ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಪೇದೆಯಾದ ರವಿಕುಮಾರ್ ಪ್ರಮುಖ ಪಾತ್ರ ವಹಿಸಿದ್ದು, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಮಂಜುನಾಥ ರವರು ವಾದ ಮಂಡಿಸಿದ್ದರು.